ಬರೆಯಬಾರದು, ಬರೆಯಿಸಲ್ಪಡಬೇಕು. ಜೀವಕೋಟಿ, ಹಂಬಲದ ಹಲವು ಹಾದಿಗಳ ಮೂಲಕ ಬೆಳಕಾಗಿ
ನಮ್ಮೊಳಗಿಳಿದು, ಬೆರೆತು, ಸ್ಥಿತಿಸಿ, ಮತ್ತೆ ಮಾಗಿದ ಹೊತ್ತಿಗೆ ಹೊರಬರಲು
ನಮ್ಮನ್ನು ಸಾಧನವಾಗಿಸಿಕೊಳ್ಳಬೇಕು. ನಮ್ಮಿಂದ ನಡೆಯುವ ರಚನಾ ಕಾರ್ಯಗಳಿಗೆ ನಾವು ಬರೀ ವಾಹಕರಾಗಬೇಕು, ಸಾಕ್ಷಿಯಾಗಬೇಕಷ್ಟೆ. ಅದು ಘಟಿಸಬೇಕು
ಪ್ರೀತಿಯಂತೆ. ಅಂಥ ಘಟನೆಗಳು, ಕಾಲ ಕಾಡುವ ಕೃತಿ-ಕಾರ್ಯಗಳಾಗಿ, ಸಮಾಜಕ್ಕೆ ಆದರ್ಶಗಳಾಗಿ ಉಳಿಯುತ್ತವೆ.
ಹೀಗೆ ಉಳಿಯುವ ಕಾರ್ಯಗಳು ನಮ್ಮಿಂದ
ನಿರೀಕ್ಷಿಸುವುದು ನಿಷ್ಠೆಯನ್ನು. ಸಂಪೂರ್ಣ ನಿಷ್ಠೆಯನ್ನು. ಸಾಹಿತ್ಯದ ಎಲ್ಲ ಮೇರು ರಚನೆಗಳ ಹಿಂದೆ
ಇಂಥ ನಿಷ್ಠೆ ಕಾರ್ಯ ಮಾಡಿದೆ. ಅಂತೆಯೇ The
foundation of all good and lasting work in literature is entire sincerity to
oneself
ಎಂದು ಹೇಳುವುದು. ಕೊನೆ ಬಾಳುವ ಕಲಾಕೃತಿಯ ಮುಖ್ಯ ಆಧಾರ ನಿಷ್ಠೆ. ಅದು ಬರೆದುದಲ್ಲ, ಬರೆಯಿಸಲ್ಪಟ್ಟದ್ದು.
ಈ ವಾದವನ್ನು ನಾನು ಯಾವುದೇ ಸಾಹಿತ್ಯವಾದಗಳನ್ನು
ಮುಂದಿರಿಸಿಕೊಂಡು ಮಂಡಿಸುತ್ತಿಲ್ಲ. ಬದಲಾಗಿ ಬರಹದ ದೀರ್ಘ ಪಯಣದ ನನ್ನ ಅನುಭವಗಳನ್ನು ಮುಂದಿರಿಸಿಕೊಂಡು
ವಾದಿಸುತ್ತಿದ್ದೇನೆ. ಈ ಅರ್ಥದಲ್ಲಿ ನನ್ನ ಬಹುಪಾಲು ಕೃತಿಗಳು ಬರೆದವುಗಳಲ್ಲ, ಬರೆಯಿಸಲ್ಪಟ್ಟವುಗಳು, ಈ ಪ್ರಸ್ತುತ ಕೃತಿಯೂ ಸೇರಿಕೊಂಡು.
ಜಾನ್ ಕೀಟ್ಸ್, ಕಳೆದ ಹದಿನೇಳು ವರ್ಷಗಳಿಂದ ಕಾವ್ಯ ಚಿಂತನೆಯ ನನ್ನ ಅಭಿವ್ಯಕ್ತಿಗಳಲ್ಲಿ ವಾದ, ಉದಾಹರಣೆ, ರೂಪಕ, ಸಿದ್ಧಾಂತವಾಗಿ ಪದೇ ಪದೇ ಉಲ್ಲೇಖಗೊಳುತ್ತಲೇ ಬಂದಿದ್ದಾನೆ. 2016 ರಲ್ಲಿ ಅಧಿಕೃತವಾಗಿ ಅವನ ಜೀವನವನ್ನು ಆಧರಿಸಿ ‘ನೀರ ಮೇಲೆ ನೆನಪ ಬರೆದು’ ಎಂಬ 176 ಪುಟಗಳ ಕೃತಿಯನ್ನು, 2017 ರಲ್ಲಿ ಪ್ರಾಯೋಗಿಕವಾಗಿ ಮಾರುಕಟ್ಟೆಗೆ ಬಿಟ್ಟೆ. ಅತ್ಯುತ್ತಮ ಪ್ರತಿಕ್ರಿಯೆ ದೊರೆತ ಪರಿಣಾಮ, ತಕ್ಷಣವೇ ಅದರ ಎರಡನೇ ಭಾಗದ ರಚನೆಯಲ್ಲಿ ದಿನಾಂಕ 06.04.2019 ರಂದು ತೊಡಗಿಕೊಂಡೆ. ಆದರೆ, ಈ ಮಧ್ಯದಲ್ಲಿ ಯಾಜಿ ದಂಪತಿಗಳ ಅನುರೋಧದ ಮೇರೆಗೆ ಭಾರತದ ಬಾವುಟದ ಚರಿತ್ರೆಯನ್ನು ಆದರಿಸಿದ ‘ಜಗದ್ವಂದ್ಯ ಭಾರತಂ’ ಕಾದಂಬರಿ ರಚನೆಯಲ್ಲಿ ನಾನು ತೊಡಗಿಕೊಂಡದ್ದರಿಂದ ಎರಡನೆ ಹಂತದ ಕೀಟ್ಸ್ ಹಾಗೆಯೇ ಅರ್ಧಕ್ಕೆ ಉಳಿದುಕೊಂಡ.
