ಕೈಫಿಯತ್’ ಎಂದರೆ ಸಮಾಚಾರ, ಸುದ್ದಿ ಎನ್ನುವ ಅರ್ಥಗಳುಂಟು. ಈ ಶಬ್ಧಕ್ಕೊಂದು ವಿಶೇಷ ಸ್ಥಾನವನ್ನು ಕನ್ನಡದಲ್ಲಿ ಒದಗಿಸಿಕೊಟ್ಟವರು ನಾವು ಓದದ, ಇತ್ತೀಚೆಗಷ್ಟೇ ನಮ್ಮನ್ನಗಲಿದ ಮಹತ್ವದ ಲೇಖಕ ಚಂದ್ರಕಾಂತ ಕುಸನೂರ. ಅವರ ಪ್ರಮುಖ ಕಾದಂಬರಿಯೊಂದರ ಶೀರ್ಷಿಕೆ ‘ಒಂದು ಕೈಫಿಯತ್’. ಕೈಫಿ, ಕೈಫಿಯಾನಾ, ಕೈಫಿಯತ್ ಶಬ್ಧಗಳು ಉರ್ದು ಭಾಷಿಕರಲ್ಲಿ ಚಾಲ್ತಿಯಲ್ಲಿರುವಂತೆ ನಮ್ಮ ಹೈದರಾಬಾದ ಹಾಗೂ ಮುಂಬೈ ಕರ್ನಾಟಕದ ಕನ್ನಡ ಭಾಷಿಕರಲ್ಲಿಯೂ ಬಳಕೆಯಲ್ಲಿವೆ. ಆದರೆ, ಉರ್ದು ಕಾವ್ಯದಲ್ಲಿ ಇವುಗಳಿಗೊಂದು ವಿಶೇಷ ಪರಿಗಣನೆಯನ್ನು ತಂದುಕೊಟ್ಟವರು ಭಾರತದ ಹೆಮ್ಮೆಯ ಲೇಖಕ ಕೈಫಿ ಆಜ್ಮಿ.
ಇವರಿಗೊಂದು ಪರಿಚಯಬೇಕೆ? ಇದು ಪ್ರಶ್ನೆ. ಈ ದೇಶದ ಚಳುವಳಿಯ ಚರಿತ್ರೆಯನ್ನು ಬಲ್ಲವರಿಗೆ ಕೈಫಿ ಚಳುವಳಿಕಾರರ ಹಸಿವಿನಷ್ಟೇ ಹತ್ತಿರದವರು. ಆದರೆ ಬದಲಾಗುತ್ತಿರುವ, ಕೊಳ್ಳುಬಾಕು ಮತ್ತು ಪ್ರಚಾರಗಿರಿಗೆ ಹತ್ತಿರವಾಗುತ್ತಿರುವ ಸಧ್ಯದ ಭಾರತದಲ್ಲಿ ಕವಿ ಕೈಫಿಯ ಪರಿಚಯಕ್ಕೆ ಬೇರೆ ದಾರಿ ಬೇಕಾಗಿದೆ. ಹೀಗಾಗಿ ಮುಂದಿನ ವಿಶೇಷಣಗಳನ್ನು ಬಳಸಿದ್ದೇನೆ.
ಇವರ ಸಾವಿರಾರು ಕವಿತೆಗಳಲ್ಲಿ ನಮ್ಮನ್ನು ಕಾಡುವ ಕೆಲವೇ ಕೆಲವು ಸಾಲುಗಳನ್ನು ನಿಮ್ಮ ಸ್ಮರಣೆಗೆ ಇಲ್ಲಿಟ್ಟಿದ್ದೇನೆ.
• ಬಹಾರ್ ಆಯೆ ತೊ ಮೇರಾ ಸಲಾಮ್ ಕಹದೇನಾ
• ಥೋಡಾ ಸಾ ಪ್ಯಾರ್ ಭಿ ಮುಝೆ ದೇ ದೋ ಸಜಾ ಕೆ ಸಾಥ್
• ಬಸ್ತಿ ಮೇ ಅಪನಿ ಹಿಂದೂ-ಮುಸಲ್ಮಾನ್ ಜೋ ಬಸ್ ಗಯೆ
ಇನ್ಸಾನ್ ಕಿ ಶಕಲ್ ದೆಖನೇ ಕೋ ಹಮ್ ತರಸ್ ಗಯೆ
ಇವು ಕೈಫಿ ಎಂಬ ಕಾವ್ಯ ಕೆಂಡದ ಕಿಡಿಗಳು. ಮಹಲು-ಮಹಾತ್ಮರ ಕುರಿತು ಬರಿಯದ ಕೈಫಿ ಮನುಷ್ಯರ ಕುರಿತು, ಅವರ ಘನತೆ-ಅಪಮಾನ, ಬಡತನ-ಹೋರಾಟಗಳ ಕುರಿತು ಸಮಕಾಲೀನ ಯಾವ ಉರ್ದು ಲೇಖಕರೂ ಬರಿಯದಷ್ಟು ಕಾವ್ಯವನ್ನು ಹೊಸೆದಿದ್ದಾರೆ. ಕಾವ್ಯ ಬಿಟ್ಟು ಇನ್ನಾವುದನ್ನೂ ಬರೆಯದ ಕೈಫಿ ಅದೊಂದರ ಮೂಲಕವೇ ನಲವತ್ತರಿಂದ ಸುಧೀರ್ಘ ಎಂಟು ದಶಕಗಳ ಭಾರತದಲ್ಲಿ ಸಾಮಾಜಿಕ ಚಿಂತನೆಗಳ ಪಂಜುಗಳನ್ನು ಹೊತ್ತಿಸಿದ್ದಾರೆ, ಕ್ರಾಂತಿಯನ್ನು ಉದ್ದೀಪಿಸಿದ್ದಾರೆ. ಕವಿ ಕುವೆಂಪು ಅವರ ಭಾಷೆಯಲ್ಲಿಯೇ ಹೇಳುವುದಾದರೆ - ಸತ್ತಂತಿಹರನು ಬಡಿದೆಚ್ಚರಿಸು, ಎನ್ನುವ ಅರ್ಥದಲ್ಲಿಯೇ ಸತ್ತು ಹೋಗಿದ್ದ ಭಾರತದ ಆತ್ಮಾಭಿಮಾನವನ್ನು ಕೈಫಿ ತಮ್ಮ ಕಾವ್ಯದ ಮೂಲಕ ಬಡಿದೆಬ್ಬಿಸಿದ್ದಾರೆ.
