Total Pageviews

Wednesday, April 4, 2018

ಅರಿವೆಂಬ ಅಗ್ನಿಗಾನ. . . . .!?


ದಿನಾಂಕ 30 ಮಾರ್ಚ್ 2018 ರಾತ್ರಿ ನನ್ನೂರ ಜಾತ್ರೆಯಲ್ಲಿ ನಾನು ನೆನಪುಗಳ ತೇರು ಎಳೆಯುತ್ತಿದ್ದೆ. ಜೋಳಿಗೆಯಲ್ಲಿ ಜನ್ಮಾಂತರದ ಹಾಡು ಕೇಳಲು ಹೋಗಿದ್ದ ನನ್ನನ್ನು ನಮ್ಮೂರ ಗೌಡರು, ಹಿರಿಯರು, ತಾಯಂದಿರು ಹಾಗೂ ಎಳೆಯ ಗೆಳೆಯರು ದುಂಬಾಲು ಬಿದ್ದುಇಂದ್ರಜೀತ ಕಾಳಗದೊಡ್ಡಾಟದ ಉದ್ಘಾಟನೆಗೆ ಕರೆದರು. ಊರ ಅನ್ನವನ್ನುಂಡು ಬೆಳೆದ ಮಗ ನಾನು. ಎರಡು ದಶಕದ ಬದುಕಿನಲ್ಲಿ ಪ್ರತಿ ಅಮವಾಸೆಗೂ ಒಬ್ಬ ತಾಯಿ ಹುಟ್ಟಿಕೊಂಡು ನನ್ನ ಜಂಗಮತ್ವದ ವ್ಯಾಖ್ಯಾನವನ್ನು ಪೂರ್ಣಗೊಳಿಸಿದ ಜೀವಿಗಳವರು. ಅವರು ಸಾಮಾನ್ಯರು, ಹೀಗಾಗಿಯೇ ನನ್ನ ಕೊನೆಯುಸಿರಿನವರೆಗೂ ಅವರು ಮಾನ್ಯರು. ಇಂಥ ಮಾನ್ಯರ ಕುರಿತು ಆಲೋಚನೆಯ ಪರಂಪರೆ ಬಹಳ ಹಿಂದೆಯೇ ಪ್ರಾರಂಭವಾಗಿದೆ.
ಭಾರತೀಯ ಸಾಹಿತ್ಯದ ಪ್ರಗತಿಶೀಲ ಕಾಲ ಘಟ್ಟವಂತೂ ಶ್ರೀಸಾಮಾನ್ಯನ ಪಾಲಿನ ಸಾಹಿತ್ಯದ ಸ್ವರ್ಣಯುಗವೆಂದೇ ಹೇಳಬೇಕು. ಇದರ ಮುಂಚೂಣಿಯ ಬರಹಗಾರರಾಗಿದ್ದ ಮುನ್ಷಿ ಪ್ರೇಮಚಂದ ಹೇಳುತ್ತಾರೆ “It is the object of our association to rescue literature from the conservative classes to work for the freedom of ideas and thoughts of an ordinary man to living the arts and literature into the closest touch with the people and to take them as a vital organs which will resister the actualities of life, as well as lead us to the future envisage. Opposition to blind faith in religion. Opposition to caste and untouchability. Opposition to communalism – opposition to exploitation of woman. Upliftment and emancipation of Indian laboubers. Uplift and emancipation of the peasantry.”
ಜನಸಾಮಾನ್ಯರ ಕಾಳಜಿಗಳ ಸಂಸ್ಕಾರದಲ್ಲಿಯೇ ನನ್ನ ಸಾಹಿತ್ಯವೂ ಪಲ್ಲವಿಸಿದ್ದು. ಹೀಗಾಗಿ ಹಳೆಯದೆಲ್ಲವನ್ನೂ ಸತ್ವದಲ್ಲಿ ಸ್ವೀಕರಿಸಿ, ಮೌಢ್ಯದಲ್ಲಿ ಧಿಕ್ಕರಿಸಿ ಇಂದಿಗೆ 18 ವರ್ಷಗಳ ಹಿಂದೆಎರಡು ದಡಗಳ ನಡುವೆಎಂಬ ನನ್ನ ಕಾವ್ಯ ಸಂಕಲನದಲ್ಲಿ ನಾನೊಂದು ಪದ್ಯ ಬರೆದಿದ್ದೆ. ಶೀರ್ಷಿಕೆಬೇರು ಬಿಟ್ಟವರಲ್ಲ ನಾವು
ನಾವು
ನಿಮ್ಮಂತೆ ಬೇರು ಬಿಟ್ಟವರಲ್ಲ ಸ್ವಾಮಿ,
ನಿನ್ನೆ ತಾನೇ ಹುಟ್ಟಿ,
ನಾಳೆಯನ್ನ ಕನಸುತ್ತಿರುವವರು
ಇಂದಿಗೆ ನಿಮ್ಮ ಒಲವು ಬೇಕು.
ನೀವು ಹಾಕಿದ ಹೆದ್ದಾರಿಗಳ ಬಿಟ್ಟು
ಕವಲು ದಾರಿಯ ಕತೆಯ ಬರೆಯ ಹೊರಟವರು
ಹರಕೆ, ಹಂಬಲ ನಮ್ಮ ಜೊತೆಗೆ ಬಿಡಬೇಕು.

