ಕೆಣಕಿ, ಹೆಣ್ಣುಗಳನ್ನು ಬಡಿದೆಬ್ಬಿಸಿ
ಆಧ್ಯಾತ್ಮದ ಸೋಗು ಹಾಕಿದ
ಗಂಡು ಮಾಯೆಗೆ
ಹೆಣ್ಣೇ ಕಾಡುವ ಪರಿಗೆ
‘ಮಾತು’ ಬರೀ ಮೂಕ ಯಾತನೆ
ಇದು ‘ಆಸೆಯೆಂಬ ಶೂಲದ ಮೇಲೆ’ ನಿಂತು, ನಿರ್ಮೋಹದ ಮಹಾ ಸಾಧಕ ಎಂಬ ಅಗ್ಗಡಿಕೆಗೆ
ಪಾತ್ರನಾದ, ಅಲ್ಲಮನಿಗೆ ಶ್ರೀದೇವಿ ಕೆರೆಮನೆ
ಎಂಬ ಕವಯತ್ರಿ ಒಡ್ಡುವ ಸವಾಲು. ಕಾವ್ಯವೆಂಬ ಒಳಗಣ್ಣಿನಿಂದ ಪುರುಷ ಲಿಖಿತ ಚರಿತ್ರೆಯ ಪುಟಗಳನ್ನು, ಅವುಗಳಲ್ಲಿ ವಿಸ್ತಾರಗೊಂಡ ಚಿಲ್ಲರೆತನಗಳನ್ನು
ನಿಭಾಯಿಸುವ ಕ್ರಮ.
ಈ ಅಲ್ಲಮ ಶೂನ್ಯ ಸಿಂಹಾಸನವನ್ನೇರಿ
‘ಶರಣಗಣ ಸಾಮ್ರಾಜ್ಯ’ ಎನ್ನಿಸಿಕೊಂಡದ್ದೂ ಒಂದು ಮಹಾ
ನಾಟಕ, ಈತ ‘ಪ್ರೀತಿಯನ್ನು ಮಾಯೆ ಎಂದವ’. ಎಲ್ಲದಕ್ಕೂ ಅವಳನ್ನು ಹೊಣೆ ಮಾಡಿ
ತನ್ನ ಹೊಣೆಗೇಡಿ ತನಕ್ಕೆ ‘ಶೂನ್ಯ ಪೀಠ’ವೆಂಬ ಸುಳ್ಳು ಸೃಷ್ಟಿಯ ಆಟ ಹೂಡಿ, ಇಹದ ನಗೆಯ ಕುಹಕಕ್ಕಂಜಿ, ಜಂಬದಲ್ಲಿ ಡಮರುಗವ ಒದ್ದು ಒಡೆದು, ‘ಬೆನ್ನು ಹಾಕಿ ಓಡಿ ಹೋದವ’ ಎಂದು ಆಪಾದಿಸಿ, ಅಲ್ಲಮನನ್ನು ಕಟಕಟೆಯಲ್ಲಿ ನಿಲ್ಲಿಸಿದ
ಪರಿಗೊಂದು ಸಾಕ್ಷಿ. ಇದು ಇವಳು ಮಾಡಬಹುದು ಯಾಕೆಂದರೆ ಇವಳು ಶ್ರೀದೇವಿ. ಈಕೆಯ ಎದೆಯ ದನಿಯಾದ ಪಾಲನೆ-ಪೋಷಣೆಗಳಲ್ಲಿ
ಪಲ್ಲವಿಸಿದ ‘ಅಲ್ಲಮ’ ಎಂಬ ಆಧ್ಯಾತ್ಮ ಪುಂಡನನ್ನು, ಅಧಿಕಾರ ವಾಣಿಯನ್ನು ಆಲಿಸುವ ಸಂಸ್ಕøತಿಗೊಳಪಡಿಸುವ ಶಕ್ತಿ ಇರುವುದು
ಹೆಣ್ಣಿಗೆ ಮಾತ್ರ. ಯಾಕೆಂದರೆ, ಎಲ್ಲ ವಾದಿಸಿ-ಸಾಧಿಸಿಯೂ ಉಳಿಯುವ ಸತ್ಯ, ‘ಈ ಜಗತ್ತು ಅಂತಿಮವಾಗಿ ನನ್ನ ಮೊಲೆಯುಣ್ಣುವ
ಕೂಸು’ ಎನ್ನುವ ಅವಳ ಸಾತ್ವಿಕ ವಾದ. ಇದು
ಬರೀ ವಾದವಷ್ಟೇ ಅಲ್ಲ ವಾಸ್ತವವೂ ಕೂಡ. ಶ್ರೀದೇವಿ ಕೆರೆಮನೆ ಈ ಕ್ರಮದಲ್ಲಿ ನಮ್ಮ ಮಧ್ಯದ ಓರ್ವ ವಾಸ್ತವಾದಿ
ಕವಯತ್ರಿ.
