Total Pageviews

Friday, November 13, 2015

‘ಕೊನೆ’ ಎಂಬ ಕೊನೆಯಿರದ ಅಂತಿಮ ಪಯಣ



ಗಂಟೆಗಳವರೆಗೆ ಮದಿರಾಲಯಗಳಲ್ಲಿ ಕುಳಿತು ಒಂದರ ಮೇಲೊಂದರಂತೆ ಖಾಲಿ ಮಾಡುವ ಕುಡಿತದ ಹಂಬಲ ಹಿಂಗುವುದು ಅದರ ಕೊನೆಯ ಹನಿಯಲ್ಲಿ. ಇದರಂತೆಯೇ ಕವಿತೆ, ಕವಿತೆಯಂತೆಯೇ ಕಾಮ, ಕಾಮದಂತೆಯೇ ಧ್ಯಾನ. ಯಾವುದೋ ಒಂದು ಮಹಾ ಘಟಿಸುವಿಕೆಯ ನಿರೀಕ್ಷೆಯ ಕೊನೆಯ ಹಂತ ಅದರ ಕೊನೆಯ ಹನಿ ಅಥವಾ ಆ ಹನಿಗಳನ್ನು ದಾಖಲಿಸಿಕೊಂಡ ಒಂದು ಬರಹ, ಗರ್ಭ ಅಥವಾ ಶರೆಯ ಗ್ಲಾಸು ಯಾವುದೂ ಆಗಬಹುದು.
‘ಕೊನೆ’ ಎನ್ನುವ ಪದದ ಮೋಹಕ್ಕೆ ಬಿದ್ದು ಪ್ರಕಟಗೊಂಡ ಸಾಹಿತ್ಯವನ್ನು ನಾನು ಗಮನಿಸಿದ್ದೇನೆ. ಸಾಕ್ರಟಿಸ್‍ನ ‘ಕೊನೆಯ ದಿನಗಳು’, ‘ದ ಲಾಸ್ಟ್ ಲಕ್ಚರ್’, ‘ಕಾಫರ್‍ನ ಕೊನೆಯ ಪತ್ರಗಳು’, ಅಬ್ಬಾಸರ ‘ಕೊನೆಯ ಪುಟ’, ಗಾಂಧಿಯ ‘ಅಂತಿಮ ದಿನಗಳು’, ಮಾಂಟೋನ ‘ಕೊನೆಯ ಪತ್ರಗಳು’ ಹೀಗೆ ಸಾಲು ಸಾಲಾಗಿ ನಿಲ್ಲುವ ಈ ಪುಸ್ತಕಗಳು ಜೀವನ ದರ್ಶನದ ಮಹಾ ಬೆಳಕನ್ನು ತಮ್ಮೊಳಗೇ ಬಚ್ಚಿಟ್ಟುಕೊಂಡಿವೆ. ಸೃಜನಶೀಲತೆಯ ವಿಚಿತ್ರವೇ ಅದು. ಅಂದಹಾಗೆ, ಯಾವುದೇ ಸೃಜನ ಕ್ರಿಯೆಯ ಸುಖವೇ ಇದು. ನೀವು ಇಲ್ಲಿ ಯಾವಾಗಲೂ ಕಾಯಬೇಕಾದುದು ‘ಕೊನೆ’ ಎಂಬ ಕೊನೆಯವರೆಗೆ. 
