Total Pageviews

Wednesday, August 26, 2020

ನಾನಮ್ಮ ಕರೋನಯ್ಯ

ಅವಳು ಕುಂಕುಮವಿಟ್ಟ

ಹೊಸ್ತಿಲ ಮೇಲೆ ರಪ್ಪೆಂದು

ಏನೋ ಬಿದ್ದ ಸದ್ದು

ಓಡಿಹೋದೆ ತೊಲೆಬಾಗಿಲ ಮೇಲಿನ

ಕೋಟಿ ಕಂಗಾಲ ಶರಣರ

ಫೋಟೊ ಬಿದ್ದು

ಅಂಗಳ ತುಂಬಾ

ಚೂರು ಚೂರು ಗಾಜು

ಕನ್ನಡಿಯಲ್ಲಿ ಕೆಡವಿದ

ಹಲ್ಲಿಯ ಉರುವಣಿಗೆ


ಒಳಗಡೆ

ದೇವರ ಕೋಣೆಯಲ್ಲಿ

ಕೋಟಿ ವರ್ಷಗಳ

ನನ್ನಜ್ಜಿಯ ಕೈಯೊಳಗಿನ

ಶಿವಲಿಂಗ ಬಿದ್ದು

ಶಿವಲಿಂಗದ ಚೂರು ಚೂರುಗಳಲ್ಲಿ

ಶವಗಳ ಮೆರವಣಿಗೆ!

 

ತುಸು ಮೇಲೆ ಬಿದ್ದ ಚೂರಲ್ಲಿ ಅಲ್ಲಮ

ಕೆಳಗೆ ಬಿದ್ದು ಕಾಲೊಡೆದುಕೊಂಡ ಬಸವಣ್ಣ

ಉಡತಡಿಯ ಹುಡುಗಿಗೆ ಮಾಸ್ಕು

ಬೊಳಿಸಲು ತಲೆಯೊಂದೂ ಸಿಗದೆ

ಸತ್ತಿದ್ದಾನೆ ಅಪ್ಪಣ್ಣ

ಸೂಳೆ ಸಂಕವ್ವಳಿಗೆ ಈಗ

ಸ್ಯಾನಿಟೈಸರೇ ಸಂಗಾತಿ

ಕಕ್ಕಯ್ಯನ ಹಗ್ಗ ಅವನಿಗೇ ನೇಣು

ರೆಮ್ಮೆವ್ವಳ ಕದಿರೆಯೇ

ಅವಳ ಶವಕೆ ಉರುವಲು

ಚಿಕ್ಕವನು ಚೆನ್ನಬಸವಣ್ಣ

ಅದೆಲ್ಲಿ ಬಿದ್ದಿದ್ದಾನೊ

ಲೆಕ್ಕಕ್ಕೆ ಸಿಗುತ್ತಿಲ್ಲ

ಸಿದ್ದರಾಮನ ಕಲ್ಲು

ಶಿರವ ಒಡೆದು

ಚೌಡಯ್ಯ ನಂಬಿಗಸ್ತ

ಅಂಬಿಗರಿಂದಲೇ ಹತನಾಗಿದ್ದಾನೆ

ಮಧುವರಸ, ಮುಕ್ತಾಯಕ್ಕ,

ಅಜಗಣ್ಣ, ಬಾಚರಸ

ನೀಲಾ-ಗಂಗಾ ಅಜ್ಜಿಯ

ಗಂಗಾಳದ ನೀರಿನ ಪಾಲು


ದಿಗಿಲಾಗಿ ಕುಳಿತಳು ಅಜ್ಜಿ

ಬೆಕ್ಕು ನೆಕ್ಕಿ ಹೋಯಿತು ಒಳಗಡೆ ಹಾಲು

 

ಶ್ರೀಶೈಲದಿಂದ ಶಿವಲಿಂಗ ತಂದು

ಕಡೆಬಾಗಿಲು ಕೈಲಾಸ ಸೇರಬೇಕೆಂದ ಅಜ್ಜಿಗೆ

ಶಿವಲಿಂಗದಲಿ ಶವಗಳ ಮೆರವಣಿಗೆ ನೋಡಿ

ದಿಗಿಲೋ ದಿಗಿಲು!

ಕೈಲಾಸದ ಕನಸು ಬಿಟ್ಟು

ಕುಸಿದಳು ಅಜ್ಜಿ

ಕೈ ಹಿಡಿಯಲಿಲ್ಲ ಮುಗಿಲು

 

ಅದೇನು ಅಪಚಾರವೊ

ಎಂಥ ಅಪಶಕುನವೊ

ಚಿಂತೆಯಲ್ಲಿದ್ದಳು ಅಜ್ಜಿ

 

ಸುಡು ಬಿಸಿಲಲ್ಲಿ

ಒಡೆದ ಕನ್ನಡಿಯ ಚೂರುಗಳಲ್ಲಿ ನಿಂತು

ಕಾಪಾಲ ಹಿಡಿದು

ಕೂಗುತ್ತಾನೆ ಒಬ್ಬ

ಭವತಿ ಭಿಕ್ಷಾಂದೇಹಿ

ಯಾರವನು?

