Total Pageviews

Friday, December 23, 2016

ಬೇಕಿತ್ತು ಕಣ್ಣು ಬೆನ್ನಿಗೊಂದು. . . . .


ಪ್ರಕಾಶಕರ ಪಾಲಿಗೆ ಡಿಸೆಂಬರ್ ತಿಂಗಳೆನ್ನುವುದು ಸಂತೆಯ ದಿನವಿದ್ದಂತೆ. ದಾಸೋಹವಾಗಬೇಕಾಗಿದ್ದ, ಆತ್ಮಶೋಧದ ಮಾರ್ಗವಾಗಬೇಕಾಗಿದ್ದ ಪುಸ್ತಕ ಪ್ರಕಟಣೆ ಈಗ ಲಾಭದ ಒಂದು ವ್ಯವಹಾರ. ಬಹುತೇಕ ಲಂಗುಲಗಾಮಿಲ್ಲದ ವ್ಯವಹಾರ. ಇದು ನಮಗೆ-ನಿಮಗೆ ಗೊತ್ತಿರುವಂತೆ ಅಂಗೈ ಹುಣ್ಣಿಗೆ ಹಿಡಿದ ಕನ್ನಡಿ. ಗ್ರಂಥಾಲಯ ಇಲಾಖೆಗೆ ಪುಸ್ತಕಗಳನ್ನು ಸಬ್ಮಿಟ್ ಮಾಡುವ ಡಿಸೆಂಬರ್ ತಿಂಗಳ ಸಂತೆಯಲ್ಲಿ ಪುಸ್ತಕದಂತೆ ಕಾಣುವ ಏನೆಲ್ಲವೂ ಮಾರಾಟವಾಗುತ್ತವೆ. ಕೆಲವು ಮಾನದಂಡಗಳಿಗೊಳಪಟ್ಟು ಹೊಚ್ಚ ಹೊಸದಾಗಿ ಮುದ್ರಣವಾಗಿಬಿಟ್ಟರೆ ಸಾಕು, ಅದೆಲ್ಲವೂ ಸಾಹಿತ್ಯ ಎನ್ನುವ ಹಾಗೆ ಕಾಣುವ ಭ್ರಮಾಲೋಕ ಸೃಷ್ಟಿಯಾಗಿ ಬಿಡುತ್ತದೆ. ಹಲವು ತರಹದ, ಹಲವು ಥರಾವರಿಯ ಯಾವುದೇ ತಾತ್ವಿಕ ತಳಹದಿ ಇಲ್ಲದ ವಿಷಯ ವಸ್ತುಗಳು ಲಕ್ಷ-ಲಕ್ಷಗಳ ಲೆಕ್ಕದಲ್ಲಿ ವ್ಯವಹಾರಕ್ಕೊಳಪಟ್ಟು ಗ್ರಂಥಾಲಯಗಳನ್ನು ಅಲಂಕರಿಸಿಬಿಡುತ್ತವೆ. ಇಂತಹ ಕಾಳಸಂತೆಯಲ್ಲಿ ನಮಗೇನಾದರೂ ನಿಜವಾದ ಕವಿ-ಕಾವ್ಯದ ದರ್ಶನವಾಗುವುದಾದರೆ ಖಂಡಿತ ಅದನ್ನೊಂದು ಅಚ್ಚರಿಯೇ ಎಂದುಕೊಳ್ಳಬೇಕು. ಅಂತಹ ಒಂದು ಅಚ್ಚರಿಗೆ 2016 ಡಿಸೆಂಬರ್ ತಿಂಗಳು ನನ್ನನ್ನು ಸಾಕ್ಷಿಯಾಗಿಸಿದೆ.
ಹಂಪಿ ವಿಶ್ವವಿದ್ಯಾಲಯದ ಚಿಂತನ-ಮಂಥನ ಸಭೆಯಲ್ಲಿ ಸಿಕ್ಕ ನಮ್ಮ ಹಿರಿಯ ಲೇಖಕ ಪ್ರೊ. ಚೆನ್ನಪ್ಪ ಕಟ್ಟಿ ಅವರ ಇತ್ತೀಚಿನ ಪ್ರಕಟಣೆಯಾದಸೂರ್ಯನಿಗೆ ಸಾವ ನೋಡಲು ಬೇಸರವಿಲ್ಲಎನ್ನುವ ತಮ್ಮ ಕಾವ್ಯ ಸಂಕಲನವನ್ನು ನೀಡಿದರು. ‘ನೆಲೆಪ್ರಕಾಶನದಿಂದ ಪ್ರಕಟವಾದ 57 ಪುಟಗಳ, 26 ಕವಿತೆಗಳ ಸಂಕಲನವನ್ನು ಅನುಮಾನದಿಂದಲೇ ಕೈಗೆತ್ತಿಕೊಂಡೆ. ಸಂತಸದ ಸಂಗತಿ ಎಂದರೆ ಪುಟ್ಟ ಹೊತ್ತಿಗೆಯ ಕೈ ಹಿಡಿದು ನಾನು ಕನ್ನಡ ಕಾವ್ಯದ ಭರವಸೆಯ ದಡ ಸೇರಿದೆ.
