Total Pageviews

Wednesday, November 1, 2017

ಕಾಡಬೇಕು ಮನುಷ್ಯ ಕವಿತೆಯಂತೆ

      ಬರೀ ಬರಹದ ಮೂಲಕ ಕಟ್ಟಿಕೊಂಡ ನನ್ನ ಸಂಬಂಧದಲ್ಲಿ ನಾಡೋಜ ಬರಗೂರರದು ಒಂದು. ತಮ್ಮ ಸಾಹಿತ್ಯವಾದಗಳ ಕಾರಣ ಹತ್ತಿರವಾದ ಬರಗೂರರೊಂದಿಗೆ ಅವಿನಾಭಾವ ಸಂಬಂಧ ಪ್ರಾರಂಭವಾದದ್ದೂ ಕೂಡ ಒಂದು ಸಾಹಿತ್ಯ ಕೃತಿಯ ಮೂಲಕವೆ. ಇಂಥ ಸಂಬಂಧಗಳಿಗೆ ಒಂದು ಮೌಲಿಕತೆ ಇರುತ್ತದೆ, ಆದರ್ಶವಿರುತ್ತದೆ ಎಂದು ನಂಬಿದವನು ನಾನು.

      ಸುಮಾರು ಹತ್ತು ವರ್ಷಗಳ ಹಿಂದೆ, ಅಂದರೆ 2008ರಲ್ಲಿ ಧಾರವಾಡದ ನೀಲಪರ್ವತ ಪ್ರಕಾಶನದ ಮೂಲಕ ನನ್ನ ‘ಫಕೀರನ ಫಿಲ್ಮಿ ದುನಿಯಾ’ ಕೃತಿ ಪ್ರಕಟವಾಯಿತು. ಆ ಕೃತಿಯನ್ನು ಓದಿ ಸಂಭ್ರಮಿಸಿದ ಇಬ್ಬರು ಹಿರಿಯರು – ರವಿ ಬೆಳೆಗೆರೆ ಮತ್ತು ಪ್ರೊ. ಬರಗೂರು ರಾಮಚಂದ್ರಪ್ಪ. ಸಮಯ ಟಿವಿಯಲ್ಲಿ ನನ್ನ ಈ ಕೃತಿಯನ್ನು ಕುರಿತು ಸುಮಾರು 20 ನಿಮಿಷ ಬರಗೂರರು ಮಾತನಾಡಿದ ನೆನಪು. ಹೀಗೆ ನಿಷ್ಕಲ್ಮಷ, ಸೀಮಾತೀತ ಓದಿಟ್ಟುಕೊಂಡ ಬರಗೂರರು ಅವರ ನಿರಂತರ ಓದಿನ ಕಾರಣಕ್ಕಾಗಿಯೇ ನನಗೆ ಪ್ರೀತಿಯವರು.

          ಬೆಂಗಳೂರಿಗೆ ಬಂದ ಹೊಸದರಲ್ಲಿ ನನ್ನನ್ನು ಹಾಗೂ ನನ್ನ ಶ್ರೀಮತಿ ಪದ್ಮಶ್ರೀಯವರನ್ನು ಜೆ.ಪಿ.ನಗರದ ತಮ್ಮ ಮನೆಗೆ ಕರೆಯಿಸಿಕೊಂಡು ಆದರಿಸಿ, ತಮ್ಮ ಹೃದಯ ಶ್ರೀಮಂತಿಕೆಯನ್ನು ಮೆರೆದವರು. ನನ್ನ ಬರಹದ ಬಗೆಗೆ ಸದಾ ಕುತೂಹಲವನ್ನಿರಿಸಿಕೊಂಡವರು. ಇತ್ತೀಚೆಗೆ ಸಾಹಿತ್ಯದ ಪರಿಚಾರಿಕೆಗಾಗಿ ಸಮಯ ಸಂದರ್ಭ ಸಿಕ್ಕಾಗಲೆಲ್ಲ ಗೌರವದಿಂದ ಎತ್ತಿಕೊಂಡವರು. ಆದರೆ ಅದಂನೆಂದೂ ಅಗ್ಗಡಿಸಿದವರಲ್ಲ ಅವರು.

