ಇತಿಹಾಸ ವರ್ತಮಾನಗಳೆರಡೂ
ಕೆಲವು ಬಾರಿ ಒಂದಾಗಿ ಬಿಡುತ್ತವೆ. ಈ ನನ್ನ ಹೇಳಿಕೆ ಸರಿಯಾಗಿದೆಯೆ? ಯಾಕೆಂದರೆ, ಇತಿಹಾಸದ ಹೊಟ್ಟೆಯಿಂದ
ವರ್ತಮಾನ, ಮತ್ತೆ ಕೆಲವು ಸಲ ವರ್ತಮಾನದ ಆವರಣದೊಳಗೇ ಮುಂದೊಮ್ಮೆ ದಾಖಲಾಗಬಲ್ಲ ಇತಿಹಾಸ ರೂಪಗೊಂಡು
ಬಿಡುತ್ತದೆ. ಇದು ಒಂದರ್ಥದಲ್ಲಿ ಯುಗಧರ್ಮ. ಆದರೆ ಇದೆಲ್ಲ ನನ್ನ ‘ಕಾವ್ಯಕ್ಕೆ ಉರುಳು’ ಅಂಕಣಗಳ ಬರಹದ
ಅವಧಿಯ ಸುತ್ತಲೂ ಜರುಗಿತೆನ್ನುವುದೇ ಈ ಚಿಂತನೆಗೆ ಕಾರಣ.
ದೂರದ ನಾಡುಗಳಲ್ಲಿ,
ನಮಗೆ ಗೊತ್ತಿಲ್ಲದ, ನಾವು ಸಾಕ್ಷಿಯಾಗಿರದ ಕಾಲ ಹಾಗೂ ಸಂದರ್ಭಗಳಲ್ಲಿ ತಮ್ಮ ಕ್ರಾಂತಿಕಾರಿ ಪ್ರಗತಿಪರ
ಆಲೋಚನೆಗಳಿಂದಾಗಿ ಗಲ್ಲಿಗೇರಿಸಲ್ಪಟ್ಟ, ಗಡಿಪಾರುಗೊಂಡ ಅಥವಾ ಹತ್ಯೆಯಾದ ಲೇಖಕರುಗಳ ಜೀವನಗಳನ್ನು ಪ್ರತಿ
ವಾರವೂ ನಾನು ಅನಾವರಣಗೊಳಿಸುವಾಗ ಒಂದು ಸುದ್ಧಿಯಂತೆ ಓದಿ ಬಿಡುತ್ತಿದ್ದ ನನ್ನ ಓದುಗ ಸಮುದಾಯ ಅಂಥ
ಒಂದು ಘಟನೆ ತನ್ನ ಪಕ್ಕದಲ್ಲಿಯೇ ಜರುಗಿದಾಗ ಕಕ್ಕಾಬಿಕ್ಕಿಯಾಯಿತು. ಒಂದು ಕ್ಷಣ ಕಾಲದ ಪ್ರವಾಹವೇ ನಿಂತು
ಹೋದಂತೆ ಅವರು ಭಯಗ್ರಸ್ಥರಾದರು. ಅದು ಮೃತ್ಯುವಿನ ಭಯವಷ್ಟೆ, ಬದಲಾವಣೆಯ ಅಥವಾ ಅವರ ರೂಪಾಂತರದ ಪ್ರಶ್ನೆಯಲ್ಲ.
ನಾಡಿನ
ಹೆಸರಾಂತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯವರನ್ನು ಹಂತಕನೋರ್ವ ನನ್ನೂರಾದ ಸಾಂಸ್ಕ್ರತಿಕ ನಗರಿ ಧಾರವಾಡದಲ್ಲಿ
ಹತ್ಯಗೈದ ದಿನ ನನಗೆ ಸಾಲು ಸಾಲಾಗಿ ಫೋನ್‍ಗಳು, ಪ್ರಶ್ನೆಗಳು, ಚರ್ಚೆಗಳು. ಅವರೆಲ್ಲರ ಆ ಆತಂಕಗಳಲ್ಲಿ
ಒಂದು ಸಹಜ ನಿರೀಕ್ಷೆ, ಜಗತ್ತಿನ ಯಾವ ಯಾವುದೋ ದೇಶದ ದುರಂತ ಲೇಖಕರುಗಳನ್ನು ಕುರಿತು ಪ್ರತಿವಾರ ಬರೆಯುವ
ನಾನು ಕಲಬುರ್ಗಿಯವರ ಹತ್ಯೆಯನ್ನು ಕುರಿತು ‘ಕಾವ್ಯಕ್ಕೆ ಉರುಳು’ ಅಂಕಣ ಮಾಲೆಯಲ್ಲಿ ಯಾವಾಗಲ ಬರೆಯುತ್ತೇನೆ?
