Total Pageviews

Sunday, January 19, 2014

ತುಳುಕುವುದೆಲ್ಲವೂ ಕವಿತೆಯಲ್ಲ


“ಕಾವ್ಯ ಕೈಯಲ್ಲಿ ಹಿಡಿದುಕೊಂಡು ಅರ್ಥ ಹುಡುಕಾಡಬಾರದು,
ಅದರಂಥ ಅನರ್ಥ ಕ್ರಿಯೆ ಮತ್ತೊಂದಿಲ್ಲ.
ಹಾಡಿಬಿಡಬೇಕು ಹಾಡುತ್ತ ಹಾಡುತ್ತಲೇ ನಾವೂ ಹಾಡಾಗಬೇಕು.
ಹಾಡಾಗಲಾರದವನು ಕವಿತೆಯನ್ನು ಹಿಡಿಯಬಾರದು.
ಇದು ಕವಿತೆಯೊಂದಿಗಿನ ಮೂರು ದಶಕಗಳ ನನ್ನ ಅನುಭವ.
ಮನಸ್ಸು ಮುಕ್ತ ಮತ್ತು ಭಕ್ತನಾಗಿದ್ದಾಗ ಮಾತ್ರ ಕವಿತೆ ಘಟಿಸುತ್ತದೆ.
ಅದು ಬರೆಯುವುದಲ್ಲ, ಬರೆಯಿಸಿಕೊಳ್ಳುವುದು.
ಅದು ಮುದುಕರ ಸ್ವತ್ತಲ್ಲ,
ಹಾಗಂತ ಯುವಕ-ಯುವತಿಯರಲ್ಲಿ ತುಳುಕುವುದೆಲ್ಲವೂ ಕವಿತೆಯಲ್ಲ.”
         
         ಕಾವ್ಯದ ಬಗೆಗೆ ಇಂಥ ಒಂದು ನಿಲುವು ತಳೆದಿರುವ ನನ್ನ ಇತ್ತೀಚಿನ ಆರನೆಯ ಕಾವ್ಯ ಸಂಕಲನ ‘ಇರುವಷ್ಟು ಕಾಲ’ ಎರಡನೆಯ ಬಾರಿ ಧಾರವಾಡದ ಗೆಳೆಯರೊಂದಿಗೆ ಚರ್ಚೆಗೆ ಕಾರಣವಾಯಿತು. ಸಂಕಲನವನ್ನು ಕುರಿತು ಸುದೀರ್ಘವಾಗಿ ಚರ್ಚಿಸಿದವರು, ಮಾತನಾಡಿದವರು ಶ್ರೀಮತಿ ಪ್ರಜ್ಞಾ ಮತ್ತಿಹಳ್ಳಿ. ಅಂದಿನ ಅವರ ಭಾಷಣ ನಮ್ಮ ವಿಶ್ವವಿದ್ಯಾಲಯದ ವರ್ತಮಾನದ ಉಪನ್ಯಾಸಕರುಗಳಿಗಿಂತ ಎಷ್ಟೋ ಪ್ರಮಾಣದಲ್ಲಿ ಸಂಶೋಧಾತ್ಮಕವಾಗಿತ್ತು ಹಾಗೂ ಅನೇಕ ಹೊಸ ಹೊಳಹುಗಳಿಂದ ತುಂಬಿತ್ತು. ಅವು ಬುದ್ಧಿ ಪ್ರದರ್ಶನಕ್ಕಾಗಿ ಹೊರಟ ಮಾತುಗಳಾಗಿರಲ್ಲಿಲ್ಲ. ಬದಲಾಗಿ ಹೃದಯ ಸಂವಾದದ ಅಲೆಗಳಾಗಿದ್ದವು. ಈ ನನ್ನ ಸಂಕಲನವನ್ನು ಕುರಿತು ಮಾತನಾಡಲು ಒಪ್ಪಿಕೊಳ್ಳುವುದಕ್ಕು ಮುಂಚೆ ಅವರು ನನ್ನ ಸಾಹಿತ್ಯದ ಓದುಗರಾಗಿದ್ದಾರೆ ಎಂದು ಅವರಿಂದಲೇ ಕೇಳಿದಾಗ ನನಗೆ ಅಚ್ಚರಿ. ಗೆಳೆಯ ರಾಜು ಮಳವಳ್ಳಿಯವರ ‘ಸಿಹಿ ಗಾಳಿ’ ಸಾಹಿತ್ತಿಕ ಮಾಸಿಕ, ಅವರ ಮನೆಯನ್ನೂ ತಲುಪುತ್ತಿದ್ದು, ಅದರಲ್ಲಿಯ ‘ಈ ಸಾಕಿಯರ ಕೈ ಸೋಕಿ’ ನನ್ನ ಸ್ಥಿರ ಅಂಕಣದ ಖಾಯಂ ಓದುಗರಲ್ಲಿ ಅವರೂ ಒಬ್ಬರಂತೆ. ಸಾಹಿತಿ ಒಬ್ಬನ ಧನ್ಯತೆ ಇರುವುದೇ ಇಂಥದರಲ್ಲಿ. ಮುಖ ನೋಡದೆ, ಪರಸ್ಪರ ಭೇಟಿಯಾಗದೇ ಪತ್ರಿಕೆಗಳ ಮೂಲಕ, ಅವುಗಳೊಳಗಿನ ಬರಹದ ಮೂಲಕ ಓದುಗನೊಂದಿಗೆ ಒಂದು ಸಂಬಂಧ ಏರ್ಪಟ್ಟಾಗ ಅದು ಎಷ್ಟೆಲ್ಲ ಆಪ್ಯಾಯವೆನಿಸುತ್ತದೆ.
'Eruvastu Kaala', Book Releasing 

