Total Pageviews

Thursday, August 27, 2015

ಅವಳು ಗುಪ್ತಗಾಮಿನಿ



 ಬೆಂಗಳೂರಿನಲ್ಲಿ ಅಂದು ಮಳೆಯಿತ್ತು. ನಾನು ನಿವೇದಿತಾಳೊಂದಿಗೆ ಸಂಕ್ರಮಣದ ಸಂಜೆಗೆ ಸಾಕ್ಷಿಯಾಗಲೇಬೇಕಿತ್ತು. ಈಗ ಚಂಪಾ ಅವರಿಗೆ ಎಪ್ಪತ್ತೈದು. ಅದಷ್ಟೇ ನಿಮಿತ್ಯವಲ್ಲದಿದ್ದರೂ ಕೂಡ ಅದೂ ಒಂದು ನಿಮಿತ್ಯವೆ. ಹೀಗಾಗಿ ಗೆಳೆಯ ಶ್ರೀ ನೇ.ಭ.ರಾಮಲಿಂಗಶೆಟ್ಟಿ ಕನ್ನಡ ಸಾಹಿತ್ಯ ಪರಿಷನ್ಮಂದಿರದ ಪಂಪ ಸಭಾಂಗಣದಲ್ಲಿ ಚಂಪಾರೊಂದಿಗೊಂದು ಸಂವಾದ ಕಾರ್ಯಕ್ರಮವೇರ್ಪಡಿಸಿ ಬಿ.ಟಿ ಲಲಿತಾ ನಾಯಕ, ಕಾ.ವೆಂ.ಶ್ರೀನಿವಾಸಮೂರ್ತಿ, ರವೀಂದ್ರ ರಶ್ಮಿ, ಪಿ.ಪಿ.ನಾರಾಯಣ, ಕೆ.ರಾಜಕುಮಾರ್, ಮನು ಬಳಿಗಾರ, ಪಾನ್ಯ ನಟರಾಜ್ ಹಾಗೂ ನನ್ನನ್ನು ಸಂವಾದಿಗಳನ್ನಾಗಿ ಸ್ವಾಗತಿಸಿದ ಏಳೂವರೆ ದಶಕಗಳ ಅವರ ಹೋರಾಟದ ಬಾಳಿನ ಕೆಲವು ಪುಟಗಳನ್ನು ನಾವೆಲ್ಲ ಮೆಲುಕು ಹಾಕುವಂತೆ ಮಾಡಿದ್ದರು. ಮಾತು ಸಾಕು ಸಾಕು ಸಾಕೆನ್ನುತ್ತಲೇ ಸಂವಾದಿಯಾದವನು ನಾನು.
ಬೇಡವೆನ್ನುತ್ತಲೇ ಬೆಂಗಳೂರಿಗೆ ಬರುವುದು, ಬಿಡಬೇಕೆನ್ನುತ್ತಲೇ ಬೀರು ಬಾಟಲ್‍ಗಳನ್ನು ಸಾಲುಸಾಲಾಗಿ ನಿಲ್ಲಿಸುವುದು, ಸುಮ್ಮನಿರಬೇಕೆನ್ನುತ್ತಲೇ ಸವಿಗನಸಿಗೆ ಸಂಗೀತ ಸಂಯೋಜಿಸುವುದು, ಸೋಲುವುದು, ಸವೆಯುವುದು, ಸತ್ತೆ, ಅಯ್ಯೋ ಸತ್ತೇ ಬಿಟ್ಟೆ ಬಿಟ್ಟುಬಿಡು ನನ್ನ ಎಂದು ಎಲ್ಲಿಂದಲೋ ಕೊಸರಿಕೊಂಡು ಓಡಿ ಬಂದು ಸತಿ ನೀಡಿದ ಸಮಾಧಾನದ ಮೊಸರಿನಲ್ಲಿ ಕಲ್ಲು ಹುಡುಕುವುದು, ಬೆಳಗಾಗುತ್ತಲೇ ಮತ್ತೆ ಹೊಸ ಸತ್ಯಕ್ಕೆ ಸಂವಾದಿಯಾಗುವುದು ಇದು, ಇದು, ಇದೇ ನನ್ನ ನಿತ್ಯ ಕತೆಯಾಯಿತೆ? ಎಂದೆಲ್ಲ ಯೋಚಿಸುತ್ತಲೇ ನಾನು ಸಂವಾದ ಸಮಾರಂಭದಲ್ಲಿ ಎಲ್ಲವನ್ನೂ ಗಮನಿಸುತ್ತಿದ್ದೆ. ಮನದ ಮೂಲೆಯಲ್ಲಿ ನನ್ನಂತೆಯೇ ಕಸಿವಿಸಿಗೊಂಡು ಸಂಕಟಪಟ್ಟು ಹಾಡಿದ ಗಾಲಿಬ್‍ನ ಮದಿರಾ ಪಾತ್ರೆಯಿಂದ ತೊಟ್ಟಿಕ್ಕುತ್ತಿದ್ದವು ಈ ಸಾಲುಗಳು –

