ಪ್ರತಿ ಕವಿತೆಯೂ ಉಲ್ಲಂಘನೆಯೇ. ಆದರೆ ನಮ್ಮ ಎಲ್ಲ ಉಲ್ಲಂಘನೆಗಳ
ಒಡಲಲ್ಲಿ ಕವಿತೆ ಇರುತ್ತದೆ ಎನ್ನುವ ಭರವಸೆ ಇಲ್ಲ. ಹಲವು ದೈಹಿಕ ಮತ್ತು ಭಾವನಾತ್ಮಕ ಉಲ್ಲಂಘನೆಗಳು
ಆತ್ಮದ ನಿರಂತರ ಶೋಕಕ್ಕೆ ಕಾರಣವಾಗುವ ಅಪಾಯಗಳಿವೆ.
-
ರಾಗಂ
10 ಅಕ್ಟೋಬರ್, 2015 ರಂದು ಗದಗ ಜಿಲ್ಲಾ
ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಆಶಯ ನುಡಿಗಳನ್ನು ನುಡಿಯುವುದಕ್ಕಾಗಿ ನಾನು ಅಲ್ಲಿಗೆ ಹೋದ
ಸಂದರ್ಭ. ಗುಂಪುಗಳಲ್ಲಿ ಬಂದು ಸಾಹಿತಿ ಮಿತ್ರರು ಭೇಟಿಯಾಗುತ್ತಿದ್ದರು. ಇನ್ನೇನು ಲಾಜ್‍ನಿಂದ ವೇದಿಕೆಯತ್ತ
ಹೊರಡಬೇಕು ಕವಿಮಿತ್ರ ಎ.ಎಸ್. ಮಕಾಂದಾರರು ಭೇಟಿಗೆ ಬಂದರು. ‘ಸಂಯುಕ್ತ ಕರ್ನಾಟಕ’ದಲ್ಲಿ ಅನೇಕ ಸಾರಿ
ಇವರ ಕವಿತೆಗಳನ್ನು ಓದಿದ್ದ ನಾನು ಬಹುತೇಕ ಇವರು ನಮ್ಮ ಇಂಡಿ, ಬಿಜಾಪುರದವರಾಗಿರಬಹುದು ಎಂದುಕೊಂಡಿದ್ದೆ.
ಆದರೆ ಇವರು ಮಹಾಕವಿ ಲಕ್ಷ್ಮಿಶನ ನಾಡಾದ ಗದಗಿನವರು. ಕಾವ್ಯಕೃಷಿಯಲ್ಲಿ ಅತ್ಯಂತ ಗಂಭೀರವಾಗಿ ತೊಡಗಿಕೊಂಡವರೆಂದು
ತಿಳಿದು ಸಂತೋಷವಾಯಿತು. ಒಂದಿಷ್ಟು ಮಾತಾಯಿತು. ಅಂದಿನ ಆ ಮಾತೇ ಇಂದು ಅವರ ಕಾವ್ಯ ಸಂಕಲನವಾದ ‘ಕಾಣೆಯಾದ
ಇನಿಯ’ದೊಳಗೊಂದು ವಿಹಾರ ಮಾಡಲು ಕಾರಣವಾಯಿತು.
ನನಗಿಷ್ಟವಾದ
ಅವರ ಸಂಕಲನದ ಈ ಪದ್ಯಗಳನ್ನು ಓದಿ -
ಗರ್ಭ ಗುಡಿಯ
ಹಂಗು ತೊರೆದು ಹಾಕು
ಗಂಧ ಗಾಳಿಯಾಗಲು
ನನ್ನ ಜೋಪಡಿ ಸುತ್ತ ಹೆಜ್ಜೆ ಹಾಕು . . . .
ಬಹುದಿನಗಳಿಂದ
ಕಾಣೆಯಾದ ನನ್ನಿನಿಯ
ನಿಮಗೆಲ್ಲಿಯಾದರೂ
ಸಿಕ್ಕರೆ ಹುಡುಕಿ ಕೊಡಿ
ಬುದ್ಧನೊಂದಿಗೆ
ಬೋಧಿವೃಕ್ಷದ ಕೆಳಗಡೆಯೂ ಕಳಿತಿಲ್ಲ
ಭಾಗೀರಥಿಯ ಬಳಿಗೂ
ಬಂದಿಲ್ಲ
ಅಶೋಕ ವನದ ನರಳಲಿಲ್ಲ
ಸಾಕಿಯ ಸನಿಹಕೂ
ಸುಳಿದಿಲ್ಲ
ಕದಳಿಗೂ ಕಾಲಿಟ್ಟಿಲ್ಲ
. . . .
