“One religion is as true as another’’
- Robert Burton
ಮೊನ್ನೆ ಮೊನ್ನೆಯಷ್ಟೆ ನಮ್ಮನ್ನಗಲಿದ ಯುಸೂಫ್ಖಾನ್ ಅಳಿದುಹೋಗುವ ದೇಹ ಎನ್ನುವುದು ಸತ್ಯ. ಆದರೆ, ದಿಲೀಪಕುಮಾರ??? ಇದು ಭಾರತೀಯ ಚಲನಚಿತ್ರರಂಗದ ಚಿರಸ್ಥಾಯಿ ಹೆಸರು ಮತ್ತು ವ್ಯಕ್ತಿತ್ವ. ನನಗೆ ದಿಲೀಪರ ನಟನೆಯ ಗುಂಗು ಹಚ್ಚಿದವರು ನನ್ನ ತಂದೆ. ‘ವಿಧಾತ’ ಚಿತ್ರದ ಅವರ ಗಂಭೀರ ಅಭಿನಯದಿಂದ ಪ್ರಭಾವಿತನಾದ ನಾನು ಅವರನ್ನ ಅದೆಷ್ಟೋ ಚಿತ್ರಗಳ ಮೂಲಕ, ಅವರ ಸಮಕಾಲೀನ ಪತ್ರಕರ್ತರ ಲೇಖನಗಳ ಮೂಲಕ ಓದುತ್ತ ಹೋದೆ. ಆಗ ದಕ್ಕಿದ ಅವರ ಕುರಿತ ಶ್ರೇಷ್ಠ ಸಿನಿಮಾ ಕಥೆಗಾರ ಕೆ.ಎ.ಅಬ್ಬಾಸರ ಈ ಲೇಖನ ಮತ್ತು ವ್ಯಕ್ತಗೊಂಡ ದೃಷ್ಟಿಕೋನ ಈಗಲೂ ಪ್ರಸ್ತುತ ಎನ್ನಿಸಿದ್ದರಿಂದ ದಿಲೀಪಕುಮಾರರೊಂದಿಗೆ ಮತ್ತೆ ನಾನು ನಿಮ್ಮೊಂದಿಗೆ.
ದಿಲೀಪಕುಮಾರರ ಪ್ರಶ್ನೆ “ಅಬ್ಬಾಸ್ ಜಿ, ಒಂದು ಸಿನಿಮಾ ಸ್ಕ್ರಿಪ್ಟ್ ಬರೆಯಲು ನೀವು ಕನಿಷ್ಟ ಎಷ್ಟು ಸಮಯ ತೆಗೆದುಕೊಳ್ಳುತ್ತೀರಿ?” ಅಬ್ಬಾಸ್ ಹೇಳಿದರು: “ಹಾಗೇನೂ ನಿಶ್ಚಿತವಾಗಿ ಹೇಳಲಾಗದು. ಆದಾಗ್ಯೂ, ಸಾಮಾನ್ಯವಾಗಿ, ಒಂದು ಸಿನಿಮಾ ಸ್ಕ್ರಿಪ್ಟ್ನ ಒಂದು ಸುತ್ತಿನ (One version) ಬರಹ ಮುಗಿಸಲು ನನಗೆ ಒಂದು ತಿಂಗಳ ಅವಧಿ ಬೇಕು.” ಅಬ್ಬಾಸ್ರ ಈ ಉತ್ತರ ಕೇಳಿ ದಿಲೀಪ್ಕುಮಾರ್ ಅಚ್ಚರಿಗೊಂಡರು. Remarkable. ನಾನು ಹಾಗೂ ಎಸ್. ಮುಖರ್ಜಿ ಸೇರಿಕೊಂಡು ಒಂದು ಸೀನಿಮಾ ಸ್ಕ್ರಿಪ್ಟ್ ಬರೆಯಲು ಒಂದು ತಿಂಗಳು ಸಮಯ ಕಳೆದರೂ ಅದು ಪೂರ್ಣವಾಗುತ್ತಿಲ್ಲ, ತೃಪ್ತಿ ಕೊಡುತ್ತಿಲ್ಲ. ನೀವು ನೋಡಿದರೆ ಇಡೀ ಸಿನಿಮಾ ಸ್ಕ್ರಿಪ್ಟ್ ಒಂದೇ ತಿಂಗಳಲ್ಲಿ...!” ಜೋರಾಗಿ ನಕ್ಕರು ದಿಲೀಪ್ಕುಮಾರ್.
