Total Pageviews

Saturday, December 31, 2016

ಮಾತನಾಡುತ್ತವೆ ಸಮಾಧಿಗಳು



ಸಾವಿನ ಹೊಸ್ತಿಲಲ್ಲಿರುವ ಮುಪ್ಪಿನವರೊಮ್ಮೆಯಾದರೂ ಗಮನಿಸಿದ್ದೀರಾ? ಗಮನಿಸಬೇಕು. ಬಹಳ ಮಜವಾಗಿರುತ್ತದೆ ಅವರ ಸ್ಥಿತಿ. ಎಲ್ಲ ಪೆದ್ದು-ಪೆದ್ದು, ಅಯೋಮಯ, ಅರ್ಥವಾಗದ ಭಾಷೆ, ಮುಪ್ಪಿನ ಮರಭೂಮಿಯಲ್ಲಿ ತರ್ಕದ ಕುದುರೆಗೆ ಹುಲ್ಲು ಸಿಗಲುಂಟೆ?
ಮುಪ್ಪಿನ ಮನೆಯಲ್ಲಿ ಎಲ್ಲ ಮಂಜು-ಮಂಜು, ಮಬ್ಬು-ಮಬ್ಬು ಕಾಲ ಶೂನ್ಯವಾಗಿರುತ್ತದೆ. ಎಲ್ಲದಕ್ಕೂ ನಿದ್ರೆ ಆವರಿಸುತ್ತಿರುತ್ತದೆ. ಮತ್ತೆ ಮಗುನಿನಂತೆ ನಿದ್ರೆಗೆ, ನೆಲದ ಜೋಗುಳಕ್ಕೆ ಹಾತೊರೆಯುತ್ತಿರುತ್ತಾನೆ ಮನುಷ್ಯ. ಹೀಗೆ ಹಾತೊರೆಯುತ್ತಿರುವವನಿಗೆ ಹೇಳದೆ ಹೋಗಿಬಿಡುತ್ತದೆ ಹಂಸ. ಒಂದೊಮ್ಮೆ ಇಂದು ಬಿದ್ದ ದೇಹದಲ್ಲಿಯೇ ವರ್ಷಗಳವರೆಗೆ ವಾಸವಾಗಿತ್ತೆ ಹಂಸ ಎಂದು ಕೇಳಿಕೊಳ್ಳುವಷ್ಟು ಸ್ಥಿತಿ ಬದಲಾಗಿಬಿಟ್ಟಿರುತ್ತದೆ.
ಕಳದೆ ಒಂದು ವಾರದಿಂದ ಉರುಳಿಹೋಗುತ್ತಿರುವ 2016 ಎಂಬ ವರ್ಷ ನನಗೆ ಮೃತ್ಯು ಮನೆಯಲ್ಲಿರುವ ಮುಪ್ಪಿನ ಜೀವದಂತೆಯೆ ಗೋಚರಿಸುತ್ತಿದೆ. ಅದೆಷ್ಟೊಂದು ಘಟನೆಗಳು, ಸಾವು-ಸಂಭ್ರಮಗಳು, ಕಳೆದಂತೆ ತೋರುವ ಉಳಿದವುಗಳು. ಉಳಿದಂತೆ ತೋರುವ ಕಳೆದವುಗಳು. ಅಬ್ಬಾ! ಇತ್ತೀಚಿಗೆ ಬದುಕು ನನ್ನ ಪಾಳಿಗೆ ಒಂದು ಮಹಾ ಸೋಜಿಗವಾಗಿದೆ. ಸುಮ್ಮನೆ ಸಾಕ್ಷಿಯಾವುದು ಬಿಟ್ಟು ನನಗೆ ಬೇರೇನೂ ಕೆಲಸವಿಲ್ಲ ಎನಿಸುತ್ತಿದೆ.
