ಸಮಯ ಸಿಕ್ಕಾಗಲೆಲ್ಲ
ನನ್ನೆ ನಾನು ಕೇಳುಕೊಳ್ಳುವ ಪ್ರಶ್ನೆ ಹಲವು ಮುಖಿಯಾದ ಗಾಂಧಿಯನ್ನು ಗ್ರಹಿಸುವುದು ಹೇಗೆ? ಈ ಬಾರಿಯ
ನನ್ನ ಸಮಾಧಾನ ಆತನ ಅಲೆಮಾರಿತನ, ನಿತ್ಯ ಸಂಚಾರ ಮತ್ತು ಪ್ರವಾಸ. ಗಾಂಧಿಯ ಬದುಕಿನಲ್ಲಿ ಇವುಗಳಿಗಿದ್ದ
ಆದ್ಯತೆ ಭಾಷಣಕ್ಕಿರಲಿಲ್ಲ. ಈ ನನ್ನ ಅಲೆಮಾರಿ ಗಾಂಧಿ ಸುಳಿಗಾಳಿಯಂತೆ ಸಾವಿನ ನಂತರವೂ ಸಂಚರಿಸುತ್ತ
ಜಂಗಮನಾಗಿ ಜೀವ ಬೆಸೆಯುತ್ತಾನೆ ಎನ್ನುವುದಕ್ಕೆ ಸಾಕ್ಷಿ ನನ್ನ ಮತ್ತು ಬೆಂಗಳೂರಿನ ರಾಷ್ಟ್ರೀಯ ಸಂತ
ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧಾನ ಕೇಂದ್ರದ ಸಮನ್ವಯಾಧಿಕಾರಿಗಳಾದ ಶ್ರೀ ಕಾ.ತ. ಚಿಕ್ಕಣ್ಣರನ್ನು
ಬೆಸೆದ ಪರಿ.
ಒಂದು ಮುಂಜಾವು,
ಆಚೆಯಿಂದ ಫೋನಿನಲ್ಲಿ, “ನಾನು ಕಾ.ತ. ಚಿಕ್ಕಣ್ಣ ಡೆಂಗ್ಯೂಯಿಂದಾಗಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾಗ,
ರಾಗಂ ನಿಮ್ ‘ಗಾಂಧಿ ಅಂತಿಮ ದಿನಗಳು’ ಓದಿದೆ. ಎಷ್ಟೊಂದು ಸೊಗಸಾದ ಬರಹ. ನಿಮಗೆ ಅಭಿನಂದನೆಗಳು. ಈಗ
ನೀವು ನಮ್ಮೊಂದಿಗಿರಬೇಕೆನ್ನುವ ಸ್ವಾರ್ಥ ಹುಟ್ಟಿಕೊಂಡಿದೆ ನಮಗೆ. ಅಂದಹಾಗೆ, ಶಿವಮೊಗ್ಗೆಯಲ್ಲಿ ಅಗಸ್ಟ
13 ಮತ್ತು 14 ರಂದು ಕನಕದಾಸರನ್ನು ಕುರಿತು ‘ಬಯಲು ಆಲಯದೊಳಗೊ’ ಎಂಬ ಎರಡು ದಿನಗಳ ಸಂವಾದ ಸಂಕೀರಣ
ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮಕ್ಕೆ ವಿಶೇಷ ವೀಕ್ಷಕರಾಗಿ ನೀವು ನಮ್ಮೊಂದಿಗಿರಬೇಕು
ಸಾಧ್ಯವೆ? ಎಂದು ಕೇಳಿದಾಗ ಇಲ್ಲ ಎನ್ನಲಾಗಲಿಲ್ಲ, ಯಾಕೆಂದರೆ ಅದು ಗಾಂಧಿಗೆ ಒಗ್ಗದ ಭಾಷೆ.
ಹಿಂದಿನ ದಿನದ
ತರಿಕೇರೆಯ ಕಾರ್ಯಕ್ರಮ ಮುಗಿಸಿಕೊಂಡು ಎರಡು ದಿನಗಳ ಕಾಲ ಶಿವಮೊಗ್ಗೆಯ ಸಹ್ಯಾದ್ರಿ ಕಲಾ ಹಾಗೂ ವಾಣಿಜ್ಯ
ಕಾಲೇಜಿನಲ್ಲಿ ಸಾಹಿತ್ಯ ಮಿತ್ರರಾದ ಡಾ. ರಂಗನಾಥ, ಗೀತಾ, ಕುಂಶಿ, ರಾಮಲಿಂಗಪ್ಪ ಬೇಗೂರು, ಎನ್.ಆರ್.
ಲಲಿತಾಂಬಾ, ಚಂದ್ರಶೇಖರ ತಾಳ್ಯ, ಕೆ.ಶರೀಫ್, ಮೇಟಿ ಹಾಗೂ ಪ್ರೊ. ಘಂಟಿಯವರುಗಳೊಂದಿಗೆ ಸಮಯ ಕಳೆಯುವ
ಅವಕಾಶ.