ಮೇಲಿನ ವಾದಕ್ಕೆ ಪೂರಕವಾಗಿ ಶ್ರೀದೇವಿಯವರ
ಪದ್ಯದ ಒಂದು ಸಾಲು –
‘ದಾರ ಪೋಣಿಸಿದಷ್ಟು ಸುಲಭವಲ್ಲ ಯಾವುದಕ್ಕೂ ಅಂಟದ ನಿರಾಕಾರಿಯನ್ನು ಅಂತರಂಗಕ್ಕೆಳೆದುಕೊಂಡು
ಸುಖಿಸುವುದು’, ಹೌದು, ಇದು ಒಪ್ಪಲೇಬೇಕಾದ ಮಾತು. The
most discussed animal in the universe is woman
ಎನ್ನಿಸಿಕೊಂಡಾಕೆ,
ಎಲ್ಲವನ್ನೂ ಎದೆಗೆತ್ತಿಕೊಂಡು ದಕ್ಕಿಸಿಕೊಳ್ಳುತ್ತಾಳೆ, ಬದುಕುತ್ತಾಳೆ. ಆದರೆ ನಿರಾಕರಿಸುವ
ನೆಲೆಗೆ ಅವಳು ಹೋಗುವುದಿಲ್ಲ. ಯಾಕೆಂದರೆ ನಿರಾಕರಣೆ ಅವಳ ಅಸ್ತಿತ್ವದಲ್ಲಿಯೇ ಇಲ್ಲ. ಸ್ವೀಕರಿಸಿ, ಸಹಕರಿಸಿ ಅಕ್ಷಯವಾಗುವ ಅವಳು ಅಕ್ಷರಗಳ
ಉದಕಮಂಡಲ.
ಅವಳು ಕಡಲು ಕಾಣದೆಯೂ ಕಡಲಾಗಬಲ್ಲವಳು, ಪ್ರಾಣ ಚೈತನ್ಯವನ್ನೆಲ್ಲ ಉಸುರಿಗೆ
ತುಂಬಿ ಎದೆಯೊಳಗೆ ಬಿಗಿ ಹಿಡಿದವಳು. ಸಲುಹಿ, ಸಾವರಿಸಿ ಜಗವನ್ನು ಮುಟ್ಟಿಯೂ ಮುಟ್ಟದೆಯೂ ಸಾಂತ್ವಾನಿಸಿದವಳು.
ಈ ಸಂದರ್ಭದಲ್ಲಿ ನಮ್ಮ ಸಮಕಾಲೀನ ಲೇಖಕಿ ಕನಕ ಹ.ಮ. ಅವರ ಒಂದು ಪದ್ಯ ಉಲ್ಲೇಖಾರ್ಹ – ‘ಜಗವೆಲ್ಲ ಧಿಕ್ಕರಿಸಿದಾಗ ನಾ ಬಂದು
ನಿನ್ನ ಅಪ್ಪಿಕೊಳ್ಳತ್ತೇನೆ.’ ಇದನ್ನೇ ಶ್ರೀದೇವಿ ‘ಯಾರಿಗೂ ಸೇರದ ಈ ಭೂಮಿ ನಿನಗೂ ಸೇರಿದ್ದಲ್ಲವೆ?’ ಎಂದು ಪ್ರಶ್ನಿಸಿ ಇಡೀ ಸ್ತ್ರೀ
ಕುಲವನ್ನು ಅದರೆಲ್ಲ ಮಿತಿ-ಅಮಿತಿಗಳೊಂದಿಗೆ ಪ್ರಪಂಚ ಒಪ್ಪಿಕೊಳ್ಳುವಂತೆ ಮಾಡುತ್ತಾರೆ. ದಕ್ಕದ್ದನ್ನೂ
ದಕ್ಕಿಸಿಕೊಳ್ಳುವಂತೆ ಮಾಡುವುದೇ ಕಾವ್ಯದ ಶಕ್ತಿ ಎನ್ನುವುದಾದರೆ ಅಂಥ ಕೆಲವು ಸತ್ಯಗಳನ್ನು ಈ ಸಂಕಲನದ
ಮೂಲಕ ಶ್ರೀದೇವಿ ನಮಗೆ ದಕ್ಕಿಸಿದ್ದಾರೆ.