ಅವು ಪರತಂತ್ರದ ದಿನಗಳು, ಎರಡು ಭೀಕರ ಬರಗಾಲಗಳು, ಎರಡು ಮಹಾ ಯುದ್ಧಗಳು ಇಂಥ ತಮಂಧದ ಘೋರಕಾಲದಲ್ಲಿ ಕೈಫಿಯಂತೆ ಅನೇಕ ಕವಿಗಳು ಕತ್ತಲಲ್ಲಿ ದೇಶದ ಸ್ವಾತಂತ್ರ್ಯವನ್ನು ಹುಡುಕಾಡುತ್ತಿದ್ದರು. ಇಡೀ ದೇಶ ಹಿಂದೂ-ಮುಸ್ಲಿಂ ದೊಂಬಿಗಳಿಂದ ತಲ್ಲಣಿಸಿ ಹೋಗಿತ್ತು. ಇಷ್ಟರಲ್ಲಿಯೇ ಗಾಂಧೀಜಿಯ ಹತ್ಯೆ, ನೆಹರು ಅವರ ನಿರಾಯುಧ ಸ್ಥಿತಿ, ಇವೆಲ್ಲವುಗಳ ಮಧ್ಯ ಅರಳಬೇಕಿತ್ತು ಹೊಸ ಕಾವ್ಯ. ರಮಿಸಬೇಕಿತ್ತು ರೊಚ್ಚಿಗೆದ್ದ ಮನುಷ್ಯರನ್ನು. ಕಟ್ಟಬೇಕಿತ್ತು ಜಾತ್ಯಾತೀತ ಭಾರತವನ್ನು ಹಾಗೂ ಭಾರತೀಯರನ್ನು.
ಅಂದಿನ ಪ್ರಸಿದ್ಧ ಪತ್ರಿಕೆಯಾಗಿದ್ದ ರೂಸಿ ಕರಂಜಿಯಾ ಅವರ ಒಡೆತನದ ‘ಬ್ಲಿಟ್ಜ್’ನಲ್ಲಿ ಕೈಫಿಯ ಗೆಳೆಯ ಖ್ವಾಜಾ ಅಹಮದ್ ಅಬ್ಬಾಸ್ ಬರೆದರು - Here I am involved in mankind and mankind is
involved in me. Ram and Mohammed, Gandhi and Goethe, Shakespeare and Shelly,
Lenin and Jawaharlal Neharu, they were all part of me and I was part of them. ಇದೇ ಪತ್ರಿಕೆಯ ಉರ್ದು ಅವತರಣಿಕೆಯಲ್ಲಿ ಕೈಫಿ ಬರೆದರು – ‘ಎಲ್ಲವನ್ನು ಸುಟ್ಟು ಪರಿಶುದ್ಧಗೊಳಿಸುವ ಕೆಂಡವಾಗು, ಎಲ್ಲರ ಬೆಸೆಯುವ ಮನುಷ್ಯನಾಗು’.
ಯಾವಾಗಲೂ ಹೀಗೆಯೇ - ಕಡಿಮೆ ಪದಗಳ ಹೆಗಲ ಮೇಲೆ ಅರ್ಥದ ಹಿಮಾಲಯವನ್ನು ಹೇರಿ ಕಾಡುವಂತೆ ಬರೆಯುವುದು ಕೈಫಿಯ ಖೈರಿಯತ್.
ಕವಿ ಕೈಫಿಯ ಪೂರ್ಣ ಹೆಸರು ಸೈಯದ್ ಅಖ್ತರ್ ಹುಸೇನ್ ರಿಜ್ವಿ. ಮೂಲತಃ ರಿಜ್ವಿ ಕುಟುಂಬದವರು. ಆದರೆ ಉರ್ದು ಕಾವ್ಯ ಲೋಕದಲ್ಲಿ ‘ಕೈಫಿ’ಎಂದೇ ಖ್ಯಾತರಾದರು. ಸ್ವತಂತ್ರ ಪೂರ್ವ ಭಾರತದ ಉತ್ತರ ಪ್ರದೇಶದ ಅಜಮ್ಘರ್ದಲ್ಲಿ 1919ರ ಜನೆವರಿ 14 ರಂದು ಹುಟ್ಟಿದ ಕೈಫಿ ಭಾರತೀಯ ಉರ್ದು ಸಾಹಿತ್ಯಕ್ಕೆ ಸಿನಿಮಾ ರಂಗದಲ್ಲಿ ಒಂದು ನೆಲೆಯನ್ನು ಒದಗಿಸಿದರು. ಗಂಭೀರ ಕಾವ್ಯವನ್ನು ಜನಪ್ರಿಯ ಮಾಧ್ಯಮದ ಮೂಲಕ ಮನೆ-ಮನಗಳಿಗೆ ಮುಟ್ಟಿಸಿ, ಉರ್ದು ಸಾಹಿತ್ಯವನ್ನು ಬದುಕಿಸಿದರು. ಸಿನಿಮಾ ಸಾಹಿತ್ಯವನ್ನು ಚಿಂತನಪರಗೊಳಿಸಿದರು. ಸಮಕಾಲೀನ ಸಾಹಿತ್ಯ ಪ್ರಪಂಚದ ವಿಮರ್ಶೆಯ ಗೌರವ-ಗಮನಗಳನ್ನು ಸೆಳೆಯುತ್ತಲೆ, ಉರ್ದು ಮುಷಾಯಿರಾಗಳಲ್ಲಿಯೂ ಕೈಫಿ ಜನಮನ್ನಣೆಗಳಿಸಿದ್ದು ಅವರ ಹೆಚ್ಚಿಗಾರಿಕೆಯೇ ಸರಿ. ಬದುಕಿನ ದೀರ್ಘ ಎಂಬತ್ಮೂರು ವರ್ಷಗಳ ಕಾಲ ಕೆಂಡದಂತೆಯೇ ಪ್ರಖರವಾಗಿದ್ದರು, ಜನಪರವಾಗಿದ್ದರು.