ಸಂವಾದ ಸಂಕೀರಣವನ್ನು
ಶ್ರೀ ಕಾ.ತ ಚಿಕ್ಕಣ್ಣನವರು ನನ್ನ ‘ಗಾಂಧಿ ಮುಗಿಯದ ಅಧ್ಯಾಯ’ ಕೃತಿಯೊಳಗಿನ ಸಂತ ಶಾಮಲ ಭಟ್ಟರ ಭಜನೆಯಾದ
–
ತೊಟ್ಟು
ನೀರು ಕೇಳಿದವನಿಗೆ ಹೊಟ್ಟೆ ತುಂಬ ಊಟ ಕೊಡು
ಒಂದು
ದುಡ್ಡು ಕೊಟ್ಟವಗೆ ಬಂಗಾರವೇ ಇಟ್ಟುಬಿಡು
ಮುಖ
ಸಿಂಡರಿಸಿದ ಮುರ್ಖನಿಗೆ ಮುಗುಳ್ನಗೆಯ ಒಲವ ಕೊಡು
ನಿನ್ನ
ಬಳಿ ಕೊಡಲೇನೂ ಇಲ್ಲದಿದ್ದರೆ ನಿನ್ನೇ ಕೊಟ್ಟುಬಿಡು
ಈ ಪದ್ಯದಿಂದ ಪ್ರಾರಭಿಸಿದರು. ಇದು ಗಾಂಧಿಯನ್ನು
ರೂಪಿಸಿದ ಪದ್ಯ. ಅವರು ಕನಕನ ವೇದಿಕೆಯ ಮೇಲೆ ನಿಂತು ಗಾಂಧಿಯೊಂದಿಗಿದ್ದರೆ, ನಾನು ಗಾಂಧಿಯಿಂದ ಹೊರಬಂದು
ಕನಕನೆಡೆಗೆ ಹೊರಟಿದ್ದೆ. ಎರಡು ಮಹಾನ್ ಚೇತನಗಳ ಕಾಲ ಮತ್ತು ಸಂದರ್ಭಗಳು ಭಿನ್ನ. ಆದರೆ ಗುರಿ ಮಾತ್ರ
ಆತ್ಮಶೋಧ.
ನಾನು ಕನಕನನ್ನು ಗ್ರಹಿಸುವುದು ಧ್ಯಾನ, ಭರವಸೆ ಮತ್ತು ಪ್ರತಿರೋಧ ಹಾಗೂ ಒಳದಂಗೆಯ
ಸಂಕೇತವಾಗಿ. ಈತನ ಮೊದಲ ಗುರಿ ಸ್ವಶೋಧವೆ ವಿನಃ ಬೌದ್ಧಿಕ ಸರ್ಕಸ್ ಅಲ್ಲ. ಪ್ರತಿಯೊಬ್ಬ ಲೇಕಕನಿಗೂ
ಒಂದು ಕೇಂದ್ರವಿರುತ್ತದೆ ಎನ್ನುವುದಾದರೆ ಕನಕನನ್ನು ಕಟ್ಟಿಕೊಡುವ ಆ ಕೇಂದ್ರ ಭಕ್ತಿ ಮತ್ತು ಬೈರಾಗದ್ದು.
ಇವುಗಳ ತೂರ್ಯವನ್ನು ಅನುಭವಿಸಲು ಹೃದಯ ಹದ ಮಾಡಿಕೊಳ್ಳಲು ಹೊರಡುವ ಕನಕನ ಅನ್ವೇಷಣೆಯ ದಾರಿಯಲ್ಲಿ ಸಾಮಾಜಿಕ,
ಧಾರ್ಮಿಕ, ರಾಜಕೀಯ ವಿಶ್ಲೇಷಣೆ ಆಕಸ್ಮಿಕ ಹಾಗೂ ಅನಿವಾರ್ಯದ್ದು. ಹೀಗಾಗಿಯೇ ಆತನ ಪದ್ಯ –
ಸತ್ಯವಂತರ
ಸಂಘವಿರಲು ತೀರ್ಥವೇತಕೆ
ನಿತ್ಯಜ್ಞಾನಿಯಾದ
ಮೇಲೆ ಚಿಂತೆಯೇತಕೆ
ನನಗೆ
ಆತನ ಇನ್ನುಳಿದ ಎಲ್ಲ ಪದ್ಯಗಳಿಗಿಂತಲೂ ಮುಖ್ಯವಾಗುತ್ತದೆ.
ಗಾಂಧಿಯಿಂದ ಖಾಲಿಯಾಗಿದ್ದ
ಹೆಗಲಗಳ ಮೇಲೆ ಹಿರಿಯರಾದ ಚಿಕ್ಕಣ್ಣನವರು ಕನಕದಾಸರನ್ನು ಹೊರೆಸಿದ್ದಾರೆ. ಆತನನ್ನು ಆತ್ಮೀಯವಾಗಿ,
ಅರ್ಥಪೂರ್ಣವಾಗಿ ಸಂಪಾದಿಸಿಕೊಡುವ ಜವಾಬ್ದಾರಿ ಈಗ ನನ್ನದಾಗಿದೆ. ಅದಕ್ಕೆ ಯಶಸ್ಸು ಸಿಗಲಿ ಎಂದು ಹರಸುವ
ಪ್ರಾರ್ಥನೆಯ ಹೊಣೆಗಾರಿಕೆ ನಿಮ್ಮ ಮೇಲಿದೆ.
No comments:
Post a Comment