ಒಂದು ಮುಂಜಾವು ಹಾಲು ತರಲು ಹೋದ ಮಗ ಸಿದ್ಧಾರ್ಥ ಮಂಜುನಾಥ ನಗರದ ನನ್ನ ಮನೆಯ ಪಕ್ಕದ ಅಂಗಡಿಯ ಮಾಲೀಕ ಮೋಹನ್ ತೀರಿಕೊಂಡಿದ್ದಾರೆ ಎಂಬ ಸುದ್ಧಿಯನ್ನು ಬಹಳ ಬೇಸರದಿಂದ ಹೇಳಿದ. ಕಾರಣ ಹುಡುಕುತ್ತ ಹೊರಟ ನನಗೆ ಮೋಹನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಗೊತ್ತಾಯಿತು. ಇಲ್ಲಿಗೆ ಒಟ್ಟಾರೆ ನನ್ನ ಮನೆ-ಮಕ್ಕಳು-ಮನಸ್ಸುಗಳ ಸುತ್ತ ಒಂದೇ ತಿಂಗಳ ಅವಧಿಯಲ್ಲಿ ಆರು ಸಾವುಗಳು. ಸಹಿಸಲಾಗದ ಆರು ಸಾವುಗಳು, ನಂಬಲಾಗದೆಯೂ ನಂಬಿದ ಸಾವುಗಳು.
ಒಂದು ಕ್ಷಣ ನನ್ನ ಸಂಸಾರ ಕಟ್ಟಿಕೊಂಡು ಈ ಬೆಂಗಳೂರು ಬಿಟ್ಟು ಎಲ್ಲಿಯಾದರೂ ದೂರ ಓಡಿ ಹೋಗಬೇಕೆನ್ನುವಷ್ಟು ರೋಸಿ ಹೋಗಲು ಕಾರಣವಾದ ಸಾವುಗಳು. ಆದರೆ ಎಲ್ಲಿಗೆ ಹೋಗುವುದು.
ಸಾವಿಲ್ಲದ ಯಾರ ಮನೆಯಿಂದ ಸಾಸಿವೆ ತರುವುದು? ಬದುಕಿನೆಡೆಗೆ ನಡೆದಷ್ಟೂ ಎಲ್ಲ ದಾರಿಗಳು ಸಾವಿನೆಡೆಗೆ, ಸಾವಿನಡಿಗೇ ನಮ್ಮನ್ನು ಕರೆದೊಯ್ಯುತ್ತವೆ. ಇಂಥ ಒಂದು ನನ್ನ ಪ್ರೀತಿಯ ಜೀವವನ್ನು 2017ರ ಮೊದಲ ಮಾಸ ಸಾವಿನೆಡೆಗೆ ಕರೆದುಕೊಂಡು ಹೋಗಿದೆ.
‘ಗಾಂಧಿ ಅಂತಿಮ ದಿನಗಳು’ ಎಂಬ ನನ್ನ ಮಹತ್ವದ ಬರವಣಿಗೆಯೊಂದರ ಸುತ್ತ ದಕ್ಕಿದ ಅಪರೂಪದ ಸಂಬಂಧಗಳಲ್ಲಿ ದಾವಣಗೆರೆಯ ಶ್ರೀ ಎಸ್.ಎಚ್. ಪಟೇಲರದೂ ಒಂದು. ಈ ಸಂಬಂಧಕ್ಕೆ ದೀರ್ಘ ಇತಿಹಾಸವೇನೂ ಇಲ್ಲವಾದರೂ ಸುಧೀರ್ಘವಾಗಿ ಬರೆದ-ಹೋರಾಡಿದ ಹಾಗೂ ಬಾಳಿದ ‘ಗಾಂಧಿ’
ಎಂಬ ಬಂಧ ನಮ್ಮಿಬ್ಬರ ಸಂಬಂಧಕ್ಕೆ ಕಾರಣವಾಗಿದೆ. ಆದರೆ ಈಗ ಇದು ಕಳಚಿದ ಕೊಂಡಿ. ಕಾರಣ ಮೃತ್ಯು. ಮಧ್ಯ ಕರ್ನಾಟಕದ ಒಡನಾಟಕ್ಕೊಂದು ಅಪರೂಪದ ಕಾರಣವಾಗಿದ್ದ ಶ್ರೀ ಎಸ್.ಎಚ್. ಪಟೇಲ ಈ ವರ್ಷಾರಂಭದಲ್ಲಿ ನಾನು ಕಳೆದುಕೊಂಡ ಅಪರೂಪದ ಜೀವ.
