ಫ್ರಾನ್ಸಸ್ ಥಾಂಪ್ಸನ್‍ನ
ಇಪ್ಪತ್ನಾಲ್ಕು ಸಾಲುಗಳ ಒಂದು ಕವಿತೆ, ‘ಇನ್ ನೋ ಸ್ಟ್ರೇಂಜ್ ಲ್ಯಾಂಡ್’. ಇದು ಆತನ ಜೀವನದ ಕೊನೆಯ
ಕವಿತೆ. ಆತ ತೀರಿದ ನಂತರ ಆತನ ಟೇಬಲ್ ಮೇಲೆ ಬರೆದಿಡಲ್ಪಟ್ಟಿದ್ದ ಈ ಕವಿತೆಯನ್ನು ಓದಿದ ವಿರ್ಶಕರು,
ಒಂದು ವೇಳೆ ಆತ ಬದುಕಿದ್ದರೆ ಪ್ರಾಸಗಳ ದೋಷಗಳಿಂದ ನರಳುವ ಈ ಕವಿತೆಯನ್ನು ಸರಿಪಡಿಕೊಡುತ್ತಿದ್ದನೇನೊ
ಎಂದರು. ಇಂಥ ಅಪ್ರಬುದ್ಧ ಆಲೋಚನೆಗಳನ್ನೋದಿದಾಗ ನನಗೆ ನಗು ಬರುತ್ತದೆ. ಒಂದು ಕವಿತೆಯ ತುಡಿತ ಗೊತ್ತಿಲ್ಲದೆ
ಮಾತನಾಡುವುದು, ನಮಗೆ ನಿಲುಕದ ಜ್ಞಾನವನ್ನು ಧಿಕ್ಕರಿಸುವುದು, ನನಗೆ ದಕ್ಕದ ಶ್ರೀಮಂತಿಕೆಯನ್ನು ಕುರಿತು
ಅಸೂಯೆ ಪಡುವುದು ಇವೆಲ್ಲ ನಮ್ಮ ಅಪದ್ಧಗಳಿಗೆ ಸಾಕ್ಷಿಗಳಾಗಬಹುದೇ ವಿನಃ ಶಕ್ತಿಯ ದಮನದ ದಾರಿಗಳಾಗಲಾರವು.
ಫ್ರಾನ್ಸಸ್ ಥಾಂಪ್ಸನ್‍ನ ಕವಿತೆಯ ಈ ಎರಡು ಪದ್ಯಗಳನ್ನು ಓದಿ -
O WOLRD invisible, we view thee,
O world intangible, we touch thee,
O world unknowable, we know thee,
Inapprehensible, we clutch thee!
Does the fish soar to find the ocean?
The eagle plunge to find the air
That we ask of the stars in motion
If they have rumour of thee there?
ಓದಿದಿರಿ ಎಂದುಕೊಳ್ಳುತ್ತೇನೆ. ಇಂಥ
ಸಾಲುಗಳು ದರ್ಶನವಿಲ್ಲದ ದೇಹವೊಂದು ಹೊಮ್ಮಿಸುವ ಕಿರಣಗಳಾಗಿರಲು ಸಾಧ್ಯವಿಲ್ಲ.
ನನಗೆ ಈ ಕವಿತೆ
ದಕ್ಕುವುದು ‘Heaven in earth
and God in man’ ಎನ್ನುವ ಅನುಭವದ
ವ್ಯಾಪ್ತಿಯಲ್ಲಿ. ಪ್ರತಿ ಬರಹ, ಲೇಖಕ ಅಥವಾ ಯಾವುದೇ ಸೃಜನಸೃಷ್ಠಿ ನಮ್ಮದಾಗುವುದು ಅದರೊಂದಿಗಿನ ನಮ್ಮ
ಸಾಮ್ಯತೆಗಳಿಂದಾಗಿಯೆ. ಇದು ಸಾಮಾನ್ಯರ ಅನುಭವ ಅಥವಾ ಈ ಸಾಮಾನ್ಯರಿಗೆ ಲೌಕಿಕ ಸಾಕ್ಷಿಗಳೊಂದಿಗೆ ಅರ್ಥವಾಗುವ
ಭಾಷೆ. ಆದರೆ ಮುಂದುವರಿದು ನಾನು ಗಮನಿಸಿದಂತೆ ನಮ್ಮಗಳ ಮಧ್ಯ ಇಂಥ ಯಾವುದೇ ಸಾಮ್ಯತೆಗಳಿಲ್ಲದೇ ಇರುವಾಗಲೂ,
ಸಂಪೂರ್ಣ ವಿರುದ್ಧ ಮುಖದ ಪಥಿಕರಾಗಿದ್ದಾಗಲೂ ಒಂದು ಅನುಭವ ನಮ್ಮದಾಗಲು ಸಾಧ್ಯವಿದೆ. ಆದರೆ ಅದಕ್ಕಿರಬೇಕಾದ
ಒಂದೇ ಅರ್ಹತೆ, ಗೌರವ, ಪರಸ್ಪರ ವಿಚಾರ ಗೌರವ ಮತ್ತು ಶೋಧಸಂಸ್ಕ್ರತಿಯ ಅರಿವು. ಆಗ ಎಲ್ಲವೂ ಅದ್ವೈತ,
ಪ್ರತಿ ಅನುಸಂಧಾನವೂ ಯೋಗ, ಮಹಾಯೋಗ. ಪ್ರತಿ ಮಾತೂ ಕೋಟಿ ಚಿಂತನೆಗಳನ್ನು ಸಾಧ್ಯವಾಗಿಸುವ ಒಂದು ಸಂಜ್ಞೆ.