 

ಸುಟ್ಟ ಮಾರಿಗೆ

ಭಸ್ಮ ಬಡಿದುಕೊಂಡವನೊಬ್ಬ ಹೇಳುತ್ತಾನೆ

ನಾನವ್ವ ಕರೋನಯ್ಯ

ಮೈಲಾರ ಸುತ್ತಿ ಮನೆಗೆ ಬಂದಿರುವೆ

ಭಿಕ್ಷೆ ಹಾಕು


 ಮೂಕಾದಳು ಮುದುಕಿ

ಮಾತಾಯಿತು ಮೌನ

Sunday, August 2, 2020

ಕರೋನಾ ಮತ್ತು ಬುದ್ಧ


 ನಮ್ಮ ಕಾಲಕೆ ಎಲ್ಲ ಕಂಡಂತಾಯ್ತು
                  ಕೊರೊನಾ ಯುಗ ಮಗ್ಗಲು ಬದಲಿಸಿತು. (ಪ್ರಕಾಶ ಖಾಡೆ)
______________________________________________________

ಸಾವಿರಾರು ವಿಪ್ಲವಗಳನ್ನು ಕಂಡ ನೆಲ ಭಾರತ. ಅದರ ಇತಿಹಾಸಕ್ಕೆ ಕೈ ಹಾಕುವುದು ಎಂದರೆ, ಉದರಕ್ಕೆ ಅಲ್ಸರ್ ಕಟ್ಟಿಕೊಳ್ಳುವ ಸಾಹಸವೆ. ಮತೀಯವಾದ, ಸಾಮ್ರಾಜ್ಯವಾದ ಮತ್ತು ಮೂಲಭೂತವಾದಗಳಿಂದ ದೇಶ ಮತ್ತು ಇಲ್ಲಿಯ ಜನಸಮುದಾಯ ಹೊರ ಬರಲು ಹೋರಾಡಿದ ಪರಿ ಮತ್ತು ಅದಕ್ಕೆ ತೆಗೆದುಕೊಂಡ ಅವಧಿ ತಮಗೆಲ್ಲರಿಗೂ ಗೊತ್ತಿರುವ ಸಂಗತಿಯೇ. ಇದರಾಚೆಯೂ ಕಾಲಕಾಲಕ್ಕೆ ಭಾರತ ಅನೇಕ ಭೀಷಣ ವಾಸ್ತವಗಳಿಗೆ ಮುಖಾ-ಮುಖಿಯಾಗಿದೆ. ಇಂದು ಕರೋನಾ ಎಂಬ ಭೀಕರ?! ರೋಗ ನಮ್ಮ ವರ್ತಮಾನವನ್ನು ಆವರಿಸಿಕೊಂಡಿರುವಂತೆ, ಹಿಂದಿನಿಂದಲೂ  ಕೊಲ್ಲುವ ಕೈ ಮತ್ತು ಕಾಯುವ ಕೈಗಳ ಮಧ್ಯದ ಸಂಘರ್ಷದ ಚರಿತ್ರೆ ನಮ್ಮ ಚರಿತ್ರೆಯ ಬಹುಪಾಲು ಭಾಗವನ್ನು ಆವರಿಸಿಕೊಂಡಿದೆ.
ಚರಿತ್ರೆ ದೀರ್ಘವಾಗಿದೆ, ನಮಗಿಲ್ಲಿ ಪುಟಗಳ ಮಿತಿ ಇದೆ. ಹೀಗಾಗಿ ಕೆಲವನ್ನು ಮಾತ್ರ ನಾನಿಲ್ಲಿ ಚರ್ಚೆಗೆ ಎತ್ತಿಕೊಂಡಿದ್ದೇನೆ. ರಾಜಕೀಯ ಸ್ವಾತಂತ್ರ್ಯದ ಒಂದಿಷ್ಟು ತಿಳುವಳಿಕೆ ಮತ್ತು ಅವಶ್ಯಕತೆಯ ಸಾಂಗಿಕ ಪ್ರಜ್ಞೆ ನಮಗೆ ಬಂದದ್ದು 18ನೇ ಶತಮಾನದಲ್ಲಿ. 1871 ರಿಂದ ಇರುವರೆಗಿನ 150 ವರ್ಷಗಳ ಭಾರತೀಯ ಇತಿಹಾಸದಲ್ಲಿ ನಾವು 22 ಭೀಕರ ಬರಗಾಲಗಳನ್ನು ಎದುರಿಸಿದ್ದೇವೆ. ಸ್ವಾತಂತ್ರ್ಯ ಪರಿಕಲ್ಪನೆಯ 163 ವರ್ಷಗಳ ಇತಿಹಾಸದಲ್ಲಿ ಅದೆಷ್ಟೋ ಬಾರಿ ಸ್ವಯಂಕೃತ ಅಪರಾಧಗಳ ಅಂಧಕಾರದಲ್ಲಿ ಬಿದ್ದು ಒದ್ದಾಡಿದ್ದೇವೆ. ಸ್ವಾತಂತ್ರ್ಯ ಬಂದು 73 ವರ್ಷಗಳು ಕಳೆದರೂ ಯಾರಿಗೆ, ಯಾವ ಸ್ವರೂಪದ? ವಿಸ್ತಾರದ ಮತ್ತು ನೈತಿಕತೆಯ ಸ್ವಾತಂತ್ರ್ಯ ದಕ್ಕಿದೆ ಎನ್ನುವ ಪ್ರಶ್ನೆ ಒಗಟಾಗಿಯೇ ಉಳಿದುಕೊಂಡಿದೆ. 1964 ರಿಂದ ಸುಮಾರು 56 ವರ್ಷಗಳ ಚರಿತ್ರೆಯಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದ, ಸೂಫಿ ತತ್ವ ಚಿಂತನೆಗಳ ಬದನೆಕಾಯಿ ತಿನ್ನುತ್ತಲೇ ಒಂಬತ್ತು ಸಾರಿ ಮನುಷ್ಯರು ನಾಚಬೇಕಾದ ಕೋಮುಗಲಭೆಗಳಲ್ಲಿ ಪರಸ್ಪರರನ್ನು ಹತ್ಯೆ ಮಾಡಿದ್ದೇವೆ. 1947 ಜಾತಿ ಆಧಾರಿತ ದೇಶ ವಿಭಜನೆಯಲ್ಲಿ ಎರಡರಿಂದ 20 ಲಕ್ಷ ಹಿಂದೂ-ಮುಸ್ಲಿಂರ ಹತ್ಯೆಯಾಗಿದೆ. ಕೇವಲ ಒಂದೇ ಘಟನೆಯಲ್ಲಿ 14 ಮಿಲಿಯನ್ ಜನ ನಿರಾಶ್ರಿತರಾಗಿದ್ದಾರೆ. ಇದೆಲ್ಲಕ್ಕೂ ಕನ್ನಡಿಯಂತೆ ಸಾಕ್ಷಿಯಾದದ್ದು ಕಾವ್ಯ. ನಮ್ಮ ಕಾವ್ಯ, ನಮ್ಮ ಬುದ್ಧಿ-ಭಾವಗಳ ದಿವಾಳಿತನಕ್ಕೆ ಅದೆಷ್ಟೋ ಬಾರಿ ಕನ್ನಡಿ ಹಿಡಿದಿದೆ.
