ಹೊಕ್ಕುಬಿಡಿ ಎಳೆಗಾಳಿ ಸುಳಿಗಾಳಿ ಬಿರುಗಾಳಿಯಲಿ;
ಬೀಸಿ ಬಂದೆಲ್ಲರ ಮೈಮುಟ್ಟಿ ಮನತಟ್ಟಿ ಎಚ್ಚರಿಸಲಿತೂರಿಬಿಡಿ ಹೊಸ ಚಿಗುರು ಎಳೆ ಗಿಡ ಬೆಳೆದ ಮರ ಮರಗಳಲ್ಲಿ;
ಹೊಸ ಗಾಳಿಯಾಗಿ ಅತಿರಮ್ಯವಾಗಿ ತೂಗಿ ಸಂತೈಸಲು.
ಲೋಕದ ಆತ್ಮ ಮಾತಾಡುವದಾದರೆ, ಅದಕ್ಕೆ ಬಾಯಿ ಯಾವುದು? ಮೊಗವೆತ್ತಿ ನಗುವ ಹೂಗಳೋ, ಬೀಜಗಳ ನೆತ್ತಿ ತಂದು, ಎಸೆದು ಕನಸು ಬಿತ್ತುವ ಗಾಳಿಯೋ? ಅವ್ವ ಜಡೆಬಿಚ್ಚಿ ಕುಳಿತಂತೆ ಕವಿದ ಮೋಡಗಳೋ? ಸಿಕ್ಕಿದ್ದೆಲ್ಲ ದಕ್ಕಿಸಿಕೊಳ್ಳುವ ಸಮುದ್ರದ ಅಲೆಗಳೋ? ಬಹುತೇಕ ಇವೆಲ್ಲವೂ ಇರಬಹುದೇನೊ? ಆದರವುಗಳಿಗೆ ಭಾಷೆಗಳಿಲ್ಲ. ಇದ್ದರೂ ಅದು ಲೋಕಾತಿತವಾದದ್ದು. ಆದರೆ ಎಲ್ಲ ಅಚ್ಚರಿಗಳಿಗೆ ಕಣ್ಣಾಗುವ ಕವಿ ಲೋಕದ ಆತ್ಮ ಮಾತಾಡುವ ಬಾಯಿ ಎಂದೆನಿಸಿದೆ ನನಗೆ. ಆತ ಲೋಕದಲ್ಲಿ ಹುಟ್ಟಿ, ಲೋಕದೊಳಗೆ ಮುಳುಗಿ, ಲೋಕದ ಮಾತಾಡಿ, ಲೋಕವನ್ನುಂಡ ಲೋಕಾತೀತ. ಕವಿ ಗೆಳೆಯ ಉಮೇಶರ ಮೇಲಿನ ನಾಲ್ಕು ಸಾಲುಗಳಲ್ಲಿ ಈ ಲೋಕ ಮುಖಿಯಾದ ಕವಿ ಹಾಡುತ್ತಿದ್ದಾನೆ. ಆ ಮೂಲಕವೇ ಸಕಲರಿಗೂ ಲೋಕ ವಿಸ್ತಾರವಾಗುವ ದಾರಿಯನ್ನು ತೋರಿಸುತ್ತಿದ್ದಾನೆ. ಇದು ಎಲ್ಲ ಕಾಲಕ್ಕೂ ಸಲ್ಲುವ ಉಮೇಶರ ಅಪರೂಪದ ಪದ್ಯ.
