Total Pageviews

Friday, September 1, 2017

ಕಟ್ಟುಪದಗಳು: ನಡೆಯಲ್ಲದ ನುಡಿಗಳಲ್ಲ Part-1

ಬೀಳುತ್ತಿಲ್ಲ ಕನಸುಗಳು
ಕನಸು ತಿನ್ನುವ ಕಾಲ ಇದು
ಕಾಣುತ್ತಿಲ್ಲ ಮುದಿತಾಯಿ ಕುರುಹು
ಆಸರೆಯನ್ನು ನುಂಗುವ ಕಾಲವಿದು
ಹುತ್ತಕಟ್ಟುವ ತಾಯಿ ಕುಡಿಯಾಗುತ್ತಿದ್ದಾಳೆ
ಒಡನೆ ಇರುವುದ ತಪ್ಪಿಸಿಕೊಳ್ಳುತ್ತಿರುವ
ಇವರಿಗೇನು ಗೊತ್ತು
ಹೊಳೆಗೆ ಉರಿ ಇಕ್ಕಿ ಕಾಯಿಸಲಾಗದು
ಎಂದ ಶ್ವೇತಪ್ರಿಯ ಗುರುವೆ?
ಕವಿ, ನಾಟಕಕಾರ ಬೇಲೂರು ರಘುನಂದನನ ಕಟ್ಟುಪದಗಳೊಳಗಿನ ಒಂದು ಪದ್ಯವಿದು. ನನಗೆ ಪ್ರೀತಿಯದು. ಜೀವದಾಂಗುಡಿಯ, ಬಾಚಿ-ಬೆಸೆಯುವ, ಪ್ರೀತಿ-ದಡಬಡಿಕೆಯ ಇಂಥ ಬರಹಗಳಲ್ಲಿ ನಾನು ಒಂದು ರೀತಿ ನೆಮ್ಮದಿಯನ್ನು ಅನುಭವಿಸಿ ಬಿಡುತ್ತೇನೆ. ತಲೆತಿನ್ನುವ, ಮತಿ ಭ್ರಮಣಕ್ಕೆಡೆ ಮಾಡುವ ಸಿದ್ಧಾಂತಗಳ ಮಹಾ ಸುಳಿಯಾದ, ಸಾಹಿತ್ಯಕ್ಕಿಂತ ಇಂಥ ಸರಳ ಬರಹದ ಸಮಾಧಾನ ಅನವರತವೂ ಬೇಕೆನಿಸುತ್ತದೆ. ಪಂಥ-ಪಂಗಡಗಳ, ವರ್ಗ-ಲಿಂಗಾಧಾರಗಳ ದಾರಿ ಕ್ರಮಿಸಿದ ನಮಗೆ ಎಲ್ಲವೂ ಸಾಕಾಗಿ ಹೋಗಿದೆ. ಸರಳತೆಯ ದಾರಿ ಬೇಕಾಗಿದೆ.
ಕಟ್ಟುಪದಗಳ ಕುರಿತು ಒಂದೇ ಮಾತು, ‘ಇವು ಆತ್ಮಾಲಾಪಗಳು.’ ಕವಿಯ ಕುರಿತು ಮತ್ತೊಂದು ಮಾತು, ಈತ ಮನುಷ್ಯ, ಮನುಷ್ಯ ಸ್ವಾಸ್ಥ್ಯವನ್ನು ಚಿಂತಿಸುತ್ತಿರುವವ, ಕಾರಣಕ್ಕಾಗಿಯೇ ಈತ ಅತ್ಯಂತ ಸರಳ ಹಾಗೂ ವಿರಳ ಮನುಷ್ಯ. ಮನುಷ್ಯರ ಮಧ್ಯ, ಮನುಷ್ಯರಿಗಾಗಿ, ಮನುಷ್ಯರಂತೆ ಇರುವ ಕವಿ ‘has to speak of the gods, mortals, the earth, shoes, the temple, the sky, the bridge, the jug, the fourfold, the poem, pain, the threshold, the difference and stillness as he does. In truth this is not philosophy’ ಎಂದು ಕಾವ್ಯ ಚಿಂತಕನೋರ್ವ ವಾದಿಸುತ್ತಾನೆ. ಕಟ್ಟುಪದಗಳ ಕವಿ ರಘುನಂದನ ಇವನ ವಾದಕ್ಕೆ ಉತ್ತಮ ಉದಾಹರಣೆ.
