Total Pageviews

Tuesday, September 22, 2020

ವೈಕುಂಠ ಬೀದಿಯ ಕಾಫರ್ ನ ಹಾಡು

ಬೇಲೂರಿನಲ್ಲಿ, ನನ್ನ ಎದುರು ಮನೆಯೇ ಬೇಲೂರು ಕೃಷ್ಣಮೂರ್ತಿಯವರದ್ದು. ಸುಪ್ರಸಿದ್ಧ ವೈಕುಂಠದಾಸರ ಬೀದಿಯಲ್ಲಿ ಇರುವ ಇವರ ಆತ್ಮಕತೆಗೆ `ವೈಕುಂಠ ಬೀದಿ' ಎಂದು ಹೆಸರಿಟ್ಟವನೂ ನಾನೆ. ಇವರು ನಮ್ಮ ಬ್ರಾಹ್ಮಣಕೇರಿಯ ಮಹಾ ಕಾಫರ್. ಇವರ ಆತ್ಮಕತೆಯಲ್ಲಿ ಹೀಗೆ ಒಂದು ಪದ್ಯ-

ಉಪ್ಪಾರಣ್ಣ ಊರಿಗೆ ಬಿದ್ದ ಕಚ್ಚೆಪೋಯ

ಜಂಗಮಯ್ಯ ಜಾರಿಬಿದ್ದ ಲಿಂಗಪೋಯ

ಹಾರುವಯ್ಯ ಹಾರಿಬಿದ್ದ ದಾರಪೋಯ.

 ಇದು ಹಂಗು ಹರಿದವರು ತಮ್ಮನ್ನೂ, ಲೋಕವನ್ನೂ ಮುಂದಿಟ್ಟುಕೊಂಡು ನಗುವ ಪರಿ. ಗುರು ಗೋವಿಂದ ಭಟ್ಟನ ನೆಲೆಯವರು. ಆದರೆ ಬಸವಣ್ಣ, ಗೋವಿಂದ ಭಟ್ಟ ಮತ್ತು ಕೃಷ್ಣಮೂರ್ತಿ ಪುರೋಹಿತ ಪಾರಮ್ಯದ ಬ್ರಾಹ್ಮಣ ಲೋಕದಿಂದ ಬಹಿಷ್ಕøತರು.

ಹೀಗಿದ್ದರು ನಮ್ಮ ಬೇಲೂರು ಕೃಷ್ಣಮೂರ್ತಿ. ಬೆಂಗಳೂರಿನ ಎಡೆಬಿಡದ ಒಂದು ಮಳೆಯರಾತ್ರಿ ನನ್ನ ಗೆಳೆಯ ಜಯಣ್ಣಗೌಡ ಹಾಗೂ ಬೇ.ಕೃ ಅವರ ಜನ್ಮಾಂತರದ ಗೆಳೆಯ ಮಾ. ಶಿವಮೂರ್ತಿ ಅವರ ನಿಧನದ ಸುದ್ದಿಯನ್ನು ತಿಳಿಸಿದಾಗ ನಾನು ಅಬ್ಬರ ಅಡಗಿಸಿಕೊಂಡು ಸದ್ದಿಲ್ಲದೆ ಸುರಿಯುತ್ತಿದ್ದ ರಾತ್ರಿಯ ಮಳೆಯೊಂದಿಗೇ ಮಾತಾಡುತ್ತಿದ್ದೆ. ಮಳೆ ನಿಂತಿತು, ಮಾತು ಉಳಿಯಿತು.

