Total Pageviews

Friday, December 8, 2017

ಬೆಳಗಿಗಾಗಿ ಕಾಯುತ್ತಾ....

           ಹದಿನೆಂಟು ಪರ್ವಗಳ ಮಹಾಭಾರತ ಕಾವ್ಯದಲ್ಲಿಮೌಸಲ ಪರ್ವಎನ್ನುವುದೊಂದಿದೆ. ಅದು ನನಗೆ ಬಹಳ ಇಷ್ಟದ್ದು. ಕಾರಣ ಶ್ರೀಕೃಷ್ಣ ಭಗವಾನನು ತನ್ನೆಲ್ಲ ಜನ-ಬಂಧುಗಳ ವಿನಾಶವನ್ನು ನೋಡಿ, ವ್ಯಾಕುಲನಾಗಿ, ಸಮುದ್ರ ತೀರಕ್ಕೆ ಹೋಗಿ ಕುಳಿತುಕೊಂಡು ಧ್ಯಾನಸ್ಥನಾಗುತ್ತಾನೆ. ಅಧಿಕಾರ, ಅಹಂಕಾರ, ಅನಾಚಾರಗಳ ಕಾರಣಕ್ಕೆ ಎಲ್ಲ ಹತವಾಗಿ ಹೋದ ಘಟ್ಟ ಅದು. ಒಂದು ಜನಾಂಗ ಹಾಗೂ ಕಾಲಘಟ್ಟ ಅಂಟಿಸಿಕೊಂಡ ರೋಗಗಳಿಗೆ ಬಲಿಯಾಗುವ ದುರಂತ ನಾಟಕಕ್ಕೆ ಪ್ರೇಕ್ಷಕನಾಗಿದ್ದ ಕೃಷ್ಣ ಈಗ ಲೆಕ್ಕಗಳಾಚೆ ಕಣ್ಣೀರಾಗಿದ್ದಾನೆ, ಒಂಟಿಯಾಗಿದ್ದಾನೆ. ವಿಚಿತ್ರವೆಂದರೆ ಇದು. ಹೀಗೆ ಚಿಂತೆಯಲ್ಲಿ ಒರಗಿದ ಸರ್ವನಿಯಾಮಕ(?) ಶ್ರೀಕೃಷ್ಣ ಬೇಟೆಗಾರನ ಬಾಣದಿಂದ ಹತನಾಗುತ್ತಾನೆ. ಕಾವ್ಯದ ಕರ್ತೃ ವ್ಯಾಸಮಹರ್ಷಿಗಳು ಇಲ್ಲಿಗೆ ಶ್ರೀಕೃಷ್ಣಭಗವಾನನ ವಿಷ್ಣುಮೂರ್ತಿಯ ಎಂಟನೇಅವತಾರಪರಿಸಮಾಪ್ತಿಯಾಯಿತು ಎಂದು ಹೇಳಿಬಿಡುತ್ತಾರೆ. ಒಟ್ಟಾರೆಮೌಸಲ ಪರ್ವಮನುಷ್ಯರ ಕುರಿತು ಮನುಷ್ಯನೊಬ್ಬ ಮಮ್ಮಲ ಮರುಗುವ, ಮರು ಅವಲೋಕನಕ್ಕೊಳಗಾಗುವ ಮಹಾವಿಸ್ತಾರಕ್ಕೆ ಸಾಕ್ಷಿಯಾಗುವುದರೊಂದಿಗೆ ಇಂಥ ಒಂದುಅವತಾರಇಲ್ಲಿಗೆ ಮುಗಿಯಿತು ಎಂದು ಹೇಳುವುದರೊಂದಿಗೆ, ಹೌದೆ? ‘ಅವತಾರಗಳಿಗೆ ಅಂತ್ಯವಿದೆಯೆ? ಇರುವುದಾದರೆ ಅದಕ್ಕೆ ಕಾರಣಿಕ ಅಂಶಗಳಾವವು? ಹೀಗೆ ಏನೆಲ್ಲಾ ಪ್ರಶ್ನೆಗಳು ಹುಟ್ಟುತ್ತವೆ.
            ಕವಿ ಗೆಳೆಯ ಡಾ.ಎಲ್.ಸಿ.ರಾಜು ಅವರಮೃಗಾವತಾರಿಕಾವ್ಯಸಂಕಲನ ಎತ್ತಿಕೊಂಡ ಕ್ಷಣವೇ ಮನುಷ್ಯ, ಆತನ ಅವಸಾನ, ಅವತಾರ ಹಾಗೂ ಆಲೋಚನೆಗಳಿಗೆ ಸಂಬಂಧಿಸಿದ ಏನೆಲ್ಲ ಪ್ರಶ್ನೆಗಳು ತಟ್ಟನೆ ಹುಟ್ಟಿಕೊಂಡು, ಒಂದು ಕ್ಷಣ ಮಹಾಭಾರತ ಕಾವ್ಯದ ಮೌಸಲ ಪರ್ವ ನೆನಪುಗಳನ್ನು ಮೆಲುಕುವಂತಾಯಿತು. ಮುವ್ವತ್ತೇಳು ಕವಿತೆಗಳ ಸಂಕಲನ ಮತ್ತೆ ಆಲೋಚಿಸುವುದು ಮೇಲಿನದನ್ನೆ. ಐದು ಸಾವಿರದ ಎರಡು ನೂರು ವರ್ಷಗಳ ನಂತರವೂ ಸಮಾಜವೆಂಬ ಮನುಷ್ಯನಿರ್ಮಿತ ಚೌಕಟ್ಟಿನ ಮೇಲೆ ನಿಂತ ಕಾವ್ಯ ತನ್ನ ಜಿಜ್ಞಾಸೆಯಾಗಿಸಿಕೊಳ್ಳಬೇಕಾದುದು ಮನುಷ್ಯನನ್ನೆ. ಅವನ ಹಲವು ಅವತಾರಗಳನ್ನೆ ಹಾಗೂ ಅವತಾರಗಳಿಗೆ ಕಾರಣವಾದ ಸಾಮಾಜಿಕ ವ್ಯವಸ್ಥೆಗಳನ್ನೆ. ಅರ್ಥದಲ್ಲಿ ಕಾವ್ಯ ಅಖಂಡ.
ಮೃಗಾವತಾರಿ ಕೆಲವು ಕನವರಿಕೆಗಳು
ಒಳಕಿವಿಗೆ ಕೇಳಿಸುತ್ತದೆ
ಮನುಷ್ಯ ವಿಘಟನೆಯ
ಮಂತ್ರಘೋಷ:
ಒಗ್ಗಟ್ಟಿನಲ್ಲಿಬಲವಿದೆ;
ಎಡವೂ ಇದೆ!
ಒಡೆದ ಸಮಾಜದಲ್ಲೀಗ
ನೀತಿಪಾಠವೇ ಬದಲು:
ಕೂಡಿ ಬಾಳಿದರೆ ಸ್ವಲ್ಪ ಸುಖ
(ಒಳದನಿಗಳು)
* * * *
ಕ್ರೌರ್ಯದೇಟಿಗೆ ಸಿಲುಕಿ
ಜಗದೆದೆಯು ತತ್ತರಿಸಿ
ಹರಿಯುತಿದೆ ಕೆನ್ನೀರು
ಸೋರಿ ಸೋರಿ;
ಸಹಜ ಸಂವೇದನೆಗಳನು ಕೊಂದು
ಮೌಲ್ಯಾದರ್ಶಗಳನೇ ತಿಂದು
ಆಗಿಬಿಟ್ಟಿದ್ದಾನೆ ಮನುಜ
ವಿಶ್ವನಾಶಕ್ಕೆ ತಾನೇ ಮಹಾಮಾರಿ

