Total Pageviews

Thursday, October 15, 2015

ಬಾಯಿ ಇಲ್ಲದ ಸಂಕಟವಿದು!!!



ನೀರವ ರಾತ್ರಿಗಳ ಆಳ ಕತ್ತಲೆಯಲ್ಲಿ
ನನ್ನ ಬದುಕ ಕನಸುಗಳ ಬಿಚ್ಚಿಡುವೆ ನಿನಗೆ
ನಿನ್ನ ಅಂಗೈಯಲ್ಲೇ ನಡುಗುವ ನನ್ನಾತ್ಮಕ್ಕೆ
ನಿನ್ನ ಹೆಗಲ ಹೊರೆಯಾದ ನನ್ನ ಶಿಲುಬೆಗೆ
ನೀನೊಬ್ಬನೇ ದಿಕ್ಕು ಕೊನೆಗೆ

ಬಾಳ ಸಾಧನೆಗಳೆಲ್ಲ ಒಂಟಿಯೆ
ನಡುಗುವ ಕಡು ಶೀತ-ಸಾವುಗಳ ಮಧ್ಯ, ನಡೆದವರ ಹಾಡದು
ಆತ್ಮದಗ್ನಿಯ ಎಳೆತಕ್ಕೆ ಸೆಳೆತಕ್ಕೆ ಚಾಚಿದ ಕೆನ್ನಾಲೆಗಳು
ಕಂಡವರಿಗೆ ಖುಷಿ ಕೊಟ್ಟು ನನ್ನನ್ನು ಕಲ್ಪನಾ ಲೋಕದ
ಕಡು ಸುಂದರಿಯಾಗಿಸುವುದು ಒಂದು ದುರಂತ!

ಪರಮ ರಹಸ್ಯ ಒಂದನ್ನು ಬಿಚ್ಚಿಡುವೆ ನೋಡು
ಹಾಡಾಗಿಸುತ್ತೇನೆ ಕೇಳು
ನೀನಿಚ್ಚಿಸಿದರೆ ಮಾತ್ರ ನನ್ನ ಸಮಾಧಾನಿಸಬಲ್ಲೆ
ನಿನ್ನಾಳದ ಮೌನ ಲೋಕದ ಜೋಗುಳವ ಹಾಡಿ ಅರಸಿಯಾಗಿಸಬಲ್ಲೆ
ದಟ್ಟ ಪ್ರೀತಿಯ ಕಾಡು ಕಾಡಾಗಿ ಕಾಡಿನಲಿ ಹೂವಾಗಿ ಚೆಲ್ಲಬಲ್ಲೆ
ಸತ್ಯವನ್ನು ಕುಡಿದ ನಾನು ಕನಸುಗಳಲಿ ಕೊನೆಯುಸಿರೆಳುತ್ತೇನೆ
ನಿನ್ನ ವಸಂತದ ಶುದ್ಧ, ಶಾಂತ ಸುಗಂಧದ ಹುಡಿ ನಾನು
ನನಗೆ ಗೊತ್ತು, ನಿನ್ನೆದೆಯ ಕಾರಂಜಿ ಚಿಮ್ಮಿದರೆ ಮಾತ್ರ
ತೃಷೆ ಹಿಂಗಿದ ಹೂ-ಬಳ್ಳಿಯಾಗಬಲ್ಲೆ ನಾನು

ಮರುಮಾತನಾಡದವನೆ, ನಿನ್ನ ಮೌನದ ಸಮಾಧಿಯ ಮುಂದೆ
ನೀರಾದ ನನ್ನ ಪ್ರೀತಿಯನ್ನೊಮ್ಮೆ ಕಲ್ಪಿಸಿಕೊಳ್ಳಬಲ್ಲೆಯೊ?
ಬದುಕು, ಕನಸುಗಳನ್ನು ಮೀರಿ ಹಬ್ಬಿದ ಅದರ ಅಗಾಧವನ್ನು ತಬ್ಬಬಲ್ಲೆಯೊ?
ಎಲ್ಲೆಡೆ ಹಬ್ಬಿಯೂ ಮತ್ತೆ ನಿನ್ನಡಿಯ ಭೂಮಿಯಾದ ಅದರ ನಡೆ ಬಲ್ಲೆಯೊ?

