ನನ್ನ ಬದುಕಿನ ಒಟ್ಟು
ವ್ಯಾಪ್ತಿಯಲ್ಲಿ ಅತ್ಯಂತ ವೇಗದಿಂದ ಉರುಳಿಹೋದ ವರ್ಷ 2013. ವರ್ಷದ ತುಂಬೆಲ್ಲವೂ ವಿಚಿತ್ರವಾದ ಏರಿಳಿತಗಳು.
ಸೋಲು-ಗೆಲುವು, ಮಾನ-ಅಪಮಾನ, ಒಳಿತು-ಕೆಡಕು, ಸರಿ-ತಪ್ಪು ಹೀಗೆ ಯಾವುದೇ ಇತ್ಯರ್ಥಕ್ಕೆ ಅವಕಾಶ ಮಾಡಿಕೊಡದೆ
ನಿರಂತರ ಒತ್ತಡದಿಂದ ನನ್ನನ್ನು ಹಣಿಹಾಕಿ ಹೈರಾಣಾಗಿಸಿದ ವರ್ಷ. ಇಷ್ಟೊಂದು ಸಂಕೀರ್ಣವಾದ ವರ್ಷವನ್ನು
ಬದುಕಿನಲ್ಲಿ ನಾನು ಈ ಹಿಂದೆಂದೂ ಎದುರಿಸಲೇ ಇಲ್ಲ. ಆಗೆಲ್ಲವೂ ನಾನು ನನ್ನ ‘ಇರುವಷ್ಟು ಕಾಲ’ ಕಾವ್ಯ
ಸಂಕಲನದಲ್ಲಿ ವ್ಯಕ್ತಗೊಂಡ ಭಾವದ ಸೂತ್ರ ಹಿಡಿದುಕೊಂಡು, ಜೀವ ಗಟ್ಟಿಯಾಗಿ ಹಿಡಿದುಕೊಂಡು ಜೀವನದಿಯಲ್ಲಿ
ಕೊರಡಿನಂತೆ ಬಿದ್ದುಕೊಂಡವನು. ಸಾವು ಮತ್ತು ಸಮಯ ನನ್ನ ನಿರಂತರ ಶೋಧಗಳು. ಈ ಶೋಧದಲ್ಲಿ ಮುಳುಗಿದಷ್ಟೂ
ಸಾಂಗತ್ಯ, ಸಂಸಾರ, ಸ್ನೇಹ ಕೆಲವೊಮ್ಮೆ ಶೂನ್ಯವೂ ಕೂಡ ನನಗೆ ವಿಚಿತ್ರವಾಗಿ ಕಂಡಿದೆ. ನಾನು ನೋವಿನಿಂದ
ಅಯ್ಯೋ ಎಂದು ಅರಚುವಾಗ ಪಕ್ಕದಲ್ಲಿದ್ದೂ ದಕ್ಕದವರನ್ನು ನೋಡಿದ್ದೇನೆ. ಹಿಂದಿನ ಯಾವುದೋ ಒಂದು ಭೇಟ್ಟಿಗೆ
ನೆನಪಿಟ್ಟುಕೊಂಡು ತಾವು ನಂಬಿದ ದೈವದ ಮುಂದೆ ನನಗಾಗಿಯೂ ಒಂದು ಹರಕೆಯ ದೀಪ ಹಚ್ಚಿಡುವ ಹಂಬಲದವರನ್ನೂ
ನೋಡಿದ್ದೇನೆ. ಬಹುತೇಕ ನನ್ನೊಳಗಿನ ನಂಬುಗೆ ನೆಲಕ್ಕಚ್ಚಿದ್ದರೆ ನನ್ನ ನಿರ್ನಾಮ ಎಷ್ಟು ಸಮೀಪ ಎನ್ನುವುದನ್ನೂ
ನಾನು ಆಗಾಗ ಗಮನಿಸುತ್ತಿರುತ್ತೇನೆ. ಆಗಾಗ ತಲ್ಲಣಿಸುವ ಮನಸ್ಸಿಗೆ –
ಕೊಂದವರೆ ಬಂದಿಹರು
ಹಾಲು ಕೊಡು ತಾಯಿ
ಕಡಿದವರೆ ಬಂದಿಹರು
ಹೂವ ಕೊಡು ತಾಯಿ
ಕಿಡಿಯಾಗಬೇಡ
ಎಂದು ನನ್ನ ಕವಿತೆಯ ಮೂಲಕ
ಸಮಾಧಾನಿಸುತ್ತ ಸಾಗಿಬಂದಿದ್ದೇನೆ.
ಮುಗಿದು ಹೋಗುವ ವರ್ಷದ ಮುಸ್ಸಂಜೆಯಲ್ಲಿ ನಿರ್ಲಿಪ್ತನಾಗಿ,
ಒಂದಿಷ್ಟು ಮೌನವಾಗಿ ಕುಳಿತುಕೊಳ್ಳುವುದು, ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದೇ ಇರುವುದು, ಉರುಳಿ
ಹೋದುದನ್ನು ಹೊರಳಿ ನೋಡುವುದು ನನ್ನ ಪ್ರೀತಿಯ ರೂಢಿ. ಮೊಬೈಲ್ ಮೌನವಾಗಿರುತ್ತದೆ, ನನ್ನ ಮಾತೂ ಕೂಡ.
