“Let
no act be done without a purpose,
nor
otherwise than according to the perfect Principles of art.”
- Marcus Aurelius
*****************
ಹಿರಿಯ ಕಲಾವಿದರಾದ ಎಸ್.ಎಂ. ಖೇಡಗಿಯವರ ಕುರಿತ ಬರಹದ ಈ ಸಂದರ್ಭದಲ್ಲಿ, ನನ್ನನ್ನು ಮತ್ತೆ ಮತ್ತೆ ಸ್ಮರಣೆಗೆಳೆಸುತ್ತಿರುವ ಒಂದು ಪಾತ್ರ ಕೃಷ್ಣ ಪಾರಿಜಾತದ ಕಲಾವಿದರಾದ ಶ್ರೀ ಟಕ್ಕಳಕಿ ವಿಠ್ಠಲರಾವ. ನನ್ನ ದೊಡ್ಡಪ್ಪನವರಾದ ಮಲ್ಲಯ್ಯಸ್ವಾಮಿ ಅಥಣಿಯವರ ಕಾರಣದಿಂದಾಗಿ ನಾನು ವಿಠ್ಠಲರಾವ ಅವರಂಥವರನ್ನು ಸ್ಮರಿಸಿಕೊಳ್ಳಲು ಸಾಧ್ಯವಾಗಿರುವುದು.
ಅವರಿಗೆ ಅನಾರೋಗ್ಯ ಎಂದು ಗೊತ್ತಾಗಿ ಒಮ್ಮೆ ಜಮಖಂಡಿಯಲ್ಲಿರು ಸನ್ಮಿತ್ರ ಪ್ರೊ. ವಿಠ್ಠಲ ದಳವಾಯಿ ಅವರೊಂದಿಗೆ ಸೇರಿಕೊಂಡು, ಕೃಷ್ಣಾನದಿ ತೀರದ ವಿಠ್ಠರಾವ್ರ ತೋಟದ ಮನೆ (ಊರು) ಟಕ್ಕಳಕಿಗೆ ಹೋದೆ. ಆದರೆ ಅಲ್ಲಿ ಕಂಡ ವಾಸ್ತವ ಈಗಲೂ ಕಣ್ಣಿಗೆ ಕಟ್ಟಿದಂತೆ ಇದೆ.
ಸಾಯಂಕಾಲದ ಹೊತ್ತು, ದನ-ಕರುಗಳ ಕೊರಳಿಂದ ಗಂಟೆಗಳ ನಾದ, ದವಸ ಧಾನ್ಯಗಳಿಂದ ಶ್ರೀಮಂತವಾದ ವಿಠ್ಠಲರಾವರ ಮನೆ, ಮಕ್ಕಳು, ಮೊಮ್ಮಕ್ಕಳು, ಮಹಿಳೆಯರ ಮಧ್ಯ ಕೃಷ್ಣನ ನಾದಲೋಕದ ಗಾರುಡಿಗ, ಮಹಾನ್ ಕಲಾವಿದ, ಮೌನದಿಂದ ಸಮೃದ್ಧರಾದ ವಿಠ್ಠಲರಾವ್ ಟಕ್ಕಳಕಿ ಕುಳಿತಿದ್ದರು. ಅವರ ಆರೋಗ್ಯ ಚನ್ನಾಗಿಯೇ ಇತ್ತು, ಛೆ! ಎಂಥ ತಪ್ಪು ತಿಳುವಳಿಕೆಯಿಂದ ನಾವು ಬಂದೆವಲ್ಲ! ಎಂದುಕೊಂಡು ಮೆಲ್ಲಗೆ ಅವರೊಂದಿಗೆ ಮಾತಿಗಿಳಿದಿದ್ದೆ.
ಹೊರಗೆ ಸೂರ್ಯ ಮುಳುಗುತ್ತಿದ್ದ, ಇಲ್ಲಿ ಒಳಗೆ ಕೃಷ್ಣಸಖ ಮೆಲ್ಲಗೆ ಮಾತಿಗೆ ಅರಳುತ್ತಿದ್ದ. ನನ್ನ ಆ ದಿನದ, ಆ ಸಂದರ್ಶನದ ಬಹಳ ದೊಡ್ಡ ಸಾಧನೆ ಮತ್ತು ಸಂದೇಶಗಳೆಂದರೆ, ಕಲಾವಿದನೊಬ್ಬನ ಜೀವನಶಿಸ್ತು ಹಾಗೂ ಅವನ ಸಂತೃಪ್ತ ಭಾವ ಎಲ್ಲ ಕಂಡೆ, ಎಲ್ಲ ಉಂಡೆ. ಎಲ್ಲ ಅಮೃತವಾಗಿತ್ತು ಜಗದ ಜೋಳಿಗೆಯಲ್ಲಿ, ಎಂದು ತೊಂಬತ್ತರ ಮಹಾಸಂಜೆಯ ಕಲಾವಿದನೊಬ್ಬ ಸಂತನಂತೆ ಸಂತೃಪ್ತಿಯಿಂದ ಮಾತನಾಡುವಾಗ, ಮನದ ಇನ್ನೊಂದು ಮೂಲೆಯಲ್ಲಿ ಕನ್ನಡ ನಾಟಕ ಪರಂಪರೆಯ ಮೇರು ಸಾಧಕರಾದ, ನನ್ನ ಬುದ್ಧಿ-ಭಾವಗಳ ಭಾಗವೇ ಆದ, ಮತ್ತೋರ್ವ ರಂಗಕರ್ಮಿ ಶ್ರೀ ಎಂ.ಎಸ್. ಖೇಡಗಿ ಅವರ ಜೀವನ ಸಂವಾದದ ಸಂದರ್ಭಗಳೂ ಮೆಲ್ಲಗೆ ಮೂಡಿಹೋಗುತ್ತಿದ್ದವು.
