Total Pageviews

Thursday, May 3, 2018

ಶಬ್ಧ-ಸೌಧಗಳ ನಂಬುವವರ್ಯಾರು?


ದೆಹಲಿಯಿಂದ ಪತ್ರ ಬಂದಾಗ ಬಹುತೇಕ ಅಂದು ಮಾರ್ಚ್ 21. ಕೈಯಲ್ಲಿ 40 ನೇಪಾಳಿ ಕವಿಗಳು. ಒಂದು ರೀತಿಯ ಸಂತೋಷ ಹಾಗೂ ಆತ್ಮ ಸಂತೃಪ್ತಿ. ತಟ್ಟನೆ ಮೊದಲಿಗೆ ತಂದೆಗೊಂದು ಫೋನಾಯಿಸಿದೆ, ಮತ್ತೆ ಮಡದಿಗೆ. ಅಷ್ಟೇ ಸಂತಸದಿಂದ ಆಟೋ ಹತ್ತಿಕೊಂಡು ಬಂದ ಅವಳೊಂದಿಗೆ ನೇರವಾಗಿ ಹೋದದ್ದು ಅವಳಿಷ್ಟದ ದೇವಸ್ಥಾನಕ್ಕೆ.
ಹೌದು, ಅವಳು ಮಹಾ ದೈವಭಕ್ತೆ. ಶ್ರದ್ಧೆಗೆ ಕಳೆದುಕೊಳ್ಳಬೇಕಾದುದು ಏನೂ ಇಲ್ಲ. ಮಾರ್ಚ್ 29 ಒಳಗಾಗಿ ನೇಪಾಳಿ ಪ್ರತಿಷ್ಠಾನಕ್ಕೆ ಸಂಬಂಧಿಸಿದ ಅಧ್ಯಯನವನ್ನು(ಭಾಷಾಂತರ) ಸಂಗ್ರಹಿಸಿಕೊಂಡು ನಾನು ಹೊರಡಬೇಕಿತ್ತು. ದೆಹಲಿ ಗೇಟ್ ನಿವಾಸಿಯಾದ ಗೆಳೆಯ ಅನೀಸನಿಗೆ ಹಾಗೂ ಬಲ್ಕಾರ್ಸಿಂಗ್ನಿಗೆ ಫೋನಾಯಿಸಿ ಎಲ್ಲ ತಯಾರಿಗಳನ್ನು ಮಾಡಿಕೊಂಡೆ. ಡೋಗ್ರಿ ಹಾಗೂ ಮಣಿಪುರಿ ಭಾಷಾ ಸ್ನೇಹಿತರು ನನ್ನನ್ನು ಇದೇ ಸ್ಥಳದಲ್ಲಿ ಬಂದು ಸಂಧಿಸಬೇಕಿತ್ತು. ಮದನ್ ರೆಗ್ಮಿ, ಸುರೇಶ ಹಚೇಕಾಲಿ, ಅಮರ್ ಗಿರಿ, ಮಹೇಶ ಪೌದ್ಯಾಲ್, ಕೃಷ್ಣ ಜೋಶಿ, ಬಿಮಲ್ ಕೋಯಿರಾಲಾ ಹಾಗೂ ರಂಜನ್ ಕುಮಾರ ಖತ್ರಿ ದೆಹಲಿಯ ನಮ್ಮ ಓದಿನ ಪುಟಗಳು.
ಈಗಷ್ಟೆ ಹೇಳಿದೆನಲ್ಲ, ಅವಳು ದೈವಭಕ್ತೆ. ಹಾಗೆ ನೋಡಿದರೆ ನನ್ನ ತಂದೆ-ತಾಯಿಗಳೂ ಅಷ್ಟೆ, ದೈವದ ಮಹಾ ಬೆಳಕಿನ ಪಂಜು ಹಿಡಿದುಕೊಂಡೇ ನಮ್ಮ ಬದುಕು ರೂಪಿಸಿದವರು. ನನ್ನ ತಾಯಿಯ ದಿನಚರಿ ಶ್ರೀಶೈಲ ಮಲ್ಲಿಕಾರ್ಜುನನ ಸುಪ್ರಭಾತದಿಂದ ಪ್ರಾರಂಭವಾಗುತ್ತಿದ್ದರೆ, ನನ್ನ ತಂದೆಯ ಬೆಳಗು ತನ್ನೂರ ಬಸವಣ್ಣನ ಸ್ಮರಣೆಯಿಂದ ಅರಳುತ್ತಿತ್ತು. ದೈವ ಭಕ್ತರೇ ಆಗಿದ್ದ ನನ್ನಜ್ಜನ(ತಾಯಿಯ ತಂದೆ, ಬಸಯ್ಯ ವಿರುಪಾಕ್ಷಯ್ಯ ಮಠದ) ಪೂಜಾ ವಿಧಿ ಮುಪ್ಪಿನ ಷಡಕ್ಷರಿಗಳ ಅನುಭಾವ ಗೀತೆಯಿಂದ ಪ್ರಾರಂಭವಾದರೆ, ಇನ್ನೊಬ್ಬ ಅಜ್ಜನ(ತಂದೆಯ ತಂದೆ, ಗುರುಪಾದಯ್ಯ ರಾಚಯ್ಯ ಮಠಪತಿ) ಭಜನೆಸಕಲ ಸಾಧು-ಸಂತ ಮಹಾರಾಜಕೀ ಜೈಎನ್ನುವ ಘೋಷ ವಾಕ್ಯದಿಂದ ಮುಕ್ತಾಯವಾಗುತ್ತಿತ್ತು. ನನ್ನ ಸೋದರ ಮಾವ (ಡಾ. ಗಂಗಾಧರಯ್ಯ ಬಸಯ್ಯ ಮಠದ) ಶ್ರೀಶೈಲ ದೇವಸ್ಥಾನದ ಪ್ರಧಾನ ಅರ್ಚಕನಾದರೆ, ಇನ್ನೊಂದೆಡೆ ನನ್ನ ಸರ್ಕಾರಿ ವೃತ್ತಿ ಜೀವನದ ಆರಂಭ ಬೇಲೂರು ಚನ್ನಕೇಶವ ಎಂಬ ಸನಾತನ ದೈವ ಸನ್ನಿಧಾನದಲ್ಲಿ. ಗೊತ್ತಿರಲಿ, ಇಡೀ ನಾಡಿಗೆವಿಚಾರ ಕ್ರಾಂತಿಗೆ ಆಹ್ವಾನಎನ್ನುವ ಕೃತಿ ನೀಡಿದ ಮಹಾ ಕವಿ ಕುವೆಂಪು ಅವರಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆರಚನೆಗೆ ಕಾರಣವಾದುದು ಇದೇ ದೇವಸ್ಥಾನ.
ಕ್ಷಮಿಸಿ, ನಾನು ದೈವದ ಹಿಂದೆ ಹೀಗೆಯೇ ಹೋಗಿಬಿಡಬಾರದು. ಬದಲಾಗಿ ತಿಂಗಳೊಂದರಲ್ಲಿ ಎರಡು ಬಾರಿ ಬಿರು ಬಿಸಿಲಿನಲ್ಲಿ ಉರಿಯುವ ದೆಹಲಿ ದರ್ಶನಕ್ಕೆ ಕಾರಣವಾದ ಕಾವ್ಯ ಹಾಗೂ ಕವಿಗಳನ್ನು ಈಗ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ
ಧರ್ಮ ಸಂಕಟ
ಬಿಮಲ್ ಕೋಯಿರಾಲಾ