ಮನಸ್ಸನ್ನು ನಿರಾಳಗೊಳಿಸಿಕೊಳ್ಳುವ ಒಂದು ಯತ್ನ. ಈ ಕೆಲಸಕ್ಕೆ ಹೋದ ವರ್ಷ ನಾನು ಶರೀಫನ ಗದ್ದಿಗೆಯನ್ನು
ಆಯ್ದುಕೊಂಡರೆ, ಈ ವರ್ಷ ಶ್ರವಣಬೆಳಗೋಳದ ಬೆಟ್ಟವನ್ನು ಆಯ್ದುಕೊಂಡಿದ್ದೆ. ನನ್ನದು ಈ ದಡ, ಆಚೆ ದಡದಲ್ಲಿ
ಶಾಂತಲೆ ಸಲ್ಲೇಖನ ವೃತದಿಂದ ಮೋಕ್ಷ ಪಡೆದ ಚಂದ್ರಗಿರಿ ಬೆಟ್ಟ.
Ragam with Charukirti Bhattarak Swamiji |
ವರ್ಷದ ಕೊನೆಯಲ್ಲಿ ನಾನು ಹಾತೊರೆದದ್ದು ಬರೀ ನಿದ್ರೆಗಾಗಿ.
ನಿರಂತರ ಒಂದು ತಿಂಗಳಿಂದ ನಿದ್ರಾಹೀನನಾಗಿ ಸಮಾರಂಭ, ಸುತ್ತಾಟ, ಸಮಾರಾಧನೆಗಳಲ್ಲಿ ಮುಳುಗಿದ್ದ ನನಗೆ
ಶ್ರವಣಬೆಳಗೋಳದ ವಾತಾವರಣ ಹಿತವೆನ್ನಿಸಿತ್ತು. ನನಗೆ ನಿದ್ರಿಸಲು ಒಳ್ಳೆಯ ಸ್ಥಳ ಸೂಚಿಸುತ್ತೇನೆಂದು
ಕರೆದುಕೊಂಡು ಹೋದವರು ಗೆಳೆಯ ಬಿ.ಎಸ್.ದೇಸಾಯಿ(B.S.Desai). ಚಿತ್ರಕಲಾ ಕಾರ್ಯಾಗಾರ ಒಂದು ತನ್ನ ಪಾಲಿಗೆ ತಾನು
ಮುಕ್ತಾಯ ಸಮಾರಂಭವನ್ನು ಏರ್ಪಡಿಸಿತ್ತು. ನಾನು ಆ ಸಭೆಯ ಮೂಲೆಯಲ್ಲಿ ದೂರದಲ್ಲಿ ಕುಳಿತು ನಿದ್ರೆಯ ಸುಖದಲ್ಲಿದ್ದಾಗ ಅತ್ಯಂತ ಗೌರವದಿಂದ
ನನ್ನನ್ನು ಗಮನಿಸಿ ವೇದಿಕೆಗೆ ಎಳೆದವರು ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ(Charukirti Bhattaraka Swamiji). ಹಡಬಡಿಸಿ ಎದ್ದೆ, ಇನ್ನೆಲ್ಲಿಯ
ನಿದ್ದೆ.
ಕಲೆ, ಸಾಹಿತ್ಯ, ಪ್ರಾಚ್ಯಶಾಸ್ತ್ರ, ಬಣ್ಣಗಳನ್ನು
ಕುರಿತು ಇಷ್ಟೊಂದು ಕಾಳಜಿಯಿಂದ ಮತ್ತು ಕರಾರುವಕ್ಕಾಗಿ ಮಾತನಾಡುವ ಮತ್ತೊಬ್ಬ ಸನ್ಯಾಸಿಯನ್ನು ನಾನು
ನೋಡಿಲ್ಲವೆಂದೇ ಹೇಳಬೇಕು. ಬಟಾ ಬೆತ್ತಲೆ ಗೊಮ್ಮಟನಂತೆಯೇ ಅತ್ಯಂತ ಸರಳ ಮನಸ್ಸಿನ ದೊಡ್ಡ ಮನುಷ್ಯರಂತೆ
ನನಗೆ ಆ ದಿನ ಅವರು ಕಂಡರು. ಈ ಸನ್ಯಾಸಿಯ ಸಾನಿಧ್ಯದಲ್ಲಿ ಹಳೆಯ ವರ್ಷ ಉರುಳಿ ಹೋಯಿತೋ, ಹೊಸ ವರ್ಷ
ಆರಂಭವಾಯಿತೋ ಎನ್ನುವ ಲೆಕ್ಕಾಚಾರದ ಗೊಡವೆಯೂ ಬೇಡ ಎನಿಸಿತು ನನಗೆ. ಯಾಕೆಂದರೆ, ಅಲ್ಲಿ ಇರುವಷ್ಟು
ಕಾಲ ನನ್ನನ್ನು ಎಚ್ಚರಿಸಿ, ಬಳಿ ಕರೆದು ಕರುಣೆಯಿಂದ ಹರಸಿದ ಜೀವ ಅದು.