ರೋಮ್ ನಗರದ ಪ್ರೊಟಸ್ಟಂಟ್ ಸೆಮೆಟ್ರಿಯ ಅತ್ಯಂತ ಸುಂದರ ಸ್ಥಳದಲ್ಲಿ ಕೀಟ್ಸ್ನ ಸಮಾಧಿಯಾಯಿತು.
ಸದಾ ಹಸಿರಾಗಿರುವ, ಬೆಟ್ಟದ ಇಳಿಜಾರಿನಲ್ಲಿರುವ ಆತನ ಸಮಾಧಿ ಈಗ ಪ್ರಪಂಚದ ಅತ್ಯಂತ ಸುಂದರ ಸ್ಥಳಗಳಲ್ಲಿ ಒಂದು. ಬ್ರಿಟನ್ ಸರ್ಕಾರ ಎಷ್ಟೇ ಪ್ರಯತ್ನಿಸಿದರೂ ಮರು ಸೃಷ್ಟಿಸಲಾಗದ, ದೇವ ಸೃಷ್ಟಿಯದು. ಸನಾತನ ಸಂತರ ನೆಲವದು.
ಕೀಟ್ಸ್ ಜೀವಂತವಾಗಿದ್ದಾಗ, ವಾಯುವಿಹಾರದಲ್ಲಿ ಒಮ್ಮೆ ತನ್ನ ಕೊನೆಗಾಲದ ಗೆಳೆಯ ಸೇವರ್ನ್‍ನಿಗೆ ಹೇಳಿದ್ದನಂತೆ. “ನಾನು ಅತ್ಯಂತ ತೀವ್ರವಾದ ಆನಂದವನ್ನು ಅನುಭವಿಸುವುದು ಅರಳುವ ಹೂಗಳನ್ನು ನೋಡುವುದರಲ್ಲಿ. ಹೀಗಾಗಿ ನನಗೊಂದು ಆಶೆ ಸೇವರ್ನ್. ಮುಂದೊಮ್ಮೆ ನಾನು ಶಾಶ್ವತವಾಗಿ ಮಲಗಿದಲ್ಲಿ ಹೂಗಳು ಅರಳಬೇಕು.” ಅಚ್ಚರಿ ಎಂದರೆ ಇದು. ಈ ಮಾತು ಸತ್ಯವಾಯಿತು. ಅವನ ಕನಸು ಕೈಗೂಡಿತು.
ಈಗ ಕೀಟ್ಸ್ನ ಸಮಾಧಿಯ ಮೇಲೆ ಹಾಗೂ ಅದರ ಸುತ್ತಲು ಹೂಗಳು ಅರಳಲು ಯಾರೂ ನೀರೆರೆದು ಕಾಯಬೇಕಿಲ್ಲ. ನಿತ್ಯ ಹರಿದ್ವರ್ಣದಿಂದ ಕೂಡಿದ ಅವನ ಸಮಾಧಿಯ ಸ್ಥಳದಲ್ಲಿ ನೇರಳೆ, ಡೆಫೋಡಿಲ್, ಗುಲಾಬಿ ಹಾಗೂ ಡೇಜಿ ಹೂಗಳು ನಿತ್ಯ ಅರಳುತ್ತವೆ ರಾಶಿ ರಾಶಿಯಾಗಿ. ಇಡೀ ಛಳಿಗಾಲ ಅವನ ಸಮಾಧಿಯ ಸುತ್ತ ಸುರಿವ ಈ ಹೂಗಳ ನೋಡಲು ಎರಡು ಕಣ್ಣುಗಳು ಸಾಲವು. ಈ ಸ್ಥಳದ ಕುರಿತು ಮುಂದೊಮ್ಮೆ ಕವಿ ಗೆಳೆಯ ಶೆಲ್ಲಿ ಬರೆಯುತ್ತಾನೆ, making one in love with death, to think
that one should be buried in so sweet a place.’
