Total Pageviews

Thursday, May 15, 2014

ಕಣ್ಣೊದ್ದೆಯಾದಾಗ ಬುದ್ಧನೊಬ್ಬನೇ ಇದ್ದ!!!


        ನನ್ನ ಮನೆಗೆ ಬುದ್ಧ ಬರುವ ಕಾಲ, ಸಿದ್ಧತೆ ನಡೆದಿತ್ತು ನನ್ನ ಮನೆಯೊಳಗೆ ಹಾಗೂ ಮನದೊಳಗೆ. ದಿನಾಂಕ 10, ಮಧ್ಯರಾತ್ರಿ ಎರಡು ಗಂಟೆಯ ಸಮಯ ಏನೋ ಓದಿಬಿಟ್ಟೆ. ನಮ್ಮ ಬೆನ್ನು ಹಿಂದೆಯೇ ನಮ್ಮ ಎದೆ ಸೀಳುವ ಮೋಸದ ಆಲೋಚನೆ ಹೆಪ್ಪುಗಟ್ಟುತ್ತದೆ ಎನ್ನುವುದು ಎಷ್ಟೊಂದು ಆಘಾತಕಾರಿ! ಬೇಸರ, ಸಿಟ್ಟು ಮತ್ತು ಮನುಷ್ಯ ಜಾತಿಯ ಬಗ್ಗೆ ಅಸಹ್ಯ ಎಲ್ಲ ಮಡುಗಟ್ಟಿದವು ಮನಸ್ಸಿನಲ್ಲಿ. ಬಿಕ್ಕಳಿಕೆ ಉಮ್ಮಳಿಸಿ ಕಣ್ಣೊದ್ದೆಯಾದವು. ಆನಂತರ ಬರೀ ಮೌನ.
ಹೊರಗೆ ಕತ್ತಲು ಕರಗುತ್ತಲಿತ್ತು ಆದರೆ ನಸುಕಿನ ನಿದ್ರೆಯೊಳಗೆ ಬುದ್ಧ ಬರುತ್ತಲಿದ್ದ. ಅವನು, ಅವನೊಂದಿಗೆ ಕಬೀರ, ಅಕ್ಕಮಹಾದೇವಿ, ಸಾಕ್ರೆಟಸ್, ಸೂಳೆ ಸಂಕವ್ವ, ಮೀರಾ ಸಾಲು ಸಾಲಾಗಿ ಸಾಂತ್ವಾನದ ಕೈಗಳು, ನನ್ನ ದಡ್ಡತನಕ್ಕೆ ಮುಗುಳ್ನಗುವ ಮೈ ಮುಖಗಳು. ಹೇಸಿ ಮೋಹದ ಮೇಲಿಯೂ ಮಲ್ಲಿಗೆಯ ಹಾಸಿ, ನಿರ್ಭಾವುಕನಾಗಿ ಎದ್ದು ಹೆಂಡತಿಯೊಂದಿಗೆ ಬುದ್ಧನ ಬರುವಿಗಾಗಿ ಕಾಯಲು ಸಿದ್ಧನಾದೆ.

