Total Pageviews

Thursday, December 17, 2015

‘ಮಹಿಳೆ’ ಎಂಬ ಮೂರಕ್ಷರ. . . . .

 
         ನನ್ನಹೆಣ್ಣು ಹೇಳುವ ಅರ್ಧಸತ್ಯಕೃತಿಯು 2014ರಲ್ಲಿ ಪ್ರಕಟವಾಯಿತು. ಅಲ್ಲಿಂದೀಚೆಗೆ ಅದರ ಎರಡನೆಯ ಭಾಗವನ್ನು ಹೊರತರಬೇಕೆಂದು ನನ್ನ ಓದುಗರ ಒತ್ತಾಸೆ. ಆದರೆ ನನಗೇಕೊ ಮಧ್ಯ ಮಹಿಳಾ ಪ್ರಪಂಚದ ಜಾಗತಿಕ ವಿನ್ಯಾಸದೊಳಗೊಂದು ಪಯಣ ಅವಶ್ಯವೆನ್ನಿಸಿತು. ಆದರೆ ಬೆಂಗಳೂರಿನ ಯಾಂತ್ರಿಕ ಧಾವಂತದ ಜೀವನದಲ್ಲಿ ಇಂಥ ಧ್ಯಾನಸ್ಥ ಓದು ಅಸಾಧ್ಯವೆನ್ನಿಸಿತು. ಅದು ಒಂದು ವೇಳೆ ಸಾಧ್ಯವಾಗುವುದಾದರೆ, ಸಾಧ್ಯವಾಗಿಸಿಕೊಳ್ಳುವುದಾದರೆ ಈಗಾಗಲೇ ನಿಗಧಿತ ಕಾರ್ಯವ್ಯಾಪ್ತಿಯೊಳಗೇ ಆಗಬೇಕು ಎಂದುಕೊಂಡು, ನನ್ನ ಅಂಕಣ ಬರಹದ ಓದಿನ ಹಿನ್ನೆಲೆಯಲ್ಲಿ ಆಗಾಗ ಜಾಗತಿಕ ಮಟ್ಟದಲ್ಲಿ ತಾತ್ವಿಕ ಸಂಘರ್ಷಕ್ಕಿಳಿದ ಮಹಿಳೆಯರೆಡೆಗೆ ಗಮನ ಹರಿಸಿದುದರ ಫಲಶೃತಿಯೇ ಕೃತಿಮಹಿಳೆಎಂಬ ಮೂರಕ್ಷರ.
ಮಹಿಳೆಯರ ಕುರಿತು ಮತ್ತೆ ಮತ್ತೆ ಬರೆದವರಲ್ಲಿ, ಚಿಂತಿಸಿದವರಲ್ಲಿ, ಆಕೆಯ ಭಾವಲೋಕವನ್ನು ಅನಾವರಣಗೊಳಿಸಿದವರಲ್ಲಿ ನಾನೂ ಒಬ್ಬ ಎಂಬುದು ಮತ್ತೆ ಮತ್ತೆ ನನ್ನನ್ನುಪುರುಷಎಂಬ ಪ್ರಜ್ಞೆಗೊಳಪಡಿಸಿರುವುದರೊಂದಿಗೆ ನನ್ನ ಒಳ ನಿಧಾನವಾದಮಹಿಳೆ ಅಸ್ತಿತ್ವವನ್ನು ಖಚಿತಪಡಿಸಿದೆ. ಇದು ಇನ್ನೊಂದು ಅರ್ಥದಲ್ಲಿ ಎಲ್ಲರಿಗೂ ದಕ್ಕಿದ ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಸತ್ಯ.
ಭಾರತದ ಅಥವಾ ಒಟ್ಟು ಪ್ರಪಂಚದ ಹಲವು ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ವಿನ್ಯಾಸಗಳಿಂದಾಗಿಮಹಿಳಾಲೋಕದಲ್ಲಿ ಏರಿಳಿತಗಳಾದವು ಅಥವಾ ಮಹಿಳೆಯೇ ವಿನ್ಯಾಸಗಳಿಗೆ ಕಾರಣಗಳಾದಳೋ ಇದು ಈಗಲೂ ಬಿಡಿಸಲಾಗದ ಪ್ರಶ್ನೆ ನನಗೆ. ಒಂದಂತೂ ಇದರಿಂದ ಸ್ಪಷ್ಟ. ಮಹಿಳೆ ಇಲ್ಲದ, ಅವಳನ್ನು ಹೊರತುಪಡಿಸಿದ ಮಾನವ ಇತಿಹಾಸದ ಓದು ಅಸಾಧ್ಯವಾಗಿದೆ, ಅಪೂರ್ಣವಾಗಿದೆ, ಅರ್ಧಸತ್ಯಗಳಿಂದ ಕೂಡಿದೆ ಹಾಗೂ ಅಪಾಯಕಾರಿಯಾಗಿದೆ.
ಭಾರತದ ಅಥರ್ವವೇದ ಮತ್ತು ಬೃಹದಾರಣ್ಯಕೋಪನಿಷತ್ತಿನಲ್ಲಿ ಪುರುಷನುಮಹಿಳೆಯನ್ನು (ವರನು ಕನ್ಯೆಯನ್ನು) ಕುರಿತು ಹೇಳುವ ಒಂದು ಮಂತ್ರ
ಪುರುಷನಾಗಿದ್ದೇನೆ ನಾನು, ಪ್ರಕೃತಿಯೇ ನೀನು
ಸಾಮಗಾನ ನಾನು, ಋಕ್ ಮಂತ್ರ ನೀನು
ಸ್ವರ್ಗವಾಗಿರುವೆ ನಾನು, ಭುವಿ ನೀನು.
ಸೇರೋಣ ನಾವಿಬ್ಬರೂ ಇಲ್ಲಿ, ಪ್ರಜೆಗಳನ್ನು ಸೃಷ್ಟಿಸೋಣ.