ಕೀಟ್ಸ್ನ ನಿಧನದ ನಂತರ ಹತ್ತು ದಿನಗಳವರೆಗೆ ದಾನ-ಧರ್ಮದ ಎಲ್ಲ ಕ್ರಿಯಾವಿಧಿಗಳನ್ನು ಮುಗಿಸಿ ಸೇವರ್ನ್ ತನ್ನ ಗೆಳೆಯ ಮಿಸ್ಟರ್ ಹ್ಯಾಸ್ಲಮ್‍ಗೆ ಈ ಕುರಿತು ತಿಳಿಸುತ್ತಾನೆ. – ‘ಗೆಳೆಯನೆ, ಈಗ ಕೀಟ್ಸ್ನ ಎಲ್ಲ ಕೋರಿಕೆಗಳನ್ನು ಈಡೇರಿಸಲಾಗಿದೆ. ಆತ ಪ್ರಪಂಚದ ಅತ್ಯಂತ ಪ್ರಶಾಂತ ಹೂರಾಶಿಯ ಸ್ಥಳದಲ್ಲಿದ್ದಾನೆ. ಕೆಲವು ದಿನಗಳ ಹಿಂದೆ ಒಬ್ಬನೇ ನಾನು ಅವನ ಸಮಾಧಿಯ ಸುತ್ತ ಸುತ್ತಾಡಿ ಬಂದೆ. ಸುತ್ತಲೂ ಅರಳಿದ ಕೋಟಿ ಕೋಟಿ ಡೇಜಿ ಹೂಗಳ ನೋಡಿ ಎದೆ ತುಂಬಿ ಬಂದಿತು. ರೋಮ್‍ನ ಅತ್ಯಂತ ನಿತಾಂತ ಸ್ಥಳವಿದು. ಇಂಥ ಒಂದು ಸ್ಥಳ ಇಂಗ್ಲೇಂಡ್‍ನಲ್ಲಿ ಯಾವ ಕಾಲಕ್ಕೂ ಸಾಧ್ಯವಿಲ್ಲ.’
ಹೂ ಮನಸ್ಸಿನ ಈ ಗೆಳೆಯನ ಸಮಾಧಿಯ ಸುತ್ತ ಇಷ್ಟೊಂದು ಬಗೆ ಬಗೆಯ ಹೂಗಳಿರುವುದನ್ನು ನೋಡುವುದೇ ಚೆಂದ. ಎದೆ ಭಾರವಾಗಿ ಇಲ್ಲಿಗೆ ಬರುವ ನಾನು ಹೂಗಳೊಂದಿಗೆ ಹಗುರವಾಗುತ್ತೇನೆ. ಹೂಗಳಂತೆ ಒಂದೊಮ್ಮೆ ನನ್ನೊಂದಿಗಿದ್ದ, ನನ್ನ ತೆಕ್ಕೆಯ ಹೂವಾಗಿದ್ದ ಕೀಟ್ಸ್ನ ಜೀವಿತಾವಧಿಯ ಶಾರೀರಿಕ ಪೀಡೆ, ಮಾನಸಿಕ ಕ್ಷೋಭೆ, ಆ ರೋಗ, ಹಿಂಸೆ-ಅಪಮಾನ ಎಲ್ಲ ನೆನಪಾದರೆ ಇವೆಲ್ಲವುಗಳಿಂದ ಮುಕ್ತನಾಗಿ ಕೀಟ್ಸ್ ಈಗ ಈ ಹೂಗಳ ಮಧ್ಯ ಎಷ್ಟು ಸಮಾಧಾನದಿಂದಿರಬಹುದು ಎನಿಸುತ್ತದೆ.
ಮೊದಲಿನಿಂದಲೂ ಅಷ್ಟೆ. ಹೂಗಳೆಂದರೆ ಹುಚ್ಚು ಕೀಟ್ಸ್ನಿಗೆ. ತಂಗಾಳಿಯಲ್ಲಿ, ಎಲ್ಲೊ ಬೆಟ್ಟದ ತುದಿಯಲ್ಲಿ ಮೇಯುತ್ತಿರುವ ಕುರಿ-ದನಕರುಗಳ ಗಂಟೆಯ ನಾದದೊಂದಿಗೆ ಮೆಲ್ಲಗೆ ನಲುಗುವ ಈ ಡೇಜಿ ಹೂಗಳನ್ನು ನೋಡಿದರೆ ಹೇಳಬೇಕು ಎನಿಸುತ್ತದೆ – ‘ಹೀಗೆಯೇ, ನಿಮ್ಮಂತೆಯೆ ಇದ್ದ ನಮ್ಮ ಕೀಟ್ಸ್. ಹೀಗಾಗಿ ಈ ತನ್ನ ಸಮಾಧಿಯಿಂದ ಆತ ನಿಮ್ಮನ್ನು ಎದೆಗೇರಿಸಿಕೊಂಡ. ಆತ ಇಲ್ಲಿರುವುದಕ್ಕಾಗಿ ನಾನು ದೇವರಿಗೆ ಋಣಿಯಾಗಿದ್ದೇನೆ.’