ವಿಚಿತ್ರವೆಂದರೆ ಇದೆ. ಬೇಡ ಬೇಡವೆನ್ನುತ್ತಲೆ ನಾನು ಮತ್ತೆ ಮತ್ತೆ ಭೇಟಿಯಾಗುವುದು, ಭೆಟ್ಟಿಗೊಮ್ಮೆ ಸಂಶಯಿಸುವುದು, ಮತ್ತೆ ಸಮಾಧಾನದ ಯಾವುದೊ ಒಂದು ನೆಲೆಗಾಗಿ ಗೋಗರೆಯುವುದು ಕಾವ್ಯದೊಂದಿಗೆ ಮಾತ್ರ. ಹಂಪಿಗೆ ಬಂದು ಇಚಿಡಿ ಭಾಗದ ಪ್ರೊ. ಚೆನ್ನಪ್ಪ ಕಟ್ಟಯಂಥ ಕವಿಯೊಬ್ಬನ ಕಾವ್ಯಕ್ಕೆ ಕಣ್ತೆರೆಯುವ ಮೊದಲು ಬೆಂಗಳೂರಿನಿಂದ ನಾನು ಹೊರಟಿದ್ದೇ ಬೆಂಗಳೂರು ಕಡೆಯ ಕವಯತ್ರಿಯೊಬ್ಬಳ ಅಪ್ರಕಟಿತ ಕವಿತೆಗಳ ಕಟ್ಟೊಂದನ್ನು ಎತ್ತಿಕೊಂಡು, ತಂದ ಕಟ್ಟನ್ನು ಬ್ಯಾಗಿನಲ್ಲಿಟ್ಟು ನಿಶ್ಚಲವಾಗಿದ್ದ ನನ್ನ ಮನಸ್ಸಿಗೆ ಚೆನ್ನಪ್ಪ ಕಟ್ಟಿಯವರ ಕಾವ್ಯ ಚಲನೆಯನ್ನು ನೀಡಿದರೆ ಕವಯತ್ರಿ ಹೇಮಲತಾ ಮೂರ್ತಿಯವರಇದೋ ನಿರ್ವಾಣಕಾವ್ಯ ಸಂಕಲನ ಒಂದು ಗತಿಯನ್ನು ಒದಗಿಸಿದೆ.

ನಿಸ್ಸಂಶಯವಾಗಿಯೂ ಕನ್ನಡ ಕಾವ್ಯಾಸಕ್ತರು ಗಮನಿಸಲೇಬೇಕಾದ ಅಪರೂಪದ ಕವಯತ್ರಿ ಹೇಮಲತಾ ಮೂರ್ತಿ. ನಮ್ಮ ಓದು ಎಷ್ಟೇ ಪ್ರೀತಿಯದಾಗಿದ್ದರೂ ನೆಚ್ಚದ, ನಲಿವಾಗದ ಎಲ್ಲ ಎಚ್ಚರಿಕೆಯ ಓದಿಗೂ ದಕ್ಕದೆ ನಿರಾಕರಣೆಗೊಳಗಾಗುವ ಕೆಲವು ಪದ್ಯಗಳು, ಸಡಿಲು ಬಂಧಗಳು, ಅಸಹಜ ಅಭಿವ್ಯಕ್ತಿಗಳು, ಅಪ್ರಬುದ್ಧ ಆಲೋಚನೆಗಳನ್ನು ಒಳಗೊಂಡ ಕೆಲವು ಕವಿತೆಗಳಾದರೂ ಪ್ರತಿಯೊಂದು ಸಂಕಲನದಲ್ಲಿ ಸಿಗುತ್ತವೆ. ಆದರೆ ಇಂತಹ ಯಾವ ಅಜಾಗರೂಕತೆಗೆ ಆಸ್ಪದವೀಯದ ಕೃತಿಇದೋ ನಿರ್ವಾಣ. ಕವಿತೆಯ/ಕವಯತ್ರಿಯ ಮೋಹಕ್ಕೆ ಕಾರಣವಾದ ಕೆಲವು ನಮೂನೆಗಳು ಇಲ್ಲಿ ನಿಮ್ಮೊಂದಿಗೆ-
ಇಂದು ಆಕಾಶದಲ್ಲಿ ಚಂದ್ರನಿಲ್ಲ
ಯಾವ ಬಾವಿಯಲ್ಲಿ ಹೆಣವಾಗಿದ್ದಾನೋ
ಸುಮ್ಮನೆ ನಿಟ್ಟುಸಿರಾಗುತ್ತೇನೆ
********
ಪುಸ್ತಕದಲ್ಲಿ ಉಳಿಸಿಟ್ಟ
ಒಣಗಿದ ಪಕಳೆಯಂತವಳು ನಾನು
ಭಾವ-ತೇವವಿಲ್ಲದ ನಿನ್ನ
ಹೃದಯದಲ್ಲಿ ಗತಿಗೆಟ್ಟ ಕುರುಹು