ಹೀಗೆ ಇವರೊಂದಿಗೆ ಬಂದ ಇವ ನಾಡಿನ ಇನ್ನೊಬ್ಬ ಕವಿ ಗೆಳೆಯನ ಸ್ಮರಣೆಯೂ ಇಲ್ಲಿ ಪ್ರಸ್ತುತ ಹಾಗೂ ಅನಿವಾರ್ಯ -
19 ಅಕ್ಟೊಬರ್ 1911ರಲ್ಲಿ ಜನಿಸಿದ ಮಜಾಜ್, ತೀರಿದ್ದು 5 ಡಿಸೆಂಬರ್ 1955ರಲ್ಲಿ. ತನ್ನ ರಮ್ಯ ಹಾಗೂ ಕ್ರಾಂತಿಕಾರಿ ಕವಿತೆಗಳಿಂದಾಗಿ ಜನಸಾಮಾನ್ಯರಿಗೆ ತೀರ ಹತ್ತಿರದವನಾಗಿದ್ದ ಮಜಾಜ್ ಉರ್ದುವಿನ ಗಜಲ್ ಮತ್ತು ನಜ್ಮ ಕಾವ್ಯಕ್ಕೆ ವಿಶೇಷ ಕೊಡುಗೆ ನೀಡಿದವನು. ಉತ್ತರ ಪ್ರದೇಶದ ಬಾರಾಬಂಕಿ ಪ್ರಾಂತ್ಯದ ರುಡೌಲಿ ಈತನ ಜನ್ಮಸ್ಥಳ.
ಜನಾನುರಾಗಿಯಾಗಿದ್ದ ಮಜಾಜ್ ಜನರಿಗಾಗಿ ಬರೆದ. ಜನರನ್ನೇ ತನ್ನ ಕಾವ್ಯದ ಕೇಂದ್ರ ಶಕ್ತಿಯಾಗಿರಿಸಿಕೊಂಡಿದ್ದ. ಅವನ ಕಾವ್ಯ ಆಗಸಕ್ಕೆ ಬಿಟ್ಟ ಹೂವಲ್ಲ, ಕೊಟ್ಟ ಮುತ್ತಲ್ಲ, ಕೇವಲ ನಲವತ್ನಾಲ್ಕು ವರ್ಷಗಳ ಬಾಳು ಪಡೆದು ಬಂದಿದ್ದ ಮಜಾಜ್ ಅದು ಮುಗಿಯುವುದರೊಳಗಾಗಿ ಲೋಕದೊಳಗಿನ ತನ್ನ ಅಸ್ತಿತ್ವವನ್ನು ನವೀಕರಣಗೊಳಿಸಿಕೊಳ್ಳಬೇಕಾಗಿತ್ತೇನೊ. ಅದು ಜನರಿಂದ, ಅವರ ಹೃದಯದ ಹಾಡುಗಳನ್ನು ಹಾಡುವುದರಿಂದ ಸಾಧ್ಯ ಎನ್ನುವುದು ಮಜಾಜ್ಗೆ ಚೆನ್ನಾಗಿ ತಿಳಿದಿತ್ತು.
ಮಜಾಜ್ ಓರ್ವ ಹಿರಿಯ ಕವಿಯಾಗಿ ಕೈಫಿಯ ಮುಂದಿನ ಕಾವ್ಯ ದಾರಿಯನ್ನು ಸುಗಮಗೊಳಿಸಿದ್ದನ್ನು ಮರೆಯುವಂತಿಲ್ಲ. ವಯಸ್ಸಿನಲ್ಲಿ ಒಂಬತ್ತೇ ವರ್ಷ ಮಜಾಜ್ ಹಿರಿಯನಾಗಿದ್ದರೂ ಅದು ಕೈಫಿಕಾವ್ಯದ ಎಂಬತ್ತು ವರ್ಷಗಳ ಪ್ರಶ್ನೆಗಳನ್ನು ಬಗೆಹರಿಸಿತ್ತು.
ಶೌಕತ್ ಕೈಫಿಯವರನ್ನು ಮದುವೆಯಾಗಿ, ಶಬಾನಾ ಆಜ್ಮಿ ಮತ್ತು ಬಾಬು ಆಜ್ಮಿ ಎಂಬ ಇಬ್ಬರು ಮಕ್ಕಳ ತಂದೆಯಾಗಿ ಕೈಫಿ ಕೊನೆಯವರೆಗೂ ನೆಚ್ಚಿಕೊಂಡದ್ದು ಮಾತ್ರ ಕಾವ್ಯವನ್ನು. ಕವಿಯಾಗಿ, ಸಿನಿಮಾ ಗೀತರಚನಾಕಾರರಾಗಿ ಅವರು ಏರಿದ ಎತ್ತರ ಸಾಮಾನ್ಯವಾದುದೇನಲ್ಲ. 1970 ರಲ್ಲಿ ಗೀತರಚನೆಗಾಗಿ ಅವರು ಸಿನಿಮಾ ಕ್ಷೇತ್ರದ ಮಹತ್ವದ ಫಿಲ್ಮ ಫೇರ್ ಪ್ರಶಸ್ತಿಯನ್ನು ಪಡೆದರೆ, 1975ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದು, ಸಿನಿಮಾ ಹಾಗೂ ಸಾಹಿತ್ಯಗಳೆರಡೂ ಕ್ಷೇತ್ರಗಳ ಮಹತ್ವದ ಸಮನ್ವಯಕಾರರಾಗಿದ್ದಾರೆ. ಒಂದರ್ಥದಲ್ಲಿ ಅವರದು ಸಿನಿಮಾ-ಸಾಹಿತ್ಯಕ್ಕೆ ಮುಡಿಪಾದ ಕುಟುಂಬವೂ ಕೂಡ. ಮಗ ಬಾಬು ಆಜ್ಮಿ ಫಿಲ್ಮ ಆಟೋಗ್ರಾಫರ್ ಆದರೆ, ಸೊಸೆಯಾದ ತನ್ವಿ ಆಜ್ಮಿಯೂ ಕೂಡ ಚಿತ್ರರಂಗದ ಪ್ರಮುಖ ತಾರೆ.
![]() |
Tanvi Azmi |
1942 ರಲ್ಲಿ ಸಂಪ್ರದಾಯಿಕವಾದ ಪರ್ಷಿಯನ್ ಹಾಗೂ ಉರ್ದು ಕಾವ್ಯಾಧ್ಯಯನದ ಕೈಬಿಟ್ಟು ಮಾಕ್ರ್ಸ್ವಾದವನ್ನು ಅಪ್ಪಿಕೊಂಡ ಕೈಫಿ, 1943ರಷ್ಟಕ್ಕೆ ‘ಕಮ್ಯುನಿಸ್ಟ ಪಾರ್ಟಿ ಆಫ್ ಇಂಡಿಯಾ’ದ ಸಕ್ರಿಯ ಸದಸ್ಯರಾಗಿದ್ದರು. ಮಾಕ್ರ್ಸ್ ಚಿಂತನೆಗಳ ನಿಷ್ಠಾವಂತ ಅನುಯಾಯಿ ಆಗಿದ್ದರು.