ಪದವನರ್ಪಿಸುವ ಕವಿ, ಕಾವ್ಯವೆಂದರೆ ಪದಗಳ ಗಮ್ಮತ್ತನ್ನು ತೋರಿಸುವ ಜಾದುಗಾರನಷ್ಟೇ ಅಲ್ಲ, ಪದ ನೈವೆದ್ಯವಾಗಿಸಿ ಪೂಜಿಸುವ ಪೂಜಾರಿಯೂ ಅಲ್ಲ. ಕವಿ ಲೋಕಕ್ಕೆ ಅನುಭವವನ್ನು, ಅನುಭಾವವನ್ನು ಉಣ್ಣಿಸಿ ಅದರ ಜೀವ ತಣ್ಣಗಾಗಿಸುವ ಮಹಾ ಜಂಗಮ. ಅದರ ಸಿಟ್ಟು ಸೆಡುವುಗಳನ್ನು ರಮಿಸಿ, ಸಾಂತ್ವಾನದ ಲಾಲಿ ಹಾಡುವ ಮಹಾ ತಾಯಿ. ಹೀಗಾಗಿ ಅವನಿಗೆ ಪದಗಳೆಂದರೆ ಬರೀ ಪದಗಳಲ್ಲ –
ಬರೆಯಬಹುದು ಪದಗಳೆ;
ಬರೆದ ಬರೆದೇತೀರಬಹುದು ಪದಗಳೆ;
ಬರೆಯುತ್ತಲೇ ಇರಬಹುದು ಒಡನಾಡಿಗಳೆ;
ಅಂತರಂಗದ ಒರತೆಗಳೆ;
ನೀವು ಖಾಲಿಯಾಗುವುದಿಲ್ಲ;
ನಾನೂ ಖಾಲಿಯಾವುದಿಲ್ಲ;
ನೋಬೆಲ್ ಪ್ರಶಸ್ತಿಯನ್ನು ಸ್ವೀಕರಿಸುತ್ತ ಯುರೋಪಿನ ಶ್ರೇಷ್ಠ ಸಾಹಿತಿ ‘ಹೆನ್ರಿ ಕಿಸೆಂಜರ್’ ಹೇಳಿದ, ‘ಜನರ ಅಳುವು-ನಗುವು, ಕಣ್ಣೀರು, ಹರ್ಷಗಳಾಚೆಯ ಕುರಿತು ನನಗೆ ಏನನ್ನೂ ಬರೆಯಲಾಗಿಲ್ಲ. ನನಗಿನ್ನೂ ಕಾಲವಿದೆ. ಆದರೂ ಈ ಮನುಷ್ಯ ಲೋಕದಿಂದಾಚೆ ಏನ್ನನ್ನೂ ನಾನು ಬರೆಯುದೂ ಇಲ್ಲ. ಮುಳು-ಮುಳು ಅಳುವ; ಪಿಸು-ಪಿಸು ನಗುವ ಮಾತುಗುಳಿ ಮನುಷ್ಯ ನನ್ನ ಬರಹದ ಮುಖ್ಯ ಕೇಂದ್ರವಾಗಿದ್ದಾನೆ. ಬರಹದ ಮೂಲಕ ಅವನ ಸುತ್ತಲಿನ ಎಲ್ಲವನ್ನು ಸರಿ ಸುಂದರಗೊಳಿಸುವ ಜವಾಬ್ದಾರಿ ನನ್ನ ಬರಹಕ್ಕಿದೆ. ಈ ಅರ್ಥದಲ್ಲಿ ಇಂದು ನನಗೆ ಸಿಕ್ಕ ಈ ನೋಬೆಲ್ ಪ್ರಶಸ್ತಿಗೆ ಕಾರಣನಾದ ಮನುಷ್ಯನಿಗೆ ಈ ಪ್ರಶಸ್ತಿಯನ್ನು ನಾನು ಅರ್ಪಿಸುತ್ತಿದ್ದೇನೆ.’ ಅರ್ಥಪೂರ್ಣವಾಗಿದೆ ಕಿಸಂಜರ್ನ ಮಾತು. ಹೀಗಾಗಿ ಯೋಚನಾರ್ಹವೂ ಆಗಿದೆ.