ಕವಯತ್ರಿ ಕೆರೆಮನೆಯವರ ಕಾವ್ಯ
ಸಂಕಲನ ‘ಆಸೆಯೆಂಬ ಶೂಲದ ಮೇಲೆ’ ಈ ತಲೆಮಾರಿನ ಸ್ತ್ರೀ ಪ್ರಜ್ಞೆಯ
ವಿಸ್ತಾರಕ್ಕೊಂದು ಸಾಕ್ಷಿ. ಅವಳು ಭಿನ್ನವಾಗಿದ್ದಾಳೆ ತನ್ನ ನಡಿಗೆಯಲ್ಲಿ, ನೋಟದಲ್ಲಿ ಹಾಗೂ ವೇದ್ಯವಾಗಿಸಿಕೊಳ್ಳುವ
ಸಂಗತಿಗಳಲ್ಲಿ ಎನ್ನುವುದನ್ನು ಜೋರು ಧ್ವನಿಯಲ್ಲಿ ಹೇಳಿದ ಈ ಸಂದರ್ಭದ ಸಂಕಲನವಿದು. ಆದರೆ ಈ ಜೋರು
ಧ್ವನಿಗೆ ಕಾರಣನಾದ ಆ ಆತ ಯಾರು? ಇಲ್ಲಿ ಪ್ರಶ್ನೆ, ಉತ್ತರ, ಅಹಂಕಾರ, ಆಚಾರ, ಸಂಪ್ರದಾಯ, ಸಂಸ್ಕøತಿಗೆ ಸಂವಾದಿಯಾಗಿ ನಿಲ್ಲುವ ಈ
ಅಲ್ಲಮ ಯಾರು? ಇವನು ಅವಳೊಳಗಿನವನೊ? ಅವಳಾಚೆಯವನೊ? ಇಹದವನೊ? ಪರದವನೊ? ಮಾತು ಸೂತಕದವನೊ? ಆಕಾರದವನೊ, ನಿರಾಕಾರದವನೊ? ಯಾವನು ಅವನು? ಶ್ರೀದೇವಿಯವರ ಈ ಕವಿತೆ ಅವನ ಕಟ್ಟಿಡುವ
ಯತ್ನವೊ? ಬಿಚ್ಚಿಡುವ ಬಯಕೆಯೊ? ಹೀಗೆ ಇಡೀ ಲೋಕವೇ ಕರೋನಾದಿಂದ
ಬಳಲಿ ಮೃತ್ಯು ಎಂಬ ಕತ್ತಲೆಗೆ ಜಾರಿದ ಈ ವೇಳೆಯಲ್ಲಿ ಕಾಣಲಾರದವನ, ಕಾಣಬಾರದವನ ಬೆನ್ನು ಹತ್ತಿಸಿ
ಬಿಟ್ಟಿದ್ದು ಶ್ರೀದೇವಿಯವರ ಕಾವ್ಯ.
ಇಂದಿಗೆ ಹತ್ತೊಂಬತ್ತು ವರ್ಷಗಳ
ಹಿಂದೆ, ಅಂದರೆ 2000 ದಲ್ಲಿ ಮೈಸೂರಿನ ಜಗದ್ಗುರು ಶ್ರೀ
ಶಿವರಾತ್ರೀಶ್ವರ ಗ್ರಂಥಮಾಲೆಯಿಂದ ಅಲ್ಲಮನ ಕುರಿತು 1116 ಪುಟಗಳ ಬೃಹತ್ ಗ್ರಂಥವೊಂದು ಪ್ರಕಟವಾಯಿತು. ಗ್ರಂಥದ ಆರಂಭದಲ್ಲಿ
ಯಾರು ಈ ಅಲ್ಲಮ? ಎಂಬ ಪ್ರಶ್ನೆಯನ್ನು ಮುಂದಿರಿಸಿಕೊಂಡು
ಇಪ್ಪತ್ತೆಂಟು ಪುಟಗಳ ಚರ್ಚೆಯನ್ನು ಮಾಡಲಾಗಿದೆ. ಅದರ ಇಡಿಯಾದ ಚರ್ಚೆ ಇಲ್ಲಿ ಪ್ರಸ್ತುತವೆನಿಸಿದ್ದರೂ
ಕೂಡ ಅದರಿಂದ ಆಯ್ದ ಶ್ರೀ ಸಿದ್ದೇಶ್ವರ ಶ್ರೀಗಳ ‘ಅಲ್ಲಮನ’ ಕುರಿತ ವ್ಯಾಖ್ಯಾನದ ಕೆಲವು ಸಾಲುಗಳನ್ನು
ಮಾತ್ರ ನಾನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ –
‘ಅಲ್ಲಮ’ ಶರಣರ ಮಧ್ಯ ಜ್ಞಾನ-ಚಂದ್ರಮ, ಮಾಯೆ ಮುಟ್ಟದ ಮೈ; ಮೋಹ ಸೋಂಕದ ಹೃದಯ; ಮರವೆಯನರಿಯದ ಮತಿ! ‘ದೇಹ ದೇವಾಲಯ; ಜೀವ ದೇವ’! ಅವನು ಸಾಧಿಸದ ಯೋಗವಿಲ್ಲ. ಹಠದಲ್ಲಿ
ಹಠಯೋಗಿ; ಮಂತ್ರದಲ್ಲಿ ಪ್ರಣವಸಿದ್ದ; ಧ್ಯಾನದಲಿ ಅನಿಮಿಷ; ಲಿಂಗ-ಮಾರ್ಗದಲಿ ಶಿವಯೋಗಿ! ಕಣ್ಣಿನಲಿ
ಕಾರುಣ್ಯ; ನಡೆಯಲ್ಲಿ ನಿಶ್ಚಿಂತತೆ; ಪ್ರಸನ್ನತೆಯೇ ಮೂರ್ತಿಗೊಂಡ ಮಹಂತ.
ದೇಶ ದೇಶಾಂತರ ಸುತ್ತಿದ; ಜನಮನದ ಕಾಳಿಕೆ ಕಳೆದ; ಸಾಧಕರಿಗೆ ಸತ್ಯದ ಸುಮಾರ್ಗ ತೋರಿದ; ತಪಸ್ವಿಗಳ ಮದ-ಮಂಜ ಚದುರಿಸಿದ.
ಜ್ಞಾನದ ಮಹಿಮೆಯ ಎಲ್ಲೆಲ್ಲೂ ಮೆರೆದ. ಅವನ ಹಿರಿಮೆಯನು ಶರಣರ ಮಾತುಗಳಲ್ಲಿಯೇ ಕಾಣಬೇಕು.
