ಇಂದಿಗೂ ಈ ಕುತೂಹಲ ಎಂದಿನಂತೆಯೇ ಉಳಿದುಕೊಂಡಿದೆ ನನ್ನಲ್ಲಿ. ಸಧ್ಯ ಉಸುರುತ್ತಿರುವ ವರ್ಷ ಹೇಗೆ ಕೊನೆಗೊಳ್ಳುತ್ತದೆ ಹಾಗೂ ಹುಟ್ಟಲಿರುವ ಹೊಸ ವರ್ಷ ಹೇಗೆ ಆರಂಭವಾಗುತ್ತದೆ ಎನ್ನುವುದನ್ನು ಯಾವಾಗಲೂ ಕಾತರದಿಂದ ಕಾಯುತ್ತಿರುತ್ತೇನೆ ನಾನು. ಬಹುತೇಕ ನನ್ನಂತೆಯೇ ಬಹುಪಾಲು ಬಂಧುಗಳು.
ವರ್ಷಗಳ ಕುರಿತು ನನ್ನಲ್ಲೊಂದು ಛಂದದ ಚಿತ್ರ. ಕಾಲವೆನ್ನುವ ಅಗಾಧ ವೃಕ್ಷಕ್ಕೆ ನಿರಂತರವಾಗಿ ಹಾಗೂ ಸಹಜವಾಗಿ ಚಿಗುರೊಡೆಯುವ ಈ ವರ್ಷಗಳು ಉದುರಿ ಬೀಳುವಾಗ ಹಣ್ಣೆಲೆಗಳಂತೆ ಅವು ತಾವಷ್ಟೇ ಹಣ್ಣಾಗಿರುವುದಿಲ್ಲ, ನಮ್ಮನ್ನೂ ಹಣ್ಣಾಗಿಸಿರುತ್ತವೆ, ಸಣ್ಣಾಗಿಸಿರುತ್ತವೆ. ತಮ್ಮಂತೆಯೇ ಮುಂದೆ ನಮ್ಮನ್ನು ಮಣ್ಣಾಗಿಸುತ್ತವೆ.
ಅಂದಹಾಗೆ, ಮಣ್ಣಾಗದವನು ಮನುಷ್ಯನೇ ಅಲ್ಲ ಬಿಡಿ. ಪ್ರಕೃತಿಯಂತೆ ಮನುಷ್ಯ. ಮನುಷ್ಯನಂತೆಯೇ ಪ್ರಕೃತಿಯೂ ಕೂಡಾ.
ಈ ವರ್ಷದ(2017) ಕೊನೆಯ ಸುತ್ತು ಆರಂಭವಾದುದು ಪ್ರೀತಿಯ ಯುವ ಕವಿಗೆಳೆಯ ಶಿವಕುಮಾರ ಕುಂಬಾರನ ದಾಂಪತ್ಯ ಗೀತೆಯೊಂದಿಗೆ. ಗೆಳೆಯ ಬೇಲೂರು ರಘುನಂದನ ಹಾಗೂ ನನ್ನ ಅಭಿಮಾನಿಯಾದ ಈತ ಕವಿಶೈಲದ ಕಾವ್ಯಕಮ್ಮಟದಲ್ಲಿ ನನ್ನ ಭಾಷಣ ಮುಗಿಯುತ್ತಿದ್ದಂತೆಯೇ ಓಡಿ ಬಂದು ಹೇಳಿದ, ‘ಸಾರ್ ಡಿಸೆಂಬರ್ 10ಕ್ಕೆ ನನ್ನ ಮದುವೆ, ಜೊತೆಗೊಂದು ಕವಿಗೋಷ್ಠಿ ನಿಮ್ಮ ಅಧ್ಯಕ್ಷತೆಯಲ್ಲಿ ನಡೆಯಬೇಕೆಂದು ಆಸೆ, ದಯವಿಟ್ಟು ಬರಬೇಕು’ ಹೀಗೆ ಹೇಳಿದ ಈ ಗೆಳೆಯ ಸುಮಾರು ಎಂಟು ತಿಂಗಳು ಆಗಾಗ ಫೋನಾಯಿಸಿ ಮದುವೆಯನ್ನು ಎಚ್ಚರಿಸುತ್ತಲೇ ಇದ್ದ.