ಆಗ ನೆಲದ ಮರೆಯ ನಿಧಾನವಾಗುವುದು, ತಿಲದ ಮರೆಯ ತೈಲವಾಗುವುದು, ನೀರಿನೊಳಗಿನ ಬೆಂಕಿಯಾಗುವುದು ಹೀಗೆ,
ಬಾಹ್ಯಕ್ಕೆ ವಿರುದ್ಧ ಕಂಡೂ ಅಂತರಂಗದಲ್ಲಿ ಆಳವಾಗುವುದು. ಅಂತರಂಗದ ಆಳವೇ ಆಗುವುದು. ಕೊನೆಗೆ ಶೂನ್ಯವಾಗುವುದು
ಸಾಧಕನ ಭಾಷೆಯಾಗುತ್ತದೆ. ಇಲ್ಲದೇ ಹೋದಲ್ಲಿ ಬರೀ ಬೇರಾಗ, ಅಪದ್ಧ ಚಿಂತನೆ.
ಶರಣ ಸಾಹಿತ್ಯದಲ್ಲಿ
ನನ್ನ ಕಾಡುವ ಒಂದು ಸಾಲು, ‘ಬೆಂಕಿಯಲ್ಲಿ ಬೈಚಿಟ್ಟ ಕೋಲು’. ಕಾರಣ, ನಿಸ್ಸತ್ವವೂ ಸತ್ವವಾಗುವ, ಶಕ್ತಿಯಾಗುವ,
ತತ್ವವಾಗುವ ಅದರೊಳಗಣ ಪ್ರಕ್ರಿಯೆ. ಗುರುಗಳಾದ ಡಾ. ಆರ್.ಕೆ ಕುಲಕರ್ಣಿಯವರ ‘ಕಾಲಮೀಮಾಂಸೆ’ ಓದುತ್ತಿರುವಂತೆ ಶರಣರ ಈ
ಸಾಲು ಮತ್ತಷ್ಟು ನನ್ನ ಮನಸ್ಸನ್ನು ಬೇಟೆಯಾಡಿ ಹೈರಾಣಾಗಿಸಿಬಿಟ್ಟತು. ಒಂದು ಕ್ಷಣ ಇಡೀ ಈ ಭೌತ ಪ್ರಪಂಚ
ಕಾಲವೆಂಬ ಶಕ್ತಿಸ್ವರೂಪಿ ಬೆಂಕಿಯಲ್ಲಿ ಬೈಚಿಟ್ಟ ಕೋಲಿನಂತೆ ಗೋಚರಿಸಲಾರಂಭಿಸಿತು. ಕಾಲವನ್ನು ಅಳೆಯುವ
ಮಾನದಂಡಗಳೆಲ್ಲ ದೂರಾಗಿ, ಕಳೆದ ವರ್ಷ, ಉಳಿದ ವರ್ಷಗಳ ಆಲೋಚನೆಗಳಿಂದ ಅತೀಥನಾಗಿ, ಕಾಲದ ಮನೆಯ ಕ್ಷಣದ
ಅತೀಥಿಯಾದ ನಾನು ಈ ಕುರಿತು ಏನನ್ನು? ಎಷ್ಟನ್ನು? ದಕ್ಕಿಸಿಕೊಳ್ಳಲು ಸಾಧ್ಯ ಎಂದು ಧ್ಯಾನಿಸುವಂತಾಗಿಸಿದೆ.