ಹಾಗೂ ಏನಂತ ಬರೆಯುತ್ತೇನೆ ಎನ್ನುವುದು. ಮತ್ತೆ ಕೆಲವರು ಈ ಪ್ರಶ್ನೆಯನ್ನು ನೇರವಾಗಿ ಕೇಳಿಯೂ ಬಿಟ್ಟರು.
ಇರುವ ಸಂಗತಿ
ಎಂದರೆ ನಾನು ಈಗಾಗಲೇ ಉತ್ತರ ಕೊಟ್ಟಿದ್ದೇನೆ. ಕಳೆದ ಅರವತ್ತು ವಾರಗಳಿಂದ ಉತ್ತರ ಕೊಡುತ್ತಲೇ ಇದ್ದೇನೆ.
ಆದರೆ ಈಗ ನಿಮ್ಮ ಸಮಾಧಾನಕ್ಕಾಗಿ ಅದನ್ನೇ ಪುನರ್ ಉಚ್ಚರಿಸುತ್ತಿದ್ದೇನೆ. ಕಲಬುರ್ಗಿಯವರ ನೆತ್ತರು
ಹೀರಿದ ನನ್ನೂರು ಧಾರವಾಡ, ಚಿಂತಕ ಕೆನ್‍ಸಾರೋನ ಸಾವಿಗೆ ಸಾಕ್ಷಿಯಾದ ನೈಜೀರಿಯಾ, ಗಾಂಧಿಯ ರಕ್ತತರ್ಪಣವಾದ
ದೆಹಲಿ, ಕೇವಲ ಇಪ್ಪತ್ತೊಂದು ವರ್ಷದ ಎಳೆಯ ಹುವಾಂಗ್‍ನ ರಕ್ತ ಕುಡಿದ ಚೈನಾ, ಸುಶ್ಮಿತಾ ಬ್ಯಾನರ್ಜಿಯನ್ನು
ಕೊಲೆ ಮಾಡಿದ ಅಪಘಾನಿಸ್ಥಾನ-ಹೀಗೆ ಭಿನ್ನ ಆಲೋಚನೆ ಮಾತ್ರಕ್ಕಾಗಿಯೇ ಕೊನೆಯುಸಿರೆಳೆಯುವ ದೇಹಗಳಿಗೆ
ಮೈ ಹಾಸುವ ನೆಲಗಳ ಮತ್ತು ವ್ಯಕ್ತಿಗಳ ಹೆಸರುಗಳಷ್ಟೇ ಭಿನ್ನ, ಕೃತ್ಯ ಮತ್ತು ಮನುಷ್ಯನ ಮೌಢ್ಯತನ ಮಾತ್ರ
ಎಲ್ಲ ಕಾಲಕ್ಕೂ ಒಂದೇ ತೆರನಾದುದು. ಇದುವರೆಗೂ ನನ್ನ ಓದುಗ ಬಳಗ ಓದುತ್ತಿದ್ದ ಜೀವನಗಳಲ್ಲಿ ‘ಧಾರವಾಡ’
ಮತ್ತು ‘ಎಂ.ಎಂ.ಕಲಬುರ್ಗಿ’ ಎಂಬ ಶಬ್ಧಗಳಿರಲಿಲ್ಲ ಅಷ್ಟೆ.
ಮೃತ್ಯುವಿನ ನಿತ್ಯ
ಕಥೆಯಲ್ಲಿ ಇದ್ದಕ್ಕಿದ್ದಂತೆ ನಮ್ಮ ಹೆಸರೂ ಸೇರಿಕೊಂಡಾಗ ಕ್ಷಣಕಾಲ ನೋವಿನಿಂದ ನಲುಗುವುದು ಸ್ವಾಭಾವಿಕ.