       ಪುಷ್ಪದೀಪಿಕಾ ಪ್ರಕಾಶನದಿಂದ ಪ್ರಕಟಗೊಂಡ ನನ್ನ ‘ಪ್ರೀತಿ ನಲವತ್ತು ರೀತಿ (2014)’ ಕೃತಿಯನ್ನು ಹಿರಿಯ ನಟ ಶ್ರೀನಾಥ, ಶ್ರೀ ಕೆ.ಎಸ್.ಭಗವಾನ, ಚಂಪಾ ಹಾಗೂ ಸಾ.ರಾ.ಗೋವಿಂದರವರ ನೇತೃತ್ವದಲ್ಲಿ ಲೋಕಾರ್ಪಣೆ ಮಾಡಿ, ನನ್ನ ಬರಹ, ಭಾಷೆ ಹಾಗೂ ಆಲೋಚನಾ ಕ್ರಮ ಕುರಿತು ಅಂದು ಬರಗೂರರು ಆಡಿದ ಮಾತುಗಳು ನನ್ನ ಸಾಹಿತ್ಯಕ್ಕೆ ಮಹತ್ವದ ಸ್ಪೂರ್ತಿಯನ್ನು ನೀಡಿದೆ. ತುಂಬ ಎಚ್ಚರಿಕೆ ಹಾಗೂ ಜವಾಬ್ದಾರಿಯೊಂದಿಗೆ ಮಾತನಾಡುವ ಬರಗೂರರ ಈ ಎಚ್ಚರಿಕೆ ಹಾಗೂ ಜವಾಬ್ದಾರಿತನಗಳನ್ನು ನನ್ನ ಸಾಹಿತ್ಯದ ಮೇಲೂ ಪರೋಕ್ಷವಾಗಿ ಹೊರೆಸಿದ್ದಾರೆ. ಇದೆ ಅಲ್ಲವೆ ಸಮಕಾಲೀನ ಲೇಖಕನೊಬ್ಬ ಇನ್ನೊಬ್ಬ ಲೇಖಕನನ್ನು ಪ್ರಭಾವಿಸುವ ಪರಿ.

           ಬರಗೂರರಲ್ಲಿ ಯಾರು ಏನನ್ನು ಇಷ್ಟಪಟ್ಟರೂ ನನಗೆ ಮಾತ್ರ ಅವರ ಕಾವ್ಯ ಇಷ್ಟ. ನನಗೆ ಹೀಗೆಯೆ ಕವಿಯಲ್ಲದವರನ್ನು ಪ್ರೀತಿಸುವುದು ಬಹಳ ಕಷ್ಟ. ಇತ್ತೀಚೆಗೆ 25.10.2017 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ‘ನಮ್ಮೊಳಗಿನ ಬರಗೂರು’ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ ಪಾಲ್ಗೊಂಡದ್ದು ಒಂದು ಪ್ರೀತಿಯ ಸಂದರ್ಭ. ಹಾಗೆ ನೋಡಿದಾರೆ ನಾನು ಹಾಗೂ ಬರಗೂರು ಕವಿಗಳಾಗಿ ಅನೇಕ ವೇದಿಕೆಗಳಿಂದ ಅನೇಕ ಬಾರಿ ಕವಿತೆಗಳನ್ನು ಓದಿದ್ದೇವೆ. ಕವಿತೆಯಂತ ಕರುಳ ಮಾತು ಮತ್ತೊಂದಿಲ್ಲ. ಹೀಗಾಗಿಯೇ ಇಂಥ ಸಂದರ್ಭಗಳನ್ನು ಸ್ಮರಿಸಿಕೊಳ್ಳದೇ ಇರಲು ಸಾಧ್ಯವಾಗುವುದಿಲ್ಲ ನನಗೆ.
               ಮನುಷ್ಯ ಕಾಡಬೇಕು ಕವಿತೆಯಂತೆ, ಪ್ರೀತಿಯ ನಮ್ಮ ಬರಗೂರರಂತೆ.



No comments:

Post a Comment