ಮಾನವತೆ ಮರೆತಿರುವ
ಮನುಜ ಪ್ರೇತವ ಕಂಡು
ಓಡುತಿವೆ ಹೌಹಾರಿ
ಮೌಲ್ಯಗಳೆ ಬೆದರಿ!
ರಕ್ತ-ಮಾಂಸಗಳ
ರುಚಿ ಕಂಡು ಕೆರಳಿರುವ,
ನಾಲಿಗೆಯ ನಿಡುಚಾಚಿ
ಬಲಿಗಾಗಿ ಕಾದಿರುವ,
ಮಾನವನೆ
ಯುಗದ ಮೃಗಾವತಾರಿ!
(ಮೃಗಾವತಾರಿ)
* * * *

ಬಂದದ್ದು ಬಾಚುತ್ತೇವೆ
ಬಾರದುದ ದೋಚುತ್ತೇವೆ
ಸುಲಿಗೆ ಸೂತ್ರಗಳೆ ನಮ್ಮ ನಿತ್ಯ ಪಾಠ!
ಸತ್ತರೆ ಸಾಯಲಿ ಬಿಡಿ ಸಾವಿರ ಜನ
ಆರಕೂಡದು ಮಾತ್ರ ನಮ್ಮ ನಗೆಯ ದೀಪ!