‘ಸಂತೃಪ್ತಿ ಹಾಗೂ ಸಮಾಧಾನಗಳ ನೆಲೆಗೆ ಬಂದು ನಿಲ್ಲದ ಯಾವುದೇ ಕಲಾವಿದ, ಕಲೆ ಹಾಗೂ ಸಾಧಕನ ಬದುಕು ಸಂದೇಶವಾಗಲಾರದು. ವಿರಾಟ-ವಿಶಾಲ ರಂಗಸಜ್ಜಿಕೆಯಲ್ಲಿ ನನ್ನ ಸಾಧನೆ ಎನ್ನುವುದು ನಾಟಕದ ಒಂದು ದೃಶ್ಯ ಇದ್ದಂತೆ,’ ಎಂದು ಹೇಳುತ್ತ ವಿಠ್ಠಲರಾವ್ ಅಂದು ನನ್ನ ಮುಂದೆ ಇಡೀ ನಾಟಕ-ನಟ ಎಂಬ ಸಂಸ್ಕøತಿಯ ಸಾಧನೆಯ ತಿರುಳನ್ನೇ ಬಿಚ್ಚಿಟ್ಟಿದ್ದರು. ಆನಂತರದ ನನ್ನ ಹುಡುಕಾಟದಲ್ಲಿ ಅದೇ ಸಂದೇಶವನ್ನು ಪುನರ್ ಉಚ್ಚರಿಸಿದವರು ಬಿಜಾಪುರದ ರಂಗ ಸಾಧಕ ಶ್ರೀ ಎಸ್.ಎಂ. ಖೇಡಗಿ.
ಸಾಧನೆ ಹಾಗೂ ಸಂಸ್ಕøತಿಯ ಎತ್ತರದಲ್ಲಿರುವವರು ಶ್ರೀ ಖೇಡಗಿ. ನನ್ನ ಬಾಲ್ಯದಿಂದ ಇದುವರೆಗಿನ ಮೂರು ದಶಕಗಳ ಜೀವನ ಅದರ ರಂಗ ಗಂಗೆಯ ಇಕ್ಕೆಲಗಳಲ್ಲಿಯೇ ರೂಪ ಹಾಗೂ ಆಕೃತಿಯನ್ನು ಪಡೆದಿದೆ. ನನ್ನ ಸೃಜನಶೀಲತೆಯ ಕಣ್ಣರಳಿದ್ದು ಖೇಡಗಿಯವರ ರಂಗಕಾವ್ಯದಲ್ಲಿ. ನಾವು ಬೆಳೆದು, ಬದುಕು ಹಾಗೂ ಭಾಷೆಗಳನ್ನು, ಜೀವನ ವ್ಯವಹಾರ ಹಾಗೂ ಸಾಮಾಜಿಕತೆಗಳನ್ನು ಕಲಿತಿದ್ದು, ಈ ಖೇಡಗಿ ಎಂಬ ಸಾಧಕರ ರಂಗದೀಕ್ಷಾ ಕೇಂದ್ರದಲ್ಲಿಯೆ. ಹೀಗಾಗಿ ಅವರು ನಮಗೆ ರಂಗಮಂಡಲವಷ್ಟೇ ಅಲ್ಲ ಬಾಳಮಂಡಲವೂ ಕೂಡಾ.
