Total Pageviews

Saturday, August 5, 2017

ತುಮುಲಗಳಿಗೆ ತುಟಿಯಾಗಿ...


 ದೀಪ ಉರಿಯಿತೆನ್ನುವುದು ಬೆಳಕನ್ನು ಸೂಚಿಸಬೇಕು, ಮಾತಾಯಿತು ಎನ್ನುವುದು ಸಂವಹನವನ್ನು ಸೂಚಿಸಬೇಕು, ದಾರಿ ಕ್ರಮಿಸಿದೆನು ಎನ್ನುವುದು ಸಂಪರ್ಕವನ್ನು ಸಾಧಿಸಬೇಕು. ಕಾಲಾತೀತವಲ್ಲದ ನಮ್ಮ ಶಬ್ಧ ವ್ಯವಹಾರ, ಎಲ್ಲವನ್ನೂ ಶಬ್ಧದ ಚೌಕಟ್ಟಿನಲ್ಲಿಯೇ ಸರಿದೂಗಿಸಬೇಕು. ಸಮ್ಮೇಳನಗಳು ಹೃದಯ ಸಂಸ್ಕಾರಕ್ಕೆ, ಸಾಹಿತ್ಯ ಸಂವರ್ಧನೆಗೆ, ರಾಜಕೀಯ ಮುಕ್ತವಾದ ನಾಗರೀಕ ಆಲೋಚನೆಗಳಿಗೆ ಸಾಕ್ಷಿಯಾಗಬೇಕು. ಹಾಗೆಯೆ ನಮ್ಮ ಕವಿಗೋಷ್ಠಿಗಳು ಮುಗಿಯುವುದರಲ್ಲಿ ಕವಿಗಳು ಬರಬೇಕು. ಕವಿತೆಗಳ ಕೇಳಿಸಬೇಕು ಎನ್ನುವ ಆಶಯ ನನ್ನದು, ಯಾಕೆಂದರೆ ಕವಿತೆ ಎಲ್ಲರಿಗೂ ಬೇಕಾಗಿದೆ. ಆದರೆ ಎಲ್ಲರಿಗೂ ದಕ್ಕುವುದಿಲ್ಲ.
  ಕವಿತೆ ನೆಲದ ಮರೆಯ ನಿಧಾನ, ಮರದೊಳಗಣ ಕಿಚ್ಚು, ಶಿಲೆಯ ಮರೆಯ ಶಿಲ್ಪ, ಅದು ನಾದ, ಅದು ವೇ. ಅದಕ್ಕೆ ಭೇದ ಗೊತ್ತಿಲ್ಲ. ಅದು ಕ್ರಾಂತಿ, ಅದುವೇ ಶಾಂತಿ, ಅದು ಮಂತ್ರ, ಕೊನೆಗೆ ಅದುವೇ ಮುಗ್ಧತೆ. ಇಂಥ ಕವಿತೆಯ ಕೈ ಹಿಡಿದುಕೊಂಡು ನಾವು ಬಂದೆವೊ, ನಮ್ಮ ಕೈ ಹಿಡಿದುಕೊಂಡು ಕವಿತೆ ಬಂದಿತೊ ಒಟ್ಟಾರೆ ಎಲ್ಲವೂ ಬೆರೆತು, ಕವಿತೆ ಹುಟ್ಟಿದಡೆಲ್ಲಾ ಸೊಬಗಾಯಿತು, ಶರಣರ ಬೆಡಗಾಯಿತು, ವಚನವಾಯಿತು ಆತ್ಮ ವೃತ್ತಾಂತಕ್ಕೆ , ಬೇಂದ್ರೆಯ ಬೆಳಗಾಯಿತು, ಖಡ್ಗವಾಯಿತು ಕಾವ್ಯ ಪಂಪನಿಗೆ, ಕಲಿ ಕವಿಯಾದ, ಕವಿ-ಕಲಿಯ ಹಾಡು ಉಲಿಯಾಯಿತು ನಾಡಿಗೆ. ಹೀಗೆ ಸಾಧ್ಯವಾಗುವುದೆಲ್ಲವೂ ಕವಿತೆ. ಅದೊಂದು ಹೆಣ್ಣಾಗುವ ಪ್ರಕ್ರಿಯೆ, ಹಣ್ಣಾಗುವ ತವಕ, ಮತ್ತೆ ಮಣ್ಣಿಗಿಳಿದು ಮೊಳಕೆಯಾಗುವ ಧ್ಯಾನ.