1947 ರಿಂದ ಇವರೆಗೆ ಮೂರು ಯುದ್ಧಗಳನ್ನು ಪಾಕಿಸ್ತಾನದೊಂದಿಗೆ ಮತ್ತೊಂದು ಯುದ್ಧವನ್ನು ಚೀನಾದೊಂದಿಗೆ ಎದುರಿಸಿದ್ದೇವೆ. ನನಗೆ ಸಂಬಂಧವಿಲ್ಲದ ವಿಶ್ವದ ಮೊದಲ ಮಹಾಯುದ್ಧದಲ್ಲಿ 74,187 ನಮ್ಮ ಸಹೋದರ ಸೈನಿಕರನ್ನು ಕಳೆದುಕೊಂಡಿದ್ದೇವೆ. 67,000 ಘಾಯಾಳುಗಳಿಗೆ ಪರಮವೀರ ಚಕ್ರ ಪುರಸ್ಕಾರ, ಪ್ರಶಸ್ತಿಗಳನ್ನು ಕೊಟ್ಟು ಕೈ ತೊಳೆದುಕೊಂಡಿದ್ದೇವೆ. ಹೀಗೆ, There is no limitation for the human madness.
ಈಗ ಇನ್ನೊಂದು ಘಟ್ಟ ಕರೋನಾದ್ದು. ಗಾಡ್ ಎನ್ನುವ ಪದಕ್ಕೂ ಮೀರಿದ ಪ್ರಶಿದ್ಧಿಯ ಶಬ್ಧ, ಕಾಲದಲ್ಲಿ ಯಾವುದು? ಎಂದು ಎಂಥ ಎಡಬಿಡಂಗಿಗೆ ಕೇಳಿದರೂ ಸಿಗುವ ಉತ್ತರಕರೋನಾ’. ಕತ್ತಲೆಯನ್ನು ನಾಚಿಸಿದೆ ಕರೋನಾ, ಕರುಳುಗಳ ಕಿತ್ತೆಸೆದು ಮನುಷ್ಯನನ್ನು ಖಾಲಿತನದ ನಿರ್ಭಾವುಕ, ನಿರ್ಜೀವ ಕೊಡದಂತಾಗಿಸಿದೆ ಕರೋನಾ.
ದೇವರೇ ಬಡವರ ಸಾವಿಗೆ, ನೋವಿಗೆ
ಕೊನೆ ಹೇಳುವವರು ಯಾರೋ
ಉಳ್ಳವರ ಬೊಕ್ಕಸಕೆ ಬಂದು ಬೀಳುವ ಹಣ,
      ಬಡವಗೆ ಒಂದು ಹೊತ್ತಿನ ಊಟ ಕೊಡುವವರು ಯಾರೋ (ಡಾ ವೈ.ಎಂ ಯಾಕೊಳ್ಳಿ)
ನಾನು ಯಾರು? ಯಾರಿಗೆ ಎಷ್ಟು ಹತ್ತಿರದವನು/ಳು ಎನ್ನುವ ಮೂಲಭೂತ ಪ್ರಶ್ನೆಯನ್ನು ಪ್ರತಿಯೊಬ್ಬರ ಮುಂದಿರಿಸಿ, ಯಾರು ಯಾರನ್ನೂ ನಂಬದ, ಯಾರು ಯಾರವರೂ ಅಲ್ಲದ ವಾಸ್ತವ ಗೊತ್ತಾಗಿ, ನಿರ್ಲಜ್ಯರಾಗಿ ತಲೆಬಾಗಿಸುವ ನಿಕೃಷ್ಠ ಹಂತಕ್ಕೆ ಮನುಷ್ಯನನ್ನು ತಂದಿರಿಸಿದೆ ಕರೋನಾ. ಅರ್ಥದಲ್ಲಿ ಕರೋನಾ ಅರಿವೂ ಹೌದು, ಗುರುವೂ ಹೌದು, ಎಚ್ಚರಾಗಿದ್ದವರಿಗೆ ಮಹತ್ವದ ತಿರುವೂ ಹೌದು.
ಪ್ರಪಂಚದ ಯಾವ ದೇಶ, ಜೀವ, ಜನಾಂಗಗಳೂ ರೋಗ, ಮುಪ್ಪು, ಸಾವುಗಳಿಂದ ಅತೀತವಾದವುಗಳಲ್ಲ. ಇಂಥ ಒಂದು ಸತ್ಯವೇ ವಿಶ್ವಕ್ಕೆ ಬುದ್ಧ ಮಹಾರಾಜನನ್ನು ಕೊಟ್ಟಿತು. ಮೂರು ವಾಸ್ತವಗಳಲ್ಲಿ ನಮ್ಮ ಬುದ್ಧ ಕರೋನಾ ಕಂಡಿದ್ದ. ಪದ ಭಿನ್ನವಾಗಿದ್ದವು, ಆದರೆ ಫಲಿತಾಂಶ ಒಂದೇ ಆಗಿತ್ತು. ಸಾಸಿವೆ ಕೊಡಲು ಸಾವಿಲ್ಲದ ಒಂದು ಮನೆಯೂ ಇಲ್ಲ ಎಂದ ಬುದ್ಧ, ರೋಗ ಮತ್ತು ಸಾವುಗಳಲ್ಲಿ ಯಾರು ಯಾರಿಗೂ ಸಂಗಾತಿಗಳಲ್ಲ ಎಂದು ಹೇಳಿತು ಕರೋನಾ. ಬುದ್ಧನಾಗುವುದೆಂದರೆ, ಸಂಬುದ್ಧನಾಗುವುದೆಂದರೆ ಅರಿವಿಗೆ ನಿಲುಕಿಸಿಕೊಳ್ಳುವುದು ಎಂದು ಅರ್ಥ. ಇದನ್ನು ನೀವು ಒಪ್ಪುತ್ತೀರಿ ಎಂದು ನನ್ನ ನಂಬಿಕೆ. ಕರೋನಾ ಇಂಥ ಓದಿಗೆ ತೆರೆದುಕೊಳ್ಳಲು ನಮಗೊಂದು ಅವಕಾಶ ಮಾಡಿಕೊಟ್ಟಿರುವುದಂತೂ ಸತ್ಯ.
ಕರೋನಾ ಒಂದು ರೋಗವಾಗಿ ಪ್ರಪಂಚವನ್ನು ಆವರಿಸಿಕೊಂಡಿದ್ದರೆ ನಾವೆಲ್ಲ ಇಷ್ಟೊಂದು ಬರೆಯುತ್ತಿರಲಿಲ್ಲ. ಅದು ನಮ್ಮ ಮುಂದೆ ನಿಂತಿರುವುದು ಪ್ರಶ್ನೆಯಾಗಿ, ನಮ್ಮನ್ನು ಆವರಿಸಿಕೊಂಡಿರುವುದು ಸಂಶಯವಾಗಿ ಹಾಗೂ ನಮ್ಮನ್ನು ಆಳುತ್ತಿರುವುದು ಮೃತ್ಯುವಾಗಿ.