ದಿಲೀಪ್ಕುಮಾರ್ರ ಈ ನಗೆಯನ್ನು ಚೆನ್ನಾಗಿ ಅರ್ಥೈಸಿಕೊಂಡ ಅಬ್ಬಾಸ್ ಬಹಳ ಚೆನ್ನಾಗಿ ಪ್ರತಿಕ್ರಿಯಿಸಿದರು: “ನೋಡಿ ದಿಲೀಪ್ ಸಾಹೇಬ, ನೀವು ನನ್ನನ್ನು ಕ್ಯಾಮರಾದ ಮುಂದೆ ನಿಲ್ಲಿಸಿ, ಕೆಲವು ನಿರ್ದೇಶನಗಳನ್ನು ನೀಡಿ ನಟಿಸಲು ಹೇಳಿದರೆ, ಒಂದು ತಿಂಗಳದ ನಂತರವೂ ನನ್ನ ನಟನೆಯಲ್ಲಿ ಎಳ್ಳು ಕಾಳಿನಷ್ಟು ಪ್ರಗತಿಯನ್ನು ಕಾಣಲಿಕ್ಕಿಲ್ಲ, ಅಲ್ವೆ?”
ಸಿಡಿಮಿಡಿ ಮಾಡಿಕೊಂಡ ದಿಲೀಪ್ಕುಮಾರ್ ಕೇಳಿದರು: “ಹಾಗಂದರೆ, ಏನು ನಿಮ್ಮ ಮಾತಿನ ಅರ್ಥ?”
ತೀರ ಸಾವಧಾನವಾಗಿ, ನಸುನಗುತ್ತ ಅಬ್ಬಾಸ್ ಹೇಳಿದರು: “ಉತ್ತರ ಸರಳವಾಗಿದೆ ದಿಲೀಪ್ ಜಿ. ಪ್ರತಿಯೊಬ್ಬನೂ, ತಮಗೆ ಸಹಜ ಯಾವುದು ಎನಿಸಿದೆಯೊ ಅದನ್ನೇ ಮಾಡಬೇಕು ಅಥವಾ ಯಾವುದರಲ್ಲಿ ನೈಪುಣ್ಯವನ್ನು ಸಾಧಿಸಿರುವನೊ ಅದನ್ನು ಮಾಡಬೇಕು. ಇದರರ್ಥ ಪ್ರಯತ್ನ ಎನ್ನುವುದು ಮೂರ್ಖತನ ಎಂದು ನನ್ನ ವಾದವಲ್ಲ. ಪ್ರಯತ್ನಕ್ಕಿಂತ ಪ್ರತಿಭೆ ಮುಖ್ಯ.”
ಹೀಗೆಯೆ ಈ ಯುಸೂಫ್ ಖಾನ್, ಅಲಿಯಾಸ್ ದಿಲೀಪ್ಕುಮಾರ್ ಮೂವತ್ತು ವರ್ಷಗಳ ಅಬ್ಬಾಸರ ದಿನಚರಿಯ ಈ ಮೇಲಿನ ಉದಾಹರಣೆಯನ್ನು ಹಿಡಿದು ಇದುವರೆಗೂ ಮುಖಭಂಗಕ್ಕೆ ಒಳಗಾದ ಸನ್ನಿವೇಶಗಳೇ ಹೆಚ್ಚು.
