Total Pageviews

Wednesday, November 18, 2015

ಮನುಷ್ಯರೆಲ್ಲರು ಜೇಡರ ಹುಳುಗಳೆ

 ಹ್ಯಾಂಪ್ಸ್ಟೆಡ್ನಿಂದ ಒಂದು ಪತ್ರ ಬಂದಿದೆ. ಈಗಲ್ಲ, 19 ಫೆಬ್ರುವರಿ 1818ರಲ್ಲಿ. ಇದು ಬಂದದ್ದು ಗೆಳೆಯ ರೋನಾಲ್ಡ್ಸನಿಗೆ. ಬರೆದವ ಜಾನ್ ಕೀಟ್ಸ್. ಪ್ರಪಂಚದಲ್ಲಿ ಕೀಟಗಳಿಂದ ಕಚ್ಚಿಸಿಕೊಳ್ಳದವರಿರಬಹುದೇನೊ. ಆದರೆ ಕೀಟ್ಸ್ ಗೊತ್ತಿಲ್ಲದವರು ಬಹುತೇಕ ಯಾರೂ ಇಲ್ಲ. ಸಂವಹನ ಸಂಸ್ಕøತಿಯೇ ವಿಕೃತಗೊಂಡ ಮೊಬೈಲ್ ದಿನಗಳಲ್ಲಿ ಇವರಿಬ್ಬರ ಮಧ್ಯದ ಪತ್ರ ಸಂವಾದ ನನಗೊಂದು ರೀತಿಯ ಸಮಾಧಾನ ನೀಡಿದೆ.
ಮೊಬೈಲ್ ಚಾಟ್ ಎಂಬ ಚಟ ಪ್ರೇರಕ ಪ್ರಯೋಗದಲ್ಲಿ ಎಲ್ಲವೂ ಜ್ಞಾನವೆಂದೇ ಗೋಚರಿಸಿ ನನ್ನಂಥವರು ಶತಮಾನಗಳ ಹಿಂದಿನ ಪಳಯುಳಿಕೆ ಎನ್ನುವ ಮೂದಲಿಕೆಗೆ ಒಳಗಾಗುವ ಘಳಿಗೆಯಲ್ಲಿ ಪಳಯುಳಿಕೆಯಾಗಿ ಉಳಿಯುವುದರ ಪುಣ್ಯ ಏನೆಂದು ಕೀಟ್ಸ್ ಪತ್ರ ತೋರಿಸಿದೆ. ನನ್ನ ಪ್ರೀಯ ಗೆಳತಿಯೊಬ್ಬರು ಸದಾ ನನ್ನನ್ನುಯು ಆರ್ ಆ್ಯನ್ ಆಂಟಿಕ್ ಪೀಸ್ಎಂದೇ ಮೂದಲಿಸುತ್ತ ಮುದ್ದಿಸುತ್ತಿದ್ದರು. ನಾನು ಮುಗುಳ್ನಗುತ್ತಿದ್ದೆ ಅಷ್ಟೆ.
ಬದುಕು ಮೊಬೈಲ್ ಆದರೆ ವಿಸ್ತರಿಸಿಕೊಳ್ಳುತ್ತದೆ. ಮೊಬೈಲೇ ಬದುಕಾದರೆ ಆತ್ಮದೊಂದಿಗೆ ಮಾನವ ಸಂಬಂಧ ಕ್ಷೀಣಿಸುತ್ತದೆ. ತೀಟಕ್ಕೆ ತೆಪ್ಪವಾಗುವ ಮೊಬೈಲ್ಗಿಂತ, ಅದರೊಳಗಿನ ಚಾಟ್ಗಿಂತ ನಾನು ನಿಮ್ಮ ಕಣ್ಣಾಲೆಗಳಲ್ಲಿ ಆಲೆ ಮನೆಯ ನಿದ್ರೆ ನೋಡಬೇಕು. ನಿಮ್ಮೆದೆಯ ಬಿಂಬವಾಗಿ ಮುಂದಿರಬೇಕು. ನಮ್ಮ ಪ್ರೀತಿ ಪ್ರೇಮದ ಸಂವಹನಕ್ಕೊಂದು ಘನತೆ ಇರಬೇಕು. ಇದು ನೀವು ಒಪ್ಪುವುದಾದರೆ ಇಲ್ಲಿ ನೋಡಿ ಕೀಟ್ಸ್ನೂ ನಿಮ್ಮೊಂದಿಗಿದ್ದಾನೆ, ನಮ್ಮೊಂದಿಗಿದ್ದಾನೆ.