ಇದಾದ ಕೇವಲ ಒಂದು ವರ್ಷ ಐದು ತಿಂಗಳ ಅವಧಿಯ ನಂತರ, ಸ್ವಲ್ಪ ಎತ್ತರದಲ್ಲಿ ಒಂದು ಸಮಾಧಿ ಕಲ್ಲನ್ನು ನೆಟ್ಟು ಅದರ ಮೇಲೆ ‘ಪ್ರಪಂಚದ ಅತ್ಯಂತ ಭಾವೋದ್ರಿಕ್ತ ಕವಿಯ ಹೃದಯ ಇಲ್ಲಿ ವಿರಮಿಸಿದೆ’ ಎಂದು ಕೆತ್ತಿಸಲಾಯಿತು, ಅದು ಕೀಟ್ಸ್ನ ಕವಿಗೆಳೆಯ ಪಿ.ಬಿ. ಶೆಲ್ಲಿಯದ್ದು. ಕಾವ್ಯ ಚಿಂತನೆಯಲ್ಲಿ ಬದುಕಿದಾಗ ಬೇರೆಯಾಗಿದ್ದ ಇಬ್ಬರೂ ಮೃತ್ಯುವಿನಲ್ಲಿ ಒಂದೇ ಕಡೆ ಬೆರೆತುಬಿಟ್ಟರು ಹೂ ಗಂಧದಲ್ಲಿ.
ಶೆಲ್ಲಿ ಕೇವಲ 29 ವರ್ಷ ಬದುಕಿದ್ದ ಇಂಗ್ಲೀಷ ರೋಮ್ಯಾಂಟಿಕ್ ಚಳುವಳಿಯ ಎರಡನೇ ತಲೆಮಾರಿನ ಮಹತ್ವದ ಕವಿ. ಹಲವು ತಾತ್ವಿಕ ಭಿನ್ನತೆಗಳ ಮಧ್ಯದಲ್ಲೂ ಕೀಟ್ಸ್ನ ಆತ್ಮೀಯ ಗೆಳೆಯರಲ್ಲಿ ಒಬ್ಬನಾದವ. ಕೀಟ್ಸ್ನ ನಿಧನದ ನಂತರ ಅವನ ಕುರಿತು ‘ಎಡೋನಿಸ್’ ಎಂಬ ಶೋಕ ಕಾವ್ಯ ಬರೆದು ಕೀಟ್ಸ್ನ ಕಾವ್ಯ ಪ್ರತಿಭೆಯನ್ನು ಜಗತ್ತಿಗೆ ಸಾರಿ ಹೇಳಿದವ. ಇದನ್ನು the incomparable tribute of
genius to genius, ಎಂದು ಪರಿಗಣಿಸಲಾಗಿದೆ.
ನಿಸ್ಸಂಶಯವಾಗಿಯೂ ಮಾನವ ಕಲ್ಪನೆಯ, ಕಾವ್ಯದ ಇತಿಹಾಸದಲ್ಲಿ ಕೀಟ್ಸ್ ಹಾಗೂ ಶೆಲ್ಲಿ ಅಸಾಧಾರಣ ಸಾಧಕರೆ. ಆದರೆ ಮಗುವಿನ ಮುಗ್ಧತೆಯ, ಹೂವಿನ ಸೂಕ್ಷ್ಮತೆಯ ಕೀಟ್ಸ್ನೇ ಭಿನ್ನ-ಅನ್ಯ ಮತ್ತು ಅನುಪಮ.