Total Pageviews

Thursday, September 24, 2015

ಕಣ್ಣೀರಿನ ಮಹಾಕಡಲು



ಬೆಂಗಳೂರಿನ ಹೆಗ್ಗನಹಳ್ಳಿ ಈ ಅಭಿನಂದನಾ ಸಮಾರಂಭ ಒಂದು ತಿಂಗಳು ಮೊದಲೇ ಮುಗಿಯಬೇಕಾದುದು. ಆದರೆ ಬಿ.ಬಿ.ಎಂ.ಪಿ ಎಲೆಕ್ಷನ್ ಕಾರಣ ನಿರಂತರ ಮುಂದೂಡುತ್ತಲೇ ಹೋಯಿತು. ನನಗೆ ಇಡೀ ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆ ‘ಬುದ್ಧ’ ಎಂಬ ಎರಡು ಅಕ್ಷರ. ಸಾಹಿತ್ಯಕ್ಕೆ ನಾನು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ನನಗಿಲ್ಲಿ ‘ಬುದ್ಧ ಶಾಂತಿ ಪ್ರಶಸ್ತಿ’ಯನ್ನು ನೀಡಲಾಗುತ್ತಿತ್ತು. ಇಲ್ಲಿ ಪ್ರಶಸ್ತಿ ಎಂಬ ಪದವನ್ನು ತೆಗೆದುಹಾಕಿಬಿಟ್ಟರೆ ಸಿಗುವುದೇನಿದೆಯೊ(ಬುದ್ಧ) ಅದೆಲ್ಲ ಬೆಳಕೆ.
 ಕಾರ್ಯಕ್ರಮಕ್ಕೆ ಸ್ವಲ್ಪ ಮುಂಚಿತವಾಗಿಯೇ ಹೋದೆ. ಯಾಕೆಂದರೆ ಇದೇ ಸಮಾರಂಭದಲ್ಲಿ ನನ್ನ ‘ಕಾವ್ಯಕ್ಕೆ ಉರುಳು ಭಾಗ-2’ ಬಿಡುಗಡೆಯ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿತ್ತು. ನಾನೇ ಬೇಗ ಬಂದೆ ಎಂದುಕೊಳ್ಳುವುದರಲ್ಲಿ ನನಗಿಂತಲೂ ಬೇಗ ಬಂದು ಕುಳಿತಿದ್ದರು ಹಿರಿಯರಾದ ಶ್ರೀ ಚಂದ್ರಕಾಂತ ಬೆಲ್ಲದ ಹಾಗೂ ಶ್ರೀಮತಿ ಲೀಲಾವತಿ ಆರ್ ಪ್ರಸಾದ್. ನಾವೆಲ್ಲ ಲೋಕಾಭಿರಾಮದ ಮಾತುಗಳನ್ನಾಡುತ್ತ ಹೀಗೆ ಕಾಯುತ್ತ ಕೂಡ್ರಲೇಬೇಕಿತ್ತು. ಯಾಕೆಂದರೆ ಬೆಳ್ಳಿರಥವೇರಿ ಬರುತ್ತಿದ್ದ ವಾಟಾಳರ ಜಲೂಸ್ ಇನ್ನೂ ವೇದಿಕೆಗೆ ಬರಬೇಕಿತ್ತು. ಇಪ್ಪತ್ತು ನಿಮಿಷವಷ್ಟೇ ಮೆರವಣಿಗೆ ಮುಗಿಸಿ ವಾಟಾಳ್ ಸ್ಟೇಜ್ ಹತ್ತಿದರು.
 
