Total Pageviews

Thursday, December 13, 2018

ನಿನ್ನ ಸಂಗವೇ ಪರಮ ಮಂಗಳ. . . . .


ಅಂಧಂ ತಮಃ ಪ್ರವಿಶಂತಿ ಯೇಹವಿದ್ಯಾಮುಪಾಸತೆ
ತತೊ ಭೂಯ ಇವ ತೇ ತಮೋ ವಿದ್ಯಾಯಾಂ ರತಾಃ
ಯಾರು ಅನಂತವನ್ನು ಬದಿಗಿಟ್ಟು ಅಂತದ ಉಪಾಸನೆ ಮಾಡುತ್ತಾರೊ ಅಂಥವರು ಅಂಧಕಾರದಲ್ಲಿ ಮುಳುಗುತ್ತಾರೆ. ಅಂತವನ್ನು ಬಗಿಗಿಟ್ಟು ಅನಂತದ ಉಪಾಸನೆ ಮಾಡುವವರು ಇನ್ನೂ ಹೆಚ್ಚಿನ ಅಂಧಕಾರಲ್ಲಿ ಮುಳುಗುತ್ತಾರೆ.
ವಿದ್ಯಾಂಚಾವಿದ್ಯಾಂಚ ಯಸ್ತದ್ವೇದೋಭಯಂ ಸಹ
ಅವಿದ್ಯಯಾ ಮೃತ್ಯುಂ ತೀತ್ರ್ವಾ ವಿದ್ಯಯಾಮೃತಮಶ್ನು ತೇ
ಅಂತವನ್ನೂ ಅನಂತವನ್ನೂ ಯಾರು ಒಟ್ಟಿಗೆ ಬಲ್ಲರೊ ಅವರು ಅಂತದ ಮೂಲಕ ಮೃತ್ಯುವನ್ನು ದಾಟಿ ಅನಂತದ ಮೂಲಕ ಅಮೃತತ್ವವನ್ನು ಪಡೆಯುತ್ತಾರೆ ಎಂದು ಹೇಳಿದ್ದಾರೆ.” (ಸ್ವಾಮಿ ಶಂಕರಾನಂದ ಸರಸ್ವತಿ, ನಿಬಂಧ ಮಾಲಾ ಭಾಗ-1)
ಕವಿ ಕುವೆಂಪು ಅವರ ನನ್ನ ಚೇತನ ಕವಿತೆಯಿಂದ ಅವರತೇನವಿನ ತೃಣಮಪಿ ಚಲತಿವರೆಗೂ, ಅವರ ಕಾದಂಬರಿ, ಮಹಾಕಾವ್ಯ ಹಾಗೂ ವೈಚಾರಿಕ ಲೇಖನಗಳವರೆಗೂ ಸಂಗ್ರಹಿಸಿಕೊಂಡ ಸತ್ಯ, ವೇದ್ಯವಾಗಿಸಿಕೊಂಡ ತತ್ವ, ದಕ್ಕಿಸಿಕೊಂಡ ಸಾರ ಮೇಲಿನ ಉಲ್ಲೇಖ. ಅವರು ಬರೆದದ್ದೂ ಕೂಡ ಬರಹವನ್ನು ಮೀರಲೆಂದೆ. ಹೀಗಾಗಿ ಕುವೆಂಪು ಪ್ರತಿ ಹೊಸ ಕಾಲಘಟ್ಟಕ್ಕೆ ಪ್ರಜ್ಞೆಯಾಗಿ ಕಾಡುತ್ತಾರೆ. ಈಗ ಕುವೆಂಪು ಬರೀ ಕವಿಯಲ್ಲ, ಕನ್ನಡದ ಆತ್ಮಪ್ರಜ್ಞೆ.