 ಇದು ರೋಗ ಮಾತ್ರವಾಗಿದ್ದರೆ ನಮ್ಮನ್ನು ಬಾಧಿಸುತ್ತಿರಲಿಲ್ಲ ಎನ್ನುವುದಕ್ಕೆ ಇತಿಹಾಸ ಸಾಕ್ಷಿ ಇದೆ. ಪ್ಲೇಗ್, ಮಲೇರಿಯಾ, ಸಿಡುಬು, ಸ್ವೈನ್, ಚಿಕನ್ಗುನ್ಯಾ ಹೀಗೆ 167 ವರ್ಷಗಳ ಇತಿಹಾಸದಲ್ಲಿ ಏಳು ಬಾರಿ ನಾವು ಮಾರಣಾಂತಿಕ ಸಾಂಕ್ರಾಮಿಕಗಳನ್ನು ಈಗಾಗಲೇ ಎದುರಿಸಿದ್ದೇವೆ. ಆದರೆ ಕರೋನಾದ ಸ್ಥಿತಿ ಹಿಂದಿನಂತಲ್ಲ, ನಾವೂ ಹಿಂದಿನಂತಿಲ್ಲ.


ಎಲ್ಲವೂ ತಿರುಗು ಮುರುಗಾಗುವ
ಅನೂಹ್ಯ ವಿಸ್ಮಯಗಳ ಸರಮಾಲೆ! (.ಎನ್. ರಮೇಶ ಗುಬ್ಬಿ)
ಇಗಲೂ ಅಷ್ಟೆ ನಾವು ಕರೋನಾದ ಕೈಯಲ್ಲಿದ್ದರೆ, ಕರೋನಾ ಇನ್ನಾರದೋ ಬತ್ತಳಿಕೆಯ ಬಾಣವಾಗಿ ನಮ್ಮ ಮೇಲೆ ಪ್ರಯೋಗವಾಗುತ್ತಿದೆ. ಶತಮಾನದ ಪೂರ್ವಾರ್ಧದವರೆಗೂ ನಮ್ಮನ್ನಾಳಿದ .ಟಿ, ನಮ್ಮ ಜೀವನಶೈಲಿಯನ್ನು ಪ್ರಭಾವಿಸಿದ್ದು ನಾವೆಲ್ಲರೂ ಮನಗಂಡ ಮಾತು. ನಮ್ಮ ಆಲೋಚನೆ, ಆರೋಗ್ಯ, ಆಧ್ಯಾತ್ಮಗಳೂ .ಟಿ ಎಂಬ ಬಂಡವಾಳಶಾಹಿಗಳ ವ್ಯವಸ್ಥೆಗೊಳಪಟ್ಟು, ಕೀಲಿಮಣೆ ಹಾಕುವ ರಂಗೋಲಿಯಾಯಿತು ಬದುಕು. ಅದು ಎಳೆದಷ್ಟೇ ಗೆರೆ, ತೋರಿಸಿದಷ್ಟೇ ಬದುಕು. .ಟಿಯ ಕೃಪಾಶೀರ್ವಾದ ಇಲ್ಲದ ಅಡುಗೆ, ಹೆರಿಗೆ ಮನೆಗಳೂ ಕೂಡ ಅರ್ಥಹೀನ ಎನ್ನಿಸುವ ಭೀಕರ ಭಯಾನಕ ಸಂದರ್ಭವನ್ನು ಸೃಷ್ಟಿಸಲಾಯಿತು. ಹುಟ್ಟುವ ಮಗುವಿನ ಹೆಸರಿನಿಂದ ನುಡಿಯುವ ಪ್ರತಿ ಮಾತಿಗೂ ನಿರ್ದೇಶನ ನೀಡಲಾರಂಭಿಸಿತು .ಟಿ. ಈಗ ಅದರ ಅಬ್ಬರ ಅಳಿದು ಕರೋನಾ ಎಂಬ ಹೊಸ ವಾಸ್ತವಕ್ಕೆ ಮುಖಾ-ಮುಖಿಯಾಗಿದ್ದೇವೆ.
ಕರೋನಾದ ಸಂದರ್ಭದಲ್ಲಿ ಬದುಕು ದರ್ಶನಹೀನವಾಗಿ ಸಮಾಜ ಬರೀ ಜೀವಸಮುಚ್ಚಯವಾಗಿದೆ. ಕವಿಮಿತ್ರ ನಾಗೇಶ ಜೆ. ನಾಯಕ ಸಂದರ್ಭವನ್ನು ತಮ್ಮ ಕವಿತೆಯಲ್ಲಿ ಮನಮಿಡಿಯುವಂತೆ ದಾಖಲಿಸಿದ್ದಾರೆ -
ಮಂದಿರ-ಮಸೀದಿಗಳೆಲ್ಲ
ಬಾಗಿಲು ಮುಚ್ಚಿ ಅದೆಷ್ಟೋ ದಿನಗಳಾಯಿತು
ದೇವರಿಗೂ ದಿಗ್ಭಂಧನ ಹಾಕಲಾಗಿದೆ
ಕಾಯುವವರಾರು ಎಂಬ ಪ್ರಶ್ನೆಗೆ
ನಮ್ಮಲ್ಲೇ ಉತ್ತರ ಹುಡುಕಬೇಕಿದೆ

