ಹೆತ್ತೂರಿನಲ್ಲಿ ಕವಿ ಕಾವ್ಯಕ್ಕೆ ಸನ್ಮಾನ ಎಲ್ಲ ಕಾಲಕ್ಕೂ ಸಂಭ್ರಮದ ಸಂಗತಿಯೆ. ಇದು ಪ್ರಪಂಚದ ಎಲ್ಲ ಕವಿಗಳಿಗೂ, ಕಾವ್ಯಕ್ಕೂ ದಕ್ಕಿದ್ದೇನಲ್ಲ. ಊರು ಎಚ್ಚರವಾಗುವುದರೊಳಗೆ ಕವಿಯೇ ಕಣ್ಮರೆಯಾದ, ಕವಿ ಜೀವಂತವಾಗಿರುವಾಗ ಊರು ನಿರ್ಲಕ್ಷಿಸಿದ ಅನೇಕ ಉದಾಹರಣೆಗಳನ್ನು ನಾವು ನೋಡುತ್ತೇವೆ. ಕವಿ ತನ್ನ ಕಾವ್ಯದೊಂದಿಗೆ ಇಡೀ ಪ್ರಪಂಚವನ್ನೇ ಸುತ್ತಿ ಬಂದರೂ ಅದರ ಒಳಗೊಂದು ಊರಿನ ಒರತೆಯನ್ನು ಕಾಪಾಡಿಕೊಂಡೇ ಬಂದಿರುತ್ತಾನೆ.
ಎಷ್ಟೇ ಭಿನ್ನ ಸಂಸ್ಕøತಿ, ಪರಿಸರ, ಪಾತ್ರ, ಸಂಗತಿ ಮತ್ತು ಅನುಭವಗಳಿಗೆ ಆತ ಎದುರಾದರೂ ಕೂಡ ಎದುರಿಸುವುದು ಮಾತ್ರ ಊರು ಎಂಬ ಭದ್ರ ನೆಲೆಯ ಮೇಲೆ. ಊರು ಬದಲಾದ ಮಾತ್ರಕ್ಕೆ ಮಣ್ಣು ಮತ್ತು ಮನುಷ್ಯರು ಬದಲಾಗಿರುವುದಿಲ್ಲ ಎನ್ನುವುದೇ ಕವಿ ಮತ್ತು ಪ್ರಪಂಚದ ಅನುಸಂಧಾನಕ್ಕೆ, ಪ್ರಪಂಚ ಮತ್ತು ಊರಿನ ಅನುಸಂಧಾನಕ್ಕೆ ಮುಖ್ಯ ದಾರಿಯಾಗಿ ಕಾಣುತ್ತದೆ. ಊರೆನ್ನುವುದು ಕರಸ್ಥಳದ ಲಿಂಗ. ಪ್ರಪಂಚ ಎನ್ನುವುದು ಅದರ ಪ್ರಭೆ ಅಷ್ಟೆ.
ಹೀಗೆ ಹೆತ್ತೂರು ಹತ್ತಿಮತ್ತೂರಿನಲ್ಲಿ ಕವಿ ಚಂಪಾ, ಅವರ ಕಾವ್ಯ ಮತ್ತು ಅವರ ಊರಿಗೆ ಮುಖಾ-ಮುಖಿಯಾಗುವ ಒಂದು ಅಪರೂಪದ ಸಾಯಂಕಾಲ ದಿನಾಂಕ:27.10.2017
ರಂದು ನನಗೆ ಒದಗಿ ಬಂತು. 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜಿಯಗೊಂಡ ಚಂಪಾ ಅವರನ್ನು ಊರ ಜನ ಅಭಿನಂದಿಸುವ ಆ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ತಲೆಮಾರಿನ ಪ್ರತಿನಿಧಿಯಾಗಿ ಪ್ರೊ. ಗಿರಡ್ಡಿ ಗೋವಿಂದರಾಜ (Prof. Giraddi Govindaraj), ಈ ತಲೆಮಾರಿನ ಪ್ರತಿನಿಧಿಯಾಗಿ ನಾನು ಹೀಗೆ ಮುಖ್ಯ ಅತಿಥಿಗಳಾಗಿ ಇಬ್ಬರೂ ಭಾಗವಹಿಸುವ ಅವಕಾಶ ಸಿಕ್ಕದ್ದು ಒಂದು ಅಪರೂಪದ ಘಳಿಗೆ ಅಂದುಕೊಂಡಿದ್ದೇನೆ.