 ಕಾಲಾತೀತವಾಗಿ ನೋಡಿದಾಗಲೂ ಈ ‘ಕೊನೆ’ ಎಂಬ ರೋಚಕತೆ ಕಾಡಿದ ಬಗೆಗೆ ಅನೇಕ ಸಾಕ್ಷಿಗಳು ದೊರೆಯುತ್ತವೆ. ನೆಪೋಲಿಯನ್‍ನ ‘ಕೊನೆಯ ದಿನಗಳ’ ಬಗೆಗೆ ನಿಮಗದೆಷ್ಟು ಗೊತ್ತಿದೆಯೋ ನಾನರಿಯೆ. ಒಂದು ಸಾಂಸ್ಕøತಿಕ ಪರೀಧಿಯೊಳಗೆ ಸಾಮಾಜಿಕ ಕ್ರಾಂತಿಯ ಮಹಾನ್ ಕನಸನ್ನು ಕಂಡ ಬಸವಣ್ಣನ ಕೊನೆಯ ಬಗೆಗೆ ಇದುವರೆಗೆ ನಮಗೇನೂ ದಕ್ಕಲೇ ಇಲ್ಲ. ಆದರೆ ವ್ಯಕ್ತಿಯೊಬ್ಬನ ಆತ್ಮಶಕ್ತಿಯ ಪರಾಕಾಷ್ಠತೆಯ ಪ್ರದರ್ಶನವಾಗುವುದು ಅವನ ‘ಕೊನೆ’ಯಲ್ಲಿಯೇ ಎನ್ನುವ ಹಿನ್ನೆಲೆಯಲ್ಲಿಯೇ ನಮ್ಮ ಶರಣರು ಹೇಳಿದರು, ‘ಶರಣರ ಮಹಿಮೆ ಮರಣದಲ್ಲಿ ನೋಡು.’ ಇಲ್ಲಿ ಮರಣ ಎನ್ನುವುದು ಬದುಕಿನ ಕೊನೆಯ ಪುಟ ಎನ್ನುವ ಸೂಚ್ಯಾರ್ಥ ಇದರಲ್ಲಿದೆ ಎಂದು ನಾನು ವಿವರಿಸಬೇಕಿಲ್ಲ. ಹೀಗಂತ ಕೊನೆ ಎದುರಿಸುವ ದೈಹಿಕ ಶಕ್ತಿಯ ಪರಕಾಷ್ಠತೆಯನ್ನು ನಾನು ಧಿಕ್ಕರಿಸುತ್ತಿಲ್ಲ. ಸಂಸಾರ ಎಂಬ ಸಂಸಾರ ಮಾಡಿದವರಿಗೆ ಅದು ನಿತ್ಯ ಎದುರಾಗುವ ಸತ್ಯ ಎನ್ನುವ ಕಾರಣಕ್ಕೆ ಸ್ವಲ್ಪ ಬದಿಗಿರಿಸಿದ್ದೇನೆ ಅಷ್ಟೆ.
ನನ್ನನ್ನು ಕಾಡಿದ ಭಾರತೀಯ ಲೇಖಕರುಗಳು ಎಷ್ಟು ಜನ? ಎಂದು ಪ್ರಶ್ನಿಸಿಕೊಂಡರೆ ಬರುವ ಉತ್ತರ ಸಾವಿರದ ಲೆಕ್ಕದಲ್ಲೇನೂ ಇಲ್ಲ, ಬೆರಳೆಣಿಕೆಯಷ್ಟೆ. ಈ ಬೆರಳೆಣಿಕೆಯ ಬರಹಗಾರರಲ್ಲಿ ಪೀಠ, ಪ್ರಶಸ್ತಿ, ಫಲಕಗಳ ಪುಣ್ಯದವರು ತೀರ ಕಡಿಮೆ. ಆದರೆ ಸಾದತ್ ಹಸನ್ ಮಾಂಟೋ, ಪ್ರೇಮ ಚಂದ್, ಮಧುರಚನ್ನ, ಮಹಾದೇವಿಯಕ್ಕ ಮತ್ತು ಮಹಾ ಕಶ್ಯಪನಂಥವರು ದಂಡುದಂಡಾಗಿದ್ದಾರೆ.