ಇಂಥ ಸರಳ ಬದುಕಿನ, ಅಭಿವ್ಯಕ್ತಿಯ, ಆತ್ಮ ಚಿಂತನೆಯ ದಾರಿ ತೋರಿಸಿದವರು ವಚನಕಾರರು. ದಾರಿ ದೀಪವಾದವುಗಳು ಅವರಿಂದ ರಚನೆಯಾದ ವಚನಗಳು. ಹೀಗಾಗಿಯೇ ಇರಬಹುದೇನೊ ಕಾಡುವ ವಚನಗಳು ಕಾಲಕಾಲಕ್ಕೆ ನಮ್ಮ ಕವಿಗಳ ಕಾಲು ಬಳ್ಳಿಯಾಗಿ ಕಾಣುತ್ತಲೇ ಇರುತ್ತವೆ. ಅಂತೆಯೇ ಕನ್ನಡ ಕಾವ್ಯವನ್ನೇ ಹೊಸದಾಗಿ ಕಟ್ಟುಪದಗಳ ಮೂಲಕ ಹೊಸೆಯಲು ಕುಳಿತ ರಘುನಂದನ ಬರೆಯುತ್ತಾನೆ
ಹೊಸತು ಎಂದು ಏನು ಬರೆದರೂ,
ಹೊಸತರಂತೆ ಕಾಣುತ್ತಿಲ್ಲ.
ಅವರಿವರು ಕುಣಿದ ನೆಲದ ಮೇಲೆ,
ಮತ್ತೆ ಕುಣಿಯಲೂ ಮನಸಿಲ್ಲ.
ರಸ ಕಸ ಹೊಸತೆಂದು ರಚನೆಗೆ
ಪದವಿತ್ತೊಡೆ, ಅಳುಕು ತಪ್ಪುತ್ತಿಲ್ಲ.
ಬರೆದುದನೆ ಬರೆವುದ ಬಿಡಿಸಿ,
ಹೊಸದಾರಿಗೆ ಹೆಸರಿಟ್ಟು ಕೆಸರಲ್ಲಿ
ಅರಳುವ ಅವಳ ನಿತ್ಯ ಕಿಶೋರತೆಯ
ಹೇಳಿಕೊಡಯ್ಯ ಶ್ವೇತಪ್ರಿಯ ಗುರುವೆ.
ಹೊಸ ರೀತಿಯಲ್ಲಿ ಬರೆಯಬೇಕು, ಹೊಸದೆನ್ನಿಸುವಂತೆ ಬರೆಯಬೇಕು ಎನ್ನುವ ತವಕವೇ ಒಂದು ಜಾಗತಿಕ ಬಯಕೆ. ಡಾಂಟೆ, ವರ್ಜಿಲ್, ಫಿರ್ದೂಸಿ, ಶ್ರೀ ಅರಬಿಂದೊ ಎಲ್ಲರೂ ಧ್ಯಾನದವರೆ. 17ನೇ ಶತಮಾನದ ಇಂಗ್ಲೀಷ ಕವಿ ಅಲೆಗ್ಘಾಂಡರ್ ಪೋಪ್, ‘ರೇಪ್-ಆಫ್-ಲಾಕ್ಕಾವ್ಯಕೃತಿ ಬರೆಯುವ ಮೂಲಕ ಕಾವ್ಯವನ್ನು, ಎಸ್ಸೆ-ಆನ್-ಮ್ಯಾನ್ ಬರೆಯುವ ಮೂಲಕ ಮನುಷ್ಯನನ್ನು ಮುರಿದು ಕಟ್ಟುವ, ಮರುವ್ಯಾಖ್ಯಾನಿಸುವ ಪ್ರಯತ್ನವನ್ನು ಮಾಡಿದ. ಕನ್ನಡ ಕಾವ್ಯದಲ್ಲಿಯೂ ಇಂಥ ಉದಾಹರಣೆಗಳಿಗೇನೂ ಕೊರತೆ ಇಲ್ಲ. ರಘುನಂದನನ ಒಟ್ಟು ಕಾವ್ಯ ಪ್ರಯೋಗ ಮೇಲೆ ಪ್ರಸ್ತಾಪಿಸಿದ ಕಾವ್ಯಸಂಸ್ಕøತಿಯ ಮುಂದುವರಿಕೆ