 ಕಳೆದ ವರ್ಷವೆಂಬ ಕಾಲದ ಹೊಟ್ಟೆ ಬಗೆದಷ್ಟೂ ಬೆಂಬತ್ತಿ ಕಾಡುವ ನೆನಪುಗಳು. ಎಲ್ಲೋ ಓದಿದ ನೆನಪು. ಈಜಿಪ್ತಿನ ಪಿರ್ಯಾಮಿಡ್ ಒಂದನ್ನು ತೆಗೆದುನೋಡಿದರೆ ಸತ್ತ ಬೆಕ್ಕಿನ ದೇಹ ಸಿಕ್ಕಿತಂತೆ. ಶೋಧಿಸಲಾಗಿ ಅದರ ಇತಿಹಾಸ ಮೂರು ಸಾವಿರ ವರ್ಷಗಳಷ್ಟು ಹಳೆಯದು. ಆದರೆ ಬೆಕ್ಕಿನ ಅಸ್ತಿಪಂಜರ ಮಾತ್ರ ಪಿರ್ಯಾಮಿಡ್ನಲ್ಲಿ ಸುರಕ್ಷಿತವಾಗಿಯೇ ದೊರಕಿತ್ತು. ವರ್ಷಗಳ ಹೊಟ್ಟೆಯಲ್ಲಿ ಎಲ್ಲವೂ ಅಂದಗೆಡುವುದಿಲ್ಲ. ಕೆಲವು ಬಾಳುತ್ತವೆ, ತಾಳುತ್ತವೆ, ತಾಳೆಗೆರೆಯಂತೆ ಕಳೆದ ನಮ್ಮ ಬದುಕಿನ ನೆನಪುಗಳ ಪುಟಗಳಾಗುತ್ತವೆ.
2016 ಕೊನೆಯ ತಿಂಗಳುಗಳಲ್ಲಿ ನಾನು ಯಾವುದಕ್ಕೆ ಸಾಕ್ಷಿಯಾಗುತ್ತೇನೆ ಎಂಬ ನನ್ನ ಕುತೂಹಲಕ್ಕೆ ದಕ್ಕಿದ ಉತ್ತರ, ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಬಂದ ಆಮಂತ್ರಣ ಪತ್ರ. ನವೆಂಬರ್ 29 ಹಾಗೂ 30 ರಂದು ಸಡೆಯಲಿರುವ ಚಿಂತನ-ಮಂಥನದ ಎರಡು ದಿನಗಳ ಸಭೆಗೆ ಬರಬೇಕೆಂದು ಕುಲಪತಿಗಳಾದ ಮಲ್ಲಿಕಾ ಘಂಟಿ ಹಾಗೂ ಕುಲಸಚಿವರಾದ ಪಾಂಡುರಂಗ ಬಾಬು ಅವರಿಂದ ಆತ್ಮೀಯ ಕರೆ.
 ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೀಗ ಬೆಳ್ಳಿಹಬ್ಬದ ವಯಸ್ಸು. ಏನೆಲ್ಲ ಎಡರು-ತೊಡರುಗಳ ದಾರಿಕ್ರಮಿಸಿ ನಾಡು-ನುಡಿಯ ಅಸ್ಮಿತೆಯ ಸಂಕೇತವಾಗಿ ಅದು ಬೆಳೆದು ನಿಂತಿದೆ. 25 ವರ್ಷಗಳ ದಾರಿಯಲ್ಲಿ 07 ಜನ ಕುಲಪತಿಗಳನ್ನು, ಸಾವಿರಾರು ಶಿಕ್ಷಕ-ಸಂಶೋಧಕರನ್ನು, ಲಕ್ಷಾಂತರ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕಂಡು, ಹಲವು ವಿಭಾಗ, ಹಲವಾರು ಶಾಖೆಗಳ ಮೂಲಕ ಇಡೀ ನಾಡಿನ ಸಾಂಸ್ಕøತಿಕ, ಭೌಗೋಳಿಕ ವ್ಯಾಪ್ತಿಗೆ ವಿಸ್ತರಿಸಿಕೊಳ್ಳುವ ಪ್ರಯತ್ನ ಮಾಡಿದೆ. ಈಗ ಅದು ಸಾಹಿತಿ ಗೆಳೆಯ ರಹಮತರು ಹೇಳುವಂತೆನಿರ್ವಾತದಲ್ಲಿಲ್ಲ, ಸಂಘರ್ಷದಲ್ಲಿದೆ.
