Total Pageviews

Thursday, September 10, 2015

ಸಾಲು ಮರದಮ್ಮನ ಸಾಯದ ನೆನಪು



ದಿನಾಂಕ:11.08.2015 ರ ಬೆಂಗಳೂರಿನ ಚಂಪಾ ಸಂವಾದ ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ತರಿಕೇರಿಗೆ ಹೋಗುತ್ತಿದ್ದರೆ ಸಮಯ ರಾತ್ರಿ 9.30. ಅವು ಭೀಮನ ಅಮವಾಸ್ಯೆಯ ಸಮೀಪದ ದಿನಗಳಾದುದರಿಂದ ಕತ್ತಲೆಗೆ ಕೊರತೆ ಏನೂ ಇರಲಿಲ್ಲ. ಆದರೆ ನನ್ನ ಕಾರಿನ ಬೆಳಕಿಗೆ ಅದನ್ನು ಸೀಳಿಕೊಂಡು ಹೋಗುವಷ್ಟು ಪ್ರಖರ ಶಕ್ತಿ ಇಲ್ಲದೇ ಇದ್ದುದರಿಂದ 60ರ ವೇಗದ ಮಿತಿಯೊಳಗೆ ಮೆಹಂದಿ ಹಸನ್‍ನ ಹಾಡು, ನಿಶೆಗೆ ಹಿತವೆನ್ನಿಸುವಷ್ಟೇ ಪ್ರಮಾಣದಲ್ಲಿ ನಶೆಯ ಜೀಕುತ್ತ ತರಿಕೇರೆಗೆ ಬಂದಾಗ ನಸುಕಿನ ನಾಲ್ಕುವರೆ. ಕೆಲವು ವರ್ಷಗಳ ಹಿಂದಿನ ಇದೇ ಭೀಮನ ಅಮವಾಸ್ಯೆಯ ಸುತ್ತಲಿನ ಡಾ.ರಾಜ್ ಅಪಹರಣದ ಪ್ರಕರಣ ಸ್ಮøತಿಪಟಲದಲ್ಲೆಲ್ಲೊ ಸುತ್ತುತ್ತಿತ್ತು.
ಮರುದಿನ ಸರಿಯಾಗಿ ಹತ್ತು ಗಂಟೆಗೆ ತರಿಕೇರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ನಾನು “ಆ ಪೂರ್ವ ಈ ಪಶ್ಚಿಮ: ಒಂದು ಅನುಸಂಧಾನ” ಕುರಿತು ಮಾತನಾಡಲು ನಿಂತುಕೊಳ್ಳಬೇಕಾದುದರಿಂದ ಸಿಕ್ಕ ಮೂರೇ ಮೂರು ಗಂಟೆಯ ನಿದ್ರೆಯಲ್ಲಯೇ ದಣಿವಾರಿಸಕೊಂಡು ಸಭೆಗೆ ಹೋದೆ. 
 ಈ ಕಾಲೇಜೆಂದರೆ ಒಂದು ಹಳೆಯ ಸರ್ಕಾರಿ ಕಟ್ಟಡ ಅಷ್ಟೆ. ನನ್ನ ಹಿಂದಿನ ಆಯುಕ್ತರಾದ ಶ್ರೀ ಬಿ.