ಅವನು ‘ಘನಕ್ಕೆ ಘನಮಹಿಮ’, ‘ಭುವನ ಹದಿನಾಲ್ಕರೊಳಗೆ ಪರಿಪೂರ್ಣ
ನಿರಂಜನ ಜ್ಯೋತಿ’. ‘ಅನುಪಮ ಚರಿತ’. ‘ಬಟ್ಟ ಬಯಲು ಗಟ್ಟಿಗೊಂಡ ನಿಲುವು’. ‘ಮಾತಿಂಗೆ ಅಳವಡದ ಮಹಿಮೆ’. ‘ಸ್ಥೂಲ ಕಂಥೆ. ಸೂಕ್ಷ್ಮ ಟೊಪ್ಪರ.
ಸತ್ಯ ದಂಡ. ಶಾಂತಿ ಭಸಿತ. ಸುಚಿತ್ತ ಮಣಿ. ತತ್ತ್ವ ಕರ್ಪುರ. ವೈರಾಗ್ಯ ಹಾವುಗೆ. ದೃಢಮನವು ಕೌಪೀನ.
ಆಚಾರವೇ ಕಂಕಣ. ಕ್ಷಮೆ ದಯವೇ ಕರ್ಣಕುಂಡಲ.’ ಜಗತ್ಪಾವನ ಮೂರ್ತಿ; ನಿಜಸುಖದ ಇರವು!
ಇಂಥ ಅಲ್ಲಮನ ನೆಲೆ ಹುಡುಕಲು ಹೊರಡುವುದು
ಎಂದರೆ, ‘ಓಗರವ ತಂದು ಮುಂದಿಟ್ಟುಕೊಂಡು, ಭೋಜನವನ್ನೇ ಮರೆಯುವವರ’ ನೆಲೆಗೆ ಹೋಗುವುದು ಎಂದರ್ಥ. ಎಲ್ಲ
ಇದ್ದೂ ಕಳೆದುಕೊಂಡವರ ಕಳವಳವನ್ನು ಕರುಳಿಗೆ ಹಚ್ಚಿಸಿಕೊಳ್ಳುವುದು ಎನ್ನುವಂತೆ. ಇದು ಸುಲಭದ ಮಾತಲ್ಲ
ಅಲ್ಲವೆ? ಇದನ್ನು ಇಲ್ಲಿ ಸಾಧಿಸಿದ್ದಾರೆ
ಕೆರೆಮನೆ. ಅಲ್ಲಮನ ಮಾತುಗಳಲ್ಲಿಯೇ ಹೇಳುವುದಾದರೆ
‘ಕಡಿಯದಾ ಚೇಳಿಂಗೆ, ಏರದಾ ವಿಷಕ್ಕೆ, ಜಗವೇ ಹೊರಳಾಡಿದಂತೆ’ ಅಲ್ಲಮನ ಗುಲ್ಲನ್ನು ತನು-ಮನಗಳ
ಓಣಿಓಣಿಗಳಲ್ಲಿ ಎಬ್ಬಿಸಿಕೊಂಡವಳು ಈ ಕವಯತ್ರಿ. ಈಗ ಅವನು ಅವಳ ವರ್ತಮಾನದ ಎಲ್ಲ ಪ್ರಶ್ನೆಗಳಿಗೆ ಉತ್ತರ, ಹಾಗೆಯೇ ಎಲ್ಲ ಉತ್ತರಗಳಿಗೆ ಪ್ರಶ್ನೆಯೂ
ಕೂಡಾ.
ನಾನೂ ಬರೆಯುವ ಕನ್ನಡ ಕಾವ್ಯದ
ಈ ಘಟ್ಟದಲ್ಲಿ ನಮಗಿಂತಲೂ ಭಿನ್ನವಾಗಿ ಆಲೋಚಿಸುವ, ಬರೆಯುವ, ಹೊಸ ಬರಹಕ್ಕೆ ಪುಟುವು ನೀಡುವ ಲೇಖಕಿಯರ ಮಹಾ ದಂಡೊಂದು ಇದೆ
ಎನ್ನವುದು ಕನ್ನಡ ಸಾಹಿತ್ಯ ಸಮ್ರಾಜ್ಯದ ಆರೋಗ್ಯಕರ ಲಕ್ಷಣ. ಅಕ್ಕ, ಅಲ್ಲಮ, ಮೀರಾ, ರಾಬಿಯಾ, ಅಮೃತಾ, ಮಹಾತ್ಮಾ, ಮಲಾಲಾ ಎಂದೆಲ್ಲ ಅವರು ರಚಿಸಿದ
ಕಾವ್ಯ ಒಂದು ಕ್ಷಣ ಚಕಿತಗೊಳಿಸುವುದಲ್ಲದೆ ಅವರೆಲ್ಲರ ಕುರಿತು ಅಭಿಮಾನ ಪಡುವಂತೆಯೂ ಮಾಡಿದೆ. ಸ. ಉಷಾ, ವಿಜಯಾ ಸುಬ್ಬರಾಜ, ಹೇಮಲತಾ ಮೂರ್ತಿ, ಲೀಲಾ ಕಲಕೋಟಿ, ಪ್ರತಿಭಾ ನಂದಕುಮಾರ, ಹೇಮಾ ಮತ್ತು ಮಾಲತಿ ಪಟ್ಟಣಶೆಟ್ಟಿ, ಲಲಿತಾ ನಾಯಕ, ಲಲಿತಾ ಸಿದ್ದಬಸವಯ್ಯಾ, ಪ್ರೇಮಾ ತಹಶೀಲದಾರ, ಸರೋಜನಿ ಚಾವಲಾರ, ಚ. ಸರ್ವಮಂಗಳಾ, ಸುವರ್ಣ ಕಾಡನಕುಪ್ಪ, ಮಲ್ಲಿಕಾ ಘಂಟಿ, ಜ.ನಾ. ತೇಜಶ್ರೀ, ರೂಪಾ ಹಾಸನ, ಸವಿತಾ ನಾಗಭೂಷಣ, ಎಂ.ಆರ್. ಕಮಲ, ಮಾಧವಿ ಭಂಡಾರಿ, ಮುಕ್ತಾಯಕ್ಕ, ವೈದೇಹಿ ಇವರೆಲ್ಲರ ಮುಂದುವರಿಕೆಯಾಗಿ
ಶ್ರೀದೇವಿ ಕೆರೆಮನೆ,
ಕನ್ನಡ ಕಾವ್ಯ ಸಮೃದ್ಧಿಯ ಅಪರೂಪದ ಸಾಕ್ಷಿಗಳು.