        ‘ಇರುವಷ್ಟು ಕಾಲ’ ದಿನಾಂಕ 12/12/2013 ರಂದು ಧಾರವಾಡ ಕಟ್ಟೆಯ ಮೂಲಕ ಮತ್ತೆ ಲೋಕಾರ್ಪಣಗೊಂಡು ಅದಕ್ಕೆ ಸಾಕ್ಷಿಯಾದವರು ಗೆಳೆಯ ಡೋಣುರ, ವನದುರ್ಗಾ, ಪೋತೆ, ದಿಬ್ಬದ, ಹಿರೇಮಠ, ಬಸೀರ್ ಹಾಗೂ ಹಿರಿಯರಾದ ವೃ.ಸ್ವಾಮಿ ಮತ್ತು ಧಾರವಾಡದ ಸಮಸ್ತ ಸಾಹಿತ್ಯಾಸಕ್ತರ ಬಳಗ.
        ಈ ಸಂಕಲನದಲ್ಲಿ ನನ್ನ ಪ್ರೀತಿಯ ಅದೆಷ್ಟೋ ಕವಿತೆಗಳಿವೆ ಆದರೆ ಅಂದಿನ ಮುಖ್ಯ ಭಾಷಣಕಾರರಾಗಿದ್ದ ಪ್ರಜ್ಞಾ ಹೇಳುವಂತೆ ‘ರೆಪ್ಪೆಯ ತೆಪ್ಪದಲ್ಲಿ’ ಅವರಿಗೆ ಅತ್ಯಂತ ಪ್ರೀತಿಯ ಕವಿತೆ. ಹೀಗಾಗಿ ಅದರ ಕೊನೆಯ ಕೆಲವು ಸಾಲುಗಳು ಇಲ್ಲಿ ನಿಮಗಾಗಿ

          ಸಂತೆಯಲ್ಲಿ ಕೈ ಬಿಟ್ಟು ಸಂಕಟಪಡುವವಳವಳೇ

ಸಂಸಾರದೊಳಗಿಟ್ಟು, ದೀಪ ಹಚ್ಚಿಟ್ಟು
ಹಚ್ಚಡದೊಳು ಹೂಗಳ ತಂದು
ರಾತ್ರಿ ಮುಡಿಗೆರಿಸಲು ಮುಗುಳ್ನಗುವವಳೂ ಅವಳೆ

ನನ್ನ ಬಾಳಿನ ಮುಂಜಾನೆಯ ಇಬ್ಬನಿ
ಮಿಡಿ ಹಗಲ ರಂಗೋಲಿ
ದೂರ ತೇಲುವ ಸುಪ್ರಭಾತ
ಲೆಕ್ಕವಿಲ್ಲದೆ ಸುರಿವ ಪಾರಿಜಾತ
ಎಲ್ಲ ಎಲ್ಲ ಎಲ್ಲವೂ ಅವಳೆ
ಕೆಲವೊಮ್ಮೆ ಅವಳೇ ಅತೀತ

ಇವಳ ಹೇಳಲು ಹೋಗಿ
ನನ್ನ ನುಡಿ ತಪ್ಪುತ್ತವೆ
ಹಿಡಿಯಲು ಹೋಗಿ
ನಡೆ ತಪ್ಪುತ್ತದೆ

                   ಈಗ ನಾನು ತೆಪ್ಪಗಾಗುತ್ತೇನೆ
                            ಯಾಕೆಂದರೆ
                    ಇವಳ ಕಣ್‍ರೆಪ್ಪೆಯ ತೆಪ್ಪದಲಿ
                 ಸಮುದ್ರವೂ ಸಣ್ಣ ದಾರಿಯೆನಿಸುತ್ತದ
                    ತೆಪ್ಪ ತಪ್ಪಿ ತಳಕ್ಕಿಳಿದರೆ ಸಾವೂ
                       ಹೊಸ ಬದುಕೆನಿಸುತ್ತದೆ


No comments:

Post a Comment