ಹೊಸದನ್ನು ಹೊಸೆಯಬೇಕೆಂದು ಹಂಬಲಿಸುತ್ತಲೇ ವಚನ ಪ್ರಕಾರ-ಪ್ರಭಾವಳಿಗೆ ಒಳಗಾಗುವ ರಘುನಂದನನ ಕಟ್ಟಪದಗಳು ನಮ್ಮಲೊಂದು ಪ್ರಶ್ನೆಯನ್ನು ಹುಟ್ಟು ಹಾಕುತ್ತವೆ. ಶತಮಾನಗಳ ನಂತರವೂ ಯಾಕೆ ಕಾಡುತ್ತವೆ ವಚನಗಳು? ಇವು ನಮ್ಮನ್ನು ಕಾಡಿದ ರೀತಿ ಅದೆಷ್ಟು ಅನನ್ಯ! ಒಂದಂತೂ ಸ್ಪಷ್ಟ, ವಚನಗಳು ವ್ಯಕ್ತಿತ್ವ ಸಿದ್ಧಿಯನ್ನು ಸಾಧಿಸಿದ ಚೇತನದ ಉಕ್ಕುಂದಗಳಾಗಿ, ಅನುಭವದ ಅಂತರಂಗವನ್ನು ಬಿಂಬಿಸುವ ನುಡಿಗಡಣವಾಗಿ ಹಾಗೂ ಪರಿಸರದ ಬದುಕಿನ ಜ್ವಲಂತ ಚಿತ್ರಣವಾವಾಗಿರುವ ವಚನಗಳು ಜಗತ್ತಿನ ಸಾಹಿತ್ಯದಲ್ಲಿಯೇ ಒಂದು ವಿಶಿಷ್ಟತೆಯನ್ನು ಸಾಧಿಸಿವೆ. ಕಳೆದ ಎಂಟು ಶತಮಾನಗಳ ಜನಜೀವನದ ಮೇಲೆ ಪ್ರಭಾವವನ್ನು ಬೀರಿ, ನಮ್ಮ ಇಂದಿನ ವೈಜ್ಞಾನಿಕ ಯುಗಕ್ಕೂ ಅವಶ್ಯಕ ಹಾಗೂ ಮಾರ್ಗದರ್ಶಕವಾಗಬಲ್ಲ ಸ್ವಯಂ ಸತ್ವವನ್ನು ಪಡೆದಿರುವ ವಚನಗಳು ನಮ್ಮ ಗಂಭೀರ ಚಿಂತನೆಯನ್ನು ಆಹ್ವಾನಿಸುತ್ತವೆ. ಆದರೆ ಇಂಥ ಅದ್ಭುತ ಗುಣಗಳ ಸಾಹಿತ್ಯ ಬದುಕುಳಿಯಬೇಕಾದರೆ ಬದಲಾಗುತ್ತಿರುವ ನಮ್ಮ ಜೀವನ ಪದ್ಧತಿಯೊಂದಿಗೆ, ಕಾವ್ಯ ಪ್ರಯೋಗಗಳೊಂದಿಗೆ, ಅದನ್ನು ಹೊಸ ಅರ್ಥಗಳೊಂದಿಗೆ ಸಮೀಕರಿಸಿಕೊಳ್ಳಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಅಧಿಕವಾಗಿದೆ. ಅವಶ್ಯಕತೆಯನ್ನು ಒಂದು ನಿಟ್ಟಿನಲ್ಲಿ ಕವಿ ಗೆಳೆಯ ರಘುನಂದನನಕಟ್ಟುಪದಪೂರೈಸಿದೆ. ಕಾರಣ, ಕಟ್ಟುಪದಗಳು ವಚನಕಾರರ ವಿನಯ-ವಿಮರ್ಶೆ, ವೈಚಾರಿಕತೆ, ಭಕ್ತಿ ಮತ್ತು ಬಂಡಾಯಗಳನ್ನು ಗರ್ಭೀಕರಿಸಿಕೊಂಡಿವೆ. ರಮ್ಯ-ರೋಚಕ ಅಭಿವ್ಯಕ್ತಿಗಳಾಗದೆ ಆತ್ಮಕಮಲಗಳಂತೆ ಅರಳಿಕೊಂಡಿವೆ.
