Total Pageviews

Wednesday, October 21, 2015

ಮನುಷ್ಯನೆಂಬ ಅಗ್ನಿಕುಂಡ



ಅಗಸ್ಟ್ 27 ರಂದು ನಾನು ಹುನಗುಂದದಲ್ಲಿದ್ದೆ. ರಾತ್ರಿ ಬೆಂಗಳೂರಿನಿಂದ ಹೊರಟಾಗ ನನ್ನ ಕಾಡಿದ ಹುನಗುಂದಕ್ಕೂ, ಬೆಳಗಾದರೆ ಕಂಡದ್ದಕ್ಕೂ ಎಷ್ಟೊಂದು ವ್ಯತ್ಯಾಸವಿತ್ತು. 
 ಒಂದು ಸಮಯ ಈ ಇಡೀ ಊರು ಬೋಳುಬೋಳು. ಒಂದೇ ಒಂದು ಮರ ಕಾಣುತ್ತಿರಲಿಲ್ಲ. ಬಿಸಿಲ ಸುರಿಯುವ ಊರಿನಲ್ಲಿ ಪ್ರತಿ ಮನುಷ್ಯನೂ ನಡೆದಾಡುವ ಅಗ್ನಿಕುಂಡದಂತೆಯೇ ಕಾಣುತ್ತಿದ್ದ. ಬರಗಾಲದ ತೀವ್ರತೆಯನ್ನು ಚಿತ್ರಿಸುವ ಪ್ರೊ. ಮಲ್ಲಿಕಾರ್ಜುನ ಹಿರೇಮಠರ ‘ಅಮೀನಪುರದ ಸಂತೆ’ ಇಲ್ಲಿಯೇ ರಚನೆಯಾದದ್ದು. ಗೆಳೆಯ ವೆಂಕಟಗಿರಿಯೊಂದಿಗೆ ಹತ್ತು ವರ್ಷಗಳ ಹಿಂದೆ ಒಂದು ರಾತ್ರಿ ಇಲ್ಲಿ ಬಂದು, ಇಡೀ ರಾತ್ರಿ ಬಸ್ಟ್ಯಾಂಡಲ್ಲಿ ಕುಳಿತು. ಚರಂಡಿವಾಸನೆ ಕುಡಿಯುತ್ತ, ಸೊಳ್ಳೆ ಕಚ್ಚಿಸಿಕೊಳ್ಳುತ್ತ ಒದ್ದಾಡಿ ಪರಿ ನೆನಪಿದೆ ನನಗೆ. ಆದರೆ ಈ ಸಾರಿಯ ಅನುಭವವೇ ಬೇರೆ.
  27 ರಂದು ಹುನಗುಂದ ಬಂಗ್ಲೋ ಮುಂದಿಳಿದಾಗ ಬೆಳಗಿನ 6. ಗಂಟೆ. ಸ್ವಚ್ಚ ಗಾಳಿ, ನಳನಳಿಸುವ ಬೇವಿನ ಗಿಡಗಳು. 1865ರಲ್ಲಿ  ಕಟ್ಟಲಾದ ಬ್ರಿಟಿಷ್ ಬಂಗ್ಲೋ, ಅದರ ವಿನ್ಯಾಸ, ಊರ ಮಧ್ಯದಿಂದ ಹಾಯ್ದುಕೊಂಡು ಹೋಗುವ ವಿಶಾಲ ಹೈವೇ, ಊರೊಳಗಿನ ದೊಡ್ಡ ದೊಡ್ಡ ಕ್ರಿಡಾಂಗಣಗಳು. ಅಂದು ಒಂದೇ ಊರಲ್ಲಿ ಎರಡು ಸಮಾರಂಭಗಳು. ಒಂದೆಡೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನನ್ನದಾದರೆ, ಇನ್ನೊಂದೆಡೆ ಖಾಸಗಿ ಸಂಸ್ಥೆಯಲ್ಲಿ ಸ್ನೇಹಿತೆ ತಮಿಳು ಸೆಲ್ವಿಯವರದು.
 ನನ್ನೊಂದಿಗೆ ವೇದಿಕೆ ಮೇಲಿದ್ದವರು ಅಲ್ಲಿಯ ಶಾಸಕ ವಿಜಯ ಕಾಶಪ್ಪನವರ, ವಿದ್ಯಾರ್ಥಿ ಮಿತ್ರ ಪ್ರೊ. ಶರಣು ಪಾಟೀಲ, ಕಾಲೇಜಿನ ಪ್ರಾಂಶುಪಾಲರು, ಊರಿನ ಪ್ರಮುಖರು ಮತ್ತು ಕಾಲೇಜು ಅಭಿವೃದ್ಧಿ ಕಮೀಟಿಯ ಸದಸ್ಯರು. ನಾನು ವರ್ತಮಾನದ ಮಾಹಿತಿ ಆಧಾರಿತ ಶಿಕ್ಷಣ ಹಾಗೂ ಭೂತದ ಜ್ಞಾನಾಧಾರಿತ ಶಿಕ್ಷಣ ಕುರಿತು ಒಂದು ಗಂಟೆ ಮಾತಾಡಿ, ಭಾರ ಇಳಿಸಿ ನಿರಾಳನಾಗಿ ಬಂಗ್ಲೋಕ್ಕೆ ಬಂದಾಗ ಲೇಖಕ ಮಿತ್ರ ಎಸ್ಕೆ ಕೊನೆಸಾಗರ ನನಗಾಗಿ ಕಾಯುತ್ತಿದ್ದರು. ಅವರ ಕೈಯಲ್ಲಿ ನನ್ನ ಪ್ರಕಟಿತ ಲೇಖನದ ಒಂದು ಪುಸ್ತಕವಿತ್ತು. ಅದ್ಯಾವಾಗ ಅವರಿಗೆ ಲೇಖನ ಕಳುಹಿಸಿದ್ದೇನೋ ಏನೊಂದೂ ನೆನಪಿರಲಿಲ್ಲ.
  ಸಾಯಂಕಾಲವಾಗುತ್ತಲೇ ಹಿರೇಬಾಗೇವಾಡಿಯ ಗುದ್ಲಿ ಕಾಯಕಯೋಗಿ ಹಾದಿಮನಿ ಬಸವಪ್ಪ ಶರಣರ ಸಮಾಧಿಯ ಸುತ್ತ ತಿರುಗಾಡಿ, ಮಧ್ಯಾಹ್ನ ನಂದವಾಡಗಿ ಅಲ್ಲಿ ಇಲ್ಲಿ ಎಂದಲೆದಾಡಿದ್ದ ದಣಿವಾರಿಸಿಕೊಂಡು ಆತ್ಮದ ತೃಷೆ ಹಿಂಗಿಸಿಕೊಳ್ಳುತ್ತಿದ್ದೆ. ಕರದಂಟಿನ ನಾಡಿನಲ್ಲಿ ನಾಲಿಗೆ ಒದ್ದೆಯಾಗಿ ಮನದ ಹಕ್ಕಿ ಹಳೆಯ ನೆನಪುಗಳ ಗುಟುಕರಿಸುತ್ತಿತ್ತು. ಮನದ ಮೂಲೆಯಲೆಲ್ಲೋ ನನ್ನ ಕವಿತೆಯ ಸಾಲುಗಳು –
 ಗೊಲ್ಲೆರಾಯ ಗುಲ್ಲೆಬ್ಬಿಸಬೇಡೊ
ನನ್ನ ಹೊಕ್ಕುಳದ ಗಲ್ಲಿ ಗಲ್ಲಿಗಳಲ್ಲಿ


No comments:

Post a Comment