        ನನ್ನಪ್ಪನಿಂದಾಗಿ ನಾನು ಕಬೀರನ ಕೈ ಹಿಡಿದೆ. ನನ್ನ ಓದಿನಿಂದಾಗಿ ನಾನು ಬುದ್ಧನ ಬಾಗಿಲಿಗೆ ಬಂದೆ. ಈ ಮಧ್ಯ ಎಷ್ಟೆಲ್ಲ ಓದಿದ್ದರೂ ಬದುಕಿಗೆ ಬೆಂಗಾವಲಾಗಿ ನಿಂತವರು ಇವರಿಬ್ಬರೆ. ಹಾಗಾದರೆ ಅದ್ಯಾವ ಬೋಧ ಸುಧೆ ನನಗಿವರು ಉಣ್ಣಿಸಿರಬಹುದು? ಸರಳವಾಗಿದೆ ಉತ್ತರ. ಮಡದಿಯೇ ಮತ್ತೊಬ್ಬನಿಗಾಗಿ ಮಿಡುಕಾಡುತ್ತಿದ್ದುದು ಗೊತ್ತಿದ್ದು, ಕಬೀರ ಆಕೆಗೆ ನಾವಿಕನಾಗಿ, ತಾನು ವಿರ್ಭಾವುಕನಾಗಿ ಬಿಟ್ಟು ಬಂದ. ಇನ್ನು ಬುದ್ಧ ತಾನುಣ್ಣುವ ಹಂದಿ ಮಾಂಸದ ಭೋಜನವೆ ತನ್ನ ಬದುಕಿನ ಕೊನೆಯ ಊಟವಾಗುತ್ತದೆ ಎಂದು ಗೊತ್ತಿದ್ದೂ ಅದನ್ನ ಆತ ನಿರಾಕರಿಸಲಿಲ್ಲ. ಹೀಗೆ ಇಬ್ಬರೂ ಈ ಬದುಕು ನೀಡುವ ಉರಿ ಇರಲಿ, ಸಿರಿ ಇರಲಿ ತಮ್ಮೆದುರೇ ಮೋಸದ ಮಹಾ ಮುಖವಿರಲಿ ಅವುಗಳನ್ನು ಮನಸಾರೆ ಸವರಿ, ಮುತ್ತಿಟ್ಟು ಮನುಷ್ಯರನ್ನಾಗಿಸಲು ಯತ್ನಿಸಿದವರು. ಇಂಥ ಬುದ್ಧರು ಬರುವ ಕಾಲ ನಾನು ಎದ್ದು ನಿಲ್ಲಲೇ ಬೇಕಿತ್ತು ಶಿರ ಬಾಗಿ ನಮಸ್ಕರಿಸಿ ಬೆಳಕನ್ನು ಬರಮಾಡಿಕೊಳ್ಳಬೇಕಿತ್ತು. ಕಬೀರನಂತೆ ಮೌನಿಯಾಗಲೇಬೇಕಿತ್ತು ನಾನು, ಮತ್ತೆ ಬುದ್ಧನಂತೆ ಶಾಪಗಳ ಕೂಪದಲ್ಲಿ ಬಿದ್ದವರಿಗೂ ಸನ್ಮಂಗಲವೇ ಆಗಲಿ ಎಂದು ಹರಸಿ ಮುಗುಳ್ನಗಬೇಕಿತ್ತು. 
        ಬೌದ್ಧ ಪೂರ್ಣಿಮೆಯ ತುಣುಕು ಬೆಳಕಿನಂತೆ ಹುಟ್ಟಿದವಳು ನನ್ನ ಮಗಳು. ಯಾವ ವೈಶಾಖ ಪೂರ್ಣಿಮೆಯ ದಿನ ಬುದ್ಧ ಈ ಪ್ರಪಂಚಕ್ಕೆ ¨ಂದು, ಇದೇ ದಿನದಂದು ಜ್ಞಾನೋದಯ ಹೊಂದಿ ಮತ್ತೆ ಇದೇ ದಿನ ನಿರ್ವಾಣ ಹೊಂದಿದನೋ ಅದೇ ದಿನದಲ್ಲಿ ನನಗೆ ಮಗಳು ಹುಟ್ಟಿದ್ದು. ಈ ದಿನದ ಬಗೆಗಿನ ನನ್ನ ವಿಚಿತ್ರ ಮೋಹಕ್ಕೆ ಇದೂ ಒಂದು ಕಾರಣ. ಅವಳ ಕಣ್ಣು ರೆಪ್ಪೆಗಳಲ್ಲಿ ನಾನು ಬುದ್ಧನ ಅಬಾಧಿತ, ಶಾಂತ ನಿದ್ರೆಯನ್ನು ಕಂಡಿದ್ದೇನೆ. ಹೀಗಾಗಿ ಇಂಥ ಘಳಿಗೆಯನ್ನು ಕಳೆದುಕೊಳ್ಳುವುದೆಂದರೆ ಬೆಳಕಿನಿಂದ ಮುಖ ಮುಚ್ಚಿಕೊಂಡಂತೆ. ಬೇಲೂರಿನ ವೇಲಾಪುರಿ ಸಾಹಿತ್ಯ ವೇದಿಕೆಯ 20 ನೆಯ ಮನೆ ಮನೆ ಸಾಹಿತ್ಯ ಗೋಷ್ಠಿಯನ್ನು ಈ ಬೌದ್ಧ ಪೂರ್ಣಿಮೆಯ ಮತ್ತು ಮಗಳ ಜನ್ಮ ದಿನದ ಕಾರಣಾರ್ಥ ಹಮ್ಮಿಕೊಂಡೆ. ಬುದ್ಧನ ನಗೆಯಂತೆ ಈ ಸಮಾರಂಭ ಇರಬೇಕೆನ್ನುವುದು ನನ್ನ ಬಯಕೆಯಾಗಿತ್ತು. ಮಾತಿರಬಾರದು, ಗೊಡ್ಡು ಪಾಂಡಿತ್ಯದ ಪ್ರದರ್ಶನವಿರಬಾರದು, ಮಕ್ಕಳು ಮಹಿಳೆಯರು, ತಿಳಿದವರು ತಿಳಿಯದವರೂ ಆನಂದಿಸುವ ಸರಳ ಸಭೆ ಇದಾಗಿರಲಿ ಎಂದುಕೊಂಡು ರಂಗ ಗೀತೆಗಳನ್ನು ಹಾಡಿಸಿ, ಆ ಮೂಲಕ ಬುದ್ಧನ ಬೆಳಕನ್ನು ಆಹ್ವಾನಿಸಿ ಅವಳನ್ನು ಹರಸಬೇಕೆನ್ನುವುದು ನನ್ನ ತಹತಹಿಕೆ. ಹಾಗೆಯೇ ಆಯಿತು. ಸೇರಿದ ಮೂವತ್ತು ಜನರಲ್ಲಿ ಹತ್ತಾರು ಜನ ಹಾಡಿ ನನ್ನ ಮನೆ ಮನಗಳನ್ನ ಚೇತೊಹಾರಿಯಾಗಿಸಿದರು. ಸಾಯಂಕಾಲ 5 ಗಂಟೆಯಿಂದ ರಾತ್ರಿಯ 2 ಗಂಟೆಯವರೆಗೂ ವೈಶಾಖ ಪೂರ್ಣಿಮೆಯ ಬೆಳಕಿನಲ್ಲಿ ಹಸುಳೆಯನ್ನು ಹುಡುಕಿಕೊಂಡು ಹಾರೈಸಲು ಬುದ್ಧ ಬರುತ್ತಲೇ ಇದ್ದ, ಗೆಳೆಯನಾಗಿ, ಹಿರಿಯನಾಗಿ ಮತ್ತು ಹೆಂಗಸಾಗಿ.

ಬರುತ್ತಿರಲಿ ಬುದ್ಧ ಹಿಗೆಯೇ, ಕಾಡಿಸುತ್ತ ಪಿಡಿಸುತ್ತ, ಹಂಗಿಸುತ್ತ ಮುಗುಳ್ನಗೆಯಿಂದ ವ್ಯಂಗಿಸುತ್ತ. ಅವನೆಷ್ಟು ಸಾರಿ ಬಂದರೂ, ಯಾವ ರೂಪದಲ್ಲಿ ಬಂದರೂ ನಾನು ಮತ್ತೆ ಮತ್ತೆ ಕರೆಯುತ್ತೇನೆ, ಈ ಬಾಗಿಲುಗಳನ್ನು ಹಿಗೆಯೇ ತೆರೆದಿಟ್ಟುಕೊಂಡು ಕುಟುಂಬ ಸಮೇತನಾಗಿ ಆಹ್ವಾನಿಸುತ್ತಲೇ ಇರುತ್ತೇನೆ ಬಾ ಬುದ್ಧನೆ ನಮ್ಮ ಬೆಳಕಾಗು ಎಂದು.

No comments:

Post a Comment