ನನ್ನ ಅನುಭವದ ವ್ಯಾಪ್ತಿಯಲ್ಲಿ ಹೇಳುವುದಾದರೆ ಇದು ಓದಿಡುವ ಪುಸ್ತಕವಲ್ಲ ಧ್ಯಾನಿಸುವ ಪುಸ್ತಕ. ಇಲ್ಲದೇ
ಹೋದಲ್ಲಿ ಫ್ರಾನ್ಸಸ್ ಥಾಂಪ್ಸನ್‍ನ ಕವಿತೆಗೆ ವಿಮರ್ಶಕರು ಎಳೆದ ಎಡವಟ್ಟಿನ ಷರಾವನ್ನೇ ನಾವೂ ಎಳೆಯುವ
ಸಾಧ್ಯತೆಗಳಿವೆ.
ನನ್ನನ್ನು ಕಾಡಿದ
ಲೇಖಕರುಗಳಲ್ಲಿ ಡಾ. ಆರ್.ಕೆ ಕುಲಕರ್ಣಿಯವರೂ ಒಬ್ಬರು. ಅಚ್ಚರಿಯ ಸಂಗತಿ ಏನಲ್ಲ. ಕುತೂಹಲದ ವಿಚಾರವಾಗಬಹುದಷ್ಟೆ.
ಇವರು ಲೇಖಕರಾಗಿ ನನ್ನನ್ನು ಕಾಡಲಾರಂಭಿಸಿದಾಗ ಒಂದೇ ಒಂದು ಪುಸ್ತಕವನ್ನೂ ಅವರು ಬರೆದಿರಲಿಲ್ಲ. ನನ್ನ
ಬಿ.ಎ ದಿನಗಳಲ್ಲಿ ಕಾಲೇಜಿನ ಮೊದಲ ಪಾಠವಾಗಿ ಇಡಿಯಾಗಿ ನಿಲ್ಲುತ್ತಿದ್ದ ಅವರನ್ನು ನೋಡುತ್ತಿದ್ದರೆ
ನನಗೆ ಸಾವಿರ ಗ್ರಂಥಗಳ ಅನುಭವ, ನೂರು ಗುರುಗಳ ದರ್ಶನ, ಹಲವು ಸಂಸ್ಕ್ರತಿಗಳೊಂದಿಗೆ ಸಾಮಿಪ್ಯ ಸಾಧ್ಯವಾಗುತ್ತಿತ್ತು.
ಇಡಿಯಾಗಿದ್ದ ಅವರನ್ನು ಹಳ್ಳಿಯಿಂದ ಸಾಹಿತ್ಯದ ದೊಡ್ಡ ಹಿನ್ನಲೆಯಿಂದ ಬಂದಿರದ ನಾನು ಹಿಡಿಹಿಡಿಯಾಗಿ
ತುಂಬಿಕೊಳ್ಳಲು ಬಹಳ ಪ್ರಯಾಸಪಡುತ್ತಿದ್ದೆ. ಧೋ ಎಂದು ಸುರಿಯುವ ಮಳೆಗೆ ಕೆಲವೊಮ್ಮೆ ನೆಲಕ್ಕೆ ನೀರು
ಎಷ್ಟು ಪ್ರಮಾಣದಲ್ಲಿ ಬೇಕಾಗುತ್ತದೆ ಎಂಬುದರ ತಿಳುವಳಿಕೆ ಇರುವುದಿಲ್ಲ. ಅದು ಬಯಲು ಭೌತಗಳ ಮಧ್ಯದ
ಮಲ್ಲಯುದ್ಧ. ಆದರೆ ನೆಲವೂ ಅಲ್ಲದ, ಅತ್ತ ನಭವೂ ಇಲ್ಲದ ನಮ್ಮಂಥ ಹಳ್ಳಿಯ ಹುಡುಗರು ಈ ನೆಲ-ಮುಗಿಲುಗಳ
ಗುದ್ದಾಟದಲ್ಲಿ ಗುಬ್ಬಚ್ಚಿಯಂತೆ ತೊಯ್ದು ತಪ್ಪಡಿಯಾಗಿ ಅಜಾರಿಗೆ ಬೀಳುತ್ತಿದ್ದೆವು.