 ಮಾಂಟೋನ ಕೊನೆಯ ದಿನಗಳು ಅತ್ಯಂತ ದಯನೀಯವಾಗಿದ್ದವು. ಈ ಕೊನೆಯ ದಿನಗಳನ್ನು ಒಂದಿಷ್ಟು ಜೈಲು, ಮತ್ತಷ್ಟು ಹುಚ್ಚಾಸ್ಪತ್ರೆ, ಇನ್ನಷ್ಟು ಬೀದಿ ಬೀದಿಗಳಲ್ಲಿ ಅಲೆದು ಆತ ಕಳೆದ. ಆತನನ್ನು ಎಲ್ಲ ಹಿಂಸೆಯಿಂದ ಮುಕ್ತಗೊಳಿಸಲು ಆತನ ಕೊನೆಗಾಗಿ ಕಾಯ್ದವಳು ಆತನ ಹೆಂಡತಿ. ಮಾಂಟೋ ಇಲ್ಲದ ಅರೆಕ್ಷಣದ ಬದುಕೂ ಅವಳಿಗೆ ಅಸಾಧ್ಯವಾಗಿದ್ದರೂ ಕೂಡ ಆತ ಒಮ್ಮೆ ಮರೆಯಾಗಿ ಬಿಡಲಿ ಎಂದೇ ಅವಳು ಪ್ರಾರ್ಥಿಸುತ್ತಿದ್ದಳು. ಯಾಕೆಂದರೆ ಮಾಂಟೋ ಮನುಷ್ಯರಿಗೆ ಅರ್ಥವಾಗುವ ಸಂದರ್ಭ ಅದಾಗಿರಲಿಲ್ಲ. ಮನುಷ್ಯತ್ವ ಮಾರಣಹೋಮವಾಗಿ ಮಾಂಟೋನಂಥ ಮನುಷ್ಯ ನಿಬ್ಬಾಗಿ ಕಾಣುವ ಭಾರತೀಯ ಸಾಮಾಜಿಕ ಮತ್ತು ರಾಜಕೀಯ ಸಂದರ್ಭವದು.
ಆತ ಇಂಥ ಕೊನೆಯ ದಿನಗಳಲ್ಲೂ ಅಪರೂಪದ ಪತ್ರಗಳನ್ನು ಬರೆದಿದ್ದಾನೆ. ‘ಮಾಂಟೋ ಕಿ ಖತ್‍ನುಮಾಯೆ’ ಎನ್ನುವ ಸೊಗಸಾದ ಪುಸ್ತಕ ಒಂದು ಹಿಂದಿ ಭಾಷೆಯಲ್ಲಿದೆ. ಅದನ್ನೆತ್ತಿಕೊಂಡು ಏನೋ ಮಾಡಲು ಹೊರಟವ ನಾನು. ಮತ್ತೆ ಬದಿಗೆ ಸರಿಸಿದ್ದೇನೆ. ಯಾಕೆಂದರೆ, ಭಾರತ ಇನ್ನೂ ಆತನ ಬರಹದ ನಿರೀಕ್ಷೆಯ ಮನೋವಿಕಾಸವನ್ನು ಸಾಧಿಸಿಲ್ಲ ಎಂದೇ ನನ್ನ ವಾದ. 
 ನಾನೀಗ ಹೇಳಬೇಕಾದುದು ಗಾಂಧಿ ಕುರಿತಾದ ನನ್ನ ಕೃತಿಗಳಾದ ‘ಗಾಂಧಿ ಅಂತಿಮ ದಿನಗಳು’ ಮತ್ತು ‘ಗಾಂಧಿ ಮುಗಿಯದ ಅಧ್ಯಾಯ’ ಕುರಿತು ಬಾದಾಮಿಯ ವಿಶ್ವ ಚೇತನ ವೇದಿಯಿಂದ ನಡೆದ ನೂರನೇ ಕಾರ್ಯಕ್ರಮ ಕುರಿತು. ಅಂದು ಸಪ್ಟೆಂಬರ್ 5, ರವಿವಾರ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವೇಣುಗೋಪಾಲಸ್ವಾಮಿಯ ಉತ್ಸವ, ರಾಜಾಜಿನಗರದ ನನ್ನ ಮನೆಯಿಂದ ಆಟೋ ಹತ್ತಿ ಯಶವಂತಪುರದ ರೈಲು ನಿಲ್ದಾಣಕ್ಕೆ ಹೋಗುವ ಉದ್ದಕ್ಕೂ ನನ್ನನ್ನು ಕಾಡಿದ ಶಬ್ಧಗಳೆರಡೇ: ಒಂದು ಗಾಂಧಿ ಮತ್ತು ಆತನ ಅಂತ್ಯ.