ತಮ್ಮ ವಯಸ್ಸಿನ ಅರ್ಧ ವಯಸ್ಸಿನ ಸಾಯಿರಾ ಭಾನುವನ್ನು ಮದುವೆಯಾಗಿ, ಕಾಂಗ್ರೆಸ್ ಪರ ಚುನಾವಣಾ ಪ್ರಚಾರಕ್ಕಿಳಿದು, ಪಾಕಿಸ್ತಾನಿ ಕ್ರಿಕೆಟ್ ಪಟುಗಳಿಗೆ ವಿಶೇಷ ಊಟದ ಆಮಂತ್ರಣ ನೀಡಿ, ಭಾರತೀಯ ಚಿತ್ರ ಅಭಿಮಾನಿಗಳ ಮನಸ್ಸಿಗೆ ವಿರುದ್ಧವಾಗಿ ಪಾಕಿಸ್ತಾನ ಸರಕಾರದಿಂದ ಪ್ರಶಸ್ತಿ ಸ್ವೀಕರಿಸಿ-ಹೀಗೆ ಒಂದೇ, ಎರಡೇ? ಅನೇಕ ಅವಿವೇಕದ ನಿರ್ಧಾರಗಳಿಂದ ದಿಲೀಪ್ಕುಮಾರ್ ಸಾರ್ವಜನಿಕ ಟೀಕೆಗೆ, ಅಪಮಾನಕ್ಕೆ ಒಳಗಾಗಿದ್ದಾರೆ.
“ಭಾರತೀಯ ಸಿನಿಮಾ ಪ್ರಪಂಚದಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಯ ಸಾಕ್ಷಿ ಈ ನಟ” ಎಂದು ಒಂದು ಕಾಲದಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಂದ ಪ್ರಶಂಸೆಗೊಳಗಾಗಿದ್ದ ದಿಲೀಪ್ಕುಮಾರ್, ಮುಂದುವರಿದಂತೆ ಮೂರ್ಖತನಕ್ಕೊಂದು ನಿದರ್ಶನವಾದರು. ನಟ ದಿಲೀಪ್ಕುಮಾರ್, ಯುಸೂಫ್ ಖಾನ್ನಿಂದ ಹಾಗೂ ಅವನ ಸ್ವಜಾತಿ ಮೋಹದಿಂದ ಕೊಲೆಯಾದ.
ರಾಜ್ಕಪೂರ್, ಕೆ.ಎ.ಅಬ್ಬಾಸ್ ಹಾಗೂ ದಿಲೀಪ್ಕುಮಾರ್ ಮೂವರೂ ವಯಸ್ಸಿನಲ್ಲಿ ವಾರಿಗೆಯವರು. ದಿಲೀಪ್ಕುಮಾರ್ರನ್ನು ಕುರಿತು ಬರೆಯಲು ರಾಜ್ಕಪೂರ್ರ ಚಿತ್ರಣ, ರಾಜ್ಕಪೂರ್ರನ್ನು ಉಲ್ಲೇಖಿಸದ ದಿಲೀಪ್ಕುಮಾರರ ಜೀವನ ಅಪೂರ್ಣ ಎನ್ನುತ್ತಾರೆ ಅಬ್ಬಾಸ್. ನಲವತ್ತು ವರ್ಷಕ್ಕೂ ಮೀರಿದ ತಮ್ಮ ಸಿನಿಮಾ ಬದುಕಿನಲ್ಲಿ ಅರವತ್ತು ಚಿತ್ರಗಳ ಮೂಲಕ ತನ್ನದೇ ಗತ್ತುಗಾರಿಕೆಯಿಂದ ಚಿತ್ರರಸಿಕರನ್ನು ದಿಲೀಪ್ಕುಮಾರ ಸೆರೆÀಹಿಡಿದ ರೀತಿಯನ್ನು ಯಾರೂ ಸಂಶಯಿಸುವಂತಿಲ್ಲ. ಪೃಥ್ವಿರಾಜಕಪೂರ್ ಎಲ್ಲರಿಗೂ ಹೀರೊ, ಆದರೆ ಪೃಥ್ವಿಯವರಿಗೆ ದಿಲೀಪ್ಕುಮಾರ್ ಹೀರೊ, ಅವರ ಮಗ ರಾಜ್ಕಪೂರ್ ಅಲ್ಲ.