ಜಾನ್ ಕೀಟ್ಸ್, ಕಳೆದ ಹದಿನೇಳು ವರ್ಷಗಳಿಂದ ಕಾವ್ಯ ಚಿಂತನೆಯ ನನ್ನ ಅಭಿವ್ಯಕ್ತಿಗಳಲ್ಲಿ ವಾದ, ಉದಾಹರಣೆ, ರೂಪಕ, ಸಿದ್ಧಾಂತವಾಗಿ ಪದೇ ಪದೇ ಉಲ್ಲೇಖಗೊಳುತ್ತಲೇ ಬಂದಿದ್ದಾನೆ. 2016 ರಲ್ಲಿ ಅಧಿಕೃತವಾಗಿ ಅವನ ಜೀವನವನ್ನು ಆಧರಿಸಿ ‘ನೀರ ಮೇಲೆ ನೆನಪ ಬರೆದು’ ಎಂಬ 176 ಪುಟಗಳ ಕೃತಿಯನ್ನು, 2017 ರಲ್ಲಿ ಪ್ರಾಯೋಗಿಕವಾಗಿ ಮಾರುಕಟ್ಟೆಗೆ ಬಿಟ್ಟೆ. ಅತ್ಯುತ್ತಮ ಪ್ರತಿಕ್ರಿಯೆ ದೊರೆತ ಪರಿಣಾಮ, ತಕ್ಷಣವೇ ಅದರ ಎರಡನೇ ಭಾಗದ ರಚನೆಯಲ್ಲಿ ದಿನಾಂಕ 06.04.2019 ರಂದು ತೊಡಗಿಕೊಂಡೆ. ಆದರೆ, ಈ ಮಧ್ಯದಲ್ಲಿ ಯಾಜಿ ದಂಪತಿಗಳ ಅನುರೋಧದ ಮೇರೆಗೆ ಭಾರತದ ಬಾವುಟದ ಚರಿತ್ರೆಯನ್ನು ಆದರಿಸಿದ ‘ಜಗದ್ವಂದ್ಯ ಭಾರತಂ’ ಕಾದಂಬರಿ ರಚನೆಯಲ್ಲಿ ನಾನು ತೊಡಗಿಕೊಂಡದ್ದರಿಂದ ಎರಡನೆ ಹಂತದ ಕೀಟ್ಸ್ ಹಾಗೆಯೇ ಅರ್ಧಕ್ಕೆ ಉಳಿದುಕೊಂಡ.
ಸೃಜನಶೀಲವಾದುದ್ಯಾವುದನ್ನೂ ದಿನಾಂಕುಗಳ
ಕರಾರು ಒಕ್ಕತೆಗಾಗಿ ಆಗಲಿ, ಯಾರದೇ ಒತ್ತಾಯಕ್ಕಾಗಲಿ ಎಂದೂ ಮಾಡಿದವನಲ್ಲ ನಾನು. ಕೆಲವೊಮ್ಮೆ ಓದದ, ಬರೆಯದ ಒಂದೇ ಒಂದು ಫೋಟೋ ತೆಗೆಯಿಸಿಕೊಳ್ಳದ
ಹಲವು ಸೊಂಬೇರಿ ತಿಂಗಳುಗಳಿರುತ್ತವೆ. ಹಾಗೆಯೇ ಇರುತ್ತವೆ ಮತ್ತೆ ಕೆಲವು ದಿನಗಳು ಬರೀ ಬರಹವನ್ನು ಅವಲತ್ತುಕೊಂಡು.
ಬರೆಯುತ್ತಿರುವುದು ಕೆಲವೊಮ್ಮೆ ಗಕ್ಕನೆ ನಿಂತು ಮತ್ತಿನ್ನ್ಯಾವುದೊ ಬರೆಯಿಸಿಕೊಳ್ಳಲಾರಂಭಿಸುತ್ತದೆ.
ಎತ್ತಿಕೊಂಡ ಇನ್ನ್ಯಾವುದೊ ಪಕ್ಕಕ್ಕೆ ಸರಿದು ಮಗದೊಂದ್ಯಾವುದಕ್ಕೊ ದಾರಿ ಮಾಡಿಕೊಡುತ್ತದೆ. ಹೀಗೆಯೇ
ರಚನೆಯಾದವುಗಳು ನನ್ನ ಬಹುಪಾಲು ಕೃತಿಗಳು.
ಹೀಗೆಯೇ ವಿಳಂಬಗೊಂಡ ಕೀಟ್ಸ್ ಕುರಿತ ಎರಡನೇ ಭಾಗ, ಇದ್ದಕ್ಕಿದ್ದಂತೆ 2019ರಲ್ಲಿ ಆರಂಭವಾಗಿ ದಿನಾಂಕ 06 ಏಪ್ರೀಲ್ 2020ಕ್ಕೆ ಒಂದು ಸ್ವರೂಪ ಪಡೆಯಿತು. ಇದು ಭಾರತದಲ್ಲಿ ಕರೋನಾದ ಮರಣ ಮದ್ದಳೆಯ ಕಾಲ. ಒಟ್ಟು 2016 ರಿಂದ 2020, ಅಂದರೆ ನಾಲ್ಕು ವರ್ಷಗಳ ಅವಧಿ ಕವಿತೆಯಾಗಿ ಕಾಡಿದ್ದಾನೆ ಕೀಟ್ಸ್ ನನ್ನನ್ನು. ಇಂದಿಗೆ 171 ವರ್ಷಗಳ ಹಿಂದೆ ನೂರೆಂಟು ನೋವುಗಳೊಂದಿಗೆ ಬದುಕಿದ್ದ ಈ ಕೀಟ್ಸ್, ತನ್ನ ಕಾವ್ಯದ ಮೂಲಕ ಹೇಳಿದ್ದಾದರೂ ಏನು? ಜೀವನದೊಂದಿಗೆ ಅವನ ಹಠವಾದರೂ ಏನು? ಎಂದು ಕೇಳಿದರೆ ನನಗೆ ಥಟ್ಟನೆ ನೆನಪಾಗುವುದು ಕಡಂಗೋಡ್ಲು ಅವರ ನಾಲ್ಕು ಸಾಲುಗಳು –
ಹೀಗೆಯೇ ವಿಳಂಬಗೊಂಡ ಕೀಟ್ಸ್ ಕುರಿತ ಎರಡನೇ ಭಾಗ, ಇದ್ದಕ್ಕಿದ್ದಂತೆ 2019ರಲ್ಲಿ ಆರಂಭವಾಗಿ ದಿನಾಂಕ 06 ಏಪ್ರೀಲ್ 2020ಕ್ಕೆ ಒಂದು ಸ್ವರೂಪ ಪಡೆಯಿತು. ಇದು ಭಾರತದಲ್ಲಿ ಕರೋನಾದ ಮರಣ ಮದ್ದಳೆಯ ಕಾಲ. ಒಟ್ಟು 2016 ರಿಂದ 2020, ಅಂದರೆ ನಾಲ್ಕು ವರ್ಷಗಳ ಅವಧಿ ಕವಿತೆಯಾಗಿ ಕಾಡಿದ್ದಾನೆ ಕೀಟ್ಸ್ ನನ್ನನ್ನು. ಇಂದಿಗೆ 171 ವರ್ಷಗಳ ಹಿಂದೆ ನೂರೆಂಟು ನೋವುಗಳೊಂದಿಗೆ ಬದುಕಿದ್ದ ಈ ಕೀಟ್ಸ್, ತನ್ನ ಕಾವ್ಯದ ಮೂಲಕ ಹೇಳಿದ್ದಾದರೂ ಏನು? ಜೀವನದೊಂದಿಗೆ ಅವನ ಹಠವಾದರೂ ಏನು? ಎಂದು ಕೇಳಿದರೆ ನನಗೆ ಥಟ್ಟನೆ ನೆನಪಾಗುವುದು ಕಡಂಗೋಡ್ಲು ಅವರ ನಾಲ್ಕು ಸಾಲುಗಳು –
ಮರೆತು ಹೋಗಲಿ ದುಗುಡ, ಜಾರಿಹೋಗಲಿ ವಿರಹ
ಕಂಬನಿಯ ಬುಗ್ಗೆ ಬತ್ತಲಿ, ಸುಯ್ಯ ರೋಧನದ ಮಿಡುಕ ಮರೆಹೋಗಲಿ
ಉಸಿರು ಹಸರಿಸಲಿ ಕಮ್ಮಲರ ನೀಳೆಸಳಿನಲಿ.
