ಕಾವ್ಯ : ನಮ್ಮ ಪ್ರೇಮದ ಮಿಲನ ತೀರ್ಥ
ಕವಿ ಸುಬ್ಬಣ್ಣ ಎಕ್ಕುಂಡಿಯವರ ಒಂದು ಕಥನ-ಕವನ, ‘ಕಣಗಿಲದ ಗಿಡದಲ್ಲಿ ಹುಡುಗ’. ನಡು ಮಧ್ಯಾನ್ಹ ಶಾಲೆ ತಪ್ಪಿಸಿ, ಅಲ್ಲಿಯೇ ಹಿಂದುಗಡೆ ಇರುವ ಕಣಗಿಲದ ಗಿಡದಲ್ಲಿ ತನ್ನ ಮನಸಿಚ್ಛೆ ಕುಳಿತುಕೊಂಡು, ಹಾಡಿಕೊಂಡ ಸ್ವಾತಂತ್ರ್ಯದ ಹಾಡದು. ನಮ್ಮ ಶೈಕ್ಷಣಿಕ ವ್ಯವಸ್ಥೆಯ ಮಿತಿ, ಕಲಿಕೆಯ ಸೀಮೆ-ಸೀಳುವಿಕೆಗಳನ್ನು ಟೀಕಿಸುವ, ವ್ಯಂಗ್ಯವಾಡಿ ನಗುವ ಒಂದು ಪದ್ಯವದು. ಕವಿ ಬರೆಯುತ್ತಾರೆ-
ಎಷ್ಟೊಂದು ಕಣಗಿಲದ ಹೂವು ಅರಳಿವೆ ಇಲ್ಲಿ !
ಉಳುವ ಹೊಲದಲ್ಲಿರುವುದೆಂಥ ನಲಿವು !
ಅಲ್ಲಲ್ಲಿ ತೇಲುತಿವೆ ನೀಲ ಮೋಡದ ತುಂಡು
ಎಷ್ಟೊಂದು ವಿಸ್ತಾರವಿಹುದು ನೆಲವು
ಇಲ್ಲಿ ಪಾಠಗಳಿಲ್ಲ, ಇಲ್ಲಿ ಸಂಧಿ ಸಮಾಸ
ಇಲ್ಲ ವೆನಿಜುಲಾದ ರೇವು-ರೈಲು
ಇಲ್ಲಿ ಸುಳಿಯವು ಕೋನ-ತ್ರಿಜ್ಯಗಳ ಹಾವಳಿಯು
ಇಲ್ಲ ತುಕಡಿಗಳ ದೊಡ್ಡ ಬೈಲು
ಬಣ್ಣ-ಬಣ್ಣದ ನೀರು ಸೀಸೆಯಲಿ ಸುರಿದಂತೆ
ಗಂಟೆ ಹೊಡೆದಾಗೊಂದು ವಿಷಯ ಸುರಿದು
ಒಮ್ಮೆ ಆಟವನಾಡಿ ಇರುಳು ನಿದ್ದೆಯ ಮಾಡಿ
ಬಂದ ಮರುದಿವಸವೇ ಸೀಸೆ ಬರಿದು
ಪಾಠಗಳು ನಡೆದಲ್ಲಿ ಮೋಡ ತೇಲುವುದಿಲ್ಲ
ಗಾಳಿ ಬೀಸುವುದಿಲ್ಲ, ಎಲೆಗಳಿಲ್ಲ
ಯಾವ ರಾಸಾಯನಿಕ ಕ್ರಿಯೆಗೆ ಒಳಪಡಿಸಿಯೂ
ಮನದಲ್ಲಿ ಸಂತಸದ ಅಲೆಗಳಿಲ್ಲ
ಪದ್ಯಗಳ ಹಾಡಿಯೂ ಹಕ್ಕಿಗಳ ಹಾಗಲ್ಲ
ಹುಲ್ಲಿನಂತಾದರೂ ಹಸಿರು ಇಲ್ಲ
ದೃವದಿಂದ ದೃವಕೆ ನಾವಲೆದರೂ ನಮಗಿಲ್ಲಿ
ಆಡಿಸಲು ಒಂದಿಷ್ಟು ಉಸಿರು ಇಲ್ಲ
1915ರ ಸುಮಾರಿಗೆ ಬರೆದ “ಮಾನವ ಸತ್ಯ”ಎಂಬ ಲೇಖನದಲ್ಲಿ ಠ್ಯಾಗೋರ್ ಇದನ್ನೇ ಹೇಳುತ್ತಾರೆ-“ನಾನು ಶಾಲೆ ತಪ್ಪಿಸಿಕೊಂಡಿದ್ದ ಹುಡುಗ. ಎಲ್ಲಿ ಗೆರೆ ಎಳೆದಿರುವುದೋ ಅಲ್ಲಿ ನಾನು ಹೊಂದಿಕೊಳ್ಳಲಾರದವನು. ಯಾವ ಅಭ್ಯಾಸವನ್ನು ಹೊರಗಿನಿಂದ ಹೇರಲಾಗುತ್ತಿತ್ತೋ ಅದನ್ನು ಅಂಗೀಕರಿಸಲಾರದವನು ನಾನು”ಈ ಹೊರ ಹೇರಿಕೆಯಿಂದ ಮುಕ್ತವಾದ ನವ ಜನಾಂಗವನ್ನು ನಿರ್ಮಿಸಬೇಕು ಎನ್ನುವ ಮಹದುದ್ದೇಶದಿಂದಲೇ ಮುಂದೆ ಠ್ಯಾಗೋರರು ’ಶಾಂತಿ ನಿಕೇತನ’ವನ್ನು ಸ್ಥಾಪಿಸಿದ್ದು.