ಇವರೆಲ್ಲರೂ ಮಹಿಳೆಯರು ಎನ್ನುವುದು
ಹುಟ್ಟಿಗಂಟಿದ ಬಣ್ಣ. ಅದು ಆತ್ಮವನ್ನು ಆವರಿಸಿಕೊಳ್ಳಬೇಕಿಲ್ಲ. ‘ಲಿಂಗಭಿನ್ನತೆ ಬರೀ ಜೀವ ಶಾಸ್ತ್ರಕ್ಕೆ
ಸಂಬಂಧಪಟ್ಟ ವಿಷಯವಾಗಿರದೆ, ಅದು ಸ್ತ್ರೀ ಪುರುಷರ ಚಿಂತನಾ ಕ್ರಮದಲ್ಲಿ ಅಡಕವಾಗಿರುತ್ತದೆ ಮತ್ತು ಬದುಕಿನ
ಎಲ್ಲ ವಿದ್ಯಮಾನಗಳಲ್ಲಿ ಕಂಡುಬರುತ್ತದೆ. ಸ್ತ್ರೀಯರ ಕೃತಿಗಳನ್ನು ಸ್ತ್ರೀಯ ರೂಪಗಳೆಂದು ಭಾವಿಸಲಾಗುತ್ತದೆ.
ಅಲ್ಲಿ ಸ್ತ್ರೀಯ ರೂಪವನ್ನಲ್ಲದೆ ಮತ್ತೇನನ್ನೂ ಕಾಣುವುದಿಲ್ಲ. ಇದು ತಪ್ಪು’ ಎನ್ನುವ ಆಧುನಿಕ ಚಿಂತಕಿ ಮೇರಿ
ಎಲ್ಮನ್ ‘ಆಸೆಯೆಂಬ ಶೂಲದ ಮೇಲೆ’ ಕಾವ್ಯ ಸಂಕಲನವನ್ನು ಓದುವ ಎಲ್ಲ
ಸಮಯದಲ್ಲಿ ನಮ್ಮನ್ನು ಕಾಡುತ್ತಿರುತ್ತಾಳೆ. ಶ್ರೀದೇವಿಯವರ ಈ ಸಂಕಲನದ ಪ್ರಮುಖ ರಚನೆಗಳಾದ ‘ಬಕುಳದ ಕಣ್ಣಲ್ಲಿ’, ‘ಅಂಗಳದಲ್ಲಿನ ಚೆಂಡು’, ‘ಬಯಲಾದವಳಿಗಾಗಿ’, ‘ಭಸ್ಮ ತೀರ್ಥ’, ‘ಕೊಟ್ಟ ಕುದುರೆಯ ಏರಲಾಗದವನು’, ‘ಇಷ್ಟಲಿಂಗದ ಒಳಗೆ’ ಹಾಗೂ ‘ಅಸಂಗತವನ್ನು ಅರಸುತ್ತ’ ಕವಿತೆಗಳು ಸ್ತ್ರೀವಾದಿ ಮಿತಿಯಾಚೆ
ವ್ಯಾಪಕವಾದ, ಅವಿಚ್ಚಿನ್ ಹಾಗೂ ಅನಂತವಾದ ಪ್ರೀತಿಯನ್ನು
ಕುರಿತು ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತವೆ. ಈಗ ನಾವು ಬಂದು ಸೇರಿದ ದಡ ಬರೀ ಸ್ತ್ರೀ ಅಥವಾ ಪುರುಷ
ಎಂಬ ಅಹಂಕಾರದ ಅಪೂರ್ಣಲೋಕಗಳಲ್ಲ, ಕವಯತ್ರಿ ಶ್ರೀದೇವಿ ಬರೆಯುವಂತೆ –
ಪ್ರೀತಿ ಎಂದರೆ ಬರೀ ಅಂಗಮರ್ಧನ
ಎಂದಷ್ಟೇ ತಿಳಿದುಕೊಂಡವರಿಂದ
ಆತನೂ ಹೊರತಾಗಿಲ್ಲ
ಇವಳೀಗ ತಗ್ಗಿಸಿದ ತಲೆ ಎತ್ತುವ
ಧೈರ್ಯ ತೋರುತ್ತಿಲ್ಲ.