ನನ್ನ ದೊಡ್ಡಪ್ಪ, ದೊಡ್ಡವ್ವಂದಿರು ಹಾಗೂ ಕಿರಿಯ ಸಹೋದರನ ಕಾರಣ ರಂಗವಾತಾವರಣ ಮನೆತನದಲ್ಲಿ ಇದ್ದುದರಿಂದ ನಾನು ಕಲಾವಿದರನ್ನು ಹಾಗೂ ಅವರ ದುರಂತ ಮತ್ತು ವ್ಯಸನಾಶ್ರಿತ ಜೀವನವನ್ನು ಬಹಳ ಸಮೀಪದಿಂದ ನೋಡಿದವನು. ಮುಂದೊರೆದು, ಹವ್ಯಾಸದ ಕಾರಣ, ವೃತ್ತಿ ಹಾಗೂ ಅಮೆಚ್ಯೂರ್ ತಂಡಗಳ ಕಲಾವಿದ ಗೆಳೆಯರೊಂದಿಗೆ ಬದುಕಿ, ಅವರ ಏರಿಳಿತವನ್ನು ಕಂಡವನು. ಬಾಳಿ ಬದುಕಬೇಕಾದ ಅದೆಷ್ಟೋ ಪ್ರತಿಭಾನ್ವಿತ ಗೆಳೆಯ-ಗೆಳತಿಯರನ್ನು ಈ ರಂಗಭೂಮಿಯಲ್ಲಿಯೇ ಕಳೆದುಕೊಂಡವನು. ಇರುವ ಜೀವನವೆಲ್ಲ ಬಣ್ಣಕ್ಕಾಗಿ ಬದುಕಿ, ತಮ್ಮ ಬಾಳಿನ ಮುಸ್ಸಂಜೆಯಲ್ಲಿ ಪಿಂಚಣಿಗಾಗಿ ಪರದಾಡುತ್ತ, ಬಾಳೆಲ್ಲ ಕತ್ತಲಾಗಿಸಿಕೊಂಡವರೊಂದಿಗೆ ನಿಸ್ಸಹಾಯಕನಾಗಿ ಕುಳಿತು ಎದ್ದು ಹೋದವನು ನಾನು. ಇಂಗ್ಲೀಷ ಸಾಹಿತ್ಯದ ವಿದ್ಯಾರ್ಥಿಯಾಗಿ, ಥಾಮಸ್ ಕಿಡ್, ಕ್ರಿಸ್ಟೋಪರ್ ಮಾರ್ಲೊ, ಥಾಮಸ್ ನ್ಯಾಶ್ ಹಾಗೂ ವಿಲಿಯಂ ಶೇಕ್ಸಪೀಯರ್ನ ಜೀವನಗಳನ್ನು ಓದಿದವನು. ಇಲ್ಲೆಲ್ಲಿಯೂ ಸಂತೃಪ್ತಿಯ ನೆಲೆಯನ್ನು ಕಾಣದ ನಾನು ಶ್ರೀಯುತ ಖೇಡಗಿಯವರ ಸ್ವಚ್ಛ-ಸುಂದರ ಸಾಧನೆಯ ಬಾಳಿಗಾಗಿ ನಿಜಕ್ಕೂ ಅಚ್ಚರಿಗೊಂಡಿದ್ದೇನೆ ಹಾಗೂ ಆದರ್ಶವಾಗಿಸಿಕೊಂಡಿದ್ದೇನೆ.
‘ಬಣ್ಣದ ನಂಟು ಮಣ್ಣಿಗೆ ಹೋಗುವವರೆಗೂ’ ಎಂಬುದೊಂದು ಪ್ರಸಿದ್ಧ ಹೇಳಿಕೆ. ಒಂದರ್ಥದಲ್ಲಿ ಇಡೀ ಮನುಕುಲಕ್ಕೆ ಅಂಟಿಕೊಂಡ ಬಣ್ಣ ಈ ಮಣ್ಣು. ಎಲ್ಲರೂ ಪಾತ್ರಧಾರಿಗಳೆ, ಸಿಕ್ಕ ಪಾತ್ರ ಹಾಗೂ ಅವಕಾಶ ತೀರ ಸಣ್ಣ ಅವಧಿಯದ್ದು. ಆದರೆ, ಸಿಕ್ಕಷ್ಟನ್ನೇ ಸಶಕ್ತವಾಗಿ ಬಳಸಿಕೊಂಡು ಸಮಾಜಕ್ಕೆ ಸರ್ವಕಾಲಿಕ ಹಾಗೂ ಸಮೃದ್ಧವಾದುದನ್ನು ನೀಡಿದವರು ಕೆಲವೇ ಕೆಲವು ರಂಗ ಕರ್ಮಿಗಳು. ಈ ಕೆಲವರ ವಿರಳರ ಗುಂಪಿಗೆ ಸೇರಿದವರಲ್ಲಿ ಒಬ್ಬರು ನಮ್ಮ ಎಸ್.ಎಂ. ಖೇಡಗಿ. ಸಿಕ್ಕ ಈ ಬಣ್ಣದ ಮಣ್ಣನ್ನು ಮೃಷ್ಟಾನ್ನವಾಗಿ ಕಂಡುಂಡು, ಕಲಾಶಾರದೆಯ ಮುಡಿಗೆ ಮರೆಯಲಾಗದ ಮಹತ್ವದ ಕಾಣಿಕೆಗಳನ್ನು ನೀಡಿದವರು. ಕನ್ನಡ ರಂಗಲೋಕದ ಅಭಿಮಾನಧನರು. ಅವರ ಪಾತ್ರಗಳ ಸೃಷ್ಟಿ ಜೀವನ ದೃಷ್ಟಿ ಎಲ್ಲ ಕಾಲಕ್ಕೂ ಅನುಕರಣೀಯ.
ನಮ್ಮೂರು ಚಡಚಣ. ಒಂದು ಕಾಲಕ್ಕೆ ಸಂತೆಗೆ, ಜಾತ್ರೆಗೆ ಹಾಗೂ ಸಾಹಿತ್ಯ ಚಿಂತನೆಗೆ ಬಹಳ ಪ್ರಸಿದ್ಧವಾಗಿತ್ತು. ನನಗೆ ನಮ್ಮೂರ ಸಂತೆಯಲಿ ಸಿಕ್ಕವರು ಈ ಖೇಡಗಿ ಎಂಬ ರಂಗಜಂಗಮ. ಅವರ ನಾಟಕ ರತ್ನಗಳಾದ ‘ಪಾಪಿಯ ದೇಹ ಪುಣ್ಯದ ಜೀವ’, ಗೌರಿ ಹೋದಳು ಗಂಗೆ ಬಂದಳು’, ‘ಕಿತ್ತೂರ ರಾಣಿ ಚೆನ್ನಮ್ಮ’ ಇವುಗಳನ್ನೆಲ್ಲ ನಾನು ಗಮನಿಸಿದ್ದು ನಮ್ಮೂರ ಜಾತೆಯಲ್ಲಿಯೆ. ನಾನು ಬಾಲ್ಯದಿಂದಲೂ ನಾಟಕದ ನಾದಕ್ಕೆ ಮನಸೋತವನು. ಮುಂದೆ ಕುಳಿತುಕೊಂಡು ನಾಟಕ ನೋಡುವುದೆಂದರೆ ಕಣ್ಣುಗಳಿಗೆ ಮಹಾ ಹಬ್ಬ. ‘ಕರ್ಣಾನಂದ’, ‘ಗೌರಿ ಹೋದಳು ಗಂಗೆ ಬಂದಳು’ ನಾಟಕದಲ್ಲಿ ಗೌಡನ ಪಾತ್ರದಲ್ಲಿ ಬರುತ್ತಿದ್ದ ಎಸ್.ಎಂ. ಖೇಡಗಿ, ಖಳನಾಯಕನ ಪಾತ್ರವನ್ನು ಅದ್ಭುತವಾಗಿ ಅಭಿನಯಿಸುತ್ತಿದ್ದರು.
ಖೇಡಗಿ ಅವರ ನಾಟಕಗಳೆಂದರೆ ಗಂಭೀರ ಚಿಂತನೆ ಹಾಗೂ ಅಭಿವ್ಯಕ್ತಿಗಳ ಮಹಾ ಸಂಗಮ. ಪ್ರತಿ ಪುಟ್ಟ ಸಂಗತಿಯೂ ಅವರ ಪ್ರದರ್ಶನಗಳಲ್ಲಿ ಪ್ರಪಂಚರೂಪಿ ವ್ಯಾಪ್ತಿಯನ್ನು ಪಡೆದು ಬಿಡುತ್ತಿದ್ದವು. ತಿಂಗಳುಗಳವರೆಗೆ ಒಂದೇ ನಾಟಕ ನಡೆದುದ್ದನ್ನು ನೋಡಿದ್ದೇನೆ. ಒಬ್ಬ ಶ್ರೇಷ್ಠ ಕಲಾವಿದ, ನಿರ್ದೇಶಕ ಹಾಗೂ ಸಾಧಕನ ಸಾಮಥ್ರ್ಯ ಅಭಿವ್ಯಕ್ತಗೊಳ್ಳುವುದು ಸಂದರ್ಭಗಳ ಆತನ ಸೂಕ್ಷ್ಮ ನಿರ್ವಹಣೆಯಲ್ಲಿ. ಈ ನಿಟ್ಟಿನಲ್ಲಿ ಕಲಾಶಕ್ತಿಯ ಮೂಲ ಸೆಲೆಯನ್ನು ಅರಿತ ಎಸ್.ಎಂ. ಖೇಡಗಿ, ಎಲ್ಲ ಚಿಕ್ಕದ್ದನ್ನು ವಿಶಾಲವಾಗಿಸುತ್ತ ಹೋಗಿ, ಸ್ವಯಂ ತಾವೇ ರಂಗಸಂಸ್ಕøತಿಯ ವಿರಾಟ ಅವತಾರವಾಗಿಬಿಟ್ಟರು.