ಅಬ್ಬಾಸ್ ದಾಖಲಿಸಿದಂತೆ, ದೇವಿಕಾರಾಣಿಯಿಂದ ಮೊದಲು ಗುರ್ತಿಸಲ್ಪಟ್ಟು ಮೊದಲ ಸಿನಿಮಾ “ಪ್ರತಿಮಾ” ದಿಂದ ಬೆಳ್ಳಿ ಪರದೆಯ ಮೇಲೆ ಮೂಡಿದ ದಿಲೀಪ್ಕುಮಾರ್ ತನ್ನ ಸಣ್ಣ ಧ್ವನಿ, ಅಭಿವ್ಯಕ್ತಿಹೀನ ಮುಖಗಳಿಂದಾಗಿ ಯಾರ ಗಮನವನ್ನೂ ಸೆಳೆಯಲಿಲ್ಲ. ಹೀಗಾಗಿ ಅವರ ಮೊದಲ ಚಿತ್ರ ಆನಂತರ ಬಂದ ರಮೇಶ ಸೆಹಗಲ್ ನಿರ್ದೇಶನದ ‘ಶಹೀದ್’ ಎಂದೇ ಹೇಳಬೇಕು. ಯಾಕೆಂದರೆ ಪ್ರತಿಮಾದಿಂದ ಶಹೀದ್ಗೆ ಬರುವುದರೊಳಗಾಗಿ ಯುಸೂಫ್ ಖಾನ್ ಅದ್ಭುತ ನಟ ದಿಲೀಪ್ಕುಮಾರರಾಗಿ ಬೆಳೆದುಬಿಟ್ಟಿದ್ದರು. ಆನಂತರದಲ್ಲಿ ನಿತೀನ್ ಭೋಸ್ರ ‘ಮಿಲನ’, ಮೆಹಬೂಬ ನಿರ್ದೇಶನದ ‘ಅಂದಾಜ’, ‘ಆನ’, ‘ಗಂಗಾ ಜಮುನಾ’, ‘ದೇವದಾಸ’, ‘ಆದ್ಮಿ’, ‘ರಾಮ ಔರ ಶ್ಯಾಮ’, ‘ಲೀಡರ್’, ‘ವಿಧಾತಾ’ ಒಂದೊಂದು ಚಿತ್ರವೂ ನಟ ದಿಲೀಪ್ಕುಮಾರರ ಪ್ರತಿಭೆಗೆ ಹಿಡಿದ ಕನ್ನಡಿಗಳು. ಆದರೆ ರಾಜಕಪೂರ್ ಇಲ್ಲದೇ ಹೋದ ವಿಷಯದಲ್ಲಿ ದಿಲೀಪ್ಕುಮಾರರ ಈ ಪ್ರತಿಭೆಗೆ ಇನ್ಯಾವುದೋ ಸ್ಥಾನವಿರುತ್ತಿತ್ತೆನೊ? ಆದರೆ ಖಂಡಿತ ಈ ಸ್ಥಾನವಿರುತ್ತಿರಲಿಲ್ಲ ಎಂದೇ ಅಬ್ಬಾಸರ ವಾದ.