ಕಾವ್ಯ ನಮ್ಮೊಳಗೊಂದು ಶೋಧ. ಅರಿವಿನ
ಪರಿಗಳಿಗೆ ಇಂಬಾಗುವುದೇ ಅದರ ಗುರಿ ಎಂದು ನಾವು ಒಪ್ಪಿಕೊಳ್ಳುವುದಾದರೆ ಶ್ರೀದೇವಿ ಕೆರೆಮನೆಯವರ ಈ
ಸಂಕಲನ ಓದುಗನಿಗೆ ಕೊಡುವ ಆನಂದದ ಅನುಭವವೇ ಭಿನ್ನ. ಆತ ಈ ಸಂಕಲನದ ಓದಿನ ನಂತರ ಬದಲಾಗುವುದಿಲ್ಲ, ಪರಿವರ್ತನಗೊಳ್ಳುತ್ತಾನೆ.
ಭಿನ್ನ ಭಿನ್ನ ಸಂಗತಿಗಳು ಜಗತ್ತಿನ
ಬೇರೆ ಬೇರೆ ಭಾಷೆ ಮತ್ತು ಸಮುದಾಯದ ಕವಿಗಳನ್ನು ಕಾಡಿವೆ. ಸಮುದ್ರ ಗೀತೆಗಳ ದೊಡ್ಡ ಪರಂಪರೆ ಯುರೋಪಿಯನ್
ಕಾವ್ಯದಲ್ಲಿದೆ. ಕಥನ ಈ ಕಾವ್ಯದ ಮಹತ್ವದ ಲಕ್ಷಣ. ಭಾರತೀಯ ಕಾವ್ಯದಲ್ಲಿಯೂ ಅದು ಬಂದಿತಾದರೂ ನಮ್ಮ
ಕಾವ್ಯದಲ್ಲಿ ಕಡಲು ಕೇವಲ ಒಂದು ಮೆಟಾಫರ್ ಆಗಿಯೇ ಉಳಿಯಿತು. ಕನ್ನಡದ ಪಾಲಿಗೂ ಅದು ಸತ್ಯ. ಈ ಮಿತಿಯನ್ನು
ಮೀರಿ ಕಾವ್ಯ ರಚಿಸಿದ ಸು. ರಂ. ಎಕ್ಕುಂಡಿಯಂಥ ಕವಿಗಳಿದ್ದಾರೆ. ಈ ಕಥನ ಗುಣವನ್ನು ರೂಢಿಸಿಕೊಂಡ ಪ್ರತಿಭೆ
ಶ್ರೀದೇವಿ ಕೆರೆಮನೆ. ಬಹುತೇಕ ಕರಾವಳಿ ತೀರದ ಸಹಜ ಧ್ವನಿಯಾಗಿಯೇ ಇದು ಬೆಳವಣಿಗೆಯಾಗಿದೆ. ಇದರಿಂದ
ಹೊರತಾಗಿಲ್ಲ ಶ್ರೀದೇವಿ ಕೆರೆಮನೆ ಕೂಡ. ಈ ಸಂಕಲನದ ಬಹುಪಾಲು ಕವಿತೆಗಳು ಒಂದಿಲ್ಲಾ ಒಂದು ಕಥೆಯ್ನು
ಹೇಳುತ್ತವೆ. ಈ ಕಥೆಗಳು ಘಟನಾತ್ಮಕ ವಿವರಣೆಗಳನ್ನು ನೀಡುವಂಥವಲ್ಲ, ಭಾವಲೋಕದ ಅಮೂರ್ತ ವಿಷಯಗಳನ್ನು
ಅಲ್ಲಮನಂತೆ ಕಟ್ಟಿ ಕೊಡುವ ಅದ್ಭುತ ಪ್ರಯತ್ನಗಳಾಗಿವೆ. ಇವು ಎದೆ ಹಾಡುವ ಕವಿತೆಗಳಷ್ಟೇ ಅಲ್ಲ, ನಮ್ಮ ಪ್ರಜ್ಞೆಯನ್ನು ಕಾಡುವ ಕವಿತೆಗಳೂ
ಕೂಡ. ಕಾವ್ಯದ ಗೇಯತೆಯೊಂದಿಗೆ ಕಥನತಂತ್ರವನ್ನೂ ರೂಢಿಸಿಕೊಂಡ ಶ್ರೀದೇವಿ ಹೆಣ್ಣೆಂಬ ಒಡಲ ಕಡಲದ ತಳಮಳವನ್ನು
ತಮ್ಮ ಕಾವ್ಯದ ಮೂಲಕ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.
ಪ್ರಸ್ತುತ ಶ್ರೀದೇವಿಯವರ ಈ ಕೃತಿ
ಒಂದು ಕಾವ್ಯ ಸಂಕಲನ ಎನ್ನುವುದಕ್ಕಿಂತ ‘ಪ್ರಶ್ನಾವಳಿ’ ಎನ್ನುವುದು ಹೆಚ್ಚು ಸೂಕ್ತವಾದೀತು.