ಹೇಗೋ ಸರಿಪಡಿಸಬಹುದಿತ್ತು
ಒಂದು ಬಿರುಕನ್ನು,
ಹೇಗೋ ಮಾಯಿಸಬಹುದಿತ್ತು, ಮರೆಯಬಹುದಿತ್ತು
ನೋವಿನ ಒಂದು ಘಾಯವನ್ನು.
ಆದರೆ, ಹಾಗಿಲ್ಲವಲ್ಲ
ಹರಿದ ನಕ್ಷೆಯನ್ನು
ಮೋಸದ ಸೂಜಿ ಬಳಸಿ,
ಭ್ರಮೆಯ ದಾರ ಪೋಣಿಸಿ
ವರುಷ ವರುಷಗಳಿಂದ
ಹೊಲಿಯುತ್ತಲೇ ಇದ್ದೇವೆ
ಸರಿ ಹೋದೀತೆ?
ಕುಸಿಯುತ್ತಲೇ ಇದೆ ಹಳತು
ಹೊಸದೋ? ಹುಟ್ಟುತ್ತಲೇ ಇಲ್ಲ
ಭದ್ರವಲ್ಲದ ಬುನಾದಿಯ ಭೂತ
ಎದ್ದು ನಿಲ್ಲದ ವರ್ತಮಾನ
ಒಣಗುತ್ತಲೇ ಇರುವ ಸನಾತನ
ಕಣ್ ತೆರೆಯದ ನೂತನ
ಕ್ಷೀಣವಾದ ಗರ್ಜನೆಗಳ ಗುಡಿಯಲ್ಲಿ
ಅನಿಶ್ಚಿತವೆಂಬ ಹೊಸ ವಂಶದುದಯ