ಆಗ, ಪುಲಕಗಳ ಗುಡಿಕಟ್ಟಿ, ಉತ್ಸವದಿ ಕುಣಿದು
ಮೃತ್ಯು ಆಗಮನದ ವಾರ್ತೆಯನು ಮರೆಸಿ, ಮರೆತಿರುವೆ.
ಇದೆಲ್ಲ ಪ್ರಶ್ನೆಯಲ್ಲ ನನಗೆ.
ಪ್ರಶ್ನೆ ಇರುವುದು ಒಟ್ಟು ಈ ಬರಹ ಪ್ರಕ್ರಿಯೆಯ ಕುರಿತು. ಪ್ರಪಂಚದ ಅಗಾಧ ಶಕ್ತಿಯಲ್ಲಿ ತೃಣಮಾತ್ರದವನಾದ
ಮನುಷ್ಯನನ್ನು ಸಾಧನವಾಗಿಸಿಕೊಂಡು ವಿಶ್ವಾತ್ಮಕತೆ ಪ್ರತಿಕ್ರಿಯಿಸಿದ ರೀತಿ, ಅದು ವೇದ್ಯವಾಗಿಸಿದ ಬದುಕು ಹಾಗೂ
ಅದರ ಲೀಲಾ ಪ್ರಪಂಚ, ಅದು ಮನುಷ್ಯ ದೃಷ್ಟಿಗೆ ಒದಗಿಸುವ
ಒಂದು ನಿರ್ದಿಷ್ಟ ಕೋನ,
ದೃಷ್ಟಿಕೋನ. ಇದೆಲ್ಲದರ ಹಿನ್ನಲೆಯಲ್ಲಿಯೇ ಹೇಳಿದ್ದು Art is life seen through a temperament, ಕಲೆ ಅಥವಾ ಸಾಹಿತ್ಯವೆಂದರೆ ಒಂದು
ವಿಶಿಷ್ಟ ಮನೋಧರ್ಮದ ಮೂಲಕ ನೋಡಿದ ಜೀವನ ಎಂದು. ಆದರೆ ಹೀಗೆ ಒಂದು ದೃಷ್ಟಿಕೋನದ ಮೂಲಕ ಜೀವನವನ್ನು
ಮನಸ್ಸೊಂದು ನೋಡುವುದರೊಳಗಾಗಿ ದಕ್ಕಬೇಕಾದ ಅನುಭವವೂ ದಕ್ಕಿಸಿಕೊಳ್ಳಲು ಸಿದ್ಧವಾಗಿರುತ್ತದೆಯೆ? ಇದು ನನ್ನ ಜಿಜ್ಞಾಸೆ ಹಾಗೂ ಬರಹದ
ಬಗೆಗಿರುವ ಕುತೂಹಲ.
ಈ ಕುತೂಹಲದ ಬೆನ್ನೇರಿಯೆ ಕಳೆದ ಹಲವು ದಶಕಗಳಿಂದ ನಾನು ಬರೆಯುತ್ತ ಹೊರಟವ, ಕುತೂಹಲಕ್ಕೆ ಪೂರಕವಾಗಿ ಸಂಗತಿಗಳು ಘಟಿಸಿದ್ದರಿಂದ ಯಾವುದೇ ಬರಹ ಬರೆಯಲಾಗದು, ಬದಲಾಗಿ ಬರೆಯಿಸಲ್ಪಡುವುದು ಎನ್ನುವ ಸ್ಪಷ್ಟ ನಿರ್ಧಾರಕ್ಕೆ ಬಂದವ.
ಈ ಕುತೂಹಲದ ಬೆನ್ನೇರಿಯೆ ಕಳೆದ ಹಲವು ದಶಕಗಳಿಂದ ನಾನು ಬರೆಯುತ್ತ ಹೊರಟವ, ಕುತೂಹಲಕ್ಕೆ ಪೂರಕವಾಗಿ ಸಂಗತಿಗಳು ಘಟಿಸಿದ್ದರಿಂದ ಯಾವುದೇ ಬರಹ ಬರೆಯಲಾಗದು, ಬದಲಾಗಿ ಬರೆಯಿಸಲ್ಪಡುವುದು ಎನ್ನುವ ಸ್ಪಷ್ಟ ನಿರ್ಧಾರಕ್ಕೆ ಬಂದವ.
ಹೊರಗಡೆ ಸುಡು ಬಿಸಿಲು, ಒಳಗಡೆ ಕರೋನದ ಕಾರಣ ಸೃಷ್ಟಿಯಾದ
ಮೃತ್ಯು ಭೀತಿ, ಗಡಿರೇಖೆಯ ಮೇಲಿರುವ ನನ್ನ ಮನೆ
‘ಜೋಳಿಗೆ’ಯ ಮುಂದೆ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ
ಮೃತ್ಯು ನೆಮ್ಮದಿಗಾಗಿ ಪರದಾಡುತ್ತಿದ್ದ ಜನ, ಪೊಲೀಸ್ ಗಸ್ತು, ಊರೂರುಗಳಲ್ಲಿ ಸ್ಮಶಾನ ಮೌನ, ಮಾತೆತ್ತಿದರೆ ಸತ್ತವರ ಲೆಕ್ಕ, ಉಳಿದವರ ಗೋಳಾಟ ಹೀಗೆ ಏನೆಲ್ಲ
ನಡೆದಿತ್ತು ನಾನು ಕೀಟ್ಸ್ ನೊಂದಿಗೆ ಕುಳಿತಾಗ.
