ಬೇಧವೆಣಿಸದೆ ನೇಗಿಲಣ್ಣನ
ಹರಿವ ಬೆವರಿಗೆ ಹನಿಯಾಗುವೆ
ಚಿಂದಿಯಾರಿಸೊ ಮುದ್ದುಮಕ್ಕಳ
ಗಲ್ಲಿ ನಲ್ಲಿಯ ಜೀವವಾಗುವೆ
ಕೊಳೆಯಲ್ಲೆ ಕೊಳೆಯುತಿರುವ
ಹುಚ್ಚನ ಮೈ ಬಟ್ಟೆ
ತೊಳೆವ ಇಳೆಯ ಮಳೆಯಾಗುವೆ.
ಇವು ಕವಿಮಿತ್ರ ಶ್ರೇಯಾಂಶ ಕೋಲಾರರ ಕವಿತೆಯ ಕೆಲವು ಸಾಲುಗಳು. ತುಂಬಾ ಭರವಸೆಯ, ತೀಕ್ಷ್ಣ ಆಲೋಚನೆಗಳ, ಹಾಗೂ ನಿರೀಕ್ಷೆಗಳ ಮಿತ್ರ ಈತ ನನಗೆ. ಈತ ನಕ್ಕಾಗಲೆಲ್ಲ ರೋಮ್ಯಾಂಟಿಕ್ ಕಾವ್ಯದ ಕವಿ ಲಾರ್ಡ್ ಬೈರನ್ನ ‘Be thou the rainbow to the storms of life’ ಎನ್ನುವ ಸಾಲು ನೆನಪಾಗುತ್ತಿರುತ್ತದೆ. ಹೌದು, ಬಿರುಗಾಳಿಗೆ ಬಾಡುವ ಕವಿಯಲ್ಲ ಈತ, ಬಣ್ಣದ ಬೆರಗನ್ನು ಹೊತ್ತು ತರುವ ಕಾಮನಬಿಲ್ಲಿನಂತಾಗುವ ಕನಸುಗಳ ಗೆಳೆಯ. ಅಡಿಗರ ಮಾತಿನಲ್ಲಿಯೇ ಹೇಳುವುದಾದರೆ ಸದಾ ಏನಾದರೂ ಮಾಡುತ್ತಲೇ ಇರುವ ತಮ್ಮ. ಈಗ ಇಂಥದೊಂದು ಬೃಹತ್ ಗ್ರಂಥವನ್ನು ಬರೆದು ತನ್ನೂರಿನ ಋಣ ತೀರಿಸಿದ್ದಾನೆ.
ಈ ಬೃಹದ್ ಗ್ರಂಥ ಸಾಂಪ್ರದಾಯಿಕ ಚೌಕಟ್ಟಿನ ಮಹಾ ಪ್ರಬಂಧವೆನಲ್ಲ. ಆದರೆ ಅದರೆಲ್ಲ ಶಿಸ್ತುಗಳನ್ನೂ ರೂಢಿಸಿಕೊಂಡ ಒಂದು ಮಹತ್ವದ ತಲಸ್ಪರ್ಶಿ ಅಧ್ಯಯನ. ವೃತ್ತಿಯಿಂದ ಶಿಕ್ಷಕನಾಗಿರುವ ಶ್ರೇಯಾಂಶರ ವ್ಯಕ್ತಿತ್ವಕ್ಕೆ, ಶಿಸ್ತಿಗೆ ಮಹತ್ವದ ಸಾಕ್ಷಿ. ಇದು ಓದಬೇಕಾದ ಕೃತಿ, ಯಾಕೆಂದರೆ ಇದು ನಮ್ಮ ಭವ್ಯ ಆಧ್ಯಾತ್ಮಿಕ ಇತಿಹಾಸ. ಇದು ಓದಿಸಬೇಕಾದ ಕೃತಿ, ಯಾಕೆಂದರೆ ಇದು ನಮ್ಮ ಮುಂದಿನ ಪೀಳಿಗೆ ಕಳೆದುಕೊಂಡ ನಿಧಿಯನ್ನು ತೋರಿಸುವ ಆಕರ ಗ್ರಂಥ.
ನೇರವಾಗಿ ಶ್ರೇಯಾಂಶರ ಕೃತಿಗೆ ಬರುತ್ತೇನೆ. ಅದಕ್ಕೂ ಮುಂಚೆ ಕೆಲವು ಮಾತುಗಳು –
ಮಾನವ ಇತಿಹಾಸದಲ್ಲಿ ಕರ್ನಾಟಕದ ಶರಣ ಸಂಸ್ಕøತಿಯ ಘಟ್ಟ ಮನುಷ್ಯನ ಬುದ್ಧಿ-ಭಾವಗಳ ಸಮೃದ್ಧಿಗೊಂದು ಸುಂದರ ಸಾಕ್ಷಿ. ಸಮ ಸಮಾಜದ ಭೌತಿಕ ಸ್ಥಾಪನೆಗಿಂತಲೂ ಮುಂಚೆಯೇ ಅವರು ಗತಿಸಿದರಾದರೂ ಅದನ್ನು ಸೋಲೆನ್ನಲಾಗದು, ವೈಫಲ್ಯವೆಂದೂ ಪರಿಗಣಿಸಲಾಗದು. ಹಾಗೆ ನೋಡಿದರೆ, ಆದರ್ಶದ ಹಾದಿಯಲ್ಲಿ ನಡೆದ ಮಾನವನ ಹೋರಾಟ, ಯತ್ನಗಳೆಲ್ಲವೂ ಮಹಾ ವಿಜಯಗಳೆ. ಅಂಥ ಆಲೋಚನೆಯೇ ಒಂದರ್ಥದಲ್ಲಿ ಗೆಲುವು.