 ಒಂದು ಪದ್ಯವನ್ನು ಕೇಳಬಹುದು, ಆದರದು ಆಡುವ ಮಾತಿನ ಸದ್ದಲ್ಲ. ಅದನ್ನು ಹಾಡಬಹುದು, ಆದರದು ಸಂಗೀತದ ರಾಗಬದ್ಧವಾದ ಶಬ್ದವಲ್ಲ. ಅದನ್ನು ಓದಬಹುದು, ಆದರದು ಮುದ್ರಿತಾಕ್ಷರಗಳ ನೋಟವಲ್ಲ. ಅದು ಅರ್ಥವತ್ತಾದ ಮಾಹಿತಿ, ಲಯಬದ್ಧ ಭಾಷೆಯಿಂದ ಹೇಳಬಲ್ಲ ಒಂದು ಪ್ರತಿಭಾಶಿಶು, ಕವಿಕಲ್ಪನೆ. ಹಾಡು, ಮಾತು, ಮುದ್ರಾಕ್ಷರಗಳು ಅದಕ್ಕೆ ಬೇರೆ ಬೇರೆಯಾದ ಅರ್ಥವಾಹಕಗಳು. ಸಂಗೀತದ ನಿಯಮಗಳಂತೆ ಪಧ್ಯ ರಚಿತವಾಗಿಲ್ಲ. ಆಡುನುಡಿಯಂತೆಯೂ ಅದಿಲ್ಲ. ಅದರ ಭಾಷೆಯನ್ನು ಅಂತಃಕರಣದ ಪ್ರಶಾಂತ ಕಿರಣವೆನ್ನಬಹುದು. ಪದ್ಯವೊಂದು ಅಂತರಂಗದ ಒಳಗತಿಯಾಗಿಬಿಟ್ಟಿದೆ. ನಿಃಶ್ಯಬ್ಧ ಮನದ ನಿಸರ್ಗಧಾರೆಯಾಗಿದೆ. ಕಾಲ ಹೋದ ಹಾಗೆ ಕವಿತೆ ಅತೀಂದ್ರಿಯವೂ, ಬೌದ್ಧಿಕವೂ, ಆಧ್ಯಾತ್ಮಿಕವೂ ಆಗುತ್ತ ಹೋಗುತ್ತದೆ.
 ಕವಿತೆಗೆ ಸಾವಿಲ್ಲ ಯಾಕೆಂದರೆ ಅದು ಹುಟ್ಟಲಿಲ್ಲ. ಇದುವರೆಗಿನ ಎಲ್ಲ ಭಾಷೆಗಳೊಳಗಿನ ಎಲ್ಲ ಕಾವ್ಯವೂ ನಮ್ಮ ಪಠ್ಯಕ್ರಮದ ವಿಭಜನೆಯಷ್ಟೆ. ಕವಿತೆ, ಅದು ಧರ್ಮ ಹೀಗಾಗಿ ಅದರ ವಿಭಜನೆ ಸಾಧ್ಯವಿಲ್ಲ. ಅದು ಮುಗಿಯದ ದಾರಿ. ಹೀಗಾಗಿ ನಮ್ಮ ವಿಭಜನೆಗಳಾದ ಹಳೆಕಾವ್ಯ, ಹೊಸಕಾವ್ಯ, ಇಂಗ್ಲೀಷ್ಕಾವ್ಯ, ನವೋದಯ, ನವ್ಯ, ಪ್ರಗತಿಶೀಲ, ದಲಿತ, ಬಂಡಾಯ, ಬಂಡಾಯೋತ್ತರ ಕಾವ್ಯ ಎನ್ನುವುದು ನಾವೆತ್ತಿಕೊಂಡ ಕಾವ್ಯದ ರಸಯಾತ್ರೆಯಲ್ಲಿ ವಿರಮಿಸಿದ ತಾಣಗಳಷ್ಟೆ. ಅದು ಕಾವ್ಯವೇ ವಿರಮಿಸಿದ ಹಂತವಲ್ಲ. ಕವಿತೆ ವಿರಮಿಸುವುದಿಲ್ಲ ಯಾಕೆಂದರೆ ಅದಿನ್ನೂ ಆರಂಭವೇ ಆಗಿಲ್ಲ. ಮಹತ್ವದ ಕಾವ್ಯಕ್ಕೆ, ಕವಿಗೆ ನಾವಿನ್ನೂ ಕಾಯುತ್ತಿದ್ದೇವೆ.
