Total Pageviews

Wednesday, October 7, 2015

ಮರೆತ ರಾಗ!!!

ಗೋಧೂಳಿಯ ಸಮಯ
ಎಣ್ಣೆ ಎಷ್ಟುಳಿದಿದೆ ಎಂದು
ತಳ ಇಣುಕುತ್ತಾಳೆ ತಳವಿಲ್ಲದವಳು
ತೂತು ತಳದಲ್ಲಿ!!!
ತೆವಲುಗಳೆಲ್ಲ ಸೋರಿ ಸೋರಿ
ದೀಪ ತಣ್ಣಗಾಗುವ ತಲ್ಲಣ!!!

ಓಡಿ ಹೋಗುತ್ತಾಳೆ
ಕಾಡಿ ಎದೆಯ ಕಳವಳ
ಭಯದ ಬಿಕ್ಕಳಿಕೆ ಬಂದು
ಬಿಂಬವಾಗುತ್ತಾಳೆ ಕನ್ನಡಿಯೊಳು
ಮೈ ಇಲ್ಲದ ಕೈ ಹೊರ ಬಂದು
ಮುಪ್ಪಿಗೆ ಬಣ್ಣ ಸವರಿ
ಬಿಳುಚು ರೆಪ್ಪೆಗೆ ಕಪ್ಪ ಸವರಿ
ಮತ್ತೆ ಬರಲಾಗದು
ಒಪ್ಪಿಕೊ ಸತ್ಯವನ್ನು
ಎಂದು ಸಂತೈಸಿ ಸರಿದುಬಿಡುತ್ತದೆ
ಅಭಯದ, ಕ್ಷಣದ, ಮೈ ಹಿಂದಿನ
ಭಯಗ್ರಸ್ಥ ಬೆಳಕಿನಲ್ಲಿ
ಬೆತ್ತಲಾಗಿಸುತ್ತದೆ ಆಕೆಯನ್ನು

ಹಿಡಿ ಮಲ್ಲಿಗೆಗೆ ಕೈ ಹಾಕುತ್ತಾಳೆ
ಸುಡಬೇಡ ಬಿಡೆ, ಇಡು ಇಲ್ಲೆ
ನಿನ್ನ ಕೆಮಿಕಲ್ ಕೇಶ ಕಾರ್ಮೋಡದಲ್ಲಿ
ನನ್ನ ಸುಂಗಧದ ಬೆಳಕ ನಂದಿಸಬೇಡ
ನಿನ್ನ ಸಂದುಗಳೀಗ
ಸಾವೂ ಸುಳಿಯದ ಸಂದಿಗಳು
ಹಂದಿ ಸುಳಿದಾಡದ ಸಂದಿಗಳಲ್ಲಿ
ಬದುಕ ನಂದಿಸಬೇಡ ತಾಯಿ
ಕಾಲ ಕಸವಾಗಿ, ಮಣ್ಣಾಗಿ
ಕಣ್ಣರಳಿಸುವ ನಮ್ಮ ಭಾಗ್ಯ ತಪ್ಪಿಸಬೇಡ

ಕಣ್ಣೀರಾಗುತ್ತಾಳೆ
ಹಗಲ ಉರಿ ಬಿಸಿಲಲ್ಲಿ
ಬಾರದ ಗೊಲ್ಲನಿಗೆ
ಕಲ್ಲ ಸಂದು ಸರಿಸಿಕೊಂಡು
ನಾರಿಯಾಗುತ್ತಾಳೆ
ಕಂದೀಲು ಹಿಡಿದು
ಕೃಷ್ಣನಿಗೆ ಕನಸು ಹಾಸುತ್ತಾಳೆ
ನಿಶ್ಯಕ್ತ ಕಾಲುಗಳು ಕೈ ಮುಗಿಯುತ್ತವೆ
ಜಗನವೆಂಬ ಜಗ ಸುಟ್ಟು, ಕರಳು ಉಮ್ಮಳಿಸಿ
ಹುಟ್ಟಿದ ಹೊಗೆ ಆತ್ಮ ಆವರಿಸಿ
ವಿಲಿವಿಲಿಯಾಗುತ್ತದೆ, ಮುಖವಿಲ್ಲದ
ಮನುಷ್ಯನ ಮುಗುಳ್ನಗೆ
ಪಾವಿತ್ರ್ಯದ ತಟ್ಟೆಯಲ್ಲಿ
ಪಿಂಡದ ಉಂಡೆಯನಿಸುತ್ತದೆ
ಕಣ್ಣಿಗೆ ಕತ್ತಲಾವರಿಸಿ
ಅವಳೀಗ ಕುಸಿದು ಕೋಟಿ ವರ್ಷಗಳಾಗಿವೆ
ಕನಸೆಂಬ ಕಾಂಡವದ ಬೆಂಕಿ ತಾಂಡವವಾಡಿ
ತನ್ನ ಹೆಣ್ಣಾಗಿಸಿದ ಮುರುಳಿ
ಅದೆಲ್ಲೊ ಕಾಡಲ್ಲಿ ಮಲಗಿದಲ್ಲಿಯೇ
ಉದುರಿ ಬಿದ್ದ ಎಲೆಯಾಗಿ
ಇವಳ ಯಾವ ಕೂಗಿಗೂ
ಮಾರುತ್ತರಿಸದ ಉಲಿಯಾಗಿ
ಅವಳ ಎದೆ ಈಗ
ಅರೆಸುಟ್ಟ, ಅರೆಬೆಂದ, ಕಿರಿಕಿರಿ ಜೀವಗಳ
ಹಸ್ತಿನಾಪುರ
ಇದೇ ಹಾದಿಗಳಲ್ಲಿ
ಕಚ್ಚೆ ಸರಿಪಡಿಸುತ್ತ, ಕಣ್ಣಲ್ಲೇ ಕರೆಯುತ್ತ
ಸುಳಿದಾಡುತ್ತಿದ್ದ ಕೃಷ್ಣ
ಈಗ ತಂತಿ ಹರಿದ
ತಂಬೂರಿಯೇ ಮರೆತ ರಾಗ

No comments:

Post a Comment