ಯಾವುದೇ ಆಲೋಚನೆಯ ಸ್ಥಾಪನೆ ಮತ್ತು ಅವಸಾನ ಒಂದು ನಿರ್ದಿಷ್ಟ ಅವಧಿಯಲ್ಲಿ ಜರಗುವಂಥದ್ದಲ್ಲ. ಆಲೋಚನೆ ಎನ್ನುವುದು ಜಂಗಮ. ಅದು ಅವ್ಯಾಹತ, ಅಮೋಘ ಶಕ್ತಿಶಾಲಿ ಪ್ರವಾಹ. ಮನುಷ್ಯನ ಬುದ್ಧಿ ಸ್ಥಾಪಿತ ಕಾಲ, ದೇಶ, ಧರ್ಮಗಳ ಮೇರೆಗಳು ಆಲೋಚನೆಗಳನ್ನು ನಿಯಂತ್ರಿಸಲಾರವು. ಅವು ವ್ಯಕ್ತಿಯನ್ನು ಮಾರ್ಗ ಮಾಡಿಕೊಂಡು ಬರುವವಾದರೂ ವ್ಯಕ್ತಿಯೊಂದಿಗೇ ನಶಿಸುವುದಿಲ್ಲ. ಹೀಗೆಯೇ ಹೋದವನು ಬುದ್ಧ ಚೀನಾ, ಜಪಾನಗಳೆಡೆಗೆ. ಹೀಗೆಯೇ ಬಂದವನು ಜಿಸಸ್ ಭಾರತ, ಶ್ರೀಲಂಕಾಗಳೆಡೆಗೆ. ಮೊಸೆಸ್, ಪೈಗಂಬರ್, ಸಾಕ್ರೆಟಸ್, ಕಾರ್ಲ್ಮಾಕ್ರ್ಸ ಆಲೋಚನೆಗಳಾಗಿ ಹೀಗೆಯೇ ಆಳಿದವರು ಇಡೀ ಪ್ರಪಂಚವನ್ನು. ಹೀಗೆಯೇ ಆಲೋಚನೆಗಳಾಗಿ ಇಂದಿಗೂ ನಮ್ಮ ಮಧ್ಯ ಉಳಿದವರು ಶರಣರೂ ಕೂಡ. ಅಂತೆಯೇ ಸಾಕ್ರೆಟಸ್ ಹೇಳಿದ – There is only one God, knowledge, and one evil,
ignorance.
ಕಲ್ಯಾಣಕ್ಕೂ ಮುಂಚೆ ಕೋಟ್ಯಾಂತರ ಸಾಮ್ರಾಜ್ಯಗಳು ಮಾನವ ಇತಿಹಾಸದಲ್ಲಿ ಸಿಗುತ್ತವೆ, ಕಲ್ಯಾಣದ ನಂತರವೂ ಲೆಕ್ಕಕ್ಕೆ ಸಿಗದಷ್ಟು ಸರ್ಕಾರಗಳು ಹುಟ್ಟಿ ನಾಶವಾಗುತ್ತವೆ. ಆದರೆ ಇವು ಮನುಷ್ಯನ ಭೌತಿಕ ಇತಿಹಾಸದ ಸಣ್ಣ-ಪುಟ್ಟ ಸಾಕ್ಷಿಗಳಾಗುತ್ತವೆ ವಿನಃ ಭೌದ್ಧಿಕತೆಯನ್ನು ಕಾಡುವುದಿಲ್ಲ. ಅವಸಾನಗೊಂಡು ಅಭೌತಿಕವಾದ ಕಲ್ಯಾಣದ ಶರಣ ಸಂಸ್ಕøತಿ ಮಾತ್ರ ನಮ್ಮನ್ನು ಇಂದಿಗೂ ಕಾಡುತ್ತಿದೆ. ಕಾರಣ ಶರಣರ ಕಲ್ಯಾಣ ರಾಜ್ಯದ ಪರಿಕಲ್ಪನೆ ಒಂದು ಸಮ ಸಮಾಜದ ಆಲೋಚನೆಯಾಗಿತ್ತು. ಸುಂದರ, ಸರ್ವಾಭಿವೃದ್ಧಿಯ, ಸಕಲರ ಲೇಸಿನ ಕನಸಾಗಿತ್ತು.
ಹಾಗೆ ನೋಡಿದರೆ, ಪ್ರಪಂಚವನ್ನು ಆಳುವವರು, ಆಳಿದವರು ರಾಜರೂ ಅಲ್ಲ ರಾಜಕಾರಣಿಗಳೂ ಅಲ್ಲ. ಈ ಲೋಕ ವಿಸ್ತಾರಗೊಂಡಿದ್ದು ಕನಸುಗಳಲ್ಲಿ, ನಿಯಂತ್ರಿಸಲ್ಪಟ್ಟಿದ್ದು ಆಲೋಚನೆಗಳಿಂದ. ಈ ಅರ್ಥದಲ್ಲಿ ಆಲೋಚನೆಗಳೇ ಪ್ರಪಂಚವನ್ನಾಳುವ ಶಕ್ತಿಗಳು. ನನ್ನ ಈ ವಾದವನ್ನು ಸಮರ್ಥಿಸುವ ನಿಟ್ಟನಲ್ಲಿದೆ ಶ್ರೇಯಾಂಶರ ಈ ಅಧ್ಯಯನ.