*******
ಕದ್ದು-ಮುಚ್ಚಿ ಒಳಗೊಳಗೆ
ಮೋಹಿಸುವ ನಾವು ಒಳಮುಚುಗರು
********
ಗೆಲುವಿನ ಹೆಜ್ಜೆ ಇಡುವಾಗ
ಎದುರು ನಿಂತು ಕೈ ಕುಲುಕಿ
ಹಿಂದೆ ನಿಂತು ಬಾಯಿ ಬಡಿದುಕೊಳ್ಳುವವರಿಗೆ
ಸಾಂತ್ವನ ಹೇಳಲಾದರೂ ಬೇಕಿತ್ತು ಕಣ್ಣು ಬೆನ್ನಿಗೊಂದು
*********
ಸಾವಿನ ಮನೆಯಲ್ಲಿ
ಕವಿತೆ ಕಟ್ಟುವವಳಿಗೆ
ಮಾತಿನ ಹಂಗಿಲ್ಲವಯ್ಯಾ
********
  ಬೆಂಗಳೂರೆಂಬ ಬೆಂಗಾಡಿನಲ್ಲಿ ಗೃಹಿಣಿಯೊಬ್ಬಳು ಇಂಥ ಕಾವ್ಯದ ಹಸಿ ಹುಟ್ಟಿಸಿಕೊಂಡು ಪರಿಯಲ್ಲಿ ಧ್ಯಾನಸ್ಥಳಾಗಿರುವುದು ನಿಜಕ್ಕೂ ನನಗೆ ಅಚ್ಚರಿ ಹುಟ್ಟಿಸಿದೆ. ಇವು ಸುಮಾರು ಹದಿನೈದು ವರ್ಷಗಳವರೆಗೆ ಕುದ್ದು  ಹೊರಬಂದ ಕಾವ್ಯದ ಕಡಲಿನ ಅಪರೂಪದ ಸೃಷ್ಟಿಗಳು.
ನಿತ್ಯ ನಮ್ಮೊಂದಿಗಿದ್ದೂ ನಿಶ್ಚಲವೆನ್ನಿಸುವ ಲೌಕಿಕ ವ್ಯಾಪ್ತಿಯ ಅದೆಷ್ಟೋ ಸಂಗತಿ, ಸಾಮಾನು, ಸಮಾಚಾರಗಳು ಕಾವ್ಯದ ಪವಿತ್ರ ಸ್ಪರ್ಶದಿಂದಾಗಿ ಹೇಮಲತಾ ರ್ಮೂತಿಯವರಿಂದ ಮೌಲಿಕ ಪ್ರಶ್ನೆಗಳಾಗಿ ನಮ್ಮನ್ನು ಕಾಡಲಾರಂಭಿಸುತ್ತವೆ. ಹಾಗೆ ನೋಡಿದರೆ ಕಾವ್ಯದ ಸಾರ್ಥಕ್ಯ ಇರುವುದು ಇಲ್ಲಿಯೇ. ಸಾತ್ವಿಕ ಅಭಿಮಾನದ ನೆಲೆಯ ಮೇಲೆ ನಿಂತುಕೊಂಡೇ ಅವರು ಘೋಷಿಸಿಕೊಳ್ಳುತ್ತಾರೆ-
ಹುಟ್ಟು ಜಂಗಮಗಿತ್ತಿ
ಬಯಲ ಧಾರೆ ಹರಿವ ನೀರೆ
ರವಿ ಕಾಣದ್ದನ್ನು ಕವಿ ಕಂಡಎನ್ನುವ ಉಕ್ತಿಗೆ ಕವಿ ಬೇಂದ್ರೆಯ ವಿಶ್ಲೇಷಣೆಯೇ ಭಿನ್ನವಾಗಿತ್ತು. ಎಲ್ಲ ಕಾಣುವ ರವಿ ಕೋಟಿ ಕೋಟಿ ವರ್ಷಗಳ ತನ್ನ ನಿರಂತರತೆಯ ನಂತರವೂ ಕಾಣಲಾಗದ ಸಂಗತಿ ಕತ್ತಲೆ. ಅದು ಕವಿ ಮತ್ತು ಕಾವ್ಯದಿಂದ ಪೂರ್ಣಗೊಳ್ಳಬೇಕಾದ ಲೋಕ ವ್ಯವಹಾರ. ಸೂರ್ಯನ ಕೆಳಗಿದ್ದೂ ತನ್ನ ಒಳ ಮತ್ತು ಹೊರ ತಮಂಧಕ್ಕೆ ಶಬ್ಧಗಳ ಮೂಲಕ ತೆರೆದುಕೊಳ್ಳುವ ನಿರಂತರ ಯತ್ನವನ್ನು ಎಲ್ಲ ಬರಹಗಾರರೂ ಮಾಡಿದ್ದಾರೆ. ಇಂತಹ ಕಾಡುವ ಕತ್ತಲೆಯ ಕಣ್ಣೀರ ತೆಪ್ಪಇದೋ ನಿರ್ವಾಣ-
