ದಿನಾಂಕ ಸ್ಪಷ್ಟವಾಗಿ ನೆನಪಿಲ್ಲ. ಬಹುತೇಕ ಅಗಷ್ಟ್ 7ರ ಆಸುಪಾಸಿನಲ್ಲಿ ಈ ಎಲ್ಲ ಬೆಳವಣಿಗೆಗಳಾದವು. ರಂಗಕರ್ಮಿ ಗೆಳೆಯ ಶಶಿಕಾಂತ ಯಡಹಳ್ಳಿ ಫೋನಾಯಿಸಿ ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯನಾದ ಸುದ್ದಿ ತಿಳಿಸಿದ ಮೊದಲಿಗ. ಮತ್ತೆ ಮುಂದೊರೆದು ಇದನ್ನು ಸಂಭ್ರಮಿಸಿದವ ಬೇಲೂರು ರಘುನಂದನ. ದೂರದ ನಾಡಿಂದ ಸಹೋದರ ಬಸವರಾಜ ಡೋಣುರ ಅವರ ಸಂದೇಶವೂ ಬಂತು. ಅಂತರ್ಜಾಲ ಸ್ಫೋಟದ ಈ ಕಾಲದಲ್ಲಿ ಮರುಕ್ಷಣವೆ ಅಧಿಕೃತವಾಗಿ ಸರ್ಕಾರ ಹೊರಡಿಸಿದ ಅಧಿಸೂಚನೆ ನನಗೂ ರವಾನೆಯಾಗಿ ಅದರೊಳಗೆ ನನ್ನ ಹೆಸರನ್ನು ಕಂಡಾಗ ಸುದ್ದಿ ಖಾತರಿಯಾಯಿತು. ಮರಳಿ ಶಶಿಕಾಂತರಿಗೆ ಮಾತನಾಡಿ ಮುಂದಿನ ಮೂರು ವರ್ಷದ ಯೋಜನೆ-ಯೋಚನೆ ಹೀಗೆ ಏನೆಲ್ಲ ಆಲೋಚನೆ.
ಅಕ್ಟೋಬರ್ 8 ರಂದು ನಮ್ಮ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಪ್ರೊ. ಅರವಿಂದ ಮಾಲಗತ್ತಿ ಅಧಿಕಾರ ಸ್ವೀಕರಿಸಿ, ಅಕ್ಟೋಬರ್ 19 ರಂದು ಮೊದಲ ಸಭೆಯನ್ನು ಕರೆದರು. ನನ್ನೊಂದಿಗೆ ಪ್ರಶಾಂತ ನಾಯಕ್, ಹಿರಿಯರಾದ ಸಿ. ನಾಗಣ್ಣ, ಹಳ್ಳಿಯವರ, ಸಾವಿತ್ರಿ ಮುಜುಮ್ದಾರ, ಶಿವಗಂಗಮ್ಮ ರುಮ್ಮಾ, ಬಾದವಾಡಗಿ, ಬೈರುಮಂಗಲ ಹಾಗೂ ಕೆ. ರಾಜೇಶ್ವರಿ. ಹೊಸ ಪಡೆ, ಹೊಸ ಕನಸು, ಹೊಸ ದಾರಿ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಉಲ್ಲೇಖ ಒಂದರಿಂದ ಮಾಲಗತ್ತಿಯವರ ಪಾರದರ್ಶಕ ಮೊದಲ ಸಭೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, 1961ರಲ್ಲಿ ತನ್ನ ಮೊದಲ ಹೆಜ್ಜೆಯನ್ನಿಟ್ಟು ಮೈಸೂರು ರಾಜ್ಯ ಸಾಹಿತ್ಯ ಅಕಾಡೆಮಿ ಎಂದು ಅಸ್ತಿತ್ವದಲ್ಲಿದ್ದು, 1977ರಲ್ಲಿ ಸ್ವಾಯತ್ತತೆಯನ್ನು ಪಡೆಯಿತು. ಅಂದಿನಿಂದ ಇಂದಿನವರೆಗೆ ನಾಡಿನ ಧೀಮಂತ ಸಾಹಿತಿಗಳನ್ನು, ರಾಜಕಾರಣಿಗಳನ್ನು, ಕನ್ನಡದ ಕಟ್ಟಾಳುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತ ಅದು ಕ್ರಮಿಸಿದ ದಾರಿ ದೀರ್ಘವಾದುದು.
