Total Pageviews

Wednesday, May 21, 2014

ಬರೆದು ಬಿಟ್ಟಿದ್ದೇನೆ, ತೆರೆದೂ ಬಿಡುತ್ತೇನೆ

      
     2012, ಜುಲೈ ತಿಂಗಳ ಮೊದಲ ಮಳೆಗಳ ಮಣ್ಣಿನ ವಾಸನೆಯೊಂದಿಗೆ ಮೈದಾಳಲಾರಂಭಿಸಿದರು ನನ್ನ ಸಾಕಿಯರು. ಉತ್ತರ ಕರ್ನಾಟಕದ ವಾಡೆಯಂಥ ಸಕಲೇಶಪುರದ ಹಳೆಯ ಮನೆ, ಕಾಲು ಕೆದರುತ್ತ ಸುತ್ತಲು ಸುಳಿದಾಡುವ ಕೋಳಿ, ನಾಯಿ, ಅಪರೂಪಕ್ಕೊಮ್ಮೆ ಕಪ್ಪೆ ಹಿಡಿಯಲು ಬರುತ್ತಿದ್ದ ಹಾವು, ಮನೆಗೆ ಸುತ್ತುವರಿದು ಹುಟ್ಟುತ್ತಿದ್ದ ಕಾಡುಕಾಡಾದ ಹೂ, ಹುಲ್ಲು ಗರಿಕೆಯ ಮೇಲೆ ಮಗಳ ರೆಪ್ಪೆಯಂಚಿನಲ್ಲಿ ಹೊಳೆಯುವ ಕಣ್ಣೀರ ಹನಿಯಂಥ ತುಂತುರು, ಎಲ್ಲ ಈ ಸಾಕಿಯರಂತೆ. ಲೆಕ್ಕಕ್ಕೆ ಸಿಗುವುದಿಲ್ಲ, ಒಕ್ಕಣಿಕೆಗೆ ಒಳಗಾಗುವುದಿಲ್ಲ. ಇದು ಮೋಡ ತೆಕ್ಕೆ ಹೊಡೆಯುವ ವಿಫಲ ಯತ್ನ. 
         ನಾನು ಇವರ ಕುರಿತು ಮಾತಾಡುತ್ತ ಹೊರಟೆ, ಅವಳು ಹರಿಯುವ ಮಾತಿಗೆ ಲಿಪಿಯ ಕಟ್ಟೆ ಕಟ್ಟುತ್ತ ಪಾತ್ರಗಳಾಗಿ ನಿಲ್ಲಿಸಿ ಬಿಟ್ಟಳು. ಗೆಳೆಯ ರಾಜು ಮಳವಳ್ಳಿ "'ಸಿಹಿ ಗಾಳಿ'ಗಾಗಿ ಏನಾದರೂ ವಿಶೇಷ ಕೊಡಿ ಸಾಹೇಬರೆ" ಎಂದು ಕೇಳಿದ್ದೇ ಸಾಕಾಯಿತು, ನವೆಂಬರ್ ತಿಂಗಳ ವಿಶೇಷಾಂಕದಲ್ಲಿ ಬಯಲಿಗೆ ಬಿದ್ದ ನನ್ನ ಸಾಕಿಯರು 14 ತಿಂಗಳು ನಿರಂತರ ಹಾಡಿದ್ದೇ ಹಾಡು. ಈ ಹಾಡುಗಳು ಕೆಲವರಿಗೆ ಇಷ್ಟ ಮತ್ತೆ ಕೆಲವರಿಗೆ ಕನಿಷ್ಟ. ಕೆಲವರಿಗೆ ಆತ್ಮದ ಆಲಾಪ ಮತ್ತೆ ಕೆಲವರಿಗೆ ರೋಚಕ ರಂಜನೀಯ ಓದು. ಯಾರು ಏನಾದರೂ ಅಂದುಕೊಳ್ಳಲಿ ಬರಬೇಕಾದವರು ಬಂದುಬಿಟ್ಟಿದ್ದಾರಷ್ಟೆ.