ಹಾಗಾದರೆ, ನನ್ನ ಮೇಲಿನ ವಿಚಾರಗಳನ್ನು ಒಪ್ಪುವದಾದರೆ ಆತ್ಮವಿಮರ್ಶೆಯ ಲೇಖಕನ ಆಲೋಚನಾ ಕ್ರಮ ಹೇಗಿರುತ್ತದೆ? ಎನ್ನುವುದನ್ನು ನಾವು ಗಮನಿಸಬೇಕು. ಇಲ್ಲೊಂದು ಉದಾಹರಣೆ -
ಒಂದು ದಿನ ಬುದ್ಧಗಯೆಯಲ್ಲಿ ದರ್ಶನಕ್ಕಾಗಿ ಹೋಗಿದ್ದೆ. ಯಾರ ಚರಣಸ್ಪರ್ಶದಿಂದ ಭೂಮಿಯು ಒಂದು ಕಾಲದಲ್ಲಿ ಪವಿತ್ರವಾಗಿತ್ತೊ ಅವನು ಸಶರೀರನಾಗಿ ಗಯೆಯಲ್ಲಿ ಸುತ್ತಾಡುತ್ತಿದ್ದ. ಕಾಲದಲ್ಲಿ ನಾನೇಕೆ ಹುಟ್ಟಲಿಲ್ಲ? ತನುಮನಗಳಿಂದ ಪೂರ್ಣವಾಗಿ ನಾನೇಕೆ ಪುಣ್ಯ ಪ್ರಭಾವವನ್ನು ಅನುಭವಿಸಲಿಲ್ಲ? ಎನ್ನುವ ಖೇದ ನನಗೀಗಲೂ ಇದೆ.” ಎಂದು ರಾಷ್ಟ್ರಕವಿ, ಗುರುದೇವ ರವೀಂದ್ರನಾಥ ಠಾಕೂರರು ಮಹಾತ್ಮ ಬುದ್ಧನ ಬಗೆಗೆ 1935ರಲ್ಲಿ ಬರೆಯುತ್ತಾರೆ. ಇವು ಆಲೋಚಿಸಬೇಕಾದ ಸಾಲುಗಳೆ. ಆತ್ಮಶೋಧದ ಲೇಖಕನ ದಾರಿ ಬಹುತೇಕ ಹೀಗಿರುತ್ತದೆ. ಪರಮಹಂಸ ಹಾಗೂ ವಿವೇಕಾನಂದರ ವಿಚಾರದಲ್ಲಿ ಕುವೆಂಪು ಅವರ ಮನಸ್ಸು ಹೀಗೆ ಆಲೋಚಿಸುತ್ತಿತ್ತು ಎನ್ನುವುದಕ್ಕೆ ಅವರ ಕೃತಿಗಳೇ ಸಾಕ್ಷಿ.
ದರ್ಶನಮುಖಿಯಾದ ಬರಹಗಾರ ಮಾತ್ರ ಇಂಥ ಪ್ರಶ್ನೆಗಳಿಗೆ ಮುಖಾಮುಖಿಯಾಗಲು ಸಾಧ್ಯವಿದೆ. ಯಾವನ ಅಥವಾ ಯಾವುದರ ಒಳಗೊಳ್ಳುವಿಕೆಯಿಂದ ಹೊರಗಾದರೆ ತಾನು ಎಂಥ ಹಾನಿಗೊಳಗಾಗುತ್ತಾನೆ? ಎಂಥ ವಿರಾಟದರ್ಶನದಿಂದ ವಂಚಿತನಾಗುತ್ತಾನೆ? ಯಾವುದರಿಂದ ಮಾತ್ರ ಪ್ರಪಂಚದ ಸಮಗ್ರ ಅರಿವು ತನ್ನೊಳಗೆ ಸಮಾವಿಷ್ಠಗೊಳ್ಳುತ್ತದೆ? ಎನ್ನುವ ಸ್ಪಷ್ಟ ತಿಳುವಳಿಕೆ ಇರುವ ಸಾಧಕ ಇಂಥ ವಿಷಾದಪಡುತ್ತಾನೆ.
ಬುದ್ಧನಂಥ ಜೀವಂತ ಕಾವ್ಯದ ಕಾಲಾವಧಿ ತನ್ನದಾಗಲಿಲ್ಲವಲ್ಲ ಎನ್ನುವ ರವೀಂದ್ರರ ಬೇಸರ ಬರೀ ಅತಾರ್ಕಿಕ ಅಥವಾ ಅಲೌಕಿಕವಾದುದಲ್ಲ. ಅದು ಶುದ್ಧ ಪ್ರಾಪಂಚಿಕ ನೆಲೆಗಟ್ಟಿನ ಮೇಲೆ ರೂಪಗೊಂಡ ಆಶಯ. ಬರಹ, ಜೀವನ ಹಾಗೂ ಸಾಧನೆಗಳಿಗೆ ಅರ್ಥವನ್ನು ಸಾರ್ವತ್ರಿಕತೆಯನ್ನು ತುಂಬುವ ಪ್ರಯತ್ನ. ಸಾಧಕನೊಬ್ಬ ಇನ್ನೊಬ್ಬ ಸಾಧಕನನ್ನು ಸಾಧನವಾಗಿ ಬಳಸಿ-ಬೆಳೆಸಿ, ಬೆಳೆಯುವ ಮಾತು. ಇಂಥ ವಾಂಛೆ ಹಾಗೂ ಪ್ರಶ್ನೆಗಳನ್ನು ಹುಟ್ಟಿಸುವವರನ್ನು ನಾವು ದರ್ಶನಮುಖಿ ಸಾಧಕರೆನ್ನುತೇವೆ. ಕುವೆಂಪು, ಮಧುರಚೆನ್ನ ಹಾಗೂ ಬೇಂದ್ರೆ, ಡಿ.ವಿ.ಜಿ ಶ್ರೇಣಿಗೊಳಪಡುತ್ತಾರೆ.
ಮಹಾ ಕವಿ ಎಂದರೆ ಮಾಗಿದ ಹಣ್ಣಿನಂತೆ ಹಂಚಿಕೊಂಡ ಹಂಬಲದ ಜೀವ ಎನ್ನುತ್ತೇವೆ. ರಸಖುಷಿ, ಯುಗದ ಕವಿ, ಜಗದ ಕವಿ ಹೀಗೆ ಏನೆಲ್ಲ ಹೇಳುತ್ತೇವೆ.
ಕನ್ನಡದ ಪಾಲಿಗೆ ಕುಪ್ಪಳ್ಳಿಯ ವೆಂಕಟಪ್ಪ ಪುಟ್ಟಪ್ಪ ಅಂಥ ಒಂದು ಮೇರು ವ್ಯಕ್ತಿತ್ವ. ಬುದ್ಧನಿಗಾಗಿ ಕವಿ ರವೀಂದ್ರನಾಥ ಠಾಕೂರರು ಹಸಿಯಲು ಇರುವ ಕಾರಣವೇ ಇದು. ಅವರ ಪಾಲಿಗೆ ಬುದ್ಧದೇವನೆಂದರೆ ಭಾರತವೂ ಹೌದು. ಭಾರತವನ್ನು ಹಾಗೂ ಇಂಥ ಅನೇಕ ರಾಷ್ಟ್ರ, ಜನಾಂಗ, ಭಾಷೆ-ಭಾವ ಬದುಕಿನ ಹಿತವನ್ನು ಒಳಗೊಂಡ ವಿಶ್ವಪ್ರಜ್ಞೆ ಹಾಗೂ ವಿಶ್ವ ದರ್ಶನವೂ ಹೌದು. ಹೀಗಾಗಿ ಬುದ್ಧದೇವನ ಕಾಲಾವಧಿಯಲ್ಲಿ ತಾನಿದ್ದಿದ್ದರೆ ತನ್ನ ಲೋಕದೃಷ್ಟಿಗೆ ಇನ್ನಷ್ಟು ವಿಸ್ತøತಿ, ತನ್ನ ಕರ್ಮದ ಫಲಕ್ಕೆ ಮತ್ತಷ್ಟು ಪುಣ್ಯ ಪ್ರಾಪ್ತಿಯಾಗಿ, ತನ್ನ ಜೀವನ ಇನ್ನಷ್ಟು ಅರ್ಥಪೂರ್ಣವಾಗಿರುತ್ತಿತ್ತು ಎನ್ನುವುದು ಇಲ್ಲಿಯ ಆಲೋಚನೆ. ಇಂಥ ಆಲೋಚನೆಗಳೆ ಕುವೆಂಪು ಎಂಬ ಅಳಿಸದ ಹೆಸರಾದ ಕನ್ನಡದ ಮನಸ್ಸನ್ನು ರೂಪಿಸಿದ್ದು. ಅಸ್ಮಿತೆಯಾಗಿ ಬೆಳೆಸಿದ್ದು.
ಮಲೆನಾಡು, ರಾಮಕೃಷ್ಣ ಮಠ, ಕನ್ನಡದ ಪರಂಪರೆಯ ಪ್ರಜ್ಞೆ, ಇಂಗ್ಲೀಷ್ ಸಾಹಿತ್ಯದ ನಂಟು ಹಾಗೂ ಆತ್ಮವಿಮರ್ಶಾತ್ಮಕ ಕಾವ್ಯದ ಶೋಧ ಕುವೆಂಪು ಅವರನ್ನು ಇಡೀ ಭಾರತೀಯ ಸಾಹಿತ್ಯ ಸಂದÀರ್ಭದ ಅನನ್ಯ ಲೇಖಕನಾಗಿ ರೂಪಿಸಿದವು. ಮಿಲ್ಟನ್, ಡಾಂಟೆ, ಟಾಲ್ಸ್ಟಾಯ್, ರವೀಂದ್ರನಾಥ ಠಾಕೂರ, ನಿರಾಲಾ, ಯಶಪಾಲ್ ಹಾಗೂ ಶ್ರೀ ಅರವಿಂದ ಘೋಷರ ಸಾಲಿಗೆ ಅವರನ್ನು ಸೇರಿಸಿದವು. ಇಂದು ಯಾವುದೇ ತಲೆಮಾರಿನ ಭಾರತೀಯ ಲೇಖಕನೂ ಅವರ ಸಾಹಿತ್ಯವನ್ನೋದಿದ ಮೇಲೆ ಕುವೆಂಪು ಅವರ ಕಾಲಾವಧಿಯಲ್ಲಿ ಅವರೊಂದಿಗೆ ಬದುಕುವ ಭಾಗ್ಯ ನನಗೇಕೆ ದಕ್ಕಲಿಲ್ಲ? ಅವರ ಆಲೋಚನೆಯ ಹೊಳಹು, ಭೌತಿಕ ಬದುಕು ಇನ್ನಷ್ಟು ಸಮೀಪದಿಂದ ಅನುಭವಿಸುವ ಭಾಗ್ಯ ಏಕೆ ಸಿಗಲಿಲ್ಲ? ಎನ್ನುವ ವಾಂಛೆ ಹುಟ್ಟುವಷ್ಟು ಪೂರ್ಣಯೋಗದ ಸಂಸ್ಕøತಿಯನ್ನು ಕನ್ನಡ ಜನಾಂಗಕ್ಕೆ ಅವರು ಕಟ್ಟಿಕೊಟ್ಟರು.