ರಂಗಭೂಮಿಯನ್ನು ಅಷ್ಟೊಂದು ಪ್ರೀತಿಸಿದರು ಖೇಡಗಿ. ಇಂಗ್ಲೀಷನಲ್ಲಿ ಒಂದು ಮಾತಿದೆ, Love
the art, poor as it may be, which thou hast learned and be content with it; and
pass through the rest of life like one who has intrusted to the gods with his
whole soul all that he has, making thyself neither the tyrant nor the slave on
any man.
ರಂಗಭೂಮಿಯ ಇತಿಹಾಸ ಮನುಷ್ಯನ ಇತಿಹಾಸದಷ್ಟೇ ವೈವಿದ್ಯತೆ ಹಾಗೂ ಏರಿಳಿತಗಳಿಂದ ಕೂಡಿದೆ. ಸ್ವಯಂ ರಂಗಭೂಮಿ ಅದೇಷ್ಟು ರಚನಾತ್ಮಕವಾದುದೊ ಅದು ಇಂದಿಗೂ ದೊಡ್ಡ ಪ್ರಶ್ನೆ. ಆದರೆ, ಒಂದಂತೂ ಸತ್ಯ, ಯಾರು ಅದನ್ನು ಜೀವನ ಮೌಲ್ಯಗಳೊಂದಿಗೆ ಬಾಚಿಕೊಂಡರೊ, ಅವರಿಗೆ ಅವಿಸ್ಮರಣೀಯ ಬದುಕನ್ನೇ ಅದು ನೀಡಿದೆ. ಕಲೆಯನ್ನು ಪ್ರೀತಿಸುವವರು, ತಪಸ್ಸಾಗಿಸಿಕೊಂಡವರು ಅದಕ್ಕೆ ಅತ್ಯಂತ ಮುಖ್ಯ. ವ್ಯಸನಕ್ಕಾಗಿ, ಐಹಿಕತೆಗಾಗಿ, ಲೋಲುಪತನಕ್ಕೆ ಅದನ್ನು ವೇದಿಕೆಯಾಗಿಸಿಕೊಂಡಾಗ ಅಲ್ಲಿ ಸಿಗುವ, ಪ್ರಾಪ್ತಿಯಾಗುವ ಫಲಿತಾಂಶವೇ ಬೇರೆ. ಕಲಾತಪಸ್ವಿಗಳಾದ ಎಸ್. ಎಂ. ಖೇಡಗಿ, ಈ ಕ್ಷೇತ್ರವನ್ನು ತಪೋಭೂಮಿಯಂತೆಯೇ ಗೌರವಿಸಿದ್ದರಿಂದ ಅವರು ಎಲ್ಲರೊಂದಿಗಿದ್ದೂ ಎಲ್ಲರಿಗೂ ಮೇರು ಉದಾಹರಣೆಯಾದರು.
ನಾಟಕ ರಚನೆ, ಅಭಿನಯಗಳಾಚೆಯೂ ರಂಗಭೂಮಿ ಇದೆ. ಅದು ಶರೀರ, ಶಾರೀರ ಹಾಗೂ ವ್ಯಾವಹಾರಿಕತೆಗಳಿಗೆ ಅನ್ವಯಿಸಿದ್ದು. ಸ್ಥಿತಪ್ರಜ್ಞನಾದವ ಇದನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಿದೆ. ಇದನ್ನು ವ್ಯವಸ್ಥಿತವಾಗಿ ಸಾಧಿಸಿದ ಸಾಧಕ ನಮ್ಮ ಎಸ್.ಎಂ. ಖೇಡಗಿ ಅವರು. ಅಷ್ಟೇ ಸಮರ್ಥವಾಗಿ ಅದರ ಸಾಹಿತ್ಯ ರಚನೆಯಂಥ ಭಾವಲೋಕವನ್ನೂ ಅವರು ನಿಭಾಯಿಸಿದ್ದಾರೆ. ಈ ದ್ವಿಮುಖ ಸಾಧನೆ ರಂಗಲೋಕದಲ್ಲಿ ವಿರಳ ಎಂದೇ ಹೇಳಬೇಕು. ನಮ್ಮ ವಿಶ್ವವಿದ್ಯಾಲಯಗಳು ಅಕಾರಣ ಕಾರಣಗಳನ್ನು ಹುಡುಕಿ, ಸಾಹಿತ್ಯ ಸೀಳುವ ಮನೋಸ್ಥಿತಿಯಿಂದ ಹೊರಬಂದರೆ, ಎಸ್.ಎಂ. ಖೇಡಗಿಯಂಥ ರಂಗಸಾಧಕರ ಕುರಿತು ಹಲವು ಆಯಾಮಗಳ ಅಧ್ಯಯನ ಸಾಧ್ಯವಾಗುತ್ತದೆ. ಹತ್ತಾರು ಪ್ರಬುದ್ಧ ಸಂಶೋಧನಾ ಪ್ರಬಂಧಗಳು ಸಿದ್ಧವಾಗುತ್ತವೆ.