ಮಳೆ ಜೀವಲೋಕದ ಜೀವತಣಿಸಿದ ಸನಾತನ ಜೋಗುಳ. ಹುಟ್ಟುತ್ತಾನೆ, ಸಾಯುತ್ತಾನೆ ಮನುಷ್ಯ ಜೋಗುಳ ಮಾತ್ರ ಅನಂತ ಮತ್ತು ನಿತಾಂತ. ಬೇಲೂರು ಕೃಷ್ಣಮೂರ್ತಿ, ಮಳೆಯಂತೆ ನನ್ನೊಳಗಿಳಿದ ಇಂಥ ಒಂದು ಅನಂತ ಮತ್ತು ನಿತಾಂತತೆಯ ಹಾಡು, ಹಂಬಲ ಹಾಗೂ ಮಲೆನಾಡಿನ ಕಾಡಿನೊಳಗಿನ ಗೊತ್ತು-ಗುರಿ ಇಲ್ಲದ ಜಾಡೂ ಕೂಡ.

ಬಹಳಷ್ಟು ಕುಡಿದೆ ಅವರೊಂದಿಗೆ, ಕುಡಿತವಿಲ್ಲದ ಒಂದೇ ಒಂದು ಸಾಯಂಕಾಲ ಅಸಾಧ್ಯ ಎನ್ನುವಷ್ಟು ಕರಾರುವಕ್ಕಾದ ಯೋಗವದು. ಯೋಗದ ವ್ಯಾಪ್ತಿಯಲ್ಲಿ ಸಾಂಖ್ಯ-ಸಖ್ಯ; ಸಸ್ಯ-ಶಮನ; ಸಿನಿಮಾ-ನಾಟಕ; ಶಿಷ್ಯ-ಶಿಸ್ತು, ಸಮಯ-ಸಯ್ಯಮ ಹೀಗೆ ಅವರು ಕೊಟ್ಟ ಬ್ರ್ಯಾಂಡುಗಳನ್ನೆಲ್ಲ ಕುಡಿಯುತ್ತಲೇ ಇರಬೇಕಿತ್ತು. ಮಿತಿಮೀರದಂತೆ, ಅತಿಯಾಗದಂತೆ, ಮತಿ ತಪ್ಪದಂತೆ ಗತಿಕಾಣಿಸುತ್ತಿದ್ದ ಬೇ.ಕೃ ಎಂಬ ಜೀವ ಪ್ರೀತಿಯ ಹೆಮ್ಮರ ನಮ್ಮನ್ನೆಂದೂ ಹೆಂಡದ ಹೆಡ್ಡರನ್ನಾಗಿಸಲಿಲ್ಲ ಎಂಬುದು ಲೋಕಕ್ಕೆ ದಕ್ಕಬೇಕಾದ ಪ್ರಯೋಗ. 

ಒಂದು ಅತ್ಯಂತ ಸಾಂಪ್ರದಾಯಿಕ ಊರಿನಲ್ಲಿ ಇಷ್ಟೊಂದು ಪ್ರಯೋಗಶೀಲವಾಗಿರುವ ವ್ಯಕ್ತಿಯೊಬ್ಬ ಇದ್ದದ್ದಾದರೂ ಹೇಗೆ? ಎನ್ನುವುದು ಹಿರಿಯರಾದ ಬೇಲೂರು ಕೃಷ್ಣಮೂರ್ತಿಯವರನ್ನು ನೋಡಿದಾಗಲೊಮ್ಮೆ ನನ್ನಷ್ಟಕ್ಕೆ ನಾನೇ ಕೇಳಿಕೊಂಡಿರುವ ಪ್ರಶ್ನೆ. ಸಂಪ್ರದಾಯ ಮತ್ತು ಪ್ರಯೋಗಶೀಲತೆ ಜೊತೆಯಾಗಿರಬಾರದೆನ್ನುವ ನಿಯಮವೇನೂ ಇಲ್ಲ. ಇನ್ನೊಂದು ರೀತಿಯಲ್ಲಿ ಯಾವುದು ಇಂದು ಪ್ರಯೋಗಶೀಲವೋ ಅದೇ ಇನ್ನೊಂದು ಕಾಲಕ್ಕೆ ಸಾಂಪ್ರದಾಯಿಕತೆಗೂ ಎಡೆ ಮಾಡಿಕೊಡಬಹುದು. ಆದರೆ ಎಲ್ಲ ಸಂಪ್ರದಾಯಗಳಿಗೂ ಸಾಧ್ಯತೆ ಇದೆ ಎಂದುಕೊಳ್ಳುವುದು ಮಾತ್ರ ತಪ್ಪು ಗ್ರಹಿಕೆ.