ಲಖನೌದಲ್ಲಿ ನಡೆದ ಭಾರತೀಯ ಪ್ರಗತಿಶೀಲ ಬರಹಗಾರರ ಸಮಾವೇಶದಲ್ಲಿ ಕೈಫಿ ಹೊತ್ತುಕೊಂಡ ಜವಾಬ್ದಾರಿಗಳು ಎಲ್ಲರ ಗಮನ ಸೆಳೆದು, ಅಂದಿನಿಂದ ಅವರು ಇಂಡಿಯನ್ ಪ್ರೊಗ್ರೆಸಿವ್ ರೈಟರ್ಸ್ ಸಂಘಟನೆಯ ನಾಯಕರ ಪಂಕ್ತಿಗೆ ಸೇರಿಕೊಂಡರು. ಜಮಿನ್ದಾರನೊಬ್ಬನ ಮಗನಾಗಿ ಕೈಫಿ ನೆಮ್ಮದಿಯಾಗಿ ಉಂಡುಟ್ಟು ಬದುಕಿಬಿಡಬಹುದಾದ ಎಲ್ಲ ಸೌಕರ್ಯಗಳನ್ನು ಹೊಂದಿದ್ದಾಗಿಯೂ, ಅವರು ಗುರುತಿಸಿಕೊಂಡದ್ದು ಖಾನ್ಪೂರದ ಟೆಕ್ಸಟೈಲ್ ಮಿಲ್ ಕಾರ್ಮಿಕರ ಸಂಕಷ್ಟಗಳೊಂದಿಗೆ, ಅವರ ಬದುಕಿನ ಹೋರಾಟಗಳೊಂದಿಗೆ. ಅಷ್ಟಕ್ಕೂ ನಿಲ್ಲದ ಕೈಫಿ ಮುಂದೆ ಮುಂಬೈಗೆ ತಮ್ಮ ಕಾರ್ಯಕ್ಷೇತ್ರವನ್ನು ಬದಲಾಯಿಸಿಕೊಂಡು, ಕಮ್ಯುನಿಸ್ಟ ಪಾರ್ಟಿ ಹಾಗೂ ಅಲ್ಲಿಯ ಸ್ಲಮ್ ವಾಸಿ ಜನರ ಪರವಾಗಿ ತಮ್ಮ ಕಾವ್ಯವನ್ನು ರೂಪಿಸಲಾರಂಭಿಸಿದರು.
ಕೈಫಿ ಸಾಮಾನ್ಯವಾಗಿ ಎಲ್ಲ ಉರ್ದು ಕವಿಗಳಂತೆ ಪ್ರೇಮ, ಪ್ರಣಯಗಳ ಕುರಿತೇ ಗಝಲ್ಗಳನ್ನು ಬರೆಯಲಾರಂಭಿಸಿದ್ದರೂ ಕೂಡ, ಮುಂದಿನ ಅವರ ಜನಪರ ಹೋರಾಟ ಅವರ ಕಾವ್ಯಕ್ಕೆ ಸಾಮಾಜಿಕ ಬದ್ಧತೆಯ ದೀಕ್ಷೆಯನ್ನು ನೀಡಿತು. ದಮನಿತರ ಅಸ್ತ್ರವಾಗಿ ಜವಾಬ್ದಾರಿಗಳನ್ನು ನಿಭಾಯಿಸಿದ ಅವರ ಬರಹ ಎಂದೂ ಕೂಡ ಪ್ರಚಾರ ಕಾವ್ಯ (poetry of propaganda)ದ ಅಪಾಯವನ್ನು ಎದುರಿಸಲಿಲ್ಲ ಎನ್ನುವುದು ಕೈಫಿಯ ಕಾವ್ಯ ಕ್ಷಮತೆಯನ್ನು ತೋರಿಸುತ್ತದೆ.
ದೇಶ ಸ್ವತಂತ್ರ್ಯದ ಆರು ವರ್ಷ ಮೊದಲು, ಅಂದರೆ 1943 ರಲ್ಲಿ, ಕೈಫಿಯವರ ಮೊದಲ ಕಾವ್ಯ ಸಂಕಲನ ‘ಜಂಕಾರ್’ ಪ್ರಕಟವಾಯಿತು. ಆಗ ಅವರ ವಯಸ್ಸು 24. ಆದರೆ, ಕೈಫಿ ತಮ್ಮ ಮೊದಲ ಗಝಲ್ ಬರೆದದ್ದು ಹನ್ನೊಂದು ವರ್ಷದ ಬಾಲಕನಿದ್ದಾಗ. ಉರ್ದು ಮುಷಾಯಿರಾಗಳು ಸರ್ವೇ ಸಾಮಾನ್ಯವಾಗಿದ್ದ ಆ ದಿನಗಳಲ್ಲಿ ಅವರು ತಮ್ಮ ಮೊದಲ ಗಝಲ್ ಬರೆದು ಆ ಕವಿಗೋಷ್ಠಿಯ ಅಧ್ಯಕ್ಷರಿಂದ ಪ್ರಶಂಸಿಸಲ್ಪಟ್ಟಿತು. ಆದರೆ, ಸ್ವಯಂ ಕೈಫಿಯವರ ತಂದೆ ಅದನ್ನು ನಂಬಲಿಲ್ಲ. ತನ್ನ ಅಣ್ಣನ ಕವಿತೆಯ ಸಾಲೊಂದನ್ನು ಕದ್ದು, ಒಂದಷ್ಟು ಸಾಲು ಅನುಕರಿಸಿ ಬರೆದಿದ್ದಾನೆ ಎಂದು ಸುಮ್ಮನಾದರು. ಆದರೆ, ಆಗಲೇ ಕಿಡಿಯಂತೆ ಸಿಡಿದ ಕೈಫಿ ತಕ್ಷಣವೇ
“ಇತ್ನಾ ತೋ ಜಿಂದಗಿ ಮೆ ಕರ್ಕೆ ದಿಖಾವೂಂಗಾ”ಎಂಬ ಸುಂದರ ರಚನೆಯನ್ನು ತಂದೆಯ ಮುಂದೆಯೇ ಮಾಡಿ ತೋರಿಸಿದಾಗ ಎಲ್ಲರಿಗೂ ಅಚ್ಚರಿ! ಕೈಫಿ ಇನ್ನೂ ಮೀಸೆ ಮೂಡಿಸಿಕೊಳ್ಳದ ವಯಸ್ಸಿನಲ್ಲಿದ್ದಾಗ ದೇಶದ ದೊಡ್ಡ ಗಾಯಕಿ ಬೇಗಂ ಅಖ್ತರ್ ಅವರು ಕೈಫಿಯ ಗಝಲ್ಗಳನ್ನು ಹಾಡಿ ಅವರಲ್ಲಿ, ಅವರ ಯೌವ್ವನದಲ್ಲಿ ಒಂದು ಹೆಗ್ಗುರಿಯನ್ನು ತುಂಬಿದರು.