ಶರಣ ಸಂಸ್ಕøತಿಯ ಕುರಿತು ಹೇಳುತ್ತಿದ್ದೆ ನಾನು. ಈ ಸಂದರ್ಭದ ಮಹತ್ವದ ಚಿಂತಕ ಮರುಳ ಶಂಕರ ಹೇಳುವಂತೆ ಆಗಿನ ಕಲ್ಯಾಣ ‘ಅನಾಚಾರಿ’, ‘ವೃತ ಗೇಡಿ’, ‘ದುರಾಚಾರಿ’ಗಳಿಗೆ ಇಂಬುಗೊಡದ ವೃತಸ್ಥರ ಸಾಮ್ರಾಜ್ಯವದು.
ಬೆಟ್ಟವ ನೆಮ್ಮಿದಡೆ ಕಟ್ಟಿಗೆಯ ತಾಳುವದು,
ಅದಾವ ಅಚ್ಚರಿ ಎನಿಸುವದು?
ಪ್ರಾಣಕ್ಕೆ ಹೊಣೆಯಾದಲ್ಲಿ ಕಾದುವದು,
ಅದಾವ ಅಚ್ಚರಿ ಎಂದೆನಿಸುವದು?
ಪರಕಾಯವ ತೊಟ್ಟಿರ್ದಲ್ಲಿ ಅಚ್ಚರಿಗೆ ಅರಿಬಿರಿದೇಕೆ?
ನಿಮ್ಮುವ ಕಾರುಣ್ಯವೆನಗಾಗಿರ್ದಲ್ಲಿ
ಎನಗೆಲ್ಲೆಲ್ಲಿ ಸುಖವಲ್ಲಲ್ಲಿಯೂ ನೀವೆ.
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚನ್ನ ಮಲ್ಲಿಕಾರ್ಜುನದೇವಯ್ಯಾ,
ಪ್ರಭುದೇವರ ಕಾರುಣ್ಯ ಪ್ರಸಾದದಿಂದ
ಆನು ಬದುಕಿದೆನು ಕಾಣಾ, ಸಂಗನಬಸವಣ್ಣ
ಈ ವಚನ ಸಾರುವಂತೆ, ಲೋಕ ಸಹಜಗಳಿಗೆ ಅಚ್ಚರಿಗೊಂಡವರಲ್ಲ ಮರುಳಶಂಕರ ದೇವರು. ತನ್ನೊಳಗಿಲ್ಲದಾವುದೂ ಈ ಲೋಕದಲ್ಲಿಲ್ಲ. ಆದರೆ ತನಗೆ ದಕ್ಕಬೇಕಾದ ಕಾರುಣ್ಯ ಮಾತ್ರ ಲೋಕದ್ದು. ಲೋಕ ಕರುಣಿಸದಲ್ಲದೇ ಸಿಗದ ರೋಮಾಂಚನದ ಅನುಭವ ಅದು. ಕಾರುಣ್ಯ ಮರುಳಶಂಕರ ದೇವರಂಥ ಶರಣರಿಗೆ ಅಚ್ಚರಿಯಾಗಲು ಸಾಧ್ಯವಿದೆ. ಮರುಳಶಂಕರ ದೇವರ ಅಲೆಮಾರಿತನದ ಹಿನ್ನಲೆ ಇರುವ ಯಾವುದೇ ವ್ಯಕ್ತಿಗೂ ಕೂಡ ಅದು ಅಂಥ ಅನುಭವವೇ ಆದೀತು. ಯಾಕೆಂದರೆ ಈ ಕಾರುಣ್ಯವನ್ನು ಅರಸುತ್ತ ಮರುಳಶಂಕರರು ಬಂದದ್ದು ಗಾಂಧಾರ ನಾಡಿನಿಂದ.
ಲೇಖಕ ಶ್ರೇಯಾಂಶ ಕೋಲಾರ ದಾಖಲಿಸಿರುವಂತೆ ಗಾಂಧಾರದಿಂದ ಅಂದರೆ, ಇಂದಿನ ಅಪಘಾನಿಸ್ಥಾನದ, ಬರ್ಬರ್ ಪ್ರಾಂತ್ಯದ ಕಣ್ಣತ್ತೂರು ಗ್ರಾಮದವರು ಮರುಳಶಂಕರರು. ನಮ್ಮ ಶರಣರು ಕಟ್ಟಿದ ಕಲ್ಯಾಣ ರಾಜ್ಯದ ಭಾವ-ಭೌದ್ಧಿಕ ಶ್ರೀಮಂತಿಕೆಯನ್ನು ತಿಳಿದು ಮರುಳಾಗಿ ಕರ್ನಾಟಕಕ್ಕೆ ಬಂದ ಮರುಳಶಂಕರರು ಇಲ್ಲಿಯ ಅನುಭವ ಮಂಟಪದ ಪ್ರಸಾದ ಕುಂಡದ ಪಕ್ಕದಲ್ಲಿ ಮರುಳು ಮರುಳಾಗಿ ಹನ್ನೆರಡು ವರ್ಷ ಬದುಕಿ, ಅನಾಮಧೇಯತೆಯ ಅತುಲ, ಅಮುಲ್ಯ, ಅಮಿತ ಆನಂದವನ್ನು ಅನುಭವಿಸಿದವರು.