 
ನನ್ನ ಪ್ರೀತಿಯ ರೋನಾಲ್ಡ್ಸ,
          ಮನುಷ್ಯನನ್ನು ಕುರಿತು ಯೋಚಿಸಿದಾಗಲೆಲ್ಲ ನನಗನ್ನಿಸುತ್ತದೆ ಕೆಲವು ದಿನಗಳವರೆಗೆ ಬರೀ ಕವಿತೆಯನ್ನೊ ಅಥವಾ ಹದಗೊಂಡ ಗದ್ಯವನ್ನೊ ಓದುತ್ತ, ಕುರಿತೇ ಚಿಂತಿಸುತ್ತ, ಧ್ಯಾನಿಸುತ್ತ ಅದರೊಳಗಣ ಸುಖಕ್ಕೆ ಮೈಯ್ಯಾಗುತ್ತ, ಬೆರಗಿಗೆ ಕಣ್ಣಾಗುತ್ತ, ಅದನ್ನೇ ಎದೆಗೇರಿಸಿಕೊಳ್ಳುತ್ತ, ಇಲ್ಲಾ ಅದನ್ನೇ ಕನಸುತ್ತ, ಒಟ್ಟಾರೆ ಇನ್ನೇನು ಅದು ಖಾಲಿಯಾಗಿ ಬತ್ತಿ ಬಣ್ಣ ಕಳೆದುಕೊಂಡಿದೆ ಎನ್ನಿಸುವವರೆಗೂ ಅದರೊಂದಿಗೇಕಿರಬಾರದು? ಆದರೆ, ಇದು ಸಾಧ್ಯವೇ ರೋನಾಲ್ಡ್ಸ? ಇಲ್ಲ, ಆದರೆ ಮನುಷ್ಯ ಮಾಗಿದನೆಂಬ ಮಧ್ಯಘಟ್ಟ ತಲುಪುತ್ತಲೇ, ಅವನೊಳಗಿನ ನಾಟಕೀಯ ಆಧ್ಯಾತ್ಮ ಆತನನ್ನು ಹಲವು ಹತ್ತುಗಳ ಹಿಂದೆ ಅಲೇಮಾರಿಯಾಗಿಸಿಬಿಡುತ್ತದೆ.
ಸಿದ್ಧಾಂತಗಳ ಬರಡು ದಾರಿಯಲ್ಲಿ ಅದೇನು ಸುಖವರಸುತ್ತಾನೊ ಮನುಷ್ಯ? ಹಿತವೆನಿಸುವ ಹೇಡಿತನ! ಸೋಪಾದ ಮೇಲೆ ಸುಖವಿಲ್ಲದ ನಿದ್ರೆ! ನಡುಹಗಲ ತೂಕಡಿಕೆ! ಕಿರಿಕಿರಿ ಎನಿಸುವ ಮುದ್ದು ಮಗುವಿನ ಅಳು! ಯುವಕರನ್ನೆಲ್ಲ ಶಪಿಸಬೇಕೆನ್ನುವ ಒಳಗುದಿ! ಯಾವಾಗಲೂ ಕರ್ಕಶವಾಗಿ ಕೇಳುವ ಸಂಗೀತ! ಇಂಥ ಸಿದ್ಧಾಂತಿಗೆ ಗಾಳಿ ಜೋಗುಳ ಕೂಡ ಸಾವ ಸೋಂಕುವ ಚಳಿಯೇ. ಬಹುತೇಕ ಈಗ ಆತ ಒಳಗೆ ಮರಣಿಸಿದ್ದಾನೆ. ಲೋಕಕ್ಕೆ ತಾನೇನೊ ಇದುವರೆಗೆ ಯಾರು ಮಾಡದ್ದನ್ನು ಮಾಡಿ ಉಪಕರಿಸಿದ್ದೇನೆ ಎನ್ನುವ ಭ್ರಮೆ ಈಗ ಆತನನ್ನು ಜೀವಂತವಾಗಿರುವಾಗಲೇ ನಿರ್ಜೀವ ವಸ್ತುಗಳ ಪಟ್ಟಿಗೆ ಸೇರಿಸಿದೆ. ಈಗ ಸಂತಸ ಹಂಚುವ ಯಾವ ಪುಸ್ತಕದಿಂದಲೂ ಆತನಿಗೆ ವಸಂತ ಸೃಷ್ಟಿಯಾಗದು. ಈಗ ಅವನ ನರಗಳು ಬದುಕಿರುವುದಕ್ಕಾಗಿ ಆತ ಬದುಕಿದ್ದಾನಷ್ಟೆ.