2012ರಲ್ಲಿ ನಾನು ಗಾಂಧಿಯೊಂದಿಗಿನ ನನ್ನ ಸಂವಾದ ಶುರುವಿಟ್ಟುಕೊಂಡೆ. ಮೊದಲ ಭಾಗ ಮುಗಿದು ಪ್ರಕಟಗೊಂಡು ಅದು ಹೇಗೆ ಇಂದಿಗೂ ನನಗೆ ಸ್ಪಷ್ಟವಿಲ್ಲ ಪಟೇಲರ ಕೈ ತಲುಪಿಬಿಟ್ಟಿತ್ತು. ಹಿರಿಯ ಜೀವ ನಿತಾಂತವಾಗಿ ಕುಳಿತು ಇಡಿಯಾಗಿ ಪುಸ್ತಕ ಓದಿ, ದಾವಣಗೆರೆಯ ತಮ್ಮ ಮಾನವ ಹಕ್ಕುಗಳ ವೇದಿಕೆಯಿಂದ ಅಕ್ಟೋಬರ್ 2 ರಂದು ಗಾಂಧಿ ಕುರಿತಾದ ಸಮಾರಂಭವೊಂದನ್ನು ಆಯೋಜಿಸಿ ನನ್ನನ್ನು ಮುಖ್ಯ ಅತಿಥಿಯಾಗಿ ಕರೆದರು. ಒಪ್ಪಿಕೊಂಡ ನಾನು ಕಾರ್ಯಕ್ರಮಕ್ಕೆ ಹೋಗಬೇಕೆನ್ನುವುದರಲ್ಲಿ ಬೆಂಗಳೂರಿನ ಗಾಂಧಿ ಭವನದಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಂದ ನನ್ನನ್ನು ಸನ್ಮಾನಿಸಲಾಗುವ ಸಮಾರಂಭ ಘೋಷಣೆಯಾಯಿತು. ನಾನೀಗ ಇಕ್ಕಟಿನಲ್ಲಿ. ಅತ್ತ ಹೋಗಲಾರೆ ಇತ್ತ ಬರಲಾರೆ ಎನ್ನುವ ಸಂಧಿಗ್ಧತೆ.
ಕೊನೆಗೆ ಪಟೇಲರಿಗೆ ಫೋನಾಯಿಸಿ “ಈಗ ಏನು ಮಾಡುವುದು ಸರ್? ನನಗೆ ರಾಜಧಾನಿಯ ಸಮಾರಂಭಕ್ಕಿಂತ ಮುಖ್ಯ ತಾವು ಏರ್ಪಡಿಸಿರುವ ದಾವಣಗೆರೆಯ ಸಮಾರಂಭ. ಮೇಲಾಗಿ ಇದುವರೆಗೂ ಯಾವುದೇ ಸಮಾರಂಭವನ್ನು ಒಪ್ಪಿಕೊಂಡು ನಾನು ತಪ್ಪಿಸಿದ ಉದಾಹರಣೆಗಳಿಲ್ಲ.” ಎಂದಾಗ ಮುಗುಳ್ನಕ್ಕು ಪಟೇಲರು, “ಹಾಗಲ್ಲ, ಇದು ರಾಜ್ಯದ ಮುಖ್ಯಮಂತ್ರಿಗಳು ನಿಮ್ಮನ್ನು ಗೌರವಿಸುವ ಸಮಾರಂಭ. ಪರೋಕ್ಷವಾಗಿ ಇಡೀ ನಾಡಿನ ಜನತೆಯೆ ನಿಮ್ಮನ್ನು ಗಾಂಧಿ ಕಾರಣಕ್ಕಾಗಿ ಅಭಿನಂದಿಸುವ ಸಭೆಗೇ ಹೋಗಬೇಕು. ಆದರೆ ನಿಮ್ಮ ‘ಗಾಂಧಿ’ಯನ್ನು ಕುರಿತು ಸಮರ್ಥವಾಗಿ ಮಾತನಾಡುವ ಓರ್ವ ಸಂಪನ್ಮೂಲ ವ್ಯಕ್ತಿಯನ್ನು ನಮಗೆ ನೀಡಿ ಹೋಗಬೇಕು, ಮುಂದೊಮ್ಮೆ ನಿಮ್ಮ ಗಾಂಧಿಯ ಎರಡನೆಯ ಭಾಗವನ್ನು ಮುಗಿಸಿಕೊಂಡು ಅದರ ಬಿಡುಗಡೆಯ ಸಮಾರಂಭವನ್ನು ದಾವಣಗೆರೆಯಲ್ಲಿಯೇ ಮಾಡಬೇಕು, ನಿಮಗೆ ಶುಭವಾಗಲಿ”
ಎಂದು ಸಮಾಧಾನಿಸಿದಾಗ ಆದ ಆನಂದ ಅಷ್ಟಿಷ್ಟಲ್ಲ.