ಯುಗಧರ್ಮ ಕೆಲವರನ್ನು ಮಾಧ್ಯಮವಾಗಿಸಿಕೊಂಡೆ, ಕಾಲಕಾಲಕ್ಕೆ ಪ್ರಕಟಗೊಳ್ಳುತ್ತಿರುತ್ತದೆ ಎನ್ನುವುದನ್ನು ನಾವು ನಂಬುವುದಾದರೆ ಅಂಥ ಒಂದು ಘಟಿಸುವಿಕೆ ಕುವೆಂಪು ಅವರ ಮೂಲಕ ಕನ್ನಡದ ಪಾಲಿಗೂ ಆಯಿತು ಎಂದುಕೊಳ್ಳಬೇಕು ಹಾಗೂ ಇದನ್ನೇ ನವೋದಯ ಎಂದುಕೊಳ್ಳಬೇಕು ಎನ್ನುವ ನನ್ನ ವಾದಕ್ಕೆ ಕೆಲವು ಕಾರಣಗಳಿವೆ.
ನನ್ನ ಬಾಲ್ಯದಿಂದಲೂ ಕಾಡಿದ, ನಮ್ಮ ಬದುಕು, ಅದನ್ನು ಸಾಕುವ ಭೂಮಿ ಹಾಗೂ ಸಾವರಿಸುವ ತಾಯಿ ಮೂರರ ಅರ್ಥ ತಿಳಿಸಿದ ಅವರ ಒಂದು ಪದ್ಯದ ಚರಣಗಳು
ರಾಣಿಯಂದದಿ ಮೆರೆವ ಸಿರಿತನವಿಹುದೊ ಏನೊ ಅರಿಯನು
ಕಾಮಧೇನುವಿನಂತೆ ಬಯಸಿದ ಫಲವ ಕೊಡುವೆಯೊ ಅರಿಯನು
ಎನ್ನ ಅಂಗಗಳೆಲ್ಲವು, ನಿನ್ನ ಸೊಂಪನು ಬಲ್ಲವು
ನಿನ್ನ ಸಂಗವೇ ಪರಮ ಮಂಗಳವೆಂಬುದಿನಿತನು ಮರೆಯನು
ತನ್ನದೆನ್ನುವ ತಾಯ್ನಾಡೇ ತನ್ನ ಅಸ್ಮಿತೆಯ ನೆಲವನ್ನು ರಾಜಕೀಯವಾಗಿ ಕಳೆದುಕೊಂಡು ಗುಲಾಮಗಿರಿಯಲ್ಲಿ ನೆಲಕಚ್ಚಿದಾಗ, ಮಗನೊಬ್ಬ ಹಾಡುವ ಭರವಸೆಯ ಹಾಡಿದು. ಕುವೆಂಪು ಕಾವ್ಯದ ದೃಷ್ಟಿಯ ವೈಶಿಷ್ಟ್ಯ ಇರುವುದೇ ಇಲ್ಲಿ. ಇದನ್ನು ಅಸ್ಥಿತ್ವ ಹೀನ ಅಂಧಕಾರದಲ್ಲಿ ನರಳಾಡುತ್ತಿರುವ ಯಾವ ತಾಯಿಯ ಮುಂದೆ ಕಾಲ, ದೇಶ, ಧರ್ಮಗಳ ಮಿತಿಯಿಲ್ಲದೆ ಹಾಡಬಹುದಾಗಿದೆ. ಇದು ಸಾಧಿತ ವಿಜೃಂಭಣೆಗಳ ಮೇಲೆ ಪಲ್ಲವಿಸಿದ ಕಾವ್ಯವಲ್ಲ. ಅವರ ಕಾವ್ಯ ಅಗ್ಗಡಿಕೆಯಲ್ಲ. ಬದಲಾಗಿ, ಅಚೇತನಕ್ಕೂ ಚೈತನ್ಯವನ್ನು ತುಂಬಿ ಪುನರ್ಸೃಷ್ಟಿಸುವ ಯತ್ನ. ಇದೇ ಪದ್ಯದಲ್ಲಿ ಮುಂದೊರೆದು ಅವರು ಹೇಳುತ್ತಾರೆ, ನನ್ನ ತಾಯಿಯಾದ ಭಾರತಾಂಬೆಯ ಕಾಲದ ರಾಜಕಾರಣದಲ್ಲಿ ಇಂದು ನೀನು ಏನಾದರೂ ಆಗಿರು, ಎಷ್ಟೇ ಕುಂದು-ಕೊರತೆ ಅಪಮಾನಗಳಿಂದ ನಲುಗಿರು, ಇದೆಲ್ಲವೂ ನನಗೆ ಗೊತ್ತಿರುವ ಸತ್ಯವೆ -
ಕುಂದು ಕೊರತೆಗಳಿಹವು ನಿನ್ನಲಿ ಎಂಬ ಅಳಲನು ಬಲ್ಲೆನು