ಮೊದಲ ಸಭೆಯ ಆರಂಭಕ್ಕೂ ಮುನ್ನ ನಮ್ಮನ್ನಗಲಿದ ಸಾಹಿತಿಗಳಾದ ಸರೋಜನಿ ಶಿಂತ್ರಿ, ವಿರೇಂದ್ರ ಸಿಂಪಿ, ಅ.ರಾ. ಸೇತಿರಾಮ್, ಶ್ರೀ ಏಣಗಿ ಬಾಳಪ್ಪ, ರಾಮಮೂರ್ತಿ ಹಾಗೂ ಶ್ರೀ ಭೀಮರಾವ್ ಗಸ್ತಿ ಅವರುಗಳ ಶ್ರದ್ಧಾಂಜಲಿಯನ್ನಾಚರಿಸಿ ಮುಂದಿನ ಚರ್ಚೆಗಳನ್ನೆತ್ತಿಕೊಳ್ಳಲಾಯಿತು. ಒಂದು ಕಾಲದ ‘ಚಂದನ’ವಾಗಿದ್ದ ಅಕಾಡೆಮಿಯ ಪತ್ರಿಕೆಯಾದ ‘ಅನಿಕೇತನ’ ಅದರ ‘ವಾರ್ತಾಪತ್ರ’ಗಳ ಸುತ್ತಲೂ ಚರ್ಚೆ ಮುಗಿಸಿ, ಪ್ರೊ. ನೀಲಗಿರಿ ತಳವಾರ, ಗೆಳೆಯ ವಿಕ್ರಮ ವಿಸಾಜಿ ಹಾಗೂ ಶೈನಾ ಎಂದೇ ಖ್ಯಾತರಾದ ಶೈಲಜಾ ನಾಗರಾಜ ಅವರನ್ನು ಅಕಾಡೆಮಿಯ ಕೋ-ಅಪ್ ಸದಸ್ಯರಾಗಿ ಆಯ್ಕೆಯಾಗುವುದರಲ್ಲಿ ಒಮ್ಮತದ ಧ್ವನಿ.
ಅಗಷ್ಟ್ 30 ರಂದು ಬೆಂಗಳೂರು ನಗರ ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಾಯಣ್ಣ ಹಾಗೂ ಗೆಳೆಯರು ಬೆಂಗಳೂರಿನ ಸಾಹಿತ್ಯ ಪರಿಷನ್ಮಂದಿರದಲ್ಲಿ ಬೆಂಗಳೂರು ವಲಯದ ಎಲ್ಲ ಅಕಾಡೆಮಿಗಳ ನೂತನ ಸದಸ್ಯರನ್ನು ಸನ್ಮಾನಿಸುವ ಸಮಾರಂಭ. ನಾಡೇ ಹೀಗೆ. ನಮ್ಮೂರಿಗೆ ಹೊಸದಾಗಿ ಬಸ್ಸು ಆರಂಭವಾದರೆ, ಬಸ್ಸು ಆರಂಭಗೊಂಡ ಸಂಗತಿ ಮುಖ್ಯವೆ ವಿನಃ ವಾಸ್ತವಿಕವಾದ ಬಸ್ಸಿನ ವಯಸ್ಸು ಮತ್ತು ವಿನ್ಯಾಸವಲ್ಲ. ಇದು ಹೊಸ ಬಸ್ಸು ಎಂದು ಎಷ್ಟೇ ಹಳೆಯ ಬಸ್ಸನ್ನು ಕಳುಹಿಸಿದರೂ ಅದಕ್ಕೊಂದಿಷ್ಟು ತಳಿರು-ತೋರಣ ಕಟ್ಟಿ, ಪೂಜಿಸಿ, ಕಾಯಿ-ಕರ್ಪೂರ ತೋರಿಸಿ ಧನ್ಯತೆಯನ್ನನುಭವಿಸುತ್ತಾರೆ.