ನೆರಳುಗಳ ನಡಿಗೆ ಹಿಡಿಯಲಾಗದೊ ಒಡೆಯ
ಬಾಯಿ ಇಲ್ಲದ ಸಂಕಟವದು, ಒಳಗುದಿಯ ಗುದುಮುರಿಗೆ
ಮೌನದಲ್ಲಿ ಮಾತ್ರ ನನ್ನಾತ್ಮ ನಿನ್ನ ಸಾಮಿಪ್ಯದಲ್ಲಿ
ನಾನೊಂದು ಬರೀ ಬತ್ತಲೆ ಕನ್ನಡಿ ನಿನ್ನ ಸನ್ನಿಧಿಯಲ್ಲಿ

ನನ್ನ ಪ್ರೀತಿಯನ್ನೊಮ್ಮೆ ಕಲ್ಪಿಸಿಕೊ
ಅಸಾಧ್ಯದ ಬದುಕಿಗೆ ಹಾತೊರೆಯುವ ಈ ಪ್ರೀತಿಯನ್ನೊಮ್ಮೆ ತಬ್ಬಿಕೊ
ಇದು ಭಾರ ಮತ್ತು ಬತ್ತಲಾರದ ಮರೀಚಿಕೆ ಅದು ನನಗೆ ಗೊತ್ತು
ಆದರೆ ನಿನ್ನ ಮಾಂಸದೊಳಗೇ ಅದಕ್ಕೊಂದು ಸದ್ಗತಿ ಇತ್ತು
ಹಾರಿದ ಆತ್ಮಗಾನದ ಹಕ್ಕಿ ನಿನ್ನೆದೆಯ ಸಾಗರದಲ್ಲಿ ಮಿಂದು
ಒದ್ದೆಯಾದ ರೆಕ್ಕೆಯೊಂದಿಗೆ ಸೂರ್ಯನಿಗೆದುರಾದರೆ
ಹನಿ ಹನಿಯ ಹೊಟ್ಟೆಯಲ್ಲೂ ಹುಡಿಯಂತೆ ಕಾಮನಬಿಲ್ಲು
ಗೊತ್ತು, ನನಗಾಗಿ ನಿನ್ನೆದೆಯೂ ಹಸಿಯಾಗಿದೆ ಸ್ವಲ್ಪ ನಿಲ್ಲು

ಕಲ್ಪಿಸಿಕೊ, ತಬ್ಬಿಕೊ ತಬ್ಬಲಾಗದ್ದನ್ನು
ಬೆಳಕನ್ನು, ಭ್ರಮೆಯನ್ನು, ದೇವರನ್ನು, ಸೂರ್ಯನನ್ನು
ಗಾಳಿಯನ್ನು, ನನ್ನೊಳಗಿನ ಗವಿಯನ್ನು, ನನ್ನೆದೆಯ ಸುಧೆಯನ್ನು
ಬಾಚಿಕೊ ಬದುಕೆಲ್ಲ, ಯಾಕೆಂದರೆ ಅದು ಬದುಕು

ನನ್ನ ಕಣ್ಣೀರುಗಳ ಕ್ಷಮಿಸು, ರಮಿಸು
ನನ್ನಾನಂದದ ಆತಂಕಕೆ ಅಭಯ ನೀಡು, ಶುಭ ಹಾಡು
ಕಣ್ಣೀರಲಿ ಕಳೆದ ನಗೆಯನು ನಿರೋಗಿಯಾಗಿಸು
ಸೂರ್ಯನನು ಮುಳುಗಿಸುವ ನನ್ನ ಗೆಂದುಟಿಗಳಲಿ ಬದುಕ ಅರಳಿಸು

ನಿನಗಷ್ಟೇ ಗೊತ್ತು ನನ್ನೊಡೆಯಾ
ಈ ಹೂ ರಾತ್ರಿಯನೂ ಬದಿಗಿರಿಸಿ ಸಾಗುವ ನಮ್ಮಿಬ್ಬರ ಪಯಣದ ದಾರಿ
ನಿರ್ಭಯದ ನಾಡಿನಲ್ಲಿ ನಾಡಿ ಮೀಟಿ, ನೀ ನನ್ನ ಕೇಳುವಿ
ನನ್ನೆದೆಗೆ ಹೇಳುವಿ, ನನ್ನಾಲೆ ಅಗಲಿಸುವಿ, ವಾಲೆ ಕವಿಗಳ ಕಚ್ಚಿ ಜೋಲಾಡುವಿ
ಬದುಕ ಬಯಕೆ ಹಿಂಗಿಸುವಿ

ನೆಲೆಯಿಲ್ಲದ ನಿಶೆಯಲ್ಲಿ ನಾವು ನಡೆಯುತ್ತಲೇ ಇರೋಣ
ಭಯ ಬೇಡ, ನನ್ನೊಡಲಲ್ಲಿ ನಿನೊಂದು ಪ್ರತಿಧ್ವನಿಗೊಳ್ಳದ ಹಾಡು
ನಿನ್ನಂಥ ನವಿರಾದ ಹೂವಿಗೆ ನಾನೊಂದು ನೆರಳು ಹಾಸುವ ಕಾಡು
ಬಾ, ಮೈನೆರೆಯುತ್ತೇನೆ ನಿನಗಾಗಿಯೇ ತೆರೆದುಕೊಂಡು ಹೂ ಜಾಡು


ಮೂಲ: ಡೆಲ್ಮಿರಾ ಅಗಸ್ಟಿನ್
ಕನ್ನಡಕ್ಕೆ: ರಾಗಂ

No comments:

Post a Comment