ಜಗವೆಲ್ಲ ವಿಷಕಾರಿ
ಸೊಕ್ಕಿನ ಸ್ತುತಿ
ಕಣ್ಣು ಹರಿದಲ್ಲೆಲ್ಲ
ಇದು ಈಗ ಸಂಸ್ಕøತಿ

ಸಮಯದ ಕಾವಿಲ್ಲದೆ
ಅರ್ಥವಿಲ್ಲದೆ ಖಾಲಿಯಾದ
ಶಬ್ಧ ಸೌಧಗಳ ನಂಬುವವರ್ಯಾರು?
ಶಿರದ ಮೇಲೊಂದು ಕತ್ತಿಯಂತೆ
ನಮ್ಮೆಲ್ಲರ ನೆತ್ತಿಗಳ ಮೇಲೊಂದು
ಭಯದ ಕೂರಲಗು

ನಶೆ ಏರಿದ ನಿಯಮಗಳಾಳುತ್ತಿವೆ
ನಿರಾಯುಧ ಜನಗಳ
ನಿದ್ದೆ ಹೋಗಿದೆ ವರ್ತಮಾನ ಕುಂಭಕರ್ಣನಂತೆ
ಅದಮುತ್ತಲೇ ಇರುತ್ತದೆ
ಮೋಜಿಗೊಮ್ಮೆ ನಮ್ಮ ಜೀವಗಳ.
ನನ್ನ ಹಳ್ಳಿಯ ಪ್ರೀಯ ರಾಮ್ ದಯಿ
ಕ್ಷುಲ್ಲಕ ವಸ್ತು ನಿನಗೆ ಗೊತ್ತಿಲ್ಲ
ಗೊತ್ತಿರಲಿ,
ನಿನಗೆ ಬಳಸಲಾಗಿಲ್ಲ ನಗ್ನ ಆಯುಧಗಳನ್ನಷ್ಟೆ

ನನ್ನ ಕವಿತೆಯೆಡೆಗೆ ಒಮ್ಮೆ ನೋಡು
ಹಲವು ರೀತಿ, ಹಲವೆಡೆ
ಹಲವು ಕಾರಣಗಳೊಡ್ಡಿ
ತುಂಡರಿಸಲಾಗಿದೆ ನನ್ನ ಅಖಂಡ ಕಾವ್ಯವ
ಕಾಲೇಜುಗಳಲ್ಲಿ ಕಟ್ಟಿಕೊಂಡು
ವರ್ತಮಾನದಲ್ಲಿ ತುಂಡಾದ, ಛಿದ್ರವಾದ
ಹಳೆಯ ಕವಿತೆಯನ್ನೇ ಜೋಡಿಸಿಕೊಂಡು
ನನ್ನ ದೇಶವ ನೋಡುತ್ತೇನೆ ನಾನು ಈಗ