ಕನ್ನಡ ರಂಗಚರಿತ್ರೆಯ ಪುಟಗಳಲ್ಲಿ ಹಂದಿಗನೂರು ಸಿದ್ರಾಮಪ್ಪ, ಗುಬ್ಬಿ ವೀರಣ್ಣ, ಶಾರದಾ ನಾಟಕ ಮಂಡಳಿಯ ಹೊಸಮನಿ, ಬಿ.ಆರ್ ಅರಿಷಿಣಗೋಡಿ, ಸುಳ್ಳದ ದೇಸಾಯಿ, ಜಂದೋಡಿ ಲೀಲಾ, ಗುಡಗೇರಿ ಬಸವರಾಜ ಹೀಗೆ ಅದೆಷ್ಟೋ ರಂಜನೀಯ ಹಾಗೂ ರೋಚಕ ಪುಟಗಳಿವೆ. ಆದರೆ ಇದೆಲ್ಲದರೊಂದಿಗೆ ಶ್ರೀ ಎಸ್.ಎಂ. ಖೇಡಗಿಯವರ ವ್ಯಕ್ತಿತ್ವದ ಇನ್ನೊಂದು ವೈಶಿಷ್ಟ್ಯ ಅವರ ಸಾತ್ವಿಕತೆ. ಇದನ್ನು ರಂಗದೊಂದಿಗೆ ಹೊಂದಿಸುವುದು ಕಷ್ಟದ ಕೆಲಸವೆ. ಕಾಲಾಂತರದಲ್ಲಿ ತನ್ನ ಕೇವಲದ ಅಸ್ತಿತ್ವಕ್ಕಾಗಿ, ರಂಗಸಿದ್ಧತೆ ಹಾಗೂ ಬದ್ಧತೆಗಳೆರಡರಲ್ಲೂ ಎಷ್ಟೊಂದ ಬದಲಾವಣೆಗಳಾದರೂ, ನೈತಿಕ ಸಡಿಲತೆಗಳಾದರೂ ಅವುಗಳಿಂದ ಅಭಾದಿತವಾಗಿ ಬೆಲೆಯುತ್ತ ಹೋದವರು ಶ್ರೀ ಎಸ್.ಎಂ. ಖೇಡಗಿ. ಅವರು ತೊಡುವ ಶುಭ್ರ, ಸ್ವಚ್ಚ ಬಟ್ಟೆಯಂತೆಯೇ ತಮ್ಮ ಜೀವನ ವ್ಯವಹಾರ ಹಾಗೂ ಸಾಧನೆಗಳನ್ನು ಉಳಿಸಿಕೊಂಡಿದ್ದಾರೆ. ಇಡೀ ಮನೆಯನ್ನೇ ರಂಗಶಾಲೆಯಾಗಿಸಿಕೊಂಡು ಮಡದಿ, ಮಕ್ಕಳು, ಮೊಮ್ಮಕ್ಕಳೊಂದಿಗೆ ಅವರು ಕಟ್ಟಿಕೊಂಡ ನಿರಂತರ ರಂಗಚಿಂತನಾ ಪ್ರಜ್ಞೆ ಉಳಿದವರಿಗೆ ದಕ್ಕಲಿಲ್ಲ. ಬಹುತೇಕ ಅದು ಈ ಹಿಂದಿನವರ ಉದ್ದೇಶವೂ ಆಗಿರಲಿಲ್ಲ.
ಒಂದು ಶುದ್ಧ ಪ್ರಜ್ಞಾಪೂರ್ವಕ, ಲೌಕಿಕ ಜೀವನವನ್ನು ಅದರೆಲ್ಲ ಏರಿಳಿತಗಳೊಂದಿಗೆ ರಂಗಕ್ಕೆ ಹೊಂದಿಸಿ, ಮತ್ತೆ ಅದನ್ನೇ ಆಧ್ಯಾತ್ಮಕ್ಕೆ ಸೋಪಾನವಾಗಿಸಿಕೊಂಡವರು ಎಸ್.ಎಂ. ಖೇಡಗಿ. ಅದನ್ನು ಯಾವಾಗಲೂ ವ್ಯಾಸಪೀಠದಲ್ಲಿ ಇರಿಸಿ, ಅದರಿಂದಲೇ ಎಲ್ಲವನ್ನು ಕಲಿಯುತ್ತ, ತಾನು ಕಲಿತುದನ್ನು ಲೋಕಕ್ಕೆ ವಿಸ್ತರಿಸುತ್ತ ಹೋಗಿದ್ದಾರೆ ಖೇಡಗಿ. ಒಂದು ಮಾತಿದೆ – Try
how the life of the good man suits thee, the life of him who is satisfied with
his portion out of the whole, and satisfied with his own just acts and
benevolent disposition. ಈ ಪ್ರಜ್ಞೆ ಯಾವಾಗಲೂ ಜಾಗೃತವಾಗಿರುವ ಕಾರಣ ಇಂದು ಎಸ್.ಎಂ. ಖೇಡಗಿ ನಮ್ಮ ಮಧ್ಯದ ಮಹತ್ವದ ಚಿಂತನೆಯಾಗಿದ್ದಾರೆ.