ಎರಡನೆಯ ಅಭಿನಂದನಾ ಸಮಾರಂಭ ಸಿರಿವರ ಕಲ್ಚರಲ್ ಅಕಾಡೆಮಿಯ ನೇತ್ರತ್ವದಲ್ಲಿ. ವಿಜಯನಗರದ ನನ್ನ ಕಾಲೇಜಿನ ಹಿಂಬದಿಯ ವಿಜಯನಗರ ಕ್ಲಬ್ನಲ್ಲಿ ಸಪ್ಟೆಂಬರ್ 4 ರಂದು ನಡೆದ ಈ ಅನೌಪಚಾರಿಕ ಸಭೆಯಲ್ಲಿ ಸಿನಿಮಾ-ಸಾಹಿತ್ಯ-ರಾಜಕಾರಣ ಎಲ್ಲವೂ ಸೇರಿತ್ತು. ನಾಗತಿಹಳ್ಳಿ ಚಂದ್ರಶೇಖರ, ಜಯಮಾಲಾ, ರಾಜೇಂದ್ರಸಿಂಗ್ ಬಾಬು, ಮುಕುಂದ ರಾಜ್ ಹಾಗೂ ಸಿರಿವರ ಒಂದೆಡೆಯಾದರೆ, ನಾನು, ಕೆ. ಮರಳುಸಿದ್ದಪ್ಪ, ಎಸ್.ಜಿ. ಸಿದ್ದರಾಮಯ್ಯ, ಪಿ. ಚಂದ್ರಿಕಾ, ಚೌಗಲೆ ಮತ್ತೊಂದೆಡೆ. ನಮ್ಮಗಳ ಮಧ್ಯ ರಾಜಕೀಯ ನಾಯಕರಾದ ಶ್ರೀ ಸುದರ್ಶನ.
ನನ್ನ ಸಾಹಿತ್ಯ ಹಾಗೂ ಬಾಳ ಸಂಗಾತಿ ಪದ್ದಿಯ ಜನ್ಮದಿನದ ಒಂದು ಅಪರೂಪದ ಸಾಯಂಕಾಲವೂ ಹೀಗೆ ಸಾಹಿತ್ಯದಲ್ಲಿಯೇ ಸಮಾವಿಷ್ಠಗೊಂಡಿತು. ಇದಕ್ಕಿಂತಲೂ ಸಾರ್ಥಕತೆಯುಂಟೆ?
ಸಪ್ಟೆಂಬರ್ 10 ರ ಮುಂಜಾನೆ ಗುಳೆದಗುಡ್ಡದ ನನ್ನ ಪ್ರಿಯ ವಿದ್ಯಾರ್ಥಿ ಮಿತ್ರ ಚಂದ್ರಶೇಖರ ಹೆಗಡೆ ಅಲ್ಲಿಯ ಐ.ಬಿಯಲ್ಲಿ ಒಂದು ಅನೌಪಚಾರಿಕ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದ. ಸ್ಥಳೀಯ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಜೋಶಿ, ಪತ್ರಕರ್ತ ಮಿತ್ರರು, ವಿದ್ಯಾರ್ಥಿ ಬಳಗ ಹಾಗೂ ಮುರುಘಾಮಠದ ಶ್ರೀ ಕಾಶಿನಾಥ ಸ್ವಾಮಿಗಳು ಹೀಗೆ ನೆನಪುಗಳ ಮೆಲ್ಲುವ ಕಾಲ.