ನೂರು ಕೃತಿಗಳನ್ನು
ನಮ್ಮಂಥ ವಿದ್ಯಾರ್ಥಿಗಳ ಮಸ್ತಕದಲ್ಲಿ ಮುಖವಾಣಿಯ ಮುಖಾಂತರ, ದಿಟ್ಟ ನಿಲುವು, ನೇರ ದೃಷ್ಟಿ, ಸ್ಪಷ್ಟ
ಉಚ್ಛಾರ, ಭಾಷೆಯ ವ್ಯಾಕರಣಬದ್ಧ ಗಡಿಗಳನ್ನು ಗೌರವಿಸುತ್ತಲೇ ಅದನ್ನು ಗಾಳಿಗೆ ತೂರಿ ಹೊಸ ಭಾಷೆಯನ್ನು
ಸೃಜಿಸುವ ಸಾಹಿತ್ಯಕ ಸೂಕ್ಷ್ಮತೆಗಳ ಮೂಲಕ ತಿಳಿಸುತ್ತಿದ್ದ ಅವರು ಆಗಲೇ ಮಹಾನ್ ಲೇಖಕರಾಗಿದ್ದರು ಎನ್ನುವುದಕ್ಕೆ
ಒಂದು ಸಣ್ಣ ಸಾಕ್ಷಿ ಈ ‘ಕಾಲಮೀಮಾಂಸೆ’. ಈಗಲೂ ಅಷ್ಟೆ, ಇಂಥವರು ನನ್ನ ಗುರುಗಳು ಎನ್ನುವ ಗರ್ವ ಮತ್ತು
ಅಭಿಮಾನ ಹಾಗೂ ಸಾತ್ವಿಕ ಸೊಕ್ಕಿನ ಹಿನ್ನಲೆಯಾಗಿ ಕಾಡುತ್ತಾರೆಯೇ ವಿನಃ ನನಗಿನ್ನೂ ಅವರು ದಕ್ಕಲಿಲ್ಲವೆಂದೇ
ಹೇಳಬೇಕು.
ನನಗವರ ಚರ್ಚೆಯ
ವಿಷಯ-ವಸ್ತುಗಳ ಆಯ್ಕೆಯೇ ಒಂದು ವಿಸ್ಮಯ. ಬಹಳ ದೊಡ್ಡದ್ದನ್ನು ಸದಾ ಅವರಿಂದ ನನ್ನ ಕಾಲೇಜು ದಿನಗಳಿಂದಲೂ
ಕೇಳಿ ಆನಂದಿಸುತ್ತಿದ್ದೆ. ಮಿಲ್ಟನ್, ಜಾನಸನ್, ಬಾಸ್‍ವೆಲ್, ಶೆಕ್ಸ್‍ಪೀಯರ್, ಡಾಂಟೆ, ನೀಷೆ, ಎಲಿಯಟ್,
ಅರಬಿಂದೊ, ರಾನಡೆ, ಕಾಳಿದಾಸ, ಭಾಸ, ಬೇಂದ್ರೆಯಂಥವರ ಬರಹದ ಸೂಕ್ಷ್ಮತೆಗಳನ್ನು, ಅಪರೂಪದ ಅಂತರ್‍ಶಿಸ್ತಿನಿಂದ
ಬೋಧಿಸುತ್ತಿದ್ದ ಅವರನ್ನು ಕೆಲವೊಮ್ಮೆ ಇಡಿಯಾಗಿ ಆಸ್ವಾದಿಸಲು ಹೋಗಿ, ಆ ಆಹಾರ ಜೀರ್ಣವಾಗದೆ ಗಾಳಿಯಲ್ಲಿ
ಕೈಯಾಡಿಸಿದ, ಅಬ್ಬಾ! ಈ ದಿನಕ್ಕೆ ಇದೊಂದೇ ಪಾಠ ಸಾಕೆಂದು ಓಡಿ ರೂಮಿಗೆ ಬಂದ, ಮತ್ತೆ ಕೆಲವೊಮ್ಮೆ ಒಂದು
ಮೂಲ ತಿಳುವಳಿಕೆಯೂ ಇಲ್ಲದೆ ಇವರ ಪಾಠಗಳನ್ನು ಹಾಜರಾಗುವುದೇ ಅಧ್ಯಯನದ ಒಂದು ತಪ್ಪು ಕ್ರಮ ಎಂದು ಪಾಠಗಳನ್ನೇ
ತಪ್ಪಿಸಿದ ಸಾಕಷ್ಟು ಉದಾಹರಣೆಗಳಿವೆ. ಆದರೆ ಆ ಕುರಿತು ಬೇಸರಗಳಿಲ್ಲ. ಅರಿವಿಗೆ ನಿಲುಕದ ಜ್ಞಾನಕ್ಕೆ
ಅನಿವಾರ್ಯ ಎನ್ನುವಂತೆ ಕುಳಿತು ಅನಾಧರಿಸುವ, ಬೇಸರಿಸುವ ಬದಲು, ಸಿಕ್ಕಷ್ಟೇ ಜ್ಞಾನವನ್ನು ಶೃದ್ಧೆಯಿಂದ
ಕುಳಿತು ಅನುಭವಿಸಲು, ಸಮಾವಿಷ್ಠಗೊಳಿಸಿಕೊಳ್ಳಲು ಯತ್ನಿಸುವುದು ಪ್ರಾಮಾಣಿಕ ಕ್ರಮ ಎಂದುಕೊಂಡವನು ನಾನು.