ಹಿಂದೆ ಕುಳಿತವಳೆಂಬ ನಿಂದೆಯ ಸಹಿಸಿ ನೊಂದಿಹೆ ಬಲ್ಲೆನು
ಆದರೊಲಿಯನು ಅನ್ಯರ, ಚಿನ್ನ ಒಲಿದಿಹ ಧನ್ಯರ
ಕುಂದು ಕೊರತೆಗಳಿರಲಿ ಮಹಿಮಳೆ ನೀನೇ ಅನ್ಯರನೊಲ್ಲೆನು
ಇದು ಕನ್ನಡದ ಡಿಂ ಡಿಂ. ಅದರ ಗುರಿ ಪ್ರತಿ ಕನ್ನಡಿಗನ ಹೃದಯ ಶಿವ. ನನ್ನದು, ನನ್ನದು ನಾಡು ಎನ್ನದ ಎದೆಯ ಸುಡುಗಾಡನ್ನು ಹೊತ್ತು ತಿರುಗುವವರಿಗಾಗಿ ಮೊಳಗಿಸಿದ ಕಹಳೆ. ಇದು ಇದ್ದುದರ ಹಾಗೂ ಇರುವವರ ಪೂಜೆಯ ಮಂತ್ರವಲ್ಲ. ಕುವೆಂಪು ಅವರ ಕಲ್ಕಿ ಇದೇ ವಿಚಾರವನ್ನು ಪ್ರತಿಪಾದಿಸುತ್ತದೆ. ಕಡಲ ದರ್ಶನವನ್ನು ನೀಡುವ, ಕಾನನ-ಬೆಟ್ಟ-ಪರ್ವತಗಳ ಮೇರು ಸಾರುವ ಅವರ ಕಾವ್ಯ ಶ್ರೀ ಸಾಮಾನ್ಯನ ಅಸ್ಥಿತ್ವಕ್ಕೂ ವೇದಿಕೆಯನ್ನೊದಗಿಸುತ್ತದೆ.
ಹೋಮರ್ ತನ್ನ ಈನಿಯಡ್ ಕಾವ್ಯ, ಫಿರ್ದುಸಿ ತನ್ನ ಶಹನಾಮಾ, ಮಿಲ್ಟನ್ ತನ್ನ ಪ್ಯಾರಡೈಜ್ ಲಾಸ್ಟ್ ಹಾಗೂ ಶ್ರೀ ಅರಬಿಂದ ತಮ್ಮ ಸಾವಿತ್ರಿಗಳ ಮೂಲಕ ಸಾಧಿಸಲೆತ್ನಿಸುವುದೂ ಇದನ್ನೇ. ಇವೆಲ್ಲ ದಮನಿತರ ಹಾಡುಗಳೆ. ಕುವೆಂಪು ಅವರ ಕಾವ್ಯಭಾಷೆಯಲ್ಲೇ ಹೇಳುವುದಾದರೆ ಇವೆಲ್ಲಸತ್ತಂತಿರುವವರನ್ನು ಬಡಿದೆಚ್ಚರಿಸುವ, ಕಚ್ಚಾಡುವವರನು ಕೂಡಿಸಿ ಒಲಿಸುವ, ಮತ್ತೆ ಸಮದೃಷ್ಟಿಯ ನವಸಮಾಜವನ್ನು ಮನ್ನಡೆಸುವ ಯತ್ನಗಳು.
ಕುವೆಂಪು ಸಾಹಿತ್ಯದ ಮುಖ್ಯ ಲಕ್ಷಣವೇ ಶ್ರೀ ಸಾಮಾನ್ಯೋನ್ನತಿ. ಅದು ಬರೀ ಕಲ್ಪನಾ ವಿಲಾಸಕ್ಕರಳಿದ ಅಲೌಕಿಕ ಸೃಷ್ಟಿಯಲ್ಲ. ಬದಲಾಗಿ ಬುದ್ಧಿ-ಭಾವಗಳ, ವಿದ್ಯಮಾನ-ಆಧ್ಯಾತ್ಮಗಳ, ಸಮಕಾಲ ಹಾಗೂ ಕಾಲಾತೀತಗಳ, ಹಸಿರು-ಹಸಿವುಗಳ, ಪ್ರಾಣಿ-ಪಕ್ಷಿ, ಕಾಡ-ಕಡಲುಗಳ, ಗತಿಗಳನ್ನೊಳಗೊಂಡ ಗಾಂಭೀರ್ಯದ ನಡಿಗೆ. ಹೀಗಾಗಿ ಎಲ್ಲ ವಿಭಿನ್ಯತೆಗಳೊಂದಿಗೆ ಸಂಸಾರದ ಸಮಗ್ರ ದರ್ಶನಕ್ಕೆ ಕುವೆಂಪು ಕಾವ್ಯ ಕಾರಣವಾಗುತ್ತದೆ. ಅವರ ದೃಷ್ಟಿ ಪೂರ್ಣ ಎನಿಸುತ್ತದೆ. ಮೌಲ್ಯಾಮೌಲ್ಯಗಳ ಸಮಸ್ಯೆ ಬಗೆಹರಿಯುತ್ತದೆ.