ಸಂಕಟವಿಲ್ಲದೇ ಸಾಹಿತ್ಯವಿಲ್ಲ:
ಸಂಕಟವಿಲ್ಲದಿರುವಲ್ಲಿ ಸಾಹಿತ್ಯವಿಲ್ಲ, ಜೀವನ ಸಮೃದ್ಧಿಯೇ ಸಾಹಿತ್ಯದ ಗುರಿಯಾಗಿದ್ದರೂ ಕೂಡಾ ಅದು ಅರಳಬೇಕಾದುದು ನಮ್ಮ ವ್ಯಕ್ತಿಗತ ಹಾಗೂ ಸಾಮಾಜಿಕ ಸಂಕಟದಲ್ಲಿ. ಇಂದು ಚಡಚಣದ ಶ್ರೀ ಸಂಗಮೇಶ್ವರರ ಸಾನಿಧ್ಯದಲ್ಲಿ ಕರ್ನಾಟಕ ರಾಜ್ಯ ಯುವ ಬರಹಗಾರರ ಒಕ್ಕೂಟ ಹಮ್ಮಿಕೊಂಡ ರಾಜ್ಯಮಟ್ಟದ 3ನೇ ಕವಿ ಸಮ್ಮೇಳನದ ಸರ್ವಾಧ್ಯಕ್ಷನಾಗಿ ನಾನು ಕಾಣುತ್ತಿರುವ, ನಮ್ಮ ಕನ್ನಡ ಸಮಾಜ ಎದುರಿಸುತ್ತಿರುವ ಬಹು ದೊಡ್ಡ ಸಂಕಟ ನಮ್ಮ ಕನ್ನಡ ಶಾಲೆಗಳಿಗೆ ಸಂಬಂಧಪಟ್ಟದ್ದು. ನಮ್ಮ ಸಾರ್ವಜನಿಕ ಶಿಕ್ಷಣಕ್ಕೆ ಸಂಬಂಧಪಟ್ಟದ್ದು. ನಮ್ಮೆಲ್ಲರ ಮಾತೃಭಾಷೆಯಾದ ಕನ್ನಡಕ್ಕೆ ಸಂಬಂಧಪಟ್ಟದ್ದು. ಇಷ್ಟರಲ್ಲಿಯೇ ಕರ್ನಾಟಕದಲ್ಲಿ 23,847 ಕನ್ನಡ ಮಾಧ್ಯಮ ಶಾಲೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿವೆ. 25 ವಿಧ್ಯಾರ್ಥಿಗಳಿಗಿಂತಲೂ ಕಡಿಮೆ ವಿದ್ಯಾರ್ಥಿಗಳಿಗಿಂತಲೂ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆಗಳು ಸಮೀಪದ 8590 ಶಾಲೆಗಳಲ್ಲಿ ವಿಲೀನವಾಗಲಿವೆ. ಈ ವರ್ಷ ಅಂದರೆ 2017-18 ರ ಸಾಲಿನಲ್ಲಿ 18 ಶಾಲೆಗಳು ಮುಚ್ಚಿಹೋಗಿವೆ. “ಕನ್ನಡವೇ ಸತ್ಯ, ಕನ್ನಡವೇ ನಿತ್ಯ”ಎಂದು ಹಾಡಿದ ನಮ್ಮ ಕನ್ನಡ ಭಾಷಾ ಪರಂಪರೆಯ ನಾಡಿನಲ್ಲಿ ಪ್ರಾಥಮಿಕ ಹಂತದಲ್ಲಿಯೇ ಇಂಗ್ಲೀಷ್ ಮಾಧ್ಯಮದ ಶಾಲೆಗಳನ್ನಾರಂಭಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಇದು ಆಘಾತಕಾರಿ. ಕನ್ನಡ ಸಂಸ್ಕøತಿಗೆ ಕುಠಾರಪ್ರಾಯವಾದ ನಿರ್ಧಾರ. ಈಗ ಕನ್ನಡ ಸಂವೇದನೆ, ಕಾವ್ಯ, ಕ್ರಿಯಾಸಕ್ತಿ, ಅಸ್ಮಿತೆ ಜಾಗೃತಿಯಾಗಬೇಕಾದ ಸಂದರ್ಭ. ಇಲ್ಲಿ ಸೇರಿರುವ ನಮ್ಮೆಲ್ಲ ಯುವ ಬರಹಗಾರರು ಕನ್ನಡ ಡಿಂಡಿಮವನ್ನು ಬಾರಿಸಿ, ಹೃದಯಶಿವನನ್ನು ಎಚ್ಚರಗೊಳಿಸಿಕೊಳ್ಳಬೇಕಾದ ಕಾಲ.
ಸ್ವಾತಂತ್ರ್ಯಪೂರ್ವದಿಂದ ಸ್ವಾತಂತ್ರೋತ್ತರದ ಈ ಹಂತದವರೆಗೂ ಕವಿ-ಕಾವ್ಯಗಳೆರಡೂ ಒಂದಿಲ್ಲ ಒಂದು ಮಾರಕ ಶಕ್ತಿ ವಿರುದ್ಧ ಹೋರಾಡುತ್ತಲೇ ಬಂದಿವೆ. ಫ.ಗು.ಹಳಕಟ್ಟಿ, ಡಪ್ಯೂಟಿ.ಚೆನ್ನಬಸಪ್ಪ, ಗಂಗಾಧರ ತುರಮುರಿ, ವೆಂಕಟ ರಂಗೋ ಕಟ್ಟಿ, ರಾಮ ಜಾಧವ್, ಬೇಂದ್ರೆ, ಕುವೆಂಪು, ಮಧುರಚೆನ್ನ, ಸಿಂಪಿ ಲಿಂಗಣ್ಣರಿಂದ ಆದಿಯಾಗಿ ಸಧ್ಯದ ನಿಮ್ಮವರೆಗೂ ಕವಿ-ಕಾವ್ಯದ ಕನ್ನಡ ಭಾಷೆಯನ್ನು ಕಟ್ಟುವತ್ತ ಕಹಳೆಯೂದುತ್ತ ಬಂದಿದೆ.
ಭಾಷಾ ರಾಜಕಾರಣ:
ಭಾಷೆ ಎನ್ನುವುದು ಅಕ್ಷರ ವ್ಯಾಕರಣಗಳ ಸಂಯೋಜನೆ ಅಲ್ಲ ಗೆಳೆಯೆರೆ. ಅದು ನಮ್ಮ ಉಸಿರು, ವ್ಯವಹಾರ ಹಾಗೂ ನಮ್ಮ ಬದುಕು. ಭಾಷೆಗಾಗಿ ಬಾಂಗ್ಲಾದೇಶ ಸೃಷ್ಠಿಯಾಗಿದೆ. ಭಾರತದ ಗಣತಂತ್ರ ವ್ಯವಸ್ಥೆಯ ಮೂಲ ಬುನಾದಿಯೇ ಭಾಷೆ. ನಮ್ಮವುಗಳೆಲ್ಲ ಭಾಷಾವಾರು ಪ್ರಾಂತ್ಯಗಳು. ಭಾಷೆ ಎನ್ನುವುದು ನಮ್ಮ ಗತ-ವರ್ತಮಾನ ಹಾಗೂ ಭವಿಷ್ಯ. ಆದರೆ ಇಂದು ವರ್ತಮಾನದಲ್ಲಿ ಕುಡಿಯುವ ನೀರು ದೊರಕದ ಈ ನೆಲದಲ್ಲಿ ಹೊಲಕ್ಕೊಂದು ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಹುಟ್ಟಿಸಿಕೊಂಡು, ಶಿಕ್ಷಣ ವ್ಯಾಪಾರದ ದೊಡ್ಡ ಜಾಲವನ್ನೇ ವಿಸ್ತರಿಸಿದ್ದೇವೆ. ಶಿಸ್ತು ಹಾಗೂ ಏಕರೂಪತೆಯೆ ಅಸ್ತ್ರಗಳಿಂದ ಮಕ್ಕಳ ಸಹಜ ಸ್ವಾತಂತ್ರ್ಯ ಆಯ್ಕೆಯ ಹಕ್ಕನ್ನು ಕಸಿದುಕೊಂಡಿದ್ದೇವೆ. ಒಂದು ಇಂಗ್ಲೀಷ್ ವಾಕ್ಯವನ್ನೇ ಸರಿಯಾಗಿ ಕಲಿಸಲಾಗದ, ಕೇವಲ ಒಂದು ವಿಷಯವಾಗಿ ಇಂಗ್ಲೀಷನ್ನು ಕಲಿಸಲು ಕಳೆದ ಎರಡುವರೆ, ಮೂರು ದಶಕಗಳಿಂದ ಹೋರಾಡುತ್ತಿರುವ ನಾವು ಇಂದು ಇಡೀ ಪ್ರಾಥಮಿಕ ಶಿಕ್ಷಣವನ್ನು ಇಂಗ್ಲೀಷ್ ಮಾಧ್ಯಮದಲ್ಲಿ ನೀಡಲು ಮುಂದಾಗಿರುವುದು ಎಷ್ಟೊಂದು ಹಾಸ್ಯಾಸ್ಪದವಲ್ಲವೇ?
