Total Pageviews

Wednesday, August 26, 2020

ನಾನಮ್ಮ ಕರೋನಯ್ಯ

ಅವಳು ಕುಂಕುಮವಿಟ್ಟ

ಹೊಸ್ತಿಲ ಮೇಲೆ ರಪ್ಪೆಂದು

ಏನೋ ಬಿದ್ದ ಸದ್ದು

ಓಡಿಹೋದೆ ತೊಲೆಬಾಗಿಲ ಮೇಲಿನ

ಕೋಟಿ ಕಂಗಾಲ ಶರಣರ

ಫೋಟೊ ಬಿದ್ದು

ಅಂಗಳ ತುಂಬಾ

ಚೂರು ಚೂರು ಗಾಜು

ಕನ್ನಡಿಯಲ್ಲಿ ಕೆಡವಿದ

ಹಲ್ಲಿಯ ಉರುವಣಿಗೆ


ಒಳಗಡೆ

ದೇವರ ಕೋಣೆಯಲ್ಲಿ

ಕೋಟಿ ವರ್ಷಗಳ

ನನ್ನಜ್ಜಿಯ ಕೈಯೊಳಗಿನ

ಶಿವಲಿಂಗ ಬಿದ್ದು

ಶಿವಲಿಂಗದ ಚೂರು ಚೂರುಗಳಲ್ಲಿ

ಶವಗಳ ಮೆರವಣಿಗೆ!

 

ತುಸು ಮೇಲೆ ಬಿದ್ದ ಚೂರಲ್ಲಿ ಅಲ್ಲಮ

ಕೆಳಗೆ ಬಿದ್ದು ಕಾಲೊಡೆದುಕೊಂಡ ಬಸವಣ್ಣ

ಉಡತಡಿಯ ಹುಡುಗಿಗೆ ಮಾಸ್ಕು

ಬೊಳಿಸಲು ತಲೆಯೊಂದೂ ಸಿಗದೆ

ಸತ್ತಿದ್ದಾನೆ ಅಪ್ಪಣ್ಣ

ಸೂಳೆ ಸಂಕವ್ವಳಿಗೆ ಈಗ

ಸ್ಯಾನಿಟೈಸರೇ ಸಂಗಾತಿ

ಕಕ್ಕಯ್ಯನ ಹಗ್ಗ ಅವನಿಗೇ ನೇಣು

ರೆಮ್ಮೆವ್ವಳ ಕದಿರೆಯೇ

ಅವಳ ಶವಕೆ ಉರುವಲು

ಚಿಕ್ಕವನು ಚೆನ್ನಬಸವಣ್ಣ

ಅದೆಲ್ಲಿ ಬಿದ್ದಿದ್ದಾನೊ

ಲೆಕ್ಕಕ್ಕೆ ಸಿಗುತ್ತಿಲ್ಲ

ಸಿದ್ದರಾಮನ ಕಲ್ಲು

ಶಿರವ ಒಡೆದು

ಚೌಡಯ್ಯ ನಂಬಿಗಸ್ತ

ಅಂಬಿಗರಿಂದಲೇ ಹತನಾಗಿದ್ದಾನೆ

ಮಧುವರಸ, ಮುಕ್ತಾಯಕ್ಕ,

ಅಜಗಣ್ಣ, ಬಾಚರಸ

ನೀಲಾ-ಗಂಗಾ ಅಜ್ಜಿಯ

ಗಂಗಾಳದ ನೀರಿನ ಪಾಲು


ದಿಗಿಲಾಗಿ ಕುಳಿತಳು ಅಜ್ಜಿ

ಬೆಕ್ಕು ನೆಕ್ಕಿ ಹೋಯಿತು ಒಳಗಡೆ ಹಾಲು

 

ಶ್ರೀಶೈಲದಿಂದ ಶಿವಲಿಂಗ ತಂದು

ಕಡೆಬಾಗಿಲು ಕೈಲಾಸ ಸೇರಬೇಕೆಂದ ಅಜ್ಜಿಗೆ

ಶಿವಲಿಂಗದಲಿ ಶವಗಳ ಮೆರವಣಿಗೆ ನೋಡಿ

ದಿಗಿಲೋ ದಿಗಿಲು!

ಕೈಲಾಸದ ಕನಸು ಬಿಟ್ಟು

ಕುಸಿದಳು ಅಜ್ಜಿ

ಕೈ ಹಿಡಿಯಲಿಲ್ಲ ಮುಗಿಲು

 

ಅದೇನು ಅಪಚಾರವೊ

ಎಂಥ ಅಪಶಕುನವೊ

ಚಿಂತೆಯಲ್ಲಿದ್ದಳು ಅಜ್ಜಿ

 

ಸುಡು ಬಿಸಿಲಲ್ಲಿ

ಒಡೆದ ಕನ್ನಡಿಯ ಚೂರುಗಳಲ್ಲಿ ನಿಂತು

ಕಾಪಾಲ ಹಿಡಿದು

ಕೂಗುತ್ತಾನೆ ಒಬ್ಬ

ಭವತಿ ಭಿಕ್ಷಾಂದೇಹಿ

ಯಾರವನು?