ಎಲ್ಲಿಂದಲೋ ಬಂದ ಈ ಜಂಗಮನ ಕುಲಗೋತ್ರಗಳ ಗೊಡವೆ ಇಲ್ಲ ನಮ್ಮ ಶರಣರಿಗೆ, ಸಾವಿರ ವರ್ಷ ತಾನಿಲ್ಲಿಯೇ ಬದುಕಿದ್ದೆ ಎನ್ನುವಂತಿದ್ದ ಮರುಳಶಂಕರರಿಗೆ ಭಯವಿಲ್ಲ, ಅನ್ಯತೆ-ಅಸಡ್ಯಗಳಿಲ್ಲ. ಹೀಗಾಗಿ, ಕಲ್ಯಾಣದ ಶರಣರ ‘ಶರಣ ಸತಿ ಲಿಂಗ ಪತಿ’ ಪರಿಕಲ್ಪನೆಗೆ ತನ್ನ ಅಫಗನ್ ನಾಡಿನ ಸೂಫಿ ಪರಂಪರೆಯ ‘ಶರಣ ಪತಿ ಲಿಂಗ ಸತಿ’ ನಿಲುವನ್ನು ಬೆರೆಸಿ, ಅನುಭಾವವನ್ನು ವಿಸ್ತಾರಗೊಳಿಸಿದವರು ಮರುಳಶಂಕರ ದೇವರು. ಭಾಷೆ-ದೇಶಗಳೆರಡೂ ಬೇರೆಯವೇ ಆದ ಸಂದರ್ಭದಲ್ಲಿಯೂ ಮರುಳಶಂಕರ ದೇವರಿಗೆ ದಕ್ಕಿದ್ದು ಪ್ರಭುದೇವ, ಬಸವಣ್ಣ, ಅಪ್ಪಣ್ಣ, ಬೊಮ್ಮಯ್ಯ ಹಾಗೂ ಸಿದ್ಧರಾಮರ ಕಾರುಣ್ಯದ ಭರವಸೆ.
ಕಲ್ಯಾಣ ಕರ್ನಾಟಕದ ಈ ಕಾರುಣ್ಯದ ಪ್ರಸಾದವನ್ನು ಉಂಡು, ಉಸುರಿ, ವಿಸ್ತಾರಗೊಂಡವರು ಮರುಳಶಂಕರರು. ಅವರು ಬರೆದದ್ದು ಕೇವಲ 35 ವಚನಗಳು. ಈ ಎಲ್ಲ ವಚನಗಳ ತುಂಬ ಅವರ ನೆನಹು ಕಾರುಣ್ಯದ್ದೆ. ಅದಕ್ಕೊಂದು ಸಾಕ್ಷಿ –
ಬಸವಣ್ಣ ಚನ್ನಬಸವಣ್ಣ ಪ್ರಭುದೇವ ಮಡಿವಾಳ ಮಾಚಯ್ಯ
ಸಿದ್ಧರಾಮಯ್ಯ ಸೊಡ್ಡಳ ಬಾಚರಸರು ಹಡಪದಪ್ಪಣ್ಣ
ಪಡಿಹಾರಿ ಉತ್ತಣ್ಣ ಅವ್ವೆ ನಾಗಾಯಿ ಕೋಲಶಾಂತಯ್ಯ
ಡೋಹರ ಕಕ್ಕಯ್ಯ ಮೊಗವಾಡದ ಕೇಶಿರಾಜದೇವರು
ಖಂಡಣೆಯ ಬೊಮ್ಮಣ್ಣ ಮೊದಲಾದ ಅಸಂಖ್ಯಾತ ಮಹಾಪ್ರಮಥಗಣಂಗಳ
ಪರಮಪ್ರಸಾದವ ಕೊಂಡು ಬದುಕಿದೆನಯ್ಯಾ,
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
ಭೌತಮುಖಿಯಾಗಿದ್ದ ಪ್ರಪಂಚದ ಬಹುಪಾಲು ರಾಷ್ಟ್ರಗಳಲ್ಲಿ ಇಲ್ಲದ ಅದ್ಭುತ ಶ್ರೀಮಂತಿಕೆಯೊಂದು ಈ ದೇಶದಲ್ಲಿ ಯಾವಾಗಲೂ ಇದ್ದುದರ ಫಲವಾಗಿ ಮರುಳಶಂಕರರಿಂದ ಪ್ರಾರಂಭವಾಗಿ, ರೋಮಾನ್ ರೋಲಾಂ ವರೆಗಿನ ಸಾವಿರಾರು ಸಂತರಿಗೆ ಈ ದೇಶ ಆತ್ಮಶೋಧದ ನೆಲೆಯಾಯಿತು. ಒಬ್ಬೊಬ್ಬ ವಚನಕಾರರ ಶೋಧದ ವಸ್ತು ಮತ್ತು ಅನುಭಾವದ ಪರಿಯೇ ಭಿನ್ನವಾಯಿತು. ಬಯಲು ಅಲ್ಲಮನನ್ನು ಕಾಡಿದರೆ ಭಕ್ತಿ ಬಸವಣ್ಣನನ್ನು, ವೈರಾಗ್ಯ ಅಕ್ಕಮಹಾದೇವಿಯನ್ನು ಕಾಡಿದರೆ ವಿನಯ ಸೊಡ್ಡಳ ಬಾಚರಸನನ್ನು. ಹೀಗೆ, ಮರುಳಶಂಕರರನ್ನು ಕಾಡಿದ ಮತ್ತು ಅವರ ವಚನಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಂಡ ಮಹತ್ವದ ಸಂಗತಿ ಪರಂಪರೆ. ಕಲ್ಯಾಣದ ಶರಣ ಪರಂಪರೆಗೆ ಮತ್ತೆ ಮತ್ತೆ ಉಪಕೃತಿಯನ್ನು ಸೂಚಿಸಿದ ವಚನಗಳನ್ನು ಮರುಳಶಂಕರರು ಬರೆದಷ್ಟು, ಬೆರೆಯವರು ಬರೆದ ಉದಾಹರಣೆಗಳಿಲ್ಲ.