ನಿಮ್ಮ ಹಗ್ಗವೊ ಹಳತು
ಹರಿವ ಹಾವ್ಗಳೇ ಹಿಡಿದು ಆಡಹೊರಟವರು
ಎದೆ ಹಾಡಿಕೊಂಡರೆ ಹರಸಬೇಕು
ನಡುರಾತ್ರಿ ಎದೆಸೀಳಿ
ಕಡುಬಿಸಿಲ ಹುಟ್ಟಿಸಿ, ಬಚ್ಚಿಟ್ಟ ಸತ್ಯಗಳ
ನೋಡ ಹೊರಟವರು ನೀವು ನೋಡುತ್ತಿರಬೇಕು.

ನಾವು ಇತಿಹಾಸವನು ಬಗೆದು
ಹೊಸ ಕವನ ಬರೆದು, ಹಾಡಹೊರಟವರು
ತಾಳ ಹಾಕುವ ತಾಳ್ಮೆ ನಿಮ್ಮಲಿರಬೇಕು
ನಿಮ್ಮ ಮತಗಳ ಕೊಡವಿ
ಮರಣೋತ್ತರವ ಬರೆದು
ಹುಗಿಯ ಹೊರಟವರು ಸುಮ್ಮನಿರಬೇಕು.
ಬುದ್ಧಿಯ ಪ್ರಾಥಮಿಕ ಸ್ಥಿತಿಯಲ್ಲಿ ವಸ್ತು-ವಿಷಯಗಳೆಲ್ಲ ಒಂದು ಇನ್ನೊಂದರಿಂದ ಭಿನ್ನ, ಒಂದು ಇನ್ನೊಂದಕ್ಕೆ ವಿರೋಧ ಎಂದು ಗೋಚರಿಸುತ್ತವೆ. ಆದರೆ ಅನುಭವ ಮಾಗಿದಂತೆ ವಿಭಜನೆಯ ಗೆರೆಗಳು ಮಾಯವಾಗಿ ಇಡೀ ಪ್ರಪಂಚ ಒಂದು ಅಖಂಡ ಶಿಲ್ಪವಾಗಿ, ಬದುಕಾಗಿ ದರ್ಶನ ಸದೃಶ್ಯವಾಗುತ್ತದೆ. ಇಲ್ಲೊಂದು ಮಾತು ಕನಕದಾಸರದ್ದು           
                        ನೀ ಮಾಯೆಯೊಳಗೊ,
                        ಮಾಯೆ ನಿನ್ನೊಳಗೊ. . . . . . . .
ಮೇಲಿನ ನನ್ನ ಅನುಭೂತಿಯನ್ನೇ ದಾಸಶ್ರೇಷ್ಠ ಕನಕದಾಸರು ಎರಡು ಸಾಲುಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