ಹೀಗಾಗಿಯೇ ದಕ್ಕದ ಈ ಗುರುಗಳು ಒಂದು ಸರಿಯಾದ ದಿಕ್ಕಾಗಿಯಾದರೂ ಇಂದು ನನ್ನ ಆಸ್ತಿಯಾಗಿದ್ದಾರೆ. ನನ್ನ
ಮುಂದಿನ ಗುರಿಯಾಗಿದ್ದಾರೆ.
ಕಾಳ ಕತ್ತಲೆಯಲ್ಲಿ
ಕಡಲೊಳಗೆ ಪಯಣಿಸುವ ಒಂಟಿ ಮನುಷ್ಯನ ಕಲ್ಪನೆಯೊಂದನ್ನು ಮುಂದಿರಿಸಿಕೊಂಡು ಜೀವನದ ಎಂಬತ್ತೊಂದನೆ ವಯಸ್ಸಿನಲ್ಲಿ
ಕವಿ ಅಲ್ಪ್ರೆಡ್ ಟೆನ್ನಿಸನ್ ತನ್ನ ದೀರ್ಘ ಅನಾರೋಗ್ಯದ ನಂತರ ಒಂದು ಕವಿತೆ ಬರೆದ. ಅದರೊಳಗಿನ ಎರಡು
ಸಾಲುಗಳು ಹೀಗಿವೆ –
“I hope to see my Pilot face to face
When I have crost the bar”
ಹೀಗೆಂದರೇನು?
ಎಂದು ಟೆನ್ನಿಸನ್‍ನ ಮಗನಿಗೆ ಅರ್ಥವಾಗಲಿಲ್ಲ. ಆಗ ಕವಿ ಹೇಳುತ್ತಾನೆ, ‘ನಮ್ಮ ಬಾಹ್ಯದ ಕಣ್ಣುಗಳಿಗೆ
ಗೋಚರಿಸದ ಸರ್ವನಿಯಾಮಕನೊಬ್ಬ ಸದಾ ನಮ್ಮೊಂದಿಗಿರುತ್ತಾನೆ. ಸುಮ್ಮನಿರುತ್ತಾನೆ ಆತ. ಈ ನನ್ನ ಬಾಳ ದೋಣಿಯಲ್ಲೂ
ಆತ ನನ್ನೆದುರೇ ಕುಳಿತುಕೊಂಡಿದ್ದ. ದಿಕ್ಕು ತಪ್ಪಿಸುವ ಬಿರುಗಾಳಿ, ಮಳೆಗಳಿಂದ ನನ್ನನ್ನು ರಕ್ಷಿಸಿ
ಮುನ್ನಡೆಸುತ್ತಿದ್ದ. ಆದರೆ ಎಂಥ ಕತ್ತಲೆಯಂತೀಯಾ, ವರ್ಷಗಳವರೆಗೂ ಆತನ ಮುಖವೇ ಕಂಡಿರಲಿಲ್ಲ. ನಾನೇ,
ನಾನೊಬ್ಬನೇ ಈ ದೋಣಿಯನ್ನು ಮುನ್ನಡೆಸುತ್ತಿದ್ದೇನೆನ್ನುವ ಭ್ರಮೆಯಲ್ಲಿದ್ದೆ, ಹುಚ್ಚಿನಲ್ಲಿದ್ದೆ.
ಈಗ ಆ ಹುಚ್ಚು ತಿಳಿಗೊಂಡಿದೆ. ಹೀಗಾಗಿ ಕಾಣದವನ ಆತನ ಕುರಿತು ಹಾಡಿಕೊಂಡಿದ್ದೇನೆ.’
ಈ ಉದಾಹರಣೆಯನ್ನು
ಡಾ. ಆರ್.ಕೆ.ಕೆ ರವರ ಕೃತಿಗೊಂದು ಉತ್ತಮ ಪ್ರವೇಶಿಕೆ ಎಂದುಕೊಂಡಿದ್ದೇನೆ. ಆತ್ಮ, ದೇವರು ಮತ್ತು ಕಾಲ
ಎಂಬ ಮುಖಗಳನ್ನು ಮುಂದಿರಿಸಿಕೊಂಡು ಕಾಲಮೀಮಾಂಸೆಯನ್ನು ಗ್ರಹಿಸಲು ಯತ್ನಿಸಿದ ನನಗೆ ಈ ಕಥೆ ಸರಿಯಾದ
ಮಾರ್ಗ ಎನ್ನಿಸಿದೆ. ಯಾಕೆಂದರೆ, ಲೇಖಕರು ಕೃತಿಯುದ್ದಕ್ಕೂ ಮೀಮಾಂಸೆಗೊಳಪಡಿಸಿದ್ದು ಇಂಥ ಶಕ್ತಿಯನ್ನೆ.