ಕಲ್ಯಾಣ, ಶ್ರೀಶೈಲ, ಆನೆಗುಂದಿ, ನವಿಲುತೀರ್ಥ, ಹೆಬ್ಬಳ್ಳಿ, ಅಂತಿಮವಾಗಿ ಕಮತಪುರ ಅಂದರೆ ಇಂದಿನ ಕಮತಗಿ ಗ್ರಾಮದವರೆಗೆ ಹರಿದು ಬಂದ ಮರುಳಶಂಕರರ ಜೀವನ ಮತ್ತು ವಚನಗಂಗೆ ಸಮಾಧಾನಿಸಿದ್ದು ಮಲಪ್ರಭೆಯ ತಟದಲ್ಲಿ. ಇದೊಂದು ಅಪರೂಪದ ಆಧ್ಯಾತ್ಮ ಜೀವನಗಾಥೆ. ಮರುಳಶಂಕರರು ಹುಚ್ಚೇಶ್ವರರಾಗಿ ಮಾರ್ಪಟ್ಟಿದ್ದು ಇದೇ ಜೀವನ ಪ್ರವಾಹದಲ್ಲಿ. ‘ಮರುಳ’ ಮತ್ತು ‘ಹುಚ್ಚ’ ಇವೆರಡೂ ಆಧ್ಯಾತ್ಮದ ತುರ್ಯಾವಸ್ಥೆಗಳು. ಶಂಕರದೇವರು ಆದಿಯಲ್ಲಿ ಮರುಳ, ಅಂತ್ಯದಲ್ಲಿ ಹುಚ್ಚೇಶ್ವರ. ಆದಿಯಲ್ಲಿ ಆಲೋಚನೆ, ಅಂತ್ಯದಲ್ಲಿ ಅನುಭಾವ. ಈ ಕಾರಣವೇ ಅವರು ನಿರಂತರ.
ಗಾಂಧಾರದಿಂದ ಹೊರಟ ಶಂಕರರು ನುಡಿ-ಗಡಿಗಳನ್ನು ದಾಟುತ್ತ ಬಾಚಿಕೊಂಡವರನ್ನೆಲ್ಲ ಬದಲಾಯಿಸುತ್ತ, ದಿಕ್ಕಿಲ್ಲದವರಿಗೆ ದೊಂದಿಯಾಗಿ, ಬರಡಿಗೆ ಹಯನಾಗಿ, ನೀಡುತ್ತ, ನಿಜದ ನೆಲೆಯನ್ನು ಅರಸುತ್ತ, ಕಮತಪುರಕ್ಕೆ ಬಂದು ನಿಂತದ್ದು ಈಗ ಇತಿಹಾಸ. ಆನಂತರ ಪೀಠ ಸ್ಥಾಪಿಸಿ, ಗುರುವಾಗಿ ಹದಿಮೂರನೇಯ ಪೀಠಾಧೀಶರವರೆಗೂ ಅವರು ನಿರಂತರವಾದುದು ಅವರ ಅನುಭಾವ ಹಾಗೂ ತಪಸ್ಸುಗಳ ಮೂಲಕ. ಎರಡನೇಯ ಪೀಠಾಧಿಪತಿಗಳಾದ ನಿರ್ವಾಣಶಿವಯೋಗಿಗಳಲ್ಲಿ ಪವಾಡ ಸದೃಶ್ಯರಾಗಿ, ಮೂರನೇ ಪೀಠಾಧಿಪತಿಗಳಾದ ಶರಣಾಕ್ಯ ಮಹಾಸ್ವಾಮಿಗಳಲ್ಲಿ ಸಕಲ ಶಾಸ್ತ್ರಗಳನ್ನರಗಿಸಿಕೊಂಡ ಪಂಡಿತರಾಗಿ, ನಾಲ್ಕನೇಯ ಪೀಠಾಧಿಪತಿ ಹುಚ್ಚೆಂದ್ರರಲ್ಲಿ ಕಾಯಕ ಯೋಗಿಗಳಾಗಿ, ಐದನೇ ಪೀಠಾಧಿಪತಿಗಳಾದ ಮುರುಘಾರ್ಯರಲ್ಲಿ ಮಹಿಮಾವಂತರಾಗಿ, ಆರನೇಯ ಪೀಠಾಧಿಪತಿಗಳಾದ ಲಿಂಗಾರ್ಯರಲ್ಲಿ ಸಂಗೀತ ಸಾಹಿತ್ಯಗಳ ಪಾಂಡಿತ್ಯ ಸಾಧಿಸಿದ ಕೋವಿದರಾಗಿ, ಏಳನೇಯ ಪೀಠಾಧಿಪತಿ ಚನ್ನವೀರರಲ್ಲಿ ಕಾಯಕ ತತ್ವದ ಶಿವಯೋಗಿಗಳಾಗಿ, ಎಂಟನೇಯ ಪೀಠಾಧಿಪತಿ ಹುಚ್ಚೇಂದ್ರರಲ್ಲಿ ಭಕ್ತ ಜನಪ್ರಿಯರಾಗಿ, ಒಂಬತ್ತನೇಯ ಪೀಠಾಧಿಪತಿಗಳಾದ ಮುರುಗೇಂದ್ರ ಮಹಾಸ್ವಾಮಿಗಳಲ್ಲಿ ವಿಭೂತಿ ಪುರುಷರಾಗಿ, ಹತ್ತನೇಯ ಪೀಠಾಧಿಪತಿ ಕಾಶಿಪಂಡಿತವರೇಣ್ಯ ಹುಚ್ಚೇಶ್ವರರಲ್ಲಿ ದಾಸೋಹ ಮೂರ್ತಿಗಳಾಗಿ, ಹನ್ನೊಂದನೇಯ ಪೀಠಾಧಿಪತಿ ಮುಪ್ಪಯ್ಯ ಮಹಾಸ್ವಾಮಿಗಳಲ್ಲಿ ಸರಸ್ವತಿ ಪುತ್ರರಾಗಿ, ಹನ್ನೆರಡನೇಯ ಪೀಠಾಧಿಪತಿಗಳಾದ ಅಯ್ಯಪ್ಪ ಮಹಾಸ್ವಾಮಿಗಳಲ್ಲಿ ಜ್ಞಾನದಾಸೋಹದ ಗುರುವಾಗಿ, ಹದಿಮೂರನೇಯ ಪೀಠಾಧಿಪತಿಗಳಲ್ಲಿ ಪಂಡಿತ ಪಾಮರರ ಪೋಷಕರಾಗಿ ಅಲ್ಲಿಂದ ಇಲ್ಲಿಯವರೆಗೂ ನಿರಂತರವಾದವರು ಮೂಲ ಮರುಳಶಂಕರರೇ. ಈ ಮರುಳಶಂಕರನೆಂಬ ‘ಹುಚ್ಚೇಶ’ ಹರಿದುಬಂದ ದೇಹಗಳು ಭಿನ್ನ, ಆದರೆ ಅವುಗಳ ಹಿಂದಿನ ಕನಸು, ಕಲ್ಪನೆ ಒಂದೆ. ಅದು ಲೋಕ ಕಲ್ಯಾಣ.
ಕಾಲ ಮಾಸದ ಕೆಲವು ಸೌಂದರ್ಯಗಳಿರುತ್ತವೆ. ಅಂಥ ಸೌಂದರ್ಯಗಳ ಪುನರ್ ಮನನ ಹಾಗೂ ಆ ಮೂಲಕ ಅದರ ಪುನರ್ಸೃಷ್ಠಿ ವರ್ತಮಾನದ ದೃಷ್ಠಿಯಿಂದ ಅತ್ಯಾವಶ್ಯ. ಈ ಅವಶ್ಯಕತೆಯ ಹಿನ್ನೆಲೆಯಲ್ಲಿ ಪ್ರಸ್ತುತ ಕೃತಿ ರಚನೆಯಾಗಿದೆ. ಹೊಳೆ ಹುಚ್ಚೇಶ್ವರ ಗುರು ಪರಂಪರೆಯನ್ನು ಕುರಿತು ಈ ಹಿಂದೆ ಅನೇಕ ಕೃತಿಗಳು ರಚನೆಯಾಗಿವೆ. ದಿವಂಗತ ಶ್ರೀಮಾನ್ ಎಚ್.ಆರ್.ಭಸ್ಮೆ ಹಾಗೂ ಬಿ.ಆರ್.ಅರಶಿನಗೋಡಿಗಳಂಥ ರಂಗಕರ್ಮಿಗಳಿಂದ ನಾಟಕಗಳು ರಚನೆಗೊಂಡು, ಹುಚ್ಚೇಶ್ವರ ಗುರು ಪರಂಪರೆ ಜನಜನಿತವಾಗಿದೆ. ಜಾನಪದ, ಪುರಾಣ, ಪ್ರವಚನ, ವ್ಯಾಖ್ಯಾನ ಹಾಗೂ ಜಾತ್ರೆಗಳ ಮೂಲಕವೂ ಈ ಗುರು ಪರಂಪರೆ ಮನೆ ಮಾತಾಗಿದೆ. ಆದರೆ ಶ್ರೀ ಹೊಳೆಹುಚ್ಚೇಶ್ವರ ಸಂಸ್ಥಾನ ಮಠಗಳ ಪರಂಪರೆ ಕುರಿತು ಸಮರ್ಥ ಅಧ್ಯಯನಗಳಾಗಿರಲಿಲ್ಲ ಎನ್ನುವುದು ಲೇಖಕರ ಅಭಿಪ್ರಾಯ. ಇವೆರಡೂ ವಿಚಾರಗಳನ್ನು ಒಂದುಗೂಡಿಸಿ, ದಾಖಲಿಸಿ ಚರಿತ್ರೆಯನ್ನು ಕರ್ನಾಟಕದ ಚಿಂತನ ಪ್ರವಾಹದ ಭಾಗವಾಗಿಸುವುದು ಸಂಶೋಧಕ ಶ್ರೇಯಾಂಶ ಕೋಲಾರ ಅವರ ಉದ್ದೇಶವಾಗಿದೆ.