ಅಯೋಧ್ಯಯ ಪ್ರಜ್ಞಾಸ್ವರೂಪ ಶ್ರೀರಾಮಚಂದ್ರನಿಗೆ ಬಂಗಾರದ ಜಿಂಕೆಯೊಂದು ಇರಲಾರದು ಎನ್ನುವ ಕನಿಷ್ಟ ತಿಳುವಳಿಕೆ ಇರಲಿಲ್ಲವೆ? ಮಾತೃಸ್ವರೂಪಿಯಾದ ಮಡದಿಯನ್ನು ಜೂಜದ ವಸ್ತುವಾಗಿಸಬಾರದು ಎನ್ನುವ ತಿಳುವಳಿಕೆಧರ್ಮರಾಯನಿಗಿರಲಿಲ್ಲವೆ? ಇದನ್ನೇ ಘ್ಲಾನಿ ಎನ್ನುವುದು. ಇದನ್ನೇ ಮಾಯೆ ಎನ್ನುವುದು, ಮಂಕು ಎನ್ನುವುದು.
ಅಸತ್ಯವು ಸತ್ಯದಂತೆ ಗೋಚರಿಸಿ ನಮ್ಮ ಅರಿವನ್ನು ಅನಾಚಾರಾರಕ್ಕಿಳಿಸುವುದೇ ಮಾಯೆ, ಘ್ಲಾನಿ ಅಥವಾ ತಮಂಧ. ಇಂಥ ಘಟ್ಟಗಳಲ್ಲಿ ಎಲ್ಲವೂ ಎರಡಾಗಿ, ಹಲವಾಗಿ, ಹೊರತಾಗಿ, ಎದುರಾಗಿ ನಮ್ಮ ಆತ್ಮದ ಹದಗೆಡಿಸುತ್ತವೆ. ವೃತ್ತಿ ಕಾರಣಕ್ಕೆ ನಾನು ಮೈಸೂರು, ಹಾಸನ, ಭಟ್ಕಳ ಹಾಗೂ ಬೆಂಗಳೂರುಗಳಲ್ಲಿದ್ದಾಗ ಬಿಸಿಲು ನಾಡಾದ ನನ್ನೂರು ಚಡಚಣ ಎಷ್ಟೊಂದು ತೀವ್ರ, ಭಿನ್ನ ಹಾಗೂ ಸ್ಪೋಟಕ ಎನ್ನಿಸುತ್ತಿತ್ತು. ಆದರೆ ಜೀವ ಮಾಗಿದಂತೆ ಮಲೆನಾಡ ಹಸಿರಿಗೂ, ನನ್ನ ನೆಲದ ಬಯಲು ಸೀಮೆಯ ಬಿಸಿಲಿಗೂ ಒಂದು ವಿಚಿತ್ರವಾದ ಸಂಬಂಧ ಸ್ಪಷ್ಟವಾಗುತ್ತಿದೆ. ನಾನದನ್ನೀಗ ಸಂಭ್ರಮಿಸುತ್ತಿದ್ದೇನೆ. ಹೀಗಾಗಿಯೇ ಬಹಳ ಹಿಂದೆಯೇ ನಾನು ಬಿಸಿಲೂ ಒಂದು ಬೆಸುಗೆಎಂದು ಬರೆದೆ.