ಗೊತ್ತಿರಲಿ ರೋನಾಲ್ಡ್ಸ, ಬದುಕಿನೊಳಗಿನ ಸಾವ ಕುರಿತು ನಿಜಕ್ಕೂ ತಿಳಿಸದವರು ನಮ್ಮ ಮಧ್ಯ ಇಲ್ಲ ಎಂದುಕೊಳ್ಳಬೇಡ. ಅವರು ವಿಚಾರಿಸಬಲ್ಲವರಾಗಿದ್ದಾರೆ. ಆದರೆ ಸಿದ್ಧಾಂತಗಳ ಸಂತೆಯಲ್ಲಿ ಕಳೆದು ಹೋಗಿದ್ದಾರೆ.
ನನಗೆ ಮನುಷ್ಯರೆಲ್ಲರು ಜೇಡರ ಹುಳಗಳಂತೆ ಕಾಣುತ್ತಾರೆ ರೋನಾಲ್ಡ್ಸ. ತಮ್ಮ ತಮ್ಮ ಭ್ರಮೆಗಳ ಏರಿನಲ್ಲಿ ಇವರೆಲ್ಲರೂ ಸ್ಪರ್ಧೆ ಮಾಡಿದ್ದು ಸುತ್ತಿಕೊಂಡು ಸಾಯುವುದಕ್ಕಾಗಿಯೆ. ಜೇಡ ತಾನು ಕಟ್ಟುವ ಸ್ವಹತ್ಯೆಯ ಮನೆಗೆ ಬಳಸಿಕೊಳ್ಳುವ ಮರದ ಟೊಂಗೆ, ಎಲೆ, ತೊಗಟೆಗಳ ಸಂಖ್ಯೆ ಬಹಳ ಕಡಿಮೆ. ಅದರ ಹೊರಗೆ ಸಾವಿಗೆ ಸಹಕರಿಸಲು ದೊಡ್ಡ ಪ್ರಮಾಣದ ಪರಿಕರಗಳಿಲ್ಲ. ಆದರೆ ತನ್ನೆದೆಯಿಂದ ಎಳೆದುಕೊಳ್ಳುವ, ಬಾಯಿಯಿಂದ ಚಿತ್ತಾರ ಬಿಡಿಸುವ ಮೃತ್ಯು ತಂತುಗಳ ಜಾಲ ದೊಡ್ಡದು. ಮನುಷ್ಯನ ಕಥೆಯೂ ಜೇಡದಂತೆಯೆ. ಮರಣಕ್ಕೆ ಬೇಕಾದುದೆಲ್ಲವೂ ಅವನೊಳಗೇ ಇದೆ. ಇಂಥ ಬಾಳು ಬೇಕೆ ರೋನಾಲ್ಡ್ಸ?