1943 ರಿಂದ ನಿರಂತರವಾಗಿ ಪ್ರಕಟವಾಗಲಾರಂಭಿಸಿದ ಅವರ ಕಾವ್ಯ ಸಂಕಲನಗಳಲ್ಲಿ ‘ಆಖೀರ-ಎ-ಸಬ್’, ‘ಸರ್ಮಾಯಾ’, ‘ಆವಾರಾ ಸಾಜದೆ’, ‘ಕೈಫಿಯತ್’, ‘ನಯೀ ಗುಲಿಸ್ತಾನ್’ ಅತ್ಯಂತ ಪ್ರಮುಖವಾದವುಗಳು.
‘ಹೀರ್-ರಂಜಾ’ದ ಸ್ಕ್ರಿಪ್ಟ್ನ್ನು ಬರೆದವರು ಕೈಫಿ. ಕೆಲಕಾಲ ಆ ದಿನಗಳಲ್ಲಿ ರೂಸಿ ಕಾರಂಜಿಯಾರ ಬ್ಲಿಟ್ಜ್ ಪತ್ರಿಕೆಯ ಉರ್ದು ಅವತರಣಿಕೆಯಲ್ಲಿ ಅಂಕಣಕಾರರಾಗಿಯೂ ಕಾರ್ಯನಿರ್ವಹಿಸಿ, ರಾಷ್ಟ್ರೀಯವಾದವನ್ನು ಬೆಂಬಲಿಸಿದ ಲೇಖನಗಳನ್ನೂ ಕೈಫಿ ಬರೆದಿದ್ದಾರೆ. ಅವರ ಜನಪ್ರೀಯ ಚಲನಚಿತ್ರ ಗೀತೆಗಳನ್ನೊಳಗೊಂಡ ಕಾವ್ಯ ಸಂಕಲನ ‘ಮೇರಿ ಆವಾಜ್ ಸುನೋ’ ಇಂದಿಗೂ ಉತ್ತರ ಭಾರತದ ಯುವ ಸಮುದಾಯದ ಪಾಲಿನ ಕ್ರಾಂತಿ-ಕಾವ್ಯವಾಗಿದೆ. ಆ ಸಂಕಲನದಿಂದ ಉದ್ಧರಿಸದೇ ಉಳಿದ ಸಾಲುಗಳೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅಲ್ಲಿ ಅದು ಜನಪ್ರಿಯ. ಈ ಸಂಕಲನದ ಔರತ್, ಮಕಾನ್, ಡೇರಾ, ಸಂಪ್, ಬಹುರೂಪಿ - ಕವಿಗಳಂತೂ ಮನೆಮಾತು.
ಕರ್ ಚಲೆ ಹಮ್ ಫಿದಾ ಜಾನ್ವತನ್ ಸಾಥಿಯೊಂ
ಅಬ ತುಮ್ಮಾರೆ ಹವಾಲೆ ವತನ್ ಸಾಥಿಯೊಂ
ಜಿಂದಾ ರಹನೆ ಕಿ ಮೌಸಮ್ ಬಹುತ ಹೈ ಮಗರ್
ಜಾನ್ ದೇನೆ ಕಿ ವಕ್ತ ರೋಜ್ ಆತಿ ನಹಿ
“ಪ್ರೀತಿ ಮತ್ತು ಸೌಂದರ್ಯಗಳ ಪ್ರಜ್ಞೆ ಇಲ್ಲದ ಸತ್ಯ ಎಷ್ಟು ಬರಡೊ, ತ್ಯಾಗ ಬಲಿದಾನಗಳ ಜವಾಬ್ದಾರಿ ಇಲ್ಲದ ಯೌವ್ವನವೂ ಅಷ್ಟೇ ಅರ್ಥಹೀನ. ದೇಶಕ್ಕಾಗಿ, ಜನ್ಮಭೂಮಿಗಾಗಿ ಜೀವದಾನದ ಅವಕಾಶ ಮತ್ತೆ ಮತ್ತೆ ಬರಲಾರದು, ಹೀಗಾಗಿ ದೇಶಕ್ಕಾಗಿ ನನ್ನ ಪ್ರಾಣ ನೀಡಿ, ಅದನ್ನು ರಕ್ಷಿಸಿ ನಿಮ್ಮ ಕೈಗಿಟ್ಟು ಹೊರಟಿದ್ದೇನೆ. ದೇಶದ ಮುಂದಿನ ಭವಿಷ್ಯವನ್ನು ನಿಮ್ಮ ಕೈಯಲ್ಲಿ ಕೊಟ್ಟಿದ್ದೇನೆ ಗೆಳೆಯರೆ” ಎನ್ನುವ ಅವರ ಕಾವ್ಯ ಎಂದೋ ರಚನೆಯಾಗಿದ್ದರೂ, ಇಂದಿಗೂ ಅದು ನಮ್ಮೆಲ್ಲರ ಪಾಲಿನ ಅಮರ ಗೀತೆಯಾಗಿದೆ, ಪ್ರಜ್ಞೆಯಾಗಿದೆ. ಭಾರತದ ಪ್ರತಿ ಸ್ವತಂತ್ರದ ದಿನಾಚರಣೆಯೂ ಈ ಗೀತೆಯೊಂದಿಗೆ ಸಂಪೂರ್ಣ ಹಾಗೂ ಸಾರ್ಥಕ ಎನಿಸುತ್ತದೆ. ಪ್ರಜ್ಞೆಯನ್ನು ಕಾಡುವವನೇ ಪ್ರಜ್ಞಾವಂತ ಕವಿ ಎನ್ನುವುದಕ್ಕೆ ಸಾಕ್ಷಿ ಕೈಫಿ.