ರಕ್ತ ಬೀಜಾಸುರರು ನಾವು
ನಮಗಿಲ್ಲವೇ ಇಲ್ಲ ಸಾವು;
ನಮ್ಮಗಳ ಕಥೆ ಮುಗಿಸೇಬಿಟ್ಟೆವೆಂಬ
ನಿಮ್ಮ ನಿರಾಳದ ನಿಟ್ಟುಸಿರು
ಮುಗಿವ ಮುನ್ನವೇ
ಆಗಿಯೇ ಬಿಡುತ್ತದೆ ಮತ್ತೆ
ನಮ್ಮ ಪುನರವತಾರ!
(ಮನುಷ್ಯರು)
        ಕವಿ ಎಲ್.ಸಿ.ರಾಜು ಅವರಮೃಗಾವತಾರಿಸಂಕಲನದುದ್ದಕ್ಕೂ ಸಾಲುಸಾಲಿಗೆ ಸುಳಿಯುವ ಮಹಾಪ್ರಶ್ನೆಮನುಷ್ಯ. ಬರಹದ ಆರಂಭದಲ್ಲಿ ಮಹಾಭಾರತ ಮುಂದಿಟ್ಟುಕೊಂಡು ವ್ಯಾಸ ಹೇಳಿದಎಂಟನೇ ಅವತಾರ ಇಲ್ಲಿಗೆ ಮುಗಿಯಿತುಎಂಬ ವಾಕ್ಯವನ್ನು ಚರ್ಚಿಸುವುದಾದರೆ, ಭಿನ್ನ-ಭಿನ್ನ ಕಾಲ-ದೇಶ-ಸಮಯಗಳಲ್ಲಿ ಹಲವು ಅವತಾರಗಳನ್ನು ಮುಗಿಸುತ್ತ ಬಂದ ಮನುಷ್ಯ ಈಗ ಪರಿಷ್ಕರಣೆಯ ಯಾವ ಸ್ಥಿತಿಯಲ್ಲಿದ್ದಾನೆ? ಏನು ಬದಲಾಗಿದ್ದಾನೆ? ಸಾಹಿತ್ಯ, ಧರ್ಮ ಹಾಗೂ ಲೋಕ ವಿಸ್ತಾರದ ಹಲವು ದಾಖಲೆಗಳಲ್ಲಿ ಸಿಗುವ ಊಧ್ರ್ವಮುಖಿ ಮನುಷ್ಯನಿಗೂ, ನಿತ್ಯ ನಾವು ಅನುಭವಿಸುವ ಅಧೋಮುಖಿ ಮನುಷ್ಯನಿಗೂ ಇಷ್ಟೊಂದು ವ್ಯತ್ಯಾಸಗಳೇಕೆ? ಸಮಾಜಮೌಢ್ಯ ಹೆಪ್ಪುಗಟ್ಟಿದ ಮಂಡೆಗಳ ಬಂಡೆಯೇಕೆ? ಹೆಣ್ಣೇಕೆ-ಗಂಡೇಕೆ? ಹೆಣ್ಣು ಕಾರಣಮೃದು ಮಾಂಸ ಭಕ್ಷಣೆಗೆ ನಾಯಿ-ನರಿಗಳಹಿಂಡೇಕೆ?
      ಬಹುತೇಕ ಮೌನವೇ ರಾಜು ಅವರ ಭಾಷೆ ಎಂದುಕೊಂಡಿದ್ದ ನನಗೆ ಅವರ ಪದ್ಯಗಳು ಅವರೊಳಗಿನ ಅಗ್ನಿಪರ್ವತದ ದರ್ಶನ ಮಾಡಿಸಿವೆ. ‘ಚಿಮಣಿ ದೀಪದ ಮಸುಕು ಬೆಳಕಿನಮಾತನಾಡುವ ಅವರೊಂದು ಹಿಲಾಲು. ‘ಬಾಳ ಹಾದಿಯಿದು ಕಾಡು-ಮಲೆಗಳ ಜಾಡು, ಮುಳ್ಳು ಹೊದರಿನ ಬೀಡುಎಂದು ಹಾಡುವ ರಾಜು ಅವರಮನುಷ್ಯಗೀತೆಒಂದು ಮರುಚಿಂತನೆ. ಕಂಬಳಿ ಹುಳದಲ್ಲಿ ಅಪ್ಪನನ್ನು, ಅಪ್ಪನಲ್ಲಿ ಸಂಕುಲದ ಪಲಕುಗಳನ್ನು ಕಾಣುವ ರಾಜು ತಮ್ಮ ಸರಳತೆಯಿಂದಾಗಿಯೆ ಸಂಚಲನವನ್ನು ಉಂಟುಮಾಡುತ್ತಾರೆ, ಅಕ್ಷರ ಅಹಂಕಾರದ ಅವಿವೇಕಿಗಳ ಕಂಡು ಮರುಕಪಡುತ್ತಾರೆ. ಒಟ್ಟಾರೆ ಎಲ್.ಸಿ.ರಾಜು ಅವರಮೃಗಾವತಾರಿ, the collection is a tissue of quotations drawn from the innumerable centers of culture.