ಆತ್ಮದ ಸುಂದರ ಕಸೂತಿಗೆ ಬೇಕಾದವುಗಳು ಕೆಲವೇ ವಸ್ತುಗಳು. ಕಸೂತಿಯನ್ನು ಬದಲಾಯಿಸಬೇಕೆನ್ನುವುದು ಅದರ ಹೆಣಿಕೆಯ ರೀತಿಯಿಂದ, ವಸ್ತಗಳಿಂದಲ್ಲ. ಇಡಿಯಾಗಿ ನೇಯ್ಗೆಯನ್ನು ವಿರುದ್ಧವಾಗಿ ಮಾಡಬೇಕಿದೆ. ಮೇಲಿನದೆಲ್ಲವೂ ಕೆಳಗೆ, ಕೆಳಗಿರಬೇಕಾದುದೆಲ್ಲವೂ ಮೇಲೆ. ಆತ್ಮದ ಕಣ್ಣುಗಳನ್ನು ಸಂಖ್ಯೆತಗಳಿಂದ ತುಂಬಿಬಿಡಬೇಕು. ಪೂರ್ಣ ಎಚ್ಚರಿಕೆಯ ಒಂದು ಸ್ಪರ್ಶ, ಅಚ್ಚರಿ, ಒಂದಿಷ್ಟು ಖಾಲಿ ಸ್ಥಳ, ವಿಜ್ರಂಬಣೆಗೊಂದಿಷ್ಟು ಸಾವಧಾನ ಇದೆಲ್ಲವೂ ಆತ್ಮದ ಹಸಿವೇ.
ಆದರೆ ಮಣ್ಣಿನ ಮಕ್ಕಳ ದುರಂತವೇ ಬೇರೆ. ಇವರ ಬದುಕೆಲ್ಲವೂ ಬರೀ ತಪ್ಪು ದಾರಿಗಳ ಪಯಣ. ಕ್ಷುಲ್ಲಕ ಆಸಕ್ತಿಗಳು, ಅಸಾಧ್ಯತೆಗಳ ಗೊಣಗುವಿಕೆ, ಊಹೆಗಳ ಲೆಕ್ಕಾಚಾರ ಬರೀ ಇಂಥದೆ.
ನಾನಂದುಕೊಳ್ಳುತ್ತೇನೆ ರೋನಾಲ್ಡ್ಸ, ಲೆಕ್ಕಾಚಾರಗಳಿಲ್ಲದ ದಾರಿಗಳ ಮೇಲೆ ಎರಡು ಮನಸ್ಸುಗಳು ವಿರುದ್ಧ ದಿಕ್ಕಿನಲ್ಲಿಯೇ ಹೋಗಬೇಕು. ಪಯಣದ ಕೊನೆಗೆ ಗೌರವದ ಭೇಟಿ ಸಾಧ್ಯವಾಗುತ್ತದೆ. ಒಬ್ಬ ಅಜ್ಜ ಮತ್ತೊಂದು ಮೊಮ್ಮಗ ಕೂಡಿ ಹೊರಟಿದ್ದರೆ ಹೇಗಿರುತ್ತದೆ? ಅಜ್ಜ ಹೇಳುತ್ತಲೇ ಇರುತ್ತಾನೆ, ಮಗು ಸುಮ್ಮನೆ ಕೇಳುತ್ತ ಎಲ್ಲವನ್ನು ಊಹಿಸಿಕೊಳ್ಳುತ್ತಿರುತ್ತದೆ, ಚಿಂತಿಸುತ್ತಿರುತ್ತದೆ. ಹೀಗಿರಬೇಕು ನಮ್ಮ ಬಾಳು.
