ಮೂಲ: ಮದನ್ ರೆಗ್ಮಿ
ಕನ್ನಡಕ್ಕೆ: ರಾಗಂ
ಬಂದವರೊಮ್ಮೆ ಹೋಗಲೇಬೇಕು
ಹೋದವರು? ಮತ್ತೆ ಬರಲೇಬೇಕು
ಸತ್ಯವೆಂದುಕೊ, ಸುಳ್ಳೆಂದುಕೊ, ನಿನ್ನಿಷ್ಟ;
ಕಲ್ಲು ತಾಗಿದ ಹೃದಯ, ಹೃದಯಕ್ಕೆ ಬಡಿದ ಕಲ್ಲು
ಹೀಗರಿಯಬೇಕಿಲ್ಲಿ ಎಲ್ಲವನ್ನೂ,
ಗುಂಪಾಗಿ ಹಕ್ಕಿಗಳು
ಹತ್ಯೆ ಮಾಡಿಕೊಂಡಿವೆ ಇಲ್ಲಿ
ಭೂಮಿಯೂ ಗಾಯಗೊಂಡಿದೆ
ಸಿಡಿದ ಜ್ವಾಲಾಮುಖಿಗೆ
ಅಬ್ಬರದ ಗಾಳಿಗೆ, ಮಳೆಗೆ;
ಆಘಾತಗಳದೆಷ್ಟೋ ಭಾರಿ ನುಂಗಿ ಹಾಕಿವೆ
ನೆಲದ ನೆಮ್ಮದಿಯನ್ನೂ
ನಂಬು ನನ್ನ,
ಅದೆಷ್ಟು ಶತಮಾನಗಳು
ಹೀಗೆಯೇ ಉರುಳುತ್ತವೆ,
ಹೊರಳತ್ತವೆ ಗೊತ್ತಿಲ್ಲ ನನಗೆ
ನಾ ಬರೀ ನಾನಾಗಿ,
ನೀನು ಬರೀ ನೀನಾಗಿ
ಅದೆಷ್ಟು ಹೂದೋಟಗಳಿಗೆ
ನಮ್ಮ ಬಿಸುಪು ತಾಗಿ
ಬರಡು-ಬಂಜರಗಳಾಗಿವೆಯೋ ತಿಳಿದಿಲ್ಲ
ಕುದಿಯುತ್ತಲೇ ಇರುತ್ತೇವೆ ಹೀಗೆ
ಒಬ್ಬರಿನ್ನೊಬ್ಬರ ಒಡಲಲ್ಲಿ, ನೋವಲ್ಲಿ, ಉಸಿರಲ್ಲಿ
ನಂಬು ನನ್ನ,
ನಾನು ಹುಟ್ಟುತ್ತಲೇ ಇರುತ್ತೇನೆ ನಿತ್ಯ
ನೀನೂ ಕೂಡ ಹೀಗೆಯೇ ಈ ಮಣ್ಣಲ್ಲಿ,
ಜೀವನಾವರ್ತನದ ವರ್ತುಲದಲ್ಲಿ
ಬೈಚಿಟ್ಟುಕೊಳ್ಳುತ್ತಲೇ ಇರುತ್ತಿ
ನಿನ್ನೊಳಗೆ ನನ್ನ,
ಬೆನ್ನತ್ತಿಯೇ ಇರುತ್ತೇನೆ ನಾನು ನಿನ್ನ;
ನಿನ್ನ ಮುಂಗುರುಗಳ ಆರಿಸಿ
ಪೆಟ್ಟಿಗೆಯಲ್ಲಿಟ್ಟುಕೊಂಡು ಕಾಯುತ್ತಲಿರುತ್ತೇನೆ
ನೀನಗಾಗಿ ಅನವರತ ನಾನು,
ಕಣ್ಮುಚ್ಚಾಲೆಯಾಡುತ್ತ
ಮಿಗೆಯಾಗುತ್ತ ಒಬ್ಬರಿನ್ನೊಬ್ಬರಿಗೆ
ಬರಿದಾಗುತ್ತೇವೆ, ಬರಿದರೆಡೆಗೆ ಸಾಗುತ್ತೇವೆ ನಾವು
ಮತ್ತೆ ಬೆರೆಯುತ್ತೇವೆ ದೇಹದಲ್ಲಿ
ಬಿಕ್ಕಳಿಸದಿರು,
ಈ ನೋವು ನಿನ್ನದಷ್ಟೇ ಅಲ್ಲ.
ಮನುಷ್ಯನಿಗಿದು ಶಾಶ್ವತವಲ್ಲ, ಹರಕೆಯೂ ಅಲ್ಲ
ತಿಳಿ-ನೀಲಿ, ಬಿಳಿ-ಕಪ್ಪು ಆಗಸದ ಶಾಶ್ವತ ತೆಕ್ಕೆಯಲ್ಲಿ
ಹಾರಾಡುತ್ತೇವೆ ನಾವೊಮ್ಮೆ ಹಕ್ಕಿಗಳಂತೆ.