ಅಂದಹಾಗೆ, ‘ಕಾಲಮೀಮಾಂಸೆ’
ಡಾ. ಆರ್.ಕೆ ಕುಲಕರ್ಣಿಯವರೇ ಬರೆಯಬಹುದಾದ ಕೃತಿ. ನಿವೃತ್ತಿಯ ನಂತರ ಸಂಶೋಧನೆಯನ್ನು ಪೂರೈಸಿದ ಅವರು
ವೃತ್ತಿಯಾರಂಭದ ದಿನಗಳಲ್ಲಿ ಸಂಶೋಧನೆಯಲ್ಲಿಯೇ ತೊಡಗಿದ್ದರು. ಮಧ್ಯದಲ್ಲಿಯೂ ಅಷ್ಟೆ, ಶ್ರೀಮತಿಯವರ
ದೇಹಾರೋಗ್ಯದಲ್ಲಿ ಏರಿಳಿತಗಳಾದ ಕಾರಣ, ಅವರ ಶೋಧದ ಪರಿಕರಗಳು ಬದಲಾದವೇ ವಿನಃ ಶೋಧ ನಿರಂತರವಾಗಿತ್ತು.
ಅದೊಂದು ಈ ರೀತಿಯ ವಿನಾಕಾರಣ ಕಾರಣವಾದುದರಿಂದ ‘ಕಾಲ’ದಂಥ ‘ಕರಿ’ಯನೇರುವ ಸಾಹಸಕ್ಕೆ ಅವರನ್ನೆಳೆಸಿತು
ಎಂದು ನನ್ನ ಗ್ರಹಿಕೆ. ಹಿಮಾಲಯ ಹತ್ತುವವನಿಗೆ ಆಯುಷ್ಯದಷ್ಟೇ ಅವಶ್ಯವಾದುದು ‘ಹತ್ತುತ್ತೇನೆ’ ಎಂಬ
ವಿನಯದ ನಿತ್ಯ ನಿರಂತರ ಭರವಸೆ. ಈ ಭರವಸೆಯನ್ನು ಸದಾ ನಾನು ಡಾ. ಆರ್.ಕೆ.ಕೆ ಅವರ ವ್ಯಕ್ತಿತ್ವದ ಜೀವಾಳದಂತೆ
ಗಮನಿಸಿದ್ದೇನೆ.
ಕಾಲ ಚಿಂತನೆ
ಕಾಲದ ವ್ಯಾಪ್ತಿಯಲ್ಲಿರುವವರಿಗೆಲ್ಲ ಕಾಳಜಿಯಾಗಿ, ಕಗ್ಗಂಟಾಗಿ, ಕೊನೆ ಹಾಯಿಸಲಾಗದ ಕಡಲಾಗಿ, ತಿಳಿವಿಲ್ಲದ
ತಳಮಳವಾಗಿ, ಸಾವಾಗಿ, ಮತ್ತೆ ಕೆಲವರಿಗೆ ಸಂಜೀವಿನಿಯಾಗಿ, ಎಲ್ಲ ಮಿಕ್ಕಿ ದೇವರಾಗಿ, ಸಾಕ್ಷಿಯಾಗಿ ವ್ಯಾಪಿಸಿರುವ
ಪರಿಗೊಂದು ಅಭಿವ್ಯಕ್ತ ಸಾಧ್ಯತ ಈ ಕೃತಿ.
ವೇದದಿಂದ ವರ್ತಮಾನದವರೆಗೆ,
ದೇಹದಿಂದ ಆತ್ಮದವರೆಗೆ, ವಾಣಿಯಿಂದ ಭವಿಷ್ಯದ್ವಾಣಿಯವರೆಗೆ, ಸಂಖ್ಯೆಯಿಂದ ಅಸಂಖ್ಯೆಯವರೆಗೆ, ವಿನಾಶಿಯಿಂದ
ಅವಿನಾಶಿಯವರೆಗೆ, ಅಂತರ್-ಬಹಿರಂಗದಿಂದ ಸೀಮಾತೀತದವರೆಗೆ, ಘನದಿಂದ ಮಹಾಘನದೆಡೆಗೆ ಸರಿದು ನಿರ್ಬಯಲಾಗುವವರೆಗೆ
ವಿವರಿಸುವ, ದಾಖಲಿಸಲು ಯತ್ನಿಸುವ ಡಾ. ಆರ್.ಕೆ.ಕೆ ಈ ಕೃತಿಯಲ್ಲಿ ಮಾತನಾಡುತ್ತಿರುವುದು ಕಾಲವನ್ನು
ಕುರಿತು ಎಂದು ನಾವು ಹೇಳಿಬಿಡುವುದಾದರೆ ಇದನ್ನು ನಾವು ಸರಿಯಾಗಿ ಓದಲಿಲ್ಲವೆಂದೇ ಹೇಳಬೇಕು.