 ತುಮುಲಗಳಿಲ್ಲದ, ತೆಳುವಾದ, ತುಟಿಯಂಚಿನ ಕಾವ್ಯಕ್ಕೆ ತುಟಿಯಾಗುವಷ್ಟು ಆತ್ಮವಂಚನೆಯ ಕ್ರಿಯೆ ಮತ್ತೊಂದಿಲ್ಲ. ಎಲ್ಲೋ ಅಂಥ ಒಂದು ಕ್ರಿಯೆಗೆ, ಪ್ರಕ್ರಿಯೆಗೆ ಇಲ್ಲಿ ಒಳಗಾದನೇನೋ ಎನ್ನುವ ಸಂಶಯವಿದೆ ನನಗೆ. ಆದರೆ ಭವಿಷ್ಯದರ್ಶಿಯಾಗಬಲ್ಲ ಕವಿ ಸಮಕಾಲೀನತೆಯೊಂದಿಗೆಯೂ ಸಂವಾದಿಸಬೇಕಾಗುತ್ತದೆ. ಈಗಲೂ ನನ್ನ ನಂಬಿಕೆ ದೃಢವಾಗಿದೆ. ಇದು ಕವಿಯ ಭೌತಿಕ ಬದುಕಿನ ಕಾರಣಕ್ಕಾಗಿ ಹುಟ್ಟಿಕೊಂಡ ಪ್ರಶ್ನೆಯೆ ವಿನಃ ಕಾವ್ಯವೆನ್ನುವ ಧರ್ಮದ ಅನಿವಾರ್ಯತೆಯೇನೂ ಅಲ್ಲ.
 ಕೀರಂ: ಹೊಸ ಕವಿತೆ ಕಾವ್ಯದ ಕುರಿತ ನನ್ನೆಲ್ಲ ತಕರಾರು, ವಾದ, ಸಂವಾದ ಮತ್ತು ಅನುಸಂಧಾನಗಳಿಗೆ ಒಂದು ಅಪರೂಪದ ಅಖಾಡ. ಸಂಪಾದಕ ಕವಿಮಿತ್ರ ರಘುನಂದನ ಹೊಸ ತಲೆಮಾರಿನ ಹದಿನೈದು ಕವಿ-ಕಾವ್ಯದ ಓದಿಗೆ ನನ್ನನ್ನು ಇಲ್ಲಿ ಸಾಕ್ಷಿಯಾಗಿಸಿದ್ದಾರೆ. ಕಂಡದ್ದನ್ನು ಉಂಡು ಅಲೆಮಾರಿಯಾದವನೊಬ್ಬನನ್ನು ಮತ್ತೆ-ಮತ್ತೆ ನಿಲ್ಲಿಸಿ ಮಾತನಾಡಿಸುವ, ಸಾಕ್ಷಿಯಾಗಿಸುವ ಸಂದರ್ಭ-ಸಮಕಾಲೀನವಾಗಿಸುವ ಅವರ ವಾಸ್ತವಪ್ರಜ್ಞೆಗೆ ನಾನು ಋಣಿಯಾಗಿದ್ದೇನೆ. ಆದರೆ ಕಾವ್ಯ ಕುರಿತಾದ ನನ್ನ ನಿರ್ಭೀತ ನಂಬಿಕೆಗೆ ಬರುವ ಎಲ್ಲ ಹಂತದ ಚರ್ಚೆಗಳಿಗೆ ನಾನು ಅಣಿಯಾಗಿದ್ದೇನೆ.
ನಿರಂತರ ರಂಗ ಚಟುವಟಿಕೆ, ಕಾಜಾಣ ಕಾವ್ಯ ಬಳಗ, ಈಗ ಕೀರಂ ಹೊಸ ಕವಿತೆ, ಹೀಗೆ ಕಾವ್ಯಕ್ಕಾಗಿ ರಘುನಂದನರಲ್ಲಿ ನೂರೆಂಟು ನೆಪಗಳಿವೆ, ಸೆಳೆತಗಳಿವೆ. ಕಳೆದು ಹೋಗಬಹುದಾದುದನ್ನು ಕಟ್ಟಿಟ್ಟು, ಹೊಸ ದೃಷ್ಠಿಕೋನ ಮತ್ತು ಸಾಕ್ಷಿಭಾವಗಳೊಂದಿಗೆ ಸಾಹಿತ್ಯವನ್ನು ನೋಡಬೇಕೆನ್ನುವುದು ಅವರ ಕಾಳಜಿ. ಕವಿ ಸ್ವಯಂಭೂ ಅಲ್ಲ, ಆತ ಸಮಾಜ ಪ್ರೇರಿತ ಸಾವಿರ ಅನುಭವಗಳ ಪ್ರತಿಫಲ. ಅವನಿಲ್ಲದ ಸಮಾಜ, ಸಮಾಜವಿಲ್ಲದ ಆತ ಎರಡು ಅರ್ಪೂರ್ಣಗಳೆ ಎನ್ನುವ ಪರಂಪರೆಯ ಕಾಳಜಿಯ ಓದು ಇಂಥ ಸಂಪಾದನೆಗೆ ಪ್ರೇರಣೆಯಾಗುತ್ತದೆ. ಇದು ರಘುನಂದನರಕೀರಂ ಹೊಸ ಕವಿತೆ ಪಾಲಿಗೂ ಸತ್ಯ.
