Total Pageviews

86,004

Friday, April 27, 2018

ನಾನೊಂದು ದಾರಿ


ಭಗವಂತನೆ,
ನೀ ನನ್ನ ಅನಾಹತ ಗಾನ

ನಿನ್ನ ಕಾರುಣ್ಯದ ಫಲ ನಾನು
ನೀನು ಪರಮ ಆತ್ಮ, ಪರಮಾತ್ಮಾ
ನಾ ನಿನ್ನ ಆತ್ಮ

ಆದರೂ
ಲೋಕದ ಸಂತೆಯಲ್ಲಿ
ಮಾಂಸ ಮಾರುಕಟ್ಟೆಯ ಲೆಕ್ಕದಲ್ಲಿ
ನಾನು ಯಾರು? ನಾನು ಏನು?

ದೂರದ ಧ್ವನಿ
ನೀನೊಂದು ದಾರಿ,
ನಿನೊಂದು ಬೆಳಕು
ನಿನಗೂ ಆತ್ಮವಿದೆ

ಹೌದು,
ನನಗೂ ಆತ್ಮವಿದೆ ದೇವಾ,
ನಾನೊಂದು ನಿರಾಳ ದಾರಿ
ವಿಕಾರಗಳ ಲೆಕ್ಕದಾಚೆಯವನು

ನಡೆದಷ್ಟೂ ದೀರ್ಘ
ನುಡಿದಷ್ಟೂ ಮೌನ
ಮಾನ-ಸಮ್ಮಾನ
ಅವಮಾನ-ಸುಮ್ಮಾನ
ತೀರ್ಮಾನಗಳೆಲ್ಲ
ಅವರವರ ಬುತ್ತಿಯ ಊಟವಷ್ಟೆ
ಬಳಸಿಕೊಂಡಷ್ಟೂ ಬತ್ತದ ನಾನು
ದಾರಿಯಷ್ಟೆ
ತುಳಿಸಿಕೊಳ್ಳುತ್ತೇನೆ,
ಹಳಿಸಿಕೊಳ್ಳುತ್ತೇನೆ,
ಆದರೂ, ಶಿರಬಾಗಿ
ಉಳಿಸಿಕೊಳ್ಳುತ್ತೇನೆ ಅವರ ನೆನಪುಗಳ

ತುಳಿದವರ ಪಾದದ ಹಿಡಿ ಮಣ್ಣಲ್ಲಿ
ನನ್ನ ಅನ್ನ ಗಳಿಸಿಕೊಳ್ಳುತ್ತೇನೆ
ನೂರು ಜಾನಕಿಯರ ಹೆತ್ತು
ಜನಕನಾಗುತ್ತೇನೆ, ಧನಿಕನಾಗುತ್ತೇನೆ.

ನಾನು ದಾರಿ,
ಬರೀ ದಾರಿನಾನು
ಜಗದ ಪಾದಗಳ ಸೃಷ್ಟಿ
ನನ್ನ ಮೈ ತುಂಬಲೂ
ಲೋಕದ ಪಾದ ಮುದ್ರೆಗಳ ಅತಿವೃಷ್ಠಿ
ನಾನು ದಾರಿ
ಹೇಳಿದೆನಲ್ಲ ಪಾದಗಳ ಸೃಷ್ಟಿ,
ಮಾತನಾಡುತ್ತೇನೆ
ಅವುಗಳೊಂದಿಗೆ ಅಷ್ಟೆ

ಯಾಕೆಂದರೆ
ಪಾದಗಳಿಗೆ ನಾಲಿಗೆ ಇಲ್ಲ, ಬುದ್ಧಿ ಇಲ್ಲ
ಮೇಲಿಲ್ಲ-ಕೀಳಿಲ್ಲ, ಬಡವ-ಧನಿಕನಿಲ್ಲ
ಪಶು-ಪಕ್ಷಿ, ಕ್ರಿಮಿ-ಕೀಟ, ನಗ್ನ-ಭಗ್ನಗಳಿಲ್ಲ
ಇಲ್ಲಿ ತಕ್ಕಡಿ ಇಲ್ಲ,
ಇಲ್ಲ ಆಲಯವೂ

ಭಗವಂತನೆ
ಈಗ ನೀನೂ ಇಲ್ಲ,
ನಾನಳಿದು ಶತಮಾನವೇ ಉರುಳಿತು
ನಾನು
ದಾರಿ ಎಂಬ ನಂಬಿಕೆ ಮಾತ್ರ
ಬರೀ ನಂಬಿಕೆ
ನಂಬಿಕೆ!!? !!? !!?

No comments:

Post a Comment