ಯಾರಬ್
ನಾ
ಬರೆದ ಕವಿತೆ
ಓದಿದವಳು
ಅವಳೊಬ್ಬಳೆ
ಒಲವ
ಸಾಗರದಲ್ಲಿ
ಮಿಂದವಳೂ
ಅವಳೆ
ಜೀವನದುದ್ದಕ್ಕೂ
ತನ್ನ ಗುಡಿಸಲಿನ
ಚಿಮಣಿಗೆ ಎಣ್ಣೆ
ಹಾಕದೆ
ನಿತ್ಯ ಹಲವು
ಮೆರವಣಿಗೆಗಳಿಗೆ
ಹಿಲಾಲು ಹಿಡಿಯುತ್ತಿದ್ದ
ನನ್ನಪ್ಪ
ಭಾವ
ತೀವ್ರತೆಯೊಂದಿಗೆ ಜೀವನ ಪ್ರೀತಿಯನ್ನೂ ಬೆರೆಸಿ ಕಾವ್ಯ ಹೊಸೆಯುವ ಎ.ಎಸ್. ಮಕಾಂದಾರ ನಮ್ಮ ಮಧ್ಯದ ಸೂಫಿ.
ಭಗವಂತ, ಯಾರಬ್, ಹಕೀಂ, ಕನಕ. ಶರೀಫ, ಪುಟ್ಟರಾಜರುಗಳ ಗುಲ್‍ಮೊಹರ್ ಸಾಮ್ರಾಜ್ಯದಲ್ಲಿ ಕನಸುಗಣ್ಣು
ಹೊತ್ತು ಕಾವ್ಯ ಕಟ್ಟುತ್ತ –
ನನ್ನ ಕಾವ್ಯದ
ಹಣೆಯ ಮೇಲೆ
ಕುಂಕುಮ-ಭಂಡಾರ
ವಿಭೂತಿ-ಶ್ರೀಗಂಧದ
ಲೇಪನವಿಲ್ಲ
ನನ್ನ ಕಾವ್ಯದ
ಕೊರಳಲ್ಲಿ
ಶಿವದಾರ-ಜನಿವಾರ
ಲಿಂಗಗಳಿಲ್ಲ
ನನ್ನ ಕಾವ್ಯದ
ಮುಂಗೈಯೊಳಗೆ
ಆ ದಾರ-ಈ ದಾರ
ಆಧಾರಗಳಿಲ್ಲ
– ಎಂದು ಸಾರುತ್ತಲೇ ಯಾವುದು ಕಾವ್ಯ? ಅದರ ಗಂತವ್ಯವೇನು? ಎನ್ನುವ ಪ್ರಶ್ನೆಗಳನ್ನೊಡ್ಡುತ್ತಾರೆ. ಜೊತೆಗೆ
ಈ ಪ್ರಶ್ನೆಗಳಲ್ಲಿಯೇ ಉತ್ತರಗಳನ್ನು ನೀಡುತ್ತಾರೆ. ಒಂದೆಡೆ ಅವರೇ ಬರೆಯುತ್ತಾರೆ ಕವಿತೆ ಮತ್ತೇನೂ
ಅಲ್ಲ ‘ಮೌನದ ಮೊಟ್ಟೆಯೊಡೆದು ಹುಟ್ಟಿದ ಕೋಟಿ-ಕೋಟಿ ನೋವಿನ ಧ್ವನಿ’ ಇದು ಶಬ್ಧಶಃ ಸತ್ಯ. ಅಪ್ಪನ ತಲೆಯ
ಮೇಲಿನ ಹಿಲಾಲ್, ಬರೆದ ಕವಿತೆಗೆ ಭಾರವಾದ ಅವಳು, ಬೋಧಿ-ಕದಳಿಗಳನು ದಾಟಿ ಕಾಣೆಯಾದ ಇನಿಯ. ನಮ್ಮ ಕಾವ್ಯದ
ನಿರಂತರ ಶೋಧವಾಗಿದ್ದಾರೆ. ಕಾವ್ಯದ ಜೀವದ್ರವ್ಯವೇ ಶೋಧ, ಅದು ನಿಂತ ಮರುಕ್ಷಣವೇ ಕಾವ್ಯ ಬತ್ತಿಹೋಗುತ್ತದೆ.
ನೆತ್ತಿಯ ಪಾರಮ್ಯ ಪ್ರಾರಂಭವಾಗುತ್ತದೆ.