ಅಂತ್ಯ ನಮ್ಮ ಕೈಯಲ್ಲಿದೆಯೇ? ಸೇಡಿನ ದುರ್ವಿಧಿಯನ್ನು ಮೈಗೇರಿಸಿಕೊಂಡವರಿಗೆ ಅವರ ಅಂತ್ಯ ಅವರ ಕೈಯಲ್ಲೇ ಇದೆ. ಆದರೆ ಈ ಬದುಕನ್ನು ಅನುಭವಗಳ ಮಹಾನದಿಯಲ್ಲಿ ತೇಲಿ ಬಿಟ್ಟ ತೆಪ್ಪದಂತೆ ಸ್ವೀಕರಿಸಿದವರಿಗೆ ಅಂತ್ಯದ ಬಗ್ಗೆ ಆದರವಿದೆ, ಕುತೂಹಲವಿದೆ ಮತ್ತು ಅದಕ್ಕೊಂದು ಉದ್ದೇಶವಿದೆ. ಹೀಗೆ ಹೊರಟ್ಟಿದ್ದ ಆಲೋಚನೆಗಳ ರೈಲು ಗಕ್ಕನೆ ನಿಂತಿದ್ದು ದಕ್ಕದ ಒಂದು ಘಟನೆಗೆ. ಕಣ್ ಬಿಡುವಷ್ಟರಲ್ಲಿ ಬದುಕು ಮೃತ್ಯುವಿಗೆ ಎದುರಾಗಿತ್ತು. ಹೌದು, ನಮ್ಮ ಕೊನೆ ಅಥವಾ ಅಂತಿಮದ ದರ್ಶನವೂ ನಮಗಾಗಿತ್ತು. 
 ನಾವು ಹೊರಟ ಆಟೋ ಸುಖಾ ಸುಮ್ಮನೆ ರಸ್ತೆಯ ಮೇಲೆ ನಿಂತಿದ್ದ ಬುಲ್ಡೋಜರ್‍ಗೆ ಡಿಕ್ಕಿ ಹೊಡೆದು ಆಟೋ ಎನ್ನುವುದು ಅಂಗಾಂಗ ಕಳೆದುಕೊಂಡ ಮಕ್ಕಳ ಆಟಿಗೆಯಾಗಿತ್ತು. ನನ್ನ ದೇಹ ನೆತ್ತರದ ಅಭಿಷೇಕ ಮಾಡಿಕೊಳ್ಳುತ್ತಿದ್ದರೆ, ಮಡದಿ ಪದ್ಮಶ್ರೀ ಮುರಿದ ಆಟೋದಲ್ಲಿ ಸಿಲುಕಿಕೊಂಡು ಹೊರಬರಲು ಹರಸಾಹಸ ಪಡುತ್ತಿದ್ದಳು. ಮಗ ಸಿದ್ಧಾರ್ಥ ಅದೆಲ್ಲಿದ್ದನೋ ಆ ದೇವರೇ ಬಲ್ಲ. ಶಿಷ್ಯೋತ್ತಮನೊಬ್ಬ ಹೀಗೆ ಹರಿದು ಹೋಗಿದ್ದ ನಮ್ಮನ್ನು, ನಮ್ಮ ವಸ್ತುಗಳನ್ನು ಒಂದೆಡೆ ಸೇರಿಸುವುದರಲ್ಲಿ 108, ಪೊಲೀಸ್ ಸ್ಟೇಷನ್, ತುರ್ತು ಚಿಕಿತ್ಸೆ, ಮೊಬೈಲ್, ಓಡಲಣಿಯಾಗಿದ್ದ ರೈಲುಗಳ ಗೊಂದಲದ ಸಾಗರದಲ್ಲಿ ದಿಕ್ಕೆಟ್ಟ ದೋಣಿಯಾಗಿದ್ದ. 