  ಚರ್ಚೆಯ ಮೊದಲ ಕವಿ ಮತ್ತು ಕವಿತೆ - ತೇಜಸ್ಸಿನ ಕಾಡು, ನಾಗರಾಜ್ ನವೀಮನೆಯವರದ್ದು. ಇಲ್ಲಿ ಒಂದು ಹೊಸ ಕವಿತೆಯೆ ಹಳೆಯ ಜೀವದ ನಂಟು. ಯಾವ ರೀತಿ ಕಾವ್ಯಕ್ಕೆ ಹೊಸ- ಹಳೆಯ ಎಂಬ ಕಾಲ ಸೂಚಕಗಳು ಅರ್ಥಹೀನವೋ, ಅಷ್ಟೇ ಅರ್ಥಹೀನ ಅದನ್ನು ಜೀವಕ್ಕೆ ಅನ್ವಯಿಸುವುದು ಎಂಬುದು ಚೆನ್ನಾಗಿ ಗೊತ್ತಿದ್ದೂ ಕಿ ಮಾತುಗಳನ್ನಾಡಿದ್ದೇನೆ. ಕಟುಸತ್ಯಗಳನ್ನು ಬದುಕಿದವರು ತೇಜಸ್ವಿ. ಕಾನನದ ಅನಂತ ಲೋಕವನ್ನು ಭೌತಿಕ ಹಿನ್ನೆಲೆಯಲ್ಲಿ ಅನಾವರಣಗೊಳಿಸಿದ ಮಹತ್ವದ ಪ್ರತಿಭೆ. ಅವರ ಓದಿಗೆ ಕುವೆಂಪು ಅವರ ದರ್ಶನ ಶಕ್ತಿಯ ಹೊಳಪಿಲ್ಲವಾದರೂ ಕಾರಂತರ ವೈಜ್ಞಾನಿಕ ದೃಷ್ಠಿ ಇತ್ತು. ಒಂದರ್ಥದಲ್ಲಿ ಅವರು ಕಾರಂತರ ಮುಂದುವೈಕೆಯೆ ಅನ್ನಬೇಕು. ಕನ್ನಡದ ಎಲ್ಲ ವಯೋಮಾನದ ವಿಭಿನ್ನ ಅಭಿರುಚಿಯ ಓದುಗರನ್ನು ತೇಜಸ್ವಿ ವ್ಯಾಪಿಸಿದಷ್ಟು ತೀವ್ರವಾಗಿ ಇನ್ನ್ಯಾರೂ ವ್ಯಾಪಿಸಿಲ್ಲ. ಅಂಥ ಅಗಾಧ ಪ್ರಭೆಯ ಲೇಖಕರ ನಿರ್ಗಮನ ಎಂಥ ನಿರ್ವಾತವನ್ನು ಸೃಷ್ಟಿಸಿತು ಎನ್ನುವುದರ ಕುರಿತು ನಾಗರಾಜ್ ನವೀಮನೆಯವರತೇಜಸ್ಸಿನ ಕಾಡುಅತ್ಯಂತ ಧ್ವನಿ ಪೂರ್ಣ ಕವಿತೆ. ಕವಿತೆಯ ಕೊನೆಯ ಪ್ರಶ್ನೆಕಾಡು-ಕಾಡಾಗಿದ್ದ ಕಾಡಿನ ಜೀವ ಹೋಗಿದ್ದಾದರೂ ಎಲ್ಲಿಗೆ?’ ಎನ್ನುವ ಸಾಲುಗುಳಿಗೆ ಎಷ್ಟೆಲ್ಲ ಧ್ವನಿ ಸಾಧ್ಯತೆಗಳು. ಮನೆ ಸಾಕಾದವರು ಕಾಡು ಸೇರುತ್ತಾರೆ. ಕಾಡನ್ನೇ ಮನೆ ಮಾಡಿಕೊಂಡವರು ಎಲ್ಲಿಗೆ ಹೋಗುತ್ತಾರೆ?