ಸಭೆಯ ಮುಖ್ಯ ಉದ್ದೇಶವೇ ವಿಶ್ವವಿದ್ಯಾಲಯಕ್ಕೊಂದು ಹೊಸ ಕಾಯಕಲ್ಪ ನೀಡುವುದು. ನಿಟ್ಟಿನಲ್ಲಿ ಜಾತಿ, ಮತ, ಪಂಥಗಳ ಮೀರಿ, ಭೌಗೋಳಿಕತೆಯನ್ನು ಗಮನದಲ್ಲಿರಿಸಿಕೊಳ್ಳದೆ, ಎಲ್ಲ ತಲೆಮಾರುಗಳ ಲೇಖಕ ಹಾಗೂ ಚಿಂತಕ ಬಂಧುಗಳನ್ನು ಇಲ್ಲಿ ಸೇರಿಸಿ ಅವರ ಸಲಹೆ ಸೂಚನೆಗಳನ್ನು ಪಡೆಯುವ ಪ್ರಾಮಾಣಿಕ ಯತ್ನ ಮಾಡಿದ ಮಲ್ಲಿಕಾ ಘಂಟಿಯವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಎರಡು ದಿನಗಳ ಇಲ್ಲಿಯ ವಾಸ್ತವ್ಯ ಅವಿಸ್ಮರಣೀಯ.
 ಬಾಗಲಕೋಟೆಯ ಲೇಖಕ ಮಿತ್ರರಾದ ಖಾಡೆ ಹಾಗೂ ಉಮೇಶ ತಿಮ್ಮಾಪುರರ ಭೇಟಿ ಮುಗಿಸಿಕೊಂಡು ಬಂದು ವಾರಗಳವರೆಗೆ ವಾಸ್ತವ್ಯ ಹೂಡಿದ್ದು ಚಡಚಣದ ನನ್ನ ಜೋಳಿಗೆಯಲ್ಲಿ. ಈಗಲ್ಲಿ ಬದುಕಿನ ಬಿಸುಪಿಗಾಗಿ ಹಸಿಯುವಷ್ಟು ಛಳಿ. ಹಕ್ಕಿಗಳ ಕಲರವ ಹಾಗೂ ಮೌನ ಬಿಟ್ಟು ಮತ್ತೇನಿದೆ? ನಾನು ಹಾಗೂ ನನ್ನ ಪುಸ್ತಕಗಳು. ಒಳಗಿಳಿದಷ್ಟೂ ಮಾತು ನನ್ನೊಂದಿಗೆ.
ಇದ್ದಕ್ಕಿದ್ದಂತೆ ಮನಸ್ಸು ಮಧುರಚೆನ್ನರ ಕುರಿತು ಹಸಿಯಲಾರಂಭಿಸಿತು. ಹಲಸಂಗಿಗೆ ಹೋಗಬೇಕು, ಮಧುರಚೆನ್ನರ ಸಮಾಧಿಯ ಸುತ್ತ ಒಂದಷ್ಟು ಕಾಲಕಳೆಯಬೇಕು. ಪುಣ್ಯದ ಘಳಿಗೆಯಲ್ಲಿ ನನ್ನ ಕುಟುಂಬ, ಅದರಲ್ಲೂ ಮುಖ್ಯವಾಗಿ ಮೂರನೆಯ ಮಗು ಕಬೀರ ನನ್ನೊಂದಿಗಿರಬೇಕು ಎಂಬ ಬಯಕೆ
 ದೇಹ ಹಸಿದದ್ದನ್ನು ಹಂಬಲಿಸಿ ಉಣ್ಣುವಂತೆ ಆತ್ಮ ಹಸಿದದ್ದನ್ನು ಉಂಡು ಬಿಡಬೇಕು ಎಂಬುದು ನನ್ನ ವಾದ. ಹೀಗಾಗಿ ಗೆಳೆಯರಾದ ಸೋಮನಾಥ ಗೀತಯೋಗಿ, ಚಿದಾನಂದ ಸರಸಂಬಿ ಹಾಗೂ ಸಂಸಾರದೊಂದಿಗೆ ಖಾಜಾಸಾಹೇಬ ಎಂಬ ಏಕತಾರಿಯ ಮೀಟುತ್ತ, ಪಿಧೂಲಾ, ಸಿಂಪಿ ಲಿಂಗಣ್ಣ, ರೇವಪ್ಪ ಕಾಪಸೆ ಎಂಬ ಪುಟಗಳನ್ನು ತಿರುವುತ್ತ, ಹಲಸಂಗಿ ಹಳ್ಳದಲ್ಲಿ ಇಡೀ ಕುಟುಂಬದ ಸ್ನಾನ ಮಾಡಿಸಿ, ಪವಿತ್ರವಾಗಿ ಮಧುರಚೆನ್ನರ ಮಗ ಪುರುಷೋತ್ತಮ ಗಲಗಲಿಯವರ ಮನೆಗೆ ಹೋದ ದಿನ 2016 ಡಿಸೆಂಬರ್ 4. ನನ್ನನ್ನು ಅಚ್ಚರಿ ಹಾಗೂ ಆತ್ಮೀಯತೆಯಿಂದ ಸ್ವಾಗತಿಸಿದ ಪುರುಷೋತ್ತಮರು ಕೇಳಿದ್ದು ಒಂದೇ ಪ್ರಶ್ನೆ, “ಏನು ರಾಗಂ ದಿನ ಬಂದಿರಿ?” ನನ್ನಿಂದ ಏನಾದರೂ ತಪ್ಪಾಯಿತೆ? ನನ್ನೊಳಗಿನ ಪ್ರಶ್ನೆ. ಯಾಕೆ ಸರ್. ಏನಾಯಿತು? ಅವರ ಉತ್ತರ, “ಏನೂ ಆಗಿಲ್ಲ, ಆನಂದವಾಯಿತು, ಇದೀಗ ಅಪ್ಪಾ ಅವರ ಸಮಾಧಿ ಕಡೆಯಿಂದ ಬಂದಿದ್ದೆ, ಇಲ್ಲಿ ತೊಗೊಳ್ಳಿ ಇದನ್ನು ಓದಿ ಎಂದು ಮಧುರಚೆನ್ನರ ಆತ್ಮಶೋಧ ಕೃತಿಯನ್ನು ನನ್ನ ಕೈಗಿತ್ತು ಮೌನವಾದರು. ಓದುತ್ತ ಹೋದ ನಾನೂ ಮೌನವಾದೆ. ಅದು ಮಾತುಗಳಿಂದ ಅತೀತವಾದ ಒಂದು ಸಂಗತಿ. 2016 ಡಿಸೆಂಬರ್ 04 ರಂದು ನಾನು ಅಲ್ಲಿಗೆ ಹೋದ ಅದೇ ದಿನದಂದು ಅಂದಿಗೆ (ಡಿಸೆಂಬರ್ 04, 2016) 86 ವರ್ಷಗಳ ಹಿಂದೆ ತನಗೆ ದೇವರ ದರ್ಶನ ಬಾಗಲಕೋಟೆಯ ತಮ್ಮ ವಾಸ್ತವ್ಯದಲ್ಲಿ ನಸುಕಿನ ನಾಲ್ಕು ಗಂಟೆಗೆ ಆಯಿತೆಂದು ಮಧುರಚೆನ್ನರು ತಮ್ಮಆತ್ಮಶೋಧದಲ್ಲಿ ಬರೆಯುತ್ತಾರೆ.


ಡಿಸೆಂಬರ್ 04 ನಸುಕಿಗೆ ನಾನು ನನ್ನ ಚಡಚಣಜೋಳಿಗೆಯಲ್ಲಿ ಎದ್ದು ಸುಮ್ಮನೆ ಕುಳಿತಿದ್ದೆ. ಸಾಮಾನ್ಯವಾಗಿ ಸೂರ್ಯವಂಶನಾದ ನಾನು ಏಳುವುದು ಬೆಳಗಿನ ಎಂಟು ಗಂಟೆಯ ನಂತರ. ಅದೇನಾಗಿತ್ತೊ ದಿನ ನಸುಕಿಗೆ ಎದ್ದು ಮುಗಿಲ ಮುಖಿಯಾಗಿದ್ದೆ.
