Total Pageviews

Friday, May 11, 2018

ಮತ್ತೊಂದು ಕಠ್ಮಾಂಡು ಕವಿತೆ


18. ನದಿ ಮಧ್ಯದಲ್ಲಿ

ಇಲ್ಲಿದ್ದೇನೆ ನಾನು
ನದಿ ಮಧ್ಯದಲ್ಲಿ,
ಹುಚ್ಚೆದ್ದ ಯಮರೂಪಿ ಅಲೆಗಳು
ಬಂಡೆಗಳಿಗಪ್ಪಳಿಸಿ ಬೆಚ್ಚಿ ಬೀಳಿಸಿವೆ ನನ್ನ!
ಉಡುಗಿ ಹೋಗಿದೆ ಧೈರ್ಯ.
ನಾನಂದುಕೊಳ್ಳುತ್ತೇನೆ,
ದೂರದ ದಡದಲ್ಲಿ ನಿಂತು
ನೋಡುವವರಿಗೆಲ್ಲ ನಾನೊಂದು ಮೋಜು!
ಅದ್ಭುತ ದೃಶ್ಯ!!!

ನಿರಾಳ ಆಗಸ
ಸ್ಪಷ್ಟ ಬೆಟ್ಟದ ಸಾಲು
ಮೇಲಕೆ, ಆಕಾಶದಾಳಕೆ
ಹಾರಾಡುವ ಹಕ್ಕಿಗಳು,
ಅಲೆಯ ಮೊರೆತಕ್ಕೆ
ಶೃತಿ ಸೇರಿಸುವ
ಹಳ್ಳಿಗರ ಹಾಡು,
ಎಲ್ಲ ಹಿತ ಕಿವಿಗಳಿಗೆ.
464: ಅಡಿ ಎತ್ತರದಲ್ಲಿ
ನರ್ತಿಸುವ ಎವರೆಸ್ಟಿನ ಆತ್ಮ,
ಸೂರ್ಯ ರಶ್ಮಿಗೆ
ಬೆನ್ನೊಡ್ಡಿ ಕಾಯಿಸಿಕೊಳ್ಳುವ
ಬೆಟ್ಟದ ದೇಹ,
ಮೈ ಹಾಸಿಕೊಂಡು
ಕುಶಲೋಪರಿ ಹಾಡುವ ಮರಗಳು,
ಎಲ್ಲ ಸುಖವಿದೆ ಅಲ್ಲಿ, ದಡದಲ್ಲಿ
ಆದರೆ? ನಾನಿಲ್ಲಿ. ಮತಿಗೆಟ್ಟು ಓಲಾಡುವ
ದೋಣಿಯಲ್ಲಿ, ನದಿ ಮಧ್ಯದಲ್ಲಿ.

ದಡ ಸೇರಲೇಬೇಕು ನಾನು
ಶತಮಾನಗಳ ನನ್ನ ಕನವರಿಕೆ ಇದು,
ವರ್ಷಗಳಿಂದ ಬೆಂದ ಬೇಗೆಗೆ
ನೀರುಡಿಸಿ, ದಾಹ ನೀಗಿಸಿಕೊಳ್ಳಬೇಕು,
ಇನ್ನೆಂದೂ ಅಳುಕಿಸಲಾಗದ
ಹೊಸ ಭಾಷ್ಯ ಬರೆಯಬೇಕು,
ಮುಟ್ಟುಗೋಲು ಹಾಕಲಾಗದ
ಮುಂಜಾನೆಯನ್ನೊಂದು ಕಟ್ಟಿಕೊಳ್ಳಲೇಬೇಕು,
ಇದು ಯೋಚನೆ, ಆಲೋಚನೆ
ಆದರೆ, ನಾನೀಗ ಇಲ್ಲಿ
ನದಿ ಮಧ್ಯದಲ್ಲಿ

ಅಗಣಿತ ಅಲೆಗಳ ಆಕ್ರಮಣ
ದೋಣಿ ಹೊಯ್ದಾಟ
ಬದುಕಿನಾಟ.


                                                       ಮೂಲ: ಅಮರ ಗಿರಿ
                                                                      ಇಂಗ್ಲಿಷ್ಗೆ: ಮಹೇಶ ಪೌದ್ಯಾಳ
                                                   ಕನ್ನಡಕ್ಕೆ: ರಾಗಂ

No comments:

Post a Comment