ಜಗತ್ತಿನ ದೊಡ್ಡಣ್ಣರೆಲ್ಲ ಕೈಚೆಲ್ಲಿ
ಮಂಡಿಯೂರಿ ಕಣ್ತುಂಬಿಕೊಂಡ ಘಳಿಗೆಯಿದು
ಕರುಣೆಗೆಲ್ಲಿಯ ತಾವು?
ಸಾಲು ಸಾಲು ಶವಗಳಿಗೂ
ಸಂಸ್ಕಾರ ಕಲ್ಪಿಸದ ನಿಸ್ಸಹಾಯಕತೆ
ನಾವೀಗ ಜೀವಿಗಳಷ್ಟೆ. ಸಾವಿನ ಲೆಕ್ಕವನ್ನು ಅಂದಗೊಳಿಸುವ, ಪೊಲೀಸರ ಲಾಠಿಯನ್ನು ಉದ್ದಮಾಡುವ, ಔಷಧ ವ್ಯಾಪಾರದ ಜಗತ್ತನ್ನು ವಿಸ್ತರಿಸುವ ಜೀವಿಗಳು ನಾವು. ಪ್ರಯೋಗಾಲಯದಲ್ಲಿ ಹೊಸ ಪ್ರಯೋಗಗಳಿಗೆ ಪ್ರತಿರೋಧವಿಲ್ಲದೆ ಸಾಯುವ ಇಲಿ, ಕಪ್ಪೆ, ಜಿರಳೆಗಳಂತೆ ಕರೋನಾ ಎಂಬ ಮಹಾ ಮಾಂತ್ರಿಕನ ಲೋಕದಲ್ಲಿ ಬದುಕುತ್ತಿರುವ ಜೀವಿಗಳು ನಾವು. ಅವನು ಹೇಳಿದಷ್ಟೇ ಬದುಕು, ಅವನು ನೀಡಿದ್ದೇ ಜೀವನ. ಇಂಥ ವಿಕೃತ, ಅಮಾನವೀಯ ಸತ್ಯಕ್ಕೆ ಮತ್ತೆ ತೆರೆದುಕೊಂಡದ್ದು ಕಾವ್ಯವೆ. ಗೆಳೆಯ ಪ್ರಕಾಶ ಖಾಡೆ ಸಂದರ್ಭದ ಕರೋನಾ ಆಧಾರಿತ ಎಪ್ಪತ್ತು ಕವಿತೆಗಳನ್ನು, ಮೂಲಕ ಕವಿಗಳನ್ನು ಒಂದೆಡೆ ಸೇರಿಸುವ ಶ್ಲಾಘನೀಯ ಕೆಲಸವನ್ನು ಮಾಡಿದ್ದಾರೆ. ಇದಕ್ಕೊಂದು ವೇದಿಕೆಯನ್ನು ಒದಗಿಸಿಕೊಟ್ಟವರು ಯಾಜಿ ಪ್ರಕಾಶನದ ದಂಪತಿಗಳು. ಪ್ರತಮಥಃ ಇವರೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
Death, the leveler ಎಂದಿದ್ದಾರೆ. ಕರೋನಾ ಕೃಪೆ ಮಾಡಿದ ಸಾವಿನಲ್ಲಿ ಜಾತಿ-ಮತ ಬೇಧಗಳಿಲ್ಲ ಹೆಣ್ಣಿಲ್ಲ, ಗಂಡಿಲ್ಲ, ಬಡವ-ಶ್ರೀಮಂತರಿಲ್ಲ, ಸಾಯುವವರಿಗೆ ಬೆಡ್ ಇಲ್ಲ, ಸತ್ತವರಿಗೆ ನಾಲ್ಕು ಹೆಗಲುಗಳೂ ಇಲ್ಲ, ಶರಣರೆ ನಾವೀಗ ನಮ್ಮ ಮಹಿಮೆಯನ್ನು ಮರಣದಲ್ಲಿ ಹೇಗೆ ತೋರಿಸುವುದು? ತಿಳಿಯುತ್ತಿಲ್ಲ. ಆಕಾಶದಿಂದ ಇದ್ದಕ್ಕಿದ್ದಂತೆ ಬೀಳುವ ಉಲ್ಕೆಗಳಂತೆ ಮನುಷ್ಯರು ಮರೆಯಾಗುತ್ತಿದ್ದಾರೆ. ಯಾರೆ ಸತ್ತರೂ, ಹೇಗೆ ಸತ್ತರೂ, ಎಷ್ಟೇ ಸತ್ತರೂ ಒಂದೇ ಹಣೆಪಟ್ಟಿಕರೋನಾ’. ಇಡೀ ವಿಶ್ವ ಪರಿಯಾಗಿ ಸಂಶಯದ ಗಾಳಿಗೆ ಒಳಗಾದ ಇನ್ನೊಂದು ಅವಧಿ ಕಾಣಸಿಗಲಾರದು. ಪರಸ್ಪರ ಅಪನಂಬಿಕೆಯ ವಿಚಿತ್ರ ಸನ್ನಿವೇಶವನ್ನು ಖಾಡೆ ಸಂಪಾದಿತ ಸಂಕಲನದ ಅನೇಕ ಕವಿತೆಗಳಲ್ಲಿ ನೋಡಬಹುದು. ಉದಾಹರಣೆಗೆ