ನರ್ಗೀಸ್ಳನ್ನು ಕೇಂದ್ರವಾಗಿಸಿಕೊಂಡು “ಅಂದಾಜ” ಚಿತ್ರದಲ್ಲಿ ನಟಿಸಿದ ರಾಜಕಪೂರ್ ಹಾಗೂ ದಿಲೀಪ್ಕುಮಾರ್ರನ್ನು ನೋಡುವುದೇ ಒಂದು ಭಾಗ್ಯ ಎನ್ನುವುದು ಅವರ ವಾದ. ಅದು ಏಟ್ಸ್ ಹಾಗೂ ಏಲಿಯಟ್ರನ್ನು ಜೊತೆ ಜೊತೆಯಾಗಿ ನಿಲ್ಲಿಸಿ ನೋಡಿದ ಒಂದು ಅನುಭವ. ಪ್ರತಿಸ್ಪರ್ಧಿಯಿಲ್ಲದ ಯಾವ ಕ್ಷೇತ್ರವೂ ನೀರಸ, ಹಾಗೆಯೆ ಚಿತ್ರ ಜಗತ್ತೂ ಕೂಡಾ. ರಾಜ್ಕಪೂರ್ ಹಾಗೂ ದಿಲೀಪ್ಕುಮಾರ್ ಹೀಗೆ ಒಬ್ಬರಿಗೊಬ್ಬರು ಪಂಥಾಹ್ವಾನಗಳನ್ನು ನೀಡುತ್ತಲೇ ಬೆಳೆದವರು. ಚಿತ್ರ ಜಗತ್ತಿನ ದಂತಕಥೆಗಳು ಎನ್ನಿಸಿಕೊಂಡ ಅಶೋಕ ಕುಮಾರ್, ಮರ್ಲಾನ್ಬ್ರಾಂಡೊ, ಹಾಗೂ ಅಂಥೋನಿಕ್ವಿನ್ರ ಎತ್ತರಕ್ಕೇರಿದವರು.
ಆದರೆ, ಕಾಲಗತಿಸಿದಂತೆ ಈ ಮೇರು ಸಾಧನೆಯ ನಟ ಸಣ್ಣಗೆ ಕುಸಿಯಲಾರಂಭಿಸಿದ. ತಣ್ಣಗೆ ಜನ ದೂರ ಸರಿಯಲಾರಂಭಿಸಿದರು. ಇದ್ದಕ್ಕಿದ್ದಂತೆ ಅವರಿಗೆ ಮುಪ್ಪಾವರಿಸಿತು, ಯಾಕೆ? ಎಂಬುದೇ ಅಬ್ಬಾಸರ ಪ್ರಶ್ನೆ. ಕಾರಣಗಳು ಆತನ ಮಾತು ಹಾಗೂ ಕೃತಿಯ ಮಧ್ಯ ಸಂಬಂಧ ಇಲ್ಲದ ಜೀವನ, ಅಹಂ. ಅಲ್ಲದೇ ಬರೀ ತನ್ನ ಶಕ್ತಿಯ ಬಗೆಗೆ ತಿಳಿವಳಿಕೆ ಇದ್ದ ದಿಲೀಪ್ಕುಮಾರರಿಗೆ ತನ್ನ ಮಿತಿಗಳ ಬಗೆಗೆ ತಿಳಿದಿರಲಿಲ್ಲ ಎನ್ನುವುದು.
ದಿಲೀಪ್ಕುಮಾರ್ ನಿರ್ದೇಶನಕ್ಕಿಳಿದರು. ‘ಬೈರಾಗ್’ ಸಿನಿಮಾ ಮಾಡಿದರು. ಚಿತ್ರದುದ್ದಕ್ಕೂ ಏನೋ ಹೇಳಲು ಹೋಗಿ ಕೊನೆಗೆ ಏನೂ ಹೇಳಲಿಲ್ಲ ದಿಲೀಪ್ಕುಮಾರ್. ಸತ್ಯಜಿತ್ ರೇ, ರಾಜ್ಕಪೂರ್, ಗುಲ್ಜಾರ್, ಬಿ.ಆರ್.ಚೋಪ್ರಾರಂಥ ನಿರ್ದೇಶಕನ ಕೈಯಲ್ಲಿ ನಟನಾಗಿ ನಟಿಸುವ ಶಕ್ತಿ ಇದ್ದ ದಿಲೀಪ, ದಿಲೀಪಕುಮಾರ್ ಎಂಬ ನಿರ್ದೇಶಕನ ಕೈಯಲ್ಲಿ ನಟನಾಗಲಿಲ್ಲ. ಈ ಚಿತ್ರಕ್ಕಾಗಿ ದಿನಕ್ಕೆ 14 ಗಂಟೆ ದುಡಿದರು. ಚಿತ್ರ ತಂಡದವರೆಲ್ಲ ಮನೆಯಲ್ಲಿ ನೆಮ್ಮದಿಯಿಂದ ನಿದ್ರಿಸುವಾಗ ದಿಲೀಪ್ಕುಮಾರ ಅದೆಷ್ಟೋ ನಿದ್ರಾಹೀನ ರಾತ್ರಿಗಳನ್ನು ಕಳೆದರು. ಅಂತಿಮವಾಗಿ ಚಿತ್ರ ಹೊರಬಂದಾಗ ನಿರ್ದೇಶಕ ದಿಲೀಪ್ಕುಮಾರ್, ನಟ ದಿಲೀಪ್ಕುಮಾರ್ರನ್ನು ನುಂಗಿಹಾಕಿದ್ದ. ಹಣ ಗಳಿಕೆಯಲ್ಲಾಗಲಿ, ಕಲಾತ್ಮಕತೆಯಲ್ಲಾಗಲಿ ಅಥವಾ ಹೊಸತನದಲ್ಲಾಗಲಿ ‘ಬೈರಾಗ’ ಎಲ್ಲಿಯೂ ತನ್ನ ಹೆಜ್ಜೆಗಳನ್ನು ಮೂಡಿಸಲೇ ಇಲ್ಲ.
ಅಬ್ಬಾಸರು ‘ಬೈರಾಗ’ ಕುರಿತು ಬರೆಯುತ್ತಾರೆ- “It was a tragedy of error-errors for which
Dilipkumar could not blame anyone but himself.” ಎಲ್ಲೊ ಒಂದೆಡೆ ತಾನೂ ರಾಜ್ಕಪೂರ್ನಂತೆ ನಟ, ನಿರ್ದೇಶಕ ಆಗಬೇಕೆಂಬ ದಿಲೀಪ್ಕುಮಾರ್ರ ಹಠ ಅವರನೊಬ್ಬ ದೊಡ್ಡ ಜೋಕರ್ನನ್ನಾಗಿಸಿತು. ಕೊನೆಯವರೆಗೂ ಇದು ದಿಲೀಪ್ಕುಮಾರ್ಗೆ ಹೊಳೆಯದೇ ಹೋಯಿತು.
ಅಬ್ಬಾಸ್ ಅತ್ಯಂತ ಆತ್ಮವಿಶ್ವಾಸದಿಂದಲೇ ಹೇಳಿದ್ದಾರೆ- “ಸಂಶಯ ಬೇಡ, Dilipkumar is or
was India’s greatest actor.” ಆದರೆ ನಾಗಾಲೋಟದ ಯುಗಧರ್ಮದಲ್ಲಿ ಈ ಮಾತುಗಳನ್ನು ಕೇಳಿಸಿಕೊಳ್ಳುವ ವ್ಯವಧಾನ ಜನರಿಗೆ ಇರಲಿಕ್ಕಿಲ್ಲವೇನೊ ಎಂಬುದು ಅಬ್ಬಾಸದ ಸಂಶಯ. ಚಿತ್ರರಸಿಕರ ತಲೆಮಾರು ಬದಲಾಯಿತು. ಹೊಸಬರಿಗೆ ದಿಲೀಪ್ಕುಮಾರ್ ಹಳಬನಾದ, ವಿಭಿನ್ನ ನಟನಾದ, ಹಾಗೆಯೇ ಒಂಟಿಯಾದ. ದಿಲೀಪಕುಮಾರರನ್ನು ಅನಂತರದಲ್ಲಿ ನೋಡಿದ ನಮಗೆ ಅಬ್ಬಾಸರ ಈ ಕೆಳಗಿನ ಮಾತು ಅದೆಷ್ಟು ಸತ್ಯ ಎನ್ನಿಸುತ್ತದೆ! ಅಬ್ಬಾಸ್ ಬರೆದಿದ್ದರು. He should act, and act, act and not take to writing story, screenplay and dialogue or dabble in direction.
Sir, it is good article Sir.
ReplyDelete