ಭಾಷಾ ರಾಜಕಾರಣವನ್ನು ಕುರಿತು ಸ್ವಾಮಿ ವಿವೇಕಾನಂದರು ಬರೆಯುತ್ತಾರೆ, “ಸಂಜ್ಞೆ ಅಥವಾ ಸಂಕೇತಿ ಶಾಸ್ತ್ರವೂ ಕೂಡಾ ಕಪ್ಪುದಾಗಿರುವುದೆಲ್ಲವೂ ಅಸಹ್ಯವಾಗಿರುತ್ತದೆ, ಮತ್ತು ಕಳಪೆ ಮಟ್ಟದ್ದಾಗಿರುತ್ತದೆ ಎನ್ನುವ ದುರಾಲೋಚನೆಗಳನ್ನೇ ಸ್ಥಾಪಿಸಿದೆ. Rosetts Thesaurus ನಲ್ಲಿಯೂ ಕೂಡಾ ಕಪ್ಪು ಎನ್ನುವ ಪದಕ್ಕೆ ಸರಿಸುಮಾರು ಒಂದುನೂರಾ ಇಪ್ಪತ್ತು ಸಮಾನಾರ್ಥಗಳ ಪದಗಳನ್ನು ಸೂಚಿಸಲಾಗಿದ್ದು, ಅದರಲ್ಲಿ ಕನಿಷ್ಠ 60% ಪದಗಳು ಅಪರಾಧಿ ಮನೋಭಾವವನ್ನು ಬೆಳೆಸುವವೇ ಆಗಿವೆ. ಕಪ್ಪು ಎಂದರೆ ಭೂತ, ದೆವ್ವ, ರಾಕ್ಷಸ, ಸೂತಕ, ಅಜ್ಞಾನ ಎನ್ನುವ ಅರ್ಥಗಳನ್ನೇ ತೋರಿಸಲಾಗಿದೆ. ಬಿಳುಪು ಎನ್ನವುದಕ್ಕೆ ಸುಮಾರು ನೂರಾ ಮೂವತ್ನಾಲ್ಕು ಸಮಾನರ್ಥಕ ಪದಗಳನ್ನು ಸೂಚಿಸಲಾಗಿದ್ದು ಅವೆಲ್ಲವೂ ಮೂಲ ಪದವನ್ನು ಹೊಗಳಿಕೆಯ ಶಿಖರಕ್ಕೆ ಏರಿಸುವವೇ ಆಗಿವೆ. ಉದಾಹರಣೆಗೆ ಬಿಳಿ ಎಂದರೆ ಪಾವಿತ್ರ್ಯತೆ, ಸ್ವಚ್ಛತೆ, ಚಾರಿತ್ರ್ಯ, ಮುಗ್ಧತೆ, ಬೆಳಕು, ಜ್ಞಾನ ಎಂದೂ ಅರ್ಥಗಳನ್ನು ಹೊರಡಿಸಲಾಗಿದೆ. A white lie
is better than a black lie ಗಳಂಥ ನುಡಿಗಟ್ಟುಗಳನ್ನು ಹುಟ್ಟು ಹಾಕಲಾಗಿದೆ. ಕುಟುಂಬದ ಅತ್ಯಂತ ಕೆಳಸ್ತರದ ಸದಸ್ಯನನ್ನು “Black
Sheep”ಎಂದು ಸಂಭೋದಿಸಲಾಗುತ್ತದೆ. ಅಂತೆಯೇ Ossaie Davis ಹೇಳುತ್ತಾನೆ - ನಿಗ್ರೋ ಮಗುವಿಗೆ ಅರವತ್ತು ರೀತಿಯಲ್ಲಿ ತನ್ನ ಆತ್ಮಸ್ಥೈರ್ಯವನ್ನೇ ಕೊಂದುಕೊಳ್ಳಲು ಕಲಿಸುವ ಇಂಗ್ಲಿಷ್ ಭಾಷೆಯನ್ನು, ಮತ್ತು ಅದನ್ನು ಕಲಿಸುವ ಇಂಗ್ಲಿಷ್ ಶಿಕ್ಷಕರನ್ನು ಇಂದು ಪುನರ್ ಪರಿಶೀಲಿಸಬೇಕಾಗಿದೆ. 134 ರೀತಿಯಿಂದ ತನ್ನನ್ನೇ ತಾನು ವೈಭವೀಕರಿಸಿಕೊಂಡು ಅಹಂನ್ನು ಬೆಳೆಸಿಕೊಳ್ಳಬಹುದಾದ ಬಿಳಿಯರ ಮಗುವನ್ನು, ಸದಾ ಕೀಳರಮೆಯಿಂದ ನರಳುವ ಕರಿಯರ ಮಗುವನ್ನು ನಮ್ಮ ಶಿಕ್ಷಣ ವ್ಯವಸ್ಥೆ ಸಮಾನವಾಗಿ ನೋಡುವ ಮೌಲ್ಯಗಳನ್ನು ನಾವಿಂದು ಪ್ರಚಾರ ಮಾಡಬೇಕಿದೆ”.
ಇದು ನಮ್ಮ ಅಸ್ತಿತ್ವದ ಪ್ರಶ್ನೆ ಗೆಳೆಯರೆ, ಬರಹಗಾರರಾಗಿ ನಮ್ಮನ್ನೆಲ್ಲ ಕಾಡಬೇಕಾದ ಸಂಗತಿಯೂ ಕೂಡಾ. ಭಾಷೆಗಾಗಿ ತಾಯಿ ಹಾಗೂ ತಾಯ್ನೆಲಕ್ಕಾಗಿ ಬಡಿದಾಡಿದ ಕವಿ ಹಾಗೂ ಹೋರಾಟಗಾರರು ಈಗ ನಿರ್ವಿರ್ಯತೆಯಿಂದ ನರಳುತ್ತಿದ್ದಾರೆ. ಕನ್ನಡ ಭಾಷೆ ನಮ್ಮ ಹಕ್ಕು. ಅದು ನನ್ನ ಕಾವ್ಯದ ದಿಕ್ಕು-ದೆಸೆಗಳನ್ನು ನಿರ್ಧರಿಸುವ ಶಕ್ತಿ-ಚೇತನ. ಕನ್ನಡದ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಿದೆ. ನಮ್ಮ ಕಾವ್ಯದ ಅಂತರ್ ಗಂಗೆಯಾದ ಕನ್ನಡದ ದುರ್ಗತಿಯನ್ನು ನೋಡುತ್ತ ಸಹಾಯವಿಲ್ಲದ ಈ ಕತ್ತಲಲ್ಲಿ ಇನ್ನೆಷ್ಟು ಹೀಗೆ ಇರುವುದು ಗೆಳೆಯರೆ? ಈ ಸಂದರ್ಭದಲ್ಲಿ ಕವಿ ಸಾಹಿರ್ ಲುಧಿಯಾನ್ವಿಯ ಪದ್ಯ ಒಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತಿದೆ-
ಸದಿಯೋಂ ತಕ್ ಚುಪ್ ರಹನೆವಾಲೆ
ಅಬ್ ಅಪನಾ ಹಕ್ ಲೇಕೆ ರಹೆಂಗೆ
ಜೋ ಕರನಾ ಹೈ ಖುಲ್ಲಕೆ ಕರೆಂಗೆ
ಜೋ ಕಹನಾ ಹೈ ಸಾಫ್ ಕಹೆಂಗೆ
ಜಿತೆ ಜಿ ಗುಟ್ಗುಟಕೆ ಮರನಾ
ಇಸ್ ಜುಗ್ ಕಾ ದಸ್ತೂರ ನಹಿಂ
ರಹ ನಹಿ ಸಕತಾ ಇಸ್ ದುನಿಯಾ ಮೆ
ಜೋ ಸಬಕೊ ಮಂಜೂರ್ ನಹಿ
ಒಪ್ಪಿಕೊಂಡ ಶಿಕ್ಷಣವಲ್ಲ, ಒಪ್ಪಿಸಿದ ಶಿಕ್ಷಣ
:
ಹೌದು ಬಂಧುಗಳೇ, ಇಂದು ನಾವು ಒಪ್ಪಿಕೊಂಡ ಶಿಕ್ಷಣವನ್ನು ಲಾರ್ಡ್ ಮೆಕಾಲೆ ಭಾರತೀಯರನ್ನು ಆಡಳಿತಾತ್ಮಕವಾಗಿ ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಲು ಅಂದು ಬಿತ್ತಿದ ಬೀಜ, ಇಂದು ವಿಷವೃಕ್ಷವಾಗಿ ಬೆಳೆದು ನಮ್ಮ ಅಸ್ತಿತ್ವವನ್ನೇ ಬಲಿ ತೆಗೆದುಕೊಳ್ಳುತ್ತಿದೆ. ಇದು ನಾವು ಒಪ್ಪಿಕೊಂಡಿದ್ದಲ್ಲ. ಇದು ನಮ್ಮ ಮೇಲೆ ಹೇರಲ್ಪಟ್ಟದ್ದು. ಇದು ಸುಧಾರಣೆ ಎಂದು ಸುಳ್ಳಾಗಿ ನಮ್ಮನ್ನು ನಂಬಿಸಿದ್ದು. ಆತ ಆಡಿದ ಮಾತುಗಳನ್ನೊಮ್ಮೆ ಗಮನಿಸಿ-