ಕುವೆಂಪು ಸಾಹಿತ್ಯದ ಹರವು ಹಾಗೂ ದೃಷ್ಟಿಕೋನಗಳೆರಡೂ ವಿಶಾಲವಾದವುಗಳು. ಪ್ರೇಮ ಕಾಶ್ಮೀರ, ಕಿಂದರ ಜೋಗಿ, ಶೂದ್ರತಪಸ್ವಿ, ನೆನಪಿನ ದೋಣಿಯಲ್ಲಿ, ನನ್ನ ದೇವರು ಕಥಾ ಸಂಕಲನ, ಸುಬ್ಬಮ್ಮ ಹೆಗ್ಗಡತಿ, ರಾಮಕೃಷ್ಣ-ಶಾರದಾ ಮಾತೆಯವರ ಜೀವನ, ವಿವೇಕಾನಂದರನ್ನು ಆದರಿಸಿದ ಕಾಶ್ಮೀರದಿಂದ ಆಲ್ಮೋಡಕ್ಕೆ ಗ್ರಂಥಗಳು ನಾನು ಸಮಗ್ರವಾಗಿ ಓದಿ ಮುಗಿಸಿದ ಕುವೆಂಪು ಕೃತಿಗಳು. ಒಬ್ಬ ಮಹಾನ್ ಕವಿಯ ದೃಷ್ಟಿಯನ್ನು ಅರಿಯಲು ಇಷ್ಟು ಓದು ಸಾಕು.
ಸಿಂಪಿ ಲಿಂಗಣ್ಣ, ಬೇಂದ್ರೆಮಧುರಚೆನ್ನರ ನಾಡಿನಲ್ಲೇ ನನ್ನ ಬರಹ ಬದುಕುಗಳೆರಡೂ ರೂಪಗೊಂಡವಾದರೂ, ನನ್ನ ಕಾವ್ಯ ಕಣ್ಣೊಡೆದದ್ದು ಮಾತ್ರ ಕುವೆಂಪು ಕಾವ್ಯದಲ್ಲಿಯೆ. ಭಾರತಾಂಬೆಯ ಕುರಿತಾದ ಅವರ ಕವಿತೆ ನನ್ನ ಬಾಲ್ಯವನ್ನೆಲ್ಲ ಆವರಿಸಿ, ಅದರ ಚುಂಗು ಹಿಡಿದು ನಾಲ್ಕು ದಶಕಗಳ ಕನ್ನಡ ಸಾಹಿತ್ಯ-ಸಂಸ್ಕøತಿಗಳ ರಾಜಕೀಯ, ಜಾತಿ ಮೇಲಾಟ, ವ್ಯಕ್ತಿ ವೈಭವಗಳ ವಿಕೃತಿಗಳನ್ನೆಲ್ಲ ನೋಡುತ್ತ ನಾನು ಕವಿಶೈಲಕ್ಕೆ ಬಂದಾಗಲೂ ಇಲ್ಲಿ ಹಸುರಿತ್ತಲ್ಲ, ಅದು ನನ್ನ ಭಾಗ್ಯ. ಹಸಿರೇ ಕುವೆಂಪು ಕಾವ್ಯದ ಬಣ್ಣ, ಅವರೊಂದೆಡೆ ಬರೆಯುತ್ತಾರೆ – “ಹಸುರತ್ತಲ್! ಹಸುರಿತ್ತಲ್! ಹಸುರೆತ್ತಲ್ ಕಡಲಿನಲಿ
              ಹಸುರ್ಗಟ್ಟಿತೊ ಕವಿಯಾತ್ಮಂ ಹಸುರ್ನೆತ್ತರ್ ಒಡಲಿನಲಿ
ನಮ್ಮೂರ ಚಡಚಣದಂಥ ಬಿರುಬಿಸಿಲಿನ ಊರಲ್ಲಿಯೂ ಕಾಳಿದಾಸ, ದಾಸ್ತೋವಸ್ಕಿ, ಅರವಿಂದ, ರಾನಡೆ, ., ಗಿಬ್ರಾನ್, ಗಾಲಿಬ್, ವಡ್ರ್ಸವರ್ಥ, ಕುವೆಂಪು ಕಾವ್ಯಗಳನ್ನು ಚಿಂತಿಸುವ ಹಸಿರು ಹರುಷದ ಪ್ರಜ್ಞಾವಂತರ, ಅಕ್ಷರ ಪ್ರೇಮಿಗಳ ಬಳಗವಿತ್ತು. ನನ್ನ ಕಾವ್ಯದ ಒಟ್ಟು ಆಶಯವನ್ನು ರೂಪಿಸಿದ ಮಾಹಾನ್ ಗುರು ಶ್ರೀ ಎಂ.