ಸ್ವಯಂ ಚಂಪಾ ಕಲಿತ ನೂರಾ ಐವತ್ತು ವರ್ಷಗಳ ಚರಿತ್ರೆಯ ಶಾಲೆ, ಮನೆ, ಗುಡಿ-ಗುಂಡಾರ ಕೆರೆ ಕಟ್ಟೆಗಳಿಗೆ ಅಂದು ಮಾತು ಮೂಡಿದ ಹೊತ್ತು. ಚಿಲಿಪಿಲಿ-ಚಿಲಿಪಿಲಿ ಹಕ್ಕಿಗಳಂತೆ ಅರ್ಥ ಸ್ವಾರ್ಥದ ಪರಿಧಿ ಮೀರಿ ಮಾತನಾಡುತ್ತಿದ್ದ ಮಕ್ಕಳು, ರಾಜಧಾನಿಯಿಂದ ರಂಟೆಕುಂಟೆಯವರೆಗೆ ಚಂಪಾ ಗೆಳೆಯರು, ಎಷ್ಟೆಲ್ಲಾ ಪ್ರೀತಿ, ಮಾತು, ಹಾಡು ಎನೇಲ್ಲ ನೆನಪುಗಳು ಮತ್ತೆ ರಾತ್ರಿಗೆ ಚಂಪಾ ಅವರ ನಾಟಕ ‘ಟಿಂಗರ ಬುಡ್ಡಣ್ಣ’. ನಾಡಿಗೆ ಹೆಸರಾದ ಚಂಪಾ ಊರಿಗೆ ಮಾತ್ರ ಟಿಂಗರ ಬುಡ್ಡಣ್ಣನೆ.
ನನ್ನ ಭಾಷಣದಲ್ಲಿ ನಾನು ಹೇಳಿದ್ದಿಷ್ಟೆ. ‘ಊರು ಮಾತನಾಡಿಸದ ಕವಿ ಎಷ್ಟು ದೊಡ್ಡವನಾದರೇನು? ಏನು ಬೆಳೆದರೇನು? ಊರು ನಮ್ಮೊಂದಿಗೆ ಮಾತನಾಡಬೇಕು, ಜಗಳಾಡಬೇಕು ಹಾಗೆಯೇ ಜೀವ-ಜೀವಕ್ಕೂ ನಮ್ಮನ್ನು ಬೆಸೆದುಕೊಳ್ಳಬೇಕು.’ ಜಗಳ ಮತ್ತು ಪ್ರೀತಿಯಿಂದ ಚಂಪಾ ಹತ್ತಿಮತ್ತೂರನ್ನು ಹಾಗೆ ಮೈಗೊಂಡಿಸಿಕೊಂಡಿದ್ದಾರೆ. ಅಪ್ಪನ ಅಂತ್ಯ ಸಂಸ್ಕಾರದಿಂದ ಅಕ್ಕ-ತಂಗಿಯರ ಕಷ್ಟದವರೆಗಿನ ಊರ ನಂಟಿನ ಅವರ ಬರಹಗಳನ್ನು ನಾನು ಓದಿದ್ದೇನೆ. ಗೆಳೆಯ ರಂಗನ ಪದ್ಯದಿಂದ ಚಂಪಾಯಣದವರೆಗೂ ಹತ್ತಿಮತ್ತೂರಿನ ಮೆರವಣಿಗೆಯೇ. ಈ ಕಾರ್ಯಕ್ರಮ ಹೃದಯ ಶ್ರೀಮಂತಿಗೆ ಸಾಕ್ಷಿಯಾದ ಒಂದು ಐತಿಹಾಸಿಕ ಕ್ಷಣ.
ಈ ಸಮಾರಂಭವನ್ನು ಕುರಿತು ಬರೆಯುವುದು ಬಹಳವಿದೆ. ಏನೋ ಅವಸರ, ಈಗಿಷ್ಟು ಸಾಕು, ಮತ್ತೆ ಮುಂದೊರಿಸೋಣ.
No comments:
Post a Comment