ಮನುಷ್ಯ ವಾದಿಸಲು, ವ್ಯಾಖ್ಯಾನಗಳನ್ನು ನೀಡಲು, ಉತ್ತರಿಸಲು ಹಾತೊರೆಯಬಾರದು ರೋನಾಲ್ಡ್ಸ. ಸಂಗಾತಿಗಳಿಗೆ ತಾನುಂಡ ಸತ್ಯವನ್ನು, ಪಡೆದ ಫಲಿತಾಂಶಗಳನ್ನು ಮೆಲ್ಲಗೆ ಕಿವಿಯಲ್ಲಿ ಉಸುರಬೇಕಷ್ಟೆ. ನಮ್ಮ ಆತ್ಮದ ಪ್ರತಿ ಜೀವಕೋಶವೂ ಬದುಕಿನ ಆಳದಲ್ಲಿ ಅವಿತು ಕುಳಿತ ಆಧ್ಯಾತ್ಮದ ಸುಖವನ್ನು ಹೀರಿಕೊಳ್ಳಬೇಕಷ್ಟೆ. ಪ್ರತಿ ಮನುಷ್ಯನು ಮಹಾ ಮಾನವನಾಗಬೇಕು. ಆತ ಮನುಷ್ಯತ್ವವೇ ಆಗಬೇಕು. ಕುರುಚಲು ಗಿಡ-ಗಂಟಿಗಳಂತೆ ಅಥವಾ ಅಲ್ಲೊಂದು ಇಲ್ಲೊಂದು ಬಳಗ ಬಿಟ್ಟು ಬೆಳೆಯುವ ಓಕ್ ಮರಗಳಂತೆ ಬಾಳಬಾರದು ಮನುಷ್ಯ. ಆತ ದಟ್ಟಾರಣ್ಯವಾಗಬೇಕು! ದರ್ಶನವಾಗಬೇಕು.
ಬಹಳ ಹಳೆಯ ಹೋಲಿಕೆಯೊಂದನ್ನು ನೀನು ಗಮನಿಸಿರಬಹುದು ರೋನಾಲ್ಡ್ಸ. ಅದು ನಮ್ಮ ಹಸಿವೆಗೆ ಕುರಿತಾದದ್ದೆ. ಅದರಲ್ಲಿ ಹೂ ಮತ್ತು ದುಂಬಿಯ ಕಥೆ ಇದೆ. ಆದರೆ ಕಥೆ ತಪ್ಪಾಗಿದೆ. ಕೊಡುವುದರಕ್ಕಿಂತಲೂ ಪಡೆಯುವುದರಿಂದ, ಎಲ್ಲವನ್ನೂ ಸ್ವೀಕರಿಸುವುದರಿಂದ ನಾವು ಅದ್ಭುತವಾಗುತ್ತೇವೆ, ಜ್ಞಾನಿಗಳಾಗುತ್ತೇವೆ ಎಂದೆಲ್ಲ ಅದರಲ್ಲಿ ವಾದಿಸಲಾಗಿದೆ. ಹೀಗಾಗಿ ಇಲ್ಲಿ ದುಂಬಿಗೆ ಎಲ್ಲಿಲ್ಲದ ಪ್ರಾಶಸ್ತ್ಯ ಲಭಿಸಿದೆ. ಆದರೆ ನನ್ನ ದೃಷ್ಟಿಯಲ್ಲಿ ಕೊಟ್ಟವನು ಹಾಗೂ ಪಡೆದವನು ಇಬ್ಬರೂ ಸಮಾನರೆ. ಕಥೆಯಲ್ಲಿಯೇ ನೋಡು, ಸುಮ್ಮನೆ ಎಲ್ಲವನ್ನು ಸ್ವೀಕರಿಸುವ ಹೂವಿಗೆ ದುಂಬಿಯಿಂದ ಎಷ್ಟೆಲ್ಲ ರಕ್ಷಣೆ ಸಿಕ್ಕಿದೆ ಅಲ್ಲವೆ? ಪರಾಗದ ಸಂಭ್ರಮ ದಕ್ಕಿದೆ ಅದಕ್ಕೆ. ಕಾರಣಕ್ಕಾಗಿಯೆ, ದುಂಬಿಯ ಕಾರಣಕ್ಕಾಗಿಯೇ ಅದರ ಪ್ರತಿ ವಸಂತವೂ ಅದ್ಭುತವೆ.