ಬಿಜಾಪುರದ ಆದಿಲ್ ಶಾಹಿಯು ನೀಡಿದ ಮಸೀದೆ, ಕೋಟಿಕಲ ದೇಸಾಯಿಯವರು ಕಟ್ಟಿಕೊಟ್ಟ ಗುರುಮಠದಿಂದ ಪ್ರಾರಂಭವಾಗಿ, ಕಮತಗಿ, ಆನೆಗುಂದಿ, ನೀರಲಗಿ, ರಾಮಥಾಲ, ಕುಟುಕನಕೇರಿ, ಹಳ್ಳೂರು, ಬೇವೂರು, ಲಾಯದಗುಂದಿ, ಗೂಗವಾಡ, ಬೀಳೂರು, ಬಸರಗಿ, ಖಿಳೇಗಾವ, ಸಿಂಧೂರು, ಕಿರಣಗಿ, ಮಲಾಬಾದ್, ಗುಡ್ಡಾಪುರ, ಕಾಳಗಿ, ಗುಳೇದಗುಡ್ಡ, ಹುಲಿಮಂಗಲ - ಹೀಗೆ ಹೊಳೆಹುಚ್ಚೇಶ್ವರರ ಪೀಠ ಪರಂಪರೆ ಇಂದು ಭಕ್ತಿಕೇಂದ್ರಗಳಾಗಿ ಬೆಳೆದಿರುವುದು ಅವರ ಆತ್ಮಸತ್ವವನ್ನು, ಆಧ್ಯಾತ್ಮ ಸಂಪತ್ತನ್ನು ಪ್ರಚುರಪಡಿಸುತ್ತವೆ. ಇವುಗಳ ಕುರಿತ ಶ್ರೇಯಾಂಶರ ಈ ಅಧ್ಯಯನ ಸಮಕಾಲೀನ ಯುವ ಪರಂಪರೆಗೆ ಆದರ್ಶಪ್ರಾಯವಾಗಿದೆ.
ಸನ್ಮಿತ್ರ ಶ್ರೇಯಾಂಶ ಅವರು ಸೂಚಿಸಿದ ಹೊಳೆಹುಚ್ಚೇಶ್ವರರ ಈ ಹಲವಾರು ಮಠಗಳಲ್ಲಿ ಕೆಲವನ್ನಾದರೂ ನಾನು ಸುತ್ತಾಡಿದ್ದೇನೆ. ಅವುಗಳ ಭೌತಿಕ ಶ್ರೀಮಂತಿಕೆಗೆ, ರಚನಾ ವಿನ್ಯಾಸಕ್ಕೆ ಮಾರು ಹೋಗಿದ್ದೇನೆ. ಮನುಷ್ಯ ತನಗೆ ದಿವ್ಯ ಹಾಗೂ ಭೌವ್ಯ ಎಂದು ಕಂಡವುಗಳನ್ನೆಲ್ಲ ಎಷ್ಟೊಂದು ಕಾಳಜಿಯಿಂದ ರಚಿಸಿದ್ದಾನೆ ಎನ್ನುವುದಕ್ಕೆ ಇವುಗಳು ನಿದರ್ಶನಗಳಾಗಿ ನಿಲ್ಲುತ್ತವೆ. ನಮ್ಮ ಹಿರೀಕರು ಗುರು ವಾಸಸ್ಥಾನವಾದ ಮಠಗಳನ್ನು ಕಲ್ಲಿನಿಂದ ಕಟ್ಟಿ, ಅರಮನೆಗಳನ್ನು ಮಣ್ಣಿನಿಂದ ಕಟ್ಟಿದ ಸಾಕ್ಷಿಗಳು ಕಿತ್ತೂರು, ಚಿತ್ರದುರ್ಗ ಹಾಗೂ ಇನ್ನೂ ಅನೇಕ ಕರ್ನಾಟಕ ರಾಜವಂಶಜರ ಇತಿಹಾಸದಲ್ಲಿ ಕಾಣಸಿಗುತ್ತವೆ. ಸಮಾಧಿಗಳನ್ನು ಕಲ್ಲಿನಿಂದ ಅತ್ಯಂತ ಕಲಾತ್ಮಕವಾಗಿ, ವಿಶಾಲವಾಗಿ ಕಟ್ಟಿಸಿದ ಉದಾಹರಣೆಗಳು ಇಸ್ಲಾಮಿಕ್ ರಾಜ ಪರಂಪರೆಯಲ್ಲಿ ಸಿಗುತ್ತವೆ. ಭೌತಿಕವಾಗಿ ಬದುಕಿ ವ್ಯಕ್ತಿ ಆರಾಧನೆಗೆ ಒತ್ತು ನೀಡಿದ, ಅಧಿಕಾರವನ್ನು ಆರಾಧಿಸಿದ ಮೊಘಲಾಯಿ ಸಂಸ್ಕøತಿಯಲ್ಲಿ ಸಮಾಧಿಗಳು ಶ್ರೀಮಂತಗೊಂಡರೆ, ಗುರು ಪರಂಪರೆಯಲ್ಲಿ ಮಠಗಳು ರಚನಾತ್ಮಕ ಭೌತಿಕ ಆಕಾರವನ್ನು ಪಡೆದವು.