ನನ್ನ ಉಳಿದ ಕೃತಿಗಳ ಸಂದರ್ಭದಲ್ಲಿ
ಜರುಗಿದಂತೆಯೇ ಕಾಲ ಏನೇನೋ ಜರುಗಿಸುತ್ತಿತ್ತು ನನ್ನ ಸುತ್ತಲು. ಕೆಲವು ಸಚಿತ್ರಗಳಾದರೆ ಮತ್ತೆ ಕೆಲವು
ವಿಚಿತ್ರಗಳಾದವು. ದಿನಾಂಕ 06.04.2019 ರಲ್ಲಿ ಬರಹ ಆರಂಭವಾಗಿದ್ದು ಮಧ್ಯ ಎಲ್ಲೆಲ್ಲೋ ನಿಂತು, ವಿಳಂಬಿಸಿ, ವಿಸ್ತಾರಗೊಂಡು, ಮಧ್ಯ ಮತ್ತೊಂದು ಕೃತಿ ರಚನೆಯಾಗಿ, ಮತ್ತೆ ಸರಿಯಾಗಿ ದಿನಾಂಕ 06.04.2020 ರಂದು ಈ ಕೃತಿಯ ಮುಕ್ತಾಯವಾಗುತ್ತದೆ, 23 ಫೆಬ್ರುವರಿ 1821 ರಂದು ಜಾನ್ ಕೀಟ್ಸ್ ನರಳಾಟ ಹಾಗೂ
ಗೋಳಾಟದ ಬದುಕಿನಿಂದ ಮೃತ್ಯುವಿಗೆ ಜಾರಿದ್ದು, ಆದರೆ ಇದೇ ಫೆಬ್ರುವರಿ 23 ರಂದು ನನ್ನ ಹೆಂಡತಿಯೊಂದಿಗೆ
ಜೀವನ ಅರೆಸುತ್ತ ಬೆಂಗಳೂರಿಂದ ಹೊರಟು, ಲಕ್ಷ ಲಕ್ಷ ಜನರೊಂದಿಗೆ ಮೃತ್ಯುವಿನಿಂದ ಜೀವನದೆಡೆಗೆ ನಾನು
ಪಯಣ ಬೆಳೆಸಿದ್ದು. ಕೀಟ್ಸ್ ಮೃತ್ಯು ವಶವಾದದ್ದು 23 ಫೆಬ್ರುವರಿ ನಸುಕಿನ ನಾಲ್ಕು ಗಂಟೆಗೆ, ಮೃತ್ಯು ಕರೋನಾ ರೂಪದಲ್ಲಿ ನಮ್ಮೊಳಗೇನಾದರೂ
ಮನೆ ಮಾಡಿದೆಯಾ ಎಂದು ನಮ್ಮೆಲ್ಲರ ಆರೋಗ್ಯ ತಪಾಸಣೆಯಾದದ್ದು ಇದೇ ಫೆಬ್ರುವರಿ 23-24ರ ನಸುಕಿನಲ್ಲಿ, ಇಂಗ್ಲೆಂಡಿನಿಂದ ಬೇಸತ್ತು ಕೊನೆಗಾಲದಲ್ಲಿ
ಆರೋಗ್ಯವನ್ನು ಹುಡುಕಾಡುತ್ತ ಕೀಟ್ಸ್ ಹೋದ ಇಟಲಿ ಆಗಲೂ ಸಾಂಕ್ರಾಮಿಕ ರೋಗಗಳ ಕೇಂದ್ರವಾಗಿತ್ತು. ಕನ್ನಡದಲ್ಲಿ
171 ವರ್ಷಗಳ ನಂತರ ಅವನ ಚರಿತ್ರೆ
ಮರುಸೃಷ್ಟಿಯಾಗುವ ಈ ಸಂದರ್ಭದಲ್ಲಿಯೂ ಇಟಲಿ ಕರೋನಾ ಎಂಬ ಸಾಂಕ್ರಾಮಿಕ ರೋಗದಿಂದ ತನ್ನ ಸಾವಿರ ಸಾವಿರ
ಪ್ರಜೆಗಳನ್ನು ಕಳೆದುಕೊಂಡು ನರಳುತ್ತಿದೆ. ಕ್ವಾರಂಟೈನ್ ಎಂಬ ಪದ ಯುರೋಪಿನಲ್ಲಿ ಬಹಳ ಹಿಂದೆಯೇ ಸಾಂಕ್ರಾಮಿಕ
ರೋಗಗಳ ಸಂದರ್ಭದಲ್ಲಿ ಪ್ರಚಲಿತ, ಆದರೆ ಪಶ್ಚಿಮದಲ್ಲಿ ಅದೂ ಏಷಿಯಾದಲ್ಲಿ ಅದು ಜನಜನಿತವಾದುದು
ಕರೋನಾದ ಈ ಸಂದರ್ಭದಲ್ಲಿ. ಕೀಟ್ಸ್‍ನನ್ನು ಕುರಿತು ಬರೆಯುತ್ತಿರುವ ನಾನು, 21 ದಿನಗಳ ಕಾಲದ ದಿಗ್ಭಂದನವನ್ನು
ಕರೋನಾ ಕಾರಣಕ್ಕಾಗಿ ಅನುಭವಿಸಿದರೆ, ಸ್ವಯಂ ಕೀಟ್ಸ್ ಇಟಲಿಯ ನೆಪಲ್ಸ್ ನಲ್ಲಿ 32 ಗಂಟೆಗಳ ಕ್ವಾರಂಟೈನ್ ಅನುಭವಿಸಿ, ‘ರಾಜಕೀಯ ಪ್ರೇರಿತವಾದ ಈ ಕ್ವಾರಂಟೈನ್
ಮೃತ್ಯುವಿಗಿಂತಲೂ ಭಯಾನಕವಾದುದು’ಎಂದು ದಾಖಲಿಸುತ್ತಾನೆ.