ಮಾತು ತೆಗೆದು ಹಾಕಿದರೆ ಮನುಷ್ಯನಿಗೆ ಈ ಲೋಕ ಒಂದು ನಿರ್ವಾತವಷ್ಟೆ. ಮನುಷ್ಯನೆಂದರೆ ಮತ್ತೇನು ಅಲ್ಲ ಮಾತು. ಅವನು ಮಾಡುವ ಕೊಟ್ಯಾಂತರ ಜೀವ ವ್ಯವಹಾರಗಳಿಗೆ ಸಾಧನವಾಗಿ ಬಳಸಿದ್ದು ಮಾತ್ತನ್ನೆ. ಏನೆಲ್ಲ ಪಡೆದು ಈ ಲೋಕವನ್ನು ಆತ ಆಪಾದಿಸುವದು ಮಾತಿಗಾಗಿಯೇ. ಯಾಕೆಂದರೆ ಇಲ್ಲಿರುವ ಎಲ್ಲ ಮಾತುಗಳು ಅವನ ಮನದ ವೇದನೆಗೆ ಕನ್ನಡಿಯಾದವುಗಳಲ್ಲ. ಉಮೇಶರ ಕವಿತೆಯ ಈ ಸಾಲುಗಳನ್ನು ನೋಡಿ-
ಅದ್ಯಾವ ದಿಕ್ಕಿನಲ್ಲಿ ಹುಡಿಕಿದರು
ದೊರೆಯಲಿಲ್ಲ ಬಿಡುಗಡೆಯ ಮಾತು;
ಎದುರು ಸಿಕ್ಕವರ ಹಿಡಿದು ಬೇಡಿದರು
ಕೈಗೂಡಲಿಲ್ಲ ಸಮಾನತೆಯ ಮಾತು;
ದೇವರ ಹರಕೆಗೂ ಹೂಂ ಗುಟ್ಟಿದರು
ಬೀಳಲಿಲ್ಲ ಭರವಸೆಯ ಮಾತು;
ಗಾಳಿ ಮೋಡ ಗಿಡ ಮರ ಬಳ್ಳಿಗಳೂ
ಪಿಸುಗುಡಲಿಲ್ಲ ಹೃದಯದ ಮಾತು;
ಅಜ್ಜ, ಅಜ್ಜಿ, ನೆರೆಹೊರೆ ಆಶ್ರಿತರೂ
ಉಸಿರಲೇ ಇಲ್ಲ ಪ್ರೀತಿ ಮಾತು;
ಜಗತ್ತಿನ ಅತ್ಯಂತ ಶ್ರೇಷ್ಠ ಚಿಂತಕನೆನಿಸಿದ್ದ ವಿಜ್ಞಾನಿ ‘ಅಲ್ಬರ್ಟ್ ಐನ್ಸ್ಟಿನ್’ ಮನುಷ್ಯ ಪ್ರಯತ್ನವನ್ನು ಕುರಿತು, ಆತನ ಪರಿಶ್ರಮಗಳ ಕುರಿತು ಮಾತೊಂದು ಹೇಳಿದ. Everything
is designed to save human labour. Labour is expensive. ಕವಿ ಮಿತ್ರ ಟಿ. ಪಿ. ಉಮೇಶರವರ ‘ದೇವರಿಗೆ ಬೀಗ’ದ ಎಲ್ಲ ಕವಿತೆಗಳ ಕಾಳಜಿಯೇ ಮನುಷ್ಯ ಮತ್ತು ಅವನ ಪ್ರಯತ್ನ ಶೀಲತೆ -
ಕಲ್ಲು ಕಲ್ಲನೇ ಸೀಳಿ ಕಮರಿ ಕಾಲವಾಗಿ;
ಮಣ್ಣು ಮಣ್ಣಲೇ ಹೂತು ಮರಣವಾಗಿ;
ಮನದ ಜೋಲಿ ಜೀಕಿ, ಜೀಕಿ ಜಾರಿ ಹೋಗಿ;
ಅಲೆದ ಅಲೆಗಳ ನಿಗತ ಗತಿ ವಿಗತಿಯಾಗಿ;
ಬರುವ ಮತಿ ಮಿತಿಯ ನಾದ ಮೌನವಾಗಿ;
ನಾನು, ನೀನು ಕೂತು ಆತು ಐಕ್ಯವಾಗಿ;
