ಈ ಇರುಳಿನಲ್ಲಿ ಅದೆಷ್ಟು ದೂರ ಹೋಗಿದ್ದೆನೊ
ಮರುಳು ಮುನಿಯನ ಹಾಗೆ,
ಮರೆತಿದ್ದೆನೊ ಮಾತು
ಹೆಣವಾಗಿತ್ತೊ ಗುಣ ಹೇಳು ಸಖಿ,
ಹೃದಯ ಧನವಿಲ್ಲದವರ ಗೊಂಡಾರಣ್ಯದಲ್ಲಿ
ಗೊತ್ತಿಲ್ಲ ಸಖಿ, ಬೆಳಕಿಗೊಂದು ಚುಕ್ಕೆಯೂ ಇಲ್ಲ
ಹೆಣದ ಹಾದಿಗೆ ಹೆಜ್ಜೆ ಗುರ್ತೂ ಇಲ್ಲವಲ್ಲ
ಹೆಗಲ ಹೊರೆಯಾದವಗೆ
ಹಗಲಿಲ್ಲ, ಇರುಳಿಲ್ಲ, ತೊಗಲಿಲ್ಲ, ತಿಳಿಯಿಲ್ಲ
ಬರಿ ಮಾತಿನಾ ಮೈಥುನ.
ಎದೆಗೆ ಬಿದ್ದದ್ದು ಹುವೊ, ನದಿಭಾರ ನೋವೊ
ನಿನಗಷ್ಟೇ ಗೊತ್ತು, ಹೇಳು ಸಖಿ.
ನಿನ್ನೆದೆಯ ಬಟ್ಟೆಯಲಿ, ಕಣ್ಣ ಬೊಟ್ಟಲುಗಳಲಿ
ಮುಚ್ಚಿಟ್ಟ ಮಾತುಗಳು
ಕಟ್ಟಿಟ್ಟ ಕನಸುಗಳು ಕೂಸಾದವೊ
ಮಾಸಿದವೊ ಬಳಸಿದ ಬಟ್ಟೆಗಳಂತೆ
ವನವಾಸ ಹರಿದು ಹಾರಿದವೊ ಚಿಟ್ಟೆಗಳಂತೆ ಹೇಳು ಸಖಿ,
ನನ್ನ ಬದುಕೊಂದು ಬಿಕನಾಸಿ ಹಾಡು
ಎಲ್ಲ ಕಡೆ ಸಿಕ್ಕಲ್ಲ ಸುಖನಾಸಿಯೆ
ಹೋದದ್ದೇ ಹೋದದ್ದು ಉದ್ದುದ್ದಕೂ
ಸದ್ದುಗದ್ದಲದಲ್ಲಿ ಸಿಕ್ಕವಳು ನೀನೊಬ್ಬಳೆ
ಮನದ ಕಸಗುಡಿಸಿ, ನೆಟ್ಟು ತುಳಸಿ
ಸೋಲುಗಳ ಪೇರಿಸಿ, ಇಚ್ಚೆಗಳ ಸಾರಿಸಿ
ಕೈಚಾಚಿದವನ ಕರುಳ ಕರೆಗೆ
ಬಂದವಳು ನೀನು, ಹುಚ್ಚುಗಳ
ನೆನಪಿನೀ ದಾರಿ ನಿನಗೇ ಗೊತ್ತು ಹೇಳು ಸಖಿ
ಮರೆಯಾದರೆ ಮುಗಿಲಿನಲಿ
ನಿಂತ ನೆಲದ ಕೇಳಗೂ ಕೂಡ
ಹೆಣದ ಗುಂಡಿಗಳೆ, ಕಳಚಿದ ಕೊಂಡಿಗಳೆ
ಪಳುವಳಿಕೆಯಾದವನ ಪುಟ ಎತ್ತಿ
ಓದಿದವಳು ನೀನೇ ಸಖಿ
ಕೊಚ್ಚಿ ಹೋದ ಬದುಕನು
ರಚ್ಚೆ ಹಿಡಿದು, ಕಚ್ಚಿ ಹಿಡಿದು
ನಿಸ್ತೇಜ ಕಣ್ಣಿಗೆ ಕಾಂಬಿಲ್ಲ ಗೆರೆ ತೀಡಿ
ನಿಸ್ತೋತ ಕಾಲಿಗೆ ಹೆಗಲಾಸರೆಯ ನೀಡಿ
ಹಗಲು ಹರಿಯುವವರೆಗೆ
ರಮಿಸಿ ಸಾವರಿಸಿ, ಸಾವ ಭಯ ಬದಿಗಿರಿಸಿ
ಬಿದಿಗೆ ಚಂದಿರರ ಸಾಲು ನೆಟ್ಟವಳೂ ನೀನೇ ಸಖಿ
ನನಗೀಗ ನೋವಿಲ್ಲ, ನಲಿವಿನಾಶೆಯೂ ಇಲ್ಲ
ನೀನೆಂದರೆ ಬದುಕು, ನೀನೆಂದರೆ ಬೆಳಗು, ನೀನೆಂದರೆ ಬಾಳು ಕೇಳು ಸಖಿ