ಪ್ರಪಂಚದಲ್ಲಿ ಅದ್ಭುತವಾಗಿರುವುದು ಹೆಣ್ಣೋ ಅಥವಾ ಗಂಡೋ ಎಂದು ಮೂರ್ಖರು ಪ್ರಶ್ನಿಸುತ್ತಾರೆ. ನನಗೆ ನಗು ಬರುತ್ತದೆ. ಮಕ್ರ್ಯೂರಿಯ ವೇಗಕ್ಕೆ ಅರ್ಥ ಬಂದಿರುವುದು ನಿಧಾನವಾದ ಇನ್ನಾವುದೋ ಪದಾರ್ಥದಿಂದಲೆ. ಕ್ಷಣಾರ್ಧದಲ್ಲಿ ಹಾರಿಹೋಗುವ ಮಕ್ರ್ಯೂರಿಗೆ ಅಸ್ಥಿತ್ವ ದಕ್ಕಿದ್ದೇ ನಿಶ್ಚಲವಾದ ಇನ್ನಾವುದೋ ಘನ ವಸ್ತುವಿನಿಂದ. ಅಂತೆಯೇ ಹೇಳುತ್ತೇನೆ ದುಂಬಿಯಂತೆ ಜೇನು ಸಂಗ್ರಹಿಸಲು ಅವಸರ ಬೇಡ ರೋನಾಲ್ಡ್ಸ. ಜ್ಞಾನಕ್ಕಾಗಿ ಹಪಹಪಿಸುತ್ತ ಅತೃಪ್ತ ಆತ್ಮವನ್ನು ಹೊತ್ತುಕೊಂಡು ದುಂಬಿಯಂತೆ ಹಾರಾಡುವ ಅವಶ್ಯಕತೆ ಇಲ್ಲ ಬದುಕಿನಲ್ಲಿ. ಹೂವಿನಂತೆ ಇದ್ದಲ್ಲಿಯೇ ನಮ್ಮೆದೆಯ ಪಕಳೆಗಳನ್ನು ತೆರೆದುಕೊಳ್ಳೋಣ, ಇದ್ದಲ್ಲಿಯೇ ಇದ್ದು ಸ್ವೀಕರಿಸಲು ಹಸಿಯೋಣ, ಬೆಳಕಿಗೆ ಹಾತೊರೆಯುತ್ತಲೇ ಬಾಯ್ತೆರೆಯುವ ಮೊಗ್ಗುಗಳಂತೆ ಕಾಯೋಣ, ಪ್ರತಿ ಚಿಟ್ಟೆಯ, ಸೂಕ್ಷ್ಮಾತೀಸೂಕ್ಷ್ಮ ಜೀವಿಗಳ ಮುದ್ದು ಕಾಲುಗಳಿಗೆ ಕೆನ್ನೆ ಹಾಸೋಣ. ಅವುಗಳ ಭೇಟಿಯೇ ಒಂದು ಮಹಾ ಘಟಿಸುವಿಕೆ. ಈಗ ನಮಗೆ ಮಣ್ಣಿನೊಳಗಿನ ಮಾಧುರ್ಯ ದಕ್ಕುತ್ತದೆ. ನೀರಿನೊಳಗಿನ ಪನ್ನೀರು ಸಿಗುತ್ತದೆ.
ಸೋಂಬೇರಿ ಮನಸ್ಸಿನ ಮೇಲೆ ಮುಂಜಾವು ತನ್ನ ಸೌಂದರ್ಯದ ಮೋಡಿ ಮಾಡುತ್ತಲೇ ನಾನು ಆಲೋಚನೆಗಳಿಗಿಳಿದೆ ರೋನಾಲ್ಡ್ಸ. ನಾನು ಯಾವುದೇ ಪುಸ್ತಕಗಳನ್ನಿಟ್ಟುಕೊಂಡು ಸಾಲುಗಳನ್ನು ಬರೆಯಲಿಲ್ಲ. ಆದರೆ ಮುಂಜಾವು ಹೇಳುತ್ತಿದೆ ನನ್ನ ಕ್ರಮ ಸರಿಯಾಗಿದೆ ಎಂದು. ಮುಂಜಾವಿನ ನನ್ನ ಆಲೋಚನೆಯೇ ಮುಂಜಾವು, ಬರೀ ಮುಂಜಾವು. ಉಲಿಯುವ ಹಕ್ಕಿಗಳ ಹಾಡುಗಳೂ ನನ್ನ ವಾದವನ್ನೇ ಸಮರ್ಥಿಸುತ್ತಿವೆ.