ಆರ್. ಜಹಾಗೀರದಾರ. ಅವರು ಅಂಬೇಡ್ಕರ್ ಚಿಂತನೆಗಳನ್ನು, ಕುವೆಂಪು ಅವರ ರಾಮಾಯಣ ದರ್ಶನಂ, ಡಾಂಟೆಯ ಡಿವೈನ್ ಕಾಮಿಡಿ ಹಾಗೂ ಶ್ರೀ ಅರವಿಂದರ ಸಾವಿತ್ರಿಯನ್ನು ಬದುಕಿನ ಕೊನೆಯವರೆಗೂ ಮತ್ತೆ ಮತ್ತೆ ಓದುತ್ತಿದ್ದರು. ಅವರು ಗತಿಸುವ ಕೆಲವೇ ದಿನಗಳ ಮುನ್ನ ನನ್ನನ್ನು ಮನೆಗೆ ಕರೆದು ಕುವೆಂಪು ಅವರ ರಾಮಾಯಣ ದರ್ಶನಂ ಮಹಾಕಾವ್ಯದ ಮೊದಲ ಭಾಗವನ್ನೆತ್ತಿಕೊಂಡು ಕಾವ್ಯವನ್ನು ಓದಿಸುವ ಪಾಠ ಪ್ರಾರಂಭಿಸಿದ್ದರು. ನನ್ನ ದುರ್ದೈವ, ಎರಡು-ಮೂರು ಓದುಗಳಾಗಿದ್ದವಷ್ಟೆ, ಅವರು ತೀರಿಹೋದರು. ಆದರೆ ಅವರು ಕೊಟ್ಟ ಶ್ರೀ ರಾಮಾಯಣ ದರ್ಶನಂ ಕಾವ್ಯ ಹಾಗೂ ಅವರ ಧ್ವನಿ ನನ್ನ ಉಳಿದ ಬಾಳಿನ ಪ್ರಜ್ಞೆಗಳಾಗಿ ಬೆಳೆಸಿದವು. ಕುವೆಂಪು ಕೈ ಹಿಡಿದು ಕವಿಶೈಲಕ್ಕೆ ನಡೆಯಿಸಿದವು.
ಹಾಗೆನೋಡಿದರೆ ಕುವೆಂಪು ಹಾಗೂ ಅವರ ಕಾವ್ಯದ ಮುಖ್ಯ ಜೀವಾಳವಾದ ಕಾನನದಿಂದ ಪ್ರಾದೇಶಿಕವಾಗಿ ಬಹಳ (ಏಳನೂರು ಕಿಲೋಮೀಟರ್ಗಳ ಅಂತರ) ದೂರದಲ್ಲಿದ್ದವ ನಾನು. ಆದರೆ ಇದು ಪ್ರತಿಭಾಪ್ರಭಾವದ ವಿಸ್ತøತಿಯನ್ನು ಸೂಚಿಸುವ ಸಂಗತಿ. ಇದನ್ನೇ ಬೇಂದ್ರೆಯ ಮಾತಿನಲ್ಲಿಉತ್ತರ ದೃವದಿಂ ದಕ್ಷಿಣ ದೃವಕು ಚುಂಬಕ ಗಾಳಿಯು ಬಿಸುತಿದೆಎನ್ನುವುದು, ‘ಹಣ್ಣು ಬಿತ್ತು ಹಣ್ಣು ಬಿತ್ತು ಬ್ರಹ್ಮ ವನದ ಹಣ್ಣು ಬಿತ್ತುಎಂದು ಮಧುರಚೆನ್ನ ಹಾಡುವುದು. ಕಾಲ-ದೇಶಗಳ ಅಂತರವನ್ನು ಶೂನ್ಯವಾಗಿಸದ ಕವಿ ಹಾಗೂ ಕಾವ್ಯಗಳೆರಡೂ ನಿರರ್ಥಕ. ನಿಟ್ಟಿನಲ್ಲಿ ಕುವೆಂಪು ಶತಶತಮಾನಗಳವರೆಗೂ ಸಂತತಿಗಳಾಗಿ ಹುಟ್ಟುವ ನಮಗೆ ದಕ್ಕಿದ ಒಂದು ಸಾರ್ಥಕ ಬದುಕು ಹಾಗೂ ದಿವ್ಯ ದರ್ಶನ.