ಇಂಥ ಪ್ರೀತಿಯ ಎಚ್ಚರಿಕೆಗಳನ್ನು ಚಾಚು ತಪ್ಪದೇ ಪಾಲಿಸುತ್ತೇನೆ ನಾನು. ಸುಮ್ಮನೆ ಹೊಟ್ಟೆ ಬಿರಿಯುವಂತೆ ಉಂಡು, ಆಭರಣ, ಬಟ್ಟೆ, ಸಂಬಂಧವಿಲ್ಲದ ಸಂಗತಿ ಸಮಾಚಾರಗಳ ಸಾವಿರಾರು ಮದುವೆಗಳ ಮಧ್ಯ, ಒಂದು ಸಂದರ್ಭವನ್ನು ಸಂಸ್ಕøತಿಯಾಗಿ, ಕವಿತೆಯಾಗಿ ಕಟ್ಟಿಕೊಡುತ್ತೇನೆ ಎನ್ನುವವರನ್ನು ಹುಡುಕಿ ಹಾರೈಸಬೇಕೆಲ್ಲವೆ? ಈ ದಾಂಪತ್ಯ ಒಂದು ಗೀತೆಯಾಗಬೇಕಲ್ಲವೆ?
ಅಂದುಕೊಂಡಂತೆಯೇ ನನ್ನ ಕುಟುಂಬ ಸಮೇತವಾಗಿ ನಾನು ಚಿಕ್ಕಜಾಜೂರ ಬಳಿಯ ಬೆಟ್ಟದ ಕಡೂರಿನಲ್ಲಿ ಹಮ್ಮಿಕೊಂಡ ಈ ಸಮಾರಂಭಕ್ಕೆ ಹೋದದ್ದು, ಊರ ಹೊರಗೆ ಬೆಟ್ಟದ ಮೇಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ನನಗಿಂತಲೂ ಮುಂಚೆ ಕನಕಗಿರಿಯ ಗಜಲ್ ಕವಿ ಅಲ್ಲಾ ಗಿರಿರಾಜ ಆದಿಯಾಗಿ ಒಟ್ಟು ಕವಿಗಳು ಸೇರಿ ಶಿವಕುಮಾರ ಕುಂಬಾರರ ಗಜಲ್ ಸಂಕಲನವನ್ನು ಬಿಡುಗಡೆ ಮಾಡಿ ಕವಿಗೋಷ್ಠಿ ಮುಗಿಸಿ ಬೆಂಗಳೂರಿಗೆ ಬಂದಾಗ ಬೆಳಕು ಹರಿಯುತ್ತಿತ್ತು.
ಮೂರು ತಿಂಗಳಾಗಿತ್ತು ನನ್ನ ‘ಜೋಳಿಗೆ’ಯನ್ನು ನೋಡಿ. ಅದು ಜೀವದ ಸೆಳೆತು 2017ರ ಕೊನೆಯ ಭೇಟಿ ಎಂದುಕೊಂಡು ದೊಡ್ಡಬಳ್ಳಾಪುರ, ನಂದಿಗ್ರಾಮ, ಅದೋನಿ ಮಾರ್ಗವಾಗಿ ಮಂತ್ರಾಲಯ ಸುತ್ತಿ, ನನ್ನ ಭೀಮಾತೀರ ತಲುಪಿದೆ.