ಹೇಗಿದೆ ನೋಡಿ! ನೀರಿಲ್ಲದ ನನ್ನ ಮಣ್ಣಲ್ಲಿ ನೀರುಡಿಸುವ ಎಲ್ಲ ಹಣ್ಣುಗಳೂ ಬೆಳೆಯುತ್ತವೆ. ಇಂದು ಹಣ್ಣುಗಳಿಲ್ಲದೆ ಇಡೀ ಪ್ರಪಂಚ ನೀರಡಿಕೆಯಿಂದ ಸಾಯುತ್ತದೆ. ಇಲ್ಲಿಯ ಲಿಂಬೆ, ದಾಳಿಂಬೆ, ದ್ರಾಕ್ಷಿ ಹಾಗೂ ಜೋಳದ ಹುಡಿ ನೋಡುತ್ತ ಬೆಳೆದುದರ ಪರಿಣಾಮ ನಾನು ಕರ್ನಾಟಕದ ಕರಾವಳಿ ತೀರದ ಭಟ್ಕಳ, ಸಹ್ಯಾದ್ರಿ ಸೆರಗಿನ ಶಿವಮೊಗ್ಗ, ಪಶ್ಚಿಮ ಘಟ್ಟಗಳ ಬೇಲೂರುಗಳನ್ನು ಆನಂದಿಸಲು ಸಾಧ್ಯವಾಯಿತು. ಹೀಗಾಗಿ ದಶಕಗಳವರೆಗೂ ಕಾಫಿ ಬೋರ್ಡ್, ಏಲಕ್ಕಿ ಬೆಳೆಗಾರರ ಸಂಘ, ತೆಂಗು ಅಭಿವೃದ್ಧಿ ಸಮಿತಿಗಳನ್ನು ನೋಡಿದ್ದ ನನಗೆ, ನಮ್ಮ ಪ್ರದೇಶದಲ್ಲಿ ಲಿಂಬೆ ಮಂಡಳಿ ಸ್ಥಾಪನೆಯಾದದ್ದು ಅತ್ಯಂತ ಹರ್ಷದ ಸಂಗತಿಯಾಯಿತು
ಹಕ್ಕು, ನಿರೀಕ್ಷೆ ಒಂದೆ. ಬೆಡುವ ವೇದಿಕಗಳಷ್ಟೆ ಭಿನ್ನ.
ನನ್ನ ನೆಲದ ಮೋಹ ಜಗತ್ತಿನ ಶ್ರೇಷ್ಠ ಕಥೆಗಾರ ಸಾದತ್ ಹಸನ್ ಮಾಂಟೋನ ಹುಚ್ಚಿನಂತೆ. ನನ್ನ ಮಗಳ ರಂಗೋಲಿಯಂತೆ, ನನ್ನ ಮಡದಿಯ ಲಜ್ಜೆಯ ಕೆನ್ನೆ ರಂಗಿನಂತೆ, ಮಗ ಕಬೀರನ ಪದವಿಲ್ಲದ ಹಾಡುಗಳಂತೆ, ನನ್ನ ಅಭಿಮಾನಿಗಳ ಕಣ್ ಸೆಳಕಿನಲ್ಲಿ ಹುದುಗಿದ ವಿಶ್ವಾಸದಂತೆ, ದೂರವಿದ್ದೂ ಪ್ರತಿಕ್ಷಣವು ನಿರ್ದೇಶಿಸುವ ನನ್ನ ಗುರು-ಬಂಧುಗಳ ತೋರ್ ಬೆರಳಿನಂತೆ. ಇವರೆಲ್ಲರೂ ನೀರಿದ್ದೂ ನೀರಡಿಸಿದ ನನ್ನ ನೆಲದಂತೆ. ಆಚಾರದ ಮನಸ್ಸಿಗೆ ಜಗತ್ತೆಲ್ಲವೂ ಅರಿವಿನ ಅಗ್ನಿಗಾನ. ಸುಟ್ಟು ಸಾಯಬೇಕು, ಇಲ್ಲವೆ ಶುದ್ಧ ಚಿನ್ನವಾಗಿನನ್ನವರಿಗೇದಕ್ಕಬೇಕು.


No comments:

Post a Comment