ಎರಡು ದಶಕಗಳ ಜೀವನ ಸಂಗಾತಿ ಪದ್ದಿಗೆ ಅವಳು ನನಗೆ ರವಾನಿಸುತ್ತಿದ್ದ ಪ್ರೇಮ ಪತ್ರಗಳ ಮೊದಲ ಊರನ್ನೇ ತೋರಿಸಿರಲಿಲ್ಲ. 2000ದಲ್ಲಿ ಒಂದು ವರ್ಷದ ಮಟ್ಟಿಗೆ ಇಲ್ಲಿಯ ಭಂಡಾರಿ ಕಾಲೇಜಿನಲ್ಲಿ ಇಂಗ್ಲೀಷ ಉಪನ್ಯಾಸಕನಾಗಿದ್ದ ನಾನು ನನ್ನ ‘ಗಾಂಧಿ ಮತ್ತು ಗೂಂಡಾ’
ನಾಟಕವನ್ನು ರಚಿಸಿ, ಬರುತ್ತಿದ್ದ ಅಲ್ಪ ಸಂಬಳದಲ್ಲಿ ವಿದ್ಯಾರ್ಥಿಗಳ ಅಪಾರ ಪ್ರೀತಿಯನ್ನುಂಡವನು. ಹೀಗಾಗಿ ಚಂದ್ರಶೇಖರ ಹೆಗಡೆ ಆಯೋಜಿಸಿದ ಈ ಕಾರ್ಯಕ್ರಮ ನೆನಪಿನ ಒಂದು ಅಪರೂಪದ ಬುತ್ತಿಯಾಗಿತ್ತು.
ಅದೇ ದಿನ ಅಂದರೆ ಸಪ್ಟೆಂಬರ್ 10 ರಂದು ಸಾಯಂಕಾಲ ನಾನು ನನ್ನೂರಿನಲ್ಲಿ (ಚಡಚಣ), ನಮ್ಮ ಪ್ರೀತಿಯ ಜೋಳಿಗೆಯಲ್ಲಿ. ಈ ಸಾಯಂಕಾಲವೆ ಒಂದು ಅಚ್ಚರಿ. ಗೆಳೆಯ ಸೋಮನಾಥ ಗೀತಯೋಗಿಯ ಗಂಧದೌತಣ ಕಾವ್ಯಸಂಕಲನದ ಓದಿಗೆ ಕಿವಿಯಾಗಲು ಹೋದ ನಮಗೆ ಹಿರಿಯ ನಾಟಕಕಾರರು, ಕವಿಗಳೂ ಆದ ಪ್ರೊ. ಬಿ.ಆರ್.ಪೊಲೀಸ್ ಪಾಟೀಲ ತಮ್ಮ ಲಾವಣಿ ತಂಡದೊಂದಿಗೆ ಜೋಳಿಗೆಗೆ ಬಂದು ಮಳೆಯಲ್ಲಿ ನೆಂದು ಹೋದ ನೆಲವನ್ನು ಹಾಡಿನಲ್ಲಿ ಅದ್ದಿ ತೆಗೆದರು. ಮುಗಿಲೆತ್ತರದ ಹಾಡುಗಳಿಂದಾಗಿ ಜೋಳಿಗೆಯ ರೋಮರೋಮವೂ ಪುಳಕ. ಜೊತೆಗಿದ್ದವರು ಪ್ರೊ. ಶೇಷಾಚಲ ಹವಾಲ್ದಾರ, ಪ್ರೊ. ಕುಲಕರ್ಣಿ, ಅಕಾಡೆಮಿಯ ಸದಸ್ಯರಾದ ಬೀಳಗಿ, ಪ್ರೊ. ಜಂಗಮಶೆಟ್ಟಿ, ಬಗಲಿ, ವಿ.ಜಿ. ಮುತ್ತಿನ, ಗೆಳೆಯರಾದ ಬಸೀರ, ಚಿದಾನಂದ ಹೀಗೆ ಎಷ್ಟೆಲ್ಲ ಬಳಗ.