ಮುಂದೆ ಸಮಾರಂಭಕ್ಕೆ ನನ್ನ ಪ್ರತಿನಿಧಿಯಾಗಿ ನನ್ನ ಸೋದರ ಮಾವನನ್ನು ನನ್ನ ಭಾಷಣದೊಂದಿಗೆ ಕಳುಹಿಸಿ ಪಟೇಲರ ಪ್ರೀತಿಯನ್ನು ಕಾಪಾಡಿಕೊಂಡೆ. ಇಂಥ ಸಜ್ಜನಿಕೆಯ ಪಟೇಲರನ್ನು ನಾನೆಂದೂ ಮುಖತಃ ನೋಡಿದವನೇ ಅಲ್ಲ. ಕೇವಲ ಪುಸ್ತಕ ಮುಖೇನ ಸಾಧ್ಯವಾದ ಸಂಬಂಧವಿದು. ಅಷ್ಟಕ್ಕೂ ಅವರನ್ನು ಭೇಟಿಯಾಗುವ ಈ ಅಪರೂಪದ ಘಳಿಗೆ ಮತ್ತೆ ಮುಂದೂಡಿತಲ್ಲ ಎಂಬ ಬೇಸರವಿತ್ತಾದರೂ, ಈ ಬೇಸರವೇ, ಪಟ್ಟು ಹಿಡಿದು ನಾಲ್ಕು ತಿಂಗಳು ಗಟ್ಟಿಯಾಗಿ ಕುಳಿತು ‘ಗಾಂಧಿ ಮುಗಿಯದ ಅಧ್ಯಾಯ’
ಮುಗಿಸಲು ಕಾರಣವಾಯಿತು. ಅಂತಿಮವಾಗಿ 500 ಪುಟಗಳ ಒಂದು ಮಹತ್ವದ ಕೃತಿ ರಚನೆಯಾಯಿತು.
ಗಾಂಧಿ ಹತ್ಯೆಯಾದ ದಿನ ಅಂದರೆ ಜನೇವರಿ 30 ನನ್ನ ಗಾಂಧಿ 2ನೇ ಭಾಗ ಪ್ರಕಟವಾಗಿ ಬಿಡುಗಡೆಯಾಯಿತು. ಆಡಿದ ಮಾತಿನಂತೆ ಪಟೇಲರು ದಾವಣಗೆರೆಯ ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ನನ್ನ ಗಾಂಧಿ ಬಿಡುಗಡೆಯ ಸಮಾರಂಭ ಏರ್ಪಡಿಸಿ, ತಮ್ಮ ಇಡೀ ಕುಟುಂಬದೊಂದಿಗೆ ಭಾಗವಹಿಸಿ, ನನ್ನ ತಂದೆ-ತಾಯಿಗಳನ್ನು ಸನ್ಮಾನಿಸಿ ಸಂಭ್ರಮಿಸಿದರು. ಎಲ್ಲರನ್ನೂ ಮನೆಗೆ ಕರೆದೊಯ್ದು ಊಟ ಹಾಕಿಸಿ, ಹರಟೆ ಹೊಡೆದು, ಮೊಮ್ಮಗನಿಂದ ಹಾಡು ಹೇಳಿಸಿ ನನ್ನ ಮುಂದಿನ ದಿನಗಳ ಹಿರಿಯ ಗೆಳೆಯರಾದರು.
ಭಿನ್ನವಾಗಿತ್ತು ಪಟೇಲರ ಜೀವನ ಶೈಲಿ. ರಾಜ್ಯಶಾಸ್ತ್ರ ಪದವಿಧರರಾಗಿದ್ದರೂ, ಸ್ವಯಂ ಅಣ್ಣ ಜೆ.ಎಚ್.ಪಟೇಲ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರೂ ಅವರ ಮನೆ-ಮದುವೆಗಳು ಲೋಹಿಯಾರಂಥ ರಾಜಕೀಯ ನೇತಾರರ ಚರ್ಚಾ ಕೇಂದ್ರಗಳಾಗಿದ್ದರೂ ರಾಜಕಾರಣದಿಂದ ನಿರ್ಲಿಪ್ತರಾಗಿದ್ದರು ಪಟೇಲರು. ಪುಸ್ತಕ ಅವರ ಬಹಳ ದೊಡ್ಡ ಪ್ರೀತಿಯಾಗಿತ್ತು. ನನ್ನಂಥ ಎಳೆಯನೊಬ್ಬ ಬರಹವನ್ನು ಅದೂ ಗಾಂಧಿ, ಓಶೋ ಹಾಗೂ ಬುದ್ಧರ ಪುಟಗಳಿಗೆ ಬದ್ಧನಾಗಿರುವುದು ಇಷ್ಟವಾಗಿತ್ತು.