ಬುಜದಿಲ್ ಚಿತ್ರಕ್ಕಾಗಿ 1951 ರಲ್ಲಿ ಮೊದಲ ಚಿತ್ರಗೀತೆಯನ್ನು ಬರೆದ ಕೈಫಿ ಆನಂತರ ಶಹೀದ್ ಲತೀಪ್, ಯಹೂದಿ ಕಿ ಬೇಟಿ, ಈದ್-ಕಾ-ಚಾಂದ್, ಗರಮ್ ಹವಾ, ಕನ್ನೇಶ್ವರ ರಾಮ್, ಕಾಗಜ್-ಕೆ-ಫೂಲ್, ಹಕೀಕತ್, ಸಾಥ ಹಿಂದೂಸ್ಥಾನಿ, ಪಾಕೀಜಾ, ಬಾವರ್ಚಿ, ಶೋಲಾ ಔರ್ ಶಬನಮ್ ಹೀಗೆ ಸಾಲು ಸಾಲಾಗಿ ಸರ್ವಕಾಲಕ್ಕೂ ಸಲ್ಲುವ ಚಿತ್ರಗಳ ಗೀತೆಗಳನ್ನು ಕವಿ ಕೈಫಿ ರಚಿಸಿದರು.
ಅಂದುಕೊಂಡಂತೆ, ಕೈಫಿಯಂಥ ಲಕ್ಷಾಂತರ ಕವಿಗಳ ಕನಸು ಮತ್ತು ಹೋರಾಟದ ಫಲವಾಗಿ ದೇಶ ಸ್ವತಂತ್ರವಾಯಿತು. ದುರಂತವೆಂದರೆ ಅದರ ವಿಭಜನೆಯೂ ಆಯಿತು. ಅಖಂಡ ಭಾರತದ ಕನಸು ಕಂಡಿದ್ದ ಅದೆಷ್ಟೋ ಲೇಖಕರಿಗೆ ಭ್ರಮನಿರಸನವಾಯಿತು. ರಕ್ತಮಯ ಭಾರತ ಮನುಷ್ಯನಲ್ಲಿಯ ರಾಕ್ಷಸೀ ಪ್ರವೃತ್ತಿಗೆ ಅಂದು ಸಾಕ್ಷಿಯಾಗಿತ್ತು. ಆ ಸಂದರ್ಭದ ಒಂದು ನೆನಪು -
ಮುಂಬೈನ ‘ಮಹಿಮಾ’ ಚೌಕದಲ್ಲಿ ಹಿಂದೂಗಳು ಕಾಲಿಟ್ಟರೆ ಕೊಲೆಯಾಗುತ್ತಾರೆ. ಹಾಗೆಯೆ ಮುಸ್ಲಿಂರು ಅದೇ ಬೊಂಬಾಯಿಯ ‘ಶಿವಾಜಿ ಪಾರ್ಕ್’ ಪ್ರದೇಶದಲ್ಲಿ ಕಾಲಿಟ್ಟರೆ ಕೊಲೆಯಾಗುತ್ತಾರೆ. ಇದು 1947 ರಲ್ಲಿ ಇದ್ದ ಬೊಂಬಾಯಿ ನಗರದೊಳಗಿನ ನೈಜ ಚಿತ್ರಣ. ಈ ವೇಳೆಯಲ್ಲಿ ಇಡೀ ನಗರ ಹಿಂದೂ-ಮುಂಬೈ ಹಾಗೂ ಮುಸ್ಲಿಂ-ಮುಂಬೈ ಎಂದು ವಿಭಜನೆಯಾಗಿತ್ತು. ವಾತಾವರಣವನ್ನು ತಿಳಿಗೊಳಿಸುವ ಸಲುವಾಗಿ ಅಬ್ಬಾಸ್ ಭಾರತೀಯ ಚಿತ್ರರಂಗ, ಸಾಹಿತ್ಯಕ್ಷೇತ್ರ, ಧಾರ್ಮಿಕ ಹಿನ್ನೆಲೆ ಹಾಗೂ ರಂಗಭೂಮಿಯ ಮಹಾನ್ ಮಾನವತಾವಾದಿಗಳನ್ನೆಲ್ಲ ಒಂದೆಡ ಸೇರಿಸಿ, ಸದ್ಭಾವನಾ ಯಾತ್ರೆಯನ್ನು ಪ್ರಾರಂಭಿಸಿದರು. ಇದರ ಮುಂಚೂಣಿಯಲ್ಲಿದ್ದ ಅನೇಕರಲ್ಲಿ ಕವಿ, ಸಾಮಾಜಿಕ ಚಿಂತಕ, ಐಕ್ಯತೆಯ ಕನಸುಗಾರ ಕೈಫಿ ಆಜ್ಮಿಯೂ ಒಬ್ಬರು.
ಭಾರತೀಯ ಉರ್ದು ಸಾಹಿತ್ಯ ಕ್ಷೇತ್ರದ ಅಲಿ ಸರ್ದಾರ್ ಝಫ್ರಿ, ಸಜ್ಜದ ಜಾಹಿರ್, ಸಾಹಿರ್ ಲುದಿಯಾನ್ವಿ ಹಾಗೂ ಮಜರೂಂ ಸುಲ್ತಾನಪುರಿ ಹಾಗೂ ಅಬ್ಬಾಸರ ವಾರಗೆಯವರಾದ ಕೈಫಿ ಆಜ್ಮಿ ಇವರೆಲ್ಲರಿಗಿಂತ ಧೋರಣೆಯಲ್ಲಿ ಹಾಗೂ ಅಭಿವ್ಯಕ್ತಿಯಲ್ಲಿ ಸ್ವಲ್ಪ ಭಿನ್ನ. ಈ ಕೈಫಿ ಕೆಂಡದ ಹಾಗೆ, ಕೈಯಲ್ಲಿ ಪೆನ್ನು ಹಿಡಿದರೆ ಓದುಗರ ನರಮಂಡಲದಲ್ಲಿ ವಿದ್ಯುತ್ ಸಂಚಾರ ಮಾಡಬಲ್ಲ ಸಾಲುಗಳೇ ಹುಟ್ಟಬೇಕು. ಕೈಫಿ ಬದುಕಿದ್ದೂ ಹಾಗೆಯೆ. ಜಾತಿಯನ್ನು ಬಂಡವಾಳವಾಗಿಸಿಕೊಂಡು ಅವರ ಬಳಿ ಯಾರೂ ಸುಳಿಯುವಂತಿರಲಿಲ್ಲ. ಅಪರೂಪದ ಕಮ್ಯುನಿಸ್ಟ್ ಹಾಗೂ ವಿಶಿಷ್ಟ ಪ್ರಗತಿಶೀಲ ಕವಿ.