ಈಗ ಹೇಳಿ ಬರಹವೆಂದರೇನು? ಸಮಾನ ಅನುಭವಗಳು ಸಮ-ಸಮನಾಗಿ 171 ವರ್ಷಗಳ ನಂತರ ನನ್ನ ಮತ್ತು ಕೀಟ್ಸ್ ನ ಮಧ್ಯ ಯಾಕೆ ಜರುಗಬೇಕು? ಇದೇ ಕಾರಣ ನಾನು ಮತ್ತೆ ಮತ್ತೆ
ಕೇಳಿಕೊಳ್ಳುತ್ತಿರುತ್ತೇನೆ ಬರಹ ಬರೆಯುವಂಥದ್ದೊ? ಬರೆಯಿಸಲ್ಪಡುವಂಥದ್ದೊ. ವ್ಯಕ್ತಿಯೊಂದು ತನ್ನ ಜೀವ ಕಾಡಿದ
ಬಾಹ್ಯದ ಸಂದರ್ಭದ ಮರು ಸೃಷ್ಟಿಯಾಗುವವರೆಗೂ ಮತ್ತೆ ಕಾಯ್ದು ಮರು ಸೃಷ್ಟಿಯಾಯಿತೆ? ಒಂದು ವೇಳೆ ಬರಹವೆನ್ನುವುದು ಬರೆದು
ತೀರಿಸಿ ಬಿಡಬಹುದಾಗಿದ್ದರೆ ಈ ಹಿಂದೆಯೇ ಈ ಕ್ರಿಯೆ ಮುಗಿದು ಬಿಡಬಹುದಿತ್ತಲ್ಲವೆ? ಅಥವಾ ಇದೆಲ್ಲ ಬರಹಗಾರನ ಆತ್ಮ, ವಿಶ್ವಾತ್ಮಕತೆಯನ್ನು ಸಾಧಿಸುವ
ಹುನ್ನಾರವೆ? ನನಗೆ ತಿಳಿಯುತ್ತಿಲ್ಲ.
ಕೀಟ್ಸ್ ನಿಗೂ ಇದು ತಿಳಿಯಲಿಲ್ಲ. ಆತ ಬರೆದದ್ದು ಬರೆಯದೇ ಇರಲು ಆಗದ್ದಕ್ಕಾಗಿ.
ರೆಂಬೆ-ಕೊಂಬೆಗಳಿಗೆ ಚಿಗುರು ಬರುವಷ್ಟೇ ಸಹಜವಾಗಿ ಬರಹ ಸಾಧ್ಯವಾಗದೇ ಹೋಗುವುದಾದರೆ ಅಂಥ ಬರಹವೇ ಬೇಡ
ಎಂದು ಷರಾ ಎಳೆದುಕೊಂಡಿದ್ದ ಜಾನ್ ಕೀಟ್ಸ್ ನ ಪಾಲಿಗಂತೂ ಬರಹ ವ್ಯಸನವೂ ಆಗಿರಲಿಲ್ಲ, ಪ್ರದರ್ಶನವೂ ಆಗಿರಲಿಲ್ಲ. ಬದಲಾಗಿ
ಅದು ಬದುಕಿನ ಅನಿವಾರ್ಯವಾಗಿತ್ತು, ಉಸಿರಿನಷ್ಟೇ ಅಶ್ಯಕವಾಗಿತ್ತು, ಸಾವಿಗೊಂದು ಸಮಾಧಾನವಾಗಿತ್ತು.
ಕಾರಣ ಅವನ ಮೂಲಕ ಬಂದ ಬರಹ ಲೋಕೋದ್ಭವವಾಗಿತ್ತು, ಲೋಕವಾಣಿಯಾಗಿತ್ತು ಮತ್ತು ಅಂತಿಮವಾಗಿ ಲೋಕಾತ್ಮಕತೆಯೇ ಅದರ
ಗುರಿಯಾಗಿತ್ತು.
ಇಂಥ ಕೀಟ್ಸ್ ಜೀವಿಸಿದ್ದು ಕಡಿಮೆ. ಆದರೆ ಕವಿಯಾಗಿ ಬದುಕಿದ್ದು, ಬಾಳಿದ್ದು ದೀರ್ಘ. ಬದುಕನ್ನು ಗಾಳಿಗೋಪುರವಾಗಲು ಬಿಡಲಿಲ್ಲ ಅವನು. ಪದ ಪದವೂ ಆತ್ಮವೃತ್ತದ ಒರತೆ. ಜಾನ್ ಕೀಟ್ಸ್ ಎಷ್ಟೊಂದು ದೀರ್ಘ ವಿಸ್ತಾರದ ಕವಿ ಎನ್ನುವುದನ್ನು ತಿಳಿಯಲು ಆತನ ನಿಧನದ ನಂತರ ಅವನ ಕವಿಮಿತ್ರನಾದ ಪರ್ಸಿ ಬ್ರೌನ್ ಶೆಲ್ಲಿ ಬರೆದ ಶೋಕ ಗೀತೆ ‘ಎಡೋನಿಸ್’ ಕವಿತೆಯನ್ನು ಒಮ್ಮೆಯಾದರೂ ನೀವು ಓದಲೇಬೇಕು. ಅದು ಮುಲಾಜಿಗಾಗಿ ಬರೆದ ಕವಿತೆಯಲ್ಲ. ಆ ಕವಿತೆಯನ್ನು ಇಡಿಯಾಗಿ ನಾನು ಉಲ್ಲೇಖಿಸುತ್ತಿಲ್ಲ. ಕೀಟ್ಸ್ ಎಷ್ಟು ಎತ್ತರದವನು ಎನ್ನುವುದಕ್ಕೆ ಸಾಕ್ಷಿಯಾಗಿರುವ ಕೆಲವೇ ಕೆಲವು ಸಾಲುಗಳನ್ನು ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ –
ಇಂಥ ಕೀಟ್ಸ್ ಜೀವಿಸಿದ್ದು ಕಡಿಮೆ. ಆದರೆ ಕವಿಯಾಗಿ ಬದುಕಿದ್ದು, ಬಾಳಿದ್ದು ದೀರ್ಘ. ಬದುಕನ್ನು ಗಾಳಿಗೋಪುರವಾಗಲು ಬಿಡಲಿಲ್ಲ ಅವನು. ಪದ ಪದವೂ ಆತ್ಮವೃತ್ತದ ಒರತೆ. ಜಾನ್ ಕೀಟ್ಸ್ ಎಷ್ಟೊಂದು ದೀರ್ಘ ವಿಸ್ತಾರದ ಕವಿ ಎನ್ನುವುದನ್ನು ತಿಳಿಯಲು ಆತನ ನಿಧನದ ನಂತರ ಅವನ ಕವಿಮಿತ್ರನಾದ ಪರ್ಸಿ ಬ್ರೌನ್ ಶೆಲ್ಲಿ ಬರೆದ ಶೋಕ ಗೀತೆ ‘ಎಡೋನಿಸ್’ ಕವಿತೆಯನ್ನು ಒಮ್ಮೆಯಾದರೂ ನೀವು ಓದಲೇಬೇಕು. ಅದು ಮುಲಾಜಿಗಾಗಿ ಬರೆದ ಕವಿತೆಯಲ್ಲ. ಆ ಕವಿತೆಯನ್ನು ಇಡಿಯಾಗಿ ನಾನು ಉಲ್ಲೇಖಿಸುತ್ತಿಲ್ಲ. ಕೀಟ್ಸ್ ಎಷ್ಟು ಎತ್ತರದವನು ಎನ್ನುವುದಕ್ಕೆ ಸಾಕ್ಷಿಯಾಗಿರುವ ಕೆಲವೇ ಕೆಲವು ಸಾಲುಗಳನ್ನು ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ –
·
He lives, he
wakes – it is Death is dead, not he
********
·
He is made one
with Nature : there is heard
His voice in all her music, from the moan
Of thunder, to the song of Nights sweet bird
He is a presence to be felt and known
In darkness and in light, from herb and stone
Spreading itself where’er that Power may move
Which has withdrawn his being to its own
Which wields the world with never weried love
Sustains it from beneath, and kindles it above
ಸೀಮಾತೀತವಾಗಿ ಬರೆದ ಕವಿ ಕೀಟ್ಸ್
ಅವನ ಗೆಳೆಯ ಶೆಲ್ಲಿ ಹೇಳಿದಂತೆ ಸಾವಿಲ್ಲದವನೆ. ಸಮಸ್ತ ಸೃಷ್ಟಿಯ ಗತಿ-ಮತಿಗಳಲ್ಲಿ ಬೆರೆತುಹೋದವನು.
ಇಡೀ ಪಾಶ್ಚಾತ್ಯ ಕಾವ್ಯದಲ್ಲಿ ಶೇಕ್ಸಪೀಯರ್‍ನ ನಂತರ ಜಗತ್ತಿನ ಜನಾನುರಾಗಕ್ಕೆ ಭಾಜನನಾದ ಅತ್ಯಂತ ಮಹತ್ವದ
ಕವಿ ಯಾರಾದರೂ ಇದ್ದರೆ ಅದು ಜಾನ್ ಕೀಟ್ಸ್. ಅವನಿಗೂ ಮೊದಲಿನ ಎಡ್ಮಂಡ್ ಸ್ಪೆನ್ಸರ್ ಬಹಳಷ್ಟು ಕಾವ್ಯ
ರಸಿಕರಿಗೆ ಅರ್ಥವಾಗಲಿಲ್ಲ, ಜಾನ್ ಮಿಲ್ಟನ್ ಕಬ್ಬಿಣದ ಕಡಲೇ ಆದ, ಅಲೆಗ್ಝಾಂಡರ್ ಪೋಪ್ ಪ್ರಾಯೋಗಿಕ
ನೆಲೆಯಲ್ಲಿ ಉಳಿದುಕೊಂಡ, ವಡ್ರ್ಸ್‍ವರ್ಥ್ ಸಂತನಾದ, ಕೀಟ್ಸ್ ಮಾತ್ರ ಕವಿತೆ ಬರೆದು ಕವಿಯಾದ ಎನ್ನುವುದಕ್ಕಿಂತ, ಅವನು ಕವಿತೆಗಾಗಿಯೇ ಬದುಕಿದ್ದ, ಕೊನೆಗೆ ಕವಿತೆಯಾಗಿಯೇ ದಕ್ಕಿದ.
ನಾನು ಹೇಳುತ್ತಿರುವುದು ಅಕ್ಷರಶಃ ಸತ್ಯ. ತನ್ನ ಬಾಲ್ಯದಲ್ಲಿ ಅಂದರೆ, 1804ರ ಆಸುಪಸಿನಲ್ಲಿ ಕುದುರೆಯ ಮೇಲಿಂದ
ಬಿದ್ದು ಮಾರಣಾಂತಿಕವಾಗಿ ಗಾಯಗೊಂಡಿದ್ದ ಕೀಟ್ಸ್ ಜೀವನದ್ದುದ್ದಕ್ಕೂ ಬೀಳುತ್ತ, ಏಳುತ್ತ, ಮೃತ್ಯುವಿನೊಂದಿಗೆ ಸೆಣಸಾಡುತ್ತ
ಮೃತ್ಯುಂಜಯನೇ ಆದ. ಕವಿ ಮ್ಯಾಥ್ಯು ಆ್ಯರ್ನಾಲ್ಡ್ ಕೀಟ್ಸ್ ನ ಕುರಿತು ಹೇಳುತ್ತಾನೆ – ‘He is, he is with Shakespeare. Though he lived more
in sensations than in thoughts. Keats soon become alive to the principle of
beauty in all things and he developed a style which was Greek in its
sculpturesque perfection and Shakespearean in its intensity.
ನಿಮಗೆ ತಿಳಿ ತಿಳಿಯಾಗಲೆಂದು ನಾನು
ಜಾನ್ ಕೀಟ್ಸ್ ನ ಕುರಿತು ಬರೆದಷ್ಟೂ ಆತ ಕಡಲಂತೆ
ಆಳ, ಅನಂತವಾಗುತ್ತಲೇ ಹೋಗುತ್ತಾನೆ.
ಇದು ಸರಿ, ಆದರೆ ಇದು ಏಕೆ ಹೀಗೆ ಎಂಬುದು
ಪ್ರಶ್ನೆಯಲ್ಲವೆ? ಎಂಥ ಕವಿಗೆ ಇಂಥ ವಿಸ್ತಾರ ಸಾಧ್ಯವಾಗುತ್ತದೆ? ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ.