 ಕಾವ್ಯ ಒಂದು ವಿಶಾಲ ಮರ. ಅದು ಬಂಜೆಯಲ್ಲ, ಶಾಪಗ್ರಸ್ತವಲ್ಲ. ಹೀಗಾಗಿ ಮರ ಅವಿನಾಶಿಯೂ ಕೂಡ. ಮರ ಎನ್ನುವುದು ಬರಿ ನೆರಳಲ್ಲ, ಹಾಡು-ಹಕ್ಕಿಗಳ ಬರಿ ಕೊರಳಲ್ಲ, ಭರವಸೆಯೂ ಕೂಡ. ಕಾವ್ಯದ ವಿಶಾಲ ವೃಕ್ಷದಲ್ಲಿ ಸಮಸ್ತ ಬದುಕು ಪಲ್ಲವಿಸಿದೆ. ಅರ್ಥಗಳ ಸಂಭ್ರಮ ಸಾಧ್ಯವಾಗಿದೆ ಸಾಲಿಗೊಂದು ಸಾಕ್ಷಿ ಯಂಶ ಬೇಂಗಿಲ ಅವರತವರು ಮರೆತವರುಇದು ವರ್ತಮಾನದ ವಾಸ್ತವಕ್ಕೆ ಮುಖಾಮುಖಿಯಾದ ಕವಿತೆ. ಸಾರ್ವಕಾಲಿಕ ಎನ್ನುವ ಒಂದು ಸಾಲೂ ಇಲ್ಲದೆ ಕ್ಷಣದ ಸತ್ಯಗಳಿಗೆ ಸಾಕ್ಷಿಯಾದ ಕವಿತೆ. ಕವಿಗೆ ರಚನಾ ಶಕ್ತಿ, ಭಾಷೆ ಎಲ್ಲವೂ ಗೊತ್ತು. ಆದರೆ ಇವುಗಳಿಂದ ಅತೀತವಾದ ಧ್ವನಿಯೊಂದು ಕವಿ ಭರವಸೆಯ ಅಭಿವ್ಯಕ್ತಿಗಳು ಅಲ್ಲಲ್ಲಿ ಮಿಂಚಿ ಮರೆಯಾಗುತ್ತವೆ. ಉದಾಹರಣೆಗೆ                           
ತವರ ಮರೆತವರು
ಇಲ್ಲೇ ಇದ್ದಾರೆ,
ಪಕ್ಕದ ಓಣಿಯೊಳಗೊಮ್ಮೆ ಹೆಜ್ಜೆಗಳ ಕೂಡಿಸಿದರೆ
ಕಾಣಸಿಗುತ್ತಾರೆ.’
ಹೀಗೆ ಎಲ್ಲ ಗೋಡೆಗಳ ಕೆಡವಿ ಅನಿಕೇತನವಾಗುವ ಕವಿತೆ ಸ್ತ್ರೀ ನೆಲೆಯ ವಾಚಾಳಿ ವ್ಯಾಪಾರಕ್ಕೆ ಸಿಕ್ಕು ಶಬ್ದಸಂತೆಯಾಗಿಬಿಡುತ್ತದೆ.
 ಕಾವ್ಯ ಕಾಲದ ಕೂಸು ಎಷ್ಟು ಸತ್ಯವೋ ಅಷ್ಟೇ ಸತ್ಯ ಕಾಲಾತೀತವಾದ ಸಂಸ್ಕಾರಗಳ ಶಿಶು. ಒಂದು ಯುಗಧರ್ಮ ಒಬ್ಬ ಕವಿ ಅಥವಾ ಕಾವ್ಯದ ಮೂಲಕ ಮಾತನಾಡುತ್ತಿರುತ್ತದಷ್ಟೆ. ಹೀಗೆ ಮಾತನಾಡುವ ಕವಿ ದಲ್ಲಾಳಿಯಾಗಬಾರದಷ್ಟೇ.