ಅಂದಹಾಗೆ, 1997 ಅಗಸ್ಟ್ 12 ರ The Times of
India
ದಲ್ಲಿ ಕೈಫಿ ಆಜ್ಮಿಯವರ ಒಂದು ವೈಚಾರಿಕ ಸಂದರ್ಶನವನ್ನು ಓದಿದ್ದೆ. ಅದರಲ್ಲಿಯ ಅವರ ಎರಡು ಪದ್ಯ ಅಥವಾ ಹೇಳಿಕೆ, ಏನಾದರೂ ಅಂದುಕೊಳ್ಳಿ, ಈಗಲೂ ಪ್ರಸ್ತುತ. ಅವು ಹಿಂದೂ-ಮುಸ್ಲಿಂ ಎಂಬ ಈ ಸಾಮಾಜಿಕ ವಿಭಜನೆಯನ್ನು ವಿರೋಧಿಸುತ್ತ ಅವರು ಬರೆದ ಸಾಲುಗಳು. ಅವು ನನಗೆ ಬಹಳಷ್ಟು ಇಷ್ಟವಾದ ಸಾಲುಗಳು ಎನ್ನುವುದರೊಂದಿಗೆ ಈ ಸಾಲುಗಳು ನಿಮಗೆ ಕೈಫಿ ಆಜ್ಮಿಯ ವ್ಯಕ್ತಿತ್ವ ಹಾಗೂ ಕಾವ್ಯದ ದರ್ಶನವನ್ನು ಮಾಡಿಸಬಲ್ಲವು ಎಂದು ದಾಖಲಿಸುತ್ತಿದ್ದೇನೆ.
ಸುನಾ ಹೈ, ಇನ್ಸಾನ್ ಪೆಹಲಾ ಬಂದರ ಥಾ
ಅಬ ತರಕ್ಕಿ ಕರತೆ ಕರತೆ ಕುತ್ತಾ ಹೋಗಯಾ ಹೈ, ಕುತ್ತಾ!
ಇನ್ನೊಂದು ಅವರ ಹೇಳಿಕೆ - “all our progress is stopped over
one cow and one masjid”
![]() |
Mazaj |
ಕೈಫಿ ತುಂಬಾ ಪ್ರೀತಿಸಿದ, ಬದುಕಿದ ನಗರ ಮುಂಬೈ. ಹೀಗೆ ಮುಂಬೈಯನ್ನು ಪ್ರೀತಿಸಿದವರಲ್ಲಿ ನೌಷಾದ್ ಅಲಿ, ಶಕೀಲ್ ಬದೌನಿ, ಅಖ್ತರ್-ಉಲ್-ಇಮಾನ್, ಕೆ. ಅಬ್ಬಾಸ್ ಅತ್ಯಂತ ಮಹತ್ವದವರು. ಕೈಫಿ ಮುಂಬೈಯನ್ನು ಪ್ರೀತಿಸುವುದರಲ್ಲಿ ಇವರಿಗೂ ಒಂದು ಹೆಜ್ಜೆ ಮುಂದೆ. ಕಡು ಯೌವ್ವನದಲ್ಲಿ ಪೆನ್ನನ್ನೆ ಗನ್ನಿನಂತೆ ಹಿಡಿದುಕೊಂಡು ಲಖನೌದಿಂದ ಇಲ್ಲಿಗೆ ಬಂದ ಕೈಫಿಗೆ ಸಮಕಾಲೀನ ಕವಿ ಗೆಳೆಯರ ದೊಡ್ಡ ಸಾಂಗತ್ಯವಿತ್ತು. ರಾಜೇಂದ್ರ ಕೃಷ್ಣ, ಜಗನ್ನಾಥ ಆಝಾದ್, ಸಾಹಿರ್ ಲುಧಿಯಾನ್ವಿ, ಮಜಾಜ್, ಅಲಿ ಸರ್ದಾರ್ ಜಫ್ರಿ, ಮಕ್ದುಮ್ ಮೊಹಿದ್ದಿನ್, ರೈಸ್ ಅಮರೋಹಿ - ಹೀಗೆ ಈ ಕೈಫಿ ಎಂಬ ಕಾವ್ಯ ಬಳ್ಳಿಗೆ ಹತ್ತಾರು ಸ್ನೇಹದ ಫಲಗಳು. ಇವರೆಲ್ಲ ಬಹುಪಾಲು ಕಮ್ಯುನಿಸ್ಟ್ ಚಿಂತನೆ ಹಾಗೂ ಹೋರಾಟಗಳ ಕಾರಣಕ್ಕಾಗಿಯೇ ಕೈಫಿಗೆ ಹತ್ತಿರವಾದವರು.