ದೂರದ ದೇಶದಲ್ಲಿ ಘಟಿಸುವ ಸಾವಿಗೂ, ಪಕ್ಕದ ಮನೆಯಲ್ಲಿ ಘಟಿಸುವ ಸಾವಿಗೂ ಮತ್ತು ನನ್ನೊಳಗೇ ಘಟಿಸುವ
ಸಾವಿಗೂ ಖಂಡಿತವಾಗಿಯೂ ಸಾಮಾನ್ಯನೊಬ್ಬನ ಭಾವ ತೀವ್ರತೆಯಲ್ಲಿ ವ್ಯತ್ಯಾಸವಿದೆ. ಆದರೆ ಓರ್ವ ಸೂಕ್ಷ್ಮ
ಮನಸ್ಸಿನ ಲೇಖಕನಲ್ಲಿ ಅಲ್ಲ. ಆತನ ಪಾಲಿಗೆ ಇಂಥ ಘಟನೆಗಳು ತೆರೆದುಕೊಳ್ಳುವ ಪ್ರಕ್ರಿಯೆ ತೀರ ಭಿನ್ನ.
ಅವನಿಗೆ ಹತ್ತಿರವಿರುವುದೆಲ್ಲ ದೂರಾಗಿ ಕಾಣಬಹುದು. ದೂರವಿರುವುದೆಲ್ಲ ಹತ್ತಿರವಾಗಬಹುದು. ಅದಕ್ಕೊಂದು
ಸಿದ್ಧ ಸೂತ್ರವಿಲ್ಲ. ಯಾಕೆಂದರೆ, ಅದು ಮನಸ್ಸಿನ ಯಾನ, ಮೌನ ಮತ್ತು ಮಂಥನಗಳ ಮುಗಿಯದ ಪ್ರವಾಸ.
ಸೈನ್ಸ್‍ನ ಪ್ರಕಾರ
ಒಬ್ಬ ವ್ಯಕ್ತಿಯ ಸಾವಿನ ಏಳು ನಿಮಿಷಳವರೆಗೂ ಆತನ ಮೆದುಳು ಬದುಕಿರುತ್ತದೆಯಂತೆ. ಸಾಹಿತ್ಯದ ಪ್ರಕಾರ
ಇಂಥ ವ್ಯಕ್ತಿಯ ಮೆದುಳಿನಿಂದ ಮೈದಾಳಿದ ಆಲೋಚನೆ ಸಾವಿರಾರು ವರ್ಷಗಳಿಗೂ ಬದುಕಿರುತ್ತದೆ. ಧಾರ್ಮಿಕ
ನಂಬಿಕೆಗಳ ಪ್ರಕಾರ ಜನ್ಮಾಂತರಗಳವರೆಗೂ ವ್ಯಕ್ತಿಯ ಅಸ್ತಿತ್ವ ಮಾನಸಿಕವಾಗಿ ಅಖಂಡವಾಗಿರುತ್ತದೆ. ಈ
ಅರ್ಥದಲ್ಲಿ ಹತ್ಯೆಯಾದ, ನನ್ನ ಕಾವ್ಯಕ್ಕೆ ಉರುಳು ಅಂಕಣಮಾಲೆಯ ಅನೇಕ ಲೇಖಕರುಗಳಂತೆ ಹುತಾತ್ಮರಾದ ಪ್ರೊ.
ಎಂ.ಎಂ.ಕಲಬುರ್ಗಿ ನನ್ನ ಪಾಲಿಗೆ ಈ ಲೋಕ ನಿರ್ಗಮಿಸಿದ ಪಾತ್ರದಂತೆ ಕಾಣುವುದಿಲ್ಲ. ಆಲೋಚನೆಯಾಗಿ ಕಾಡುತ್ತಿದ್ದಾರೆ.
ನಿಜವಲ್ಲದ ಗುರು,
ನಿಷ್ಠೆ ಇಲ್ಲದ ಶಿಷ್ಯ ಪರಂಪರೆಯನ್ನು ನೆಚ್ಚಿಕೊಂಡು, ಪೂಜಿಸಿಕೊಂಡು, ಪೋಷಿಸಿಕೊಂಡು ಬಂದಿದ್ದ ಹಿರಿಯರಾದ
ಎಂ.ಎಂ.ಕಲಬುರ್ಗಿಯವರು ನನ್ನ ಗುರುಗಳೂ ಆಗಿರಲಿಲ್ಲ. ನಾನು ಅವರ ಅಭಿಮಾನಿಯೂ ಆಗಿರಲಿಲ್ಲ. ಬದಲಾಗಿ
ಒಂದೇ ಕಾಲಘಟ್ಟದಲ್ಲಿ ಬದುಕಿದ್ದ ಎರಡು ಬೇರೆ ಬೇರೆ ತಲೆಮಾರುಗಳ ಲೇಖಕರಾಗಿದ್ದೆವು. ಅವರ ಬರಹಕ್ಕಿಂತಲೂ
ಜೀವನ ತೀವ್ರತೆ ಮತ್ತು ಅಧ್ಯಯನದ ಶಿಸ್ತು ನನಗೆ ಅವರಲ್ಲಿ ಇಷ್ಟವಾದ ಗುಣಗಳಾದರೆ ನನ್ನ ಬರಹದ ಶೈಲಿ
ಮತ್ತು ಸಾಹಿತ್ಯ ಕೃಷಿ ಅವರಿಗೆ ಇಷ್ಟವಾಗಿತ್ತು. ನಮ್ಮಿಬ್ಬರ ಮಧ್ಯ ಚಹಾ ಮತ್ತು ಸೌಜನ್ಯದ ಸಲುಗೆ ಇತ್ತು.