ಜಾತ್ಯಾತೀತ ಮಾನವ ಸಮಾಜ ನಿರ್ಮಾಣದಲ್ಲಿ ಸಂಗೀತದಷ್ಟೇ ಮಹತ್ವದ ಪಾತ್ರವಾಡಿದ ಮತ್ತೊಂದು ಕ್ಷೇತ್ರ ರಂಗಭೂಮಿ. ಅದು ಅದರಷ್ಟಕ್ಕೆ ಸೀಮಾತೀತ ಎಂದು ಹೇಳಿದ್ದಾರೆ ಆಂದ್ರದ ಪ್ರಖ್ಯಾತ ರಂಗಕರ್ಮಿ ಗುರುಜಾಡಾ ಅಪ್ಪಾಜಿರಾವ್. ಇಂದಿಗೂ ಬಾಗಲಕೋಟೆಯ ಪಕ್ಕದಲ್ಲಿ, ಕಂದಗಲ್ಲ ಹನುಮಂತರಾಯರ ಕಾಲದಲ್ಲಿ, ನಿರ್ಮಾಣವಾಯಿತು ಎನ್ನಲಾದ ಹಂಸನೂರು ಎಂಬ ಗ್ರಾಮ ನೂರಕ್ಕೆ ನೂರರಷ್ಟು ರಂಗ ಕಲಾವಿದರನ್ನು ಹೊಂದಿದೆ. ಇಲ್ಲಿ ಹುಟ್ಟುವ ಪ್ರತಿ ಮಗುವಿಗೂ ರಂಗಭೂಮಿಯೇ ತಂದೆ, ಗುರು ಮತ್ತು ಭವಿತವ್ಯ. ಅವರು ಹಿಂದು-ಮುಸ್ಲಿಂರಲ್ಲ, ಕ್ರೈಸ್ತ, ಝರೋಸ್ಟ್ರಿಯನ್, ಭೌದ್ಧರೂ ಅಲ್ಲ, ಅವರೆಲ್ಲ ರಂಗಕಲಾ ಕುಲತಿಲಕರು. ಇಂಥ ಅನುಭವವನ್ನು ಶ್ರೀಯುತ ಎಸ್.ಎಂ. ಖೇಡಗಿಯವರ ಸಾಂಗತ್ಯದಲ್ಲಿ ನಾನು ಯಾವಾಗಲೂ ಅನುಭವಿಸಿದ್ದೇನೆ. ಅವರೊಬ್ಬ ಮುಸಲ್ಮಾನ ಎಂದು ನನಗೆ ಗೊತ್ತಾದುದು ತೀರ ಇತ್ತೀಚಿಗೆ.
ಮುಂದೊಮ್ಮೆ ನಾನೂ ಮುಸಲ್ಮಾನನಾಗಿ ಹುಟ್ಟಿದರೆ ನನಗೆ ಇವರಂತಾಗುವ ಭಾಗ್ಯ ಕೊಡು ಎಂದು ಪ್ರಾರ್ಥಿಸುವ ಮಟ್ಟಿಗೆ ಅವರ ಜೀವನ, ಆದರ್ಶಗಳಿಂದ ಕೂಡಿದೆ.
ಒಂದೊಮ್ಮೆ ಅವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿ, ಇನ್ನೇನು ಹೊರಡಬೇಕು ಖೇಡಗಿಯವರು ನನ್ನನ್ನು ತಮ್ಮ ಮನೆಯ ಅಡುಗೆ ಕೋಣೆಗೆ ಕರೆದೊಯ್ದರು. ಒಳಗೆ ಹೋದರೆ ಪುರಾತನವಾದ ಒಂದು ಹನುಮಂತನ ಮೂರ್ತಿ ಆತನ ಮುಂದೊಂದು ನಂದಾ ದೀಪ. ನನ್ನ ಕೈ ಹಿಡಿದು ಗದ್ಗದಿತರಾಗಿ ಖೇಡಗಿಯವರು ಹೇಳಿದರು – “ನಮ್ಮ ಬಾಳು ಕಾಯ್ದ ದೈವ ಈತ, ಮನೆ ಕಟ್ಟಿಸುವಾಗ ನೆಲದಲ್ಲಿ ಸಿಕ್ಕ”.