ಸಿನಿಮಾ, ಮುಷಾಯಿರಾ ಮತ್ತು ಮುಂಬೈ ಎಂದರೆ ಕೈಫಿ ಎನ್ನುವಷ್ಟು ಪರಸ್ಪರ ಸಂಬಂಧ. ಇಂಥ ಮುಂಬೈಯನ್ನು ಕುರಿತು ಕೈಫಿ ಒಂದೆಡೆ ಬರೆಯುತ್ತಾರೆ –
ತುಮ್ ಖುದಾ ಹೋ ಯಾ ಖುದಾ ಕೆ ಬೇಟೆ ಹೊ
ಜೋಭಿ ಹೋ ಮುಝಕೊ ಅಚ್ಚೆ ಲಗತೆ ಹೊ ಮುಝಕೊ ಸಚ್ಚೆ ಲಗತೆ ಹೊ
ಅದೊಂದು ಕಾಲ, ಈ ದೇಶ ಆಲೋಚನೆಗಳಿಂದ ಆಳಲ್ಪಟ್ಟಿತ್ತು. ಕೈಫಿ ಆಲೋಚನೆಗಳ ಆ ಕಾಲ ಘಟ್ಟದಲ್ಲಿ ಅರ್ಥಪೂರ್ಣವಾಗಿ ತೊಡಗಿಸಿಕೊಂಡವರು. ಎಸ್.ಡಿ ಬರ್ಮನ್ರ ‘ಶಹೀದ್’ ಚಿತ್ರಕ್ಕೆ ಕೆಲವು ಗೀತೆ, ಬಿಮಲ್ ರಾಯ್ರ ಕಥೆ ಆಧಾರಿತ ಅಬ್ಬಾಸ್ರ ಸಿನಿಮಾಕ್ಕೆ ಹಾಗೂ ಶಾಮ್ ಬೆನಗಲ್ರ ‘ಮಂಥನ್’ ಚಿತ್ರಕ್ಕೆ ಸಂಭಾಷಣೆ, ಚೇತನಾ ಆನಂದರ ‘ಹೀರ್ ರಾಂಜಾ’ಕ್ಕೆ ಒಂದಷ್ಟು ಗಝಲ್, ಎಂ.ಎಸ್ ಸತ್ಯು ಅವರ ‘ಗರಮ್ ಹವಾ’ ಚಿತ್ರಕ್ಕೆ ಕೆಲವು ಬರಹ ಮಾಡುತ್ತಾ ಹೋದರು ಕೈಫಿ. ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಅಂತ್ಯ ಸಂಸ್ಕಾರವನ್ನಾಧರಿಸಿಯೂ ಕೈಫಿಯ ಒಂದು ಕವಿತೆಯನ್ನು ಚಿತ್ರೀಕರಿಸಲಾಯಿತು. ಗುರುದತ್ತರ ‘ಕಾಗಜ ಕೆ ಫೂಲ್’ ಚಿತ್ರದ ಕೈಫಿಯ ಹಾಡುಗಳನ್ನು ಯಾರೂ, ಎಂದೂ ಮರೆಯಲು ಸಾಧ್ಯವಿಲ್ಲ.
![]() |
Kaifiyat Express Train |
ಕೈಫಿ ಕೊನೆ ಕೊನೆಗೆ ಆತ್ಮಕಥೆ ಬರೆದರು. ಶೀರ್ಷಿಕೆ ಕೇಳಿ ನಗಬೇಡಿ. ಕೈಫಿ ಇದ್ದದ್ದೇ ಹಾಗೆ. ನೇರ ಹಾಗೂ ದಿಟ್ಟ. ಅವರ ಆತ್ಮಕಥೆ ‘ಆಜ ಕೆ ಪ್ರಸಿದ್ಧ್ ಶಾಯರ್: ಕೈಫಿ ಆಜ್ಮಿ’. ಹೀಗೆ ತಮ್ಮನ್ನೂ ಒಳಗೊಂಡು ಎಲ್ಲವನ್ನೂ ಟೀಕಿಸಿದ, ಚಿಂತಿಸಿದ ಕೈಫಿಗೆ ವಾಸ್ತವದ ಪ್ರಜ್ಞೆ ಇತ್ತು. ಪ್ರಸಿದ್ಧಿ ಒಂದು ಕ್ಷಣದ ಮೋಡ. ಈಗ ಇಲ್ಲಿದ್ದು ಮತ್ತೊಂದು ಕ್ಷಣ ಮರೆಯಾಗುವ ಅದನ್ನು ನೆಚ್ಚಿಕೊಂಡು ಬೆಳೆದ ಕವಿಯಲ್ಲ ನಾನು ಎನ್ನುವುದನ್ನು ಸೂಕ್ಷ್ಮವಾಗಿ ಶಿರ್ಷಿಕೆಯಲ್ಲಿ ಸೂಚಿಸಿದ್ದಾರೆ.
ಇಂಥ ಕೈಫಿ, 2002ನೇ ಇಸ್ವಿಯ ಮೇ 10 ರಂದು ತಮ್ಮ 83ನೇ ವಯಸ್ಸಿನಲ್ಲಿ ತೀರಿಕೊಂಡರು. ಅವರಿಗೆ ನೀಡಲಾದ ಪದ್ಮಶ್ರೀ, ಸೊವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ಲೋಟಸ್ ಅವಾರ್ಡ್ ಆಫ್ ಆಫ್ರೋ ಏಷಿಯನ್ ರೈಟರ್ಸ್, ಭಾರತ ಸರ್ಕಾರದ ಮಿಲಿಯನಿಯಮ್ ಅವಾರ್ಡ್, ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯ ನೀಡಿದ ಗೌರವ ಡಾಕ್ಟರೇಟ್ ಎಲ್ಲ ಇಲ್ಲಿಯೇ ಉಳಿದುಕೊಂಡಿವೆ. ಎಲ್ಲ ಸ್ಮರಣಿಕೆಗಳು ಇಲ್ಲಿಯೇ ಉಳಿದುಕೊಳ್ಳುತ್ತವೆ, ಹಿಂದುಳಿದವರ ಹೆಣಭಾರವಾಗುತ್ತವೆ, ಸ್ಮರಣೆ ಮಾತ್ರ ನಿರಂತರವಾಗುತ್ತದೆ.
ಕೈಫಿಯ ಸ್ಮರಣೆಗಾಗಿ ಅವರ ಹುಟ್ಟೂರಾದ ಅಜಮ್ಘರ್ ಹಾಗೂ ದೆಹಲಿಯ ಮಧ್ಯ ‘ಕೈಫಿಯತ್ ಎಕ್ಸ್‍ಪ್ರೆಸ್’ ಟ್ರೇನ್ ಈಗಲೂ ನಿತ್ಯ ಓಡುತ್ತಲೇ ಇದೆ. ಹೈದರಾಬಾದಿನ ಗಲ್ಲಿಯೊಂದರ ಮುಖ್ಯ ಬೀದಿಗೆ ‘ಕೈಫಿ ಆಜ್ಮಿ ರೋಡ್’ ಎಂದೇ ಹೆಸರಿಸಲಾಗಿದೆ. ಭಾರತವೆನ್ನುವ ಪ್ರಪಂಚದ ಸಾಕಷ್ಟು ಗೌರವಗಳು ಕೈಫಿ ಎನ್ನುವ ಕವಿಗೆ ಸಂದಿವೆ. ಆದರೆ ಅವರು ಕಂಡ ಕನಸುಗಳು ಮಾತ್ರ ಭಾರತೀಯರ ಬದುಕಿಗೆ ಇಂದಿಗೂ ದಕ್ಕದೆ ಉಳಿದುಕೊಂಡಿವೆ.
ಇದು ದುರಂತವೋ, ಜಾಣ್ಮೆಯೋ ಕಾಲವೇ ಉತ್ತರಿಸಬೇಕು.
No comments:
Post a Comment