ನಮಗೆಲ್ಲ ಗೊತ್ತು, ಹಲವು ವಿಸ್ತಾರಗಳು ಅಂತರ್ಗತವಾಗಿರುವ ಸಮ್ಯುಕ್ವಾಕ್ಯ ವಚನ. ಶರಣವಾಜ್ಞಯವನ್ನು ಸಾಹಿತ್ಯವಾಗಿ ನೋಡಬಹುದು, ಸಾಮಾಜಿಕ ಕಾಂತಿವಾಣಿಯಾಗಿ ನೋಡಬಹುದು, ನೀತಿಯಾಗಿ, ಧರ್ಮವಾಗಿ, ಆಧ್ಯಾತ್ಮಿಕವಾಗಿ ನೋಡಬಹುದು, ಎನ್ನುವುದನ್ನು ನೀವು ಒಪ್ಪುವುದಾದರೆ ರಘುನಂದನನಕಟ್ಟುಪದಗಳಿಗೂ ಅದೇ ಕಾವ್ಯ ಸಾಂದ್ರತೆಯ ಹಾಗೂ ಭಾವಜೀವದ ವಿಸ್ತಾರವಿದೆ. ಉದಾಹರಣೆಗೆ
ಕಲ್ಪವೃಕ್ಷಕ್ಕೆ ಕಲ್ಪವಲ್ಲಿ ಎಂದರು,
ಎಳೆನೀರ ಕೆಡವಿ ಗಟ ಗಟ ಕುಡಿದರು.
ಇಳೆಯನ್ನು ಜೀವನ್ಮುಖಿ ಅಂದರು,
ಅಗದಗೆದು ಗರ್ಭವನೇ ನುಂಗಿಬಿಟ್ಟರು.
ಹಸುವಿಗೆ ಕಾಮದೇನು ಎಂದು ಕೈ ಮುಗಿದು,
ಕರುಳು ಕೆಚ್ಚಲನ್ನು ಮಾಯ ಮಾಡಿಬಿಟ್ಟರು.
ಹೆಣ್ಣನ್ನು ಶಕ್ತಿ ಮೂಲ ಆದಿಶಕ್ತಿ ಎಂದು,
ಎಲ್ಲ ಶಕ್ತಿಗಳ ಕಸಿದು ಮೂಲೆಗೆ ಕೂರಿಸಿಬಿಟ್ಟರು
ಶ್ವೇತಪ್ರಿಯ ಗುರುವೆ.
ಕಾವ್ಯವನ್ನು ನಾವು ಬಯಸುವುದೇ ಕಾರಣಕ್ಕಾಗಿ. Poetry is recalling, remembering, memorializing and responding to an original call coming from the central living presenting of the being of the world. ಇಂಥ ಕವಿತೆ ವಚನಕಾರನದೊ, ತತ್ವಪದಕಾರನದೊ, ನವೋದಯ-ನವ್ಯ-ದಲಿತ-ಬಂಡಾಯಕಾರನದೊ ಅಥವಾ ರಘುನಂದನದೊ
ಕಾವ್ಯ ಯಾರದೂ ಅಲ್ಲ ಕವಿಯದೂ ಅಲ್ಲ. ಹಾಗಿದ್ದರೆ ಕಾಲದ್ದೆ? ಸುಳ್ಳು. ಅದು ಅನಂತದ್ದು. ಕಟ್ಟುಪದಗಳ ಒಳನಿಧಾನ ಅನಂತವೆ. ಹೀಗಾಗಿ ಕಾಲದ ಕೋಡುಗಲ್ಲಿನ ಮೇಲೆ ನಿಂತೇ ಕಾಲದಾಚೆಯದನ್ನು ಅವು ಕೂಗಿ ಹೇಳುತ್ತವೆ.
ಒಂದು ಸಂಗತಿ, ಹದಿನಾಲ್ಕನೇ ಶತಮಾನದ ಇಸ್ಲಾಮಿಕ್ ಪ್ರಭಾವಗಳ ಪರಿಣಾಮವಾಗಿ ಬಂದ ಇಡಿಯಾದ ಸೂಫಿ ಕಾವ್ಯ ನನ್ನನ್ನು ಕಾಡಿಲ್ಲ. ಆದರೆ ರಘುನಂದನನ ಕಟ್ಟುಪದಗಳಂತೆ ಕೆಲವು ಸೂಫಿಗಳ ಬಿಡಿಬಿಡಿಯಾದ ಬರಹಗಳು ನನ್ನನ್ನು ಇಡಿಯಾಗಿ ಕಾಡಿವೆ. ಇದಕ್ಕೆ ಮುಖ್ಯ ಕಾರಣ ವಚನಗಳಲ್ಲಿ ಪ್ರಸ್ತಾಪವಾದ ಅದೇ ಮಾನವೀಯ ಮೌಲ್ಯಗಳು. ಹಾಗೆ ನೋಡಿದರೆ ಕಾವ್ಯವೆಂದರೆ ಮನುಷ್ಯ ದರ್ಶನದ ಮಹಾನ್ ರಂಗಸಜ್ಜಿಕೆ. ಹನ್ನೆರಡನೆಯ ಶತಮಾನದ ನಂತರ ಹದಿನಾಲ್ಕರಲ್ಲಿ ಮತ್ತೆ ಇದು ಸಾಧ್ಯವಾಯಿತು. ಕವಿ ಕಬೀರ ಅದರ ತೂರ್ಯವಾಗಿದ್ದ, ಭಾವನಿಷ್ಠನಾಗಿದ್ದ. ಬದುಕಿದನ್ನೇ ಹಾಡಿದ. ಹಾಡಿದ್ದನ್ನೇ ಮಾಡಿದ. ಇದು ಕಬೀರನ ದೋಹೆ ಹಾಗೂ ರಘುನಂದನನ ಕಟ್ಟುಪದ ಸಮರೇಖೆಯ ಮೇಲೆ ನಿಲ್ಲುವ ನೆಲೆ. ಇದು ಸಮಾನಾಂತರವಲ್ಲ, ಸಮದರ್ಶನ.
