Total Pageviews

Saturday, February 15, 2020

ಸಮ-ಸಮಾಧಿಯ ಹಾಡು


ಸಂತಸವೆ ನಿನಗಿದೋ ಸ್ವಾಗತ
ದುಃಖವೆ ನಿನಗೂ ಕೂಡ

ಇಂದೇ ಬಂದು ಬಿಡು, ಇಲ್ಲ ಮತ್ತೆಂದಾದರು
ಪ್ರೀತಿಸುವೆ ನಾ ನಿಮ್ಮಿಬ್ಬರ ಒಟ್ಟಾಗಿ, ಒಲವ ಗುಟ್ಟಾಗಿ.

ಹಿತ ಗಾಳಿಯಲೂ ಸುಳಿದ ದುಃಖದಾ ಮುಖವನ್ನು
ಗುಡುಗು ಸಿಡಿಲಲೂ ನಗೆಯ ನೆಮ್ಮದಿಯನು
ರೂಪ-ವಿರೂಪಗಳ ಸಮ ಬೆರಕೆಯ
ಸಮ-ಸಮಾಧಾನದ ಬಾಳ ಉಂಡವನು ನಾ

ಬೆಂಕಿ ಮೇಲೆಯೆ ಹುಲ್ಲು ಗಾವಲವ ಕಂಡವನು
ಅಚ್ಚರಿಯ ಉಡಿಯಲ್ಲಿ ಮುಸಿ ನಗೆಯನು,
ಮಕ್ಕಳಲಿ ಮಹಂತ ಮಹಿಮರನು
ಸಾಲು ಗಂಟೆಗಳಲ್ಲಿ ಸಾವು-ಸಮಾಧಿಗಳನು,
ಮಕ್ಕಳಾಟದಿ ಮತ್ತೆ ಬುರುಡೆಗಳ ಕಂಡವನು
ಮುಂದಿರುವ ಮೋಸಕ್ಕೂ ಮುಸಿನಗುತ ನಿಂತವನು ನಾ,


ಮುರಿದ ಹಡಗಿನ ಮುಂತುದಿಗೆ ನಿಂತು
ಮಧುರ ಮುಂಜಾವಿಗೆ ಸ್ವಾಗತವ ಕೋರುವೆನು
ಕಾಡು-ಕತ್ತಲೆಯಲೂ ಸಿಹಿಮುತ್ತನುಂಡವನು
ಕೆಂಗುಲಾಬಿಯೊಳು ವಿಷದ ಹಾವ ನಂಜುಂಡವನು
ಕಂಡವನು ನಾ ಸ್ನಿಗ್ಧ ಸುಂದರಿ ಎದೆಯ ಹರಿದ ಬಟ್ಟೆಯನು

ಸಂಭ್ರಮದ ಸಂಗೀತ, ಮತ್ತೆ ಸಂಗೀತದೊಳು ದುಃಖ
ಎರಡು ಒಂದಾಗಿ, ಒಂದಿನ್ನೊಂದರ ಹುಚ್ಚಾಗಿ
ಬೆಳಕಿನಾನಂದವನು, ಆನಂದದೊಳು ನೋವನು
ನಿಟ್ಟುಸಿರು ನಗೆಯನು, ಬಿಕ್ಕಳಿಕೆ ಹೂವನು
ಹೃದಯ ಬೇನೆಯ ಮಾಧುರ್ಯ ಉಂಡವನು ನಾ

ಹಗಲ ಹಬ್ಬದ ಹಾಡು, ರಾತ್ರಿ ನೋವಿನ ಹಾಡು
ಈಗ ಬರೆಯಲು ಬಿಡು ನನಗೆ
ತಣಿಸಲು ಬಿಡು ಎರಡನೂ ಒಟ್ಟಿಗೆ
ಹಸಿವಿದೆ ಹೃದಯದಲಿ ಒಟ್ಟೊಟ್ಟಿಗೆ.
ತುಂಬಿರಲಿ ನನ್ನ ಲತಾಕುಂಜ ಲಲನೆಯರುಸಿರಿಂದ
ಹಾಗೆಯೆ ನನ್ನ ಸಮಾಧಿ, ಹಸಿರು ಹುಲ್ಲಿನಿಂದ 

ಮೂಲ: ಜಾನ್ ಕೀಟ್ಸ್
ಕನ್ನಡಕ್ಕೆ: ರಾಗಂ

1 comment:

  1. ಬೆಂಕಿಯ ಮೇಲೆ ಹುಲ್ಲುಗಾವಲು ಕಂಡವನು
    ನಾ ಇದುವರೆಗೆ ಆನಂದಿಸಿದ ಮೆಟಾಫರ್ ಗಳಲ್ಲಿ ತುಂಬಾ ಎತ್ತರಕ್ಕೆ ನಿಲ್ಲುವಂತದ್ದು
    ಹ್ಯಾಟ್ಸ ಆಫ್ ಟು ಯು ಸರ್
    ಮುಂಜಾನೆ ಕಾವ್ಯಾಮೃತವ ಉಣಬಡಿಸಿದ್ದಕ್ಕೆ

    ReplyDelete