ಕುವೆಂಪು ಕಾವ್ಯದ ಕೈ ಹಿಡಿದು ನಾನು ಮೈಸೂರಿನ ಅವರ ವಾಸಗೃಹವಾಗಿದ್ದಉದಯರವಿ, ಅವರ ಕರ್ಮ ಭೂಮಿಯಾದ ಮಾನಸ ಗಂಗೋತ್ರಿಯ ಆವರಣ, ಈಗ ಅವರ ಚೇತನ ವಿರಮಿಸಿರುವ ಕವಿಶೈಲ, ಅವರ ಕಾವ್ಯಕ್ಕೆ ಸ್ಪೂರ್ತಿಯಾಗಿದ್ದ ನವಿಲುಕಲ್ಲು, ಅವರಿಗೆ ಆಧ್ಯಾತ್ಮಿಕ ನೆಲೆಗಟ್ಟನ್ನು ಒದಗಿಸಿದ ಶ್ರೀ ರಾಮಕೃಷ್ಣ ಮಠ-ಗಳನ್ನು ದರ್ಶಿಸಿ ಬಂದಿದ್ದೇನೆ. ಅವರ ನೇರ ಶಿಷ್ಯರಾಗಿದ್ದ ದೇ. ಜವರೇಗೌಡ, ಪ್ರಭುಶಂಕರ, ಜಿ.ಎಸ್. ಶಿವರುದ್ರಪ್ಪ, ಸಿ.ಪಿ. ಕೃಷ್ಣಕುಮಾರ, ಎಸ್.ಎಂ. ವೃಷಭೇಂದ್ರಸ್ವಾಮಿ ಹಾಗೂ ಅವರ ವಿಚಾರಗಳಿಂದ ಪ್ರಭಾವಿತರಾದ ಚಂಪಾ ಮತ್ತು ಅವರ ಸಮಕಾಲೀನ ಬಂಡಾಯ ಬಳಗ, ಕುವೆಂಪು ಅವರನ್ನು ಸೈದ್ಧಾಂತಿಕವಾಗಿ ಪ್ರತಿಪಾದಿಸಿದ ಸಾ.ಸಿ. ಮರುಳಯ್ಯ, ವಿದ್ಯಾಶಂಕರ, .ಹೋ. ನಾರಾಯಣಸ್ವಾಮಿ, ಕೆ.ಎಸ್. ಭಗವಾನ್, ಕೆ. ಮರುಳಸಿದ್ದಪ್ಪ ಹಾಗೂ ಅವರ ವಿನೋದದ ಶಿಷ್ಯರಾಗಿದ್ದ ಶ್ರೀ ಮಾಯಿಗೌಡರೊಂದಿಗೆ ಒಡನಾಡಿದ್ದೇನೆ. ದರ್ಶನ ಕವಿಯ ಚೇತನಕ್ಕೆ ದಾರಿಗಳನ್ನು ಹುಡುಕಿಕೊಂಡಿದ್ದೇನೆ. ಹೀಗೆ ಹುಡುಕದಿದ್ದರೆ ಮಹಾನ್ ಕವಿಯೊಬ್ಬನ ದರ್ಶನ ದೃಷ್ಟಿಯ ನಮ್ಮ ಶೋಧ ಅಪೂರ್ಣವಾಗುತ್ತದೆ. ಅವರ ಕುರಿತು ನಾವು ಆಡುವ ಮಾತುಗಳು ಮಾತುಗಳಾಗುತ್ತವಷ್ಟೆ.
ಕವಿಯೊಬ್ಬನ ಜನ್ಮಭೂಮಿಗಳು ಮೂರು. ಒಂದು ಆತ ವಾಸಿಸುವ ಪ್ರದೇಶ ಹಾಗೂ ಅದರ ಭೌತಿಕ ಶ್ರೀಮಂತಿಕೆ, ಎರಡನೆಯದ್ದು ಆತನ ಸ್ಮøತಿಲೋಕ ಹಾಗೂ ಅದರ ಭಾವ ಸಮೃದ್ಧಿ, ಮೂರನೆಯದ್ದು ಆತನ ಆತ್ಮಿಕ ಲೋಕ ಹಾಗೂ ಅದರ ದರ್ಶನ ಸಿದ್ಧಿ. ಮೂರನ್ನೂ ಸಮಗ್ರವಾಗಿ ಗಮನಿಸಿದಾಗ ಮಾತ್ರ ಅವನ ರಸಸಿದ್ದಿಯ ಸುಖ ನಮ್ಮದಾಗುತ್ತದೆ. ಅವನ ಭವಿಷ್ಯ ದರ್ಶನ ಯುಗದರ್ಶನವಾಗುತ್ತದೆ. ಹೀಗೆ ದಕ್ಕಬೇಕಾದವರು ಕುವೆಂಪು ಎಲ್ಲರಿಗೂ, ಎಲ್ಲಕಾಲಕ್ಕೂ.

No comments:

Post a Comment