"I have traveled across the length and breadth of India and
I have not seen one person who is a beggar, who is a thief. Such wealth I have
seen in this country, such high moral values, people of such caliber, that I do
not think we would ever conquer this country, unless we break the very backbone
of this nation, which is her spiritual and cultural heritage, and, therefore, I
propose that we replace her old and ancient education system, her culture, for
if the Indians think that all that is foreign and English is good and greater
than their own, they will lose their self-esteem, their native self-culture and
they will become what we want them, a truly dominated nation." (Lord
Macaulay said the following about India in 1835 in British Parliament.)
ಹಾಗಾದರೆ ಸಾಹಿತ್ಯ ಎನ್ನುವುದು ಏನು ಗೆಳೆಯರೆ? ಅದರ ಲೌಕಿಕ ಜವಾಬ್ದಾರಿ ಏನು? ಸಾಹಿತ್ಯದ ಗುರಿ ಸರ್ವರಿಗೂ ಒಪ್ಪಿತ ಸಮಾಜ ನಿರ್ಮಿಸುವುದೇ ಆಗಿದೆ. ಅದು ‘ಸರ್ವರಿಗೂ ಸಮಪಾಲು, ಸರ್ವರಿಗೆ ಸಮಬಾಳು’ ಎಂದು ಹೇಳುವುದೇ ಆಗಿದೆ. ನಾವು ಒಪ್ಪುವ ಸಮಾಜದಲ್ಲಿ ನಮ್ಮ ಭಾಷೆ ನಮ್ಮ ನೆಲ, ನಮ್ಮ ಸಂಸ್ಕøತಿಯೊಂದು ಇದ್ದೇ ಇರುತ್ತದೆ. ಅದನ್ನು ಬೋಧಿಸಲು ಶಿಕ್ಷಣ ಎಂಬ ಒಂದು ವ್ಯವಸ್ಥೆ ಇರುತ್ತದೆ.