 ಪ್ರೀತಿಯಂಥ ನವಿರಾದ ಸಂವೇದನೆಯನ್ನು ಅಷ್ಟೇ ನವಿರಾಗಿ ನಿಭಾಯಿಸಿದ ಕವಿತೆ ಭವ್ಯ ಗೌಡ ಅವರಜಾರಿದ ನೆನಪುಗಳು. ಇಲ್ಲಿನಅಂದುಕೊಂಡಷ್ಟೇ ಹಾಲಿನಂತಹ ಬೆಳಕು, ಸುಳಿಯದಿರು ಎನ್ನುವಷ್ಟರಲ್ಲಿಯೇ ಸುಳಿಯಂತೆ ಬಂದ ಬಿರುಗಾಳಿ, ‘ಕನಸೆಂಬ ಕನಸು.. ಹೀಗೆ ಕವಿತೆಯುದ್ದಕ್ಕೂ ಕಾಡುವ ಚಿತ್ರಗಳು ಮತ್ತೆ ಮತ್ತೆ ಭವ್ಯಗೌಡರ ರಚನೆಯನ್ನು ಗಮನಿಸುವಂತೆ ಮಾಡುತ್ತವೆ. ಕವಿತೆಯ ಕೊನೆಯ ಭಾಗ ಅದರಷ್ಟಕ್ಕೇ ಒಂದು ಸ್ವತಂತ್ರ ಕವಿತೆ.
ಮಧುಸೂಧನ್ ವೈ.ಎನ್ ಅವರಕಾಲ ಮೇಲೆ ಹರಿದ ಚಕ್ರಒಂದು ನಾಟಕದಂತೆ ತೆರೆದುಕೊಳ್ಳುವ ಕವಿತೆ. ಇದು ಎಲ್ಲೊ ಪಾಕಿಸ್ತಾನದ ಪ್ರಸಿದ್ಧ ಕವಿ ಮೌಲಾನಾ ಹಸರತ್ ಮೊಹಾನಿ ಅವರ ಕಾಫಿ ರಾಗದಲ್ಲಿ, ಗುಲಾಂ ಅಲಿಯವರ ಕಂಠಸಿರಿಯಲ್ಲಿ ಸಂಯೋಜನೆಯಾದ ಗಝಲ್, ‘ಚುಪ್ಕೆ, ಚುಪ್ಕೆ ರಾತ್-ದಿನ್ ಆಸೂಂ ಬಹಾನಾ ಯಾದ್ ಹೈ. ಕವಿತೆಯಲ್ಲಿಯ ದೋಪಹೆರ್ ಕೀ ಧೂಪ್ ಮೇ, ನಂಗೆ ಪಾವ್ ಆನಾ ಯಾದ್ ಹೈ-ಸಾಲುಗಳನ್ನು ಮತ್ತೆ ಮರು ಕೇಳಿಸಿಕೊಳ್ಳುವ, ಒರೆಗೆ ಹಚ್ಚುವ, ಕನ್ನಡ ಹಾಗೂ ಉರ್ದು ಕಾವ್ಯಕ್ಕೆ ಒಸಗೆ ಬೆಸೆಯುವ ಅಪರೂಪದ ರಚನೆಯಾಗಿದೆ. ‘ಹತ್ತಿದ ಏಣಿ, ಕೈಗೆಟುಕದ ದಿಗಂತ, ಹಿಮ್ಮಡಿಯನ್ನು ಹಿಂಡಿ ತೆಗೆದ ಮುಳ್ಳು, ಇದು ನಮ್ಮ ಬದುಕಿನ ತ್ರಿಶಂಕು ಸ್ಥಿತಿ. ಸರ್ವವ್ಯಾಪಿ ಎನ್ನಿಸುವಷ್ಟು ವಿಸ್ತಾರವಾದ ಭಾವ ಸದಾ ಅಭದ್ರತೆಯಿಂದ ನಲುಗುವ ನಮ್ಮ ಸಾಮಾಜಿಕ ಸ್ಥಿತಿಗೆ ಮಧುಸೂಧನ್ ಅವರ ಕವಿತೆ ಕನ್ನಡಿ ಹಿಡಿಯುತ್ತದೆ.
ಕೆಲವೊಮ್ಮೆ ಹೀಗಾಗುತ್ತದೆ, ಏನೆಲ್ಲವನ್ನು ಕುರಿತು ಬರೆಯುವ, ಚಿಂತಿಸುವ, ಧ್ಯಾನಿಸುವ ನಾವು ಪಕ್ಕದಲ್ಲಿದ್ದವರನ್ನೇ ಮರೆಯುತ್ತೇವೆ. ಮರೆತದ್ದಕ್ಕಾಗಿ ಮತ್ತೆ ಮರೆಯುತ್ತೇವೆ. ಕಾಲ ಯಾರಪ್ಪನ ಮನೆ ಆಸ್ತಿ? ಕ್ರಮಿಸಿಬಿಡುತ್ತದೆ. ನಾವು ಎಚ್ಚರವಾಗುವುದರೊಳಗಾಗಿ ದಾಖಲಿಸಬೇಕಾದ ವಿಚಾರ ವಿರಮಿಸಿಬಿಡುತ್ತದೆ. ಆಗ ನಮ್ಮ ಅಭಿವ್ಯಕ್ತಿಗಳೆಲ್ಲ ಆಷಾಡದ ಗಾಳಿಯಂತಾಗಿ ಬಿಡುತ್ತವೆ.