ಬೇಲೂರಿಗೆ ಹೋದ ಹೊಸದರಲ್ಲಿ ಹಿರಿಯರಾದ ಬೇಲೂರು ಕೃಷ್ಣಮೂರ್ತಿಯವರ ಆತ್ಮಕಥೆಗೆವೈಕುಂಠ ಬೀದಿಎಂದು ಹೆಸರಿಡುವುದರೊಂದಿಗೆ, ಅದಕ್ಕೆ ಮುನ್ನುಡಿಯನ್ನೂ ಬರೆದಿದ್ದೆ ಎಂದು ಈಗಾಗಲೆ ಹೇಳಿದೆ ನಾನು. ಮುಂದೆ ಅವರ ಒಂದು ಸಾವಿರ ಜೋಕುಗಳ ಸಂಕಲನವಾದನಗೆ ಹೊನಲುವಿಗೂ ನಾಲ್ಕು ಪ್ರೀತಿಯ, ಅಭಿಮಾನದ ಬೆನ್ನುಡಿಯನ್ನು ಬರೆದಿದ್ದೆ. ಆಗ ಅವರು ಎಂಬತ್ತರ ಆಚೆಯವರು, ನಾನು ನಲವತ್ತರ ಒಳಗಿನವನು. ಅವರು ವಿಶಾಲ ಬದುಕಿನ ಸನಾತನ ಮರ, ನಾನು ಮರದ ಕೆಳಗಿನ ಗೊಲ್ಲನ ಎಳಸಿನವನು. ಕನ್ನಡ ಚಿತ್ರರಂಗ, ರಂಗಭೂಮಿ, ಸಾಹಿತ್ಯ, ಶಿಕ್ಷಣ ಹಾಗೂ ಮಾಧ್ಯಮ ಜಗತ್ತಿನ ಪ್ರಯೋಗಗಳೊಂದಿಗೆ, ಮಾಟ-ಮಂತ್ರ-ತಂತ್ರಗಳ ವಿಚಿತ್ರ ಬೆರಿಕೆ ಅವರು. ಅನುಭವದಿಂದ ಮಾಗಿದ ಇಂಥ ಹಿರಿಯ ಸಾಹಿತಿಗಳ ಕೃತಿಗಳಿಗೆ ಮುನ್ನುಡಿ-ಬೆನ್ನುಡಿಗಳನ್ನು ನಾನು ಬರೆಯುವುದೇ? ಆದರೆ ನಮ್ಮೆಲ್ಲರ ಪ್ರೀತಿಯ ಬೇ.ಕೃ ಉರ್ಫ್ ಬೇಲೂರು ಕೃಷ್ಣಮೂರ್ತಿಯವರ ಪ್ರೀತಿಯ ಒತ್ತಡವೆ ಅಂಥದ್ದು, ಅದನ್ನು ನಿರಾಕರಿಸಲಾಗಲಿಲ್ಲ. ಯಾಕೆಂದರೆ ನಿರಾಕರಣೆ ಜೀವನ ನಿರಾಕರಣೆಯ ಮಾತಾಗಿತ್ತು.