ಸಾಹಿತ್ಯದ ಒಂದು ಉದ್ದೇಶ ಶಿಕ್ಷಣವಾದರೆ, ವರ್ಗಿಕರಣದ ಹಿನ್ನೆಲೆಯಲ್ಲಿ ಶಿಕ್ಷಣದ ಒಂದು ಭಾಗ ಸಾಹಿತ್ಯ. ಚಿಂತಕರು ಹೇಳುವಂತೆ ಪ್ರತಿ ಮನುಷ್ಯನಲ್ಲೂ ಎರಡು ದಿಕ್ಕುಗಳಿವೆ. ಒಂದು, ವ್ಯಕ್ತಿಯಲ್ಲಿಯೇ ಬದ್ಧವಾದುದು. ಮತ್ತೊಂದು ಸರ್ವವ್ಯಾಪಿಯಾದುದು. ಇವೆರಡೂ ದಿಕ್ಕುಗಳೂ ಮನುಷ್ಯನ ಅಸ್ತಿತ್ವಕ್ಕೆ ಅವಶ್ಯವಾದವುಗಳೇ ಎಂದು ತಿಳಿಸುವ, ತೆರೆದು ತೋರಿಸುವ ಮುಖ್ಯ ಮಾರ್ಗಗಳು ಶಿಕ್ಷಣ ಹಾಗೂ ಸಾಹಿತ್ಯ. ಎರಡೂ ನಮ್ಮ ಹೃದಯ ಸಂಸ್ಕಾರಕ್ಕೆ, ಮನೋವಿಕಾಸಕ್ಕೆ ತೆರೆದ, ಭಾವ ಸಮೃದ್ಧಿಗೆ ದಕ್ಕಿದ ದಾರಿಗಳು.
ಶಿಕ್ಷಣವನ್ನು ಪೊರೆಯುವ ಸಾಹಿತ್ಯ ಹಾಗೂ ಸಂಸ್ಕøತಿಗೆ ಇನ್ನೂ ಹೆಚ್ಚಿನ ಜವಾಬ್ದಾರಿಗಳಿವೆ. ಮಾನವನನ್ನು ಅಖಂಡವಾಗಿಸುವುದು ಅದರ ಗುರಿಯಾಗಬೇಕಿದೆ. ಕವಿ ಠ್ಯಾಗೋರರು ಹೇಳುತ್ತಾರೆ, “ ಈ ಜಗತ್ತು ಬರೀ ಒಂದು ಚಿತ್ತ ಚಾಂಚಲ್ಯದ ಫಲಶೃತಿಯಲ್ಲ, ಬದಲಾಗಿ ಈ ಪ್ರಪಂಚವೆಲ್ಲವೂ ನಾನೇ. ಇದು ನನ್ನದೇ ಎನ್ನುವುದನ್ನು ಮನವರಿಕೆ ಮಾಡಿಕೊಡುವುದೇ ಕವಿಗಳ ಜವಾಬ್ದಾರಿ ಹಾಗೂ ಕಾವ್ಯ ಸೃಷ್ಟಿಯ ಗುರಿ”ಎಂದು ಹೇಳಿದ್ದಾರೆ. ಅವರು ಬರೆದಿರುವಂತೆ, “ತತ್ವಜ್ಞಾನ ಹೇಳುವುದು ಒಂದು ಬಗೆಯ ಮಾತು, ವಿಜ್ಞಾನ ಹೇಳುವುದು ಮತ್ತೊಂದು ಬಗೆಯ ಮಾತು. ಆದರೆ ಕವಿ ಹೇಳುವ ಮಾತೆಂದರೆ ನನ್ನ ಹೃದಯದ ಮತ್ತು ಮನಸಿನ ತಂತಿಯ ಮೇಲೆ ವೈಣಿಕನು ವೀಣೆ ನುಡಿಸುತ್ತಿರುವನು ಎಂಬುದು. ಕಾವ್ಯದಿಂದ ವಿಶ್ವಸಂಗೀತ ಉದ್ಭವಿಸುತ್ತದೆ. ಇಲ್ಲದಿದ್ದರೆ ಯಾವ ಭಾಜನವೂ ಇರುತ್ತಿರಲಿಲ್ಲ. ಕಾವ್ಯವೆಂಬ ವೀಣೆಯ ತಂತಿ ಕೇವಲ ಒಂದಲ್ಲ, ಲಕ್ಷಗಟ್ಟಲೆ ತಂತಿಗಳು. ಈ ತಂತಿಗಳಿಂದ ಲಕ್ಷಗಟ್ಟಲೇ ಸ್ವರಗಳು ಹೊರಡುತ್ತವೆ. ಕಾವ್ಯದ ಸ್ವರಕ್ಕೆ ವಿರೋಧವಿಲ್ಲ. ಹೃದಯ ಮತ್ತು ಮನಸ್ಸುಗಳ ಈ ಕಾವ್ಯವೀಣೆ ಒಂದು ಜಡಯಂತ್ರವಲ್ಲ. ಅದು ನಮ್ಮೆಲ್ಲರ ಪ್ರಾಣ”.