ಮಹಾ ಬೆಳಕಿನ
ಸನ್ನಿಧಿಯಲ್ಲಿ ಕೆಲವು ಬಾರಿ ಗೋಚರ ಸತ್ಯಗಳು ಕಾಣದೇ ಹೋಗುತ್ತವೆ. ಅದು ಬೆಳಕಿನ ತೀವ್ರ ಪ್ರಭಾವವೇ
ವಿನಃ ಸತ್ಯದ ಅಸ್ತಿತ್ವಹೀನತೆಯಲ್ಲ. ಕಾಲವೆಂಬ ಪ್ರಖರ ಚಿಂತನೆಯಲ್ಲಿ ಕೆಲವು ಸತ್ಯಗಳು ಇಲ್ಲಿ ನೆಪತ್ಯಕ್ಕೆ
ಸರಿದುಕೊಂಡಿವೆ, ನಿರ್ನಾಮವಾಗಿಲ್ಲ.
ಕೃತಿ ನನ್ನನ್ನು
ತಬ್ಬಿಬ್ಬುಗೊಳಿಸುವುದು ಕಾಲ ಕುರಿತಾದ ಘನಗಂಭೀರ ಚಿಂತನೆಯಿಂದಷ್ಟೇ ಅಲ್ಲ, ಬದಲಾಗಿ ಅದರ ಒಳದೋಟಿಯೊಳಗೆ
ವಿಶದಿಸುವ ಹಲವು ಲೌಖಿಕ ಲೆಕ್ಕಾಚಾರ ಹಾಗೂ ಪಾರಮಾರ್ಥಿಕ ಹೊಳಹುಗಳಿಂದಾಗಿ. ಆದರೆ ಎಲ್ಲಿಯೂ ಅವು ಪರಸ್ಪರ
ಬೆಸುಗೆಯನ್ನು ಕಳೆದುಕೊಂಡು ಭಿನ್ನವಾಗಿ ನಿಲ್ಲುವುದಿಲ್ಲ. ಸುಮ್ಮನೆ ಒಮ್ಮೆ ಪರಿವಿಡಿಯನ್ನು ನೋಡಿದರೂ
ಸಾಕು. ನಮ್ಮ ಅಧ್ಯಯನದ ಶಿಸ್ತಿಗೆ ಛಿದ್ರವಾಗಿರುವ, ಬೇರ್ಪಡಿಸಿಟ್ಟಂತೆ ಕಾಣುವ ಕಾಲ ಕೃತಿಯುದ್ದಕ್ಕೂ
ಕಾಲಾತೀತತೆಯನ್ನೇ ಪ್ರತಿಪಾದಿಸುತ್ತದೆ. ಕೊನೆಗೆ ಇಂಥ ಅಖಂಡವನ್ನೆಳೆದುಕೊಂಡು ಅಂತರಂಗದ ಆವರಣದಂತೆ
ಸ್ಥಾಪಿಸಿಕೊಂಡ ಸಾಧಕರ, ಸಿದ್ಧಿಪುರುಷರ ಓದಿದಾಗಲಂತೂ ದಿಕ್ಕು ತೋಚದೆ ನಾನು ಸುಮ್ಮನೆ ಕುಳಿತುಬಿಟ್ಟಿದ್ದೇನೆ.