ಇದಕ್ಕೆ ಇಂದಿಗೆ ಐವತ್ತು ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಚರಿತ್ರೆಕಾರರಾದ ಪ್ರೊ. ರಂ.ಶ್ರೀ. ಮುಗಳಿ
ಅವರು ಬಹಳ ಸುಂದರವಾಗಿ ಉತ್ತರಿಸಿದ್ದಾರೆ. ಅದನ್ನು ನೀವು ಗಮನಿಸಬೇಕೆಂದು ನನ್ನ ಬಯಕೆ. ಅವರು ಬರೆಯುತ್ತಾರೆ
– “ಲೇಖಕನ ಜೀವನಾನುಭವ, ಆಲೋಚನೆ, ಹೃದಯಸ್ಪಂದನ ಇವುಗಳ ವಿಶಿಷ್ಟ
ಪರಿಪಾಕವಾಗಿ ಅವನ ಸಾಹಿತ್ಯ ನಿರ್ಮಾಣವಾಗುತ್ತದೆ. ಇನ್ನೊಂದು ಬಗೆಯಲ್ಲಿ ಹೇಳಿರುವಂತೆ ಅದು ಸೃಷ್ಟಿ-ದೃಷ್ಟಿಗಳ
ಸಂಗಮದಿಂದ ಉಂಟಾದ ನವೀನ ಸೃಷ್ಟಿಯಾಗಿರುತ್ತದೆ. ಈ ಸೃಷ್ಟಿಗೆ ಮುಖ್ಯ ಕಾರಣವಾದ ಪ್ರತಿಭಾಶಕ್ತಿ ‘ನವನವೋನ್ಮೇಷಶಾಲಿನಿ’ಯಾದ ಪ್ರಜ್ಞೆ ಎಂದು ಹೊಗಳಿಸಿಕೊಂಡಿದೆ.
ಲೇಖಕನ ವ್ಯಕ್ತಿತ್ವದಲ್ಲಿ ಸಾಕ್ಷಿಭಾವ, ಸ್ನೇಹಭಾವ, ಸೌಂದರ್ಯಭಾವ ಇವು ಎಷ್ಟರ ಮಟ್ಟಿಗೆ ಮಾಗಿದ ರಸಪ್ರಜ್ಞೆಯಲ್ಲಿ
ನೆಲೆನಿಲ್ಲುವುವೋ ಅಷ್ಟರ ಮಟ್ಟಿಗೆ ಅವನ ಕೃತಿ ಘನತೆಯನ್ನು ತಾಳುತ್ತದೆ. ಇಂಥ ಕೃತಿಯಲ್ಲಿ ಸಮಗ್ರ ಸೌಂದರ್ಯವು
ಕಣ್ದೆರೆಯುತ್ತದೆ. ಅದರಿಂದ ನಿರ್ಮಲವಾದ, ನಿರ್ಹೇತುಕವಾದ ಆನಂದವು ಲಭಿಸುತ್ತದೆ. ಜೊತೆಗೆ ಅದು ರಸಿಕನ
ಚಿತ್ರವನ್ನು ಎತ್ತರಿಸುತ್ತದೆ, ಜೀವನವನ್ನು ಸಂಸ್ಕರಿಸುತ್ತದೆ. ಅಂತರಂಗದಾಳದಲ್ಲಿ ತಿಳಿಯದಂತೆ ಹೊಕ್ಕು
ಕೊನೆಬಾಳುವ ಬಾಳಿನ ಬೆಲೆಗಳನ್ನು ಸ್ಥಾಪಿಸುತ್ತದೆ. ‘ಋಷಿಯಲ್ಲದವನು ಕಾವ್ಯವನ್ನು ರಚಿಸಲಾರ, ದರ್ಶನದಿಂದಲೇ ಋಷಿ ಋಷಿಯಾಗುತ್ತಾನೆ.’ ಎಂಬ ಪ್ರಸಿದ್ಧವಾದ ಉಕ್ತಿ ಸಾಹಿತ್ಯದ
ಚಿರಂತನವಾದ ಸ್ವರೂಪವನ್ನು ಬೇರೊಂದು ಬಗೆಯಲ್ಲಿ ಎತ್ತಿ ತೋರಿಸಿರುತ್ತದೆ. ಇಲ್ಲಿ ದರ್ಶನವೆಂದರೆ ಕಣ್ಣ
ಮುಂದಿರುವ ಬಾಳಿನ ಹೊರನೋಟ, ಒಳಗಣ್ಣಿನಿಂದ ತಿಳಿಯುವ, ಇರಬೇಕಾದ ಬಾಳಿನ ಒಳನೋಟ. ಇದು ಲೇಖಕನ ಬುದ್ಧಿಗೆ ಮಾತ್ರ
ಹೊಳೆದುದಲ್ಲ, ಅವನ ಸಮಗ್ರ ಚೇತನಕ್ಕೆ ಅರಿವಾಗಿ
ಅವನ ಇರುವಿಕೆಯಲ್ಲಿ ಮೂಡಿರುವ ಇಲ್ಲವೆ ಮೂಡಲು ಹಾತೊರೆಯುತ್ತಿರುವ ಅವನದೇ ಆದ ಜೀವನದರ್ಶನವಾಗಿರುತ್ತದೆ.
ಅಂತೇ ಸಾಹಿತ್ಯವು ವ್ಯಕ್ತಿತ್ವದ ಪ್ರತಿಫಲವೆಂದು ಹೇಳಿರುವುದುಂಟು. ವ್ಯಕ್ತಿವ್ಯಕ್ತಿಗೆ ನಿರ್ಮಿತಿ
ಬೇರೆ ಬೇರೆಯಾಗುತ್ತದೆ. ವ್ಯಕ್ತಿ ಮಾಗಿದಷ್ಟು ಅವನ ಕೃತಿಯೂ ಮಾಗಿ ತೋರುತ್ತದೆ. ವ್ಯಕ್ತಿ ಕುಗ್ಗಿದಷ್ಟು
ಅವನ ಕೃತಿಯೂ ಕುಗ್ಗಿ ನಿಲ್ಲುತ್ತದೆ.”

ಎಲ್ಲಕ್ಕೂ ಮಿಗಿಲಾಗಿ ಕೀಟ್ಸ್ ಕದ್ದು ತಿನ್ನುವ ಹಣ್ಣಲ್ಲ, ಹಂಚಿಕೊಂಡು ತಿನ್ನಬೇಕಾದ ಮಹಾಪ್ರಸಾದ, ಮಹಾನಂದ. ಈಗ ಅದು ನಿಮ್ಮೊಂದಿಗೆ.