ಕಾಮಾಲೆ ಕಣ್ಣುಗಳಿಗೆ
ನಗರಗಳ ನಾಲಿಗೆಗೆ
ಎಚ್ಚರದ ಪಾಠವಾದೆ
                             ಹಗೆತನದ ಒಡಲಿಗೆ || (ಅಬ್ಬಾಸ ಮೇಲಿನಮನಿ)
*****
ಇಲ್ಲವೆಂದೆ ಬೆಂಕಿ ಹೊಗೆಯಾಡುವುದು ನಿಲ್ಲುತ್ತಿಲ್ಲ
ಮೊಗ್ಗು ಬಳ್ಳಿ ಕಾಪಿಟ್ಟರೂ ಹೂವಾಗಲಿಲ್ಲ...
ಮಾತು ನೀ ಆಡಿದರೂ ಬಿಟ್ಟರೂ ನಿದ್ದೆಗೆ ಕಣ್ಣು ಮುಚ್ಚಿಕೊಳ್ಳಲಿಲ್ಲ
ನಗದ ದೀನನ ಬದುಕು ಮುಂದಕ್ಕೆ ಹೋಗಲಾಗುತ್ತಿಲ್ಲ
ಕರೋನಾ ಪ್ರಪಂಚವನೆ ಕುಣಿಸಿದ ನಿನ್ನ ಕಾಲು ಸೋಲುತಿಲ್ಲ (ಸಿ.ಬಿ ಚಿಲ್ಕರಾಗಿ)
*****
ಉಸಿರಿನ ಏರಿಳಿತ ಹೊಸತು ಎಂಬಂತಿಲ್ಲ
ಒಬ್ಬರಿಗೊಬ್ಬರ ಉಸಿರು ಹೊಲೆ ಮೈಲಿಗೆಯಾಗಿದೆ
ಮೂಗು ಮುಚ್ಚಿಕೊಳ್ಳುತ್ತೇನೆ ಬಿಟ್ಟ ಕಣ್ಣುಗಳಿಂದ
ಕೈ ಅವನನ್ನು ಮುಕ್ತವಾಗಿ ಬಳಸಿಕೊಳ್ಳಲೂ ಹಿಂದೇಟು ಹಾಕುತ್ತಿದೆ! (ಅಕ್ಷತಾರಾಜ್ ಪೆರ್ಲ)
******
ಮುಗ್ಧ ಜನರ ಪ್ರಾಣಪಕ್ಷಿ
ಕದ್ದೋಯ್ಯುತಿದೆ ಕರೋನಾ (ಬಾಪು ಖಾಡೆ)
******
ಜಗವೇ ಬೆತ್ತಲಾಗಿದೆ....
ಧರ್ಮ-ಜಾತಿಗಳ, ಮುಕ್ಕೋಟಿ ದೇವತೆಗಳ
ಕನ್ನಡಿಯೊಳಗಣ ಗಂಟಿಗೆ ರೂಪ ಕೊಟ್ಟ
ತೃಣಮಾತ್ರರ ಸುದ್ದಿಯಡಗಿದೆ (ಡಾ ಲೀಲಾಸಂಪಿಗೆ)
*******
ಯಾಕೆ ಹೀಗೆ ಹಲವಾರು ಪ್ರಶ್ನೆಗಳೇ ಕಣ್ಮುಂದೆ
ಯಾಕೇ ಹೀಗೆ ನನಗನ್ನಿಸುತ್ತದೆ
ಹಗಲು ಕತ್ತಲಾಗಿ ಬದಲಾಗಿದೆ
ದಿನಗಳೆಲ್ಲ ಲಾಕಪ್ಪಿನ ಸರಳುಗಳೊಳಗೆ ದಿಗ್ಭಂದನಗೊಂಡು ಕುಳಿತಿವೆ. (ಸುರೇಶ ರಾಜಮಾನೆ)
*******
ನೀವು ಬಾಯಿಮುಚ್ಚಿಕೊಂಡು ಇರಲು ಹೇಳಿದ್ದೀರಿ
ನಾವು ನಾಲಿಗೆಯನ್ನು ಕತ್ತರಿಸಿ ನಡೆಯುತ್ತಿದ್ದೇವೆ
ನೋಡಿ
ಸ್ವಲ್ಪ ಕರುಣೆ ಇದ್ದರೆ ನಿಮಗೆ
ರಸ್ತೆಗಳನ್ನು ಕತ್ತರಿಸಿ ಕಿರಿದಾಗಿಸಿ
                  ನಾಲ್ಕೈದು ಹೆಜ್ಜೆಗಳಲ್ಲಿ ಮನೆ ಸೇರುವಂತೆ (ಜಹಾನ್ ಆರಾ)