ನನ್ನೊಂದು ಪುಸ್ತಕಕ್ಕೆ ಅವರ ಪತ್ರವೇ ಮುನ್ನುಡಿಯಾಗಿತ್ತು. ಈಗ ಅವರ ಹತ್ಯೆಯಾಗಿ ನನ್ನ ಅಂಕಣ ಸರಣಿಯ
ಮುಂದೆ ದುತ್ತೆಂದು ನಿಂತುಕೊಂಡಿದ್ದಾರೆ, ಪ್ರಶ್ನೆಯಾಗಿ.
ಪ್ರಶ್ನೆ ಈಗ
ಲೇಖನವಾಗಿ ಅನಾವರಣಗೊಳ್ಳಬೇಕು. ಅದಕ್ಕೂ ಮುಂಚೆ ಅದು ನನ್ನೊಳಗಿಳಿಯಬೇಕು, ಬೆಳೆಯಬೇಕು ಈ ಅಂಕಣ ಮಾಲೆಯ
ಉಳಿದ ಜೀವನಗಾಥೆಗಳಂತೆಯೆ ಮತ್ತೆ ಮರುಜನ್ಮ ಪಡೆಯಬೇಕು, ಪಡೆಯುತ್ತದೆ.
ಕಾವ್ಯಕ್ಕೆ ಉರುಳು
ಭಾಗ-3 ನಿಮ್ಮ ಕೈಯಲ್ಲಿದೆ. ಇದು ನೀವು ಮುನ್ನಡಿಸಿದ ಮಾಲೆ. ಹಿಂದಿನ ಎರಡು ಭಾಗಗಳಿಗಿಂತಲೂ ಅಚ್ಚುಕಟ್ಟಾಗಿದೆ
ಭಿನ್ನವಾಗಿದೆ, ಸುಂದರವಾಗಿ ರೂಪುಗೊಂಡಿದೆ, ಸೊಗಸಾಗಿದೆ ಎನ್ನಲಾರೆ. ಏಕೆಂದರೆ ಸಾವು, ಅದೂ ಅನಿರೀಕ್ಷಿತ
ಸಾವು ಸೊಗಸಿನ ಮಾತಾಗಲಾರದು. ಆದರೆ ಸ್ವಲ್ಪ ತಡವಾಗಿ ನಿಮ್ಮ ಕೈ ಸೇರುತ್ತಿದೆ. ಬರಹವೆನ್ನುವುದೇ ಹಾಗೆ.
ಹಲವು ಸಲ ಎಲ್ಲ ಸಿದ್ಧವಾಗಿದ್ದಾಗಲೂ ಅದು ಹೊರಬರಲು ತುಂಬ ತಡವಾಗಿ ಬಿಡುತ್ತದೆ. ಈ ಪುಸ್ತಕ ತಿಂಗಳುಗಳ
ಹಿಂದೆಯೆ ಎಲ್ಲ ರೀತಿಯಿಂದಲೂ ಸಿದ್ಧವಾಗಿದ್ದರೂ ಕೂಡಾ ಹೊರಬರಲು ವಿಳಂಭಿಸಿತು. ಕಾರಣಕ್ಕೆ ಮತ್ತೆ ಆಕಾಶಕ್ಕೆ
ಕೈ, ಮತ್ತೊಮ್ಮೆ ಹೇಳಿ ಬಿಡುತ್ತೇನೆ-
ನನ್ನ ತಪ್ಪುಗಳು ಅನಂತ ಕೋಟಿ
ನಿಮ್ಮ ಸೈರಣೆಗೆ ಲೆಕ್ಕವಿಲ್ಲವಯ್ಯಾ.....
25.11.2015
ಕ್ಷಮೆಯಿರಲಿ
ರಾಗಂ