Total Pageviews

Saturday, May 30, 2020

ಹಣತೆ ಹಚ್ಚಿಡುವಾಗ


ಸತ್ತವರ ಮನೆಯೊಳಗೆ
ಎಷ್ಟೊಂದು ಸಾಯುತ್ತಾರೆ ಜನರು?
ಸತ್ತ ಮನೆಯಲ್ಲೂ ಸಾಯುತ್ತಾರೆ.
ನಿತ್ಯ ಅತ್ತರೂ ಬಿತ್ತರಗೊಳ್ಳುವ
ಸತ್ತ ಸುದ್ದಿಗಳಲ್ಲಿ, ಇಲ್ಲಿ
ಮತ್ತೆ ಸಾಯುವವರದೇ ಮಾತು
 
ನಿದ್ದೆ ತಪ್ಪುವುದಿಲ್ಲ ಸುದ್ದಿಗೆ
ನಿನ್ನೆ ಇದ್ದವರು,
ಇಂದು ನಿದ್ದೆ ಹೋದವರು
ಕ್ಷಣದ ಮೊದಲಷ್ಟೇ
ಮುತ್ತು ಹಸಿ ತುಟಿಗೊರಸಿದವರು
ತುತ್ತು-ಬಿಸಿಬಾಳ,
ಒಸಗೆ ಹೊಸ್ತಿಲಾಚೆ ಹೋದವರು
ಕಟ್ಟಿಟ್ಟ ಗಂಟುಗಳ
ನಂಟು ಕಳೆದುಕೊಂಡವರು
ಅಂಟಿಕೊಂಡ ಕನಸುಗಳ
ತೂರಿಕೊಂಡವರು
ಹೆಮ್ಮರದ ಹಣ್ಣೆಲೆಯಂತೆ
ಈಗಷ್ಟೇ ಉದುರಿ ಮಣ್ಣಾಗುವುದ ನೋಡಿ
ವಾರ್ತಾ ಲಾಪವ ಹಾಡಿ
ಎಣ್ಣೆ ಕಾಣದ ಬದುಕಿನ
ಮೇಲೊಂದು ಚಪ್ಪಡಿ ಹಾಸಿ
ಕಣ್ಣು ಕೂಡಿಸಿ ಎಂದೂ ಮಾತಾಡದವರು
ಇಂದು
ನೆನಪಿನ ಹಣತೆ ಹಚ್ಚಿಡುವಾಗ
ಹುಚ್ಚು ಮೋಹದ ಮಳೆಯೊಳಗೆ
ಜಗದ ಸಾವಿನ ಮರ್ಮ
ಸಿಡಿಲ ಗೆರೆಯಂತೆ
ಒಡಲಿಗೆ ಅರ್ಥವಾಗುತ್ತದೆ
 
ಅರಿವು ಆತ್ಮಕ್ಕೆ ಮುಟ್ಟಿ
ಗಟ್ಟಿ ಪುಟವೊಂದರ ಮೇಲೆ
ವಿವರ ಬರೆದಿಡಬೇಕೆನ್ನುವುದರಲ್ಲಿ
ಮತ್ತ್ಯಾರೋ ಸಾಯುತ್ತಾರೆ

ಬಿದ್ದ ಹೆಣಕ್ಕೆ ಹೆಗಲಾದ ನಾನು
ವಿವರಗಳಿಲ್ಲ ಒಕ್ಕಣಿಕೆಗೆ
ಅಡಿ ಟಿಪ್ಪಣೆ ಬರೆದು
ಕಡೆಗೀಲಾಗುತ್ತೇನೆ ಸಾವಿಗೆ
ಬಂಡಿ ಮುಂದೊರೆಯುತ್ತದೆ
ದಂಡಿ ದಂಡಿ ಸಾವುಗಳ ಹೊತ್ತುಕೊಂಡು

No comments:

Post a Comment