ಶಬ್ಧವನ್ನು ಮೀಯುತ್ತಲೇ
ಎಚ್ಚರಗೊಳ್ಳುವ ಬೆಳಗೆಂಬ
ಬೆಳ್ಳಂ-ಬೆಳಗ್ಗೆ ಹಾಲು-ಪೇಪರ್
ತರಕಾರಿ-ಸೊಪ್ಪು, ಕಣ್ರೆಪ್ಪೆಗಳು
ಅಲಗುವ ಮುಂಚೆ ಕಿವಿಗಡಚುವ ಧ್ವನಿಗಳು
ಸೌಕರ್ಯ-ಸಾಧ್ಯತೆಗಳ ಭ್ರಮಾಸ್ವರ್ಗವನ್ನು ಸೃಷ್ಟಿಸಿದ ನಗರಗಳ ಅರುಣೋದಯಕ್ಕೆ ಕವಿದ ತಮಂಧಕ್ಕೊಂದು ಪುಟ್ಟ ಉದಾಹರಣೆ ಮೇಲಿನ ಕವಿತೆ.
 ಗೆಳೆಯ ನೆನಪಿಗೆ ಬಂದ
ತಟ್ಟನೆ ಫೋನಾಯಿಸಿದಳು
ನೀವು ಕರೆ ಮಾಡಿದ ವ್ಯಕ್ತಿ
ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ
ಒಂಟಿ ಹನಿಯೊಂದು
ನಿನ್ನೊಂದಿಗೆ ನಾನಿದ್ದೇನೆ ಎಂದು ಸಂತೈಸಿತು
ಮೊಬೈಲೆಂದರೆ ಮನುಷ್ಯ ಸಾಧ್ಯತೆಯ ಅನಂತ ಲೋಕ ಎಂದುಕೊಂಡಲ್ಲಿ ಕವಿದ ಕಾರ್ಮೋಡಗಳ ಭಯಕ್ಕೊಂದು ಸಾಕ್ಷಿ ಮೇಲಿನ ಪದ್ಯ. ಹೀಗೆ ಹೇಮಲತಾ ಮೂರ್ತಿ ನಮ್ಮ ನೋವುಗಳಿಗೆನಗು ಮೊಗದ ಕಸೂತಿ ಕಟ್ಟಿ, ನವಿರಾಗಿ ಸ್ಪರ್ಶಿಸಿ, ನಮ್ಮನ್ನೊಂದು ಕೌದಿಯಾಗಿಸುವಕರುಣೆಯ ಕಡಲಂಥವಳು. ‘ಸಾಗಿ ಬಿಡು ಹರಿವ ನದಿಯಂತೆ, ನಡೆದ ಹಾದಿಯೆಲ್ಲ ಹಸಿರು ತುಂಬಲಿಎಂದು ಮರವಾಗುವ ಪಾಠ ಹೇಳುವವಳು. ‘ಗುಟುಕು-ಗುಟುಕೇ ಪ್ರೇಮದ ವಿಷ ಚಪ್ಪರಿಸಿದರೂ ನಶೆ ಏರಿಸಿಕೊಂಡು ತೂರಾಡಲಿ ಮನಸ್ಸು, ಮನಸ್ಸಾಗಲಿ ಮನುಷ್ಯಎಂದು ಹಾರೈಸುವವಳು, ‘ಸ್ವರ್ಗಕ್ಕೊಂದು ಏಣಿ ಇಟ್ಟು, ನರಕಕ್ಕೊಂದು ಹಗ್ಗವನು ತೂಗಿಬಿಟ್ಟು, ಆಗಸಕ್ಕೆ ಜಿಗಿಯುವ ಸಾಹಸವನ್ನುಸಂಭ್ರಮಿಸುವವಳು. ಕೆಲವೊಮ್ಮೆ ನಮ್ಮೊಳಗೇ ಆಗಿ ತಟ್ಟನೆ ನಿಂತಿದ್ದೇನೆ. ‘ತಮಸ್ಸಿನ ಶೂನ್ಯದಲಿ, ಬದುಕು ಕವಲುದಾರಿ, ಒಂದು ಅತೀ, ಇನ್ನೊಂದು ಮಿತಿ, ಆವಾಹನೆಯಾಗಿಬಿಡಲಿ ಸುಖದ ಸಾವುಎಂದು ಕೊರಳು ಚೆಲ್ಲುವವಳು.