       ಕಾವ್ಯ ಪ್ರಸವ ಕುರಿತಾಗಿಯೆ ರಾಜು ಅವರ ಎರಡು ಕವಿತೆಗಳು ಸಂಕಲನದಲ್ಲಿವೆ. where-or-when does a poem begin? Does it begin as the poet puts his first mark on a piece of paper or keys in the first word on a computer? Does it begin with the first idea about a poem in the childhood of the poet? Or does the text only begin as the reader picks up the collection? Does the poem begin with its title or with the first word of the so-called ‘body’ of the text? ಎಲ್ಲ ಪ್ರಶ್ನೆಗಳಿಗೆ ಕವಿ ರಾಜು ನೀಡುವ ಉತ್ತರ ಅದ್ಭುತ. ಇದನ್ನು ನೀವು ಗಮನಿಸಬೇಕು.
ಎನಿತು ದಿನದ ಬಯಕೆಯೋ
ಫಲಿತ ಭ್ರೂಣವಾಗಿ
ಎದೆಬಸಿರ ಬಗೆದು
ಹೊರಗೆ ಉಸಿರಾಡುತ್ತದೆ!
ಮನದ ತುಂಬಾ
ರಕ್ತ - ರೇತಸ್ಸಿನ ರಣರಾಡಿ;
ನೋವು ನಿರಾಳವಾದ ಗಳಿಗೆಯಲ್ಲೇ
ಕಿಲಕಿಲನೆ ನಗುತ್ತದೆ
ನಮ್ಮದೇ
ಇನ್ನೊಂದು ಜೀವನಾಡಿ
(ಕಾವ್ಯ ಪ್ರಸವ)
ಕಾವ್ಯವನ್ನು ನಮ್ಮದೇ ಇನ್ನೊಂದುಜೀವನಾಡಿಎಂದು ವ್ಯಾಖ್ಯಾನಿಸಿದ ಪ್ರೀತಿಯ ಕವಿ ನಮ್ಮ ಎಲ್.ಸಿ.ರಾಜು.
       ‘ಅಸುರ ಸಂಹಾರ, ಬೆಳಕಿನ ಹಬ್ಬ, ಕ್ರಿಟಿಕ ಮಹಾಶಯರು, ನಿರ್ಭಾವ ಚಿತ್ರ, ಅಕಾಲಿಕ, ಜಾತೀಯತೆ ಇನ್ನಿಲ್ಲ, ಜಗದೆದೆಯ ಹೊಲದಲ್ಲಿ, ನಮ್ಮೊಳಗಿನ ನಾನುಗಳಂಥ ರಚನೆಗಳೊಂದಿಗೆಕಂಬಾಲಪಲ್ಲಿ ದುರಂತ, ಮರಗಳ ಮಾತೆ, ದಾಸುವಿನ ದುರಂತ, ಗಂಗವ್ವನಿಗೆಗಳಂಥ ಕಥನ ಕವನಗಳು ಓದನ್ನು ಸೊಗಸಾಗಿಸುತ್ತವೆ; ಸಮಾಜಕ್ಕೆ, ನಮ್ಮ ವಾಸ್ತವಕ್ಕೆ ಕನ್ನಡಿ ಹಿಡಿಯುವುದರೊಂದಿಗೆ ನಮ್ಮ ಅಂತಃಚಕ್ಷುಗಳನ್ನು ತೆರೆಯಿಸುತ್ತವೆ. ಸಂಕಲನದನಿಂತ ನದಿಎಂಬ ಕವನ ನನ್ನನ್ನು ತುಂಬಾ ಕಾಡಿದೆ. ಅದರ ಕೆಲವು ಸಾಲುಗಳು ಹೀಗೆ
ನನ್ನೂರ ನದಿಯಿವಳು ....... ಅರ್ಕಾವತಿ,
ನೆರೆಯ ಹಿರಿಯ ಊರಲಿ
ಇವಳಿಗೊಬ್ಬಳು ಗೆಳತಿ ವೃಷಭಾವತಿ!
ಅಂದದಲಿ ಚಂದದಲಿ, ರೂಪ ಸಾದೃಶ್ಯದಲಿ
ಅವಳಿಗಿವಳೇ ಸಾಟಿ, ಇವಳವಳ ಸವತಿ!