O foolish heart, what has befallen you?
Do you not know and this sickness has no cure?

I long for her and she is weary of herself
O Lord above, tell me, whst does this mean?

I too possess a tongue like other men
If only you would ask me what I seek!
     ಹೌದು, ಸತ್ಯ. ಅವನಿಗಷ್ಟೆ ಗೊತ್ತು ನನ್ನ ಮತ್ತು ನಿಮ್ಮ ಹುಡುಕಾಟ.
ಚಂಪಾ ಅವರ ಸುತ್ತ ವಾದ, ಸಂವಾದ, ಪ್ರತಿವಾದಗಳೆಲ್ಲ ಗಂಟೆಗಳವರೆಗೆ ನಡೆದು ಕೊನೆಗೊಂದು ಚಂಪಾವಾದ ದಿನಾಂಕ: 11.08.2015 ರ ಸಂಜೆ ರೂಪಗೊಳ್ಳುತ್ತಿತ್ತು. ಗಾಲಿಬ್‍ನ ಕವಿತೆ ಸುತ್ತುಹೊಡೆಯುತ್ತಿದ್ದ ನನ್ನ ಅಲೆಮಾರಿ ಮನಸ್ಸು ಒಂದೆರಡು ಪ್ರಶ್ನೆಗಳಿಗಾಗಿ ತನ್ನ ಸರದಿಗಾಗಿ ಕಾಯುತ್ತಿತ್ತು. ಅವೇನು ಹೊಸ ಪ್ರಶ್ನೆಗಳೆ? ಖಂಡಿತವಾಗಿಯೂ ಅಲ್ಲ. ಹಾಗೆ ನೋಡಿದರೆ ಈ ಪ್ರಪಂಚದಲ್ಲಿ ಹೊಸ ಪ್ರಶ್ನೆಗಳೆಲ್ಲಿವೆ ಹೇಳಿ? ಎಲ್ಲ ಪುನರಾವರ್ತನೆಗಳೆ. ದಾಖಲಾಗುತ್ತಿರುವ ಪುಟಗಳು ಮಾತ್ರ ಹೊಸವು ಅಲ್ಲವೆ?
 ಹೊರಗಡೆ ಮಳೆ ನಿಂತು ಕತ್ತಲಾವರಿಸಿತು, ಒಳಗಡೆ ಮಾತು ತನ್ನ ಅಬ್ಬರದ ಉಬ್ಬರಿನಿಂದ ಇಳಿದು ತಣ್ಣಗಾಯಿತು. ಈಗ ನನ್ನ ಕಾರು ತತ್ತಲಲ್ಲಿ ಕವಿತೆಯ ಕೈ ಹಿಡಿದು ತರಿಕೆರೆಯತ್ತ ಓಡಲಾರಂಭಿಸಿತು. . . . .
 ಈ ಬದುಕು ಚಂಪಾರ ಶಾಲ್ಮಲೆಯಂತೆ. ಅವಳು ಗುಪ್ತಗಾಮಿನಿ, ಜನದನಿ, ಜನ್ಮದನಿಯೂ ಕೂಡಾ.

No comments:

Post a Comment