ದುಸ್ವಪ್ನಗಳೊಂದಿಗೆ ಕುಡಿಯುತ್ತೇನೆ
ಕಣ್ಣುಗಳಿಂದ ವಿಷವನ್ನೂ ಕೂಡ
ತಲೆಯ ಘಾಯಕೆ ಬಟ್ಟೆ ಸುತ್ತಿದ್ದೇನೆ.
ಅಸಂಭದ್ಧವೇ ನಮ್ಮ ಹಣೆಬರಹವಾಗಿ
ನಡೆದಿದ್ದೇವೆ ನಾವೀಗ ಅದರ ಜಾತ್ರೆಗೆ
ಎಳೆಯುತ್ತಲೇ ಇದ್ದೇವೆ
ಯಾಂತ್ರಿಕ ಬದುಕ ಬಂಡಿಯ
ನಿತ್ಯ ಗೊಣಗುತ್ತ.
ದುರಾಶೆಯ ಹುಚ್ಚು
ಮದಮಸ್ತಗೊಳಿಸಿದೆ ಎಲ್ಲವನ್ನೂ
ಧರ್ಮ ಸಂಕಟದಲ್ಲಿ
ನಾನು ಕವಿತೆ ಕಟ್ಟಬೇಕು
ಕವಿತೆ ಕಾಯಿಸುವ ಕಲ್ಲಿದ್ದಲಿಗಾಗಿ
ಕೂಗಬೇಕು ಯಾರನ್ನೊ
ರಕ್ತ-ಸಿಕ್ತ ಘಾಯಗಳ ಹೊತ್ತು
ದುಸ್ವಪ್ನ ಕಂಡ ಸಂತನಂತೆ
ದೇಶದಲ್ಲಿ
ಓಡುತ್ತಲೇ ಇರಬೇಕು ಕೂಗುತ್ತ,
ನೈತಿಕತೆಯ ಪ್ರಾರ್ಥನೆಗಳ
ಹಾಡುತ್ತಲೇ ಇರಬೇಕು
ಇಲ್ಲವೆ,
ನಿರ್ಲಜ್ಯನಾಗಿ ದೇಗುಲಗಳೆದುರು
ಮೂತ್ರ ಮಾಡಬೇಕು.
ಯಾರಿಗಾಗಿ ಸಾಯುತ್ತಿದ್ದಾರೆ ಜನಗಳು?
ತಮಗಾಗಿ? ತಮ್ಮತನಕಾಗಿ? ತನ್ನಂತವರಿಗಾಗಿ?
ಸ್ತುತಿಕಾರನಂತೆ
ಕಣ್ಣು ಮುಚ್ಚಿ, ಮೊಂಡೆಯೂರಿ
ಕ್ಷಣ ನಾನು
ತುಟಿಗಳನ್ನು ಅಲುಗಿಸುತ್ತೇನೆ ಅಷ್ಟೆ
ಪ್ರೀಯ ಸೇವಕ ದೃವ(ನಿಶ್ಚಲ)
ನನ್ನ ದೇಹ ಕಂಪನದ ತಾಳದನ್ವಯ
ನೀನು
ಬರೆಯುತ್ತ ಹೋಗು ಸಮೃದ್ಧವಾಗಿ

Ø ಭಾರತದ ಪ್ರಧಾನಿಗಳು ತಿಂಗಳ ಮಧ್ಯಾವಧಿಯಿಂದ ಅಂತ್ಯದವರೆಗೆ ನೇಪಾಳಕ್ಕೆ ಭೇಟಿಕೊಡುವ ಹಿನ್ನೆಲೆಯಲ್ಲಿ ರೂಪಗೊಂಡ ಯೋಜನೆಯಲ್ಲಿ ಪಾಲುದಾರನಾಗುವ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳು.

No comments:

Post a Comment