ಮಾಯೆ ಎಂದರೆ ಯಾರು? ಯಾವುದು? ಪ್ರೀತಿ ಎಂದರೇನು? ಬಯಲೆಂದರೇನು? ಭಿಕ್ಷೆ ನೀಡಬಹುದೆ? ನೀಡಬಹುದಾದುದೆ? ದಾರಿಯ ಗುರಿಯೇನು? ಆಸೆ, ಬಯಕೆಗಳ ಮರ್ಮವೇನು? ಹೀಗೆ ಹಲವಾರು ಪ್ರಶ್ನೆಗಳು ಇಲ್ಲಿ
ಕವಿತೆಗಳಾಗಿ ಅರಳಿವೆ. ಒಂದಂತೂ ಸತ್ಯ, ಕವಿತೆಯೊ, ಕುಂಚವೊ ಪ್ರಶ್ನೆಗೆ ಆಸ್ಪದವೀಯದ ಯಾವುದೇ ಇರಲಿ, ಅದು ಅರ್ಥಹೀನ.
ಪ್ರಶ್ನೆ ಲೋಕ ಸೃಷ್ಠಿ ಹಾಗೂ ದೃಷ್ಠಿಗಳ
ಪರಿಷ್ಕರಿಸುವ ಕುಲುಮೆ ಇದ್ದಂತೆ. ಶ್ರೀದೇವಿಯವರು ಈ ಕುಲುಮೆಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.
ಅವರ ಒಂದು ಪ್ರಶ್ನೆ,
ಈ ಹೆಣ್ಣೆಂಬ ಹೆಣ್ಣು ಕೇಳಿದ್ದಾದರೂ ಏನು? ತರಿದ ಶಿರವೆ? ಹೆಬ್ಬೆರಳೆ? ಹುಲಿಯ ಬಾಲ, ಶಾರ್ದೂಲದ ಹಲ್ಲು, ಸಿಂಹದ ಕೇಸರವೆ? ಯಾವುದೂ ಅಲ್ಲ . . . . .
ಎದೆಯ ಮೂಲೆಯೊಳಗೆ
ಒರತೆಯಾಗಿ ಹರಿಯುವ
ಬತ್ತದ ಝರಿಯಂಥ ಪ್ರೀತಿ
ಬರಡು ಹಾದಿಯಲಿ
ಕಿರು ಬೆರಳು ಹಿಡಿದು
ಗುರಿ ತಲುಪಿಸಬಲ್ಲ ನಂಬಿಕೆ
ಕಣ್ಣೊಳಗೆ ಎಂದೂ ಮೂಡದ ಅಶಂಕೆ
ಏನೇ ಆದರೂ ನಿಭಾಯಿಸಬಲ್ಲ
ಚಿಕ್ಕದೊಂದು ಮುಗುಳ್ನಗೆ,
ಅಷ್ಟೇ, ಅಷ್ಟೇ ಅವಳ ಅನುರೋಧ ಹಾಗೂ ಬೇಡಿಕೆಗಳು
ಆದರೆ, ಇಷ್ಟಕ್ಕೆ ಸಾಮ್ರಾಜ್ಯ ಕಳೆದುಕೊಳ್ಳುವವರಂತೆ
ಏಕೆ ಬೆಚ್ಚಿ ಬೀಳುತ್ತದೆ ಲೋಕ? ಇದು ಶ್ರೀದೇವಿಯ ಕಾವ್ಯ ಒಡ್ಡುವ ಪ್ರಶ್ನೆ. ಇದೊಂದು ಸುಂದರ ಚಿಂತನೆಯೂ
ಕೂಡಾ. ಅಂತೆಯೆ ಸಿಸಿರೊ ಒಂದು ಮಾತನ್ನು ಹೇಳಿದ – I have never yet known
a poet who did not think himself the best. ಕಾವ್ಯದ ಜೀವಾಳವೇ ಚಿಂತನೆ. ಸ್ವಯಂ
ಸುಂದರ ಚಿಂತಕನಲ್ಲದ ವ್ಯಕ್ತಿ ಪ್ರಪಂಚ ಸುಂದರಗೊಳಿಸುವ ಚಿಂತನೆಯನ್ನು ಮಾಡಲು ಸಾಧ್ಯವಿಲ್ಲ ಎಂಬುದು
ಅವನ ವಾದ. ಶ್ರೀದೇವಿಯೂ ಇದನ್ನೇ ಹೇಳುತ್ತಾರೆ –
ತನುವ ನೋವಿಗೆ ಮುಲಾಮು ಲೇಪಿಸಬಹುದು
ಬಯಸಿ ನೋಯುವ ಮನಕೆ
ಪ್ರೀತಿಯಲ್ಲದೇ ಬೇರೆನಿದೆ ಔಷದ?