ಇಲ್ಲಿಂದ ಸುಮಾರು ವರ್ಷಗಳವರೆಗೆ ನನ್ನ ಗಾಂಧಿಯ ಪ್ರಭಾವದಿಂದ ಅವರು ಹೊರ ಬರಲೇ ಇಲ್ಲ. ಹೋದಲ್ಲೆಲ್ಲ ಈ ಕುರಿತೇ ಮಾತನಾಡಿದರು. ನಮ್ಮಿಬ್ಬರ ಕೊನೆಯ ಭೇಟಿ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ, ಮುರುಘ ಶರಣರ ಸಮಾರಂಭದಲ್ಲಿ. ಆನಂತರ ಅವರು ಪಾಶ್ರ್ವವಾಯು ಪೀಡಿತರಾದರು, ಮುಂದೆ ಮೃತ್ಯುವಶರಾಗಿ ಮೌನಕ್ಕೆ ಜಾರಿದರು.
ನನಗೆ ನೆನಪಿದೆ, ನನ್ನ ಬ್ಲಾಗುಗಳನ್ನು ಗಂಭೀರವಾಗಿ ಓದುತ್ತಿದ್ದ ಅವರು ನಾನು ಯಾವ ಮನಃಸ್ಥಿತಿಯಲ್ಲಿದ್ದೇನೆ ಎಂದು ಕಲ್ಪಿಸಿಕೊಳ್ಳುತ್ತಿದ್ದರು. ನೇರವಾಗಿ ಕೆಲವು ವಿಷಯಗಳನ್ನು ಪ್ರಸ್ತಾಪಿಸದೆ, ಲೇಖಕನೊಬ್ಬ ಅವುಗಳಿಂದ ಹೇಗೆ ಅತೀತನಾಗಬೇಕು ಎಂಬುದನ್ನು ತಿಳಿಸುತ್ತಿದ್ದರು.
ಬೆಳಸು ಬಾಲ್ಯಾವಸ್ಥೆಯಲ್ಲಿದ್ದಾಗ ಬೇಲಿಯ ಅವಶ್ಯಕತೆ ಇರುತ್ತದೆ. ಈ ಬೇಲಿಯೆ ಒಳಗಿರುವ ಬೆಳಸಿನ ಅಭಿಮಾನ, ರಕ್ಷಣೆ ಹಾಗೂ ಬದುಕು. ಒಂದರ್ಥದಲ್ಲಿ ಇದುವೇ ಸಾತ್ವಿಕ ಸೊಕ್ಕೂ ಕೂಡಾ. ಬೆಳೆಯುವ ಲೇಖಕನ ಪಾಲಿಗೂ ಇದು ಸತ್ಯ. ಪಟೇಲರಂಥ ಬೆಳಸುವ ಕೈಗಳ ಬೇಲಿಯಲ್ಲಿಯ ನನ್ನಂಥ ಲೇಖಕ ಮೊಳಕೆಯೊಡೆದು ಹೂ-ಹೀಚು-ಹಣ್ಣಾಗಿ ಸಮಾಜದ ಮಡಿಲಿಗೆ ಬೀಳುತ್ತಾನೆ. ಬೀಳಬೇಕು. ಯಾಕೆಂದರೆ ಮುಂದೆ ಆತ ಸಮದರ್ಶತ್ವದ, ಸಮಾಧಾನದ, ಸಾತ್ವಿಕ-ಸಾಧನೆಯ ಸಂದೇಶವನ್ನು ಸಾರಬೇಕಲ್ಲವೆ?
ಪಟೇಲರು ನನ್ನಲ್ಲಿ ತಮ್ಮ ಪ್ರೀತಿಯ ಆರೈಕೆಯ ಮೂಲಕ ಅಂಥ ಒಂದು ಅರಿವಿನ ದೀಪ ಹಚ್ಚಿಟ್ಟು ಹೋಗಿದ್ದಾರೆ. ಸಾವಿರ ಸಾಧ್ಯತೆಗಳ ಬರಹ ಹಾಗೂ ಬದುಕನ್ನು ಬಿಚ್ಚಿಟ್ಟು ಅವರು ಸಾವೆಂಬ ಸನಾತನ ಪಥದಲ್ಲಿ ಸಾಗಿದ್ದಾರೆ.
No comments:
Post a Comment