 

ಸುಟ್ಟ ಮಾರಿಗೆ

ಭಸ್ಮ ಬಡಿದುಕೊಂಡವನೊಬ್ಬ ಹೇಳುತ್ತಾನೆ

ನಾನವ್ವ ಕರೋನಯ್ಯ

ಮೈಲಾರ ಸುತ್ತಿ ಮನೆಗೆ ಬಂದಿರುವೆ

ಭಿಕ್ಷೆ ಹಾಕು


 ಮೂಕಾದಳು ಮುದುಕಿ

ಮಾತಾಯಿತು ಮೌನ

2 comments:

  1. ಹೌದು ಎಲ್ಲ ಪವಾಡ ಪುರುಷರು ಈಗ ಮೂಲೆ ಹಿಡಿದು ಕೂತಿದ್ದಾರೆ. ಸುಮ್ಮನೆ ನೆವಗಳನ್ನ ಮಾಡಿಕೊಂಡು ನಡೆಯುತಿರುವ ಸಾವಿನ ಮೆರವಣಿಗೆಯಲಿ ಸತ್ತವರು ಚೆಟ್ಟಗಳ ಮೇಲೆ ಅಳುತ್ತಿದ್ದಾರೆ ಚೆಟ್ಟ ಹೊತ್ತವರು ಬರಲಿರುವ ಘೋರ ಸಾವುಗಳಿಗಾಗಿ ಅಳುತ್ತಿದ್ದಾರೆ. ಕೆಲವರು ಮುಟ್ಟದೆ ತಟ್ಟದೆ ಚೆಟ್ಟ ನೋಡಿಯೆ ಅಳುತ್ತಿದ್ದಾರೆ. ಬಾಗಿಲಿಗೆ ಬಂದವನು ಬಿಕ್ಷಾಂದೇಹಿ ಎನ್ನುತ್ತಿಲ್ಲ ಭಕ್ಷಾಂದೇಹಿ ಎನ್ನುವಾಗ ನೀಡುವದೋ ಆಹುತಿಯೇ ಆಗುವುದೋ ತಿಳಿಯದೆ ದೇವರ ಮೊರೆ ಹೋದಾಗ ಅವನು ಹೇಳುತ್ತಾನೆ ಕರ್ಮಣ್ಯೆವಾಧಿಕಾರಸ್ತೆ ಮಾ ಫಲೇಷು ಕದಾಚನ ಅಂತ....... ಇನ್ನೇನು ಹೇಳುವುದು ಹೇಳಿ.

    ಕವಿತೆ ವಿವೆಚನೆಗೆ ಹಚ್ಚಿತು ಸರ್

    ReplyDelete
  2. ಹೌದು ಎಲ್ಲ ಪವಾಡ ಪುರುಷರು ಈಗ ಮೂಲೆ ಹಿಡಿದು ಕೂತಿದ್ದಾರೆ. ಸುಮ್ಮನೆ ನೆವಗಳನ್ನ ಮಾಡಿಕೊಂಡು ನಡೆಯುತಿರುವ ಸಾವಿನ ಮೆರವಣಿಗೆಯಲಿ ಸತ್ತವರು ಚೆಟ್ಟಗಳ ಮೇಲೆ ಅಳುತ್ತಿದ್ದಾರೆ ಚೆಟ್ಟ ಹೊತ್ತವರು ಬರಲಿರುವ ಘೋರ ಸಾವುಗಳಿಗಾಗಿ ಅಳುತ್ತಿದ್ದಾರೆ. ಕೆಲವರು ಮುಟ್ಟದೆ ತಟ್ಟದೆ ಚೆಟ್ಟ ನೋಡಿಯೆ ಅಳುತ್ತಿದ್ದಾರೆ. ಬಾಗಿಲಿಗೆ ಬಂದವನು ಬಿಕ್ಷಾಂದೇಹಿ ಎನ್ನುತ್ತಿಲ್ಲ ಭಕ್ಷಾಂದೇಹಿ ಎನ್ನುವಾಗ ನೀಡುವದೋ ಆಹುತಿಯೇ ಆಗುವುದೋ ತಿಳಿಯದೆ ದೇವರ ಮೊರೆ ಹೋದಾಗ ಅವನು ಹೇಳುತ್ತಾನೆ ಕರ್ಮಣ್ಯೆವಾಧಿಕಾರಸ್ತೆ ಮಾ ಫಲೇಷು ಕದಾಚನ ಅಂತ....... ಇನ್ನೇನು ಹೇಳುವುದು ಹೇಳಿ.

    ಕವಿತೆ ವಿವೆಚನೆಗೆ ಹಚ್ಚಿತು ಸರ್

    ReplyDelete