ಕಾಲನ ಭೀಷಣ ಎದೆಯ ಮೇಲೂ ಕಾವ್ಯದ ಸಮಧಾನದ ಕೈ ಎಳೆದವನು ಕವಿ. ಸಂಘರ್ಷಗಳೇ ಕಾವ್ಯದ ಬಂಡವಾಳ. ಸಾವನ್ನು, ಸಮವಲ್ಲದ ನೆಲವನ್ನು ಹಾಗೂ ಸಮಾಜವನ್ನು ಸಮತಟ್ಟಾಗಿಸಿ, ತನ್ನ ಅನುಭವದ ಕಡುಗೋಲಿನಿಂದ ಜೀವನದ ಕಡಲು ಕಡಿದು, ಕೊನೆಯಿಲ್ಲದ ಕಾವ್ಯ ರಚಿಸಿದ ಕವಿ ನಿಸ್ಸಿಮನೇ ಸರಿ. ‘ದೇವರಿಗೆ ಬೀಗ’ದ ಕವಿ ಟಿ. ಪಿ. ಉಮೇಶ ಬದುಕಿನ ಎಂಥೆಲ್ಲ ವಾಸ್ತವಗಳಿಗೆ ಸಾಕ್ಷಿಯಾದವನು. ಕಟು ಸತ್ಯಗಳನ್ನು ದಕ್ಕಿಸಿಕೊಂಡು ಛಲದಂಕ ಮಲ್ಲನಂತೆ ನಿರಂತರವಾಗಿ ಬೆಳೆದವನು. ಈ ಇಡೀ ಸಂಕಲನ ಜೀವನ ಮುಖಿಯಾದ ಭಾವನೆಗಳಿಗೆ ಸಾಕ್ಷಿಯಾಗುತ್ತದೆ ವಿನ: ಜೀವ ವೈರುದ್ಯಕ್ಕೆ ಇಲ್ಲಿ ಆಸ್ಪದವಿಲ್ಲ. ಇದು ಸೋತವರಿಗೆ ಸಾಕ್ಷಿಯಾದ ಕೃತಿಯಲ್ಲ, ಭರವಸೆಯನು ನಂಬಿದವರಿಗೆ ಬೆಳಕಿನ ಊರುಗೋಲು. ಇಲ್ಲೊಂದು ಕವಿತೆಯನ್ನು ನೋಡಿ -
ಕಾಲವಿದೆ ಎಲ್ಲದಕ್ಕೂ ಉತ್ತರವಿದೆ;
ಏರುವಂತ ಎತ್ತರವಿದೆ;
ಹಿಮಾಚಲದ ಗುರಿಯಿದೆ;
ಆರೋಹಣದ ಕಸುವಿದೆ;
ಕಾಲವಿದೆ ಎಲ್ಲದಕ್ಕೂ ಕಾರುಣ್ಯವಿದೆ;
ಕಾಲವೇ ದೂರಾದವರ ಕೈವಲ್ಯವಾಗಿದೆ;
ಕಾಲವೇ ಉರುಬಿಟ್ಟವರ ಊರುಗೋಲಾಗಿದೆ;
ಕಾಲವೇ ಕಾಯುವ ವರವಾಗಿದೆ;
ಕಾಲವೇ ಗುರಿ ಕಾಣಿಸುವ ಕಲ್ಕಿಯಾಗಿದೆ.
ಇದನ್ನೆ ಪಾಶ್ಚ್ಯಾತ ಕವಿಯೊಬ್ಬ, I was never afraid of failure; for I would sooner
fail than not be among the greatest.
ಎಂದು ಹೇಳಿದ್ದು. ಇಡೀ ಸಂಲನದಲ್ಲಿ ದೇವರು, ಸಾವು, ಮಾತು, ಕಾಲ, ಮಳೆ, ಬುದ್ಧ, ಅಪಘಾತ, ಗಾಳಿ, ಭೂಮಿತಾಯಿ, ಮನಸ್ಸು, ನವಿಲ ನರ್ತನ, ಹೀಗೆ ಕವಿ ಕಂಡ ಸಾವಿರಾರು ಚಿತ್ರಗಳ ಸರಮಾಲೆ ಇದೆ. ನೆಲವನ್ನು ಕನಸಿನಷ್ಟೆ ಕಡು ಪ್ರೀತಿಯಿಂದ ನೋಡುವ ಕವಿ ಗೆಳೆಯ ಉಮೇಶನ ಕಾವ್ಯ ಇಡೀ ಪಾಶ್ಚ್ಯಾತ್ಯ ರಮ್ಯಕಾವ್ಯದ ಪರಂಪರೆಯನ್ನು ನೆನಪಿಗೆ ತರುತ್ತದೆ. The poetry of the earth is never dead ಎಂದು ನಂಬಿದವರು ಅವರು. ಕವಿ ಉಮೇಶ ಕೂಡಾ ಇಂಥ ಒಂದು ಅನುಭವವನ್ನು ಇಲ್ಲಿ ಅಭಿವ್ಯಕ್ತಸಿದ್ದಾರೆ -
ನೆಲಕೆ ಇರುಳೆಲ್ಲ ಕಿವಿಯಾನಿಸಿಕೊಂಡು
ಮಲಗುವದೇ ಆನಂದ;
ಭೂಮಿತಾಯಿಯ ಎದೆ ಬಡಿತದಲ್ಲಿ