ಇದು ವಾಟಾಳ್‍ರೊಂದಿಗಿನ ಮೊದಲ ರೋಮಾನ್ಸ್. ನನ್ನ ಪುಸ್ತಕ ‘ಕಾವ್ಯಕ್ಕೆ ಉರುಳು’ ಅವರ ಮನಸ್ಸನ್ನು ಆವರಿಸಿಕೊಂಡಿತ್ತು. ಬೆಂಗಳೂರು ಪ್ರೆಸ್ ಕ್ಲಬ್‍ನಂಥಲ್ಲಿ ಬಿಡುಗಡೆ ಮಾಡಬೇಕಾದ ಕೃತಿಯನ್ನು ಸಂತೆಯಲ್ಲಿ ಬಿಡುಗಡೆಗೊಳಿಸುತ್ತಿದ್ದಾರಲ್ಲ ಎಂಬ ಬೇಸರ ಅವರಲ್ಲಿತ್ತು. ಕೊನೆಗೂ ವಾಟಾಳ್ ಈ ಇಂಬ್ಯಾಲನ್ಸ್‍ನ್ನು ತಮ್ಮ ಭಾಷಣದಲ್ಲಿ ಕೃತಿಯ ಕುರಿತು ವಿಸ್ತ್ರತವಾಗಿ ಮಾತನಾಡುವುದರ ಮೂಲಕ ಸರಿಪಡಿಸಿಯೇ ಬಿಟ್ಟರು.
     ಅಂದಿನ ಅವರ ಭಾಷಣದ ಸಾರಲೇಖ, ಇಲ್ಲಿ ನಿಮ್ಮೊಂದಿಗೆ –
“ರಾಗಂ ಅವರ ‘ಕಾವ್ಯಕ್ಕೆ ಉರುಳು’ ಕೇವಲ ಒಂದು ಪ್ರದೇಶದ, ಜನಾಂಗದ, ನಿರ್ದಿಷ್ಟ ಕಾಲಘಟ್ಟದ ಪುಸ್ತಕವಲ್ಲ. ಇದು ಪ್ರಪಂಚದ ಪುಸ್ತಕ. ಐಷಾರಾಮಿ ಸೌಕರ್ಯಗಳೊಂದಿಗೆ ಸುಖದ ಜಗತ್ತಿನಲ್ಲಿರುವವರ ಮಧ್ಯದಲ್ಲಿಯೇ ಒಂದು ಸಿದ್ಧಾಂತಕ್ಕಾಗಿ ನೆತ್ತರು ತೆತ್ತವರ ಕತೆ. ಪುಸ್ತಕ ಓದುತ್ತಿದ್ದರೆ ಇತಿಹಾಸದ ಕಟು ಸತ್ಯಗಳು ನಮ್ಮ ನರನಾಡಿಯೊಳಗಿನ ರಕ್ತ ಹೆಪ್ಪುಗಟ್ಟಿಸುತ್ತದೆ. ಇನ್ನೊಂದೆಡೆ ನಾವು ಎಂಥ ಪ್ರಪಂಚದಲ್ಲಿ ಬದುಕುತ್ತಿದ್ದೇವೆ ಎಂದು ಭಯಭೀತರಾಗುವಂತೆ ಮಾಡುತ್ತದೆ. 
 ತಮ್ಮ ಕೊರಳುಗಳನ್ನು ಉರುಳಿಗೆ ಒಡ್ಡಿ ಹೋರಾಡಿದ ಇವರ ಸಂದೇಶಗಳು ನಿಜಕ್ಕೂ ನಮ್ಮನ್ನು ಮನುಷ್ಯರನ್ನಾಗಿಸಿವೆಯೇ? ನಾವು ಎಲ್ಲಿದ್ದೇವೆ ಹಾಗೂ ಎಲ್ಲಿಗೆ ಹೊರಟಿದ್ದೇವೆ? ಎನ್ನುವ ಪ್ರಶ್ನೆಗಳು ಪುಸ್ತಕ ಓದುವಾಗ ಪದೇ ಪದೇ ಎದುರಾಗುತ್ತದೆ. ಒಂದು ಸುಂದರ, ಸಮಾಜಪರ ಪುಸ್ತಕ ಓದುವಾಗ ನಮಗೆ ಶ್ರೀಮಂತಿಕೆ ಏಕೆ ಬೇಕು? ರೀಯಲ್ ಎಸ್ಟೇಟ್ ವೃತ್ತಿ ಏಕೆ ಬೇಕು? ಬರಹಗಾರರೂ ಜಾತಿವಾದಿಗಳಾಗಿ ಆತ್ಮವಿಮರ್ಶೆಯೇ ಸತ್ತು ಹೋದ ಈ ಘಳಿಗೆಯಲ್ಲಿ ನಾವಿನ್ನೂ ನಿರ್ವೀರ್ಯರಾಗಿ ಏಕೆ ಬದುಕಬೇಕು? ಎಂಬ ಪ್ರಶ್ನೆಗಳನ್ನು ‘ಕಾವ್ಯಕ್ಕೆ ಉರುಳು’ ನಮ್ಮಲ್ಲಿ ಹುಟ್ಟು ಹಾಕುತ್ತದೆ.
ಈ ನಾಡು ನಿಜಕ್ಕೂ ಅದ್ಭುತ. ಇದು ಏನೆಲ್ಲ ಕೊಟ್ಟಿದೆ ನಮಗೆ. ನಾವೆಲ್ಲ ಈ ಕೃತಿಯಲ್ಲಿ ಬರುವ ಸಾಲು ಸಾಲು ಸಾಧಕರಷ್ಟು ದೊಡ್ಡ ವ್ಯಕ್ತಿಗಳಾಗದಿದ್ದರೂ ಚಿಂತೆಯಿಲ್ಲ, ಸ್ವಾಭಿಮಾನಿಗಳಾದರೂ ಆಗಿ ಬದುಕಬಾರದೆ? ಮಠಪತಿಯವರ ಈ ಪುಸ್ತಕ ಇಡಿಯಾಗಿ ನನಗೆ ನನ್ನ ಹೋರಾಟದ ದಿನಗಳನ್ನು ಮೆಲುಕು ಹಾಕುವಂತೆ ಮಾಡಿದೆ. ನನ್ನ ಐವತ್ತು ವರ್ಷಗಳ ಹೋರಾಟ, ಸೆರೆವಾಸ, ಚಳುವಳಿಗಳು ಅರ್ಥಪೂರ್ಣವಾಗಿದೆ. ನನ್ನ ದಾರಿ ಸರಿಯಾಗಿದೆ ಎಂಬ ಭರವಸೆ ಮೂಡಿಸಿದೆ. ಮಠಪತಿ ಕನ್ನಡದ ಅತ್ಯಂತ ಸಮರ್ಥ ಮತ್ತು ಶಕ್ತಿಶಾಲಿ ಲೇಖಕ. ಅವರ ‘ಕಾವ್ಯಕ್ಕೆ ಉರುಳು’ ಪ್ರಪಂಚದಲ್ಲೆಡೆಯಲ್ಲ ನಡೆದ ಹೋರಾಟಗಾರರ ಕಣ್ಣೀರಿನ ಮಹಾಕಡಲು.”

No comments:

Post a Comment