ಇವರೆಂದಿಗೂ ಹೀಗೇ .......
ಅಜ್ಞಾನದ ಅವಿವೇಕದ ಲಾಳದ ಪೊದೆಯ ಕೆಳಗೆ
ಕೊಳೆತು ನಿಂತ ನನ್ನೂರ ನದಿಯ ಹಾಗೆ
(ನಿಂತ ನದಿ)
     ನಮ್ಮ ಸುತ್ತುವ ನಿತ್ಯದ ನದಿಯಂಥ ಭಾಷೆಯಲ್ಲಿಯೇ ನಮ್ಮ ಸಮಾಜದ ಸ್ಥಿತಿ-ಗತಿಗಳ ಹೇಳುವ ರಾಜು ಕಾರಣಕ್ಕೆ ಪ್ರೀತಿಯ ಹಾಗೂ ಸಹಜ ಕವಿಯಾಗುತ್ತಾರೆ. ನಿಂತ ನದಿ, ಗತಿಶೀಲತೆಯನ್ನು ಕಳೆದುಕೊಂಡ ಸಮಾಜ, ಸೃಜನಶೀಲತೆ ಇಲ್ಲದ ಬದುಕು ಎಲ್ಲ ಒಂದೇ ಸ್ತರದವು ಎನ್ನುವ ಅವರ ಪ್ರತಿಪಾದನೆ ಒಪ್ಪಬೇಕಾದುದೆ.
   ಸಮಾಜವನ್ನು, ಮನುಷ್ಯನ ಆಂತರ್ಯವನ್ನು ಕುರಿತು ಸಂಕಲನದುದ್ದಕ್ಕೂ ತಾತ್ವಿಕ ಪ್ರಶ್ನೆಗಳನ್ನೆತ್ತುವ ರಾಜು ಸಾಹಿತ್ಯ ಹಾಗೂ ಅದರ ಸ್ವಜನ ಪಕ್ಷಪಾತ, ನಿರ್ಲಜ್ಜತೆ, ಪ್ರಚಾರ ವ್ಯಸನ, ಶಬ್ದ ವ್ಯಭಿಚಾರಗಳನ್ನು ಕುರಿತೂ ಇಲ್ಲಿ ಬರೆಯುತ್ತಾರೆ. ಅವರಕ್ರಿಟಿಕ ಮಹಾಶಯರುಓದಲೇಬೇಕಾದ ಕವಿತೆ. ಅಂತ್ಯದಲ್ಲಿ ಬರೆಯುತ್ತಾರೆ:
ಸುಟ್ಟ ಕ್ರಿಟಿಕ್ಕುಗಳ
ಬೂದಿ ಗೊಬ್ಬರದಲ್ಲಿ
ಹಾದಿ ಮಗ್ಗುಲ
ಬೇಲಿಯ ಹೂಗಳರಳಿ
ಗಂಧ ಘಮಲು ಚೆಲ್ಲಲಿ
(ಕ್ರಿಟಿಕ ಮಹಾಶಯರು)
        ಅವತಾರದ ಪ್ರಶ್ನೆಯಿಂದ ಆರಂಭವಾಗುವ ರಾಜು ಅವರಮೃಗಾವತಾರಿಅಂತಿಮವಾಗಿ ಪೀನಿಕ್ಸ್ ಸಾಂಕೇತಿಕತೆಯನ್ನು ಮುಂದಿಡುತ್ತ ನಾಳೆಗಳನ್ನು ನಿರುಕಿಸುತ್ತ ಧ್ಯಾನಸ್ಥವಾಗುತ್ತದೆ. ನಿರೀಕ್ಷೆಗಳಿಲ್ಲದ ದಾರಿ ನೀರಸ, ಸಮಾಜ ಶುಷ್ಕ, ಕಾವ್ಯ ಬರಡು, ಸಂಸಾರ ನಿಸ್ಸಾರ, ಧರ್ಮ ಟಗರ ಹೋರಾಟ. ನಿರೀಕ್ಷೆಗಳೇ ಮುನ್ನಡೆಸುವ ನಿಧಿಗಳು.
     