 ಹೀಗಾದವರಲ್ಲ ಕವಿ ಗೋರವಿ ಆಲ್ದೂರು. ಇವರರಕ್ತ ಹನಿಯುವುದು ಬೇಡನಮ್ಮೆಲ್ಲರ ನಿರೀಕ್ಷೆಯ ಕಾವ್ಯವೇ. ಕವಿತೆಯ ಆಶಯ, ಕವಿ-ಕಾವ್ಯಗಳೆಂಬ ಸೃಜನಶಕ್ತಿ ಹಿಂದಿರುವ ಶಕ್ತಿ ಹಾಗೂ ಸಾರ್ಥಕ್ಯದ ಗಮ್ಯ ತೋರಿಸುವ ರಚನೆ. ಇಂಥ ಕೆಲವೇ ಕೆಲವು ಕವಿ-ಕಾವ್ಯಗಳು ನಮ್ಮ ಸಮಾಜವನ್ನು ಒಂದಿಷ್ಟು ಸಭ್ಯವಾಗಿರಿಸಿದ್ದು. ‘ಕರಿ-ಬಿಳಿಯ, ನರುಗೆಂಪು ತೊಗಲ ಜನರ ಹೆಗಲ ಮೇಲೆ ತೂಕದ ಯಂತ್ರ ಕೆಲಸ ಮಾಡಲಿಹೆಪ್ಪಿನಡಿಯಲ್ಲಿ ಸತ್ತ ಮೀನುಗಳು ಬೀಜವಾಗಲಿಹಾಗೂಧೂಳು ಸರಿಯಲಿ, ಖಗೋಳದ ಮಿದುಳ ತುಂಬಾ ಹೊಸ ಗ್ರಹಗಳು ಮೂಡಲಿಸಾಲುಗಳು ಛಿದ್ರವಾದ ಮಾನವ ಲೋಕ ಭದ್ರವಾಗಲಿ ಭಾತೃತ್ವದಿಂದ, ಮಾತೃತ್ವದಿಂದ, ಮನುಷ್ಯತ್ವದಿಂದ ಎನ್ನುವ ಹಂಬಲಕ್ಕೆ ಸಾಕ್ಷಿಯಾಗುತ್ತವೆ.
 ಕಾಮದ ಪತನಕ್ಕೆ ಅನೇಕ ದಾರಿಗಳಿವೆ. ಅವೆಲ್ಲವೂ ಶಂಡತ್ವದ ವಿಚಾರಗಳಲ್ಲ. ಕಾಮ ಮಾತಾಗಬಲ್ಲುದು, ಕವಿತೆಯಾಗಬಲ್ಲುದು ಪ್ರಪಂಚದ ಅದೆಷ್ಟೋ ಶಕ್ತಿಗಳಾಗಿ ಅದು ಮಾರ್ಪಡಬಲ್ಲುದು, ಶರೀರ ಮುಖೇನ ವಿಸರ್ಜನೆಯೊಂದೇ ಅದಕ್ಕಿರುವ ಮಾರ್ಗವಲ್ಲ. ಹೀಗಾಗಿ ಅದನ್ನು ರೂಪಾಂತರಗೊಳಿಸಿದ ಅನೇಕ ಸಾಧಕರನ್ನೂ ನಾವು ಗಮನಿಸಿದ್ದೇವೆ.