ಬೇಲೂರಿನ ಭೂಮಿ ಇದೆಲ್ಲವನ್ನೂ ಗರ್ಭೀಕರಿಸಿಕೊಂಡದ್ದು. ಒಂದು ಕಾಲದಲ್ಲಿ ವಾಸ್ತುಶಿಲ್ಪದಲ್ಲಿ ನಡೆದ ಪ್ರಯೋಗಶೀಲತೆಯೇ ಇಂದು ನಮ್ಮ ಕನ್ನಡ ನಾಡಿನ ಸಾಂಪ್ರದಾಯಿಕತೆಗೆ ಸಾಕ್ಷಿಯಾಯಿತು. ಇಂಥದೇ ಒಂದು ಸಾಧ್ಯತೆಯನ್ನು ನಾವು ಹಿರಿಯರಾದ ಬೇಲೂರು ಕೃಷ್ಣಮೂರ್ತಿಯವರ ವಿಷಯದಲ್ಲೂ ಕೂಡ ತಿರಸ್ಕರಿಸುವಂತಿಲ್ಲ. ಕೃಷ್ಣಮೂರ್ತಿಯವರ ಪ್ರಯೋಗಶೀಲ ಬದುಕು ಎಲ್ಲ ಕಾಲಕ್ಕೂ ಅನುಕರಣೀಯ. ವ್ಯಕ್ತಿಯ ಇಷ್ಟೊಂದು ವೈವಿಧ್ಯಮಯ, ರಸಭರಿತ, ಸಮೃದ್ಧಿಯ ಬದುಕಿಗೆ ಕಾರಣವೇನಿರಬಹುದು ಎಂದು ಅನೇಕ ಬಾರಿ ನಾನು ಆಲೋಚಿಸಿದಾಗ ಸಿಕ್ಕ ಉತ್ತರಸಂಶಯ.’ ಸ್ವಲ್ಪ ಬದಲಾಯಿಸಿ ಹೇಳುವುದಾದರೆಪ್ರಶ್ನೆಎಂದು ಕೂಡ ಅಂದುಕೊಳ್ಳಬಹುದು. ನಿಮಗೆಲ್ಲಾ ಗೊತ್ತೇ ಇದೆ. ಜಗತ್ತಿನ ಎಲ್ಲ ಆವಿಷ್ಕಾರಗಳ, ಹೊಸತನಗಳ ಮೂಲವೇ ಸಂಶಯ. ಇದು ಕೃಷ್ಣಮೂರ್ತಿಯವರ ಬದುಕನ್ನು ಮತ್ತು ಸಾಹಿತ್ಯವನ್ನು ಅನುಕರಣೀಯ ಎಂದು ಇಂದು ನಾವು ನಿರ್ಧಾರಕ್ಕೆ ಬರಲು ಕಾರಣವಾಗಿರುವ ವಿಚಾರವೂ ಕೂಡ.