ಅಮ್ಮನಾ ಜೋ ಲಾಲಿ;
ಈ ಸಂಕಲನದ ಅಪರೂಪದ ರಚನೆಗಳು ಮನವೇ, ಹೆಜ್ಜೆಗಳು, ಬಟ್ಟೆಗಳು, ನವಿಲ ಮಾತೇಕೆ ಈಗ?, ಬಯಲು-2, ನೀ, ಕಡಗೋಲು, ಮತ್ತೆಂದೂ ಕವಿಯಾಗಿಸಬೇಡ, ಹೀಗೆ ಅನೇಕ ರಚನೆಗಳು. ಇವು ಓದಿ ಮರೆಯುವ ಕವಿತೆಗಳಲ್ಲ, ಮಂಥನವಾಗಿಸಿಕೊಳ್ಳಬೇಕಾದ, ಚಿಂತೆಗಿಳಿಯಬೇಕಾದ ರಚನೆಗಳು. ಇಲ್ಲಿ ನೊಡಿ -
ಧರ್ಮ ಕರ್ಮಗಳ ಜಂಜಾಟದಿ
ದೇವರು ದಿಂಡಿರುಗಳ ಹುಡುಕಾಟದಿ
ನವಿಲು ಕುಣಿಯುತ್ತಿದೆ ನೊಡುವವರಿಲ್ಲ
ಗಿಣಿಯು ಕೂಗುತ್ತಿದೆ ಕೇಳುವವರಿಲ್ಲ;
ಕವಿತೆಯೆಂದರೆ ಒಂದು ಘಟಿಸುವಿಕೆ. ಅದು ಮನುಷ್ಯನ ಎದೆಯಿಂದ ನೆಲದಾಳದವರೆಗೂ ನಡೆಯುವ ನರ್ತನ. ಇದೆಲ್ಲವನ್ನು ಉಮೇಶರ ಈ ಸಂಕಲನದಲ್ಲಿ ನಾವು ಗಮನಿಸಬಹುದು. ನಾನು ನಂಬಿರುವಂತೆ ಕಣ್ಣು-ಬಣ್ಣ, ರಾಗ-ರಂಗು, ಅಳು-ನಗು, ಮೌನ-ಸಮ್ಮಾನ ಯಾವುದೂ ಅದರ ಸಹಾಯಕ್ಕೆ ಸಿಕ್ಕರೆ, ಸಾಕು, ಚಿಪ್ಪಿಗೆ ಬಿದ್ದ ಸ್ವಾತಿಯ ಹನಿ ಗಪ್ಪನೆ ಅವಿತು ಕುಳಿತು ಮುತ್ತಾಗುವ ಹಾಗೆ ಎದೆಯ ಹನಿ ಕವಿತೆಯಾಗುತ್ತದೆ. ‘ಶಬ್ಧ’ ಕಾವ್ಯದ ಇನ್ನೊಂದು ಸಾಧ್ಯತೆ ಅಷ್ಟೆ. ಶಬ್ಧಗಳೊಂದಿಗೆ ಕೈ- ಕೈಯೊಳಿರಿಸಿ ಕಾವ್ಯ ತನ್ನ ಪಯಣವನ್ನೇನೋ ಆರಂಭಿಸಿ ಬಿಡುತ್ತದೆ. ಆದರೆ ಈ ಕಾವ್ಯ ಬರೀ ಕಾವ್ಯವನ್ನೆ ಅವಲಂಬಿಸಿರುವದಿಲ್ಲ. ಕೆಲವೊಮ್ಮೆ ಕವಿತೆ ಎನ್ನುದನ್ನು ಅಪ್ಪಕೊಳ್ಳುವುದೆಂದರೆ ಮೃತ್ಯುವನ್ನು ತೆಕ್ಕೆಹೊಡೆದಂತೆ ಸರಿ. ಗೆಳೆಯ ಉಮೇಶ ಇಂಥಹ ಅನುಭವಕ್ಕೆ ತಮ್ಮ ‘ಮತ್ತೆಂದೂ ಕವಿಯಾಗಿಸಬೇಡ’ ಕವಿತೆಯಲ್ಲಿ ಅಭಿವ್ಯಕ್ತಿ ನೀಡಿದ್ದಾರೆ -
ಅನುಮತಿಯ ಕೊಡು ಆತ್ಮವೇ;
ನಿನಗೊಂದು ಶಾಂತಿ ಮಂತ್ರವ ಕೆತ್ತಿ ಬರುವೆ;
ಮತ್ತೆಂದೂ ಕವಿಯಾಗಿಸಬೇಡೆಂದು;
ಮುಕ್ತ ಗಾನವ ಹಾಡಿ ಬರುವೆ;
ಕಲ್ಲುಗಳ ಮೇಲುಳಿವ ಸವಕಲು ಪ್ರೀತಿ ಬಿಟ್ಟು
ಚುಕ್ಕಿಗಳಾಗಿ ನಿಲ್ಲುವ ಘನದ ರೀತಿ ಹೇಳಿಕೊಟ್ಟು;
ಬರುವೆ, ಮತ್ತೆ ಬರುವೆ
ಪಡೆವೇ, ನಿನ್ನೆ ಪಡೆವೆ.
