Total Pageviews

Sunday, August 23, 2015

ಸಾಲು, ಸಾಲುಗಾರ ಮತ್ತು ಸಾವು



ಸಕ್ಕರಿ ಮಹಾವಿದ್ಯಾಲಯದಲ್ಲಿಯ 2015ನೇ ಸಾಲಿನ ಸಾಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮುಗಿಸಿಕೊಂಡು, ಮಧ್ಯಾಹ್ನ ಎರಡು ಗಂಟೆಗೆ ಬಾಗಲಕೋಟೆಯ ಹೊಟೇಲ್ ಅನುಗ್ರಹ ರೂಂ.ನಂ16 ರಲ್ಲಿ ನನ್ನ ಸಾಹಿತ್ಯಾಭಿಮಾನಿಗಳೊಂದಿಗೆ ಚರ್ಚೆಗಿಳಿದ ನಾನು, ಮಾತಿನಿಂದ ಹೊರಬಂದಾಗ ರಾತ್ರಿ 9.00 ಗಂಟೆ. ಪತ್ರಕರ್ತ ಗೆಳೆಯ ಕಿರಣ ಬಾಳುಗೋಳ ಗದ್ದನಕೇರಿ ಕ್ರಾಸಿನಲ್ಲಿ ನನಗೆ ಬಸ್ಸು ಹತ್ತಿಸಿ, ತಲೆಯಲ್ಲಿ ಪ್ರೀತಿಯ ಕವಿ ಶಂಕರ ಕಟಗಿಯ ಜಂಬು ನೇರಳಿಯ ಹುಳು ಹೊಗಿಸಿ ಹೊರಟು ಹೋದ.
 ನನ್ನ ಬಸ್ಸು ಈಗ ದಾವಣಗೆರೆ ಎಡೆಗೆ. ಹರಪನಹಳ್ಳಿ, ಹರಿಹರ, ಹೊನ್ನಾಳಿ, ಜಗಳೂರು, ಚನ್ನಗಿರಿ, ದೊಡ್ಡಬಾಲೆ, ಬಾನುವಳಿ, ತೆಲಿಗಿ ಹಾಗೂ ದಾವಣಗೆರೆ ಸೇರಿದಂತೆ ಹಲವು ಪ್ರದೇಶಗಳಿಂದ ಸುಮಾರು 135 ಜನ ಕವಿಗಳು ದಿನಾಂಕ:09.08.2015 ರಂದು ದಾವಣಗೆರೆಯ ರೋಟರಿ ಬಾಲಭವನದಲ್ಲಿ ಸೇರುವವರಿದ್ದರು. ಅಲ್ಲಿ ಎರಡು ಕೃತಿಗಳ ಬಿಡುಗಡೆ ಮಾಡಿ ಮಾತಾಡಬೇಕಾದವನು ನಾನು.
 ನಸುಕಿನ ಐದು ಗಂಟೆಗೆ ನಾನು ದಾವಣಗೆರೆ ಬಸ್ಟ್ಯಾಂಡಿನಲ್ಲಿ. ಸ್ಪೂರ್ತಿ ಪ್ರಕಾಶನದ ಅಧ್ಯಕ್ಷರಾದ ಎಂ.ಬಸವರಾಜ್ ನನಗಾಗಿ ಕಾಯುತ್ತಿದ್ದರು. ನನ್ನ ಎರಡು ಯಶಸ್ವಿ ಕೃತಿಗಳಾದ ‘ಗಾಂಧಿ ಅಂತಿಮ ದಿನಗಳು’ ಮತ್ತು ‘ಗಾಂಧಿ ಮುಗಿಯದ ಅಧ್ಯಾಯ’ಗಳನ್ನು ಬಿಡುಗಡೆಗೊಳಿಸಿ ಸಂಭ್ರಮಿಸಿದ ಅಭಿಮಾನದ ಊರು ದಾವಣಗೆರೆ. ಈ ಊರಿನಲ್ಲಿಯೇ ನನ್ನ ತಂಗಿಯ ಮದುವೆಯ ಮಾತುಗಳಾದವು. ಆರಂಭದ ಅವರ ಸಾಂಸಾರಿಕ ದಿನಗಳುರುಳಿದವು. ತಂದೆಗೆ ನನ್ನ ಅಭಿಮಾನಿಗಳಿಂದ ಮೊದಲ ಸನ್ಮಾನವಾಯಿತು. ಈಗ ದಾವಣಗೆರೆ ನನ್ನ ನೆನಪುಗಳ ಭಾಗವಾಯಿತು. ಹೌದಲ್ಲವೆ? ನೆನಪಿಲ್ಲದ ಯಾವುದೂ ನಮ್ಮದಾಗಿ ಉಳಿಯುವುದಿಲ್ಲ.
 “ನಮ್ಮಂತೆ ನಾವು ಬದುಕುವುದಿಲ್ಲ” ಇದು ನಾನು ಬಿಡುಗಡೆಗೊಳಿಸಿದ ಕಾವ್ಯ ಸಂಕಲನ. ‘ನೇಣು ಗಂಬ’ದ ಕೆಳಗೂ ಕಾವ್ಯ ಹುಟ್ಟುತ್ತದೆ ಎನ್ನವುದಕ್ಕೆ ಸಾಕ್ಷಿಯಾದ ಕೃತಿ. ಈ ಕಾರ್ಯಕ್ರಮವನ್ನು ಆಯೋಜಿಸಲು ನಿರಂತರ ಹೆಣಗಿದವರು ಗೆಳೆಯ ವೀರಭದ್ರಪ್ಪ. ಆದರೆ ದುರಂತವೆಂದರೆ ಅವರ ರೈತ ಸಹೋದರನೊಬ್ಬ ಸಾಲದ ಬಾಧೆ ತಾಳದೆ ಆತ್ಮಹತ್ಯೆಗೆ ಮೊರೆಹೋದ. ‘ಕಾವ್ಯಕ್ಕೆ ಉರುಳು’ ಅಂಕಣಕ್ಕಾಗಿ ಎಲ್ಲೆಲ್ಲೋ ಹುಡುಕುತ್ತಿದ್ದ ನನಗೆ ಈಗ ಸಾವು ಎದುರೇ ನಿಂತಿತ್ತು. ಇವರೊಂದಿಗೆ ವಿಷ ಸೇವಿಸಿದ ಅಣ್ಣನ ಮಗನೂ ಅಸುನೀಗಿದ. ಈ ಹಿನ್ನೆಲೆಯಲ್ಲಿ ಜುಲೈ 26 ರಂದು ನಡೆಯಬೇಕಾದ ಕವಿಗೋಷ್ಠಿ ಹಾಗೂ ಕಾವ್ಯ ಸಂಕಲನಗಳ ಬಿಡುಗಡೆಯ ಸಮಾರಂಭ ಅಗಷ್ಟ್ 9ಕ್ಕೆ ಮುಂದೂಡುಲಾಗಿತ್ತು.
 “ಬದುಕಿ ನೋಟದಲ್ಲಿ ಹೃದಯದ ಹಂಬಲವಿಲ್ಲ
ಗಾಣದೆತ್ತಿನ ಪಯಣ, ಬೆತ್ತಲೆಯಾದ ಭಾವ”
 ಇವು ‘ನಮ್ಮಂತೆ ನಾವು ಬದುಕುವುದಿಲ್ಲ’ ಕಾವ್ಯ ಸಂಕಲನದ ಸಾಲುಗಳು. ಕನ್ನಡ ಸಾಹಿತ್ಯ ಪರಿಷತ್‍ಗೆ ನೂರು ತುಂಬಿದ ಸಂಭ್ರಮದಲ್ಲಿ ಹತ್ತಾರು ವೇದಿಕೆ, ನೂರಾರು ಕವಿಗಳ ಉಪಸ್ಥಿತಿಯಲ್ಲಿ ಬಿಡುಗಡೆಯಾಗುತ್ತಿದ್ದ ಈ ಕಾರ್ಯಕ್ರಮವನ್ನು ನಾನು ಹರಿವಂಶರಾಯ್ ಬಚ್ಚನ್‍ರ “ನಿಶಾ ನಿಮಂತ್ರಣ” ಕಾವ್ಯ ಸಂಕಲನದ ಕೆಲವು ಸಾಲುಗಳಿಂದ ಪ್ರಾರಂಭಿಸಿದೆ. ಅದು ಮಾತು. ಹರಿಯುವ ನೀರು, ಹೊರಡುವ ವಾಗ್ಝರಿಗೆ ಎಲ್ಲಿಯಾದರೂ ಒಂದು ದಡ ಇದ್ದೇ ಇರುತ್ತದಲ್ಲ? ಹಾಗೆ ನಾನೊಂದು ದಡಕ್ಕೆ ಬಂದು ನಿಂತಾಗ ನನ್ನ ಎದುರಿಗೆ ಓರ್ವ ನನ್ನ ತಾಯಿಯ ವಯಸ್ಸಿನ ಮಹಿಳೆ ಇದ್ದರು. ವೇದಿಕೆಯಿಂದ ಕೆಳಗಿಳಿದು ಬಂದ ನನ್ನ ಕೈಗೆ ಅವರ ಕೈ ನೀಡಿ ಹೇಳಿದರು, “ಇದು ಅಲಹಾಬಾದ್‍ನಲ್ಲಿ ಹರಿವಂಶರಾಯನ್ನು ಮುಟ್ಟಿದ ಕೈ. ನಿನ್ನ ಭಾಷಣದಲ್ಲಿ ಹರಿವಂಶರಾಯ್ ಬಗೆಗೆ ನೀನು ಹೇಳಿದ್ದನು ಕೇಳುತ್ತಲೇ ನಿನ್ನಲ್ಲಿರುವ ಹಸಿವನ್ನು ನೋಡಿದೆ. ಅವರ ಮುಟ್ಟಿದ ಈ ಕೈ ನಿನ್ನನ್ನೀಗ ಸಮಾಧಾನಿಸಬಹುದಲ್ಲವೆ?”. ಈ ಕಾಳಜಿಗೆ ಕಾವ್ಯದ ಕಣ್ಣುಗಳು ಬೇಕಷ್ಟೆ.
 ಮತ್ತೊಂದು ಅನುಭವ ಇದೇ ವೇದಿಕೆಯಲ್ಲಿ. ಬಹುತೇಕ ಬಹಳ ಚನ್ನಾಗಿಯೇ ಮಾತನಾಡಿದ್ದ ನನ್ನನ್ನು ಮುಪ್ಪಿನ ಜೀವವೊಂದು ಹರಸಲು ಕಾಯುತ್ತಿತ್ತು. ಅವರೇ ಕೈಯಿಂದ ಸಿದ್ಧಪಡಿಸಿದ ಶುದ್ಧ ಖಾದಿ ಬಟ್ಟೆಯಲ್ಲಿ ತಯ್ಯಾರಿಸಿದ ಶಾಲ್ ಹಿಡಿದು, ಅವರು ಕಾಯುತ್ತಿದ್ದರೆ ನನಗೆ ಓಶೋ ಹೇಳುವ ಜೀಸಸ್‍ನ ಮಾತು ನೆನಪಾಗುತ್ತಿತ್ತು. ಜೀಸಸ್ ಹೇಳುತ್ತಾನೆ, “ಕಟ್ಟಕಡೆಯಲ್ಲಿ ನಿಂತವರೇ ಅನುಗ್ರಹಕ್ಕೆ ಪಾತ್ರರಾಗುವವರು”. ಎಷ್ಟೊಂದು ಅದ್ಭುತ ಸಾಲಲ್ಲವೆ? ಮನುಷ್ಯ ಸಾಯುತ್ತಾನೆ ಆದರೆ ಕೆಲವರ ಕೆಲವು ಸಾಲುಗಳು ಸಾಲ ನೀಡಿದ ಸಾಲಗಾರರಂತೆ ಸದಾ ನಮ್ಮನ್ನು ಕಾಡುತ್ತಲೇ ಇರುತ್ತವೆ, ಅಲ್ಲವೆ?

No comments:

Post a Comment