ನನ್ನ ಗುರುಗಳಾದ ಸಿ.ಆರ್.ವಾಯ್ ಹೇಳುತ್ತಿದ್ದರು. ``Doubt yourself ಇಂದು ಬಹುಪಾಲು ಆಲೋಚನೆಗಳ, ಮಹಾನ್ ವ್ಯಕ್ತಿಗಳ ಧರ್ಮ ಮತ್ತು ಸಮಾಜಗಳ ದುರಂತಕ್ಕೆ ಕಾರಣವಾಗಿರುವುದೇ ಇದೀಗ ನಾನು ಚರ್ಚಿಸಿದ ಅಂಶ ಇಲ್ಲದೇ ಇರುವುದು. ಜಿಡ್ಡುಗಟ್ಟಿದ ಯಾವುದೇ ಮನಸ್ಸು, ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು ಎನ್ನುವ ಆಲೋಚನೆಯನ್ನು ಪ್ರೋತ್ಸಾಹಿಸುವುದಿಲ್ಲ. ನಂಬಿಕೆ ಖಂಡಿತವಾಗಿಯೂ ಬೇಕು. ಆದರೆ ನಂಬಿಕೆಯ ಸ್ವಾಸ್ಥ್ಯ ಎಲ್ಲ ಕಾಲಕ್ಕೂ ಸರಿಯಾಗಿ ಉಳಿದುಕೊಳ್ಳಲು ಅದನ್ನು ಪದೇ ಪದೇ ಪ್ರಶ್ನಿಸುತ್ತಿರಲೂಬೇಕು. ಕೃಷ್ಣಮೂರ್ತಿಯವರು ಇಂತಹ ಒಂದು ಕಾರ್ಯವನ್ನು ಅಗ್ರಹಾರದಲ್ಲಿ ಕುಳಿತುಕೊಂಡು ಮಾಡಿದರು ಎನ್ನುವುದು ನಮಗೆ ಇನ್ನೂ ವಿಶೇಷವಾಗಬೇಕಲ್ಲವೇ? ನಿತ್ಯ ಊಟ, ಗಂಟೆ-ಜಾಗಟೆ ಪೂಜೆ, ಜಾತ್ರೆಗಳ ಅಬ್ಬರದಲ್ಲಿಯೇ ಮುಳುಗಿಹೋದ ಸಮಾಜದ ಮಧ್ಯ ಬದುಕುತ್ತಲೇ ಅವರು ತಮ್ಮನ್ನೇ ತಾವು ಪರಿಸರಕ್ಕೆ, ವಿಜ್ಞಾನಕ್ಕೆ, ವೈಚಾರಿಕತೆಗೆ ಮತ್ತು ಸೃಜನಶೀಲತೆಗೆ ತೊಡಗಿಸಿಕೊಂಡ ಮತ್ತು ತೆರೆದುಕೊಂಡ ರೀತಿ ಮಾತ್ರ ಯಾರನ್ನೂ ಸ್ಥಂಭೀಭೂತರನ್ನಾಗಿಸುತ್ತದೆ. ಹೊರಗಿನ ಯಾವುದು ತಮ್ಮನ್ನು ಬಾಧಿಸದಂತೆ ತಮ್ಮೊಳಗೇ ಒಬ್ಬ ಯೋಗಿಯನ್ನು ಕಾಣುವ ಪರಿ ನನ್ನಂಥ ಎಳೆಯನನ್ನು ಸಹಜವಾಗಿ ಸೆಳೆಯುತ್ತದೆ. ಅವರ ಬದುಕಿನಲ್ಲಿ ವ್ಯಥೆಗೆ ಅವಕಾಶವಿಲ್ಲ. ಕಾರಣವಿಷ್ಟೇ, ಅವರು ಯಾರಿಗೂ ಗುರುವೆಂದೂ ಘೋಷಿಸಿಕೊಳ್ಳಲಿಲ್ಲ. ಹೀಗಾಗಿ ಅವರಿಗೆ ತಮ್ಮ ನಂತರದ ಶಿಷ್ಯರ ಪ್ರಶ್ನೆಯೂ ಇಲ್ಲ.

ನಾನು ಕೃಷ್ಣಮೂರ್ತಿಯವರ ಮೂರು ರೀತಿಯ ಸಾಹಿತ್ಯ ಕೃಷಿಯ ಯಾತ್ರೆ ಮಾಡಿ ಬಂದಿದ್ದೇನೆ. ಅವರ ನಾಟಕಗಳು, ಅವರ ಆತ್ಮಕಥೆ ಮತ್ತು ಅವರ ಹಾಸ್ಯ ಚಟಾಕಿಗಳ ಸಂಕಲನ - ಮೂರನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬರುವ ಚಿತ್ರ ಒಂದೇ, ಪ್ರಾರ್ಥನೆ-ಫಲಿತಾಂಶ ಒಂದೇ. ಅದನ್ನು ನೀವು ಡಿ.ವಿ.ಜಿ.ಯವರ ಮಾತಿನಲ್ಲಿನಗುವ-ನಗಿಸುವ ನಗುತ ಬಾಳುವ ವರವೆಮಗೆ ನೀಡೋ ಮಂಕುತಿಮ್ಮಎಂದೆನ್ನಬಹುದು ಅಥವಾ ಬೇಂದ್ರೆಯ ಸಾಲುಗಳಲ್ಲಿಸರಸವೇ ಜನನ, ವಿರಸವೇ ಮರಣ ಸಮರಸವೇ ಜೀವನಎಂದೂ ಹೇಳಬಹುದು. ಒಟ್ಟಾರೆ ಹಾಸ್ಯ ಕೃಷ್ಣಮೂರ್ತಿಯವರ ಸೃಜನಶೀಲತೆಯ ಸ್ಥಾಯಿಭಾವ.