ಕನ್ನಡ ಕಾವ್ಯ ಈ ಹಿಂದೆಂದಿಗಿಂತಲೂ ಇಂದು ಭಿನ್ನ ಚಲನೆ ಮತ್ತು ವೇಗ ಪಡೆದುಕೊಂಡಿದೆ. ಟಿ. ಪಿ. ಉಮೇಶರಂತ ಕವಿ ಮಿತ್ರರು ಕಾವ್ಯವನ್ನು ಅತ್ಯಂತ ಪ್ರಜ್ಞಾಪೂರ್ವಕವಾಗಿ ಕಟ್ಟುವತ್ತ ಧ್ಯಾನಸ್ಥರಾಗಿದ್ದಾರೆ. ಭೌತಿಕವಾಗಿ ಎಲ್ಲವನ್ನು ಗೆದ್ದ ಈ ಯುಗ ಭಾವದಾರಿದ್ರ್ಯಕ್ಕೆ ಒಳಗಾಗುವದನ್ನು ತಪ್ಪಿಸಿದವರು ಇವರು. ನಾನು ಪ್ರೀತಿಸಿದ ಕವಿಗಳಲ್ಲಿ ಅತ್ಯಂತ ಭರವಸೆಯ ಹೆಜ್ಜೆ ಇರಿಸಿರುವ ಟಿ. ಪಿ. ಉಮೇಶ ಕಾವ್ಯ ಪ್ರಚಾರದ ಅವಸರಕ್ಕೆ ಬಿದ್ದಂತೆ ತೋರುತ್ತಿಲ್ಲ. ಕನ್ನಡ ಕಾವ್ಯ ತನ್ನ ಮೊದಲಿನ ಸಂಭ್ರಮ, ಜಾತ್ರೆ, ಪ್ರಚಾರ, ಪಂಥಗಳಿಂದ ಆಚೆ ಬಂದು ಆಳಕ್ಕೆ, ಎದೆ-ನೆಲದಾಳಕ್ಕೆ ಇಳಿಯುತ್ತಿರುವ ಸ್ಪಷ್ಟ ಲಕ್ಷಣಗಳನ್ನು ಉಮೇಶರ ಕಾವ್ಯದಲ್ಲಿ ಕಾಣಬಹುದಾಗಿದೆ. ಚಿತ್ರದುರ್ಗದ ಹೆಬ್ಬಂಡೆಯಂತೆ ವಿಧಿ ಕಷ್ಟಗಳ ಸುರಿಯುವಾಗ ಕಲ್ಲಾಗಿ, ಮಳೆಗೆ ಮತ್ತೆ ಮಲ್ಲಿಗೆಯಂತರಳಿ ತಮ್ಮ ಕಾವ್ಯದ ಸುಖ ಸಂದೇಶವನ್ನು, ಸಮೃದ್ಧಿ, ಸಮಾಧಾನಗಳನ್ನು ಉಮೇಶ ಪಸರಿಸಬಲ್ಲರು ಎಂಬ ಭರವಸೆಯಿದೆ. ಆ ನಿಟ್ಟಿನತ್ತ ಅವರ ಕಾವ್ಯ ಪಯಣ ಮುಂದುವರಿಯಲಿ, ನಾಡಿನ ಸಮಗ್ರ ಓದುಗ ಬಳಗದ ಪ್ರೀತಿ ಹೆಮ್ಮೆಗಳು ಕಾವ್ಯದ ಮೂಲಕವೇ ಅವರಿಗೆ ದಕ್ಕಲಿ ಎಂದು ಹಾರೈಸುವೆ.
ಬಾಗಿ ಬರಬೇಕು ದೇವರಿಗೆ ಎನ್ನುವ ಪರಿಕಲ್ಪನೆಯನ್ನೇ ಕಿತ್ತೆಸೆದು. ‘ದೇವರಿಗೆ ಬೀಗ’ಹಾಕಿದ ಆ ಮೂಲಕ ಹೊಸ ಭಾಷೆಯನ್ನು ಹುಟ್ಟು ಹಾಕಿದ ಉಮೇಶರ ಭವಿಷ್ಯ ಉಜ್ವಲವಾಗಿದೆ. ಇದು ನನ್ನ ನೀರೀಕ್ಷೆ ಮತ್ತು ನಂಬಿಕೆಯೂ ಕೂಡಾ.