‘ಈ ಬದುಕೆಂಬ ಹೆಗಲು ಕೊಡದ ಭುಜದಲಿ ಹುಟ್ಟಿದ
ದಿಗಿಲು’ ಕುರಿತು ಕವಿ ಧ್ಯಾನಿಸಿದ ಪರಿಯ ಪರಿಣಾಮವಾಗಿ ಈ ಸಂಕಲನ ಮೈದಾಳಿದೆ. ಬೌದ್ಧಿಕ ಕಸರತ್ತಿನಿಂದಲೋ
ಕಾವ್ಯದ ಸಾಂಪ್ರದಾಯಿಕ ಗತ್ತಿನಿಂದಲೋ ಹುಟ್ಟಿದ ಕವಿತೆಗಳಾಗಿದ್ದರೆ ಬಹುತೇಕ ನಾನಿವುಗಳ ಕುರಿತು ಬರೆಯುವ
ಅವಶ್ಯಕತೆ ಇರಲಿಲ್ಲ. ಬದಲಾಗಿ ಇವು ಅತ್ಯಂತ ಜೀವನಪರ ಮತ್ತು ಬದುಕಿನ ಲಯ-ತಾಳಗಳ, ಒಳ ಪ್ರಾಸಗಳು. ವಿರುದ್ಧ
ಮುಖಿಯಾಗಿ ಹುಟ್ಟಿ ಸಮರಸದ ಸಂಕೇತಗಳಾಗಿ ನಿಲ್ಲುವ ಕಾರಣ ಇವು ನನ್ನ ಪ್ರೀತಿಯ ಓದಾಗಿವೆ. ತಾನು, ತನ್ನ
ಕವಿತೆ ಓನಾಗಲಿ ಎಂದು ಹಂಬಲಿಸುತ್ತ ಬರೆದ ಅವರ ಈ ಸಾಲುಗಳನ್ನು ಓದಿರಿ –
ಅಕ್ಷರಗಳಾಗಲಿ
ನನ್ನ ಕವಿತೆ
ನಂಜು ಬೇರಾಗಲಿ
ಇಗದ ನಂಜಿಗೆ
ಕವಿತೆ ಸಾರಥಿಯಾಗಲಿ
ಆರು ಕುದುರೆ ರಥಕ್ಕೆ
ರಸಗವಳವಾಗಲಿ
ಪಿಂಚಣಿಗಾಗಿ ಕಾಯುವ ಅಜ್ಜಿಗೆ
ನಿಜವಾದ
ಕವಿತೆಗೊಂದು ಧರ್ಮವಿದೆ. ಹಲವು ಸಾರಿ ಆಳದಲ್ಲಿ ಶುದ್ಧವಾದ ಧರ್ಮ ಕವಿತೆಯೇ ಆಗಿದೆ. ಎರಡರಲ್ಲೂ ಘಟಿಸುವುದು
ಕಾವ್ಯವೆ, ಧ್ಯಾನವೆ ಮತ್ತು ಸಮೀಕರಣವೆ. ಛಿದ್ರವಾಗುವುದನ್ನು ಕಲಿಸುವುದಿಲ್ಲ ಮಕಾಂದಾರರ ಕವಿತೆ. ಅದು
ಅವಿಚ್ಛಿನ್ನತೆಯ ಮಹಾ ಪ್ರಚಾರಕ.
‘ಇನ್ನೂ ಚಂದವಾಗಿ ಕಟ್ಟಬಹುದಿತ್ತು ಕವಿತೆ’
ಎನ್ನುವ ತಹತಹಿಕೆ ಜಾಗೃತವಾಗಿರುವವರೆಗೂ ಕವಿತೆ ಹುಟ್ಟುತ್ತಿರುತ್ತದೆ ಮತ್ತು ಕವಿ ಜಾಗೃತವಾಗಿರುತ್ತಾನೆ.
ಈ ಕಾಳಜಿ ನಿಂತ ಮರುಕ್ಷಣವೇ ಜಾಳಾಗುತ್ತದೆ ಕವಿತೆ, ಬೋಳು ಮರಭೂಮಿಯಾಗುತ್ತದೆ. ಶಬ್ಧಗಳ ಯಂತ್ರಕ್ಕೆ
ಸಿಕ್ಕು ಸದ್ಧಾಗುತ್ತದೆ ಆದರೆ ಮೌನದ ಚಿಪ್ಪಿಗೆ ಬಿದ್ದು ಮಂತ್ರವಾಗುವುದಿಲ್ಲ. ಈ ಅಪಾಯದಿಂದ ತಪ್ಪಿಸಿಕೊಳ್ಳಬೇಕಾದ
ಜರೂರತ್ತಿದೆ ಮಕಾಂದಾರರಿಗೆ.