ಪ್ರಿಯ ಗೆಳೆಯ ರಾಜು ಅವರ ಕಾವ್ಯದ ಓದು ನನಗೆ ನನ್ನ ಪ್ರೀತಿಯ ಕವಿ ಸಾಹೀರ್ ಲಾಧಿಯಾನ್ವಿಯರಾತ್ ಕಿ ರಾಹಿ ತಕ್ ಮತ್ ಜಾನಾ, ಸುಬಹ ಕಿ ಮಂಜಿಲ್ ದೂರ್ ನಹಿಎನ್ನುವ ಸಾಲುಗಳನ್ನು ನೆನಪಿಸಿದೆ. ಕಾವ್ಯ ಎನ್ನುವುದು ನಿತ್ಯ ಹೊಸ ಬೆಳಕಿನ ನಿರೀಕ್ಷೆಯಲ್ಲದೆ ಮತ್ತೇನಾಗಿರಲು ಸಾಧ್ಯ? ಬೆಳಗಿಗೆ ಹಸಿಯದ ಕವಿ ಹಾಗೂ ಕಾವ್ಯಕ್ಕೆ ಯಾವ ಹೊಸ ಅರ್ಥ ಸಾಧ್ಯ ಹೇಳಿ? ರಾಜು ಕಟ್ಟಬೇಕಾದ ಕವಿತೆ ಇನ್ನೂ ಬಹಳ ಇವೆ. ಅಂಥ ಕಾವ್ಯದ ಮಹಾ ಬೆಳಗಿನ ಕವಿಗಾಗಿ ನಾನು ಕಾಯುತ್ತಿರುತ್ತೇನೆ.

-        

No comments:

Post a Comment