ಸೃಜನದಷ್ಟೇ ಅಚ್ಚುಕಟ್ಟಾಗಿ ಸಂಕಲನವನ್ನು ಗೆಳೆಯ ಖಾಡೆ ಸಂಪಾದಿಸಿ ಕೊಟ್ಟಿದ್ದಾರೆ. ನಮ್ಮ ಸಂದರ್ಭದ ಮಹತ್ವದ ಕಲಾವಿದರಾದ ಹಾದಿಮನಿಯವರ ಮುಖಪುಟದಿಂದ ಕೃತಿ ಕಳೆಗಟ್ಟಿದೆ, ಪ್ರಕಾಶಕ ಮಿತ್ರ ಯಾಜಿ ಅವರ ಪ್ರಕಟಣಾ ಕೌಶಲ್ಯದ ಬಗೆಗಂತೂ ಅನ್ಯ ಮಾತಿಲ್ಲ.
ಕವಿಗಳು ವ್ಯಕ್ತಿಗತವಾಗಿ ಬರೆಯುವಷ್ಟೇ ಪ್ರಮುಖವಾದುದು, ವಿಷಯಾಧಾರಿತ ಒಂದು ವೇದಿಕೆಯ ಮೇಲೆ ಸಮಕಾಲೀನ ಸಮಾಜದೊಂದಿಗೆ ನಿಲ್ಲುವುದು. ನಿಟ್ಟಿನಲ್ಲಿ ಪ್ರಸ್ತುತ ಸಂಕಲನ ಅತ್ಯಂತ ಮಹತ್ವದ ಸಂಪಾದನೆಯಾಗಿದೆ. ದೇಶ ವಿಭಜನೆಯ ಸಂದರ್ಭದಲ್ಲಿ ಭಾರತೀಯ ಕಥಾ ಸಾಹಿತ್ಯ ಇಂಥವೇ ಪ್ರಶ್ನೆಗಳಿಗೆ ಎದೆ ತೆರೆದು, ಸಂಪಾದನೆಗೊಂಡು ಇಂದಿಗೂ ಅವು ಪ್ರಪಂಚದ ಅತ್ತ್ಯುತ್ತಮ ಕಥೆಗಳ ಪಂಕ್ತಿಗೆ ಸೇರಿಕೊಂಡಿರುವುದನ್ನು ಗಮನಿಸಬಹುದು.
ಎಲ್ಲರನ್ನು ಸಮಾನವಾಗಿ ಕಾಡುವ ಸಮಸ್ಯೆಗಳು ಎಲ್ಲ ಕಾಲಕ್ಕೂ, ಎಲ್ಲ ದೇಶ-ಧರ್ಮಗಳಲ್ಲಿಯೂ ಹುಟ್ಟುವುದಿಲ್ಲ. ಒಂದುವೇಳೆ ಹುಟ್ಟಿದರೂ ಅವುಗಳ ಸಂಖ್ಯೆ ಬೆರಳೆಣಿಕೆಯಷ್ಟು. ವರ್ಣ ವಿದೇಶಿಗರನ್ನು ಕಾಡಿದರೆ, ಜಾತಿ ನಮ್ಮನ್ನು ಕಾಡಿತು, ಭೌತಿಕತೆ ಪಶ್ಚಿಮದ ಪ್ರಶ್ನೆಯಾದರೆ, ಆಧ್ಯಾತ್ಮ ಪೂರ್ವದ ವ್ಯಸನವಾಯಿತು. ಹೀಗೆ, ಭಿನ್ನ ಪ್ರಶ್ನೆಗಳು ಭಿನ್ನ ಭಿನ್ನ ಜನಾಂಗ ಮತ್ತು ದೇಶಗಳನ್ನು ಕಾಡಿವೆ. ಆದರೆ ಮೊದಲ ಬಾರಿಗೆ ಇಡೀ ವಿಶ್ವವನ್ನು, ಮನುಕುಲವನ್ನು ತಲ್ಲಣಕ್ಕೆ ದೂಡಿದ, ಹತಾಶೆಗೆ ತಳ್ಳಿದ, ಮತಿಭ್ರಮಣೆಗೆ ಸಿಲುಕಿಸಿದ ಸಂದರ್ಭ ಕರೋನಾದ್ದು. ಇದುವರೆಗೆ ಸೀಳಿಕೊಂಡಿದ್ದ ಮನುಷ್ಯನನ್ನು ಮತ್ತೆ ಹೇಗೋ ಹೊಂದಿಸಬಹುದಿತ್ತು. ಆದರೆ, ಈಗ ಮತ್ತೆ ಇನ್ನೆಂದೂ ಹೊಂದಿಸಲಾಗದಂತೆ ಸ್ಪೋಟಗೊಂಡಿದ್ದಾನೆ ಮನುಷ್ಯ. ಇಲ್ಲಿ ನೋಡಿ -
ಗಾಳಿ ನಂಜು, ನೀರು ನಂಜು, ಸ್ಪರ್ಶ ನಂಜು ಇಲ್ಲಿ
ವಿಷವುಣಿಸಿದ ಮಾರಿಯ ಅವಸಾನ ಮುಖ್ಯ ಈಗ