ಮರುದಿನ ಸಪ್ಟೆಂಬರ್ 11 ರಂದು ನನ್ನ ತಂದೆ ಮೂರುವರೆ ದಶಕ ಉಪನ್ಯಾಸಕನಾಗಿ ಸೇವೆ ಸಲ್ಲಿಸಿ, ನಮ್ಮನ್ನೆಲ್ಲ ಪೊರೆದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ‘ದಖನ್ ಪ್ರಸ್ಥಭೂಮಿಯ ಪರಂಪರೆ’
ಕುರಿತು ಹಮ್ಮಿಕೊಂಡ ಎರಡು ದಿನಗಳ ಕಾರ್ಯಾಗಾರದ ಉದ್ಘಾಟನೆ ನನ್ನಿಂದ. ಅದೇ ಸಮಾರಂಭದಲ್ಲಿ ಸದಸ್ಯನಾಗಿ ಆಯ್ಕೆಗೊಂಡ ಕಾರಣ ಸಂಸ್ಥೆಯಿಂದ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಭಿಮಾನದ ಸನ್ಮಾನ.
ಸಪ್ಟೆಂಬರ್ 13 ರಂದು ಬೆಂಗಳೂರಿನ ನನ್ನ ಕರ್ಮ ಭೂಮಿಯಾದ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಜಯನಗರದ ಇಂಗ್ಲೀಷ ವಿಭಾಗದ ವತಿಯಿಂದ ಹೋಟೆಲ್ ಗೋಕುಲನಲ್ಲಿ ಔತಣ, ಸನ್ಮಾನ ಮತ್ತು ಮಾತು. ಸಾಧನೆಯ ಸುಖವಿರುವುದೇ ಅದನ್ನು ಸಂಭ್ರಮಿಸುವ ಸಂಗಾತಿಗಳಲ್ಲಿ. ಅಂಥ ಒಂದು ಸಾಂಗತ್ಯ ನನ್ನ ಬದುಕಿನ ಎಲ್ಲ ಹಂತಗಳಲ್ಲಿ ಸಿಕ್ಕದ್ದು ಪುಣ್ಯವೇ ಎನ್ನಬೇಕು. ಅಂದು ನನ್ನೊಂದಿಗೆ ಪ್ರೊ. ಮುರಳಿಕೃಷ್ಣ, ಪ್ರೊ. ಮಧುಮತಿ, ಪ್ರೊ. ಹೇಮಲತಾ, ಪ್ರೊ. ಫಮೀದಾ, ಪ್ರೊ. ಜ್ಯೋತಿ, ಪ್ರೊ. ಧನ್ಯಶ್ರೀ ಮತ್ತು ಪ್ರೊ. ಸೌಮ್ಯರಾಜ.
ಸಪ್ಟೆಂಬರ್ 16 ರಂದು ಕರ್ನಾಟಕ ರಾಜ್ಯ ಕಾಲೇಜು ಶಿಕ್ಷಕರ ವೇದಿಕೆಯ ಉಪಾಧ್ಯಕ್ಷ ಮಿತ್ರ ಡಾ. ನಿಂಗಮಾರಯ್ಯನವರೊಂದಿಗೆ ನಮ್ಮೂರು ಬೇಲೂರಿಗೆ. ಎಷ್ಟು ದಿನವಾಗಿತ್ತು ಇಲ್ಲಿಗೆ ಬಂದು. ಚನ್ನಕೇಶವನ ತೇರೆಳೆದು ಹೋದವನು ಈಗ ಸಣ್ಣ ಸಾಧನೆ ತೆಪ್ಪ ಹತ್ತಿಕೊಂಡು ಬಂದಿದ್ದೆ. ವೈ.ಡಿ.ಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗೆಳೆಯ ಪ್ರೊ. ಜಯಣ್ಣಗೌಡರ ಪ್ರಾಂಶುಪಾಲತ್ವದ ಈ ಅವಧಿಯಲ್ಲಿ ನನಗೊಂದು ವಿಶೇಷ ಅಭಿನಂದನಾ ಸಮಾರಂಭ. ಸೌಜನ್ಯದ ರಾಜಕಾರಣಿ ಎಂದೇ ಹೆಸರುವಾಸಿಯಾದ ಶ್ರೀ ರುದ್ರೇಶಗೌಡರು, ಅವರ ಸಹೋದರ ಕೃಷ್ಣೇಗೌಡರು, ಗೆಳೆಯ ಯಮಸಂಧಿ ಪಾಪಣ್ಣ, ವಿಶೇಷವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅವರೆಲ್ಲರ ಪ್ರೀತಿಗೆ ತಲೆಬಾಗಿದ್ದೇನೆ, ಋಣಿಯಾಗಿದ್ದೇನೆ.