ಇಂದಿನ ಘಟನೆಯನ್ನು ಕೇವಲ ಒಂದು ಕಾಕತಾಳಿಯ ಎಂದುಕೊಳ್ಳಲಾರೆ ನಾನು. ಗಾಂಧಿ ಸಮಾಧಿಯ ಮೇಲಿನ ಒಂದು ಗುಲಾಬಿ ದಶಕಗಳ ನಂತರ ಆತನ ಇಡಿಯ ಬದುಕು ನನ್ನ ಬೆರಳುಗಳ ಮೂಲಕ ಪ್ರವಹಿಸಲು ಕಾರಣವಾಯಿತು. ಇಂದು ಮಧುರಚೆನ್ನರ ಸಮಾಧಿಯೊಂದಿಗೆ ನಡೆದಿರುವುದೂ ಕೂಡಾ ಇಂಥದೇ ಒಂದು ಪ್ರಕ್ರಿಯೆ.
 ಅಂದಹಾಗೆ ನಾನು 2016 ಡಿಸೆಂಬರ್ 10 ರಂದು ಗೆಳೆಯರಾದ ರವೀಂದ್ರನಾಥ ಸಿರಿವರ, ಬಂಜಗೆರೆ ಜಯಪ್ರಕಾಶ ಹಾಗೂ ವಾಸುದೇವ ನಾಡಿಗರೊಂದಿಗೆ ಸೇರಿಕೊಂಡು, ಗೆಳತಿ ಮಮತಾ ಅರಸಿಕೆರೆಯವರು ಹಮ್ಮಿಕೊಂಡ ಬಹು-ಭಾಷಾ ಕಮ್ಮಟದಲ್ಲಿದ್ದೆ.
10 ಮುಂಜಾವು ಕಾರ್ಯಕ್ರಮವನ್ನು ಉದ್ಘಾಟಿಸಿ ಅಪರೂಪದ ಮಾತುಗಳನ್ನಾಡಿದ ಬಂಜಗೆರೆ ವೇದಿಕೆಯನ್ನು ರಘುನಾಥರಿಗೆ ಬಿಟ್ಟು ಪುಸ್ತಕ ಪ್ರಾಧಿಕಾರದ ತಮ್ಮ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ಕಾವ್ಯದ ನಿರಂತರತೆಗೆ ಕಾರಣವಾಗುವ ಯೋಜನೆಯ ಯೋಚನೆಯನ್ನು ನಮ್ಮ ತಲೆಯಲ್ಲಿ ಬಿಟ್ಟು ಹೊರಟು ಹೋದರು.
 ಮುಂದೆ ಯಶೋಧರ ದಾಸಮ್ಮ ಕಸ್ತೂರ ಬಾ ಆಶ್ರಮದ ಒಟ್ಟು 56 ಎಕರೆ ಭೂಮಿಯನ್ನು ಸುತ್ತಾಡುತ್ತ, ಗಾಂಧಿ ಹಾಗೂ ಕಸ್ತೂರ ಬಾ ಎರಡೂ ಸಮಾಧಿಗಳ ಸುತ್ತುತ್ತ ಅದೇನು ಧೇನಿಸಿದೆನೊ ಕಾವ್ಯ ಕುರಿತು ಅಪರೂಪದ ಭಾಷಣವಂತೂ ಮಾಡಿದೆ.
ಈಗಲೂ ನನ್ನ ನಂಬಿಕೆ ಇಷ್ಟೆ. ವರ್ಷದ ಕೊನೆಯಲ್ಲಿ ನನ್ನ ಜೋಳಿಗೆಯ ಮುಂದಿನ ಸಿಂಪಿ ಲಿಂಗಣ್ಣನವರ ಸಮಾಧಿಯಿಂದ, ಮಧುರಚೆನ್ನರ ಮೂಲಕ, ಅರಸಿಕೆರೆಯ ಗಾಂಧೀ ಹಾಗೂ ಕಸ್ತೂರ ಬಾ ಸಮಾಧಿಯವರೆಗಿನ ಎಲ್ಲ ಚಟುವಟಿಕೆಗಳ ಹಿಂದೆ ಯಾವುದೋ ಅವ್ಯಕ್ತ ಎಳೆತ-ಸೆಳೆತಗಳಿವೆ. ದೇಶದಲ್ಲಿ ಬರೀ ಮನುಷ್ಯರಷ್ಟೇ ಅಲ್ಲ ಸಮಾಧಿಗಳೂ ಮಾತನಾಡುತ್ತವೆ.