ಇಷ್ಟು ತಳಮಳದ, ಆದ್ರ್ರತೆಯ ವ್ಯಕ್ತಿಯೊಬ್ಬನಿಲ್ಲದಿರುವುದೇ ಕಾವ್ಯದ ಮಹಾ ನಿರ್ವಾತಕ್ಕೆ ಕಾರಣವಾಗಿರುತ್ತದೇನೊ. ನಿಷ್ಪಾಪಿ ಕವಿತೆಗೆ ಎದೆಯ ತಳಮಳವೇ ನೆಲೆ. ಹೀಗೆ ಮೈಯ ಕಾವು, ಒಡಲ ತಾಪ, ಆತ್ಮದ ಆರ್ತನಾದ ಅಭಿವ್ಯಕ್ತಿಸಲಾಗದ ಅಭಿವ್ಯಕ್ತಿಯ ಹಂಬಲ ಕಾವ್ಯದ ಗಂತವ್ಯ. ಹೀಗಾಗಿಯೇ ಹೇಮಲತಾ ಮೂರ್ತಿ ಹೇಳುವಂತೆ – ‘ಇದು ಎಲ್ಲ ಕಾಲಕ್ಕೂ ಭೇಟಿಯ ನಂತರ ಮತ್ತೆ ಆವರಿಸುವ ಸುಧೀರ್ಘ ವಿರಹ. ಕಡಲನ್ನಪ್ಪುವ ನದಿಯ ಸಾಹಸ, ಮಳೆಯಾಗಬೇಕೆನ್ನುವ ಮೋಡದ ಹಂಬಲ, ಆನಂತರ ದಕ್ಕುವುದೆಲ್ಲ ಸಮಾವಿಷ್ಠತೆಯೋ, ಸಮಾಗಮವೋ ಅದು ಯಕ್ಷ ಪ್ರಶ್ನೆಯೇ.
ಕಾವ್ಯ ಪ್ರಶ್ನೆಗಳನ್ನುಳಿಸಿಕೊಂಡಷ್ಟು ದೀರ್ಘವಾಗುತ್ತದೆ. ಹೇಮಲತಾ ಮೂರ್ತಿ ಪ್ರಶ್ನೆಗಳ ದಾರಿ ಕ್ರಮಿಸುತ್ತಲೇ ಪಂಥ-ಪಂಗಡ-ಪ್ರಚಾರಗಳ ದಾಟಿ ಧ್ಯಾನಸ್ಥವಾದ ಕನ್ನಡ ಕಾವ್ಯಕ್ಕೆ ನಮ್ಮ ಮಧ್ಯ ಒಂದು ಅಪರೂಪದ ಸಾಕ್ಷಿಯಾಗಿದ್ದಾರೆ. ಸ್ತ್ರೀ ನೆಲೆಯಲ್ಲೇ ಇಲ್ಲಿಯ ಕಾವ್ಯ ಅನಾವರಣಗೊಂಡಿದ್ದರೂ ಇದಕ್ಕೆ ಭೂನೆಲೆಯ ಗಂಭೀರತೆ ಇದೆ. ಪಾವಿತ್ರತೆ ಇದೆ. ಹೇಮಲತಾ ಅವರ ಬೆರಗುಗಣ್ಣಿನ ಕಾವ್ಯ ನೂರಾರು ಬೇರು ಬಿಟ್ಟು ಸಾವಿರಾರು ಬದುಕುಗಳ ಸಂಭ್ರಮವಾಗಲಿ ಎಂದು ನನ್ನ ಆಶಯ.

No comments:

Post a Comment