        
        ಇಂಥ ನೀಚ ಬದುಕುಗಳು ಯಾವ ಕಾರಣಕ್ಕಾಗಿ ಬರೆಯಲ್ಪಡಬೇಕು? ಇವು ಕೊಡುವ ಸಂದೇಶವಾದರೂ ಏನು? ಕಾಮದ ಕಮನೀಯತೆಯನ್ನು ಕತ್ತಲೊಳಗಷ್ಟೆ ಖುಷಿಯಾಗಿಸಿಕೊಳ್ಳುವುದು ಒಳಿತಲ್ಲವೆ? ಎಂದು ಕೆಲವರು ಜರಿದರೆ, ಮತ್ತೆ ಕೆಲವರು ಇದು ಬದುಕು ಸಾಗಿದ ರೀತಿ. ಇಂಥ ಬದುಕುಗಳಿಗೆ ಯಾವ ಲಯ, ಬದ್ಧತೆ ಹಾಗೂ ವ್ಯಾಕರಣಗಳು ಇರುವುದಿಲ್ಲ. ಇದ್ದಂತೆ ಇರಲಿ ಬಿಡಿ ಎಂದು ಸಮಾಧಾನಿಸಿದವರು ಮತ್ತೆ ಕೆಲವರು. ಬರಹ ಮುಗಿದು, ಮುದ್ರಣ ಮನೆ ಸೇರಿ, ಅಲ್ಲಿಂದ ಮನೆಮಾತಾಗಿ, ಮತ್ತೆ ಒಂದು ಪುಸ್ತಕ ರೂಪದಲ್ಲಿ ಕಟ್ಟಿಕೊಡುತ್ತಿರುವ ಈ ವೇಳೆಯಲ್ಲಿ, ಇನ್ನೂ ನಾನು ಅದೇ ದ್ವಂದ್ವದಲ್ಲಿದ್ದೇನೆ. ಸತ್ತವರನ್ನು ನೆನಪಾಗಿ ಎಬ್ಬಿಸಿ, ಸಮಾಜಕ್ಕೆ ಭೂತವಾಗಿ ಬೆನ್ನಟ್ಟಿಸುವ ನನ್ನ ಈ ಕ್ರಿಯೆ ಎಷ್ಟರ ಮಟ್ಟಿಗೆ ಸೂಕ್ತ? ಹೀಗಾಗಿಯೇ ಇರಬಹುದು, ಗೆಳತಿಯೊಬ್ಬಳ ಪರಿಶ್ರಮದಿಂದ ಸಂಪೂರ್ಣಗೊಂಡು, ಹಲವು ತಿಂಗಳಿಂದ ನನ್ನ ಟೇಬಲ್ಲಿನ ಮೇಲೆ ಬಿದ್ದುಕೊಂಡಿದ್ದ ಈಕೆಯನ್ನು ಮತ್ತೆ ಛೇಡಿಸಿದವರು, ಪೀಡಿಸಿದವರು ಚಿತ್ರ ಕಲಾವಿದ ಗೆಳೆಯ ಶ್ರೀ ಬಿ.ಎಸ್.ದೇಸಾಯಿ.
        ಬರೆದು ಬಿಟ್ಟಿದ್ದೇನೆ, ತೆರೆದೂ ಬಿಡುತ್ತೇನೆ. ತೆಕ್ಕೆಯೋ, ಧಿಕ್ಕಾರವೋ: ಸಾಂತ್ವಾನವೋ, ಸಾವೋ ಎಲ್ಲ ನಿಮಗೇ ಸೇರಿದ್ದು. ಕೃತಿಯ ಮುಖಪುಟವನ್ನು ನಿಮಗೆ ತೋರಿಸುತ್ತಿದ್ದೇನೆ. ಕೇವಲ ಒಂದು ತಿಂಗಳು ಕಾಯಿರಿ, ಬರುತ್ತಾರಿವರು ಬೆಳಕಾಗಿ, ಕೊಳಕಾಗಿ, ಎದೆ ಕಲಕುವ ಕಥೆಗಳಾಗಿ.




No comments:

Post a Comment