ನಿನ್ನ ಕೆನ್ನೆಗಳಿಗೆ ಚಳಿಗಾಲದ ಛಳಿ ಕಚುಗುಳಿ ಇಟ್ಟಿದೆಯೊ
 ನಿನ್ನ ಕಣ್ಣಲ್ಲಿ ಮಂಜು ಸುರಿಯುವ ಮೋಡ ತೇಲಾಡುತ್ತಿದೆಯೊ
 ಬೆಟ್ಟಗಳ ಅಂಚುಗಳು ನಕ್ಷತ್ರಗಳಂತೆ ನಿನ್ನ ನಿದ್ರೆ ಕೆದಡಿವೆಯೊ
 ಸರಿ, ಹಾಗಿದ್ದರೆ ವಸಂತ ಬರುತ್ತಿದ್ದಾನೆ ತನ್ನ ರಾಶಿಗೆ ನಿನ್ನೆದೆಯ ಕಣಕ್ಕೆ
 ಕತ್ತಲೆಯನುಂಡು ಪುಸ್ತಕದಲಿ ಬೆಳಕ ಹುಡುಕುವ ಬಂಧುವೆ
 ನೀನು ವಸಂತ ಮೂರು ಗಾವುದ ದೂರ, ದೂರ, ದೂರ

 ಓ ಹುಚ್ಚನೆ, ಜ್ಞಾನದ ಹಂಬಲ ಬಿಡು, ನನ್ನ ನೋಡು

 ನಾನೊಂದು ಶೂನ್ಯ ಆದರೂ ನನ್ನ ಹಾಡುಗಳಲ್ಲಿ ಹಳ್ಳಿ ಧೂಳಿನ ಹಿತವಿದೆ
          ಹುಚ್ಚನೆ, ಜ್ಞಾನದ ಹಂಬಲ ಬಿಡು, ನನ್ನ ನೋಡು
 ನಾನೊಂದು ಶೂನ್ಯ ಆದರೂ ಸಂಜೆಗೆ ಇಂಬಾಗುತ್ತದೆ ನನ್ನ ಮನಸ್ಸು
 ಸೋಮಾರಿ ಎಂದು ಖಿನ್ನರಾದವರೆ, ಮೃತ್ಯವಲ್ಲ ಸೋಮಾರಿತನ
 ಮಲಗಿದವರೆಲ್ಲರಿಗೂ ಗೊತ್ತು ತಾನು ಎಚ್ಚರವಾಗಿದ್ದೇನೆಂದು.”
ರೋನಾಲ್ಡ್ಸ ನಾನು ಮುಂಜಾವಿನ ಕಲ್ಪನೆಯಲ್ಲಿ ಎಷ್ಟೊಂದು ಮುಳುಗಿ ಹೋಗಿದ್ದೇನಲ್ಲ! ನಾನು ಆತ್ಮವಂಚನೆ ಮಾಡಿಕೊಳ್ಳಲಾರೆ. ಬದುಕಿನಲ್ಲಿ ಜಡ-ಜಂಗಮಗಳೆರಡರ ಕೈಯನ್ನು ಬಿಡಲಾರೆ, ನನ್ನ ವಿಧೇಯ ದುಬಿಯೂ ಬೇಕು ಅದರ ಹೂವಿನೊಂದಿಗೆ, ನಾನು ಸರಿಯೋ, ತಪ್ಪೋ. ಒಟ್ಟಾರೆ ನಿನ್ನ ಹೆಗಲ ಹೊರೆಯಾದ ಸಮಯವನ್ನೊಂದಿಷ್ಟು ನಾನು ಕದ್ದಿದ್ದೇನೆ, ನನ್ನನ್ನು ಕ್ಷಮಿಸಲಾರೆಯಾ ಗೆಳೆಯಾ?
                                                                                 ನಿನ್ನ ಪ್ರೀತಿಯ
                                                                                 ಜಾನ್ ಕೀಟ್ಸ್

19/02/1818
ಹ್ಯಾಂಪ್ಸ್ಟೆಡ್


No comments:

Post a Comment