ಇದೇ ಸಾಯಂಕಾಲ ಬೇಲೂರಿನ ವೇಲಾಪುರಿ ಸಾಹಿತ್ಯ ಮತ್ತು ಸಂಸ್ಕøತಿ ವೇದಿಕೆ ಮತ್ತು ತಾಲೂಕ ಸಾಹಿತ್ಯ ಪರಿಷತ್ ಜಂಟಿಯಾಗಿ ಹಮ್ಮಿಕೊಂಡಿದ್ದ ನಾಟಕ ಚಕ್ರವರ್ತಿ ಬೇಲೂರು ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿಯ ಅಭಿನಂದನಾ ಸಮಾರಂಭವೂ ಅಷ್ಟೇ ಅಪರೂಪದ್ದು. ಅಧ್ಯಕ್ಷರಾದ ಶ್ರೀ ದಯಾನಂದ, ಕನ್ನಡ ಪರ ಚಟುವಟಿಕೆಗಳ ಮುಖ್ಯಸ್ಥರಾದ ಶ್ರೀ ಮಾ. ಶಿವಮೂರ್ತಿ, ಬೇಲೂರು-ಹಳೆಬೀಡು ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರಾದ ಶ್ರೀ ಜಮೀಲ್ ಅಹಮದ್ ಈ ಸಭೆಯಲ್ಲಿ ನನಗೆ ತೋರಿಸಿದ ಅಭಿಮಾನ, ಪ್ರೀತಿ ಎಲ್ಲ ಕಾಲಕ್ಕೂ ಸ್ಮರಣೀಯ.
ಹೀಗೆ ಹೊರಟಿದೆ ಬಂಡಿ. ಪ್ರೊ. ಸೋಮಶೇಖರ ಇಮ್ರಾಪೂರರ ಪ್ರೀತಿ ಕುರಿತಾದ ಪದ್ಯವೊಂದು ಈ ಎಲ್ಲ ಸಂದರ್ಭದಲ್ಲಿ ಆಗಾಗ ತಲೆಯಲ್ಲಿ ಸುತ್ತಿ ಹೋಗಿದೆ. ಪ್ರೀತಿ ಎನ್ನುವುದೇ ಹೀಗೆ. ತಬ್ಬಿ ಸುಮ್ಮನಿರಲಾಗದ್ದು, ಸುಮ್ಮನಿದ್ದರೆ ತೆಕ್ಕೆಗೆ ಸಿಗದ್ದು. ಈಗ ಹೇಳಿ -
ಈ ಪ್ರೀತಿ ಹರಿದು
ಹರಿಪಲ್ಯ ಮಾಡಿ ಗಾಳ್ಯಾಗ ತೂರಲೇನ?
ಗಾಳ್ಯಾಗ ತೂರಿ, ಗಡಿಗ್ಯಾಗ ಹಿಡಿದು
ಕಲ್ಲೀಗೆ ಹೇರಲೇನ?