ಬೇಲೂರಿನಲ್ಲಿ ಇಲ್ಲಿ ಇನ್ನೊಂದು ಸಮಾಜವಿದೆ, ಬಹುಪಾಲು ಅವರ ಅನುಯಾಯಿಗಳು ಸಮಾಜದ ಹಿನ್ನೆಲೆಯಿಂದಲೇ ಬಂದವರು. ಅದು ಒಂದು ರೀತಿಯಲ್ಲಿ ರಾಜಕಾರಣ ಮತ್ತು ಸಂಪೂರ್ಣ ವ್ಯವಹಾರಿಕ ಲೋಕ. ಆದರೆ ಅದು ನಮ್ಮ ಕೃಷ್ಣಮೂರ್ತಿಯವರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ಸಾವಿರಾರು ಎಕರೆ ಜಮೀನುಗಳ ಶಿಷ್ಯರ ಮಧ್ಯ ಕೈ ತೋಟವೊಂದನ್ನು ತಮ್ಮ ಪ್ರಯೋಗಾಲಯ ಮಾಡಿಕೊಂಡು ಅವರು ಪಡೆಯುವ ಉತ್ಸಾಹ ಅನ್ಯರಿಗೆ ಸಾಧ್ಯವಾಗಿಲ್ಲ. ಬದುಕನ್ನು ಅವರು ಅಳೆಯುವುದು ಬಹುತೇಕ ಭೌತಿಕ ಲೆಕ್ಕಚಾರಗಳಿಂದಲ್ಲ, ಬದಲಿಗೆ ಪ್ರಯೋಗಗಳಿಂದ. ನನಗೆ ಗೊತ್ತಿರುವಂತೆ ಕೃಷ್ಣಮೂರ್ತಿಕನ್ನಡ ರಂಗಪರಂಪರೆ, ಸಿನಿಮಾರಂಗ, ವಿದ್ಯುನ್ಮಾನ, ಪತ್ರಿಕಾರಂಗ, ಲಲಿತಕಲೆಗಳ, ಏಳು-ಬೀಳಿನ ದೀರ್ಘ ಇತಿಹಾಸವನ್ನು ಕಂಡುಂಡ ಕೊನೆಯ ಕೊಂಡಿ. ಬದುಕನ್ನು ಇಷ್ಟೊಂದು ವಿಭಿನ್ನವಾಗಿಟ್ಟುಕೊಂಡ ರೀತಿಗೆ ಒಂದು ಅದ್ಭುತ ಪ್ರಶಸ್ತಿಯನ್ನು ಕೊಡಬಹುದೇನೋ.

ಆದರೆ ಅಂತಹ ಒಂದು ಸತ್-ಸಂಪ್ರದಾಯ ನಮ್ಮಲ್ಲಿದೆಯೇ? ಇದನ್ನು ಓದುವ ಜೀವ-ಜೀವನದ ಪ್ರೀತಿ ನಮ್ಮಲ್ಲಿ ಉಳಿದಿದೆಯೇ? ಕೇಳಿಕೊಳ್ಳಬೇಕಾದ ಪ್ರಶ್ನೆ. ಈಗ ರಾತ್ರಿ ಇಲ್ಲಿ ಮಳೆ ನಿಂತಿದೆ, ಬೇ.ಕೃ ಅವರ ದೇಹ ಇಳೆಗೆ ಇಳಿದು ವಾರ ಗತಿಸಿದೆ. ಪ್ರಶ್ನೆ ಮಾತ್ರ ಹಾಗೇ ಉಳಿದಿದೆ.

 

 

 

No comments:

Post a Comment