ನನ್ನ ಗುರುಗಳು
ಆರೋಗ್ಯ ಮತ್ತು ಪ್ರತಿಭಾ ಸಂಪನ್ನರು. ಪುಣ್ಯವಾದುದನ್ನೆ ಮುಟ್ಟಿ ನಮ್ಮಂಥವರ ಪಾಲಿನ ಪರುಷವಾದವರು,
ಹರುಷವಾದವರು. ಈ ಕೃತಿಯನ್ನು ಓದಿದ ನಂತರ ನನ್ನ ಓದು ಎಲ್ಲೋ ಒಂದಿಷ್ಟು ವ್ಯರ್ಥವಾದುದುರೆಡೆಗೆ ಹರಿದು
ನಿರರ್ಥಕವಾಯಿತು ಎನ್ನಿಸಿದೆ. ಆಗಲೂ ಈಗಲೂ ನನ್ನಲ್ಲಿ ಈರ್ಷೆ ಹುಟ್ಟಿಸಿದ ಚಿಂತಕರಿವರು. ಯಾವುದನ್ನು
ಚಿಂತಿಸುವುದರಿಂದ ಬುದ್ಧರಾಗಲು ಸಾಧ್ಯವೆಂದು ಅವರು ಸದಾ ಹೇಳುತ್ತ ಬಂದವರು. ಈ ‘ಕಾಲಮೀಮಾಂಸೆ’ಯುದ್ದಕ್ಕೂ
ಅವರು ಇದೇ ಘಟಿಸುವಿಕೆಯ ಪೂರ್ವ ತಯ್ಯಾರಿಯ ಮಾರ್ಗಗಳನ್ನು ಸೂಚಿಸುತ್ತಾರೆ. ಸೂಚನೆಗಳನ್ನರಿತವರಿಗೆ
ಈ ಬದುಕಿನ ಸಂತೃಪ್ತಿಯೂ ಸಾಧ್ಯವಿದೆ.
‘ಕಾಲಮೀಮಾಂಸೆ’
ಸಂಶೋಧನೆಯ ಎಲ್ಲ ಶಿಸ್ತನ್ನು, ಬರಹದ ಗಾಂಭೀರ್ಯತೆಯನ್ನು ಡಾ. ಆರ್.ಕೆ.ಕೆಯವರ ಜೀವನ ಶ್ರದ್ಧೆ ಹಾಗೂ
ಬದ್ಧತೆಗಳನ್ನು, ಅಚಲ ವಿಶ್ವಾಸದ ನಿಲುವನ್ನು ಸಮೀಕರಿಸಿಕೊಂಡ ಅಪರೂಪದ ಕೃತಿ. ಇದು ನಮ್ಮ ಭೂತ, ವರ್ತಮಾನ
ಮತ್ತು ಭವಿಷ್ಯತ್ ಪ್ರಪಂಚಕ್ಕೆ ತೆರೆದುಕೊಂಡ ಕನಕನ ಕಿಂಡಿ.
ವರದಿ ಮತ್ತು
ದಾಖಲೆಗಳ ಮಧ್ಯ ಒದ್ದಾಡುವ ನಮ್ಮ ಸಂಶೋಧನೆಗಳಿಗೆ ಬಹಳಷ್ಟು ಸಾರಿ ಜೀವಂತಿಕೆಯ, ಆಲೋಚನೆಗಳ ಲವಲವಿಕೆಯ
ಲಕ್ಷಣಗಳಿರುವುದಿಲ್ಲ. ಅಪರೂಪಕ್ಕೆನ್ನುವಂತೆ ಅವು ಕೆಲವೊಮ್ಮೆ ಮೇಳೈಸುತ್ತವೆ. ಆ ಮೇಳೈಕೆ ‘ಕಾಲಮೀಮಾಂಸೆ’ಯಲ್ಲಿ
ಸಾಧ್ಯವಾಗಿದೆ. ಹೀಗಾಗಿ ಪೂರ್ವ-ಪಶ್ಚಿಮಗಳ ವಿಚಾರಗಳೆಲ್ಲ ಸೇರಿದ ಮಹಾ ಕುಂಭ ಮೇಳದಂತೆ ಈ ಕೃತಿಯ ಸೊಗಸು
ನನಗೆ ದಕ್ಕಿದೆ. ಇಲ್ಲಿ ಎಚ್ಚರಾಗಿದ್ದವರಿಗೆ ಎಲ್ಲವೂ ಸಾಧ್ಯ. ಅಂತಿಮವಾಗಿ ಮಹಾಬೋಧಿಯು.
ಮತ್ತೆ ನನ್ನ
ಓದಿನ ದೋಣಿ ಸವಾರಿ ಮಾಡಿ, ಸುಳಿಗಳಿಂದ ಸರಳತೆ ಎಡೆಗೆ ಮೊಗ ಮಾಡಿಸಿದ, ಕನ್ನಡ ಸಾರಸ್ವತಲೋಕಕ್ಕೊಂದು
ಅದ್ಭುತ ಕೃತಿ ನೀಡಿದ ಗುರುಗಳಿಗೆ ಅಭಿನಂದನೆ ಮತ್ತು ವಂದನೆ.
28.11.2014 ಡಾ. ರಾಜಶೇಖರ
ಮಠಪತಿ(ರಾಗಂ)
ಕನಕದಾಸ
ಜಯಂತಿ
ಬೆಂಗಳೂರು
No comments:
Post a Comment