ಹಾಗೆಯೇ ಚಿಂತನೆಯಲ್ಲದೆ ಬೇರೆನಿದೆ
ದಾರಿ, ಅಲ್ಲವೆ? ಬಯಲಾಗುವ ಮಹಿಮೆಯ, ಮಾತಿಲ್ಲದೆ ಆಚರಣೆಗೆ ತಂದವಳು
ಮಹಿಳೆ, ಹೀಗಾಗಿ ಅವಳೇ ಜಗತ್ತಿಗೆ ಹೊಸ
ಚಿಂತನೆಯ ಸಮರ್ಥ ದಾರಿಯೂ ಕೂಡಾ. ಶ್ರೀದೇವಿಯವರ ಈ ಸಂಕಲನದ ಪ್ರತಿಯೊಂದು ಕವಿತೆಯೂ ಈ ಸಾಧ್ಯತೆಯನ್ನು
ಸಮರ್ಥಿಸುತ್ತವೆ.
ರೋಮ್ಯಾಂಟಿಕ್ ಕಾವ್ಯದ ಅಪರೂಪದ
ಕವಿ ಶೆಲ್ಲಿ ಕಾವ್ಯವನ್ನು the record of the best and happiest
moment of the happiest and best minds ಎಂದಿದ್ದಾರೆ. ಆದರೆ ಇದು ಕವಿ
ಕಾವ್ಯದ ತೀರ ಪ್ರಾಥಮಿಕ ನಿರೀಕ್ಷೆಗಳಲ್ಲಿ ಒಂದು ಎನಿಸುತ್ತದೆ. ಈ ನೆಲೆಯ ಅನೇಕ ಕವಿತೆಗಳನ್ನೂ ಶ್ರೀದೇವಿಯವರ
ಈ ಸಂಕಲನದಲ್ಲಿ ಸಿಗುತ್ತವೆ. ಆದರೆ ಇದರ ಮುಂದಿನ ಬೆಳವಣಿಗೆ A
poet is the painter of the soul. ಪ್ರಸ್ತುತ ಸಂಕಲನದಲ್ಲಿ ಆತ್ಮದ ಚಿತ್ತಾರಕ್ಕೆ ಕನ್ನಡಿ ಹಿಡಿದ
ಅನೇಕ ಕವಿತೆಗಳೂ ಕೂಡ ಇವೆ. ವ್ಯಕ್ತಿ ಸಹಜವಾದ ಪ್ರಶ್ನೆಗಳಿಂದ ಪ್ರಾರಂಭವಾಗಿ ಸಮಷ್ಠಿ ವ್ಯಾಪ್ತಿಯ
ಹಲವಾರು ಸಂಗತಿಗಳಿಗೆ ದಾರಿ ಮಾಡಿಕೊಡುವ ಈ ಕಾವ್ಯ ಸಂಕಲನದಲ್ಲಿ ಮಧುರಚೆನ್ನ, ಶರೀಪ, ವೀಣಾ ಬನ್ನಂಜೆ ಹಾಗೂ ನಮ್ಮ ಜನಪದ
ಅನುಭಾವಿಗಳ ಮಹಾ ಪಡೆಯೇ ಹಾಯ್ದು ಹೋಗುತ್ತದೆ, ಗಝಲ್‍ನಿಂದ ಭಾವಗೀತಾತ್ಮಕ ರಚನಾ ರೀತಿಯೂ ಕಾಣಸಿಗುತ್ತದೆ, ಪ್ರೇಮ ಕಾವ್ಯದಿಂದ ಸಖ್ಯಯೋಗದವರೆಗಿನ
ವಿಶ್ಲೇಷಣೆಯೂ ನಡೆಯುತ್ತದೆ.
ನಾನು ಈ ಕವಿತೆಗಳೊಳಗಿನ ಗಣಿಯ
ನಾದ, ಗವಿಯ ಆಳ, ಬಯಲು ವಿಸ್ತಾರಗಳಿಗೆ ಬೆರಗಾಗಿದ್ದೇನೆ, ಓದಿ ಸುಖಿಸಿದ್ದೇನೆ, ಓದಿಸಿ ಸಂಭ್ರಮಿಸಿದ್ದೇನೆ. ಕಾವ್ಯ
ಎಂದೂ ವೈಯಕ್ತಿಕವಾದುದಲ್ಲ, ಹಾಗೆ ನೋಡಿದರೆ ಕಾವ್ಯಕ್ಕೆ ವೈಯಕ್ತಿಕತೆ ಎನ್ನುವುದೇ ಇಲ್ಲ, ಅದು ಅದರ ಹುಟ್ಟಿನ ಅನಿವಾರ್ಯವಷ್ಟೆ, ವಿಸ್ತಾರದ ಮಿತಿಯಲ್ಲ.
ಹೀಗೆ ಬಯಲಂತೆ, ಬಾಳಂತೆ, ಕಡಲಂತೆ ವಿಸ್ತಾರಗೊಳ್ಳುತ್ತಿರುವ
ಶ್ರೀದೇವಿಯವರ ಕಾವ್ಯ,
ಮುಂದೆಯೂ ಹೀಗೆಯೆ ನವನವೋನ್ಮೆಷಶಾಲಿನಿಯಾಗಿ ಬೆಳೆಯುತ್ತಿರಲಿ, ಆ ಬೆಳವಣಿಗೆಯ ಬೆಳಗು ಕನ್ನಡ ಕಾವ್ಯ
ರಸಿಕರ ಹೆಮ್ಮೆಯಾಗಲಿ ಎಂದು ಆಶಿಸುತ್ತೇನೆ.