When greed hits you like a wave
You don’t need water to drown
ಇವು ಕಬೀರನ ದೋಹೆಯ ಇಂಗ್ಲೀಷ್ ಭಾಷಾಂತರದ ಸಾಲುಗಳು. ಕಬೀರನನ್ನು ಹಿಂದಿಯಲ್ಲಾದರೂ ಓದಿ, ಇಂಗ್ಲೀಷ್, ಕನ್ನಡದಲ್ಲಾದರೂ ಓದಿ ಅಥವಾ ಜಗತ್ತಿನ ಇನ್ನಾವುದೇ ಭಾಷೆಯಲ್ಲಾದರೂ ಓದಿ ನಿಮಗೆ ಕಬೀರ, ಕಬೀರನಾಗಿಯೇ ದಕ್ಕುತ್ತಾನೆ. ಕಬೀರ ಸತ್ಯವಾಗಿದ್ದಾನೆ, ಸಮೂಹವಾಗಿದ್ದಾನೆ, ಸಾರ್ವಕಾಲಿಕವಾಗಿದ್ದಾನೆ. ಸಾಲುಗಳನ್ನೆ ಉದಾಹರಣೆಯಾಗಿ ನೋಡಿ, ಅವನೆಂಥ ಮಾತು ಹೇಳುತ್ತಾನೆ! ಸ್ವಾರ್ಥದ ಅಲೆ ನಿಮ್ಮ ತಲೆಯನ್ನು ಅಪ್ಪಳಿಸುವಾಗ ಮುಳುಗಿ ಸಾಯಲು ಸಾಗರ-ಸರೋವರಗಳು ಬೇಕಿಲ್ಲ ಎಂದು ನಕ್ಕು ಬಿಡುತ್ತಾನೆ. ಅವನ ವ್ಯಂಗ್ಯ ಪ್ರಜ್ಞಾಪೂರ್ವಕ ನಗೆ ಮಂಕು ಕವಿದ ನಮ್ಮ ಬುದ್ಧಿಯ ಮೇಲೆ ಎಚ್ಚರಿಕೆಯ ಗಂಟೆಯಂತೆ ಕೆಲಸ ಮಾಡುತ್ತದೆ, ಪರಂಪರೆಯ ಪುಟಗಳನ್ನು ಒಂದು ಕ್ಷಣ ತಿರುಗಿ ಹಾಕುವಂತೆ ಮಾಡುತ್ತದೆ. ಕಬೀರನಂತೆಯೇ ನಮಗೆ ಹೇಳುತ್ತಾನೆ ಕವಿ ರಘುನಂದನ
ಸಮಸ್ಯೆಗಳನ್ನು ಎದುರಿಸಬಹುದು,
ಅವಮಾನಗಳನ್ನು ಎದುರಿಸಲಾಗದು.
ನೋವುಗಳನ್ನುಂಡು ಗಟ್ಟಿಯಾಗಬಹುದು,
ಅನುಮಾನಗಳನ್ನು ಸಹಿಸಲಾಗದು.
ದಿಟ್ಟತೆಗೆ ಪುಟ್ಟ ದೀಪ ಹಚ್ಚುವುದ ಬಿಟ್ಟು,
ಇಲ್ಲದ ಗುಟ್ಟುಗಳ ಹುಟ್ಟಿಸಿ ರಟ್ಟು ಮಾಡುವ,
ಕಟ್ಟು ಕಥೆಯ ಹೆಣೆಯುವ ತವಕದಲ್ಲೇ ಎಲ್ಲರೂ

ಯಾಕೆ ಶ್ವೇತಪ್ರಿಯ ಗುರುವೆ?

No comments:

Post a Comment