“ಮದೀನದ ಬೆಳಕು
ಅರಸಲು
ಮೆಕ್ಕಾದ ಮೆಟ್ಟಿಲು
ಚುಂಬಿಸಲು
ಅಪ್ಪ-ಅಮ್ಮ ಬೆಸೆದು
ಬಸಿದ
ತೈಲವನು ಪಣತಿಗೆ
ಹಾಕಿರುವೆ” ಎನ್ನುವ ತನ್ನೀ ಒಲವ ಉಸಿರನ್ನೇ ‘ಆಜಾನ್’ ಹಿಂದಿನ ಉಸಿರಾಗಿಸಿಕೊಂಡು ‘ಸತ್ತಂತಿಹನು ಬಡಿದೆಚ್ಚರಿಸಬೇಕಿದೆ.
ಕಚ್ಚಾಡುವವರನು ಕೂಡಿಸಿ ಒಲಿಸಬೇಕಿದೆ’ ಇಂಥ ಮಂತ್ರ ಅಥವಾ ಬಡಿದಾಡಿ ಸೋತು ಸುಣ್ಣಾಗುವ ಪ್ರಮೇಯ ಈ ಪ್ರಪಂಚಕ್ಕಿರಲಿಲ್ಲವೇನು.
ಗೊತ್ತಿರಲಿ ಯಾವ ಕವಿಯನ್ನು ಧರ್ಮವಾಗಿಸುವತ್ತ ಯತ್ನಿಸಲಿಲ್ಲ ಪುರೋಹಿತ ಜಗತ್ತು. ಹಾಗೊಂದು ವೇಳೆ ಆಗಿದ್ದರೆ
ಅವರ ಅಸ್ತಿತ್ವಗಳೇ ಪ್ರಶ್ನೆಯಾಗುತ್ತಿತ್ತು.
ಪ್ರತಿ ಕವಿತೆಯೂ ಒಂದು ಉಲ್ಲಂಘನೆ ಮತ್ತು
ನವ-ನಿರ್ಮಾಣದ ಹಂಬಲ. ಕವಿತೆಯನ್ನು ಪವಿತ್ರವಾಗಿಸಿದ್ದು ಈ ಹಂಬಲ, ಕಟ್ಟಿಕೊಳ್ಳುವ ಹಂಬಲ. ಪ್ರಪಂಚದ
ಎಲ್ಲ ಚಿಶಾದ ಕವಿತೆಗಳೂ ಈ ಹಂಬಲದ ಸಂಕೇತಗಳೆ. ಶ್ರೀ ಮಕಾಂದಾರರ ಈ ಸಂಕಲನದಲ್ಲಿಯೂ ಇಂಥ ಕನೇಕ ಕವಿತೆಗಳನ್ನು
ಗಮನಿಸಬಹುದಾಗಿದೆ. ಅವರು ಇನ್ನಷ್ಟು ಶ್ರದ್ಧೆಯಿಂದ ಕಳಿತರೆ ಇನ್ನೂ ಒಪ್ಪಗೊಳಿಸಬಹುದಾಗಿದೆ ಕವಿತೆಗಳನ್ನು.
ಕಡಿಮೆ ಪದಗಳ ಬಳಸಿ ಇನ್ನೂ ಹೆಚ್ಚಿನ ಅರ್ಥಲೋಕವನ್ನು ಕಟ್ಟಿಕೊಡಬಹುದಾಗಿದೆ.
ಇಂದು ಕವಿತೆ ಕಟ್ಟಿ ನಾಳೆ ಬಿಡುವ ಕ್ರಿಯೆಯಲ್ಲ.
ಯಾಕೆಂದರೆ ಮೂಲತಃ ಅದೊಂದು ಕ್ರಿಯೆಯೇ ಅಲ್ಲ. ಉಸಿರಾಟವನ್ನು ಕ್ರಿಯೆ ಎಂದುಕೊಳ್ಳುವವರಿಗೆ ಕವಿತೆಯೂ
ಕ್ರಿಯೆಯಾಗಿ ಕಂಡಿತೇನೊ ಆದರೆ ಮಕಾಂದಾರರಿಗೆ ಅಲ್ಲ. ಅದು ಅವರ ಕೊನೆಯುಸಿರಿನವರೆಗೂ ಉಕ್ಕಬೇಕಾದ ಹಾಲು.
ಇದು ನನ್ನ ನಿರೀಕ್ಷೆಯಷ್ಟೇ ಅಲ್ಲ, ಬದಲಾಗಿ ನನ್ನ ಭರವಸೆ.
No comments:
Post a Comment