ಜಿ. ನಂದಕುಮಾರರವರು ಇಲ್ಲಿಯೇ ಅವರ ಬದುಕಿನ ಮೊದಲ ದಿನಗಳನ್ನು ಕಳೆದಿದ್ದು. ಅವರ ಆಡಳಿತಾನುಭವದ ಕೃತಿ “ನಂದಾವಲೋಕನ” ಓದುತ್ತಿದ್ದರೆ ಸಾಲು ಸಾಲು ನೆನಪುಗಳು ಇಲ್ಲಿಂದಲೇ ಪ್ರಾರಂಭವಾಗುತ್ತವೆ. ಆ ಓದಿನ ಹಿನ್ನೆಲೆಯಲ್ಲಿ ಇಡೀ ಕಟ್ಟಡವನ್ನೊಮ್ಮೆ ಸುತ್ತಿ ಬಂದೆ. ಅಧ್ಯಾಪಕ ವೃಂದದ, ಪ್ರಾಂಶುಪಾಲರ, ಕಛೇರಿ ವರ್ಗದ ಪರಿಚಯವಾಯಿತು, ಹೊರಗಡೆ ನನ್ನೊಂದಿಗೇ ಬಂದಿದ್ದ ಮಳೆ ಎಲ್ಲವನ್ನೂ ತಪ್ತವಾಗಿಸುತ್ತಿತ್ತು.
 ಆ ಪೂರ್ವ ಈ ಪಶ್ಚಿಮಗಳ ಸಾಹಿತ್ತಿಕ ಅನುಸಂಧಾನ ಕುರಿತು ಅಂದು ನಾನು ಮಾತನಾಡಿದ್ದು ಸರಿಯಾಗಿ ಒಂದೂವರೆ ಗಂಟೆ. ನನ್ನೊಂದಿಗೆ ವೇದಿಕೆಯ ಮೇಲಿದ್ದವರು ಪ್ರಾಂಶುಪಾಲರಾದ ಶಾಂತಮೂರ್ತಿ, ನಿವೃತ್ತ ಪ್ರಾಂಶುಪಾಲ ಕೆ.ಸಿ.ಕೆಂಚಪ್ಪ, ಗೆಳೆಯ ಹರೀಶ್, ಪತ್ರಕರ್ತ ಅನಂತ ನಾಡಿಗ, ವಿಜಯಕುಮಾರ್, ಪ್ರಾಧ್ಯಾಪಕ ವೃಂದ, ಕಛೇರಿ ಸಿಬ್ಬಂದಿ ಹಾಗೂ ಕನ್ನಡ/ಇಂಗ್ಲೀಷ್ ಐಚ್ಚಿಕ ವಿಭಾಗದ ವಿದ್ಯಾರ್ಥಿಗಳು. 
ಸುಮಾರು ಒಂದು ಗಂಟೆ ಇಪ್ಪತ್ತು ನಿಮಿಷಗಳ ಪೂರ್ವ-ಪಶ್ಚಿಮ ಸಾಹಿತ್ಯ, ಸಂಸ್ಕತಿಗಳೊಂದಿಗೆ  ಮುಖಾಮುಖಿಯಾಗುತ್ತ, ವಿದ್ಯಾರ್ಥಿ-ವಿದ್ಯಾರ್ಥಿನಿಯರ ಕುತೂಹಲದ ಪ್ರಶ್ನೆಗಳಿಗೆ ಪ್ರಪಂಚ ಕೆದಕುತ್ತ ಕಾಲ ಕಳೆದಾಗ ಮಧ್ಯಾಹ್ನ ಮೂರಾಯಿತೇನೊ. ಗೆಳೆಯ ಪ್ರೊ. ಹರೀಶ ಅವರ ಮನೆಯ ಆತಿಥ್ಯ ಸ್ವೀಕರಿಸಿ ಸಾಯಂಕಾಲ ದರ್ಶನ-ಸಂದರ್ಶನ ಅಮೃತೇಶ್ವರ ದೇವಾಲಯಕ್ಕೆ.
 ತಡವಾಗಿತ್ತು. ಅಮೃತೇಶ್ವರ ದೇವಾಲಯ ಮುಚ್ಚಿಕೊಂಡು ಪ್ರಾಂಗಣದ ಸರಸ್ವತಿ ದೇವಾಲಯ ಮಾತ್ರ ನಮಗಾಗಿ ತೆರೆದುಕೊಂಡಿತ್ತು, ಸಿಕ್ಕಷ್ಟೇ ಸರಸ್ವತಿ. ಗದಗನಲ್ಲಿಯ ಸರಸ್ವತಿ ದೇವಾಲಯವನ್ನು ಒಂದುಕ್ಷಣ ಸ್ಮರಣೆಗೆ ತಂದ ಈ ದೇವಾಲಯ ಅಷ್ಟೇ ಪ್ರಖರ ಶಾರದೆಯ ಮೂರ್ತಿಯನ್ನು ಹೊಂದಿದೆ. ಹೊಯ್ಸಳರ ಕಾಲದ ಈ ದೇವಾಲಯವನ್ನು ಎರಡನೇ ವೀರಬಲ್ಲಾಳ ನಿರ್ಮಿಸಿದನೆಂಬ ನಂಬಿಕೆಯಿದೆ.