ಕವಿಹೃದಯದ ಡಾ.ರಾಗಂ ರವರಿಗೆ ನಮಸ್ಕಾರಗಳು.ನಿಮ್ಮ ಈ ಲೇಖನ ಮಹಾನ ಕವಿ ಜಾನ್ ಕೀಟ್ಸ ರವರ ಪರಿಚಯ ಹಾಗೂ ಅವರ ನೆನಪಿನ ಬುತ್ತಿ ನಮಗೆ ಉಣಬಡಿಸಿದ ತಮ್ಮ ಈ ಲೇಖನ ಬಹಳ ಉತ್ತಮವಾಗಿದೆ. ನಿಮ್ಮ ಲೇಖನದಿಂದ ಮಹಾನ್ ಕವಿ ಯವರ ಜೀವನ ಬದುಕು ಕಾವ್ಯ ಬರಹದ ಎಲ್ಲ ಆಯಾಮಗಳನ್ನು ಬಹು ಸುಂದರವಾಗಿ, ಮಾರ್ಮಿಕವಾಗಿ, ವಿಮರ್ಶಾತ್ಮಕ ವಾಗಿ ನಮಗೆ ಪರಿಚಯಿಸುವ ಮೂಲಕ ಜಾನ್ ಕೀಟ್ಸ ರವರ ಕಾವ್ಯ ಧಾರೆ ಹರಿಸಿದ ತಮ್ಮ ಈ ಲೇಖನಕ್ಕೆ ತುಂಬುಹೃದಯದ ಅಭಿನಂದನೆಗಳು
ReplyDeleteನಿಮ್ಮ ಅಭಿಮಾನದ ಓದಿಗೆ ವಂದನೆಗಳು
Deleteಕೀಟ್ಸ್ ಎಂಬ ಹಂಚಿಕೊಂಡು ತಿನ್ನುವ ಹಣ್ಣನ್ನು ಹಂಚಿ ಹೃನ್ಮನಗಳನ್ನು ಸವಿಯಾಗಿಸಿದ್ದೀರಿ ಗುರುಗಳೆ, ಕಾವ್ಯ ಋಷಿಯ ರಸಧಾರೆಯಲ್ಲಿ ಮುಳುಗಿಸಿದ ತಮ್ಮ ಬರಹದ ಕಾಕತಾಳೀಯತೆಗೂ ಮಹಾದರ್ಶನದ ಸ್ಪರ್ಶವಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ಕೃತಿ ದರ್ಶನದ ಭಾಗ್ಯಕ್ಕಾಗಿ ಕಾಯುತ್ತಿರುವೆವು. ಅಭಿನಂದನೆಗಳು ಗುರುಗಳೆ.
Deleteಅರಗಿಸಿಕೊಳ್ಳಲಾಗದ ಬರಹ ಬದುಕು ನಿಮ್ಮದು
ReplyDeleteನಿಮ್ಮ ಅಭಿಮಾನದ ಓದಿಗೆ ವಂದನೆಗಳು
Deleteಬರೆಯಬಾರದು ಬರೆಯಿಸಲ್ಪಡಬೇಕು, ಹಾಗೆಯೆ ಓದು ತಾನೆ ಓದಿಸಲ್ಪಡಬೇಕು. ಬಹುಶಃ ಒಂದಿಷ್ಟು ಕಾಲಾತೀತವಾಗಿ ವಿಮರ್ಷಾತ್ಮಕತೆಯ ಆಚೆಗೆ ನಿಂತು ಕಾವ್ಯವನ್ನು ಬರಹವನ್ನು ಓದಿಸಿಕೊಂಡ ನನ್ನ ಅರಿವಿನ ಬುತ್ತಿಯಲ್ಲಿರುವ ಅನ್ನ ನಿಮ್ಮ ಹಲವಾರು ಬರಹಗಳು ಸರ್ . ಕವಿಯೇ ಕವಿತೆಯಾಗುವುದಿದೆಯಲ್ಲ ಅದೊಂದು ಭಾವ ತಪೋವನದಲ್ಲಿ ಅನುಭವಗಳನು ಅನುಭಾವಿಸುತ ಆನಂದದ ಉತ್ತುಂಗಕ್ಕೇರಿದ ತಪಸ್ವಿಯೋರ್ವನಿಗೆ ದಕ್ಕಿದ ತಪಸ್ಸಿನ ಫಲ ಅಂತಹ ಕಾವ್ಯ ತಪಸ್ವಿ ಕಿಟ್ಸ. ಆತನ ಕಾವ್ಯದ ಸಾಲುಗಳನು ಆನಂದಿಸುವದೂ ಕೂಡಾ ಒಂದು ತಪಸ್ಸು ಅಲ್ವ ಸರ್. ನನ್ನ ಅಭಿಪ್ರಾಯದಲಿ ಕೀಟ್ಸ ಪುಣ್ಯವಂತರಿಗೆ ದಕ್ಕಿದವ ಹೃದಯವಂತರಿಗೆ ದಕ್ಕಿದವ ಆ ಆನಂದವನ್ನ ಅನುಭಾವಿಸಿದ ನೀವು ಕರೋನಾದ ಮರಣ ಮೃದಂಗದ ಮಧ್ಯದಲಿ ಜಗತ್ತು ನಿಬ್ಬೆರಗಾಗಿ ಮಂಕು ಕವಿದಂತೆ ಅಸಹಾಯಕತೆಯ ಸ್ಥಿತಿಯಲ್ಲಿ ನಿಂತಾಗ ಬಹುಶಃ ಕೀಟ್ಸನ ಜೀವನಾನಂದದ ಓದಿನಲಿ ನಾವೆಲ್ಲ ಮೈ ಮರೆತರೆ ಕಾಡುವ ಮಾಯೆಯೆ ಮೈ ಮರೆತು ಜಗದಿಂದ ದೂರವಾದಿತು. ನಿಜಕ್ಕು ಕವಿತೆಯಾದ ಕೀಟ್ಸನ ಬದುಕಿನಾನಂದವನು ನಾವೂ ಕೂಡಾ ಆನಂದಿಸುವ ಸಿದ್ದತೆಯಲ್ಲಿದ್ದೇವೆ ಸರ್ ಆದಷ್ಟು ಬೇಗ ಆ ಅನುಭಾವದ ಆನಂದದ ಹೊತ್ತಿಗೆ ನಮ್ಮ ಹೃದಯದಲಿ ಪ್ರೀತಿಯ ಸಾಲುಗಳನು ಬರೆಯುವಂತಾಗಲಿ.
ReplyDeleteಇಂತಿ
ಶ್ರೇಯಾಂಶ ಜ ಕೋಲ್ಹಾರ