Total Pageviews

Thursday, April 12, 2018

ಏನೂ ಆಗಬಹುದಿತ್ತು. . . .


ಮೇರು ಪರ್ವತಗಳೊಂದಿಗೆ
ಮಾತಾದಾಗಲೊಮ್ಮೆ ಅನಿಸುತಿತ್ತು
ಏನೆಲ್ಲ ಆಗಬಹುದಿತ್ತು ಆತ.
ತಾತನ ಕಥೆಯಲ್ಲಿ ಕಡಲ ಕಂಡವನು
ಊರುಗಳ ಅಲೆದು ಬೈರಾಗ ಉಂಡವನು
ಕೆಂಡದುಡಿಯಲ್ಲಿ ಕೋಲ ಬಚ್ಚಿಟ್ಟವನು
ಬತ್ತದ ಭೂಮಿ, ಬಿಚ್ಚಿದ ಆಕಾಶಗಳ
ಮನಸೆಂಬ ಮಾಯಾಪೆಟ್ಟಿಗೆಯಲ್ಲಿಟ್ಟವನು
ಹಾವುಗಳ ಹಲ್ಲಿಂದ ಕೆನ್ನೆ ತುರಿಸಿಕೊಂಡವನು
ಹಿಂಡುಗಳ ಮಧ್ಯ ಬರೀ ಡೊಂಬನಾಗದೆ
ಏನಾದರೂ ಆಗಬಹುದಿತ್ತಲ್ಲವೇ?

ಮುದಿ ನೇರಳೆಯ ತಿಂದು ರಾಮನೋ
ಜೀವ್ಹೆ-ಜೈಲುಗಳ ನುಸುಳಿ ಕೃಷ್ಣನೋ
ಗದೆ ಸರಿಸಿ ನಿರ್ಮೋಹದೊಳಗರಳಿದ ಬಾಹುಬಲಿಯೋ
ಕೋಳಿ ಸಾಲದ ಸಾಕ್ರಟಿಸನೋ
ಭಕ್ತಿ ಬಲವಿದ್ದ ಸಾಯಿಬಾಬನೋ
ಹೀಗೆ ಏನಾದರೊಂದಾಗಬಹುದಿತ್ತಲ್ಲವೇ?

ಕನಿಷ್ಠ
ಬಯಲ ಬಡಬಡಿಸಿದ ಅಲ್ಲಮ
ಲಕ್ಷಾಂತರ ಜೀವ ಹೀರಿದ ಗುರು-ಲಿಂಗ-ಜಂಗಮ
ಮದಿರೆಗೆ ಮನ ಸೋತ ಖಯ್ಯಾಮ್
ಗಾಳಿಯಲಿ ಗ್ಲಾಸು ಬೀಸಿದ ಗಾಲಿಬ್
ನಿಲ್ಲದ ನವಿಲಿನ ಸೊಲ್ಲ ಹಾಡಿದ ಮಧುರಚೆನ್ನ
ಏನೆಲ್ಲ ಆಗಬಹುದಿತ್ತಪ್ಪ ಜೀವ ಒಮ್ಮೆ.

ಏನು, ಏನು, ಏನೂ ಆಗದಿದ್ದರೂ
ಗೋರನ ಕಾಲಡಿಯ ಮಣ್ಣು
ಕದಳಿ ಕೂಸಿನ ಬಾಯಿಗೆ ಹಣ್ಣು
ಬರದ ನೆಲಕ್ಕೆ ಬಿದ್ದ ಹನಿ ಮಳೆಯೋ
ಮಲೆನಾಡ ಉಡಿಯ ಕಳೆಯೋ
ಹೀಗೆ, ಏನೆಲ್ಲ ಸಾಧ್ಯವಿದ್ದವ..
ಕರ್ಮದ ತಿಗರೆಯೂ ನಾಚುವ
ಕಚ್ಚಲು ತಿಗಣಿಯೂ ಹೇಸುವ
ತೊಳೆಯಲಾಗದ, ಪಾಪದ ತಳಿಯಾಗಬಾರದಿತ್ತು.

No comments:

Post a Comment