ನಮ್ಮ ಕುಡಿನೋಟಗಳು ಮಧುರವಾಗಿರಲಿ
ವದನಗಳು ನಮ್ಮ ಮೈತ್ರಿಯನ್ನು ಪ್ರತಿಬಿಂಬಿಸಲಿ
ನನ್ನನ್ನು ನಿನ್ನ ಹೃದಯ ಪೀಠದಲ್ಲಿರಿಸು
ನಮ್ಮೀರ್ವರಲಿ ಒಂದೇ ಚೇತನ ನೆಲೆಸಿರಲಿ

ನೀನು ನನ್ನಿಂದ ಪಾಲಿಸಲ್ಪಡಲಿ
ಬೃಹಸ್ಪತಿಯು ನಿನ್ನನ್ನು ನನ್ನವಳಾಗಿಸಿದ್ದಾನೆ;
ನಮ್ಮ ಮಕ್ಕಳ ತಾಯಿಯೇ, ನಿನ್ನ ಪತಿಯಾದ
ನನ್ನ ಜೊತೆ ನೂರು ವರ್ಷಗಳವರೆಗೆ ಜೀವಿಸು.

ಸೌಭಾಗ್ಯಕ್ಕಾಗಿ ನಿನ್ನ ಕೈ ಹಿಡಿಯುವೆ
ನನ್ನೊಂದಿಗೇ ನೀನು ವೃದ್ಧಳಾಗು;
ನನ್ನ ಮನೆಯ ಯಜಮಾನಿಯಾಗು.
         ಮನು ಪ್ರಣೀತ ನಾಡಿನಲ್ಲಿಯೇ ಸಮರ್ಪಣಾ ಭಾವದ ಇನ್ನೊಂದು ಅಭಿವ್ಯಕ್ತಿ ಇದೆ. ಇಡೀ ಮಂತ್ರವನ್ನು ನಾನು ಮತ್ತೆ ಮತ್ತೆ ಓದಿದ್ದೇನೆ. ಮಹಿಳೆಯನ್ನು ಧಿಕ್ಕರಿಸಿ ತನ್ನ ಅಸ್ತಿತ್ವ ಸಾಧ್ಯ ಎಂಬ ಪುರುಷನ ಅಹಂ ಎಲ್ಲಿಯಾದರೂ ಇಣುಕಿದೆಯೆ? ಅವನು ಅವಳವಳಲ್ಲ ಎಂಬ ಘೋಷಣೆ ಎಲ್ಲಿಯಾದರೂ ಸಾಧ್ಯವಾಗಿದೆಯೇ ಎಂದೆಲ್ಲ ಪರಿಕ್ಷಿಸಿದ್ದೇನೆ. ಊಹೂಂ, ಅದೆಲ್ಲಿಯೂ ಸಾಧ್ಯವಿಲ್ಲ. ವಾಸ್ತವದಲ್ಲಿಮಹಿಳೆಹೊರತಾದ ಅಂಥ ಒಂದು ಜೀವನ ಸಾಧ್ಯವಾಗುವುದಾದರೆ ತಾನೆ ಅದು ನಮ್ಮ ಆಲೋಚನೆಯ ಅಥವಾ ಅಭಿವ್ಯಕ್ತಿಯ ಭಾಗವಾಗುವುದು?
ಯಾವುದು ಜೀವನಯಂತ್ರದ ಚಾಲನಾ ಶಕ್ತಿಯಲ್ಲವೊ ಅದು ಮಂತ್ರವಾಗಲು ಎಂದಿಗೂ ಸಾಧ್ಯವಿಲ್ಲ.
ಇಲ್ಲಿ ಪರಿಚಯಿಸಲಾದಮಹಿಳಾಸತ್ಯಗಳಿಗೆ ಪೂರ್ವ-ಪಶ್ಚಿಮ ಎಂಬ ಪ್ರತ್ಯೇಕತೆ ಪ್ರಾಪ್ತವಾಗುವುದು ಹುಟ್ಟಿನ ಕಾರಣಕ್ಕೆ ಮಾತ್ರ. ಇಲ್ಲದೇ ಹೋದಲ್ಲಿ ಇದೊಂದು ನದಿ, ದೊಡ್ಡ ಜೀವನದಿ ಅಷ್ಟೆ. ನೆಲ ಇದೊ ಅದೊ, ಇವರೆಲ್ಲರ ನೆಲೆ ಮಾತ್ರ ನೋವು ಮತ್ತು ದುರಂತಗಳದ್ದು. ಸೋಲು ಮತ್ತು ಅಪಮಾನಗಳದ್ದು. ನಿತ್ಯ ಹಿನ್ನಡೆ ಮತ್ತೆ ಚಿಗುರುವ ಹಂಬಲದ್ದು.