ಗರ್ಜಿಸುವ ಮೋಡ, ಸಿಡಿಲುಗಳ ಮಧ್ಯವೂ
ನಾವಷ್ಟೇ ಇರುತ್ತೇವೆ
ಬದ್ಧ ವಚನಕ್ಕೆ ಬೆರೆತು ಹೋಗುತ್ತೇವೆ
ಮತ್ತೆ ಬೇರ್ಪಡುವುದಿಲ್ಲ.
ಮರಳುತ್ತೇವೆ ಮತ್ತೆ ಮೊದಲಿಗಿಂತಲೂ ನಗೆಯಾಗಿ
ಈ ಜಗವ ಹಾಡುತ್ತೇವೆ ಜಗದೊಂದಿಗೆ ಬೆರೆತು
ಒಪ್ಪಿಸುತ್ತೇವೆ ಪ್ರೀತಿಯ, ಹುಟ್ಟಿಸುತ್ತೇವೆ ಪ್ರೀತಿಯನ್ನೇ ಮತ್ತೆ
ಸತ್ಯ ಹೇಳಲೆ, ನಂಬುವುದಿಲ್ಲ ನೀನು
ನಾವು ಹುಟ್ಟುತ್ತಲೇ ಇರುತ್ತೇವೆ ಮತ್ತೆ ಮತ್ತೆ
ಭೀತಿಯಾಗಿರಬಹುದು ಬಾಂಬುಗಳ ನೋಡಿ ನಿನಗೆ
ಆಯುಧ-ನಿತ್ಯ ಮಾರಣ ಹೋಮ ನೋಡಿ
ಬೇಸರ ಭಯವೆರಡೂ ನಿನಗಾಗಿರಬಹುದು
ಬಾಂಬು ಬಂಡಿಯಾಗಿರುವುದರ ಕಂಡು
ಬೆಚ್ಚಿಬಿದ್ದಿರಬಹುದು ನೀನು
ಒಂದು ಮತಿಹೀನಕ್ಕೆ, ಮತ್ತೊಂದಳಿಯುವುದಂತೆ.
ಒಂದೇ ಸಮಾಧಿಯಾಗುವ ನಮಗೆ
ಪರಿಣಾಮಗಳ ವಿವೇಕ ಬೇಕು.
ಎಷ್ಟೊಂದು ಕೊಟ್ಟು ಹೋದರು ನಮ್ಮ ಸೂರಿಗಳು!
ಬಿಟ್ಟು ಹೋದರು ಅದೆಷ್ಟೊಂದನ್ನು ಮುಂದಿನವರಿಗಾಗಿ!!
ಅದು ಬರಿಯ ಕಥೆಯಲ್ಲ, ಅದಷ್ಟೇ ಅಲ್ಲ
ಹೇಳುತ್ತಿದ್ದ ನನ್ನಜ್ಜ ಅವನಿಗೊಬ್ಬ ಅಜ್ಜನಿದ್ದ-ಅಜ್ಜಿ ಇದ್ದಳು
ಈ ನೆಲದಿಂದ ಹಗೆ ಇಲ್ಲದೆ
ಅವನ ಮೊದಲಿಗರೆಲ್ಲ ಮರೆಯಾದರಂತೆ.
ನಿರ್ಗಮಿಸಬೇಕು ನಾವೂ ಹೀಗೆಯೆ
ನಂಬು ನನ್ನ
ಪ್ರೀತಿಯೆಂಬುದು ಅನಂತತೆಯ ಕಡಲು.
ಯುಗ ಯುಗಗಳರುಳಿಗೆ
ಲೋಕ ಲೋಕಗಳು ಕ್ರಮಿಸಿ
ಬದುಕುಗಳ ಗಮನಿಸಿ
ನಿಂತ ನಿರ್ಭಯಲದು.
ನಂಬು ನನ್ನ,
ಮತ್ತೆ ಮರಳುತ್ತೇನೆ ನಿನ್ನೆಡೆಗೆ
ಸಾವಿಗಿಲ್ಲಿ ಹಕ್ಕಿಲ್ಲ ಈ ಲೋಕದಲ್ಲಿ
ದಿಟವಿದು ನಮ್ಮಾಗಮನ, ಮತ್ತೆ ನಿರ್ಗಮನ
ನಿನ್ನೆ, ಇಂದು ಮತ್ತೆ ನಾಳೆ
ಇದು ಹೀಗೆಯೇ
ನಿರಂತರವಿದು, ಬರುವುದು-ಹೋಗುವುದು
ಬಂದು-ಹೋಗುವುದು