ಅಂದಹಾಗೆ, ಇಲ್ಲೊಂದು ಸಂಗತಿ ನಂದಿ ಬೆಟ್ಟಕ್ಕೆ ಹೋಗಿ ಬಾಟಲ್ ಖಾಲಿ ಮಾಡುವ ನಮಗೆ ಪಕ್ಕದ ನಂದಿಗ್ರಾಮದ ಐತಿಹಾಸಿಕ ಸೊಗಸು ದಕ್ಕಿಲ್ಲ ಎಂದೇ ಅರ್ಥ. ಪಲ್ಲವರು, ಹೊಯ್ಸಳರು, ವೆಂಗಿಗಳು, ಒಡೆಯರ್ ಆದಿಯಾಗಿ ಒಟ್ಟು ಐದು ರಾಜಮನೆತನಗಳು ಕಾಲಕಾಲಕ್ಕೆ ಐದು ದೇವಸ್ಥಾನಗಳನ್ನು ನಿರ್ಮಿಸಿವೆ. ಇದೊಂದು ಅದ್ಭುತ ಸ್ಥಳ, ಎಂದಾದರೊಮ್ಮೆ ಹೋಗಿಬನ್ನಿ.
ಡಿಸೆಂಬರ್ 24ರ ನಸುಕಿನಲ್ಲಿ ನಾನು ಹೋಗಿ ‘ಜೋಳಿಗೆ’ಯ ಸೇರಿಕೊಂಡೆ. ಸಸಿ-ಮರಗಳೆಂಬ ನೂರಾರು ಜೀವಗಳ ತಾಯ್ನೆಲವಿದು. ಎಷ್ಟೊಂದು ಹಕ್ಕಿಗಳ ಹಾಡು ಸುಮ್ಮನಾಗುತ್ತದೆ ಮನಸ್ಸು ನನ್ನ ‘ಜೋಳಿಗೆ’ಯಲ್ಲಿ. ಎಷ್ಟೇ ಬೇಸರಿಸಿ ಬಂದರೂ ಹಸಿರಾಗಿಸುವ ಒಂದು ಸಂಗತಿ ಸದಾಕಾಲವೂ ಅದರೊಳಗಿರುತ್ತದೆ. ಅಂಥ ಒಂದು ಸಂಗತಿ ಈ ಬಾರಿಯೂ ಇತ್ತು.
ಇಂಡಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕ ತನ್ನ 10ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನನ್ನಾಗಿ ನನ್ನ ಹೆಸರನ್ನು ಘೋಷಿಸಿತು. ಯಥಾ ಪ್ರಕಾರ ಪರಿಷತ್ ಪದಾಧಿಕಾರಿಗಳು, ನನ್ನ ಗುರುಗಳು, ಅಭಿಮಾನಿಗಳು, ಗೆಳೆಯರು, ಹಿರಿಯರು ಸೇರಿಕೊಂಡು ನನ್ನ ‘ಜೋಳಿಗೆ’ಗೆ ಬಂದು ತಾಂಬೂಲ ನೀಡಿ ಹೋದರು.
ಭಾವುಕತೆಯ ಆ ಕ್ಷಣದಲ್ಲಿ ನನ್ನ ತಂದೆ ನನಗೆ ಕಲಿಸಿದ ಪದ್ಯ ತಲೆಯಲ್ಲಿ ಸುತ್ತುತ್ತಿತ್ತು –
ಸಹಜ ಮಿಲೆ ತೊ ದೂದ್ ಸಮಾನ
ಮಾಂಗೆ ಜೊ ಮಿಲೆ ಓ ಪಾಲಿ ಸಮಾನ
ಜಾ ಮೆ ಏಂಚ ತಾನಿ ಓ ರಕ್ತ ಸಮಾನ
ಹೌದು ನಿರಂತರ ಬರಹ-ಭಾಷಣಗಳಿಲ್ಲದೆ ಮತ್ತೇನನ್ನೂ ಮಾಡದ ನನಗೆ ಇದು ಸಹಜವಾಗಿ ದೊರೆತದ್ದು, ಭಿಮಾತೀರದಲ್ಲಿ ಕ್ಷೀರವಾಗಿ ದಕ್ಕಿದ್ದು. ಇದಕ್ಕೆ ಕಾರಣರಾದ ಎಲ್ಲ ಶಕ್ತಿಗಳಿಗೆ ನಾನು ತಲೆಬಾಗಿದ್ದೇನೆ.