 ಯಾವುದೂ ಯಾವುದನ್ನೂ ನಿಲ್ಲಿಸುವುದಿಲ್ಲ, ನಿಲ್ಲಿಸಬಾರದೂ ಕೂಡ. ಇದು ನನ್ನ ಜೀವನ ಶಿಸ್ತು. ಸಪ್ಟೆಂಬರ್ 6, ಯಥಾ ಪ್ರಕಾರ ನಾನು ಬಾದಾಮಿಯ ವೇದಿಕೆಯ ಮೇಲಿದ್ದೆ. ಆದರೆ ಅದಕ್ಕೂ ಮುಂಚಿನ ಮಾನವ ಸಹಜ ಕುತೂಹಲಗಳಿಗೆ ಪ್ರತಿಕ್ರಿಯಿಸಿದ ಪ್ರತಿಕ್ಷಣವೂ ನನಗೆ ಗಾಂಧಿಯ ಅಥವಾ ಪ್ರಪಂಚದ ಇನ್ನಾವುದೇ ವ್ಯಕ್ತಿಯ ಕೊನೆಯ ದಿನಗಳ ನಿಜವಾದ ಅನುಭವವನ್ನು ನೀಡಿವೆ. ಒಂದು ದೇಹದೊಂದಿಗೆ ಒಂದೇ ಅಂತ್ಯ ಘಟಿಸುತ್ತದೆ. ಆದರೆ ಅದು ಕೋಟಿ ಕೋಟಿ ಪರ್ಯಾಯ ಅಂತ್ಯಗಳನ್ನು ವ್ಯಕ್ತಿಯ ಆತ್ಮ ವಿಸ್ತಾರದ ಶಕ್ಕ್ಯಾನುಸಾರ ಪಡೆಯುತ್ತಿರುತ್ತದೆ.
ಅಂದಿನ ಆ ಘಟನೆ ಬುದ್ಧನ ಹಿಂದಿನ ನನ್ನ ಹುಡುಕಾಟವನ್ನು ಇನ್ನೂ ತೀವ್ರಗೊಳಿಸಿದೆ. ಚುಂದ ಎಂಬ ಕಮ್ಮಾರನ ಮನೆಯಲ್ಲಿ ಕೊನೆಯ ಊಟವನ್ನು ಮಾಡಿ ಮಹಾ ಕಶ್ಯಪ ಎಂಬ ತನಗಿಂತಲೂ ಹಿರಿಯನಾದ ಶಿಷ್ಯನೊಬ್ಬನ ತೊಡೆಯ ಮೇಲೆ ತನ್ನ ಕೊನೆಯುಸಿರನ್ನೆಳೆದ ಬುದ್ಧ ನನ್ನನ್ನು ಗಾಂಧಿಯಷ್ಟೆ ಕಾಡಿದ್ದಾನೆ. 
 ಹೀಗೆ ಬುದ್ಧ-ಗಾಂಧಿಗಳ ಮಧ್ಯ ನಿದ್ದೆಗೆಟ್ಟಿದ್ದ ಮನಸ್ಸಿಗೆ ತಲೆಗೆ ಕಟ್ಟಿಕೊಂಡ ಪಟ್ಟಿ, ದೇಹಕ್ಕೆ ಆದ ಘಾಯ ಎಷ್ಟು ಸಹಜವಾಗಿತ್ತೊ ಅಷ್ಟೇ ಕಿರಿಕಿರಿಯಾಗಿತ್ತು. ನನಗೆ ಮಾತೇ ಬೇಡಾಗಿತ್ತು. ಆದರೆ ನನ್ನ ಸುತ್ತಲೂ ಮಾತಿನ ಮಾಹಾ ಚೈತ್ರವೇ ಅರಳಿ ನಿಂತಿತ್ತು. ಬದುಕೆನ್ನುವುದು ಸದಾ ಹೀಗೆಯೇ, ಇದನ್ನು ಅಪರಾಧವೆನ್ನಬಹುದೆ?

No comments:

Post a Comment