ಈಗ ಮಾತು ಹೊರಡದಾಯಿತು. ಬಂದು ಹೊರಕುಳಿತು ಸುಮ್ಮನೆ ಆಲೋಚಿಸುತ್ತ, ಮೇಲೆ ನೋಡಿದರೆ ಮನೆಯ ಗೋಡೆಯ ಮೇಲೆ ಸಾಲು ಸಾಲಾಗಿ ಕನ್ನಡ ರಂಗಭೂಮಿಯ ಎಲ್ಲ ರಂಗ ಜಂಗಮರ ಭಾವಚಿತ್ರಗಳು. ಪೌರಾಣಿಕ ನಾಟಕದ ಪರಿಕರಗಳು, ಅಪ್ರಕಟಿತ ಮ್ಯಾನ್ಯುಸ್ಕ್ರಿಪ್ಟ್ಸ್ಗಳು, ರಂಗಬಾವುಟದ ವಿವರಗಳು ಒಂದೇ, ಎರಡೆ. ‘ಇದು ಮನೆಯಲ್ಲೋ ಅಣ್ಣ, ರಂಗ ಸಂಶೋಧನಾ ಕೇಂದ್ರ.’ ಈ ಮಟ್ಟಿಗೆ ರಂಗವನ್ನು ಅವಗಾಹಿಸಿಕೊಂಡ ಒಬ್ಬ ಕಲಾವಿದ ಖೇಡಗಿಯವರನ್ನು ಹೊರತು ಪಡಿಯಿಸಿ ಮತ್ತೊಬ್ಬರಿಲ್ಲ.
ಪ್ರೀತಿ, ಮಾತು, ಚಿಂತನೆ ಹಾಗೂ ರಂಗಸಂಘಟನೆಯ ಕಾಯ ರೂಪ ನಮ್ಮ ಎಸ್.ಎಂ. ಖೇಡಗಿ. ಚಡಚಣದ ನನ್ನ ‘ಜೋಳಿಗೆ’ಗೆ ಬಂದು ಅತ್ಯಂತ ವಿನಯದಿಂದ 2018 ರಲ್ಲಿ ನಮ್ಮ ‘ಸಾವಿರದ ಶರಣು’ ಸನ್ಮಾನವನ್ನು ಸ್ವೀಕರಿಸಿದ್ದಾರೆ. ಬಿಜಾಪುರ-ಬೆಂಗಳೂರು ಎಲ್ಲಿಯೇ ರಂಗ ಚಿಂತನೆ ನಡೆದರೂ, ಅಲ್ಲಿ ಸಲ್ಲಿರುತ್ತಾರೆ ಖೇಡಗಿ. ಅವರ ಅದಮ್ಯ ಉತ್ಸಾಹ, ಕಾಳಜಿ ಹಾಗೂ ಕನಸುಗಳಿಗೆ ಈ ನೂರು ವರ್ಷಗಳ ಬಾಳು ಬಹಳ ಚಿಕ್ಕದು. ಅವರದು ದೈತ್ಯ ಪ್ರತಿಭೆ. ದೇಶ, ಕಾಲ ಹಾಗೂ ಧರ್ಮಗಳ ಗಡಿಯಿಂದ ಹೊರಬಂದು, ತಾನೇ ತಾನಾದ ವ್ಯಕ್ತಿತ್ವ. ಸಾಮರಸ್ಯ-ಸೌಹಾರ್ಧಗಳ ನಿಲುವು, ಇವರ ನಾಟಕಗಳ ತುಂಬಾ ಜೀವನ ಮೌಲ್ಯಗಳದ್ದೇ ಗೆಲವು - - -
ಹೀಗೆ, ಹೀಗೆ ಎಷ್ಟು ಬರೆದರೂ ಬಿಳಲುಗಳಂತೆ ಮೈ ಚಾಚಿಕೊಳ್ಳುತ್ತಲೇ ಹೋಗುತ್ತದೆ ಅವರ ವ್ಯಕ್ತಿತ್ವ. ಈಗ ನೆಪಕ್ಕೊಂದು ಪೂರ್ಣವಿರಾಮ ಹಾಕಲೇ ಬೇಕಿದೆ, ಹಾಕುತ್ತೇನೆ. ನಮ್ಮ ಕನ್ನಡ ರಂಗ ಸಂಸ್ಕøತಿಯ ಕಬೀರರಂತಿರುವ ಶ್ರೀ ಎಸ್.ಎಂ. ಖೇಡಗಿ ಅವರಿಗೆ ಜಗದ ಬೆಳಕೆಲ್ಲವೂ ದಕ್ಕಲಿ, ಅವರು ಸದಾ ನಮಗೆ ಬೆಳಕಾಗಿರಲಿ ಎಂದು ಹಾರೈಸುತ್ತೇನೆ.