ರಾಜಧರ್ಮಕ್ಕೂ ದಾರಿ ತೋರಿಸುವ ಗುರು ಪರಂಪರೆ ನೆಮ್ಮದಿಯಾಗಿರಲಿ ಎನ್ನುವುದಷ್ಟೇ ಈ ರಚನೆಗಳ ಹಿಂದಿನ ಕಾಳಜಿಯಾಗಿತ್ತು. ಮರುಳಶಂಕರರಿಂದ ಸಧ್ಯದ ಹದಿಮೂರನೇಯ ಪೀಠಾಧಿಶರವರೆಗಿನ ಗುರುಗಳ ಕೃಪೆಗೆ ಪಾತ್ರರಾದ ರಾಜರು, ಮಾಂಡಲಿಕರು, ಸಂಸ್ಥಾನಿಕರು, ದೇಸಗತ್ತಿಗಳು, ರಾಜಕಾರಣಿಗಳು, ಭಕ್ತಜನರು, ಉದ್ಯಮಿಗಳು, ಕಲಾವಿದರು ಶ್ರೀಮಠದ ಶಾಖೆಗಳನ್ನು ವಿಸ್ತರಿಸುತ್ತಲೇ ಹೋಗಿದ್ದಾರೆ. ಆ ಮೂಲಕ ತಮ್ಮ ಭಕ್ತಿ ಶ್ರದ್ಧೆಗಳನ್ನು ತೋರಿಸಿದ್ದಾರೆ. ಸಮಸಮಾಜದ ಶಿಕ್ಷಣ ಕೇಂದ್ರಗಳೆನಿಸಿದ ಇಂಥ ವ್ಯವಸ್ಥೆಗಳು ಬಂಡವಾಳಶಾಹಿಗಳ ಹಾಗೂ ಮೂಲಭೂತವಾದಿಗಳ ಮತೀಯ ಕೇಂದ್ರಗಳಾಗದಂತೆ ನೋಡಿಕೊಳ್ಳುವುದು ಆಯಾ ಕಾಲದ ಪ್ರತಿಯೊಬ್ಬ ಸುಶೀಕ್ಷಿತನ ಜವಾಬ್ದಾರಿಯಾಗಿದೆ.
ಪ್ರಸ್ತುತ ಈ ಅಧ್ಯಯನದ ಮೂಲಕ ಕವಿಮಿತ್ರ ಶ್ರೇಯಾಂಶರು ಗುರು ಮತ್ತು ಪೀಠ ಪರಂಪರೆಗಳೆರಡನ್ನೂ ತೌಲನಿಕವಾಗಿ, ತಾತ್ವಿಕವಾಗಿ ಹಾಗೂ ದಾಖಲೆಗಳ ಸಮೇತ ಚರ್ಚಿಸಿದ್ದಾರೆ. ಅಧ್ಯಯನ ಸಂಸ್ಥೆಯೊಂದು ಮಾಡಬಹುದಾದ ಈ ಕೆಲಸವನ್ನು ಮಿತ್ರರೊಬ್ಬರೇ ಮಾಡಿ ಮುಗಿಸಿದ್ದು ಅಭಿಮಾನದ ಸಂಗತಿಯಾಗಿದೆ. ಅಕ್ಷರ ಬಲ್ಲ ಪ್ರತಿಯೊಬ್ಬನಿಗೂ ಎಚ್ಚರಿಕೆಯಾಗಿ ಕಾಡುವ ಕೃತಿ ಇದು. ಈ ಮಿತ್ರನ ಹೆಗಲ ಮೇಲಿರುವ ಇತಿಹಾಸದ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ. ಅದು ನಾವು ಹೊತ್ತುಕೊಂಡು ಹೋಗಬೇಕಾದ ಮೂಟೆಯಲ್ಲ, ಬಿಚ್ಚಿ ಉಣ್ಣಬೇಕಾದ ಬುತ್ತಿ, ಹಂಚಬೇಕಾದ ಪ್ರಸಾದ.
ಶ್ರೇಯಾಂಶ ಮರುಳಶಂಕರ ದೇವರ ಈ ಮಹಾ ಪ್ರಸಾದವನ್ನು ಕನ್ನಡ ಸಾರಸ್ವತಲೋಕಕ್ಕೆ ಹಂಚಿ ಭಾಗ್ಯಶಾಲಿಗಳಾಗಿದ್ದಾರೆ. ಪಡೆದ ನಾವು ಅವರಿಗಿಂತಲೂ ಭಾಗ್ಯಶಾಲಿಗಳಾಗಬೇಕಲ್ಲವೆ? ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನವಿರಲಿ ಎನ್ನುವುದು ಲೇಖಕರ ಸದಾಶಯ. ನಾನು ಅವರ ಈ ಆಶಯವನ್ನು ಸಮರ್ಥಿಸುತ್ತೇನೆ ಹಾಗೂ ಅವರಿಗೆ ಈ ಗ್ರಂಥ ಸಾಧನೆಗಾಗಿ ಶುಭಾಷಯಗಳನ್ನು ಕೋರುತ್ತೇನೆ. ಶುಭವಾಗಲಿ.