ಕವಯತ್ರಿ ಚಾಂದಿನಿಹೊರ ನಡೆಯುತ್ತದೆ ಬೆಂದ ಜೀವ, ಜಂಗಮನಂತೆ ಜಗದೊಳಗೆಎಂದು ಹೇಳುತ್ತಲೇ, ಜಗತ್ತಿನ ಸಚರಾಚರ ಪ್ರಪಂಚದ ಬೆಳಗಿನ ಹಲವು ನೆಲೆಯನಗ್ನ ಬಿಂಬದ ಸತ್ಯಗಳತ್ತನಮ್ಮ ಗಮನ ಸೆಳೆಯುತ್ತಾರೆ. ದೇಹ-ದೇಶ, ಭಾವ-ಭಾಷೆ ಹಾಗೂ ಕಾಲಗಳ ಹಂಗು ಹರಿದು ಜೀವವನ್ನು ಬರೀ ಜಂಗಮವಾಗಿ ನೋಡುವವರ ಎದೆಯಲ್ಲಿ ಇಂಥ ಕವಿತೆಗಳು ಅರಳುತ್ತವೆ. “ದೂರ ಸರಿಯಲು ಸಡಿಲವಾಗುತ್ತಿವೆ
ಆಸೆಯೆಂಬ ಕುದುರೆಯ ಕಾಲು
ಮುರಿಯುವ ಮುನ್ನ ಕನಸಾಗಿ ಉಳಿದುಕೊಳ್ಳಲಿ
ಭಾವನೆಯ ನೆಮ್ಮದಿಯ, ಶಾಂತ ಸಾಗರವಾಗಿ.”
 ಇಂಥ ಜೀವನ ಸಾಂದ್ರತೆಯ ಕವಿತೆಗಳು ಶಬ್ದಗಳನ್ನು ನೆಚ್ಚಿಕೊಂಡಿರುವುದಿಲ್ಲ. ಪರಿಪಕ್ವ ಅನುಭವದ ಮೂಸೆಯಲ್ಲಿ ಮೈದಳೆಯುತ್ತವೆ. ಸಹಜಾಸಹಜಗಳ ಲೋಕದಲ್ಲಿ ಜೀವ ಸವಕಲಾಗದಂತೆ ಸಂಭಾಳಿಸಿಕೊಳ್ಳಬೇಕಾದ ಧಾರುಣತೆಯನ್ನು ಹೇಳುವ ಕವಿತೆ ಒಂದು ಪೂರ್ಣ ಶಿಲ್ಪ.
ವಿಚಾರ ಅಥವಾ ಘಟನೆಯ ವಿಸ್ತಾರ ಹಾಗೂ ಪ್ರಸ್ತಾರಗಳು ಕವಿತೆಯನ್ನು ಕಟ್ಟಿಕೊಡಲಾರವು. ಕವಿತೆ ಘಟಿಸುವ ತೂರ್ಯವೇ ಬೇರೆ. ಅದಕ್ಕೆ ಎದೆಯ ಬಾಂಡಲೆ ಸಜ್ಜಾಗಿರಬೇಕಷ್ಟೇ. ರವಿ ಕುಲಕರ್ಣಿಯವರ ಕಾವ್ಯಕ್ಕೆ ಇದಿನ್ನೂ ಒಗ್ಗಬೇಕಾದ ಸಂಸ್ಕಾರ. ಕವಿತೆ ಕತೆಯಾಗಲಿ ಚಿಂತೆಯಿಲ.್ಲ ಅದು ಸು.ರಂ.ಯಕ್ಕುಂಡೀಯವರ ಕಥನ-ಕವಿತೆಯಂತಾಗಲಿ, ಇಲ್ಲವೇ ಜಿ.ಎಸ್.ಎಸ್ ರಂತೆ ಎದೆಯ ಆಲಾಪವಾಗಲಿ. ರವಿಯವರಅವಳು ಮತ್ತು ಅವನುಪದ್ಯದ ಆರಂಭದ ನಾಲ್ಕು ಸಾಲುಗಳೇ ಉತ್ತಮ ಕವಿತೆಗೆ ಉದಾಹರಣೆಗಳು. “ಅವಳು ಬೇಟೆಯಾಡುತ್ತಿದ್ದಾಳೆ ಅವನ ನೆನಪುಗಳನ್ನು ಪ್ರೀತಿಯೇ ಇಲ್ಲದ ಮರಳುಗಾಡಲ್ಲಿ.. ಅನಂತರದ ಲಭಿಸುವಿಕೆಯೆಲ್ಲ ಬಹಳ ಜೈವಿಕ. ನೆಲದಾಳಕ್ಕೊ, ಆಗಸದೆತ್ತರಕ್ಕೊ ಕವಿತೆಗೆ ಬಹಳ ಕೆಲಸವಿದೆ. ಮಧ್ಯದಲ್ಲಿರುವುದೆಲ್ಲ ಶಬ್ದ ಸಂಸಾರ. ಇದಕ್ಕೆ ಜೋತುಬಿದ್ದ ಕವಿತೆ ಸೋಲುತ್ತದೆ.

No comments:

Post a Comment