ಸತ್ಯವನ್ನೇ ಹೇಳಬೇಕೆಂದರೆಮಹಿಳೆ ಎಂಬ ಮೂರಕ್ಷರಮೈದಾಳಿದುದರ ಹಿಂದೆ ಪ್ರಕಾಶಕ ಮಿತ್ರ ಶರಣು ಪಾಟೀಲರ ಪಾತ್ರ ಅತ್ಯಂತ ಮಹತ್ವದ್ದು. ಅವರು ಪಟ್ಟು ಹಿಡಿಯದೇ ಹೋಗಿದ್ದರೆ ಇತ್ತ ನನ್ನ ಗಮನವೇ ಹರಿಯುತ್ತಿರಲಿಲ್ಲವೇನೊ. ಅಷ್ಟೊಂದು ಪ್ರೀತಿ ಹಾಗೂ ಕಾಳಜಿಗಳೊಂದಿಗೆ ಬೆನ್ನು ಹತ್ತಿದವರು ಚಿತ್ತಾರ ಪ್ರಕಾಶನದ ಮಾಲೀಕರೂ ಹಾಗೂ ಸ್ವಯಂ ಲೇಖಕರೂ ಆದ ಶ್ರೀ ಶರಣು ಪಾಟೀಲ. ಅವರ ಪ್ರೀತಿಗೆ ನಾನು ಋಣಿಯಾಗಿದ್ದೇನೆ.
ನನ್ನ ಬರಹದ ಪ್ರೇರಣಾ ಶಕ್ತಿಗಳಲ್ಲೊಬ್ಬರು ಖ್ಯಾತ ಲೇಖಕಿಕಸ್ತೂರಿ ಬಾಯರಿ’. ಕೃತಿಗೆ ಅವರ ಬೆನ್ನುಡಿ ದೊರೆತು ಪುಸ್ತಕದ ಘನತೆ ಹೆಚ್ಚಾಗಿದೆ ಎಂದುಕೊಂಡಿದ್ದೇನೆ. ಅಭಿಮಾನದ ಸಾಲುಗಳಿಗಾಗಿ ಅವರಿಗೂ ಋಣಿಯಾಗಿದ್ದೇನೆ.
ಯಥಾ ಪ್ರಕಾರ ಅರುಣ ಆಚಾರ್ಯ ಪುಸ್ತಕದ ಮುಖಪುಟ ವಿನ್ಯಾಸ ಮಾಡಿದ್ದಾನೆ. ಸೊಸೆ ನೀತು ಎಷ್ಟೊಂದು ಮಾತಾಡಿದ್ದಾಳೆ. ಕೃತಿಯ ಬಾಹ್ಯ ವಿನ್ಯಾಸಕಾರಳು ನಿಜವಾಗಿಯೂ ಇವಳೆ. ಮಗ ಸಿದ್ಧಾರ್ಥನ ಸೂಚನೆಗಳಿಗೇನೂ ಕೊರತೆ ಇಲ್ಲ. ಆತನ ಕಣ್ಣುಗಳೋ ಸದಾ ವಿನ್ಯಾಸ ದೊಷಗಳನ್ನೇ ಹುಡುಕುತ್ತಿರುತ್ತವೆ. ಅವನನ್ನು ತೃಪ್ತಿಪಡಿಸದ ಯಾವ ಕಲಾಕೃತಿಯೂ ನನಗೂ ಇಷ್ಟವಾಗಿಲ್ಲವೆಂದೇ ಹೇಳಬೇಕು.
ಸದಾ ನನ್ನ ಪುಸ್ತಕಗಳನ್ನು ಸಾಧ್ಯವಾಗಿಸುವವಳು ನನ್ನ ಪ್ರೀತಿಯ ಪದ್ದಿ. ಅವಳಿಗೆ ಧನ್ಯವಾದ ಹೇಳಬಹುದೆ? ಹಾಂ. ಹೇಳಲೇಬೇಕು. ಯಾಕೆಂದರೆ ಅವಳು ಮಹಿಳೆ, ಒರಟು ಮನಸ್ಸುಗಳನ್ನು ಮುಗುಳ್ನಗೆ ಮತ್ತು ಮೌನ ಮಾತ್ರದಿಂದಲೇ ಮಾತೃಕಾರುಣ್ಯದಿಂದ ತುಂಬಿ ಬಿಡುವಂತೆ ಮಾಡುವ ಮಲ್ಲಿಗೆಯಾಗಿಸುವ ಮಹಾ ಮಹಿಳೆ.

ಓದುತ್ತ ಓದುತ್ತ ನನ್ನೊಂದಿಗ ಎಲ್ಲೆಲ್ಲ ಬಂದವರು ನೀವು. ನಿಮ್ಮ ಸಾಂಗತ್ಯವೇ ನನ್ನ ಶಕ್ತಿ. ನೀವು ಹೀಗೇ ಇರಿ ಸದಾ ನನ್ನೊಂದಿಗೆ.

No comments:

Post a Comment