ರಾಮ ಕೃಷ್ಣ ಯೇಸು ಕ್ರಿಸ್ತ ಅಲ್ಲಾಹ್ ಬೇರೆ ಅಲ್ಲ
ನಾಮ ರೂಪ ಭಿನ್ನ ಶಿವ-ಪ್ರಮಾಣ ಮುಖ್ಯ ಈಗ (ಗಿರೀಶ ಜಕಾಪುರೆ)

ಕನ್ನಡದ ಅತ್ಯಂತ ಮಹತ್ವದ ಕವಿ ಪಡೆಯೊಂದು ಸಂಕಲನದಲ್ಲಿ ನಿಂತಿರುವುದು ಸಂತಸದ ಸಂಗತಿಯಾಗಿದೆ. ದೇಶದ ಗಡಿಯಲ್ಲಿರುವ ಸೈನಿಕನಿಗಿರುವಷ್ಟೇ ಜವಾಬ್ದಾರಿ ದೇಶದೊಳಗಿರುವ ಕವಿಗೂ ಇದೆ. ಸೈನಿಕ ಹೊರಗಿನ ವೈರಿಗಳಿಂದ ನಮ್ಮನ್ನು ರಕ್ಷಿಸಿದರೆ, ಕವಿ ಸಮಾಜದ ಒಳಗಿನಿಂದಲೇ ಹುಟ್ಟುವ ವಿಕಾರ, ವೈರಾಣುಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ, ಅವನನ್ನು ಅವನೆಲ್ಲ ಕನಸು, ಆಶೆಯ, ಸಂಕಲ್ಪಗಳೊಂದಿಗೆ ಬದುಕಿಸುತ್ತಾನೆ. ಖಡ್ಗವಾಯಿತೊ ಕಾವ್ಯ, ಆಗಲಿಲ್ಲವೋ ಕರೋನಾದ ಸಂದರ್ಭದಲ್ಲಿ ಕವಚವಾಗಿರುವುದಂತೂ ಸತ್ಯ. ಕವಿತೆ ಎಂಬ ಕನಸು ಒಂಟಿತನದ ಸಂದರ್ಭದಲ್ಲಿ ನಮ್ಮನ್ನು ಅನೇಕ ರೀತಿಯ ಅಪಮೃತ್ಯುಗಳಿಂದ ಉಳಿಸುತ್ತಿದೆ. ಕರುಣಾಳು ಕೈಯಾಗಿ, ಬೆಳಕು ಭವಿಷ್ಯವಾಗಿ ಮುನ್ನಡೆಸುತ್ತಿದೆ. ಯಾರಿಗೆ ಯಾರೂ ಇಲ್ಲದ ಶೂನ್ಯ ಕಾಲದಲ್ಲಿ ಕವಿತೆಯೊಂದೇ ಸುಂದರ ಸಂಗಾತಿಯಾಗಿದೆ. ಆಹಾರ ಮಾತ್ರದಿಂದ, ಉಸಿರು ಕಾರಣದಿಂದ ಅಷ್ಟೇ ಬದುಕು ಸಾಧ್ಯ ಎನ್ನುವುದಾಗಿದ್ದರೆ ಮಾನವ ಸಮಾಜ ಎಂದೋ ಸತ್ತುಹೋಗಿರುತ್ತಿತ್ತು. ಆದರೆ ಕವಿತೆ, ಕನಸು ಮತ್ತು ನಿರಂತರ ಸಂವಾದಗಳೂ ಮನುಷ್ಯ ಜೀವನದ ಚೇತನಾ ಶಕ್ತಿಗಳಾಗಿರುವುದರಿಂದ ಎಂಥ ಸಂಕಷ್ಟದಲ್ಲೂ ಮನುಷ್ಯ ಜೀವಂತವಾಗಿದ್ದಾನೆ. ಹೀಗೆ, ಪುಟಿಯುವ ಜೀವನ ಚೈತನ್ಯದಿಂದ ಅನುಗಾಲವೂ ಕಾವ್ಯ ನಮ್ಮನ್ನು ಬದುಕಿಸಿಟ್ಟಿರಲಿ, ಆಶಾ ಪ್ರದೀಪ ಎಂದಿಗೂ ಆರದಿರಲಿ ಎಂದು ಹಾರೈಸುವೆ.
ಕಾಣದ ಕರೋನಾ ಕತ್ತಲಾಗಿಸಿದೆ ಜಗತ್ತನ್ನು. ಆದರೆ, ಕಾಣುವ-ಕಾಡುವ ಮನುಷ್ಯ ಕರೋನಾ ಎಂಬ ಸಂಶಯದ ಗಾಳಿಗೆ ಉರುಳಿ ಬೀಳುವ ಮರವಾಗದಿರಲಿ.