 ಮರುಮುಂಜಾನೆ ಗೆಳೆಯ ಹಾಗೂ ವಿದ್ಯಾರ್ಥಿಗಳ ಒತ್ತಾಸೆಯ ಮೇರೆಗೆ ಐಚ್ಚಿಕ ಇಂಗ್ಲೀಷ ವಿದ್ಯಾರ್ಥಿಗಳಿಗಾಗಿ ಒಂದು ಪಾಠ ಮುಗಿಸಿ ಹೊರಟದ್ದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನೆಡೆಗೆ .
 ಬಯಲು ಸೀಮೆಯ ಬಿರುಬಿಸಿಲಿನ ಬಾರ್ಡರ್ ಹಳ್ಳಿಯಾದ ಚಡಚಣದಲ್ಲಿ ಇಡೀ ನನ್ನ ಬಾಲ್ಯ ಕಟ್ಟಿಕೊಂಡ ನಾನು ಚಿಕ್ಕವನಿದ್ದಾಗ ಎಸ್.ಪಿ.ಬಾಲ್ಯಸುಬ್ರಮಣ್ಯಂ ಹಾಡಿದ “ತರೀಕೆರೆ ಕೆರೆ ಮೇಲೆ ಮೂರು ಕರಿ ಕುರಿಮರಿ ಮೇಯುತ್ತಿತ್ತು” ಕೇಳುತ್ತ, ಆ ಮೂಲಕವೇ ಈ ಊರನ್ನು ಕಲ್ಪಿಸಿಕೊಳ್ಳುತ್ತಿದ್ದ ನಾನು ಮುಂದೊಂದು ದಿನ ಇಲ್ಲಿ ನಿಂತು ಭಾಷಣ ಮಾಡುತ್ತೇನೆಂದುಕೊಂಡಿರಲಿಲ್ಲ. ಹಾಗಂತ ನಾನೆನು ಚಂದ್ರನ ಮೇಲೆ ಮೊದಲ ಪಾದಾರ್ಪಣೆ ನೀಲ್ ಆರ್ಮಸ್ಟ್ರಾಂಗ್‍ನೂ ಅಲ್ಲ. ಒಂದು ಕ್ಷಣ ನಾ ಕುಳಿತ ಸ್ಥಳದ ಹಿಂದೆ ಹೊರಳಿ ನೋಡಿದರೆ ‘ಈ ಸಭಾಂಗಣದ ಉದ್ಘಾಟನೆ ಶ್ರೀ ಎಸ್.ಆರ್.ಕಂಠಿಯವರಿಂದ’ ಎಂಬ ಫಲಕ ನನ್ನನ್ನೇ ಮೂದಲಿಸುವಂತಿತ್ತು. 
 ಮುಗಿಸುವ ಮುನ್ನ ಇಲ್ಲಿಯ ಸಾಲು ಮರದ ಅಮ್ಮನನ್ನು ಕುರಿತು ಮಾತನಾಡದೇ ಹೋದರೆ ನನ್ನವ್ವನನ್ನು ಮರೆತಷ್ಟೇ ನೋವಾಗುತ್ತದೆ. ಅದೆಷ್ಟು ಸಾಲುಮರಗಳ ಅಮ್ಮಳಾಗಿ ಈಕೆ ಇಲ್ಲಿ ಒಂದು ಕಾಲಕ್ಕೆ ಪ್ರತಿಷ್ಠಾಪಿಸಳಾಗಿದ್ದಳೋ ಅದು ಇತಿಹಾಸವೇ ಹೇಳಬೇಕು. ಈಗಂತೂ ಅವಳು ಸಾಲು ಮಳಿಗೆಗಳ ಮಧ್ಯ ಮಹಾತಾಯಿಯಾಗಿದ್ದಾಳೆ. ತಾಯಿ ಎಲ್ಲಿದ್ದರೂ ತಾಯಿಯೆ. ಈಗಲೂ ಅವಳು ಬರಿದಾಗಿ ಬಂದವಳ ಉಡಿ ತುಂಬುತ್ತಾಳೆ. ಎಚ್ಚರಾಗಿರುವ ಹೆಣ್ಣಿನ ಹಣೆಗೆ ಕುಂಕುಮವಿಟ್ಟು ಒಡಲಿಗೆ ಹೆಮ್ಮರದ ಬೀಜ ಬಿತ್ತುತ್ತಾಳೆ. ಆದರೆ ಬಾಗುವವಳು, ಬರುವವಳು ಹೆಣ್ಣಾಗಿದ್ದರೆ ಮಾತ್ರ.
ನಾನು ಅವಳ ಬಳಿ ಮತ್ತೆ ಹೋಗುತ್ತಿದ್ದೇನೆ ನನ್ನ ಹೆಂಡತಿಯೊಂದಿಗೆ.

No comments:

Post a Comment