ಕಾವ್ಯ ವೀಣೆಯ ಕೋಟಿ ಸ್ವರಗಳು:
ಈ ಕಾವ್ಯ ಸ್ವರ ನಿರಂತರ ಮುಂದೊರೆಯುತ್ತದೆ. ಇದರ ಸಪ್ತಕ ನಿರಂತರ ಬದಲಾಗುತ್ತಿರುತ್ತದೆ. ಹೊಸ ತಂತಿಗಳು ಹುಟ್ಟುತ್ತಿರುತ್ತವೆ. ಹೀಗಾಗಿ ಇದನ್ನು ಆಲಿಸಿದ, ಆರಾಧಿಸಿದ ಸೃಷ್ಟಿಯೂ ಸ್ಥಿರವಾಗಿರಲು ಸಾಧ್ಯವಿಲ್ಲ. ನಿಲ್ಲಲೂ ಸಾಧ್ಯವಿಲ್ಲ.
ಮಹಾರಸಿಕನಾದ ಕವಿ ಈ ಕಾವ್ಯ ವೀಣೆಯಿಂದ ನಿತ್ಯ ನೂತನವಾದ ನವರಸಗಳನ್ನು ನೂಲು ಮಾಡಿಕೊಳ್ಳುತ್ತಾನೆ. ಕಾವ್ಯ ದೀವಿಗೆಯ ಸುಖದುಃಖಗಳನ್ನು ಸಾರ್ಥಕ ಪಡೆಯಿಸಿಕೊಳ್ಳುತ್ತಾನೆ.
ಓರ್ವ ಕವಿಯಾಗಿ, ಕೇವಲ ಕವಿಯಾಗಿ ಠ್ಯಾಗೋರ ತನ್ನ ಬದುಕು ಏಕೆ ಧನ್ಯ ಎನ್ನುವುದನ್ನು ಹೀಗೆ ವಿವರಿಸುತ್ತಾರೆ, “ನಾನು ಧನ್ಯ, ಏಕೆಂದರೆ ನಾನು ವಾಸಿಸುತ್ತಿರುವುದು ಯಾವುದೋ ಹಾದಿಯ ಪ್ರವಾಸ ಮಂದಿರದಲ್ಲಿ ಅಲ್ಲ. ನನ್ನ ನಿರ್ದಿಷ್ಟವಾದ ನೆಲೆಯಿರುವುದು ರಾಜ ಪ್ರಸಾದದ ಕೋಣೆಯೊಂದರಲ್ಲೂ ಅಲ್ಲ. ಬದಲಾಗಿ, ನನ್ನನ್ನು ಅರ್ಪಿಸಿಕೊಂಡು, ನನ್ನ ಮೂಲಕವೇ ಯಾವುದರ ಸೃಷ್ಟಿಯಾಯಿತೋ ಅಂಥ ಮಹಾನ್ ಜಗತ್ತಿನಲ್ಲಿ ನನ್ನ ನೆಲೆ ಇದೆ. ಕವಿಯಾದ ನನಗೆ ಈ ಜಗತ್ತು ಕೇವಲ ಪಂಚಭೂತಗಳ ಆಥವಾ ಅರವತ್ನಾಲ್ಕು ಭೂತಗಳ ಬೀಡಲ್ಲ. ಇದು ನನ್ನ ಹೃದಯದ ಗೂಡು. ನನ್ನ ಪ್ರಾಣದ ಲೀಲಾನುಭವ. ಇದು ನನ್ನ ಪ್ರೇಮದ ಮಿಲನ ತೀರ್ಥ.
ನಾವು ಸೃಜಿಸುವ ಕಾವ್ಯ ಯಾವ ಎತ್ತರದ್ದಿರಬೇಕು ಹಾಗೂ ಹೊಣೆಗಾರಿಕೆ ಎಂಥದ್ದು ಎಂದು ವಿವರಿಸಿ ಹೇಳಲು ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ.